অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಂಕ್ರೀಟ್‌ ಕಾಡಿನಲ್ಲಿ ವೃಕ್ಷ ರಕ್ಷಣೆಯ ಭಿನ್ನ ಹಾದಿ

ಮನೆಗೊಂದು ಮರ ಇರಬೇಕು ಅನ್ನುತ್ತಾರೆ, ಗಿಡ ನೆಡುವ ಕಾರ್ಯಕ್ರಮಗಳೂ ವರ್ಷಕ್ಕೆ ಲೆಕ್ಕವಿಲ್ಲದಷ್ಟು ನಡೆಯುತ್ತಿರುತ್ತವೆ. ನೆಟ್ಟಿರುವ ಗಿಡಗಳೆಲ್ಲ ಬೆಳೆದು ಮರವಾಗಿದ್ದರೆ ಬೆಂಗಳೂರು ದಟ್ಟ ಕಾಡಾಗಬೇಕಿತ್ತು’ ಹೀಗೇ ಮಾತು ಆರಂಭಿಸಿದ ವಿಜಯ್ ನಿಶಾಂತ್ ಧ್ವನಿಯಲ್ಲಿ ಪರಿಸರ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಆಶಾಡಭೂತಿತನದ ಕುರಿತು ಬೇಸರ ಎದ್ದುತೋರುತ್ತಿತ್ತು.

ಚಿಕ್ಕಂದಿನಿಂದ ಮರದ ನೆರಳೇ ಇವರಿಗ ಆಟದ ತಾಣ. ಆದ್ದರಿಂದ ಅವರಿಗೆ ಮರಗಿಡಗಳೊಂದಿಗೆ ಭಾವನಾತ್ಮಕ ನಂಟು. ತಮ್ಮ ನೆಚ್ಚಿನ ಮರವನ್ನು ಅಭಿವೃದ್ಧಿ ನೆಪದಲ್ಲಿ ಕಡಿದುಹಾಕಿದ್ದ ಘಟನೆಯೇ ಅವರಲ್ಲಿ ಮರಗಳನ್ನು ಉಳಿಸುವ ಕಾರ್ಯಕ್ಕೆ ಪ್ರೇರೇಪಿಸಿದ್ದು.
‘ಮರಗಳು ಕಡಿಮೆಯಾಗುತ್ತಿವೆ’ ಎಂದು ಒಣ ಭಾಷಣಗಳಲ್ಲೇ ಪರಿಸರ ಪ್ರೀತಿ ತೋರುವ ಬದಲು ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕೆಂಬ ಅತೀವ ಹಂಬಲ ಅವರಲ್ಲಿ ಹುಟ್ಟಿಕೊಂಡಿತ್ತು.

ಮರಗಳು ಯಾವ ಪ್ರಮಾಣದಲ್ಲಿ ಕಡಿಮೆಯಾಗಿವೆ? ಕಡಿಮೆಯಾಗಲು ಕಾರಣಗಳೇನು? ಅದನ್ನು ತಡೆಯುವ ಮಾರ್ಗ ಯಾವುದು? ಈ ದುರಂತದ ಬಗ್ಗೆ ಜನರಿಗೆ ನಿಖರವಾಗಿ ತಿಳಿಸುವುದು ಹೇಗೆ? ಹೀಗೆ ಪ್ರಶ್ನೆಗಳನ್ನು ಹರವಿಕೊಂಡು ಕೂತ ವಿಜಯ್‌ಗೆ ಹೊಳೆದದ್ದು ‘ವೃಕ್ಷಗಣತಿ’ಯ ಆಲೋಚನೆ. ತಮ್ಮ ಸ್ನೇಹಿತ ಷರೀಫ್ ಅವರ ಬಳಿ ಮ್ಯಾಪಿಂಗ್‌ ಕೆಲಸಕ್ಕೆ ಸೇರಿಕೊಂಡಿದ್ದ ಅನುಭವ ಅವರ ಬಗಲಲ್ಲಿತ್ತು.

ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಮರಗಳ ಲೆಕ್ಕಾಚಾರವನ್ನೂ ಮ್ಯಾಪಿಂಗ್ ಮಾಡುವ ಹೊಸ ಯೋಚನೆಯೂ ಜೊತೆಯಾಯಿತು. ಜನಸಂಖ್ಯೆ ತಿಳಿಯಲು ಜನಗಣತಿ ಇದ್ದಂತೆ ಮರಗಳ ಸಂಖ್ಯೆ ತಿಳಿಯಲು ಮರಗಣತಿ ಇರಬೇಕು ಎಂಬ  ಇವರ ನಿರ್ಧಾರ ಗಟ್ಟಿಯಾಯಿತು. ಆದರೆ ಬೆಂಗಳೂರಿನ ಅಷ್ಟೂ ಮರಗಳನ್ನು ಎಣಿಸಿ ಮಾಹಿತಿ ಸಂಗ್ರಹಿಸುವುದು ಸುಲಭದ ಮಾತಾಗಿರಲಿಲ್ಲ. ಹಟ ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವಂತೆ ಮಾಡಿತ್ತು.

ಹತ್ತು ವರ್ಷಗಳಿಂದ ಬಿಬಿಎಂಪಿಯ ಅರಣ್ಯ ವಿಭಾಗದಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿರುವ ವಿಜಯ್‌ ನಿಶಾಂತ್‌ ಅವರ ಈ ಕಾಯಕಕ್ಕೆ ಸ್ನೇಹಿತರಾದ ಆರ್‌. ರವಿಕುಮಾರ್, ಟಿ.ವಿ. ಚವೀನ್, ಎಸ್‌. ಷರೀಫ್‌ ಕೂಡ ಕೈ ಜೋಡಿಸಿದರು. ಮರಗಳನ್ನು ಉಳಿಸುವ, ಜೊತೆಗೆ ಇಲ್ಲಿನ ಜೀವವೈವಿಧ್ಯವನ್ನು ದಾಖಲಿಸುವ ಒಂದೇ ಮಾರ್ಗವೆಂದರೆ ಮರಗಣತಿ ಎಂಬುದನ್ನು ಜನರಿಗೂ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸತ್ವ ಕಲ್ಯಾಣ ಸಂಘದ ಈ ಯುವಕರು 2010ರಲ್ಲಿ ವೃಕ್ಷಗಳ ಗಣತಿ ಕೆಲಸಕ್ಕೆ ಕೈ ಹಾಕಿದರು.

ಸರ್ಕಾರಕ್ಕೆ ಮನವಿ ಪತ್ರವನ್ನೂ ಸಲ್ಲಿಸಲಾಯಿತು. ಬಜೆಟ್‌ ಕೂಡ ನಿಗದಿ ಪಡಿಸಲಾಗಿತ್ತು. ಆದರೆ  ಸಂಬಂಧಪಟ್ಟವರ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಅಡ್ಡಗಾಲಾಯಿತು. ಈ ಸಮಯವನ್ನೂ ವ್ಯರ್ಥ ಮಾಡದೆ, ಎಟ್ರೀ ಸಂಸ್ಥೆಯ  ಅರ್ಬನ್‌ ಫಾರೆಸ್ಟ್ರಿಯಲ್ಲಿ ಎರಡು ವರ್ಷ  ಮರಗಳ ಪ್ರಭೇದ ಗುರುತಿಸುವಿಕೆ, ಚಿಕಿತ್ಸೆ, ಸಮಸ್ಯೆ, ನಗರದಲ್ಲಿ ಮರಗಳಿಗೆ ಬರುವ ರೋಗ ಹೀಗೆ ಹಲವು ವಿಷಯಗಳನ್ನು ತಮ್ಮ ಅನುಭವದ ಬುತ್ತಿಗೆ ಸೇರಿಸಿಕೊಂಡರು. ಎರಡು ವರ್ಷಗಳ ಕಾಲ ನಗರದ ಮೂಲೆ ಮೂಲೆಯಲ್ಲೂ ಅಲೆದು ಹಲವು ಆಯಾಮಗಳಿಂದ ಸಂಶೋಧನೆ  ನಡೆಸಿದರು.

ಇದೀಗ ತಮ್ಮದೇ ವೆಬ್‌ಸೈಟ್‌ ಅನ್ನು ಅನಾವರಣಗೊಳಿಸಿದ್ದಾರೆ. ಇವರ ಈ ವೃಕ್ಷ ಪ್ರೇಮಕ್ಕೆ ನೀರೆರೆದವರು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಡಾ.ಹರಿಣಿ ನಾಗೇಂದ್ರ.  ಸಿಂಗಪುರದಲ್ಲಿ ನಡೆದ ಕಿರುಚಿತ್ರ ಸ್ಪರ್ಧೆಯಲ್ಲಿ ಮರಗಣತಿ ಮತ್ತು ಅದರ ಮಹತ್ವದ ಕುರಿತು ಇವರು ತಯಾರಿಸಿದ ‘ಪ್ರಾಜೆಕ್ಟ್‌ ವೃಕ್ಷ’ಕ್ಕೆ ‘ಉತ್ತಮ ಪರಿಕಲ್ಪನೆ’ ಪ್ರಶಸ್ತಿ ಕೂಡ ದೊರೆಯಿತು.

ಸಂಶೋಧನೆಯ ಆಳ ಅಗಲ

ಯಾವುದೇ ಒಂದು ವಿಷಯದ ಬಗ್ಗೆ ಮಾತನಾಡಬೇಕಾದರೆ ದಾಖಲೆಗಳು ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ವಿಜಯ್‌ ಅವರು ಎಲ್ಲ ರೀತಿಯಿಂದಲೂ ಬೆಂಗಳೂರಿನ  ಮರ ಗಿಡಗಳ ಪರಿಸ್ಥಿತಿಯನ್ನು ಅವಲೋಕಿಸಲು ಆರಂಭಿಸಿ ದರು. ನಗರ ಅರಣ್ಯೀಕರಣ ಎಂಬ  ಪರಿಕಲ್ಪನೆಯಲ್ಲಿ ಗಣತಿಯ ಪ್ರಾಮುಖ್ಯ ಅರಿತು ಕೆಲಸ ಆರಂಭಿಸಿದರು. ಮೊದಲು ಮರಗಳ ಮೂಲ ಅವಶ್ಯಕತೆಗಳನ್ನು ಸರಳವಾಗಿ ವಿವರಿಸಲು ಮುಂದಾದರು.

ಮೊದಲ ಹಂತದಲ್ಲಿ ಹತ್ತು ಸ್ಥಳಗಳಲ್ಲಿ ‘ಮರಗಳಿದ್ದರೆ ಆರೋಗ್ಯ ಹೇಗಿರುತ್ತದೆ, ಮರಗಳಿಲ್ಲದಿದ್ದರೆ ಆರೋಗ್ಯ ಹೇಗಿರುತ್ತದೆ’ ಎಂದು  ಸಂಶೋಧನೆ ನಡೆಸಿ, ಮರಗಳ ವಿನಾಶದಿಂದ ಮಕ್ಕಳ ಶ್ವಾಸಕೋಶದ ಮೇಲಿನ ಪರಿಣಾಮವನ್ನೂ ವಿವರಿಸಿದ್ದಾರೆ. ಜೊತೆಗೆ ದೂಳು, ತಾಪಮಾನ, ವಿದ್ಯುತ್‌ ಶಕ್ತಿ ಬಳಕೆ ಇವುಗಳನ್ನು ಮರಗಳ ಇರುವಿಕೆಯೊಂದಿಗೆ ಹೋಲಿಸಿ ದಾಖಲಿಸಿದರು.

ವೈಜ್ಞಾನಿಕ ಗಣತಿ

ವೈಜ್ಞಾನಿಕ ರೀತಿಯಲ್ಲಿ ಮರಗಳ ಗಣತಿ ಆರಂಭಿಸಿ, ಆ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿದೆ ಈ ತಂಡ. ಗಣತಿಯನ್ನು ನಿಖರವಾಗಿ ನಿರ್ವಹಿಸಲೆಂದು ವಾರ್ಡ್‌ ಹಂತದಲ್ಲಿ ಕೆಲಸ ಆರಂಭಿಸಿದರು. ಈ ಕಾರ್ಯವನ್ನು ಸರಳಗೊಳಿಸಲು, ನಿಖರತೆ ಕಾಪಾಡಿಕೊಳ್ಳಲು ಜಿಪಿಎಸ್‌ ಬೆಂಬಲಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡರು.

ಒಂದೊಂದು ರಸ್ತೆಯ ಒಂದೊಂದು ಮರದ ಬಳಿಯೂ ಹೋಗಿ, ಅದರ ಅಗಲ, ಎತ್ತರವನ್ನು ಅಳೆದು, ಚಿತ್ರ ತೆಗೆದು, ಪ್ರಭೇದ ಗುರುತಿಸಿದರು. ಆದರೆ ಇಷ್ಟಕ್ಕೇ ಕೆಲಸ ಮುಗಿಯುವುದಿಲ್ಲ. ಅವುಗಳನ್ನು ಮ್ಯಾಪಿಂಗ್ ಮಾಡಿ ಸರ್ವರ್‌ನಲ್ಲಿ ದಾಖಲಿಸಲಾಯಿತು. ನಗರದ ಹೂವು ಮತ್ತು ಹಣ್ಣು, ಎಲ್ಲಾ ರೀತಿಯ ಮರಗಳ ಸಿದ್ಧ ಲೆಕ್ಕಾಚಾರ ದೊರೆಯುವಂತೆ ಮಾಡುವುದು ಇವರ ಉದ್ದೇಶ.   ಸದ್ಯಕ್ಕೆ ಬೆಂಗಳೂರಿನ ಜಯನಗರ ಪೂರ್ವ, ಬೈರಸಂದ್ರ, ಪಟ್ಟಾಭಿರಾಮನಗರದಲ್ಲಿ ಒಟ್ಟು ಎಂಟು ಸಾವಿರ ಮರಗಳನ್ನು  ಈ ರೀತಿ ದಾಖಲಿಸಿದ್ದಾರೆ.

ಮರಗಳ ಭವಿಷ್ಯ ಏನು?

‘‘ಹಿಂದೆಲ್ಲಾ, ‘ಮುಂದೊಂದು ದಿನ  ನೀರಿಗೂ ದುಡ್ಡು ಕೊಡಬೇಕಾಗುತ್ತದೆ’ ಎಂದು ಹಿರಿಯರು ಹೇಳುತ್ತಿದ್ದರು. ಆ ಕಾಲ ಈಗ ಬಂದಿದೆ. ಈಗ, ‘ಮುಂದೆ ಗಾಳಿಗೂ ದುಡ್ಡು ಕೊಡಬೇಕಾಗುತ್ತದೆ’ ಎನ್ನುತ್ತಿದ್ದಾರೆ. ಆ ಸಮಯವೂ ದೂರವಿಲ್ಲ ಎನ್ನಿಸುತ್ತಿದೆ’’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವಿಜಯ್. ‘ಬೆಂಗಳೂರಿನಲ್ಲಿ 2000 ಪ್ರಭೇದಗಳ ಗಿಡಗಳನ್ನು ಹಾಕಬಹುದು. ಅಷ್ಟು ಫಲವತ್ತತೆ ಇಲ್ಲಿದೆ. ಇಷ್ಟು ವೈವಿಧ್ಯ ಎಲ್ಲೂ ಕಂಡಿಲ್ಲ. ಆದರೆ ಅದರ ಪ್ರಾಮುಖ್ಯ ಇಲ್ಲಿನವರಿಗೇ ಗೊತ್ತಿಲ್ಲ’ ಎನ್ನುತ್ತಾರೆ ಅವರು. ಆ ಪ್ರಾಮುಖ್ಯವನ್ನು ಪರಿಣಾಮಕಾರಿಯಾಗಿ ತಿಳಿಸುವಂತೆ ಮಾಡಲು, ಮರಗಳ ಭವಿಷ್ಯವನ್ನು ಭದ್ರಗೊಳಿಸಲು ಈ ಗಣತಿ ಮುಖ್ಯ ಎನ್ನುತ್ತಾರೆ.

ಬಳಕೆ ಸ್ನೇಹಿ ವೆಬ್‌ಸೈಟ್‌

ಸದ್ಯ ಬೆಂಗಳೂರಿನ ಮೂರು ವಾರ್ಡ್‌ಗಳ ಮರಗಣತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸ್ಯಾಟೆಲೈಟ್‌ ರೋಡ್‌ ಮ್ಯಾಪ್‌ನಲ್ಲೂ ಹಸಿರು ಎಷ್ಟು ಆವೃತವಾಗಿದೆ ಎಂಬುದನ್ನು ನೋಡಿದಾಕ್ಷಣ ತಿಳಿದುಕೊಳ್ಳಬಹುದು.  ಹಸಿರು, ಕೆಂಪು, ಹಳದಿ ಬಣ್ಣದ ಮರದ ಚಿತ್ರಗಳಿಂದ ಮರಗಳ ಒಟ್ಟೂ ಮಾಹಿತಿಯನ್ನು ಪಡೆಯಬಹುದು. ಹಸಿರು ಮರಗಳು ಪ್ರತ್ಯೇಕ ಮರದ ಹೆಸರು, ಪ್ರಭೇದ,  ಅಳತೆ, ಎತ್ತರ ಎಲ್ಲವನ್ನೂ ಚಿತ್ರ ಸಮೇತ ತೋರಿದರೆ, ಕೆಂಪು ಬಣ್ಣ ಸಸಿಗಳನ್ನು ತೋರುತ್ತದೆ. ಹಳದಿ ಬಣ್ಣ ಗಿಡ ನೆಡಲು ಯೋಗ್ಯವಾಗಿರುವ ಖಾಲಿ ಜಾಗದ ಸಂಕೇತ ವಾಗಿದೆ. ಇವುಗಳಿಂದ ಮರಗಳನ್ನು ನೆಡಲು ಅನುಕೂಲ ವಾಗುತ್ತದೆ. ಮುಂದೆ ಮರಗಳ ಕುರಿತು ಯೋಜನೆ ಹಾಕಿಕೊಳ್ಳಲೂ ನೆರವಾಗುತ್ತದೆ ಎನ್ನುತ್ತಾರೆ ಅವರು.

ಮರಗಳಿಗೆ ಚಿಕಿತ್ಸೆ

ಮರಗಳನ್ನು ಉಳಿಸಲು ಹಲವು ಕಾರಣಗಳಿವೆ. ಮರ ಹಾಗೂ ಪಕ್ಷಿಗಳ ನಡುವೆ ಒಂದು ಅವಲಂಬನೆಯಿದೆ. ಪ್ರಾಣಿ ಪಕ್ಷಿ ಸಂಕುಲ ಎಲ್ಲಕ್ಕೂ ಮರ ಮೂಲ. ಆದ್ದರಿಂದ ಎಲ್ಲ ಜೀವಗಳಿಗೂ ಮರ ಅವಶ್ಯಕ ಎಂದು ಅದರ ಪ್ರಾಮುಖ್ಯವನ್ನು ತಿಳಿಸುತ್ತಾರೆ. ಎಷ್ಟೋ ಗಿಡಗಳು ಪ್ರಯೋಜನವಿಲ್ಲ, ಪಾಯ್ಸನಿಂಗ್ ಆಗಿದೆ ಎಂದು ಕಡಿದು ಹಾಕುತ್ತಾರೆ. ಆದರೆ ಅದನ್ನು ತಡೆದು, ಅದಕ್ಕೆ ಚಿಕಿತ್ಸೆಯನ್ನೂ ನೀಡಿದ್ದಾರೆ ವಿಜಯ್. ಜೊತೆಗೆ ಮರ ಅನಾರೋಗ್ಯಪೀಡಿತವಾಗಿದೆ ಎಂಬ ನೆಪದಲ್ಲಿ ಮರವನ್ನು ಕಡಿದು ಹಾಕುವಾಗ, ದಾಖಲೆಗಳನ್ನು ತೋರಿಸಿ ಅವುಗಳನ್ನು ಕಡಿಯದಂತೆ ತಡೆದ ಸಂಗತಿಗಳೂ ಇವೆಯಂತೆ.

ಒಂದು ಮರವನ್ನು ಕಾಪಾಡಿದರೆ ಎಷ್ಟೊಂದು ಜೀವಗಳನ್ನು ಕಾಪಾಡಿದಂತೆ ಎಂದು ಒತ್ತಿ ಹೇಳುವ ವಿಜಯ್‌ ಅವರ ವೃಕ್ಷಗಳ ಬಗೆಗಿನ ಕಾಳಜಿ ಇಷ್ಟಕ್ಕೇ ನಿಲ್ಲುವುದಿಲ್ಲ.  ಶಾಲೆಗಳಲ್ಲೂ ಈ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
‘ನಾವು ಕ್ರಮಿಸಬೇಕಾದ ಹಾದಿ ಸಾಕಷ್ಟಿದೆ. ಕೇವಲ ಬೆಂಗಳೂರಿನಲ್ಲಿ ಮೂರು ವಾರ್ಡ್‌ಗಳನ್ನು ಮುಗಿಸಿದ್ದೇವೆ, ಇಡೀ ನಗರದ ಮರಗಳ ಗಣತಿ ಆಗಬೇಕು, ಇದರ ನಂತರ ರಾಜ್ಯದ, ಹಲವು ಕಡೆಯ ಮರಗಣತಿಯನ್ನೂ ನಡೆಸಬಹುದು. ಇದಕ್ಕೆಲ್ಲ ಸರ್ಕಾರದ ಬೆಂಬಲ ಬೇಕು’ ಎನ್ನುತ್ತಾರೆ ಅವರು.

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate