অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೆಂಬೆ ಪದ್ಧತಿ

ರೆಂಬೆ ಪದ್ಧತಿ ಹುಳು ಸಾಕಾಣಿಕೆ;

ಕಡಿಮೆ ಕಾರ್ಮಿಕ ವೆಚ್ಚ, ಗುಣಮಟ್ಟದ ಅಧಿಕ ಗೂಡಿನ ಇಳುವರಿ ಗಮನದಲ್ಲಿಟ್ಟುಕೊಂಡು ರೆಂಬೆ ಪದ್ಧತಿಯ ಹುಳು ಸಾಕಾಣಿಕಾ ವಿಧಾನವನ್ನು ಉಷ್ಣವಲಯದ ಪ್ರದೇಶಕ್ಕೆ ಹೊಂದುವಂತೆ ಅಭಿವೃದ್ಧಿಪಡಿಸಿ ರೇಷ್ಮೆ ಬೆಳೆಗಾರರ ಅನುಸರಣೆಗಾಗಿ ಶಿಫಾರಸ್ಸು ಮಾಡಲಾಗಿದೆ. ಈ ನೂತನ ತಾಂತ್ರಿಕ ವಿಧಾನದಿಂದ ಕಾರ್ಮಿಕ ವೆಚ್ಚವನ್ನು ಕನಿಷ್ಠ ಶೇ. 50 ರಷ್ಟು ಕಡಿಮೆ ಮಾಡಬಹುದು. ಈ ವಿಧಾನಕ್ಕೆ ನೀರಾವರಿ ಹಿಪ್ಪುನೇರಳೆ ತೋಟಗಳು ಹೆಚ್ಚು ಸೂಕ್ತ. ಬೆಳೆಯಿಂದ ಬೆಳೆಗೆ 40-45 ದಿನಗಳ ಅಂತರದಲ್ಲಿ ವರ್ಷಕ್ಕೆ 5-6 ಬೆಳೆಗಳನ್ನು ಪಡೆಯಬಹುದು.
ಶೇ. 15-20 ರಷ್ಟು ಸೊಪ್ಪಿನ ಉಳಿತಾಯವಾಗುವುದಲ್ಲದೆ ಈ ವಿಧಾನದಿಂದ ಶೇ. 15-20 ರಷ್ಟು ಹೆಚ್ಚು ಮೊಟ್ಟೆಗಳನ್ನು ಸಾಕಾಣಿಕೆ ಮಾಡಲು ಸಾಧ್ಯವಾಗುತ್ತದೆ. ಸೊಪ್ಪನ್ನು ಪೂರ್ಣವಾಗಿ ಹುಳುಗಳು ತಿನ್ನುವುದರಿಂದ ಒಂದು ಕೆ.ಜಿ. ಗೂಡನ್ನು ಪಡೆಯಲು ಬೇಕಾಗುವ ಸೊಪ್ಪಿನ ಪ್ರಮಾಣ ಕಡಿಮೆಯಾಗುತ್ತದೆ.
ರೆಂಬೆ ಹುಳು ಸಾಕಾಣಿಕೆ ಪದ್ಧತಿಯಲ್ಲಿ ಕಟಾವು ಮಾಡಿದ ಹಿಪ್ಪುನೇರಳೆ ರೆಂಬೆಗಳನ್ನು ಕತ್ತರಿಸದೆ ಪೂರ್ಣವಾಗಿ ಉಪಯೋಗಿಸಬೇಕು. ರೆಂಬೆಗಳನ್ನು ಕಟಾವು ಮಾಡಲು ಹರಿತವಾದ ಕತ್ತರಿ ಅಥವಾ ಕುಡುಗೋಲನ್ನು ಉಪಯೋಗಿಸಿ ಹಿಂದಿನ ಕಟಾವಿನ ಮಟ್ಟದಿಂದ 2-3 ಕಣ್ಣುಗಳನ್ನು ಬಿಟ್ಟು ಕಾಂಡ ಸೀಳದಂತೆ ಕತ್ತರಿಸಬೇಕು. ತಂಪಾದ ಸಮಯದಲ್ಲಿ ರೆಂಬೆಗಳನ್ನು ಕಟಾವು ಮಾಡುವುದು ಸೂಕ್ತ. ಕತ್ತರಿಸಿದ ರೆಂಬೆಗಳನ್ನು ಹುಳು ಸಾಕಾಣಿಕೆ ಮನೆಗೆ ಸಾಗಿಸಿ ಸೊಪ್ಪು ಶೇಖರಿಸುವ ಕೊಠಡಿಯಲ್ಲಿ ನೇರವಾಗಿ ನಿಲ್ಲಿಸಿ, ಸೊಪ್ಪಿನ ತಾಜಾತನವನ್ನು ಕಾಪಾಡಿಕೊಳ್ಳಲು ಶುಭ್ರವಾದ ಒದ್ದೆ ಗೋಣಿ ತಾಟು ಅಥವಾ ಬಟ್ಟೆಯಿಂದ ಮುಚ್ಚಬೇಕು.
ರೆಂಬೆ ಹುಳು ಸಾಕಾಣಿಕೆ ವಿಧಾನಕ್ಕೆ ತಟ್ಟೆ ಹಾಗೂ ದಡೇವುಗಳ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಸಾಕಾಣಿಕಾ ಮೇಜುಗಳ ಅವಶ್ಯಕತೆ ಇರುತ್ತದೆ. ಸಾಕಾಣಿಕಾ ಮೇಜು ಸಾಮಾನ್ಯವಾಗಿ 5 ಅಡಿ ಅಗಲ ಹಾಗೂ 35 ಅಡಿ ಅಥವಾ ಮನೆಯ ಉದ್ದಕ್ಕನುಗುಣವಾಗಿರಬೇಕು. ಹೀಗೆ ನಿರ್ಮಿಸಿದ ಮೇಜುಗಳು 100 ಮೊಟ್ಟೆಗಳ ಸಾಕಾಣಿಕೆಗೆ 600-750 ಚದರ ಅಡಿ ಸ್ಥಳಾವಕಾಶವನ್ನು ಹೊಂದಿರಬೇಕು. ಸಿ.ಎಸ್.ಆರ್. ಸಂಕರಣ ತಳಿಗಳಾದರೆ ಸುಮಾರು 800-850 ಚದರ ಅಡಿ ಸ್ಥಳಾವಕಾಶ ಬೇಕಾಗುತ್ತದೆ. ಅಂತಸ್ತುಗಳ ಅಂತರ ಕೆಳಕಂಡಂತೆ ಇದ್ದರೆ, 3ನೇ ಅಂತಸ್ತಿನಲ್ಲಿರುವ ಹುಳುಗಳಿಗೆ ಮೆಟ್ಟಿಲುಗಳ ಸಹಾಯವಿಲ್ಲದೆ ಸೊಪ್ಪು ನೀಡಬಹುದಾಗಿದೆ.
  1. 1ನೇ ಅಂತಸ್ತಿನ ಮೇಜು ನೆಲದಿಂದ 6 ಅಂಗುಲ
  2. 2ನೇ ಅಂತಸ್ತಿನ ಮೇಜು 1ನೇ ಮೇಜಿನಿಂದ 2 ಅಡಿ
  3. 3ನೇ ಅಂತಸ್ತಿನ ಮೇಜು 2ನೇ ಮೇಜಿನಿಂದ 2 ಅಡಿ
  4. ಚಿಟ್ಟೆ ಕೊರೆದ ಗೂಡಿನ ದಾಸ್ತಾನು ವಹಿ
  5. 4ನೇ ಅಂತಸ್ತಿನ ಮೇಜು 3ನೇ ಮೇಜಿನಿಂದ 1¾ ಅಡಿ
ಹುಳುಗಳನ್ನು ಸಾಕಾಣಿಕಾ ಮೇಜಿನ ಮೇಲೆ ಹರಡುವ ಮೊದಲು ಹಳೆಯ ದಿನ ಪತ್ರಿಕೆಗಳನ್ನು ಹರಡಿ ಇದರ ಮೇಲೆ ಸಕ್ರಿಯ ಸುಣ್ಣದ ಪುಡಿಯನ್ನು ಧೂಳೀಕರಿಸಿ ನಂತರ ಹುಳುಗಳನ್ನು ಸಮನಾಗಿ ಹರಡಿ, ರೆಂಬೆಗಳನ್ನು ಎದುರುಬದುರಾಗಿ ಕೊಡಬೇಕು. ಪ್ರೌಢ ಹುಳುಗಳಿಗೆ ವಾತಾವರಣಕ್ಕನುಗುಣವಾಗಿ ದಿನಕ್ಕೆ 3-4 ಬಾರಿ ಸೊಪ್ಪು ನೀಡಬೇಕು. ಹುಳುಗಳ ಬೆಳವಣಿಗೆಗೆ ಅಗತ್ಯ ಸ್ಥಳಾವಕಾಶವನ್ನು ಒದಗಿಸಬೇಕು.
ಹುಳುಗಳು ನಾಲ್ಕನೇ ಜ್ವರಕ್ಕೆ ಹೋದಾಗ ಅಂದರೆ ಶೇ. 90 ರಷ್ಟು ಹುಳುಗಳು ಜ್ವರಕ್ಕೆ ಹೋದ ನಂತರ ಸೊಪ್ಪು ಕೊಡುವುದನ್ನು ನಿಲ್ಲಿಸಿ, ಸಾಕಾಣಿಕೆ ಮನೆಯಲ್ಲಿ ಗಾಳಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜ್ವರಕ್ಕೆ ಹೋಗುವ ಮುನ್ನ ನೀಡುವ ಸೊಪ್ಪಿನ ಗುಣಮಟ್ಟವು ಆಯಾ ಹಂತದ ಹುಳುಗಳು ಜ್ವರದಿಂದ ಎದ್ದ ಮೇಲೆ ನೀಡುವ ಸೊಪ್ಪಿನ ಗುಣಮಟ್ಟಕ್ಕೆ ಸಮನಾಗಿರಬೇಕು. ನಂತರ ಸುಣ್ಣದಪುಡಿ ಧೂಳೀಕರಿಸಬೇಕು. ಶೇ.90 ರಷ್ಟು ಹುಳುಗಳು ಜ್ವರದಿಂದ ಎದ್ದ ಮೇಲೆ ಹಾಸಿಗೆ ಸೋಂಕು ನಿವಾರಕವನ್ನು ಧೂಳೀಕರಿಸಿ ಅರ್ಧ ಗಂಟೆಯ ನಂತರ ಸೊಪ್ಪು ನೀಡಬೇಕು. ರೆಂಬೆ ಹುಳು ಸಾಕಾಣಿಕೆ ಪದ್ಧತಿಯಲ್ಲಿ ಹುಳುಗಳು ನಾಲ್ಕನೇ ಜ್ವರದಿಂದ ಎದ್ದ ನಂತರ ಎರಡನೆಯ ದಿವಸ ಒಂದು ಸಾರಿ ಹಗ್ಗ ಅಥವಾ ಬಲೆಗಳನ್ನು ಉಪಯೋಗಿಸಿ ಹಾಸಿಗೆಯನ್ನು ಬದಲಿಸಬೇಕು. ಸಾಕಾಣಿಕಾ ಸಮಯದಲ್ಲಿ ಹಾಸಿಗೆಯಲ್ಲಿ ಸೊಪ್ಪು ಬಾಡುತ್ತಿದ್ದರೆ, ಹಾಸಿಗೆಯನ್ನು ಶುಭ್ರವಾದ ದಿನಪತ್ರಿಕೆಯಿಂದ ಮುಚ್ಚಿ ಸಾಕಾಣಿಕೆ ಮಾಡಬೇಕು.
ಹಣ್ಣು ಹುಳುಗಳ ನಿರ್ವಹಣೆ, ಗೂಡು ಬಿಡಿಸುವುದು, ಸಾಗಾಣಿಕೆ
ಹುಳುಗಳು ಹಣ್ಣಾಗುವ ಸೂಚನೆ ಕಂಡುಬಂದಲ್ಲಿ ಸೊಪ್ಪು ಕೊಡುವುದನ್ನು ನಿಲ್ಲಿಸಬೇಕು. ಹಣ್ಣು ಹುಳುಗಳನ್ನು ಹಾಸಿಗೆಯಿಂದ ಬೇರ್ಪಡಿಸಿ ಚಂದ್ರಿಕೆಗಳ ಮೇಲೆ ಬಿಡಬೇಕು.
ಗೂಡು ಕಟ್ಟುವ ಸಮಯದಲ್ಲಿ ಅಪೇಕ್ಷಿತ ಉಷ್ಣಾಂಶ ಹಾಗೂ ಶೈತ್ಯಾಂಶ ನಿರ್ವಹಣೆಯು ಮಹತ್ವದ ಪಾತ್ರ ವಹಿಸುತ್ತದೆ. 24-250 ಸೆಂ. ಉಷ್ಣಾಂಶ ಹಾಗೂ ಶೇ. 60-70 ರಷ್ಟು ಶೈತ್ಯಾಂಶ ಗುಣಮಟ್ಟದ ಗೂಡುಗಳ ಉತ್ಪಾದನೆಗೆ ಸೂಕ್ತ. ಹುಳುಗಳು ಗೂಡು ಕಟ್ಟುವ ಸಮಯದಲ್ಲಿ ಸಾಕಷ್ಟು ಗಾಳಿ ಸಂಚಾರ ಇರುವಂತೆ ನೋಡಿಕೊಳ್ಳಬೇಕು.
ನೇರ ಬೀಸು ಗಾಳಿ ಮತ್ತು ನೇರ ಬಿಸಿಲಿಗೆ ಚಂದ್ರಿಕೆಗಳನ್ನು ಒಡ್ಡಬಾರದು. 4-6 ದಿನಗಳ ನಂತರ ಚಂದ್ರಿಕೆಯಿಂದ ಕಳಪೆ ಗೂಡುಗಳನ್ನು ಮೊದಲು ಬೇರ್ಪಡಿಸಿ, ನಂತರ ಉತ್ತಮ ಗೂಡುಗಳನ್ನು ಬಿಡಿಸಿ 5-7 ನೇ ದಿನದಂದು ತೆಳುವಾದ ಗೋಣಿ / ಹತ್ತಿ ಬಟ್ಟೆ ಚೀಲದಲ್ಲಿ ಸಡಿಲವಾಗಿ ತುಂಬಿ ತಂಪು ವೇಳೆಯಲ್ಲಿ ಮಾರುಕಟ್ಟೆಗೆ ಸಾಗಿಸಬೇಕು.

 

ಮೂಲ : ಕರ್ನಾಟಕ  ರೇಷ್ಮೆ  ಇಲಾಖೆ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate