ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪ್ರಾಣ ತೆಗೆಯುವ ರಂಜಕ

ಪ್ರಾಣ ತೆಗೆಯುವ ರಂಜಕ

ಸುಮಾರು 15 ವರ್ಷಗಳ ಹಿಂದೆ ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ಇದ್ದಾಗ ನಡೆದ ಘಟನೆ. ರಾತ್ರಿ 10 ಘಂಟೆಗೆ ರೈತನೊಬ್ಬ ಬಾಗಿಲು ತಟ್ಟಿದರು. `ನಾನು ಬಸಪ್ಪ ಅಂತರ‌್ರೀ... ನಾಲ್ಕೂ ಎತ್ಗೋಳು ಒದ್ದಾಡಾಗತ್ತವ್ರೀ. ಒಂದು ಸತ್ತೇ ಹೋಗೇತಿ. ಅರ್ಜಂಟ್ ಬರ‌್ರೀ~ ಅಂದರು. ಆಗ ನಾನಿನ್ನೂ ವೃತ್ತಿಗೆ ಹೊಸಬ. ರಾತ್ರಿ ಹೋಗಲು ಹೆದರಿಕೆ ಬೇರೆ. ಇರಲಿ ಅಂತ ದೇವರ ಮೇಲೆ ಭಾರ ಹಾಕಿ ಬಸಪ್ಪನ ಟ್ರಾಕ್ಟರ್ ಮೇಲೆ ಹೊರಟೆ.

ಅವರ ಮನೆಯ ಕೊಟ್ಟಿಗೆಗೆ ಹೋಗಿ ನೋಡಿದರೆ ಪರಿಸ್ಥಿತಿ ಗಂಭೀರ. ಇರುವ ಎಲ್ಲಾ 8 ಜಾನುವಾರುಗಳಿಗೂ ಸಿಕ್ಕಾಪಟ್ಟೆ ಭೇದಿ, ಹೊಟ್ಟೆ ಉಬ್ಬರಿಸಿದೆ. ಏನಪ್ಪಾ ಇದು ಅಂತ ತಲೆ ಕೆಡಿಸಿಕೊಳ್ಳುವಷ್ಟರಲ್ಲಿ ಬೆಳ್ಳುಳ್ಳಿಯ ಥರ ವಾಸನೆ ಬಂತು. `ಏನ್ರೀ ಬಸಪ್ಪನವರೆ. ಮನೇಲಿ ದನ ಸಾಯುತ್ತಿದ್ದರೂ ಮಸಾಲೆ ಮಾಡಾಕತ್ತೀರೇನ್ರಿ~ ಎಂದೆ. `ಎಲ್ಲೆದ್ರೀ ಸರ. ಯಾವ ಬಳ್ಳೊಳ್ಳಿನೂ ಇಲ್ಲ~ ಅಂದರು ಬಸಪ್ಪ.

ಅನುಮಾನ ಬಂದು ಎಲ್ಲಾ ಜಾನುವಾರುಗಳನ್ನು ಹತ್ತಿರದಿಂದ ಗಮನಿಸಿದರೆ ಅವುಗಳ ಉಸಿರು ಬೆಳ್ಳುಳ್ಳಿ ವಾಸನೆ ಹೋಲುತ್ತಿತ್ತು. ಔಷಧಕ್ಕಾಗಿ ಬಳಸಿದ್ದಾರೇನೋ ಅಂತ ಕೇಳಿದ್ರೆ `ಇಲ್ಲ~ ಎಂಬ ಉತ್ತರ. ಇದ್ದಕ್ಕಿದ್ದ ಹಾಗೇ ಟಾರ್ಚ್ ಬೆಳಕಿನಲ್ಲಿ ಅರ್ಧ ಬಿಚ್ಚಿಟ್ಟ ಗೊಬ್ಬರದ ಚೀಲ ನೋಡಿದೆ. `ಬಸಪ್ನೋರೆ... ಇದೇನಿದು~ ಅಂದೆ. `ಇದ್ರಿ.. ಗೊಬ್ರ ಐತ್ರಿ~ ಅಂದರು. ನೋಡಿದ್ರೆ ಅದು ಸೂಪರ್ ಫಾಸ್ಫೇಟ್ ರಸಗೊಬ್ಬರ.

ಸವಿವರವಾಗಿ ವೃತ್ತಾಂತವನ್ನು ಪರಿಶೀಲಿಸಿದಾಗ, ಉತ್ತಮ ಇಳುವರಿ ಬರಲಿ ಎಂದು ಬಸಪ್ಪ ಎರಡು ದಿನದ ಹಿಂದೆ ಹೊಲಕ್ಕೆ ಸೂಪರ್ ಫಾಸ್ಫೇಟ್ ರಸಗೊಬ್ಬರ ಹಾಕಿ ಚೀಲ ತೆರೆದಿಟ್ಟಿದ್ದರು. ಎಲ್ಲಾ ಜಾನುವಾರುಗಳು ಅದನ್ನು ತಿಂದು ವಿಷಬಾಧೆಗೆ ಒಳಗಾಗಿದ್ದವು ಎನ್ನುವುದು ಖಚಿತವಾಯ್ತು.

ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಸೂಪರ್ ಫಾಸ್ಫೇಟ್ ಅಥವಾ ರಂಜಕದ ವಿಷಬಾಧೆ ಸಾಮಾನ್ಯ. ಜಾನುವಾರುಗಳಿಗೆ ಕ್ಯಾಲ್ಸಿಯಂನ ಜೊತೆ ಅತೀ ಅವಶ್ಯವಿರುವ ಖನಿಜಗಳಲ್ಲಿ ರಂಜಕವೂ ಒಂದು. ದೇಹದ ಶೇ 80 ರಷ್ಟು ರಂಜಕವು ಎಲುಬು ಮತ್ತು ಹಲ್ಲಿನಲ್ಲಿ ಕ್ಯಾಲ್ಸಿಯಂನ ಜೊತೆ ಸೇರಿದ್ದು, ಉಳಿದದ್ದು ದೇಹದ ಇತರ ಅಂಗಾಂಶಗಳಲ್ಲಿ ಇರುತ್ತದೆ.

ಎಟಿಪಿ ಸ್ವರೂಪದಲ್ಲಿ ದೇಹದ ಎಲ್ಲೆಡೆ ಇರುವ ರಂಜಕವು ಶರೀರದ  ವಿವಿಧ ಜೀವ ರಸಾಯನ ಕ್ರಿಯೆಯಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ, ಅತಿಯಾದರೆ ನೀರೂ ವಿಷ ಎಂಬಂತೆ ನಿಗದಿತ ಪ್ರಮಾಣಕ್ಕಿಂತ ಜಾಸ್ತಿಯಾದಲ್ಲಿ ರಂಜಕವೂ ವಿಷವಾಗುತ್ತದೆ.

ವಿಷದ ಮೂಲ


ರಂಜಕದ ವಿಷಬಾಧೆಯು ಜಾನುವಾರುಗಳಲ್ಲಿ ವಿರಳವಾದರೂ ರಂಜಕಯುಕ್ತ ರಸಗೊಬ್ಬರಗಳ ಆಕಸ್ಮಿಕ ಸೇವನೆ, ಬಿಳಿ ರಂಜಕವನ್ನು ಹೊಂದಿದ ಇಲಿ ಪಾಷಾಣದ ಸೇವನೆ, ಪಟಾಕಿ ಇತ್ಯಾದಿ ಸ್ಫೋಟಕ ವಸ್ತುಗಳ ಸೇವನೆ ಮತ್ತು ಕೈಗಾರಿಕೆಗಳ ತ್ಯಾಜವಸ್ತುಗಳ ಸೇವನೆಯಿಂದ ರಂಜಕದ ವಿಷಬಾಧೆ ಉಂಟಾಗುತ್ತದೆ. ಕೆಂಪು ರಂಜಕವು ವಿಷಕಾರಿಯಲ್ಲ. ಆದರೆ ಬಿಳಿ ರಂಜಕವು ವಿಷಕಾರಿ. ವಿಷಬಾಧೆ ಉಂಟಾಗಲು ರಂಜಕ ಸೇವನೆ ಜಾಸ್ತಿ ಪ್ರಮಾಣದಲ್ಲಿ ಇರಬೇಕಾಗುತ್ತದೆ.

ರಂಜಕವು ಖಚಿತವಾಗಿ ಹೇಗೆ ವಿಷಬಾಧೆ ಉಂಟು ಮಾಡುತ್ತದೆ ಎಂಬುದನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ. ಆದರೆ ಬಿಳಿ ರಂಜಕವು ಜಠರಕ್ಕೆ ತೊಂದರೆ ಮಾಡುತ್ತದೆ. ಅನ್ನನಾಳದಿಂದ ಪ್ರಾರಂಭವಾಗಿ ಜಠರ, ಸಣ್ಣ ಕರುಳು,  ದೊಡ್ಡಕರುಳು ಮತ್ತು ಪಿತ್ತಜನಕಾಂಗದ ಎಲ್ಲೆಡೆ ತೀವ್ರವಾಗಿ ಉರಿಯೂತ ಉಂಟು ಮಾಡುತ್ತದೆ. ಇದರಿಂದ ತೀವ್ರತರವಾದ ರಕ್ತಭೇದಿಯಾಗುತ್ತದೆ. ಕರುಳಿನಿಂದ ಹೀರಲ್ಪಟ್ಟ ರಂಜಕ ರಕ್ತವನ್ನು ಸೇರಿ ಫಾಸ್ಫೇಟ್ ಆಗಿ ಪರಿವರ್ತನೆಗೊಂಡು ಪಿತ್ತಜನಕಾಂಗಕ್ಕೆ ವ್ಯಾಪಕ ತೊಂದರೆ ಕೊಡುತ್ತದೆ.

ರಂಜಕವು ವಿವಿಧ ಲವಣದ ರೂಪದಲ್ಲಿ ಲಭ್ಯ. ಜಾನುವಾರು ರಂಜಕದ ಯಾವ ಲವಣವನ್ನು ಸೇವಿಸಿದೆ ಎಂಬುದರ ಮೇಲೆ ವಿಷಬಾಧೆ ಅವಲಂಬಿಸಿರುತ್ತದೆ. ರೈತರು  ಸಾಮಾನ್ಯವಾಗಿ  ಸೂಪರ್ ಫಾಸ್ಫೇಟನ್ನು ರಸಗೊಬ್ಬರವಾಗಿ ಬಳಸುತ್ತಿದ್ದು, ಇದನ್ನು ಸೇವಿಸಿ ಹಲವಾರು ಜಾನುವಾರುಗಳು ವಿಷಬಾಧೆಗೆ ಒಳಗಾಗುತ್ತಿವೆ.

ಬಿಳಿ ರಂಜಕದಿಂದ ಅಪಾಯವೇ ಜಾಸ್ತಿ. ಜಾನುವಾರು ಮತ್ತು ಕುದುರೆ 0.5-2 ಗ್ರಾಂ, ಹಂದಿ 0.05-1 ಗ್ರಾಂ ಮತ್ತು ನಾಯಿಗಳು 1 ಗ್ರಾಂ. ಪ್ರಮಾಣದಲ್ಲಿ ಸೇವಿಸಿದಲ್ಲಿ ತೀವ್ರತರನಾದ ವಿಷಬಾಧೆಗೆ ಒಳಗಾಗುತ್ತವೆ.

ಲಕ್ಷಣಗಳು


ವಿಷಬಾಧೆ ತೀವ್ರವಾಗಿದ್ದರೆ ಪ್ರಾಣಿಯು ಬಹುತೇಕ ಸಂದರ್ಭಗಳಲ್ಲಿ ಸಾವನ್ನಪ್ಪುತ್ತದೆ. ತೀವ್ರತರವಾದ ಹೊಟ್ಟೆನೋವು, ಒದ್ದಾಡುವಿಕೆ, ನರಮಂಡಲದ ಕೋಮಾ ಇತ್ಯಾದಿ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಜೊಲ್ಲು ಸುರಿಸುವಿಕೆ, ಭೇದಿ, ಜ್ವರ, ಅತಿ ಮೂತ್ರ ಮತ್ತು ಅತಿ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ.

ಅನೇಕ ಜಾನುವಾರುಗಳಲ್ಲಿ ಕಾಮಾಲೆ, ರಕ್ತಮೂತ್ರ, ಮೂತ್ರ ನಿಲ್ಲುವಿಕೆ, ಒದ್ದಾಡುವಿಕೆ, ಕೋಮಾ ಮತ್ತು ಸಾವು ಸಂಭವಿಸುತ್ತದೆ. ತೀವ್ರವಾದ ಭೇದಿ 1-2 ಗಂಟೆಗಳಲ್ಲಿ ಕಂಡುಬರುತ್ತದೆ ಮತ್ತು 3-5 ದಿನಗಳ ವರೆಗೂ ವಿಷ ಸೇವನೆಯ ದುಷ್ಪರಿಣಾಮ ಬಾಧಿಸುತ್ತದೆ.

ಹಂದಿಗಳು ಪದೇಪದೇ ವಾಂತಿ ಮಾಡಿಕೊಳ್ಳುತ್ತವೆ. ವಾಂತಿಯು ಬೆಳ್ಳುಳ್ಳಿಯ ವಾಸನೆಯನ್ನು ಹೊಂದಿರುತ್ತದೆ. ಕುದುರೆಗಳಲ್ಲಿ ಹೆಚ್ಚಿದ ಜೊಲ್ಲು ಸೋರುವಿಕೆ, ನಿತ್ರಾಣಗೊಳ್ಳುವಿಕೆ ಮತ್ತು ಪಾರ್ಶ್ವವಾಯು ಪೀಡೆ ಕಾಣಿಸಿಕೊಳ್ಳಬಹುದು.

ಮರಣೋತ್ತರ ಪರೀಕ್ಷಾ ಲಕ್ಷಣ

 • ಮೃತ ಪ್ರಾಣಿಯ ಹೊಟ್ಟೆಯಲ್ಲಿರುವ ವಸ್ತುಗಳು ಬೆಳ್ಳುಳ್ಳಿಯ ತೆರನಾದ ವಾಸನೆ ಸೂಸುತ್ತಿರುತ್ತವೆ.
 • ಪಿತ್ತ ಜನಕಾಂಗವು ಊದಿಕೊಂಡು ಹಳದಿ ವರ್ಣಕ್ಕೆ ತಿರುಗುತ್ತದೆ.
 • ಗುಲ್ಮವು ಚಿಕ್ಕದಾಗಿ ಮುರುಟಿಕೊಂಡಿರುತ್ತದೆ
 • ಉದರ ಮತ್ತು ಕರುಳಿನಲ್ಲಿ ತೀವ್ರವಾದ ಉರಿಯೂತ, ರಕ್ತಸ್ರಾವ.
 • ಉದರದಲ್ಲಿ ನೀರು ತುಂಬಿಕೊಳ್ಳಬಹುದು ಮತ್ತು ಶರೀರ ಊದಿಕೊಳ್ಳಬಹುದು.
 • ಪಿತ್ತಜನಕಾಂಗ ಮತ್ತು ಮೂತ್ರಜನಕಾಂಗಗಳಲ್ಲಿ ಮೇದಸ್ಸು ತುಂಬಿಕೊಳ್ಳಬಹುದು.

ಪತ್ತೆ ಮಾಡುವುದು

 • ವಿಷಬಾಧೆಯ ಲಕ್ಷಣಗಳು ಮತ್ತು ಉದರ ಶೂಲೆ.
 • ವಾಂತಿಯು ಬೆಳ್ಳುಳ್ಳಿಯ ವಾಸನೆಯನ್ನು ಹೊಂದಿರುವುದು.
 • ಮರಣೋತ್ತರ ಪರೀಕ್ಷಾ ಲಕ್ಷಣಗಳು.
 • ರಕ್ತ ಮತ್ತು ಅಂಗಾಂಶಗಳಲ್ಲಿ ರಂಜಕದ ಪ್ರಮಾಣ ಗುರುತಿಸುವುದು.
 • ಚಿಕಿತ್ಸೆ

ರಂಜಕದ ವಿಷಬಾಧೆಗೆ ನಿಖರವಾದ ಪ್ರತ್ಯ್‌ಷಧವಿಲ್ಲ. ಆದರೆ ರಂಜಕವು ಹೊಟ್ಟೆಯಲ್ಲಿದೆ ಎಂದು ತಿಳಿದರೆ ಪ್ರಾಣಿಗಳಿಗೆ ವಾಂತಿ ಮಾಡಿಸಬಹುದು. ಒಂದುವೇಳೆ ಹೊಟ್ಟೆ ದಾಟಿ ಕರುಳಲ್ಲಿ ಸೇರಿದಲ್ಲಿ ಭೇದಿ ಮಾಡಿಸಬಹುದು. ಆದರೆ ಯಾವುದೇ ಕಾರಣಕ್ಕೂ ಎಣ್ಣೆಯನ್ನು ಭೇದಿ ಮಾಡಿಸಲು ಬಳಸಬಾರದು.

ಇದರಿಂದ ರಂಜಕವು ಜಾಸ್ತಿ ಹೀರಲ್ಪಟ್ಟು ವಿಷಬಾಧೆ ಹೆಚ್ಚಬಹುದು. ಆದ್ದರಿಂದ ಮೆಗ್ನೇಷಿಯಂ ಸಲ್ಫೇಟ್ ಅಥವಾ ಪೆಟ್ಲುಪ್ಪನ್ನು ಕೊಡಬೇಕು. ವಿಷಲಕ್ಷಣಗಳನ್ನು ಕಡಿಮೆಗೊಳಿಸಲು ರಕ್ತನಾಳಕ್ಕೆ ಸಲೈನ್ ಅಥವಾ ಗ್ಲೂಕೋಸ್ ನೀಡಬಹುದು. ಮುಖ್ಯವಾಗಿ ಪ್ರಾಣಿಗಳಿಗೆ ರಂಜಕಯುಕ್ತ ವಸ್ತುಗಳು ಎಟುಕದಂತೆ ನೋಡಿಕೊಳ್ಳುವುದು ಅವಶ್ಯ.

ಮೂಲ :ಪ್ರಜಾವಾಣಿ

2.94495412844
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top