ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಪ್ಲಾಸ್ಟಿಕ್ ಮಲ್ಚಿಂಗ್ ಕಲ್ಲಂಗಡಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪ್ಲಾಸ್ಟಿಕ್ ಮಲ್ಚಿಂಗ್ ಕಲ್ಲಂಗಡಿ

ಲಕ್ಷಾಧೀಶನಾಗಿಸಿದ ಪ್ಲಾಸ್ಟಿಕ್ ಮಲ್ಚಿಂಗ್ ಕಲ್ಲಂಗಡಿ

-ಎಸ್‌.ಜಿ. ಕುರ್ಯ ಉಡುಪಿ
ಪಾಳು ಬಿದ್ದ ಹಡಿಲು ಗದ್ದೆಯನ್ನು ಲೀಸ್‌ಗೆ ಪಡೆದ ಪ್ರಗತಿಪರ ರೈತರೊಬ್ಬರು ಪ್ಲಾಸ್ಟಿಕ್ ಮಲ್ಚಿಂಗ್ ಪ್ರಯೋಗದ ಮೂಲಕ ತರಕಾರಿ, ಕಲ್ಲಂಗಡಿಯ ಬಂಪರ್ ಬೆಳೆ ಜತೆಗೆ ಎರಡೇ ತಿಂಗಳಲ್ಲಿ 2.50 ಲಕ ್ಷರೂ. ಲಾಭ ಗಳಿಸಿದ್ದಾರೆ. ಉಡುಪಿ ಜಿಲ್ಲೆ ಬೊಮ್ಮರಬೆಟ್ಟು ಗ್ರಾಮದ ಸುರೇಶ್ ನಾಯಕ್ ಮುಂಡುಜೆ ಎಂಬ ಯುವ ಕೃಷಿಕನೇ ಈ ಸಾಧಕ. 

ಲೀಸ್‌ಗೆ ಪಡೆದ ಜಮೀನು: ಈ ಬಾರಿ ಭತ್ತದ ಒಂದು ಬೆಳೆ ಬೆಳೆದ ಬಳಿಕ ಸ್ವಂತದ 93 ಸೆಂಟ್ಸ್ ಹಾಗೂ ಪಕ್ಕದವರಿಂದ ಲೀಸ್‌ಗೆ ಪಡೆದ 2.5 ಎಕರೆ ಗದ್ದೆಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ ಪ್ರಯೋಗದ ಮೂಲಕ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಮುಂದಾದರು. ಆತಂಕದ ನಡುವೆಯೂ ನಿರೀಕ್ಷಿಸಿದ್ದಕ್ಕಿಂತ ಬಂಪರ್ ಬೆಳೆ, ಅದರೊಂದಿಗೆ ಲಾಭವೂ ಬಂತು. ಈಗಾಗಲೇ ಕಲ್ಲಂಗಡಿ ಹಣ್ಣು 40 ಟನ್ನು ಮಾರಾಟವಾಗಿದೆ. ಕೆಜಿಗೆ ಸರಾಸರಿ 8ರಿಂದ 12 ರೂ. ಬೆಲೆಯೂ ಸಿಕ್ಕಿದೆ. ಗದ್ದೆಯಲ್ಲಿ ಕೊಯ್ಲಿಗೆ ಇನ್ನೂ 15 ಟನ್ನಿನಷ್ಟು ಕೊಯ್ಲು ಬಾಕಿಯಿದೆ. 2 ಕಲ್ಲಂಗಡಿ ಕೃಷಿಗೆ ಎರಡು ಲಕ್ಷ ರೂ. ಖರ್ಚು ಮಾಡಿದ ಈ ರೈತ, ಕೇವಲ ಎರಡು ತಿಂಗಳಲ್ಲಿ ಖರ್ಚು ಕಳೆದು 2.50 ಲಕ್ಷ ರೂ. ನಿವ್ವಳ ಲಾಭ ಪಡೆದಿದ್ದಾರೆ. ಲೀಸ್ ಪಡೆದ ಗದ್ದೆಗಳಿಗೆ ಎಕರೆಗೆ 5 ಮುಡಿ ಅಕ್ಕಿ (2 ಕ್ವಿಂಟಾಲ್) ನೀಡಬೇಕು. ಕಲ್ಲಂಗಡಿ ಬೆಳೆಗೆ ಘಟ್ಟದ ಮೇಲಿನ ಜಿಲ್ಲೆಗಳಲ್ಲಿ 80ರಿಂದ 90 ದಿನ ಬೇಕಿದ್ದರೆ, ಕರಾವಳಿಯ ವಾತಾವರಣದಿಂದಾಗಿ 55ರಿಂದ 65 ದಿನಗಳಷ್ಟೇ ಸಾಕು. ಮೊನ್ನೆಯಷ್ಟೇ ಶಿವಮೊಗ್ಗ ಕೃಷಿ ವಿವಿಯ ಕುಲಪತಿ ಡಾ.ಸಿ. ವಾಸುದೇವಪ್ಪ ಹಳ್ಳಿಗಾಡಿಗೆ ಬಂದು, ಕೃಷಿ ಚಟುವಟಿಕೆ ನೋಡಿ ತಲೆದೂಗಿದ್ದರು. ಸದ್ಯ ಎರಡನೇ ಹಂತದ ಕಲ್ಲಂಗಡಿ ಬೆಳೆಗೆ ಗದ್ದೆ ಸಜ್ಜಾಗುತ್ತಿದೆ. ಮತ್ತೆ ಲೀಸ್‌ಗೆ ಪಡೆದ ಅರ್ಧ ಎಕರೆ ಗದ್ದೆಯಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್, ಹನಿ ನೀರಾವರಿ ಮೂಲಕ ಬೆಳೆದು ನಿಂತ ಖರ್ಬೂಜ ಹೂವು ಬಿಟ್ಟಿದೆ. ಇನ್ನೊಂದು ತಿಂಗಳಲ್ಲಿ ಫಲ ನೀಡಲಿದೆ. 

ಪ್ರಯೋಗಶೀಲ ಕೃಷಿಕ: ಸ್ವಂತದ 1.40 ಎಕರೆ ಗದ್ದೆಯಲ್ಲಿ ಭತ್ತದ ಎರಡು ಬೆಳೆ ತೆಗೆದು, ನಡುವೆ ವಿಪುಲ ತರಕಾರಿ ಬೆಳೆದು ಸಾಧಿಸಿದ ಗೆಲುವು ಇವರನ್ನು ಸ್ವಾವಲಂಬಿ ಕೃಷಿಕರನ್ನಾಗಿಸಿದ್ದಲ್ಲದೆ, ಮೂಗು ಮುರಿದವರಿಗೆಲ್ಲ ಕೃಷಿ ಲಾಭದಾಯಕವೆಂದು ಸಾಬೀತು ಮಾಡಿದ್ದಾರೆ. ಕಳೆದ ವರ್ಷ 30 ಸೆಂಟ್ಸ್ ಗದ್ದೆ ಲೀಸ್‌ಗೆ ಪಡೆದ ಸುರೇಶ್, 43 ಕ್ವಿಂಟಾಲ್ ಕಲ್ಲಂಗಡಿ ಬೆಳೆದು ಕೆಜಿಗೆ 11 ರೂ. ನಂತೆ ಮಾರಾಟ ಮಾಡಿದ್ದಲ್ಲದೆ, ನಿವ್ವಳ 25 ಸಾವಿರ ರೂ. ಲಾಭ ಸಂಪಾದಿಸಿದ್ದರು. ಕಲ್ಲಂಗಡಿ ಬೆಳೆ ಹೆಚ್ಚು ಲಾಭದಾಯಕವೆನ್ನುವುದು ಅವರಿಗೆ ಮನವರಿಕೆಯಾಗಿದ್ದೇ ತಡ, ಅದನ್ನು ದೊಡ್ಡ ಮಟ್ಟದಲ್ಲಿ ಪ್ರಯೋಗಿಸಲು ನಿರ್ಧರಿಸಿದರು. 

10 ಸೆಂಟ್ಸ್‌ನಲ್ಲಿ ತರಕಾರಿ: ಹಡಿಲು ಬಿದ್ದ ಗದ್ದೆಯ 10 ಸೆಂಟ್ಸ್‌ನಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ ಮೂಲಕ ಬೆಳೆದ ಹರಿವೆ 2 ಕ್ವಿಂಟಾಲ್, ಮುಳ್ಳು ಸೌತೆ 4 ಕ್ವಿಂಟಾಲ್, ಮೂಲಂಗಿ 3 ಕ್ವಿಂಟಾಲ್ ಬಂಪರ್ ಫಸಲು ನೀಡಿದೆ. ಹಾಗಲ, ಬೆಂಡೆ, ಅಲಸಂಡೆ, ಹೀರೇಕಾಯಿ, ಮೆಣಸು, ಬದನೆ ಗಿಡಗಳೂ ಕೂಡ ಸಾಕಷ್ಟು ಫಸಲು ನೀಡುತ್ತಿವೆ. ಕಿರಣ್ ತಳಿಯ ಕಲ್ಲು ಕಲ್ಲಂಗಡಿ 21 ಕ್ವಿಂಟಾಲ್ ದೊರೆತಿದೆ. ಕಲ್ಲಂಗಡಿಗೆ ಹೆಚ್ಚುವರಿಯಾಗಿ ತರಕಾರಿಯಲ್ಲೂ 10 ರಿಂದ 15 ಸಾವಿರ ರೂ. ಲಾಭ ದೊರೆತಿದೆ. 

ಪ್ಲಾಸ್ಟಿಕ್ ಮಲ್ಚಿಂಗ್ ಮಾಡುವುದು ಹೇಗೆ?: ಗದ್ದೆ ಉಳುಮೆ ಮಾಡಿ ಎಂಟು ಅಡಿ ಅಂತರದಲ್ಲಿ ಮಣ್ಣ ಏರು ಸಾಲು(ಟ್ರ್ಯಾಕ್ಟರ್ ಮೂಲಕ ಲಾಭದಾಯಕ) ಮಾಡಿ ಕೋಳಿ ಗೊಬ್ಬರ, ಪೋಷಕಾಂಶ ಹಾಕಿ, ಹನಿ ನೀರಾವರಿ ಕೊಳವೆ ಅಳವಡಿಸಿ ಮಲ್ಚಿಂಗ್ ಪೇಪರ್ ಅಳವಡಿಸಬೇಕು. ಎರಡೂ ಬದಿಗೆ ಮಣ್ಣು ಹಾಕಿ ಮಲ್ಚಿಂಗ್ ಪೇಪರ್‌ಗೆ ಅಂತರದಲ್ಲಿ ತೂತು ಮಾಡಿ ಬೀಜ ಹಾಕಬೇಕು. 

ಹನಿ ನೀರಾವರಿ ಉಣಿಸಬೇಕು. ಬೀಜ ಹಾಕಿದ ಐದು ದಿನದಲ್ಲಿ ಮೊಳಕೆ, 30ರಿಂದ 35 ದಿನಗಳಿಗೆ ಹೂವು ಮತ್ತು ಮಿಡಿ ಬರುತ್ತದೆ. ಪ್ಲಾಸ್ಟಿಕ್ ಮಲ್ಚಿಂಗ್ ಪ್ರಯೋಗದಿಂದ ಶೇ.60 ಕೀಟ ಬಾಧೆ ಹಾಗೂ ಶೇ.50 ಕಳೆ ಸಮಸ್ಯೆ ಕಡಿಮೆಯಾಗುತ್ತದೆ. ಐದರಿಂದ ಹತ್ತು ಎಕರೆಗೆ ಒಬ್ಬಿಬ್ಬರು ಕೂಲಿ ಕಾರ್ಮಿಕರಿದ್ದರೂ ಸಾಕು. ಫಸಲು ಕೂಡ ಎಕರೆಗೆ 5ರಿಂದ 10 ಟನ್ ಹೆಚ್ಚು ಸಿಗುತ್ತದೆ. 

*ಪ್ಲಾಸ್ಟಿಕ್ ಮಲ್ಚಿಂಗ್ ಮೂಲಕ ಮಟ್ಟು ಗುಳ್ಳ, ತರಕಾರಿ, ಕಲ್ಲಂಗಡಿ ಬೆಳೆ ಪ್ರಯೋಗ ಯಶಸ್ವಿಯಾಗಿದೆ. ತೋಟಗಾರಿಕೆ ಇಲಾಖೆ ಮೂಲಕ ಹನಿ ನೀರಾವರಿಗೆ ಶೇ.90 ಹಾಗೂ ಮಲ್ಚಿಂಗ್ ಪೇಪರ್ ಹೆಕ್ಟೇರಿಗೆ 15 ಸಾವಿರ ರೂ. ಸಹಾಯಧನ ಲಭ್ಯವಿದೆ. ಸದಾಶಿವ ರಾವ್, ಹಿರಿಯ ತೋಟಗಾರಿಕಾ ನಿರ್ದೇಶಕರು, ಉಡುಪಿ.

*ಭತ್ತ ಬೆಳೆಗೆ ಖರ್ಚು ಜಾಸ್ತಿಯಾದರೂ ಯಾಂತ್ರೀಕರಣ, ಮಿಶ್ರ ಬೆಳೆಯಿಂದ ಲಾಭದಾಯಕ ನಿರ್ವಹಣೆ ಸಾಧ್ಯ. ತಂದೆ, ತಾಯಿ, ಪತ್ನಿ, ಮಕ್ಕಳೂ ಕೃಷಿಯಲ್ಲಿ ತೊಡಗಿದ್ದು ಕಾರ್ಮಿಕರ ಕೊರತೆ ನಮಗೆ ಕಾಡಿಲ್ಲ. ಹಡಿಲು ಗದ್ದೆ ಕೃಷಿ ಮೂಲಕ ರೈತರಲ್ಲಿ ಜಾಗೃತಿ, ದೊಡ್ಡ ಗದ್ದೆ ಗುತ್ತಿಗೆ ಪಡೆದು ಕೃಷಿಗೂ ಉದ್ದೇಶಿಸಲಾಗಿದೆ. -ಸುರೇಶ್ ನಾಯಕ್ ಮುಂಡುಜೆ, ಪ್ರಗತಿ ಪರ ಕೃಷಿಕ

 

2.87155963303
ರೆಡ್ಡಿ Dec 08, 2019 08:51 PM

ಕಲ್ಲಂಗಡಿ ಬೆಳುವುದಕ್ಕೆ ಯಾವ ತಿಂಗಳು ಸೂಕ್ತ ? ಅಂದರೆ ಈಗ ಡಿಸೆಂಬರ್ ಅಲ್ಲಿ ಬೆಳದರೆ ಚಳಿಗಾಲ ವಾದ್ದರಿಂದ ರೋಗ ಬರುವುದೇ ? ಮತ್ತು ಮಾರ್ಕೆಟ್ ?

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top