অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬೆರ್’ಟ್ರ್ಯಾಮ್, ಎನ್ ಬ್ರೊಕ್‍ಹೌಸ್

ಬೆರ್’ಟ್ರ್ಯಾಮ್, ಎನ್ ಬ್ರೊಕ್‍ಹೌಸ್

ಬೆರ್’ಟ್ರ್ಯಾಮ್, ಎನ್ ಬ್ರೊಕ್‍ಹೌಸ್ (1918--)  ೧೯೯೪

ಕೆನಡಾ-ಭೌತಶಾಸ್ತ್ರ

ಬೆರ್’ಟ್ರ್ಯಾಮ್ 15 ಜುಲೈ 1918ರಂದು ಅಲ್ಯೆಟ್ಟಾ ಪ್ರಾಂತದ ಲೆಥೆ ಬ್ರಿಜ್‍ನಲ್ಲಿ ಜನಿಸಿದನು.  ಬೆರ್’ಟ್ರ್ಯಾಮ್ ಕುಟುಂಬ ಕೃಷಿ ಹಾಗೂ ಜಾನುವಾರು ಸಾಕಣೆಯಲ್ಲಿ ನಿರತವಾಗಿದ್ದಿತು.  ತಮ್ಮ ಹೊಲದಿಂದ ಒಂದೆರಡು ಕಿ,ಮೀ ದೂರದಲ್ಲಿದ್ದ ಏಕಕೊಠಡಿ ಶಾಲೆಗೆ ಬೆರ್’ಟ್ರ್ಯಾಮ್ ಸೇರಿದನು.  ಓದಿನಲ್ಲಿ ಓರಗೆಯವರಿಗಿಂತ ಹಿಂದುಳಿದಿದ್ದ ಬೆರ್’ಟ್ರ್ಯಾಮ್ ಪ್ರಾಥಮಿಕ ಶಿಕ್ಷಣ ಪೂರೈಸುವ ವಯಸ್ಸಿಗೆ ಸ್ವಲ್ಪ ಸುಧಾರಿಸಿ, ಪ್ರೌಢಶಾಲೆಗೆ ಬಂದಾಗ ಸಾಮಾನ್ಯ ಮಟ್ಟಕ್ಕೇರಿದನು.  ಬೆರ್’ಟ್ರ್ಯಾಮ್ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದುದರಿಂದ, ವೃತ್ತ ಪತ್ರಿಕೆಯನ್ನು ಹಾಕುವ ಕೆಲಸಕ್ಕೆ ಸೇರಿದನು.  1935ರಲ್ಲಿ ಕಾಣಿಸಿಕೊಂಡ ಆರ್ಥಿಕ ಖಿನ್ನತೆಯ ಸ್ಥಿತಿಯಿಂದ ಪಾರಾಗಲು ಬೆರ್’ಟ್ರ್ಯಾಮ್ ಕುಟುಂಬ ಚಿಕಾಗೋಗೆ ಪ್ರಯಾಣ ಮಾಡಿತು.  ಇಲ್ಲಿ ಈಗ ರೂಸ್‍ವೆಲ್ಟ್  ವಿಶ್ವವಿದ್ಯಾಲಯವಾಗಿರುವ ಆಗಿನ ವೈಎಂಸಿಎ ಕಾಲೇಜಿನಲ್ಲಿ ಸಾಯಂಕಾಲದ ತರಗತಿಗಳಿಗೆ ಬೆರ್’ಟ್ರ್ಯಾಮ್ ಹಾಜರಾದನು.  ಇಲ್ಲಿ ರೇಡಿಯೋ ದುರಸ್ತಿಯಲ್ಲಿ ಪರಿಣಿತಿ ಗಳಿಸಿದನು.  ಚಿಕಾಗೋದಲ್ಲಿನ ಆಲ್ಬರ್ಟ್ ಕಂಟ್ರೋಲ್ ಕಾಪೆರ್Çೀರೇಷನ್ ಹೆಸರಿನ ಸಣ್ಣ ಸಂಸ್ಥೆಯಲ್ಲಿ ಪ್ರಯೋಗಾಲಯದ ಸಹಾಯಕನಾದನು.  1937ರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಈ ಕಂಪೆನಿ ಮುಚ್ಚಿತು. ಅಸಂಸಂಗಳಲ್ಲಿ ಹೆಚ್ಚಿನ ಸಮೃದ್ಧಿ, ಕಾಣದೆ ಬೆರ್’ಟ್ರ್ಯಾಮ್ ಕುಟುಂಬ 1938ರಲ್ಲಿ ಕೆನಡಾದ ವ್ಯಾಂಕೋವರ್‍ಗೆ ಮರಳಿತು.  ಇಲ್ಲಿ ಈ ಕುಟುಂಬ ಚಿಕ್ಕ ದಿನಸಿ ಅಂಗಡಿ ತೆರೆದರೆ ಬೆರ್’ಟ್ರ್ಯಾಮ್ ರೇಡಿಯೋ ದುರಸ್ತಿ ಅಂಗಡಿ ಪ್ರಾರಂಭಿಸಿದನು.  ಇವು ವ್ಯಾಪಾರದಲ್ಲಿ ಯಶಸ್ಸನ್ನು ಕಾಣಲಿಲ್ಲ.  ಈ ಸ್ಥಿತಿಯಲ್ಲಿ ಬೆರ್’ಟ್ರ್ಯಾಮ್ ಕಮ್ಯುನಿಸ್ಟ್ ಪಕ್ಷದ ಸ್ವಯಂ ಸೇವಕನಾದನು.  ಚಾಲ್ಕ್ ಪ್ರಯೋಗಾಲಯ ಸೇರಿದ ನಂತರ ಸರ್ಕಾರಿ ನೌಕರಿಯಲ್ಲಿದ್ದು, ಯಾವುದೇ ಪಕ್ಷದ ಸಿದ್ಧಾಂತದತ್ತ ವಾಲುವುದು ಅನೈತಿಕವಾದುದೆಂದು ತಟಸ್ಥ ರಾಜಕೀಯ ಧೋರಣೆ ತಳೆಯುವುದೇ ಸರಿಯಾದ ಮಾರ್ಗವೆಂದು ನಿರ್ಧರಿಸಿದನು.  ಸರ್ವಾಧಿಕಾರದ ವಿರೋಧಿಯಾಗಿದ್ದ ಬೆರ್’ಟ್ರ್ಯಾಮ್, ಎರಡನೇ ಜಾಗತಿಕ ಯುದ್ದದಲ್ಲಿ ರಾಯಲ್ ಕೆನಡಿಯನ್ ನೌಕಾದಳ ಸೇರಿ, ರೇಡಿಯೋ ಟೆಲಿಗ್ರಾಫರ್ ಆದನು.  

1944ರಲ್ಲಿ ನೋವಾಸ್ಕೋಷಿಯಾದ ತಾಂತ್ರಿಕ ಕಾಲೇಜಿನಲ್ಲಿ ವೈದ್ಯುತ್ ಇಂಜಿನಿಯರಿಂಗ್‍ನಲ್ಲಿ ತರಬೇತಿ ಹೊಂದಿದನು. ಎರಡನೇ ಜಾಗತಿಕ ಯುದ್ದ ಕೊನೆಗೊಂಡಾಗ ನೌಕಾದಳ ಸೇವೆಯಿಂದ ಹೊರಬಂದ ಬೆರ್’ಟ್ರ್ಯಾಮ್ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ಹೆಚ್ಚಿನ ಶಿಕ್ಷಣ ಗಳಿಸಲು ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದನು.  ಇಲ್ಲಿಯೂ ನಾನಾ ತೊಂದರೆಗಳಿಂದ  ಪದವಿ ಪೂರೈಸಿ ರಾಷ್ಟ್ರೀಯ ಸಂಶೋಧನಾ ಸಮಿತಿಯ ಪ್ರಯೋಗಾಲಯ ಸೇರಿದನು.  ಇದಾದ ಕೆಲ ಕಾಲದಲ್ಲೇ ಟೊರಂಟೋದ ನಿಮ್ನ ತಾಪಮಾನ ಪ್ರಯೋಗಾಲಯ ಸೇರಿದನು.  ಇಲ್ಲಿ ಹಫ್ ಗ್ರೇಸನ್ ಸ್ಮಿತ್ ಹಾಗೂ ಜೇಮ್ಸ್ ರೀಕಿಯ ಮಾರ್ಗದರ್ಶನದಲ್ಲಿ ಒತ್ತಾಯ ಹಾಗೂ ತಾಪಮಾನಗಳು ಫೆರೋ ಕಾಂತೀಯತೆಯ ಮೇಲೆ ಬೀರುವ ಪರಿಣಾಮಗಳನ್ನು ಅಭ್ಯಸಿಸಿ ಸ್ನಾತಕೋತ್ತರ ಪದವಿ ಗಳಿಸಿದನು.  ಇಲ್ಲಿ ಬೆರ್’ಟ್ರ್ಯಾಮ್ ಮಾರ್ಗದರ್ಶಕರಾಗಿದ್ದವರು, ಉನ್ನತ ಹುದ್ದೆಗಳ ಅಹ್ವಾನದ ಮೇರೆಗೆ, ಬೇರೆ ವಿಶ್ವವಿದ್ಯಾಲಯಗಳಿಗೆ ತೆರಳಿದರೆ, ಅದೇ ಕಾಲಕ್ಕೆ ಭೂಕಾಂತತ್ವದಲ್ಲಿ ಖ್ಯಾತಿವೆತ್ತ ಎಡ್ವರ್ಡ್ ಬುಲ್ಲಾರ್ಡ್, ಪ್ರಾಧ್ಯಾಪಕ ಹಾಗೂ ಮುಖ್ಯಸ್ಥನಾಗಿ ಬಂದನು.  ಈತನ ಕೈ ಕೆಳಗೆ ಡಾಕ್ಟರೇಟ್ ಗಳಿಸಿದ ಬೆರ್’ಟ್ರ್ಯಾಮ್ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿ 1951ರಲ್ಲಿ ಮರಳಿ ಜಾಕ್ ರಿವರ್ ಪ್ರಾಯೋಗಾಲಯಕ್ಕೆ ಬಂದನು.  ಇಲ್ಲಿ ಅಧಿಕ ಹೀರಿಕೆಯ ಧಾತುಗಳಿಂದಾಗುವ ನ್ಯೂಟ್ರಾನ್ ಚದುರಿಕೆಯನ್ನು ಕುರಿತಾಗಿ ಮೈಯರ್‍ಬೂಮ್, ಹಾಗೂ ಡಿ.ಜಿ ಹಟ್ರ್ಸ್‍ರೊಂದಿಗೆ ಸಂಶೋಧನೆ ಪ್ರಾರಂಭಿಸಿದನು.  1956ರಲ್ಲಿ ಮೂರು ಅಕ್ಷದ ಸ್ಪಟಿಕ ರೋಹಿತ ಮಾಪಕದ ನಿರ್ಮಾಣ ಪೂರ್ಣಗೊಳಿಸಿದ ಬೆರ್’ಟ್ರ್ಯಾಮ್ ಹಾಗೂ ಸಂಗಡಿಗರು, 1958ರಲ್ಲಿ ಸ್ಥಿರ ಕ್ಯು-ವಿಧಾನ  ರೂಪಿಸಿದರು. 1962ರಲ್ಲಿ ಒಂಟೋರಿಯಾದ ಮೆಕ್ ಮಾಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು.  ಬೆರ್’ಟ್ರ್ಯಾಮ್ ದೀರ್ಘವಾದ ವೈಯಕ್ತಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳೆರಡೂ ಏಳು ಬೀಳಿನ ಹಾದಿಯಲ್ಲಿ ಸಾಗಿದವು.  1994ರಲ್ಲಿ ಬೆರ್’ಟ್ರ್ಯಾಮ್ ಕ್ಲಿಫರ್ಡ್ ಜಿ.ಷುಲ್‍ನೊಂದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate