অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೌಲಿ, ವೂಲ್ಫ್‍ಗಾಂಗ್

ಪೌಲಿ, ವೂಲ್ಫ್‍ಗಾಂಗ್

ಪೌಲಿ, ವೂಲ್ಫ್‍ಗಾಂಗ್ (1900-1958) 1945

ಆಸ್ಟ್ರಿಯಾ-ಸ್ವಿಟ್ಸ್ರಲ್ರ್ಯಾಂಡ್-ಅಸಂಸಂ-ಭೌತಶಾಸ್ತ್ರ- ಕ್ವಾಂಟಂ ಬಲವಿಜ್ಞಾನದಲ್ಲಿ ಪೌಲಿ ಬಹಿಷ್ಕರಣ ತತ್ತ್ವ ನ್ಯೂಕ್ಲಿಯರ್ ಗಿರಕಿ ಹಾಗೂ ನ್ಯೂಟ್ರಿನೋ ವಾದ ನೀಡಿದಾತ.

ಪೌಲಿಯ ತಂದೆ ವಿಯೆನ್ನಾದಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 1921ರಲ್ಲಿ ಮ್ಯೂನಿಕ್ ವಿಶ್ವ ವಿದ್ಯಾವಿದ್ಯಾಲಯದಿಂದ ಪೌಲಿ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು.  ಝೋಮರ್ಫೆಲ್ಟ್‍ನಿಂದ ಪ್ರಭಾವಿತನಾಗಿದ್ದ ಪೌಲಿ, ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದನು.  ಇದನ್ನು ಓದಿದ ಐನ್‍ಸ್ಟೀನ್ ಇದರಲ್ಲಿ ಭೌತಶಾಸ್ತ್ರದ ಆಳ ಚಿಂತನೆಗಳು ಹುದುಗಿವೆಯೆಂದು ಪ್ರಶಂಸಿಸಿದ್ದನು.  ಪೌಲಿ, ಕೊಪೆನ್‍ಹೇಗ್‍ನಲ್ಲಿ ಬೊಹ್ರ್ ಹಾಗೂ ಗಟ್ಟಿಂಜೆನ್‍ನಲ್ಲಿ ಬಾರ್ನ್ ಜೊತೆಗೆ ಹೆಚ್ಚಿನ ಅಧ್ಯಯನ ಮುಂದುವರೆಸಿದನು.  ಹ್ಯಾಂಬರ್ಗ್‍ನಲ್ಲಿ ಬೋಧನಾ ವೃತ್ತಿ ಪ್ರಾರಂಭಿಸಿದ ಪೌಲಿ, 1928ರಲ್ಲಿ ಝೂರಿಕ್‍ನ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು. ಮುಂದೆ ಭೌತಶಾಸ್ತ್ರದಲ್ಲಿ ವಿಶ್ವವಿಖ್ಯಾತರಾದ ಕ್ರೊನಿಗ್, ರುಡಾಲ್ಫ್, ಪೆಲ್ರ್ಸ್ ,ಕ್ಯಾಸಿಮಿರ್ ವೀಸ್‍ಕಾಫ್ಇಲ್ಲಿ ಪೌಲಿಯ ಸಹಾಯಕರಾಗಿದ್ದರು. ಪೌಲಿ ಪಾಠ ಮಾಡುವಾಗ ತನ್ನಷ್ಟಕ್ಕೆ ತಾನೇ ಗೊಣಗುತ್ತಿದ್ದನು.  ಆದು ವಿದ್ಯಾರ್ಥಿಗಳಿಗೆ ಕೇಳಿಸುತ್ತಿರಲಿಲ್ಲ. ಕರಿ ಹಲಗೆಯ ಮೇಲೆ ಬರೆದುದು ಕಾಣಿಸುತ್ತಿರಲಿಲ್ಲ. ಆದರೆ ತರಗತಿಯ ಹೊರಗಿನ ಸಂಭಾಷಣೆಗಳಲ್ಲಿ ವಿದ್ಯಾರ್ಥಿಗಳ ಸುತ್ತ ಚೈತನ್ಯವನ್ನು ಬಡಿದೆಬ್ಬಿಸುತ್ತಿದ್ದನು. ಮಧ್ಯದಲ್ಲಿ ಪ್ರಿನ್ಸ್‍ಟನ್‍ನಲ್ಲಿ ಕಳೆದ ಐದು ವರ್ಷವನ್ನು ಹೊರತುಪಡಿಸಿ, ಪೌಲಿ ತನ್ನ ಇಡೀ ಜೀವನವನ್ನು ಇಲ್ಲಿಯೇ ಕಳೆದನು.  ಪ್ರಿನ್ಸ್ಟನ್ ನಲ್ಲಿರುವಾಗ ಅಸಂಸಂಗಳ ಪ್ರಜೆಯಾಗಿದ್ದನು. 1924ರಲ್ಲಿ ಪೌಲಿ ಮಂಡಿಸಿದ ಬಹಿಷ್ಕರಣ ತತ್ತ್ವ (Exclusion Principle) ಪರಮಾಣು ಸಂರಚನೆಯನ್ನು ವಿವರಿಸುವಲ್ಲಿ ಮಹಾ ಯಶಸ್ಸನ್ನು ಕಂಡಿತು.  ಈ ತತ್ತ್ವದ ಪ್ರಕಾರ ಯಾವುದೇ ಒಂದು ಪರಮಾಣುವಿನಲ್ಲಿ, ಎರಡು ಎಲೆಕ್ಟ್ರಾನ್‍ಗಳು ಒಂದೇ ಕ್ವಾಂಟಂ ಸ್ಥಿತಿಯಲ್ಲಿ ಇರಲಾರವು.  ಈ ಮೊದಲೇ ಬೊಹ್ರ್ ಝೋಮರ್ಫೆಲ್ಟ್ ಮಂಡಿಸಿದ ಮಾದರಿಯಲ್ಲಿ ಪ್ರತಿ ಎಲೆಕ್ಟ್ರಾನ್ ಮೂರು ಕ್ವಾಂಟಂ ಸಂಖ್ಯೆಗಳನ್ನು ಹೊಂದಿರುತ್ತದೆ.  ಪೌಲಿ ಬಹಿಷ್ಕರಣ ತತ್ತ್ವದಿಂದ ಇದಕ್ಕೆ ಮತ್ತೊಂದು ಸಂಖ್ಯೆ ಸೇರ್ಪಡೆಯಾಯಿತು.  ಪೌಲಿಯ ತತ್ತ್ವದಿಂದಾಗಿ, ಪರಮಾಣುವಿನ ಎಲೆಕ್ಟ್ರಾನ್ ಶಲ್ಕಗಳಿಗೆ (Shell) ಸರಿಯಾದ ವಿವರಣೆ ದಕ್ಕಿ, ಆವರ್ತ ಕೋಷ್ಟಕದಲ್ಲಿನ ಧಾತುಗಳ ಜೋಡಣೆ ಸ್ಪುಟಗೊಂಡಿತು.  ಇದರಿಂದ ಪರಮಾಣು ರೋಹಿತದ ಮೇಲಿನ ಝೀಮನ್ ಪರಿಣಾಮವು ಗ್ರಾಹ್ಯಯೋಗ್ಯವಾಯಿತು.  ಪೌಲಿ ತತ್ತ್ವದಂತೆ ಎಲೆಕ್ಟ್ರಾನ್ ಗಿರಕಿಗೆ (Spin)ಎರಡರಲ್ಲಿ ಒಂದು ಮೌಲ್ಯ ಪಡೆಯುವ ಅನಿವಾರ್ಯತೆಯಿದೆ. 1926ರಲ್ಲಿ ಗೌಡ್‍ಸ್ಮಿಟ್ ಹಾಗೂ ಉಹ್ಲೆನ್‍ಬೆಕ್ ಇದನ್ನು ಪ್ರಯೋಗಗಳಿಂದ ಖಚಿತಪಡಿಸಿದರು.  ಬಹಿಷ್ಕರಣ ತತ್ತ್ವ ನೀಡಿದ ಪೌಲಿ 1945ರ ನೊಬೆಲ್ ಪ್ರಶಸ್ತಿಯಿಂದ ಗೌರವಿತನಾದನು. ಪೌಲಿ, ಕಣದ ಗಿರಕಿ ಅದರ ಚೈತನ್ಯದ ಸಂಖ್ಯಾ ಕಲನ ಸ್ವಭಾವ (Statistical Nature) , ಅನಿಲ ಹಾಗೂ ಲೋಹಗಳ ಅನುಕಾಂತೀಯತೆ (Paramagnetism) , ಮೆಸಾನ್ ಕಣದ ವಿವರಣೆ, ಬೈಜಿಕ ಬಂಧಕ ಬಲಗಳ ಅರಿವಿನ ಬಗೆಗೂ ಶ್ರಮಿಸಿದನು. ಬೀಟ ಶೈಥಿಲ್ಯದಲ್ಲಿ (Decay), ಪರಮಾಣುವಿನಿಂದ ಎಲೆಕ್ಟ್ರಾನ್ ಬಿಡುಗಡೆಗೊಳ್ಳುತ್ತದೆ.  ಇದು ಚೈತನ್ಯ ಸಂರಕ್ಷಣೆಯ ನಿಯಮಕ್ಕೆ ಅಪವಾದದಂತೆ ತೋರುತ್ತದೆ.  ಈ ಕ್ರಿಯೆಯಲ್ಲಿ ಅತ್ಯಲ್ಪ ಚೈತನ್ಯ ನಷ್ಟವಾದಂತೆ ಲೆಕ್ಕಾಚಾರಗಳು ತೋರಿಸುತ್ತವೆ.  ಇದನ್ನು ಅಭ್ಯಸಿಸಿದ ಪೌಲಿ, ಅಜ್ಞಾತವಾಗಿರುವ ಬಹು ಹಗುರವಾದ ಕಣದೊಂದಿಗೆ ಈ ಚೈತನ್ಯ ಇರುವುದೆಂದು ಸೂಚಿಸಿ, ಅಂತಹ ಕಣವನ್ನು ನ್ಯೂಟ್ರಿನೋ ಎಂದು ಕರೆದನು. 1956ರಲ್ಲಿ ಎಫ್ರೀನ್ಸ್, ಹಾಗೂ ಕೊವೆನ್ ಪ್ರಯೋಗಗಳಲ್ಲಿ ನ್ಯೂಟ್ರಿನೋ ಗುರುತಿಸಿ, ಪೌಲಿಯ ಮುನ್ಸೂಚನೆಗಳು ಸರಿಯೆಂದು ತೋರಿಸಿದರು. ಪೌಲಿ,ಸಾಧಾರವಾದ, ಸತಾರ್ಕಿವಾದುವನ್ನು ಹೊರತು ಬರಿ ಹೇಳಿಕೆಗಳನ್ನು ಎಂದೂ ಒಪ್ಪುತ್ತಿರಲಿಲ್ಲ. ಈತನೊಂದಿಗೆ ಚರ್ಚಿಸಲು ವಿಜ್ಞಾನಿಗಳು ಅಂಜುತ್ತಿದ್ದರು. ಪೌಲಿ,ಪ್ರತಿವಾದಿ ಭಯಂಕರನೆಂದು ಹೆಸರಾಗಿದ್ದನು. ಅಸತ್ಯ ,ಕಪಟತನಗಳು ಈತನನ್ನು ಕಂಡು ಬೆದರುತ್ತಿದ್ದವು. ಇಂತಹ ಶ್ರೇಷ್ಟ ಗುಣಶೋಭಿತನಾಗಿದ್ದ ಪೌಲಿ ಫೆೈನ್‍ಮನ್ ಮತ್ತು ಡೈಸನ್ ರೂಪಿಸಿದ ಚಿತ್ರ ಗಣಿತವನ್ನು ನಿರ್ಲಕ್ಷಿಸಿದ್ದೊಂದು ವಿಪರ್ಯಾಸ.  ಸಾಧಾರಣ ಮಟ್ಟದ ಉಪನ್ಯಾಸಕಾರನೂ ಅಸಮರ್ಪಕ ಪ್ರಯೋಗಪಟುವೂ ಆಗಿದ್ದ ಪೌಲಿ, ಜಗತ್ತು ಕಂಡ ಅತ್ಯುತ್ತಮ ಸೈದ್ಧಾಂತಿಕ ಭೌತಶಾಸ್ತ್ರಜ್ಞರಲ್ಲೊಬ್ಬ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate