ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಡಿಜಿಟಲ್ ಕನ್ನಡ ಡಿಂಡಿಮವ

ಡಿಜಿಟಲ್ ಕನ್ನಡ ಡಿಂಡಿಮವದ ಕುರಿತು

ತಂತ್ರಜ್ಞಾನ ಜನಸಾಮಾನ್ಯರನ್ನು ತಲುಪಬೇಕಾದರೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರದಲ್ಲಿ ಅವು ಬಳಕೆಗೆ ಸುಲಭವಾಗಿರಬೇಕು ಎಂಬ ಅಂಶವಂತೂ ಅತಿಮುಖ್ಯ. ಬಳಕೆಗೆ ಸುಲಭ ಅಂದರೆ ಅದು ಜನಸಾಮಾನ್ಯರ ಭಾಷೆಯಲ್ಲಿಯೂ ಇರಬೇಕು ಅನ್ನುವುದು ಸಹಜ. ಜನಸಾಮಾನ್ಯರ ಮಟ್ಟದಲ್ಲಿ ತಂತ್ರಜ್ಞಾನ ಅಂದರೆ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಫೋನ್, ಟಿವಿ, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಇತ್ಯಾದಿ. ಹಿಂದೆ ಇವುಗಳೆಲ್ಲಾ ಕೇವಲ ಇಂಗ್ಲೀಷಿನಲ್ಲಿ ಮಾತ್ರ ಇರುತ್ತವೆ ಎಂಬ ಕಾರಣಕ್ಕೆ ಇದರಿಂದ ದೂರವುಳಿದರು ಎಷ್ಟೋ ಜನ. ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸುವಂತೆ ಇವುಗಳೆಲ್ಲಾ ಜನರ ಭಾಷೆಯಾದ ಕನ್ನಡದಲ್ಲಿ ದೊರೆಯುತ್ತಿದೆಯಾ ಎಂದು ಪ್ರಶ್ನಿಸಿದರೆ ಧೈರ್ಯವಾಗಿ ’ಹೌದು’ ಎನ್ನಬಹುದು.

ಕಂಪ್ಯೂಟರ್ ಮತ್ತು ಇಂಟರ್ನೆಟ್

ಮೊದಲು ಕಂಪ್ಯೂಟರ್ ನಿಂದಲೇ ಶುರುಮಾಡೋಣ. ಹದಿನೈದು ವರ್ಷದ ಹಿಂದಿನ ಮಾತು. ಕಂಪ್ಯೂಟರ್ ಎನ್ನುವುದು ಮನೆಮನೆಗಳಲ್ಲಿ ಆಗತಾನೇ ಕಣ್ಣುಬಿಡುತ್ತಿದ್ದ ಕಾಲ. ಅಂತರಜಾಲವಂತೂ ಒಂದು ಅಚ್ಚರಿಯ ವಿಷಯ. ಅದು ವ್ಯಾಪಕವಾಗಿ ಬಳಕೆಯಲ್ಲೂ ಇರಲಿಲ್ಲ ಮತ್ತು ಜನರಿಗೂ ಅಷ್ಟು ಎಟುಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಂಪ್ಯೂಟರಿನಲ್ಲಿ ಕನ್ನಡ ಮೂಡಿಸಲು, ವೆಬ್ ಸೈಟುಗಳನ್ನು ನಿರ್ಮಿಸಲು ಒಂದಿಲ್ಲೊಂದು ಸಮಸ್ಯೆಗಳು ಆಗುತ್ತಿದ್ದವು. ಆದಾಗ್ಯೂ ಹವ್ಯಾಸಿ ಮತ್ತು ವೃತ್ತಿಪರ ತಂತ್ರಜ್ಞರಿಂದ ಕನ್ನಡ ಟೈಪಿಸುವ ಕೆಲವು ತಂತ್ರಾಶಗಳು ಅಭಿವೃದ್ಧಿಗೊಳಿಸಲ್ಪಟ್ಟವು. ನುಡಿ, ಬರಹದಂತಹ ತಂತ್ರಾಂಶಗಳು ಜನಪ್ರಿಯವಾದವು. ಇಂತಹ ಎಲ್ಲಾ ತಂತ್ರಾಂಶಗಳಲ್ಲಿದ್ದ ಕೊರತೆ ಎಂದರೆ ಆಯಾ ತಂತ್ರಾಂಶದಲ್ಲಿ ಟೈಪಿಸಿದ ಕಡತಗಳನ್ನು ಮತ್ತೊಂದು ಗಣಕದಲ್ಲಿ ಓದಬೇಕೆಂದಿದ್ದರೆ ಆ ಗಣಕದಲ್ಲೂ ಅದೇ ತಂತ್ರಾಂಶ ಅಳವಡಿಸಿಕೊಳ್ಳಬೇಕಿತ್ತು. ಅನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಶಿಷ್ಟತೆಯ ಯುನಿಕೋಡ್ ಅಕ್ಷರಶೈಲಿ(ಫಾಂಟ್)ಗಳು ತಯಾರಾದವು. ಇದು ಕಂಪ್ಯೂಟರಲ್ಲಿ ಕನ್ನಡದ ಮತ್ತು ವಿಶ್ವದ ಬಹಳ ಭಾಷೆಗಳ ಬೆಳವಣಿಗೆಯಲ್ಲಿ ಪ್ರಮುಖ ಘಟ್ಟ. ವಿಂಡೋಸ್, ಲಿನಕ್ಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳು (O.S) ಈ ಯುನಿಕೋಡ್ ಫಾಂಟ್ ಗಳನ್ನು ಅಳವಡಿಸಿಕೊಂಡವು. ಈ ಕಾರ್ಯಾಚರಣ ವ್ಯವಸ್ಥೆಗಳು ಪೂರ್ತಿ ಕನ್ನಡದಲ್ಲೂ ಲಭ್ಯವಾದವು. ಕನ್ನಡ ಟೈಪಿಸುವ ತಂತ್ರಾಂಶಗಳು ಯುನಿಕೋಡ್ ಅಕ್ಷರಗಳನ್ನು ಟೈಪಿಸುವ ಸೌಲಭ್ಯ ಕಲ್ಪಿಸಿದವು. ಹಾಗಾಗಿ ಈ ಫಾಂಟ್ ಸಮಸ್ಯೆ ದೂರವಾಯಿತು. ಈಗ ನಾವೆಲ್ಲಾ ಬರೆಯುತ್ತಿರುವ ಕನ್ನಡ ಅಕ್ಷರಗಳನ್ನು ಯಾವುದೇ ಕಂಪ್ಯೂಟರ್ ನಲ್ಲಿ ಯಾವುದೇ ಹೊರ ತಂತ್ರಾಂಶದ ಅಗತ್ಯವೂ ಇಲ್ಲದೇ ಓದಬಹುದು. ಕನ್ನಡ ಸುಲಭವಾಗಿ ಟೈಪಿಸಲು ಈಗಂತೂ ಅನೇಕ ತಂತ್ರಾಂಶಗಳು, ಆನ್ ಲೈನ್, ಆಫ್ ಲೈನ್ ಸಲಕರಣೆಗಳು ಇವೆ. ಬರಹ, ನುಡಿ, ಪದ, ಗೂಗಲ್ ಇನ್ಪುಟ್, ಕನ್ನಡ ಸ್ಲೇಟ್ ಮುಂತಾದ ಹತ್ತು ಹಲವು ಲಭ್ಯ. ಕಾರ್ಯಾಚರಣ ವ್ಯವಸ್ಥೆ (O.S) ಗಳಲ್ಲೇ ಕನ್ನಡ ಇನ್ ಬಿಲ್ಟ್ ಕೀಬೋರ್ಡ್ ಕೂಡ ಇರುತ್ತದೆ.

ಅಂತರಜಾಲದಲ್ಲಿ ಮೊದಲು ಕನ್ನಡಿಗರ ಸಂವಹನಗಳು ಕಂಗ್ಲೀಷಿನಲ್ಲಿರುತ್ತಿದ್ದವು. ಅಂದರೆ ಕನ್ನಡವನ್ನು ಇಂಗ್ಲೀಷ್ ಲಿಪಿಯಲ್ಲಿ ಬರೆಯುವುದು. ಇಮೇಲ್ ಗಳಲ್ಲಿ, ಆರ್ಕುಟ್ ಮುಂತಾದ ಸಾಮಾಜಿಕ ಸಂಪರ್ಕತಾಣಗಳಲ್ಲಿ ಸಂವಹನಗಳು ಇಂಗ್ಲೀಷಿನಲ್ಲಿ ಮತ್ತು ಕಂಗ್ಲೀಷಿನಲ್ಲಿ ನಡೆಯುತ್ತಿತ್ತು. ಒಮ್ಮೆ ಈ ಯುನಿಕೋಡ್ ಜನಪ್ರಿಯವಾದಂತೆಲ್ಲಾ ಆರ್ಕುಟ್, ಫೇಸ್ ಬುಕ್ ಮುಂತಾದ ಕಡೆ ಭರಪೂರ ಕನ್ನಡ ಬರವಣಿಗೆಗಳು ಶುರುವಾದವು. ಕನ್ನಡ ಬರವಣಿಗೆ ಮಾಡಲು ಸಾವಿರಾರು ಜನ ಬ್ಲಾಗುಗಳನ್ನು ತೆರೆದರು. ತಂತ್ರಜ್ಞಾನ ಜನಸಾಮಾನ್ಯರನ್ನು ಮುಟ್ಟಿದ್ದಕ್ಕೆ ಇದು ಸೂಚನೆಯಾಗಿತ್ತು. ಸಾಹಿತ್ಯ, ಮಾಹಿತಿ ಬರಹಗಳು ಅಂತರಜಾಲದಲ್ಲಿ ಪ್ರಕಟವಾಗತೊಡಗಿದವು. ಅನೇಕ ಜಾಲತಾಣಗಳು, ಸುದ್ದಿತಾಣಗಳು, ನಿಘಂಟುಗಳು, ’ಕಣಜ’ದಂತಹ ಮಾಹಿತಿಕೋಶ, ವಿಕಿಪೀಡಿಯಾದಂತಹ ವಿಶ್ವಕೋಶಗಳು ಇವತ್ತು ಕನ್ನಡದಲ್ಲಿ ಇವೆ. ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳು ಇ-ಪೇಪರ್ ಗಳಾಗಿಯೂ ಹೊರಬರುತ್ತಿವೆ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ಲಭ್ಯವಿದೆ. ಜಿಮೇಲ್, ಯಾಹೂನಂತಹ ಇಮೇಲ್ ಸೇವೆಗಳು ಮತ್ತು ಫೇಸ್ ಬುಕ್ ಕೂಡ ಕನ್ನಡದಲ್ಲಿವೆ. ಬಳಕೆದಾರರು ಕನ್ನಡಕ್ಕೆ ಬದಲಾಯಿಸಿಕೊಳ್ಳಲು ಸೆಟಿಂಗ್ಸ್ ಮೆನುವಿನಲ್ಲಿ ಆಯ್ಕೆ ಇರುತ್ತದೆ. ಬೇರೆ ಭಾಷೆಯಲ್ಲಿ ಇರುವ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳುವ ಸೌಲಭ್ಯ ಕೂಡ 'ಗೂಗಲ್ ಟ್ರಾನ್ಸ್‌ಲೇಟ್' ಮೂಲಕ ಪ್ರಾರಂಭಿಕ ಹಂತದಲ್ಲಿ ಬಂದಿದೆ.

ಸ್ಮಾರ್ಟ್ ಫೋನುಗಳಲ್ಲಿ ಕನ್ನಡ

ತಂತ್ರಜ್ಞಾನ ಎಂದಿಗೂ ನಿಂತ ನೀರಲ್ಲ. ಫೋನುಗಳು ತಂತ್ರಜ್ಞಾನ ಬಳಸಿಕೊಂಡು ಸ್ಮಾರ್ಟ್ ಆಗತೊಡಗಿದವು. ಫೋನುಗಳು ಕೇವಲ ಕರೆ ಮಾಡುವ ಹೊರತಾಗಿ ಇನ್ನೂ ಅನೇಕ ಕೆಲಸಗಳಿಗೆ ಬಳಕೆಯಾಗತೊಡಗಿತು. ಕನ್ನಡವೂ ಅದರೊಂದಿಗೆ ಸ್ಮಾರ್ಟ್ ಆಗುವ ಅಗತ್ಯತೆ ಉಂಟಾಯಿತು. ಹಳೆಯ ಮಾದರಿಯ ಫೋನುಗಳಲ್ಲಿ ಕನ್ನಡ ಅಕ್ಷರಗಳಿಗೆ ಬೆಂಬಲವಿರಲಿಲ್ಲ. ಕೆಲವೊಂದು ಕಂಪನಿಗಳ ಕೆಲವು ಮಾಡೆಲ್ ಗಳಲ್ಲಿ ಮಾತ್ರ ಕನ್ನಡ ಓದುವುದು ಬರೆಯುವುದು ಸಾಧ್ಯವಿತ್ತು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿರುವ ಆಂಡ್ರಾಯ್ಡ್ ನ ಮೊದಲ ಆವೃತ್ತಿಗಳಲ್ಲೂ ಕನ್ನಡ ಅಕ್ಷರಗಳಿಗೆ ಬೆಂಬಲ ಇರಲಿಲ್ಲ. ಕೆಲವು ಮಾಡೆಲ್ ಗಳು ಕನ್ನಡ ಸಪೋರ್ಟ್ ಒದಗಿಸಿದ್ದವಷ್ಟೆ. ಅನಂತರದ ಆವೃತ್ತಿಗಳಲ್ಲಿ ಕನ್ನಡ ಹಂತಹಂತವಾಗಿ ಅಳವಡಿಕೆಯಾಯಿತು. ಈಗಿನ ಬಹುತೇಕ ಸ್ಮಾರ್ಟ್ ಫೋನುಗಳಲ್ಲಿ ಕನ್ನಡ ಓದಲು ತೊಂದರೆಯಿಲ್ಲ. ಕನ್ನಡ ಬರೆಯಲು ಕೆಲವು ಮಾಡೆಲ್ ಫೋನುಗಳಲ್ಲಿ ಇನ್ ಬಿಲ್ಟ್ ಕೀಪ್ಯಾಡ್ ಇರುತ್ತದೆ. ಇಲ್ಲದಿದ್ದಲ್ಲಿ ಕಿರುತಂತ್ರಾಂಶಗಳಾಗಿ (app) ಸಿಗುವ ಹಲವಾರು ಕನ್ನಡ ಕೀಪ್ಯಾಡುಗಳಿವೆ. ಅದನ್ನು ಹಾಕಿಕೊಂಡು ಇಮೇಲ್, ಎಸ್ಸೆಮ್ಮೆಸ್ ಎಲ್ಲವನ್ನೂ ನೇರವಾಗಿ ಕನ್ನಡದಲ್ಲೇ ಟೈಪಿಸಬಹುದು. ಟ್ಯಾಬ್ಲೆಟ್, ಐಪ್ಯಾಡ್ ಗಳೂ ಕೂಡ ಇದಕ್ಕೆ ಹೊರತಲ್ಲ. ಆಂಡ್ರಾಯ್ಡ್ ಗಾಗಿ ಪದ ಕನ್ನಡ, ಜಸ್ಟ್ ಕನ್ನಡ, ಇಂಡಿಕ್ ಕೀಬೋರ್ಡ್ ಮುಂತಾದ ಹತ್ತು ಹಲವು ಒಳ್ಳೆಯ ಕಿರುತಂತ್ರಾಂಶಗಳಿವೆ. ಗೂಗಲ್ ಪ್ಲೇಸ್ಟೋರಿನಲ್ಲಿ kannada keypads ಎಂದು ಹುಡುಕಿದರೆ ಪಟ್ಟಿಯಾಗುತ್ತವೆ. ಇಂಗ್ಲೀಷ್-ಕನ್ನಡ ನಿಘಂಟು, ಆರೋಗ್ಯ ವಿಷಯ ಸೇರಿದಂತೆ ಕನ್ನಡದ ಅನೇಕ ಮಾಹಿತಿ ಆಪ್ ಗಳೂ ಲಭ್ಯ. ಭಗವದ್ಗೀತೆ, ಬೈಬಲ್, ದಾಸವಾಣಿ, ಸ್ತೋತ್ರಗಳಂತಹ ಧಾರ್ಮಿಕ ಆಪ್ ಗಳೂ ಕನ್ನಡದಲ್ಲಿವೆ. ಸುಡೊಕು ಆಟಗಳು, ಪದಬಂಧದ ಆಪ್ ಗಳಿವೆ. ಫೋನ್/ಟ್ಯಾಬ್ಲೆಟ್ ಗಳಲ್ಲಿ ಓದಲು ಆಪ್ ರೂಪದ ಪುಸ್ತಕಗಳಿವೆ. ಕನ್ನಡ ಕಲಿಯಲಿಚ್ಛಿಸುವವರಿಗಾಗಿ ’ಕನ್ನಡ ಬರುತ್ತೆ’ ಎಂಬ ಆಪ್ ಇದೆ. ಕೈಯಿಂದ ಅಥವಾ ಸ್ಟೈಲಸ್ ಕಡ್ಡಿಯಿಂದ ಫೋನ್ ಅಥವಾ ಟ್ಯಾಬ್ಲೆಟ್ ಪರದೆಯ ಮೇಲೆ ಬರೆದ ಕನ್ನಡ ಕೈಬರಹವನ್ನು ಗುರುತಿಸಿ ಪಠ್ಯವಾಗಿಸಬಲ್ಲ ಆಪ್ ಇದೆ. ಇಂತಹ ಅನೇಕ ಆಪ್ ಗಳ ಅಭಿವೃದ್ಧಿಯಲ್ಲಿ ಕನ್ನಡ ಅಭಿಮಾನದ ಹವ್ಯಾಸಿ ತಂತ್ರಜ್ಞರ ಕೊಡುಗೆ ಬಹಳಷ್ಟಿದೆ. ಕನ್ನಡ ಸುದ್ದಿತಾಣಗಳು, ಪತ್ರಿಕೆಗಳು ಇಂದು ಆಪ್ ರೂಪದಲ್ಲಿ ಲಭ್ಯ. ಕೆಲವು ಬ್ಯಾಂಕುಗಳು ತಮ್ಮ ಬ್ಯಾಂಕಿಂಗ್ ಆಪ್ ಗಳನ್ನು ಕನ್ನಡದಲ್ಲಿಯೂ ಬಿಡುಗಡೆ ಮಾಡಿವೆ.

ಕನ್ನಡ ಇಪುಸ್ತಕಗಳು

ಎಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿ ಬರುತ್ತಿದ್ದಂತೆಯೇ ಪುಸ್ತಕಗಳೂ ಇ-ಪುಸ್ತಕಗಳಾಗಿ ಬರತೊಡಗಿ ಹಲವು ವರ್ಷಗಳೇ ಕಳೆದುಹೋಗಿವೆ. ಒಂದು ಇಬುಕ್ ರೀಡರ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಒಂದು ಲೈಬ್ರರಿಯನ್ನೇ ಇಟ್ಟುಕೊಳ್ಳಬಹುದು! ಇಂಗ್ಲೀಶಿನಲ್ಲಂತೂ ಇ-ಬುಕ್ ಗಳ ಭರಾಟೆ ಜೋರಾಗಿದೆ. ಕನ್ನಡದಲ್ಲಿ ಇದು ಸ್ವಲ್ಪ ತಡವಾಗಿಯಾದರೂ ಇತ್ತೀಚಿನ ವರ್ಷಗಳಲ್ಲಿ ಇ-ಪುಸ್ತಕಗಳು ಬರಲಾರಂಭಿಸಿದ್ದು ಹಲವು ತಾಣಗಳಲ್ಲಿ ಇವು ದೊರೆಯುತ್ತಿವೆ. ಪಿ.ಡಿ.ಎಫ್ ಪುಸ್ತಕಗಳು ಮತ್ತು ಆನ್ ಲೈನಲ್ಲಿ ಓದುವ ಅಥವಾ ನಿರ್ದಿಷ್ಟ ಕಿರುತಂತ್ರಾಂಶ(app)ಗಳನ್ನು ಅಳವಡಿಸಿಕೊಂಡು ಅದರ ಮೂಲಕ ಓದಬಹುದಾದಂತಹ ಫೈಲ್ ಮಾದರಿಯ ಪುಸ್ತಕಗಳೂ ದೊರೆಯುತ್ತಿವೆ. ಆಂಡ್ರಾಯ್ಡ್, ಐ ಓ.ಎಸ್, ವಿಂಡೋಸ್ ಮುಂತಾದ ಕಾರ್ಯಾಚರಣ ವ್ಯವಸ್ಥೆಗಳನ್ನು ಹೊಂದಿರುವ ಕಂಪ್ಯೂಟರ್, ಟ್ಯಾಬ್ಲೆಟ್, ಫೋನ್, ಇ ಬುಕ್ ರೀಡರ್ ಗಳಲ್ಲಿ ಓದಬಹುದು. ಕನ್ನಡ ಇಪುಸ್ತಕಗಳು ದೊರೆಯುವ ಕೆಲವು ತಾಣಗಳೆಂದರೆ ಪುಸ್ತಕ.ಕೊ.ಇನ್, ಡೈಲಿಹಂಟ್, ಗೂಗಲ್ ಬುಕ್ಸ್, ಸಿರಿಕನ್ನಡ, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಕೈ ಬುಕ್ಸ್ ಇತ್ಯಾದಿಗಳು 

ತಾಂತ್ರಿಕ ಮಟ್ಟದಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೂಡ ಕನ್ನಡದಲ್ಲೇ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ. ಕನ್ನಡ ಗಣಕ ಪರಿಷತ್ತಿನಿಂದ ತಯಾರಾದ ಅಕ್ಷರಕಲಿ, ಅಂಕಿವಿನೋದ, ಪದವಿಹಾರ, ವಿಶ್ವಕನ್ನಡ ತಾಣದ ’ಕನ್ನಡಕಲಿ’ಯಂತಹ ಕನ್ನಡದ ಕೆಲವು ಸರಳ ಆಟಗಳ ತಂತ್ರಾಂಶಗಳಿವೆ. ಕನ್ನಡ ಪಠ್ಯವನ್ನು ಓದಿ ಹೇಳಬಲ್ಲ ಟೆಕ್ಸ್ಟ್ ಟು ಸ್ಪೀಚ್, ಸ್ಕ್ಯಾನ್ ಮಾಡಿದ ಕಡತಗಳನ್ನು ಪಠ್ಯಕ್ಕೆ ಪರಿವರ್ತಿಸಬಲ್ಲ ಓಸಿಆರ್ ತಂತ್ರಜ್ಞಾನ ಒಂದು ಮಟ್ಟಕ್ಕೆ ಅಭಿವೃದ್ಧಿಯಾಗಿದೆ. ಹಾಗಿದ್ದರೆ ಕನ್ನಡ ಮತ್ತು ತಂತ್ರಜ್ಞಾನ ಅಂದರೆ ಇಷ್ಟೆನಾ? ಖಂಡಿತ ಅಲ್ಲ. ಕಂಪ್ಯೂಟರ್, ಅಂತರಜಾಲ, ಸ್ಮಾರ್ಟ್ ಫೋನು ಹೊರತಾಗಿ ಪ್ರತಿಯೊಂದು ವ್ಯವಹಾರಗಳಲ್ಲೂ, ಹಂತದಲ್ಲೂ ಸಹ ಕನ್ನಡವನ್ನು ಬಳಸುವುದು ಸಾಧ್ಯವಾದಾಗ ಮಾತ್ರ ತಂತ್ರಜ್ಞಾನ ಯಶಸ್ವಿಯಾದಂತೆ. ಸರ್ಕಾರದಿಂದ ಹಿಡಿದು ಜನಸಾಮಾನ್ಯರ ತನಕ ಇವುಗಳನ್ನು ಅಳವಡಿಸುವ ಮತ್ತು ಬಳಸುವ ಪ್ರಕ್ರಿಯೆ ಹೆಚ್ಚಾದಂತೆ ಸಹಜವಾಗಿ ಕನ್ನಡ ತಂತ್ರಜ್ಞಾನವೂ ಹೆಚ್ಚಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ನಗರಗಳಲ್ಲಿ ಶುರುವಾದ ಆಪ್ ಆಧಾರಿತ ಟ್ಯಾಕ್ಸಿ ಮತ್ತು ರಿಕ್ಷಾ ಸೇವೆಗಳೇ ಉದಾಹರಣೆ. ಇದರಲ್ಲಿ ಚಾಲಕರಿಗೆ ಕೊಡುವ ಉಪಕರಣದಲ್ಲಿ ಕನ್ನಡ ಇಂಟರ್ ಫೇಸ್ ಇದೆ. ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಕನ್ನಡದ ಬೆಳವಣಿಗೆಯಿಂದಾಗಿ ಪತ್ರಿಕೆಗಳು ಇನ್ನಿತರ ಮುದ್ರಣ ಮಾಧ್ಯಮಗಳು ಸುಂದರ ಮತ್ತು ವಿವಿಧ ಅಕ್ಷರಶೈಲಿಯಲ್ಲಿ ಬರುತ್ತಿರುವುದನ್ನೂ ನೋಡಬಹುದು. ಎಲ್ ಇ ಡಿ, ಸ್ಮಾರ್ಟ್ ಟಿವಿಗಳಲ್ಲಿ ಕನ್ನಡದಲ್ಲೂ ಮೆನು ಆಯ್ಕೆಗಳನ್ನು ಹೊಂದಿದ ಟೀವಿಗಳಿವೆ. ಬ್ಯಾಂಕ್ ಎ.ಟಿ.ಎಂ. ಯಂತ್ರಗಳಿವೆ. ಈ ರೀತಿಯಾಗಿ ಪ್ರತಿಯೊಂದರಲ್ಲೂ ಸಹ ಕನ್ನಡ ಅಳವಡಿಕೆಯಾಗಿದೆ ಮತ್ತು ಆಗುತ್ತಿದೆ. ಇದರರ್ಥವೇನೆಂದರೆ ಕನ್ನಡಿಗರೆಲ್ಲರೂ ಹೆಚ್ಚಾಗಿ ಕನ್ನಡವನ್ನೇ ಬಳಸಿದಾಗ ಮತ್ತು ಆಮೂಲಕ ಬೇಡಿಕೆ ಸೃಷ್ಟಿಯಾದಾಗ ತಕ್ಕ ತಂತ್ರಜ್ಞಾನವೂ ಅಭಿವೃದ್ಧಿಯಾಗುತ್ತದೆ. ಕನ್ನಡ ಹಿಂದೆಬೀಳದಂತೆ ತಂತ್ರಜ್ಞಾನದ ಜೊತೆಜೊತೆಯಾಗಿ ಹೆಜ್ಜೆಹಾಕಲು ಖಂಡಿತ ಸಾಧ್ಯವಾಗುತ್ತದೆ. ಬೇಕಾಗಿರುವುದು ಅಳವಡಿಕೆಯ ಮತ್ತು ಬಳಕೆಯ ಇಚ್ಛಾಶಕ್ತಿ ಮಾತ್ರ.

ಕೊಡುಗೆದಾರರು  : ವಿಕಾಸ್ ಹೆಗಡೆ, ಬೆಂಗಳೂರು

3.1746031746
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top