অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಧ್ಯಾಹ್ನ ಉಪಹಾರ ಯೋಜನೆ

ಮಧ್ಯಾಹ್ನ ಉಪಹಾರ ಯೋಜನೆ

  1. ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ
  2. ಉದ್ದೇಶಗಳು
  3. ಅನುಷ್ಠಾನದ ಜವಾಬ್ದಾರಿ
  4. ಶಾಲಾ ಮಟ್ಟದಲ್ಲಿ ಸುರಕ್ಷತೆ
  5. ತಾಲ್ಲೂಕು ಮಟ್ಟ
  6. ಜಿಲ್ಲಾ ಮಟ್ಟ
  7. ರಾಜ್ಯ ಮಟ್ಟ
  8. ಸೂಚಿತ ಆಹಾರ ಪಟ್ಟಿ
  9. ಪೌಷ್ಠಿಕಾಂಶದ ವಿವರ
  10. ಅಡುಗೆ ಕೋಣೆಗಳ ವಿವರ
  11. ಪಾತ್ರೆ ಪರಿಕರಗಳ ಖರೀದಿ ಬಗ್ಗೆ
  12. ಅಡುಗೆ ಸಿಬ್ಬಂದಿ ವಿವರ
  13. ಅಗ್ನಿ ನಂದಕಗಳ ಅಳವಡಿಕೆ
  14. ಅಡುಗೆ ಕೇಂದ್ರಗಳ ವಿವರ
  15. ಅಡುಗೆಯವರ ಆಯ್ಕೆ
    1. ಅಡುಗೆಯವರ ಸಂಭಾವನೆ
    2. ತರಬೇತಿಗಳು
  16. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  17. ಆರೋಗ್ಯ ಇಲಾಖೆ
  18. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ
  19. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
  20. ಭಾರತೀಯ ಆಹಾರ ನಿಗಮ
  21. ಆಯವ್ಯಯ
  22. ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ
  23. ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಆಚರಣೆಗಳು
  24. ಸ್ವಯಂ ಸೇವಾ ಸಂಸ್ಥೆಗಳ ಪಾತ್ರ
  25. ಸ್ವಯಂ ಸೇವಾ ಸಂಸ್ಥೆಗಳು

ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ

2002-03ರವರೆಗೆ  ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ  ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.

  • 2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು.
  • ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು.
  • ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.
  • 2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು.
  • ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ.

ಉದ್ದೇಶಗಳು

  • ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು.
  • ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು.
  • ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದು.
  • ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವುದು.
  • ಬರಪೀಡಿತ ಪ್ರದೇಶಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ನೀಡಲಾಗುತ್ತಿದೆ.

ಅನುಷ್ಠಾನದ ಜವಾಬ್ದಾರಿ

ಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.,ಯವರು ಹಾಗೂ ಮುಖ್ಯ ಅಡುಗೆಯವರು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ  ನಿರ್ದೇಶನ ಹಾಗೂ ಮಾರ್ಗದರ್ಶಿ  ಸೂಚನೆಯಂತೆ ತಾಯಿಯಂದಿರ ಸಮಿತಿಯನ್ನು ಶಾಲೆಗಳಲ್ಲಿ ರಚಿಸಲಾಗಿದ್ದು, ಪ್ರತಿ ದಿನವೂ ಒಬ್ಬ  ವಿದ್ಯಾರ್ಥಿಯ ತಾಯಿ ಅಡುಗೆಯ ಮೇಲ್ವಿಚಾರಣೆ  ಹಾಗೂ ಊಟದ ರುಚಿ ನೋಡಿ ಬಡಿಸುವುದರಲ್ಲಿ  ಪಾಲ್ಗೊಳ್ಳುವುದರ ಮೂಲಕ ಮಕ್ಕಳು ತಮ್ಮ ಮನೆಯ ವಾತಾವರಣದಂತೆ  ಭಾವಿಸಿಕೊಂಡು ವರಾಂಡದಲ್ಲಿ/ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯ ಶಿಕ್ಷಕರು/ಶಿಕ್ಷಕರ ಉಸ್ತುವಾರಿ ಊಟ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಶಿಕ್ಷಕರು ಕಡ್ಡಾಯವಾಗಿ  ರುಚಿ ನೋಡಿ, ರುಚಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ. ಊಟಕ್ಕೆ ಮುಂಚೆ ಮತ್ತು ನಂತರ ಸೋಪು ಬಳಸಿ ಕೈ ತೊಳೆಯುವ ಉತ್ತಮ ಅಭ್ಯಾಸವನ್ನು ರೂಢಿಸಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಅನುಪಯುಕ್ತ ಹಳೆಯ ವಸ್ತುಗಳನ್ನು ತೆಗೆದು ಹಾಕುವುದು. ಕಾರ್ಯಕ್ರಮದ ಬಗ್ಗೆ ನಿರಂತರ ಗಮನ ಹರಿಸುವುದು. ಅಡುಗೆಯವರು ಅಡುಗೆ ತಯಾರಿಸುವ ಹಾಗೂ ಬಡಿಸುವಾಗ ಏಪ್ರಾನ್ ಬಳಸುವುದು. ನೀರು ಹಾಗೂ ಆಹಾರ ಧಾನ್ಯ , ತರಕಾರಿಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸುವುದು. ಶಾಲಾ ಎಸ್.ಡಿ. ಎಂ.ಸಿ.,ಸಭೆಗಳಲ್ಲಿ ಅಕ್ಷರ ದಾಸೋಹ   ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವಿವರಗಳನ್ನು ದಾಖಲಿಸುತ್ತದೆ ಹಾಗೂ ಶಾಲೆಗೆ ಭೇಟಿ ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ವರದಿಯಲ್ಲಿ  ದಾಖಲಿಸಬೇಕಾಗಿರುತ್ತದೆ..

ಶಾಲಾ ಮಟ್ಟದಲ್ಲಿ ಸುರಕ್ಷತೆ

ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ  ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕಾಯ್ರಕ್ರಮದ  ಅನುಷ್ಡಾನದಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುವುದು ಎಲ್ಲಾ ಸ್ಥರದ ಅಧಿಕಾರಿ/ಸಿಬ್ಬಂದಿಯವರ ಜವಾಬ್ದಾರಿಯಾಗಿದ್ದು, ಸುತ್ತೋಲೆ/ಆದೇಶ/ಮಾರ್ಗಸೂಚಿಗಳಂತೆ ಹಾಗೂ ಈ ಕೆಳಗೆ ಸೂಚಿಸಿರುವ ಕರ್ತವ್ಯಗಳಲ್ಲಿನ ಮಕ್ಕಳ ಸುರಕ್ಷತೆಗಾಗಿ ಜವಾಬ್ದಾರಿಗಳನ್ನು ನಿರ್ವಹಿಸುವರು.

ಅಡುಗೆಯನ್ನು ಮಕ್ಕಳಿಗೆ ಊಟ ಬಡಿಸುವ ಅರ್ಧ ಘಂಟೆ ಮುಂಚಿತವಾಗಿ ತಯಾರಿಸಿ ದೊಡ್ಡ ಪಾತ್ರೆಗಳಿಂದ ಚಿಕ್ಕ ಪಾತ್ರೆಗಳಿಗೆ  ಬದಲಾಯಿಸಿಕೊಂಡು ಒಂದನೇ ತರಗತಿಯ ಮಕ್ಕಳೂ ಸಹ ಸರಾಗವಾಗಿ ಊಟ ಮಾಡಲು ಸಾಧ್ಯವಾಗುವಷ್ಟು ಬಿಸಿ ಇರುವಂತೆ ನೋಡಿಕೊಂಡು ಬಡಿಸತಕ್ಕದ್ದು. ಅಡುಗೆ ಕೋಣೆಯೊಳಗೆ ಯಾವ ಮಕ್ಕಳೂ ಯಾವುದೇ ಕಾರಣಕ್ಕೂ ಹೋಗದಂತೆ ನಿಷೇಧಿಸುವುದು.ಅಡುಗೆಯವರು ಯಾವುದೇ ಕಾರಣಕ್ಕೂ ದೊಡ್ಡದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು ಊಟ ಬಡಿಸುವುದು. ಕಡ್ಡಾಯವಾಗಿ ಶಾಲಾ ಕಾರಿಡಾರಿನಲ್ಲಿಯೇ ಅಥವಾ ತರಗತಿ ಕೋಣೆಯೋಳಗೆ ಮಕ್ಕಳು ಕುಳಿತು ಊಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು  ಊಟವನ್ನು ತಟ್ಟೆಗೆ ಹಾಕಿಸಿಕೊಳ್ಳುವುದನ್ನು ನಿಷೇಧಿಸಿದೆ. ಕಾರಿಡಾರ್ ಅಥವಾ ಕೋಣೆ ಯೊಳಗೆ ಊಟ ಬಡಿಸಬೇಕು. ಮಕ್ಕಳು ಕುಳಿತು ಊಟ ಮಾಡಬೇಕು. ಹೆಚ್ಚು ಮಕ್ಕಳಿದ್ದಲ್ಲಿ  ಸರದಿ ಪ್ರಕಾರ ಊಟ ನೀಡುವುದು. ಊಟದ ಬೆಲ್ ಆದ ತಕ್ಷಣ ಆಯಾ ತರಗತಿಯ ಶಿಕ್ಷಕರು  ಅವರವರ ತರಗತಿ ಕೋಣೆಯೊಳಗೆ ಧಾವಿಸಿ ಮುಂದೆ ನಿಂತು ಮಕ್ಕಳು ತರಗತಿ ಕೋಣೆಯಿಂದ ಹೊರಟು ಹೊರಗಡೆ ಊಟದ  ಕಾರಿಡಾರ್ ವರೆಗೆ ಬಂದು ಕ್ರಮವಾಗಿ ಕುಳಿತುಕೊಂಡು ಊಟವನ್ನು ಪಡೆದು ಊಟಮಾಡಿ ಮತ್ತೆ ಕೈ ತಟ್ಟೆ ತೊಳೆದುಕೊಂಡು ತರಗತಿ ಕೋಣೆಗೆ ಹೋಗಿ ಅವರ ತಟ್ಟೆಗಳನ್ನು ಇಡಲು ಹೋಗುವವರೆಗೆ ಉಸ್ತುವಾರಿ ವಹಿಸಲು ತರಗತಿ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಸೂಕ್ತ ಆದೇಶವನ್ನು ಮೆಮೊ ಮೂಲಕ ನೀಡಲು ಸೂಚಿಸಿದೆ. ತರಗತಿ ಶಿಕ್ಷಕರು ರಜೆ ಇದ್ದಾಗ ಈ ಉಸ್ತುವಾರಿ ಕೆಲಸವನ್ನು ಬೇರೆ ಶಿಕ್ಷಕರಿಗೆ ತಪ್ಪದೇ ಬೆಳಗಿನ ಅವಧಿಯಲ್ಲಿಯೇ ಮುಖ್ಯ ಶಿಕ್ಷಕರು ಮೆಮೊ ಮೂಲಕ ಆದೇಶ ನೀಡಬೇಕು.ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ಮುಖ್ಯಶಿಕ್ಷಕರು  ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ಅಡುಗೆಯವರೂ ಕಡ್ಡಾಯವಾಗಿ ಹಾಜರಿದ್ದು, ಮುಂದೆ ನಿಂತು ಊಟದ ಉಸ್ತುವಾರಿ ನಿರ್ವಹಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ

ತಾಲ್ಲೂಕು ಮಟ್ಟ

ತಾಲ್ಲೂಕು ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರ್ ರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ನಲ್ಲಿ ಉಸ್ತುವಾರಿ ಹಾಗೂ ಪರಾಮರ್ಶ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಗಳು ನಿರ್ವಹಿಸುತ್ತಿದ್ದಾರೆ. ತಾಲ್ಲೂಕು  ಕಾರ್ಯ ನಿರ್ವಹಣಾಧಿಕಾರಿಗಳ ಅಧೀನದಲ್ಲಿ ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ಕಾರ್ಯಕ್ರಮದ ಅನುಷ್ಠಾನದಲ್ಲಿ  ನೆರವಾಗಲು ಕಾರ್ಯನಿರ್ವಹಿತ್ತಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ. ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.

ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲ್ಲೂಕು ಪಂಚಾಯತ್  ಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಎಸ್. ಡಿ. ಎಂ. ಸಿ. ಹಾಗೂ ಶಾಲಾ ಮುಖ್ಯಶಿಕ್ಷಕರರುಗಳೊಂದಿಗೆ ಉತ್ತಮ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿ.ಆರ್.ಸಿ.,ಇ.ಸಿ.ಒ./ ಸಿ.ಆರ್.ಪಿ. ಇವರ ಸೇವೆಯನ್ನು ಕಾರ್ಯಕ್ರಮಕ್ಕೆ ಉಪಯೋಗಿಸಿ ಕೊಳ್ಳಬೇಕಾಗುತ್ತದೆ

ಜಿಲ್ಲಾ ಮಟ್ಟ

ಜಿಲ್ಲಾಧಿಕಾರಿಗಳ/ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಮತ್ತು ಪರಾಮರ್ಶನ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ ಹಾಗೂ ಇದರಿಂದ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲಾಗುತ್ತಿದೆ.

ಜಿಲ್ಲಾ  ಮಟ್ಟದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಸಹಕಾರ ನೀಡಬೇಕು. ಇವರು ಜಿಲ್ಲೆ ಮತ್ತು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಆಹಾರ ಸಾಮಗ್ರಿಗಳು ಹಾಗೂ ಅನುದಾನದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸಂಗ್ರಹಿಸಿ, ಕ್ರೋಢೀಕರಿಸಿ, ರಾಜ್ಯ ಅನುದಾನದ ಯೋಜನೆ ಕೇಂದ್ರ ಕಛೇರಿಯ ಜಂಟಿ ನಿರ್ದೇಶಕರಿಗೆ ತಲುಪಿಸಬೇಕು. ಅಡುಗೆ ಕೋಣೆ ನಿರ್ಮಾಣ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಅಗ್ನಿನಂದಕ ಅಳವಡಿಕೆ ಬಗ್ಗೆ ಗಮನಹರಿಸಿ ಕಡ್ಡಾಯವಾಗಿ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.

ರಾಜ್ಯ ಮಟ್ಟ

ರಾಜ್ಯ ಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶ ಸಮಿತಿ, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದು, ಸದರಿ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.

ಸೂಚಿತ ಆಹಾರ ಪಟ್ಟಿ

ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.

ವಾರ/ದಿನ

ನಿಗದಿ ಪಡಿಸಿರುವ ಆಹಾರದ ವಿವರ

ಸಾಂಬಾರಿಗೆ ಬಳಸಬೇಕಾದ
ತರಕಾರಿ

ಷರಾ

ಸೋಮವಾರ

ಅನ್ನ-ಸಾಂಬಾರ್

ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ.
ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸುವುದು.
ಸ್ಥಳೀಯವಾಗಿ ಆಹಾರ ಪದ್ಧತಿಯನ್ವಯವೇ ತರಕಾರಿಗಳನ್ನು ಮತ್ತು ಸಾಂಬಾರು ಪದಾರ್ಥಗಳನ್ನು ಹೊಂದಾಣಿಕೆ ಮಾಡಿಕೊಂಡು ಆಹಾರ ಸಿದ್ಧಪಡಿಸುವುದು.
ಸಿದ್ಧ ಪಡಿಸಿದ ಸಾಂಬಾರು ಪದಾರ್ಥ/ಪುಡಿಗಳನ್ನು ಆಗ್ ಮಾರ್ಕ್ ಮುದ್ರೆ/ಪ್ರಮಾಣ ಪತ್ರ ಹೊಂದಿರುವ ತಯಾರಕರಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಬಳಸುವುದು ಅಥವಾ ಉತ್ತಮ ಸಾಮಗ್ರಿಗಳನ್ನು ಬಳಸಿ ಸ್ವಂತವಾಗಿ ತಯಾರಿಸಿ ಬಳಸುವುದು.
ಸ್ಥಳೀಯ ಹವಾಮಾನ /ವಾತಾವರಣಕ್ಕೆ ಅನುಗುಣವಾಗಿ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಬಳಸುವುದು.

ಮಂಗಳವಾರ

ಅನ್ನ-ಸಾಂಬಾರ್

ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಬುಧವಾರ

ಅನ್ನ-ಸಾಂಬಾರ್

ನುಗ್ಗೆಕಾಯಿ,ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು

ಗುರುವಾರ

ಅನ್ನ-ಸಾಂಬಾರ್

ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು

ಶುಕ್ರವಾರ/
ಭಾನುವಾರ

ಬಿಸಿಬೇಳೆ ಬಾತ್

ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು

ಶನಿವಾರ

ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ

ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು

ಪೌಷ್ಠಿಕಾಂಶದ ವಿವರ

ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 491 (ಅಂದಾಜು) ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 728 (ಅಂದಾಜು) ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.

ಅಡುಗೆ ಕೋಣೆಗಳ ವಿವರ

ಕೇಂದ್ರ ಸರ್ಕಾರವು 2007-08 ನೇ ಸಾಲಿನಲ್ಲಿ 18241 ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲು ಪ್ರತೀ ಅಡುಗೆ ಕೋಣೆಗೆ ರೂ. 60,000/- ದಂತೆ ಒಟ್ಟು 10,944.60 ಲಕ್ಷಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಅನುದಾನವನ್ನು ರಾಜ್ಯ ಸರ್ಕಾರವು ಜುಲೈ-09 ರ ಮಾಹೆಯಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.

ಸೂಚಿತ ನಕ್ಷೆಯಂತೆ, 2007-08ರಲ್ಲಿನ ಎಸ್.ಆರ್. ದರದಂತೆ ಕೇಂದ್ರ ಸರ್ಕಾರವು ನೀಡಿದ ಮೊತ್ತದಲ್ಲಿ ನಿರ್ಮಿಸಲು ರೂ. 1.85 ಲಕ್ಷಗಳು ಬೇಕಾಗುತ್ತದೆ. ಕಟ್ಟಡದ ನಿರ್ಮಾಣದ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರದಿಂದ ಮ್ಯಾಚಿಂಗ್ ಗ್ರ್ಯಾಂಟ್ ಬಳಸಿಕೊಂಡು ಅಡುಗೆ ಕೋಣೆ ಪೂರ್ಣಗೊಳಿಸಲು ಜ್ಞಾಪನ ಹೊರಡಿಸಲಾಗಿದೆ.

2011-12 ನೇ ಸಾಲಿನ ಆರ್ಥಿಕ ವರ್ಷದ ಕೊನೆಯಲ್ಲಿ ಕೇಂದ್ರ ಸರ್ಕಾರವು 8724 ಅಡುಗೆ ಕೋಣೆಗಳನ್ನು ಕೇಂದ್ರ ಮತ್ತು ರಾಜ್ಯದ ಶೇ.75:25 % ರ ಅನುಪಾತದಂತೆ ವಿವಿಧ ಪ್ಲಿಂತ್ ಏರಿಯಾವಾರು ಪ್ರತೀ ಏರಿಯಾಕ್ಕೆ ರೂ. 3.01 ಲಕ್ಷಗಳಂತೆ ಒಟ್ಟಾರೆ ರೂ. 33660.83 ಲಕ್ಷಗಳಿಗೆ ಅನುಮೋದನೆ ನೀಡಿ ಕೇದ್ರ ಸರ್ಕಾರದ ಬಾಬ್ತಾದ ರೂ.25245.62 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಜಿಲ್ಲೆಗಳಿಗೆ ರಾಜ್ಯದ ಪಾಲಾದ ರೂ. 8415.21 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3906 ಅಡುಗೆ ಕೋಣೆಗಳು ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಕೇಂದ್ರದ ಪಾಲು ರೂ.11975.59 ಲಕ್ಷಗಳು ಹಾಗೂ ರಾಜ್ಯದ ಪಾಲು ರೂ.3991.86 ಲಕ್ಷಗಳು ಒಟ್ಟಾರೆ ರೂ.15967.45 ಲಕ್ಷಗಳಾಗಿರುತ್ತದೆ.

ಪಾತ್ರೆ ಪರಿಕರಗಳ ಖರೀದಿ ಬಗ್ಗೆ

ಕಾರ್ಯಕ್ರಮದ ಪ್ರಾರಂಭದಲ್ಲಿ ಪಾತ್ರೆ ಪರಿಕರ ಹಾಗೂ ಸ್ಟೌ ಖರೀದಿಸಲು ರಾಜ್ಯ ಸರ್ಕಾರವು ಪ್ರತೀ ಅಡುಗೆ ಕೇಂದ್ರಕ್ಕೆ ರೂ.5000/- ರಂತೆ ಅನುದಾನ ನೀಡಿದೆ. 2006-07 ನೇ ಸಾಲಿನಿಂದ ಕೇಂದ್ರ ಸರ್ಕಾರವು ಪಾತ್ರೆ ಹಾಗೂ ಸ್ಟೌ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದ್ದು, ಅದರ ವಿವರ ಕೆಳಕಂಡಂತಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗಿರುವ ಹೊಸ ಅಡುಗೆ ಕೇಂದ್ರಗಳಿಗೆ MME ಅಡಿಯಲ್ಲಿ 1283 ಪ್ರಾಥಮಿಕ ಕೇಂದ್ರಗಳಿಗೆ ರೂ. 5000/- ನಂತೆ 64.15 ಲಕ್ಷಗಳನ್ನು 1023 ಪ್ರೌಢ ಶಾಲೆಗಳಿಗೆ (ರೂ.7500/-ರಂತೆ) ಒಟ್ಟು 77.40 ಲಕ್ಷಗಳನ್ನು ಬಿಡುಗಡೆಗೊಳಿಸಿ, ವೆಚ್ಚ ಭರಿಸಲಾಗಿದೆ.

ಅಡುಗೆ ಸಿಬ್ಬಂದಿ ವಿವರ

ಒಟ್ಟು ಕೇಂದ್ರ ಸರ್ಕಾರದಿಂದ  1,17,842 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,18,842 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಅಡುಗೆಯವರನ್ನು ಎನ್.ಜಿ.ಓ ನೀಡುತ್ತಿರುವ ಶಾಲೆಗಳಿಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಗೌರವಧನನ್ನು ಮುಖ್ಯ ಅಡುಗೆಯವರಿಗೆ ರೂ.1100/- ಮತ್ತು ಸಹಾಯಕರಿಗೆ ರೂ.1000/- ಗಳನ್ನು ನಿಗದಿಪಡಿಸಲಾಗಿತ್ತು.

  • ಕೇಂದ್ರ ಸರ್ಕಾರ ದಿನಾಂಕ:1-12-2009 ರಿಂದ ಅಡುಗೆ ತಯಾರಿಕೆಗೆ ಸಂಭಾವನೆಯನ್ನು ತಿಂಗಳಿಗೆ ರೂ.1000/- ದಂತೆ ನಿಗದಿಗೊಳಿಸಿದೆ. ಸದರಿ ಸಂಭಾವನೆಯನ್ನು ಕೇಂದ್ರ ಸರ್ಕಾರ ಶೇ.75, ರಾಜ್ಯ ಸರ್ಕಾರ ಶೇ.25ರ ಆಧಾರದಲ್ಲಿ ಪಾವತಿಸುತ್ತಿದೆ. ಮುಖ್ಯ ಅಡುಗೆಯವರಿಗೆ ಹೆಚ್ಚುವರಿಯಾಗಿ ರೂ.100/- ಗಳನ್ನು ರಾಜ್ಯ ಸರ್ಕಾರವು ಭರಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಮಾಸಿಕ ರೂ.100/- ಪ್ರತೀ ಅಡುಗೆ ಸಿಬ್ಬಂದಿಗೆ ನೀಡಲಾಗುತ್ತಿದೆ.
  • ದಿನಾಂಕ:1-1-2014 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ಅಡುಗೆಯವರ ಗೌರವ ಸಂಭಾವನೆಯನ್ನು ರೂ.500/- ಗಳನ್ನು ಹೆಚ್ಚಿಸಿದ್ದು, ಪ್ರಸ್ತುತ ಮುಖ್ಯ ಅಡುಗೆಯವರಿಗೆ ಮಾಸಿಕ ರೂ.1700/- ಹಾಗೂ ಸಹಾಯಕ ಅಡುಗೆಯವರಿಗೆ ರೂ.1600/- ಗಳನ್ನು ನೀಡಲಾಗುತ್ತಿದೆ.
  • ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಅಡುಗೆ ತಯಾರಿಸುವ ಸಂದರ್ಭದಲ್ಲಿ ಸುಟ್ಟಗಾಯಗಳಾದಲ್ಲಿ ರೂ.30,000/- ಗಳನ್ನು, ಅಂಗವಿಕಲತೆ ಉಂಟಾದಲ್ಲಿ ರೂ.75,000/- ಗಳನ್ನು ಮತ್ತು ಸುಟ್ಟಗಾಯಗಳಾಗಿ ಮರಣ ಹೊಂದಿದರೆ ರೂ.1.00 ಲಕ್ಷ ಪರಿಹಾರ ನೀಡಲಾಗುತ್ತಿದೆ.

ಅಗ್ನಿ ನಂದಕಗಳ ಅಳವಡಿಕೆ

ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:13-04-2009 ರಲ್ಲಿನ ತೀರ್ಪಿನಂತೆ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಅನಾಹುತಗಳನ್ನು ತಡೆಯುವ ಸಲುವಾಗಿ ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಲು ಆದೇಶವಾಗಿರುತ್ತದೆ.

ಅದರಂತೆ, ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಈಗಾಗಲೇ ಬಂದಿರುವ ಮಾಹಿತಿಯಂತೆ ಶೇ.99.8 ರಷ್ಟು ಶಾಲೆಗಳಲ್ಲಿ  ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆ. ಕಡ್ಡಾಯವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಮತ್ತೊಮ್ಮೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಸಹಕಾರವನ್ನು ಪಡೆದು ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ  ತರಬೇತಿಯನ್ನು ಏರ್ಪಡಿಸಲು ಸಹ ಸೂಚಿಸಿದೆ. ಪೌಡರ್ ಬದಲಾಯಿಸಲು ಶಾಲಾ ಸಂಚಿತ ನಿಧಿಯಲ್ಲಿ ಹಣ ಬಳಸಲು ಅನುಮತಿ ನೀಡಲಾಗಿದೆ. ಅದರಂತೆ  ಅಗ್ನಿ ನಂದಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಕಡ್ಡಾಯವಾಗಿದೆ.

ಅಡುಗೆ ಕೇಂದ್ರಗಳ ವಿವರ

ರಾಜ್ಯದಲ್ಲಿ ಒಟ್ಟು .........ಅಡುಗೆ ಕೇಂದ್ರಗಳಿದ್ದು, ಈ ಕೆಳಕಂಡಂತೆ ಅಡುಗೆ ಕೇಂದ್ರಗಳನ್ನು ವರ್ಗೀಕರಿಸಲಾಗಿದೆ.

ಕ್ರ. ಸಂ. ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ
ಮಕ್ಕಳಸಂಖ್ಕೆ ಕೇಂದ್ರದ ಮಾದರಿ ಅಡುಗೆಯವರ ಸಂಖ್ಯೆ

1

1 ರಿಂದ 25 ರವರೆಗೆ

1

2

26 ರಿಂದ 100 ರವರೆಗೆ

ಬಿ

2

3

101 ರಿಂದ 200 ರವರೆಗೆ

ಸಿ

3

4

201 ರಿಂದ 300 ರವರೆಗೆ

ಡಿ

4

5

301 ರಿಂದ 500 ರವರೆಗೆ

5

6

501 ರಿಂದ 800 ರವರೆಗೆ

ಎಫ್

6

7

801 ರಿಂದ 1100 ರವರೆಗೆ

ಜಿ

7

8

1101 ರಿಂದ 1400 ರವರೆಗೆ

ಹೆಚ್

8

9

1401 ರಿಂದ 1700 ರವರೆಗೆ

9

10

1701 ರಿಂದ 25 ಮೇಲ್ಪಟ್ಟು

ಜೆ

10

ಅಡುಗೆಯವರ ಆಯ್ಕೆ

ಆಯ್ಕೆ ಸಮಿತಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

  • ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮುನ್ಸಿಪಾಲಿಟಿ/ಪಟ್ಟಣ ಕಾರ್ಪೋರೇಷನ್ ವಾರ್ಡ್ ನ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರಬೇಕು.
  • ಎಸ್. ಡಿ. ಎಂ. ಸಿ. ಅಧ್ಯಕ್ಷರು-ಸದಸ್ಯರು,
  • ಶಾಲಾ ಮುಖ್ಯಸ್ಥರು-ಸದಸ್ಯರು.
  • ಪಟ್ಟಣ ಕಾರ್ಪೋರೇಷನ್ನಿನ ಮುಖ್ಯಾಧಿಕಾರಿ /ಮುನ್ಸಿಪಾಲಿಟಿಯ ಪ್ರಧಾನ ಕಾರ್ಯದರ್ಶಿ/ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಇವರಲ್ಲಿ ಯಾರಾದರೂ ಸಮಿತಿಯ ಕಾರ್ಯದರ್ಶಿಯಾಗಿರಬೇಕು.

ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು.

  • ಗ್ರಾಮ ಪಂಚಾಯತಿಯ ಅಧ್ಯಕ್ಷರು/ಪಟ್ಟಣ ಕಾರ್ಪೋರೇಷನ್ನಿನ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಪ್ರಾಥಮಿಕ ಸಭೆಯು ನಡೆಯುವುದು.
  • ಒಂದು ಶಾಲೆಗಿಂತ ಹೆಚ್ಚಿನ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಬೇಕಾದ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯಸ್ಥರು ಆ ಸಭೆಯ ವಿಶೇಷ ಆಹ್ವಾನಿತರಾಗಿರುವುದು.
  • ಈ ಸಭೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕುರಿತು ಚರ್ಚಿಸುವುದು ಮತ್ತು ಅರ್ಜಿ ಅಹ್ವಾನಿಸುವ ಹಾಗೂ ನೇಮಕಾತಿಯ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು.
  • ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಭಾ ನಡಾವಳಿಯನ್ನು ಅನುಸರಿಸುವುದು.
  • ವಿದ್ಯಾರ್ಹತೆ, ಕಾಲಾವಧಿ ಮತ್ತು ಅಡುಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಲು ನೀಡುವ ಸಂಭಾವನೆ ಕುರಿತಾದ ವಿವರಗಳನ್ನು ಗ್ರಾಮ ಪಂಚಾಯಿತಿಯು ಹತ್ತು ದಿನಗಳಿಗೆ ಮೊದಲೇ ಸೂಚನಾ ಫಲಕದಲ್ಲಿ ಸೂಚಿಸುವುದು.
  • ಮುಖ್ಯ ಅಡುಗೆಯವರೂ ಸೇರಿದಂತೆ ಉಳಿದ ಅಡುಗೆಯವರೆಲ್ಲರೂ ಮಹಿಳೆಯರಾಗಿರಬೇಕು.
  • ಮುಖ್ಯ ಅಡುಗೆಯವರ ವಿದ್ಯಾರ್ಹತೆ ಕನಿಷ್ಠ ಏಳನೇ ತರಗತಿ ತೇರ್ಗಡೆಯಾಗಿರಬೇಕು. ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಅದೇ ಗ್ರಾಮಕ್ಕೆ ಸೇರಿದವರೆಂದು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳಿಂದ ದೃಢೀಕರಿಸುವುದು.
  • ಅಡುಗೆ ಸಿಬ್ಬಂದಿ ಸಹಾಯಕರಿಗೆ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುವುದಿಲ್ಲ. ಆದರೆ ಅಕ್ಷರಸ್ಥರಿಗೆ ಆದ್ಯತೆ ನೀಡುವುದು.
  • ಮುಖ್ಯ ಅಡುಗೆಯವರು/ಅಡುಗೆಯವರನ್ನು ಆರಿಸುವಾಗ 30 ವರ್ಷ ವಯಸ್ಸಿನ ಹಾಗೂ ಅದೇ ಗ್ರಾಮಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡುವುದು.
  • ಆಯ್ಕೆಯ ಸಂದರ್ಭದಲ್ಲಿ ವಿಧವೆಯರು ಹಾಗೂ ನೊಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು.
  • ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ.ಜಾ./ಪ.ಪಂ.ಕ್ಕೆ ಸೇರಿದವರನ್ನೇ ಆಯ್ಕೆ ಮಾಡಬೇಕು.
  • ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
  • ಬಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಹಾಗೂ ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರಬೇಕು.
  • ಸಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಮತ್ತು ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ನಾಲ್ಕನೆಯವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.
  • ಸರ್ಕಾರಕ್ಕೆ ಹೊರೆಯಾಗದಂತೆ ಆಯಾ ಮುನ್ಸಿಪಾಲಿಟಿ ಹಾಗೂ ಸಿಟಿ ಕಾರ್ಪೋರೇಷನ್ ವ್ಯಾಪ್ತಿಗೆ ಒಳಪಡುವ  ಸ್ಥಳೀಯ ದಿನಪತ್ರಿಕೆಗಳಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ  ಉಚಿತ ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ನೀಡುವುದು. ಪ್ರಕಟಣೆಯು ಭಿತ್ತಿ ಪತ್ರ, ಕರ ಪತ್ರ ಹಾಗೂ ಪ್ಲೇ ಕಾರ್ಡ್ ಗಳ ಮೂಲಕವೇ ಇರಬೇಕು.ಸ್ಥಳೀಯವಾಗಿ ಪ್ರಕಟಿಸುವ ಸಂದರ್ಭದಲ್ಲಿ  ಸಂದರ್ಶನ ದಿನಾಂಕವನ್ನು ತಪ್ಪದೇ ತಿಳುಸುವುದು.
  • ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.
  • ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕ  ಪಟ್ಟಿಯನ್ನು ಜೆರಾಕ್ಸ್ ದ್ವಿಪ್ರತಿಯಲ್ಲಿ, ಇತ್ತೀಚಿನ ಪಾಸ್ ಪೋರ್ಟ್  ಅಳತೆಯ ಎರಡು ಭಾವಚಿತ್ರಗಳನ್ನು ತರುವುದು.
  • ಆಯ್ಕೆ ಸಮಿತಿಯು ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
  • ಸಭೆಯಲ್ಲಿ ತೀರ್ಮಾನಿಸಲಾದ ಸಭಾ ನಡಾವಳಿಗಳನ್ನು ದಾಖಲಿಸುವುದು. ಮೀಸಲಾತಿಯ ಪಟ್ಟಿಯನ್ನು ಸಭಾ ನಡಾವಳಿಯೊಂದಿಗೆ ಲಗತ್ತಿಸುವುದು. ಆದ್ಯತೆಯ ಮೇರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದು. ಮುಖ್ಯ ಅಡುಗೆಯವರು ಯಾವುದೇ ವೈಯಕ್ತಿಕ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬಹುದು.
  • ಮೇಲ್ಕಾಣಿಸಿದ ಎರಡು ಆಯ್ಕೆ ಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸತಕ್ಕದ್ದು.
  • ಮೇಲ್ಕಾಣಿಸಿದ  ಮಾನದಂಡಗಳನ್ನು ಬಳಸಿ, ಪಾರದರ್ಶಕವಾಗಿ  ಆಯ್ಕೆ ಮಾಡುವುದು.
  • ಮಾರ್ಗಸೂಚಿಯಂತೆ ಆಯ್ಕೆ ಮಾಡದಿದ್ದಲ್ಲಿ, ಯಾವುದೇ ದೂರು ಬಂದಾಗ ಆಯ್ಕೆ ಪಟ್ಟಿಯನ್ನು ನಿರಾಕರಿಸುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಗೆ ನೀಡಲಾಗಿದೆ.

ಅಡುಗೆಯವರ ಸಂಭಾವನೆ

ವರ್ಗ ಮಕ್ಕಳ ಸಂಖ್ಯೆ ಅಡುಗೆಯವರ ಸಂಖ್ಯೆ ಸಂಭಾವನೆ
ಎ-1
1-25
1

ಮು.ಅ.-ರೂ.1700/-ಅ.ಸಹಾಯಕರಿಗೆ-ರೂ.1600/-

26- 70
2
ಬಿ
71 - 300
3
ಸಿ
301 ಕ್ಕಿಂತ ಮೇಲ್ಪಟ್ಟು
4

ವರ್ಗ ಮಕ್ಕಳ ಸಂಖ್ಯೆ ಅಡುಗೆಯವರ ಸಂಖ್ಯೆ ಸಂಭಾವನೆ
ಹಿ.ಪ್ರಾ.ಕ್ಕೆ ಸೇರಿಸಿದಂತೆ
1 - 300
1

ಮು.ಅ.-ರೂ.1700/- ಅ.ಸಹಾಯಕರಿಗೆ-ರೂ.1600/-

301 - 500
4
ಬಿ
501 - 1000
5
ಸಿ
1001 ಕ್ಕೂ ಮೇಲ್ಪಟ್ಟು
6
  • ಅಡುಗೆ ಸಿಬ್ಬಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆಯುವುದು.
  • ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆದು, ಅಂತಿಮವಾಗಿ ಆಯ್ಕೆಯಾದ ಅಡುಗೆ ಸಿಬ್ಬಂದಿಗೆ  ಅನುಸೂಚಿ-ಇನಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ/ತತ್ಸಮಾನ ಅಧಿಕಾರಿಯವರು ನೇಮಕಾತಿ ಆದೇಶವನ್ನು ನೀಡುವುದು.
  • ಆಯ್ಕೆಯಾದ ಅಡುಗೆ ಸಿಬ್ಬಂದಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ರೂ.10/- ಬಾಂಡ್ ಪೇಪರ್ ನಲ್ಲಿ ಅನುಸೂಚಿ-ಇ ನಲ್ಲಿ ತಿಳಿಸಿರುವಂತೆ ನಿಯಮ ನಿಬಂಧನೆಗಳಿಗೆ ಒಪ್ಪಿರುತ್ತೇನೆಂದು ಕರಾರು ಪತ್ರವನ್ನು ನೀಡುವುದು.

ತರಬೇತಿಗಳು

ಅಡುಗೆಯವರಿಗೆ ಈ ಕೆಳಕಂಡ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.

  • ವೈಯಕ್ತಿಕ ಸ್ವಚ್ಛತೆ
  • ಎಲ್.ಪಿ.ಜಿ.ಗ್ಯಾಸ್ ಬಳಕೆ
  • ಅಡುಗೆ ಕೋಣೆ ಸ್ವಚ್ಛತೆ
  • ಬೇಳೆ ಮತ್ತು ತರಕಾರಿಗಳ ಬಳಕೆಯಿಂದ ರುಚಿಕರ ಮತ್ತು ಪೌಷ್ಠಿಕ ಆಹಾರ ತಯಾರಿಕೆ.
  • ಸುರಕ್ಷಿತವಾಗಿ ಮಕ್ಕಳಿಗೆ ವಿತರಿಸುವುದು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ್ದಾಗಿರುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೇಡ್-1 ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ಈ ಕಾರ್ಯಕ್ರಮವು ನಡೆಯುತ್ತದೆ.

ತಾಲ್ಲೂಕು ಮಟ್ಟದಲ್ಲಿ ಗ್ರೂಪ್-ಬಿ ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯು ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುತ್ತದೆ

ಆರೋಗ್ಯ ಇಲಾಖೆ

ಮಧ್ಯಾಹ್ನ ಬಿಸಿಯೂಟದ ಜೊತೆಗೆ ಹೆಚ್ಚುವರಿ ಪೌಷ್ಟಿಕಾಂಶವುಳ್ಳ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ. ಇದನ್ನು Karnataka Drugs Logistics and Warehousing Society’ ಯ ಸಹಯೋಗದೊಂದಿಗೆ ಸರಬರಾಜು ಮಾಡಲಾಗುತ್ತಿದೆ. ಮಾತ್ರೆಗಳನ್ನು ಶಿಕ್ಷಣ ಇಲಾಖೆಯಿಂದ ಬಂದ ಬೇಡಿಕೆಗೆ ಅನುಸಾರವಾಗಿ ತಾಲ್ಲೂಕು ಮಟ್ಟದಲ್ಲಿ ಪೂರೈಕೆ ಮಾಡಿದ ನಂತರ ಶಾಲೆಗಳಿಗೆ ಮರುಹಂಚಿಕೆಯಾಗುತ್ತದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ

ಈ ಇಲಾಖೆಯು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಎ.ಪಿ.ಎಲ್. ಆಹಾರ ಧಾನ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಬಿಸಿಯೂಟ ಕಾರ್ಯಕ್ರಮಕ್ಕೆ ಬೇಳೆ, ಎಣ್ಣೆ, ಉಪ್ಪು ಇನ್ನಿತರ ಆಹಾರಧಾನ್ಯಗಳನ್ನು ಪೂರೈಸುವ ಜವಾಬ್ದಾರಿ ಹೊಂದಿದ್ದು, ಆಹಾರಧಾನ್ಯಗಳ ಬೇಡಿಕೆಗನುಸಾರ ಯಾವುದೇ ಅಡೆತಡೆಗಳಿಲ್ಲದೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಜವಾಬ್ದಾರಿಯಾಗಿದೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಹಾರಧಾನ್ಯಗಳ ಬೇಡಿಕೆಗೆ ಅನುಸಾರವಾಗಿ 02 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಿ ಮುಂದಿನ ತಿಂಗಳುಗಳಲ್ಲಿ ಸರಬರಾಜು ಮಾಡುವ ಆಹಾರಧಾನ್ಯಗಳ ಬಿಲ್ಲಿಗೆ ಈ ಹಣವನ್ನು ಸರಿದೂಗಿಸುತ್ತದೆ.

ಭಾರತೀಯ ಆಹಾರ ನಿಗಮ

ಭಾರತೀಯ ಆಹಾರ ನಿಗಮವು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡುವ ಅಕ್ಕಿ, ಗೋಧಿಯನ್ನು ಎಫ್.ಸಿ.ಐ. ಗೋದಾಮಿನಲ್ಲಿ ಶೇಖರಿಸಿಟ್ಟುಕೊಂಡು, ಹಂಚಿಕೆ ಮಾಡುವ ಕಾರ್ಯ ನಿಗಮದ್ದಾಗಿರುತ್ತದೆ.
ಆಹಾರ ಸರಬರಾಜಿನಲ್ಲಿ ಯಾವುದೇ ನಿಲುಗಡೆಗೆ ಆಸ್ಪದವಿಲ್ಲದಂತೆ ತ್ರೈಮಾಸಿಕಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಫ್.ಎ.ಕ್ಯೂ. ಆಧಾರದ ಮೇಲೆ ಮಧ್ಯಾಹ್ನ ಉಪಹಾರ ಯೋಜನೆಗೆ ಎಫ್.ಸಿ.ಐ. ಯು ಅತ್ಯುತ್ತಮ ಆಹಾರಧಾನ್ಯಗಳನ್ನು ಸರಬರಾಜು ಮಾಡುತ್ತದೆ.

ಶಿಕ್ಷಣ ಇಲಾಖೆ, ಭಾರತೀಯ ಆಹಾರ ನಿಗಮದ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಆಹಾರ ಗುಣಮಟ್ಟ ಪರಿಶೀಲನಾ ತಂಡ ಆಹಾರಧಾನ್ಯ ಸರಬರಾಜಿನ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರವಿದೆಯೇ ಎಂದು ಪರಿಶೀಲಿಸಿ ವರದಿ ನೀಡುತ್ತದೆ ಹಾಗೂ ಆಹಾರಧಾನ್ಯಗಳ ಮಾದರಿಯನ್ನಿಟ್ಟುಕೊಂಡು ಪರಿಶೀಲಿಸುತ್ತದೆ.

ಆಯವ್ಯಯ

Share 2014-15
ರಾಜ್ಯ
90518.72 ಲಕ್ಷ
ಕೇಂದ್ರ
83640.93 ಲಕ್ಷ
ಒಟ್ಟು
174159.65 ಲಕ್ಷ

04-03-2010ರಿಂದ ಅನ್ವಯಿಸುವಂತೆ ಕೇಂದ್ರ-ರಾಜ್ಯದ ಸರ್ಕಾರದ ಘಟಕ ವೆಚ್ಚದ ವಿವರ :

ವರ್ಗ

ಅಕ್ಕಿ(ಗ್ರಾಂ.ಗಳಲ್ಲಿ)

ತಯಾರಿಕಾ ವೆಚ್ಚ(ರೂ.ಗಳಲ್ಲಿ) ಸಾಗಾಣಿಕಾ ವೆಚ್ಚ(ಕ್ವಿಂ/ ರೂ.ಗಳಲ್ಲಿ)
ಕೇಂದ್ರ
ರಾಜ್ಯ
ಕೇಂದ್ರ
ರಾಜ್ಯ
Total
ಕೇಂದ್ರ
ರಾಜ್ಯ
1 - 5
100
-
2.50
0.84
3.59
75
-
6 - 8
150
-
3.75
1.25
5.38
75
-
9 - 10
-
150
-
6.62
6.62
-
75

ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ

ಶಾಲೆ, ತಾಲ್ಲೂಕು ಮತ್ತು ಜಿಲ್ಲೆಗಳ ಮಾಹಿತಿಯನ್ನಾಧರಿಸಿ, ಮಧ್ಯಾಹ್ನ ಉಪಹಾರ ಯೋಜನೆಯು ರಾಜ್ಯಮಟ್ಟದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯವನ್ನು ಸಿದ್ಧಪಡಿಸುತ್ತದೆ. ಯೋಜನೆಯು ಮೇಲಿನ ಹಂತಕ್ಕಿಂತಲೂ ಕೆಳಹಂತದಲ್ಲಿ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಶಾಲಾ ಹಂತದ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ ದಾಖಲೀಕರಿಸಲಾಗುವುದು.

ಮಧ್ಯಾಹ್ನ ಉಪಹಾರ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳ ಸಮಗ್ರವಾದ ಪ್ರಸ್ತುತ ಚಿತ್ರಣವನ್ನು ನೀಡುತ್ತದೆ. ಆಡಳಿತಾತ್ಮಕ ರಚನೆ, ಅನುಷ್ಠಾನದ ವಿಧಾನ, ನಿರ್ವಹಣಾ ವಿಧಾನ, ಸಾಮಾಜಿಕವಾಗಿ ಗುರಿಮುಟ್ಟಲು ದೊರೆಯುವ ಮೂಲಭೂತ ಸೌಕರ್ಯಗಳ ಸ್ಥಿತಿ, ಮೌಲ್ಯಮಾಪನದ ಅಧ್ಯಯನದಲ್ಲಿ ದೊರೆಯುವ ಅಂಶಗಳು, ಸಮಸ್ಯೆಯನ್ನು ಎದುರಿಸುವ ಉತ್ತಮ ಅಂಶಗಳು, ಸಮುದಾಯದ ಪಾಲ್ಗೊಳ್ಳುವಿಕೆಯ ಪರಿಶೀಲನೆಯೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳನ್ನು ತಯಾರಿಸಲಾಗುತ್ತದೆ.

ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಆಚರಣೆಗಳು

  • ಅಡುಗೆ ಅನಿಲ ಬಳಸಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲಾಗುತ್ತಿದೆ.ಇದರಿಂದ ಶಾಲಾ ಪರಿಸರ ಸ್ವಚ್ಛವಾಗಿರುತ್ತದೆ.
  • ಮಹಿಳೆಯರನ್ನು ಅಡುಗೆ ಸಿಬ್ಬಂದಿಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
  • ಅಡುಗೆಯರ ನೇಮಕಾತಿ ಸಂದರ್ಭದಲ್ಲಿ ಪ.ಜಾ./ಪ.ವ. ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರನ್ನೇ ಆಯ್ಕೆ ಮಾಡಲಾಗಿದೆ. ಅವರಲ್ಲೂ ವಿಧವೆಯರು ಹಾಗೂ ಜೇವನಾಧಾರವಿಲ್ಲದಿರುವ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ.
  • ಎಲ್ಲಾ ವಿದ್ಯಾರ್ಥಿಗಳಿಗೂ ಜಾತಿ-ಮತಗಳ ಬೇಧ-ಭಾವವಿಲ್ಲದೆ ಸರದಿ ಸಾಲಿನಲ್ಲಿ ಕುಳ್ಳಿರಿಸಿ, ಬಿಸಿಯೂಟವನ್ನು ಬಡಿಸಲಾಗುತ್ತದೆ. ಇದರಿಂದ ಸಹಕಾರ ಮನೋಭಾವ, ಸಮಾನತೆ ಮತ್ತು ಭಾವೈಕ್ಯತೆ ಮೂಡಲು ಸಹಕಾರವಾಗುತ್ತದೆ.
  • ಊಟಕ್ಕೆ ಮೊದಲು ಮತ್ತು ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಕೈ ಮತ್ತು ತಟ್ಟೆ-ಲೋಟಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿಕೊಳ್ಳುವುದು.
  • ಪ್ರತೀ ಶಾಲೆಯಲ್ಲಿ ತಾಯಿಯಂದಿರ ಸಮಿತಿ ಇದ್ದು, ತಾಯಿಯಂದಿರುವ ಬಿಸಿಯೂಟ ತಯಾರಿಕೆ ಹಾಗೂ ಬಡಿಸುವ ಸಂದರ್ಭದಲ್ಲಿ ಹಾಜರಿರುತ್ತಾರೆ.
  • ಅಡುಗೆ ಸಿಬ್ಬಂದಿಯವರು ಸ್ವಚ್ಛತೆ, ಸುರಕ್ಷತೆ, ಮಿತವ್ಯಯ ಮತ್ತು ಆರೋಗ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ.
  • ಸಾಂಬಾರು ಪದಾರ್ಥ ಮತ್ತು ತರಕಾರಿಗಳ ಖರೀದಿಗಾಗಿ ಮುಂಗಡವಾಗಿ ಅಡುಗೆ ತಯಾರಿಕಾ ವೆಚ್ಚವನ್ನು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಗೆ ಜಮಾ ಮಾಡಲಾಗುತ್ತಿದೆ.
  • ಮಾರ್ಚ್-2011 ರಿಂದ ಕುಂದು-ಕೊರತೆಗಳ ಪರಿಹಾರ ಕೋಶವು ತೆರೆಯಲ್ಪಟ್ಟಿದ್ದು, ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ತಲೆದೋರುವ ಸಮಸ್ಯೆಗಳು ಹಾಗೂ ದೂರುಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು.

ಸ್ವಯಂ ಸೇವಾ ಸಂಸ್ಥೆಗಳ ಪಾತ್ರ

ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದರಲ್ಲಿ ರಾಜ್ಯದ 15ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದ 82 ಅಡುಗೆ ಕೇಂದ್ರಗಳನ್ನು ಹೊಂದಿದ್ದು, ರಾಜ್ಯದಲ್ಲಿ ಪ್ರಸ್ತುತ 80 ಸ್ವಯಂ ಸೇವಾ ಸಂಸ್ಥೆಗಳಿದ್ದು, 1 ರಿಂದ 10ನೇ ತರಗತಿಯವರೆಗಿನ 11,57,833  ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡುತ್ತಿದೆ.

ಸ್ವಯಂ ಸೇವಾ ಸಂಸ್ಥೆಗಳು

ರಾಜ್ಯಾದ್ಯಂತ ಒಟ್ಟು 92 ಸ್ವಯಂ ಸೇವಾ ಸಂಸ್ಥೆಗಳು ಒಟ್ಟು 5768 ಶಾಲೆಗಳ 10.66 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಕಂಡಂತಿವೆ.

ಕ್ರ. ಸಂ.

ಸ್ವಯಂ ಸೇವಾ ಸಂಸ್ಥೆಯ ಹೆಸರು

ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಗಳು

ಶಾಲೆಗಳ ಸಂಖ್ಯೆ

ಫಲಾನುಭವಿ ಮಕ್ಕ ಳ ಸಂಖ್ಯೆ

1

ಅಕ್ಷಯ ಪಾತ್ರ ಫೌಂಡೇಶನ್, ಬೆಂಗಳೂರು.

07

2478

439384

2

ಅದಮ್ಯ ಚೇತನ, ಬೆಂಗಳೂರು.

04

694

506280

3

ಅಖಿಲ ಕರ್ನಾಟಕ ಕನ್ನಡ ಕಸ್ತೂರಿ ಕಲಾ ಸಂಘ, ಬೆಂಗಳೂರು.

01

196

28462

ಅಧಿಕಾರಿಗಳ ಹೆಸರು & ಪದನಾಮ ದೂರವಾಣಿ, ಮೊಬೈಲ್ ಫ್ಯಾಕ್ಸ್ ಮಿಂಚಂಚೆ ವಿಳಾಸ
ಶ್ರೀ ಬೆಳ್ಳಶೆಟ್ಟಿ, ಕ.ಆ.ಸೇ
ಜಂಟಿ ನಿರ್ದೇಶಕರು(ಮ.ಉ.ಯೋ)
080-22242943
9449817874, 9480835500
080-22271998 Jd_mms@yahoo.co.in
-
ಸಹಾಯಕ ಪೌಷ್ಠಿಕಾಂಶ ಧಿಕಾರಿ(ಮ.ಉ.ಯೋ)
080-22271998
ಗಂಗಾಧರ ಎನ್, ಕ.ಆ.ಸೇ.,
ಹಿರಿಯ ಸಹಾಯಕ ನಿರ್ದೇಶಕರು(ಮ.ಉ.ಯೋ)
9480835502 080-22271998

ಹಿರಿಯ ಸಹಾಯಕ ನಿರ್ದೇಶಕರು(ಮ.ಉ.ಯೋ)
9480835503 080-22271998
ಟಿ.ಎನ್.ಲಿಂಗೇಗೌಡ,
ಸಹಾಯಕ ನಿರ್ದೇಶಕರು(ಮ.ಉ.ಯೋ)
9480835504 080-22271998
ಮುಷೀರ್ ಅಹ್ಮದ್ ಎಂ.
ಪತ್ರಾಂಕಿತ ಸಹಾಯಕರು
9449081789 080-22271998

ಲೆಕ್ಕ ಅಧೀಕ್ಷಕರು
9480835501 080-22271998

ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate