ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಸಾವಯವ ಕೃಷಿ / ಕೃಷಿಯ ತತ್ವಗಳು / ಬಿಸಿಲಿನ ರಾಣಿ ಪನ್ನೇರಳೆ ಹಣ್ಣು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಿಸಿಲಿನ ರಾಣಿ ಪನ್ನೇರಳೆ ಹಣ್ಣು

ಬಿಸಿಲಿನ ರಾಣಿ ಪನ್ನೇರಳೆ ಹಣ್ಣು

ಮಾರ್ಚ್‌ನಿಂದ ಮೇ ತಿಂಗಳ ಬಿರುಬಿಸಿಲಿನಲ್ಲಿ ರಸ್ತೆ ಬದಿಯ ತಳ್ಳು ಗಾಡಿಯ ಪಕ್ಕದಲ್ಲೋ, ಹಣ್ಣುಗಳ ರಾಶಿ ಇರುವ ಸೈಕಲ್‌ ಬದಿಯಲ್ಲೋ ಹಾದು ಹೋಗುತ್ತಿದ್ದರೆ ಪರಿಮಳ ಮೂಗಿಗೆ ಬಡಿದು ಅದನ್ನು ಸವಿದೇ ಬಿಡುವ ಆಸೆ ಆಯಿತೆಂದರೆ ಆ ಹಣ್ಣುಗಳ ನಡುವೆ ಪನ್ನೇರಳೆ ಇದೆ ಎಂದೇ ಅರ್ಥ.

ತಿಳಿ ಹಳದಿ ಬಣ್ಣದಿಂದ, ನಸು ಗುಲಾಬಿ ಬಣ್ಣದಿಂದ ನೋಡಲು ಕೂಡ ಆಕರ್ಷಿಸುವ ಈ ಹಣ್ಣಿನ ಬೆಲೆ ಕೇಳಿ ‘ಅಬ್ಬಾ’ ಎಂದರೂ ಒಂದಾದರೂ ಹಣ್ಣು ಸವಿಯುವ ತವಕ ಉಂಟಾಗುತ್ತದೆ.  ಕಾಯಿಯಾಗಿರುವಾಗ  ಹಸಿರಾಗಿದ್ದು, ಹಣ್ಣಾದಾಗ ತಿಳಿಹಸಿರು, ನಸು ಹಳದಿ, ಕೆಂಪು, ಬಂಗಾರದ ಹಳದಿ ಬಣ್ಣವಾಗುವುದು ಇದರ ಗುಣಧರ್ಮ. ಹಸಿರಿನ ಬಣ್ಣದ ಪನ್ನೇರಳೆ ಕೂಡ ಬೆಳೆದವರಿದ್ದಾರೆ. ಉದ್ದನೆಯ ರಸಭರಿತವಾಗಿರುವ ಈ ಹಸಿರು ಹಣ್ಣುಗಳು ಹಣ್ಣಾದಾಗ ಬಿಳಿ ಬಣ್ಣದ್ದಾಗುತ್ತವೆ.

ಮಿರ್-ಟೆ-ಸಿಯೇ ಕುಟುಂಬಕ್ಕೆ ಸೇರಿದ ಜಂಬೋಸ್ ಜಾತಿಯ ಹಣ್ಣು ಇದು. ಮಲಬಾರ್ ಪಾಮ್, ಮಲೈ ಆ್ಯಪಲ್, ಜಾಮ್-ಪೂ, ಚಂಪಕ, ಮೌಂಟೇನ್ ಆ್ಯಪಲ್, ರೋಸ್ ಆ್ಯಪಲ್, ವಾಟರ್ ಆ್ಯಪಲ್ ಎಂದೆಲ್ಲಾ ಇದನ್ನು ಕರೆಯ ಲಾಗುತ್ತದೆ. ಇದು ಸಸ್ಯ ಶಾಸ್ತ್ರೀಯ ಹೆಸರು ‘ಸೈಝಿಜಿಯಮ್ ಜಂಬೋ’.

ಬೇಸಿಗೆ ಕಾಲದ ಹಣ್ಣಾದ ಪನ್ನೇರಳೆಯು ಉಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ದಾಹ ನೀಗುವ ಗುಣ ಹೊಂದಿರುವ  ಈ ಹಣ್ಣಿನ ಒಳಭಾಗವು ಪೊಳ್ಳಾಗಿದ್ದು, ಸುಲಿದ ಅಡಿಕೆಯಂತಹ ಬೀಜಗಳನ್ನು ಹೊಂದಿರುತ್ತದೆ. ಬೀಜದಿಂದ ಸುಲಭ ವಾಗಿ  ಸಸ್ಯಾಭಿವೃದ್ಧಿ ಮಾಡಬಹುದು. ಗಿಡ ನೆಟ್ಟು ಆರೇಳು ವರ್ಷಗಳಲ್ಲಿ ಫಸಲು ಕೊಡಲಾರಂಭಿಸುತ್ತದೆ. ನಾಟಿ ಮಾಡಿದ ನಂತರ ಮೂರು ವರ್ಷ ನೀರು ಹಾಕಿ ಸಾಕಿದರೆ ಐದಾರು ದಶಕಗಳವರೆಗೆ ಫಲ ಕೊಡುತ್ತವೆ. ಕಸಿ ಕಟ್ಟಿದ ಗಿಡಗಳು ನೆಟ್ಟರೆ ಐದು ವರ್ಷಗಳಲ್ಲಿ ಹಣ್ಣು ಪಡೆಯಬಹುದು.

ವಿಶೇಷ ಆರೈಕೆ ಬೇಡ

ಇದಕ್ಕೆ ವಿಶೇಷ ಆರೈಕೆ ಬೇಕಿಲ್ಲ. ಅಡಿಕೆ ತೆಂಗಿನ ತೋಟದಲ್ಲೂ ಬೆಳೆಯಬಹುದು. ಮರವು ಸುಮಾರು 20–30 ಅಡಿವರೆಗೆ ಬೆಳೆದು ಸೀಬೆ, ಸಪೋಟದಂತೆ ಯಥೇಚ್ಛವಾಗಿ ಹಣ್ಣುಗಳನ್ನು ನೀಡುತ್ತದೆ. ವರ್ಷಕ್ಕೆ ಎರಡು ಬಾರಿ ಫಲ ಬಿಡುತ್ತವೆ. ಸುಮಾರು ಮೂರು ತಿಂಗಳವರೆಗೆ ಹಣ್ಣು ಸಿಗುತ್ತವೆ. ದೊಡ್ಡ ಮರವಾಗಿ ಬೆಳೆದು 40–50 ವರ್ಷಗಳವರೆಗೆ ಫಲ ನೀಡುತ್ತದೆ. ಮರ ಎತ್ತರಕ್ಕೆ ಬೆಳೆದಂತೆ ಕೊಂಬೆಗಳನ್ನು ಕತ್ತರಿಸಿ ಚಿಗುರಿದ ನಂತರ ಅವಕ್ಕೆ ಹಗ್ಗ ಕಟ್ಟಿ ನೆಲದೆಡೆಗೆ ಬಾಗಿಸಬಹುದು. ಪ್ರೌಢ ಮರವು 30 ಕೆ.ಜಿವರೆಗೆ ಹಣ್ಣು ನೀಡಬಲ್ಲದು.

ಈ ಹಣ್ಣಿಗೆ ಇತ್ತೀಚೆಗೆ ಬಹಳ ಬೇಡಿಕೆ ಇದ್ದು ಮಾರುಕಟ್ಟೆಯಲ್ಲಿ ಕೆ.ಜಿಗೆ 200 ರಿಂದ 300 ರೂಪಾಯಿ ಗಳವರೆಗೆ ಬೆಲೆ ಇದೆ. ಮಾಲ್‌ಗಳಲ್ಲಿ ಈ ಹಣ್ಣು ಸಿಕ್ಕರೂ ಅಲ್ಲಿ ತಾಜಾತನ ಕಳೆದುಕೊಂಡು ಪರಿಮಳವೂ ನಾಶವಾಗಿರುತ್ತವೆ, ಆದರೆ ಬೆಲೆ ಮಾತ್ರ ಅಷ್ಟೇ ಇರುತ್ತದೆ.
ಈ ಹಣ್ಣು ಮೂಲತಃ ಆಗ್ನೇಯ ಏಷ್ಯಾದ್ದಾದರೂ  ಹಲವು ದೇಶಗಳಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲೂ ಹಲವು ಕಡೆ ಬೆಳೆಯುತ್ತಿದ್ದು, ಕೇರಳದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲೂ ಅಲ್ಲಲ್ಲಿ ಕಂಡು ಬರುತ್ತವೆ. ಇದರ ಹೂವುಗಳು ಹಸಿರು ಮಿಶ್ರಿತ ಬಿಳಿ ಅಥವಾ ಕೆನೆ ಬಣ್ಣದಿಂದ ಕೂಡಿದ್ದು, ಸುವಾಸನೆ ಬೀರುವುದಲ್ಲದೇ ಸಣ್ಣರೇಖುಗಳನ್ನೊಳಗೊಂಡು ಚಾಮರದಂತೆ ಅತ್ಯಾಕರ್ಷಕ ವಾಗಿರುತ್ತದೆ. 3–4ರ ಗೊಂಚಲಿನಲ್ಲಿರುತ್ತವೆ. ಹೂವು ಬಿಟ್ಟ ಎರಡು ತಿಂಗಳಿಗೇ ಹಣ್ಣುಗಳು ಕೊಯ್ಲಿಗೆ ಬರುತ್ತವೆ. ಮಾರ್ಚ್- ಏಪ್ರಿಲ್‌ನಲ್ಲಿ ಪಕ್ವವಾಗಿ ಹಣ್ಣಾಗುತ್ತವೆ. ಹಣ್ಣಿನ  ಕವಚವು ತೆಳುವಾಗಿದ್ದು ರಸಭರಿತವಾಗಿ ಸಿಹಿಯಾಗಿ ರುತ್ತದೆ.  ಇದಕ್ಕೆ ವಿಶೇಷ ಆರೈಕೆ ಬೇಕಾಗಿಲ್ಲ. ಅಡಿಕೆ ತೆಂಗಿನ ತೋಟಗಳಲ್ಲೂ ಬೆಳೆಸಬಹುದು. ಎಲೆ ದಟ್ಟ ಹಸಿರು ಬಣ್ಣವಿದ್ದು, ನೇರಳೆ ಎಲೆಗಳನ್ನು ನೆನಪಿಸುತ್ತದೆ.

ಆರೋಗ್ಯವರ್ಧಕವೂ ಹೌದು

‘ಸಿ’ ಜೀವಸತ್ವವನ್ನು ಹೆಚ್ಚಾಗಿ ಒಳಗೊಂಡಿರುವ ಪನ್ನೇರಳೆ ಹಣ್ಣು, ಸ್ತನ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರನ್ನು ನಿಯಂತ್ರಿಸುತ್ತದೆ. ಇದರಲ್ಲಿ ವಿಟಮಿನ್ ಬಿ1,ಬಿ2,ಬಿ3ಗಳಿದ್ದು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಮ್, ಮೆಗ್ನೀಷಿಯಮ್, ಮ್ಯಾಂಗನೀಸ್, ಕಬ್ಬಿಣ, ರಂಜಕ, ಪೊಟ್ಯಾಷಿಯಂ ಹಾಗೂ ಸತುಗಳನ್ನೊಳಗೊಂಡಿರುವ ಈ ಹಣ್ಣು ದೇಹದ ಆರೋಗ್ಯಕ್ಕೆ ಪೂರಕವಾಗಿದೆ. ಎಲೆ, ತೊಗಟೆ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣ ಹೊಂದಿದೆ.

ಕಣ್ಣು ಬೇನೆಯಲ್ಲಿ ಎಲೆಯ ರಸ ಉಪಯುಕ್ತ. ತೊಗಟೆಯಲ್ಲಿರುವ ಜಾಂಬೋಸಿನ್ ಎಂಬ ರಾಸಾಯನಿಕವು ಕ್ಷಾರೀಯ ಗುಣ ಹೊಂದಿದ್ದು, ಮಧುಮೇಹ, ಕಟ್ಟಿದ ಗಂಟಲು, ಬ್ರಾಂಕೈಟೀಸ್, ಶ್ವಾಸಕೋಶ ಸಂಬಂಧಿ ಕಾಯಿಲೆಯಲ್ಲಿ ಉಪಯುಕ್ತ. ಸ್ವರ ಒಡೆದಿದ್ದಾಗ ಮತ್ತು ಆಮಶಂಕೆ, ಜ್ವರ, ದಮ್ಮುಗಳಿಗೆ ತೊಗಟೆಯ ಕಷಾಯ ರಾಮಬಾಣವಾಗಿದೆ.

ಹಣ್ಣು ಮೆದುಳಿಗೆ ಶಕ್ತಿವರ್ಧಕವಾಗಿದ್ದು, ಸಿಹಿಯಾದ ಹಣ್ಣಿನ ರಸ, ಆಮಶಂಕೆಗೆ ಉತ್ತಮ ಔಷಧವಾಗಿದೆ. ಚೆನ್ನಾಗಿ ಒಣಗಿಸಿದ ಪನ್ನೇರಳೆ ಬೀಜದ ಪುಡಿ ಅತಿಸಾರ ಭೇದಿಯನ್ನು ನಿಯಂತ್ರಿಸುತ್ತದಲ್ಲದೆ ಆಮಶಂಕೆ ಹಾಗೂ ಲೈಂಗಿಕ ರೋಗಗಳಲ್ಲಿ ಉಪಯುಕ್ತವಾಗಿದೆ. ಬೇಸಿಗೆಯ ದಾಹ ನಿವಾರಿಸುವ ಗುಣ ಹೊಂದಿರುವ ಇದನ್ನು ಜಾಮ್ ಹಾಗೂ ಸಲಾಡ್‌ನಲ್ಲಿ ಬಳಸುತ್ತಾರೆ. ಈ ಹಣ್ಣಿನ ಶರಬತ್ತು ರುಚಿಕರ ಹಾಗೂ ಆರೋಗ್ಯಕರ.

ಹಣ್ಣಿನ ರಕ್ಷಣೆ

ಮಳೆ ಬಂದರೆ ಈ ಹಣ್ಣು ಸಪ್ಪಗಾಗುತ್ತವೆ. ಆದ್ದರಿಂದ ಬೇಸಿಗೆಯಲ್ಲಿಯೇ ಮಾರಾಟ ಮಾಡುವುದು ಉತ್ತಮ. ಹಣ್ಣಿನ ಮೇಲೆ ಚುಕ್ಕಿಗಳಾಗದಂತೆ ಗಮನಿಸಬೇಕು, ಹೀಗಾದರೆ ಬೇಡಿಕೆ ಕಡಿಮೆಯಾಗುತ್ತವೆ. ಹಣ್ಣು ತಾಜಾತನ ಕಳೆದುಕೊಳ್ಳುವ ಮೊದಲೇ ಮಾರಾಟ ಮಾಡಬೇಕು

ಪ್ಲಾಸ್ಟಿಕ್ ಚೀಲ:

ಹಣ್ಣುಗಳು ಬಿಸಿಲಿಗೆ ಹಾಳಾಗದಂತೆ ಕಾಪಾಡುವುದು ಬಹು ಮುಖ್ಯ. ಕಾಯಿಗಳಿರುವಾಗಲೇ ಅವಕ್ಕೆ ಪ್ಲಾಸ್ಟಿಕ್ ಚೀಲ ಕಟ್ಟಿ ರಕ್ಷಣೆ ಮಾಡಬೇಕು. ಉಷ್ಣಾಂಶದ ಸಮತೋಲನ ಕಾಪಾಡಿಕೊಳ್ಳಲು ಕಾಯಿಗಳು ಗೋಲಿ ಗಾತ್ರದಲ್ಲಿರುವಾಗಲೇ ಅವುಗಳಿಗೆ ಪ್ಲಾಸ್ಟಿಕ್ ಕವರ್ ಹಾಕಿ ಕಟ್ಟುವುದು ಮುಖ್ಯ. ಬಾಷ್ಪೀಕರಣದ ಕ್ರಿಯೆಯಿಂದ ಕವರ್ ಒಳಗೆ ಇಬ್ಬನಿ ಸಂಗ್ರಹವಾಗುತ್ತದೆ. ಹೊರಗಿನ ಉಷ್ಣಾಂಶ ಹೆಚ್ಚಾದರೂ ಕವರ್ ಒಳಗೆ 20ರಿಂದ 25 ಡಿಗ್ರಿ ಉಷ್ಣಾಂಶ ಸ್ಥಿರವಾಗಿರುತ್ತದೆ.

ಬಲೆ ಹಾಕಿ:

ವರ್ಷಕ್ಕೊಮ್ಮೆ 10 ಕೆ.ಜಿ ಕೊಟ್ಟಿಗೆ ಗೊಬ್ಬರ, 10 ಮಂಕರಿ ಕೋಳಿ ಗೊಬ್ಬರ, ಐದು ಕೆ.ಜಿ. ಬೇವಿನ ಹಿಂಡಿ ಹಾಕಿದರೆ ಉತ್ತಮ ಫಸಲು ಸಾಧ್ಯ. ಹಣ್ಣುಗಳಿಗೆ ಪಕ್ಷಿಗಳ  ಕಾಟ ಜಾಸ್ತಿ. ಮರದ ಮೇಲು ಭಾಗಕ್ಕೆ ಬಲೆ ಹಾಕುವುದು ಉತ್ತಮ.

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

3.0625
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top