অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಾಬರ್, ಫ್ರಿಟ್ಸ್ (1868-1934 )

ಹಾಬರ್, ಫ್ರಿಟ್ಸ್ (1868-1934 )

ಹಾಬರ್, ಫ್ರಿಟ್ಸ್ (1868-1934 )

ಜರ್ಮನಿ-ಭೌತರಸಾಯನಶಾಸ್ತ್ರ-ಸಾರಜನಕ ಸ್ಥಿರೀಕರಣ ಸಂಸ್ಕರಣೆ ಕಾರ್ಯಗತಗೊಳಿಸಿದಾತ.

ಹಾಬರ್ 9 ಡಿಸೆಂಬರ್ 1868 ರಂದು ಬ್ರೆಸ್ಲೌದಲ್ಲಿ ಜನಿಸಿದನು.  ಹಾಬರ್ ತಂದೆ ಬಣ್ಣದ ವ್ಯಾಪಾರಿಯಾಗಿದ್ದನು. ಬಾಲಕನಾಗಿರುವಾಗಲೇ ಹಾಬರ್ ಹಲವಾರು ರಾಸಾಯನಿಕ ಪ್ರಯೋಗಗಳನ್ನು ನಡೆಸಿದ್ದನು. ಕುಟುಂಬದ ವ್ಯವಹಾರಗಳಿಗೆ ಅನುಕೂಲವಾಗಲೆಂದು  ಹಾಬರ್ ಸಾವಯವ ರಸಾಯನಶಾಸ್ತ್ರದಲ್ಲಿ ವಿದ್ಯಾಭ್ಯಾಸ ಹೊಂದಿದನು. 1886 ರಿಂದ 1891 ರವರೆಗೆ ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಬುನ್ಸೆನ್ ಬರ್ಲಿನ್‍ನಲ್ಲಿ ಎ.ಡಬ್ಲ್ಯು.ಹಾಫ್ಮನ್ ಮತ್ತು ಚಾರ್ಲೋಟ್‍ಬರ್ಲ್‍ನ್‍ಲ್ಲಿ ಲಿಬೆರ್‍ಮನ್ ಕೈಕೆಳಗೆ ರಸಾಯನಶಾಸ್ತ್ರದ ಶಿಕ್ಷಣ ಪಡೆದನು. ಆದರೆ ಕೆಲಕಾಲದ ನಂತರ ಹೆಚ್ಚಿನ ಶಿಕ್ಷಣ ಗಳಿಸಲು, ಜೆನಾದಲ್ಲಿ ಲುಡ್‍ವಿಗ್ ಕ್ನೋರ್‍ನ ಮಾರ್ಗದರ್ಶನದಲ್ಲಿ ಶ್ರಮಿಸಿ, ಈಸ್ಟರ್‍ಗಳ ಬಗೆಗೆ ಲೇಖನ ಪ್ರಕಟಿಸಿದನು.  ಇಷ್ಟಾದರೂ ಹಾಬರ್‍ಗೆ ಭೌತಶಾಸ್ತ್ರದಲ್ಲಿ ಅಥವಾ ರಸಾಯನಶಾಸ್ತ್ರದಲ್ಲಿ ಮುಂದುವರೆಯಬೇಕೆ ? ಎಂಬ ದ್ವಂದ್ವ ಕಾಡಿತು. 1884ರಲ್ಲಿ ಕಾರ್ಲ್‍ಷ್ರುಹೆಯಲ್ಲಿ ಹ್ಯಾನ್ಸ್ ಬಂಟೆಯ ಬಳಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಸಹಾಯಕನಾದನು. ಈತನ ಪ್ರಭಾವದಿಂದ ಪೆಟ್ರೋಲಿಯಂ ರಸಾಯನಶಾಸ್ತ್ರದಲ್ಲಿ ಆಸಕ್ತಿ ಮೂಡಿತು. ಹೈಡ್ರೋಕಾರ್ಬನ್‍ಗಳ ಸಂಯೋಜನೆ, ವಿಯೋಜನೆ , ದಹ್ಯತೆಯ ಮೇಲೆ ಸಂಶೋಧನೆ ನಡೆಸಿದನು. 1906ರಲ್ಲಿ ಕಾರ್ಲ್ ಷ್ರುಹೆಯಲ್ಲಿ ಹೊಸದಾಗಿ ಸ್ಥಾಪನೆಗೊಂಡ ಭೌತ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1911ರಲ್ಲಿ ಬರ್ಲಿನ್ ಡಹ್ಲೆಮ್‍ನ ಭೌತ ಹಾಗೂ ವೈದ್ಯುತ್ ರಸಾಯನಶಾಸ್ತ್ರ ವಿಭಾಗದ ಕಾರ್ಯದರ್ಶಿಯ ಹುದ್ದೆಯಿಂದ ಎಂಗ್ಲರ್ ನಿವೃತ್ತನಾದಾಗ, ಹಾಬರ್ ಆತನ ಸ್ಥಾನಕ್ಕೆ ನಿಯೋಜಿತನಾದನು.  ಜರ್ಮನಿ ನಾಝಿ ಆಡಳಿತಕ್ಕೊಳಪಟ್ಟು ಈ ಸಂಸ್ಥೆಯ ಬಹುತೇಕ ವಿಜ್ಞಾನಿಗಳು ರಾಜಿನಾಮೆ ನೀಡುವಂತಹ ಪರಿಸ್ಥಿತಿ  ಬಂದೊದಗಿತು.  ಇದನ್ನು ಒಪ್ಪದ ಹಾಬರ್1933ರಲ್ಲಿ ತಾನೇ ರಾಜಿನಾಮೆ ನೀಡಿದನು.  ಇದರ ನಂತರ ಸ್ವಿಟ್ಸಲ್ಯಾಂಡ್‍ಗೆ ಹೋಗಿ ನೆಲೆಸಿದನು. ಅಮೋನಿಯಂ ಸಂಶ್ಲೇಷಣೆಯನ್ನು ಕುರಿತಾಗಿ ಹಾಬರ್ ಆಳ ಅಧ್ಯಯನ ಮಾಡಿದನು.  ಮಣ್ಣಿನ ಸಾರ ಹೆಚ್ಚಿಸಲು ಸಾರಜನಕದ ಪೂರೈಕೆಗೆ ರಾಸಾಯನಿಕ ಗೊಬ್ಬರವಾಗಿ ಚಿಲಿ ನೈಟ್ರೇಟನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದಿತು.  ಇದನ್ನು ಗಮನಿಸಿದ ಕ್ರೂಕ್, ಇದೇ ರೀತಿ ಮುಂದುವರೆದದ್ದೇ ಆದರೆ, ಕಾಲಾನುಕ್ರಮದಲ್ಲಿ ಚಿಲಿ ನೈಟ್ರೇಟ್  ನಿಕ್ಷೇಪ ಖಾಲಿಯಾಗಿ, ಗೊಬ್ಬರ ಬರ ಎದುರಿಸಬೇಕಾಗುವುದೆಂದು ಎಚ್ಚರಿಸಿದ್ದನು.  ಬುನ್ಸೆನ್ ಕೈಕೆಳಗೆ ಕೆಲಸ ಮಾಡುತ್ತಿದ್ದಾಗ ಜ್ವಾಲೆಯಲ್ಲಿ ಅನಿಲಗಳು ದಹಿಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳನ್ನು ಗಮನಿಸಿದ್ದ ಹಾಬರ್‍ಗೆ ವಾತಾವರಣದ ಸಾರಜನಕ ಬಳಸಿ ಅಮೋನಿಯ ತಯಾರಿಸಬಹುದೆಂದು ಅರಿತನು. 1898ರಲ್ಲಿ ನೈಟ್ರೋಬೆಂಜೀನ್‍ನ್ನು ಅಪಕರ್ಷಿಸಿ, ಬೇರೆ ರಾಸಾಯನಿಕ ಸಂಯುಕ್ತಗಳಿಗೂ ಅನ್ವಂiÀiವಾಗುವ ಸಾಮಾನ್ಯ ಆಪಕರ್ಷಕ ವಿಧಾನ ಜಾರಿಗೆ ತಂದನು.  ದ್ರವದ ಆಮ್ಲತೆಯ (Acidity)ನಿರ್ಧಾರಕ್ಕೆ ರೂಪಿತವಾಗುವ ಬಿಲ್‍ಮನ್ ಕ್ವಿನ್ ಹೈಡ್ರೋನ್ ಎಲೆಕ್ಟ್ಯೋಡ್‍ನ ಹಿಂದೆ ಹಾಬರ್ ರೂಪಿಸಿದ ತತ್ತ್ವಗಳಿವೆ.  ಇಂಜಿನ್‍ಗಳಲ್ಲಿನ ಚೈತನ್ಯ ನಷ್ಟವನ್ನು ಅಧ್ಯಯನ ಮಾಡಿ, ರಾಸಾಯನಿಕ ಬದಲಾವಣೆಗಳ ಮೂಲಕ ಇಂಧನ ಮಿತವ್ಯಯವನ್ನು ಸಾಧಿಸುವ ಪ್ರಯೋಗಗಳನ್ನು ಕೈಗೊಂಡನು.  ಬುನ್ಸೆನ್ ಉರಿಯಲ್ಲಿನ ಹೊರ ಹಾಗೂ ಒಳಭಾಗಗಳ ಅಧ್ಯಯನ ನಡೆಸಿ ಜ್ವಾಲೆಯ ತಾಪಮಾನ ನಿರ್ಧರಿಸುವ ವಿಧಾನ ರೂಪಿಸಿದನು. 1905ರಲ್ಲಿ ಸಾರಜನಕ ಹಾಗೂ ಜಲಜನಕದಿಂದ ಅಮೋನಿಯಾವನ್ನು ಸಣ್ಣ ಪ್ರಮಾಣದಲ್ಲಿ ಉತ್ಪಾದಿಸುವ ವಿವರ ನೀಡಿದನು.  ಇದಕ್ಕೆ ಕಬ್ಬಿಣವನ್ನು ಕ್ರಿಯಾ ವರ್ಧಕವಾಗಿ (Catalyst) ಬಳಸಿದ್ದನು.  ನಂತರ ಬಾಷ್ ಹಾಗೂ ಮಿಟಾಷ್ಕ್‍ರ ಸಹಕಾರದಿಂದ, ಸಾರಜನಕ, ಜಲಜನಕಗಳನ್ನು, 150/200 ವಾಯುಭಾರದಲ್ಲಿ , 500 ಸೆಂ.ಗಿಂತಲೂ ಅಧಿಕ ತಾಪಮಾನದಲ್ಲಿ ಕ್ರಿಯಾಪ್ರೇರಕಗಳ ಮೇಲೆ ಸಾಗಿಸಿ, ಅಮೋನಿಯಾವನ್ನು ಸಂಶ್ಲೇಷಿಸುವಲ್ಲಿ ಯಶಸ್ವಿಯಾದನು. ಇದನ್ನು ಕೈಗಾರಿಕರಣಗೊಳಿಸಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು,ಹಾಬರ್ ಕಾರ್ಲ್ ಬಾಷ್ ಜೊತೆ ಒಪ್ಪಂದ ಮಾಡಿಕೊಂಡನು.  ಇದರ ಪರಿಣಾಮವಾಗಿ 1913ರಲ್ಲಿ ಹಾಬರ್-ಬಾಷ್ ಸಂಸ್ಕರಣಾ ವಿಧಾನ ಬಳಕೆಗೆ ಬಂದಿತು. 1980ರ ದಶಕದ ವೇಳೆಗೆ ಈ ವಿಧಾನದಿಂದ ಸರಿಸುಮಾರು, 10 ಕೋಟಿ ಟನ್‍ಗಳಿಗಿಂತಲೂ  ಅಧಿಕ ಅಮೋನಿಯಾ ಪ್ರತಿ ವರ್ಷ ಉತ್ಪಾದನೆಗೊಳ್ಳುತ್ತಿರುವುದೆಂದು ಅಂದಾಜಿಸಲಾಗಿದೆ.  ಮೊದಲನೆ ಜಾಗತಿಕ ಯುದ್ದದ ಸಮ0iÀiದಲ್ಲಿ ಆಸ್ಪೋಟಗಳ ತಯಾರಿಕೆಗೆ ಬೇಕಾದ  ನೈಟ್ರಿಕ್ ಆಮ್ಲದ ಕೊರತೆ ತಲೆದೋರಿತು, ಹಾಬರ್,ಜರ್ಮನಿಯ ಮಿಲಿಟರಿಗಾಗಿ, ಅಮೋನಿಯಾವನ್ನು ಉತ್ಕರ್ಷಿಸಿ (Oxidise), ನೈಟ್ರಿಕ್ ಆಮ್ಲ ತಯಾರಿಸುವ ವಿಧಾನ ಕಂಡು ಹಿಡಿದನು.  ಹಾಬರ್, ಜರ್ಮನ್ ಮಿಲಿಟರಿಗೆ ಸಲಹೆಗಾರನಾಗಿದ್ದು  ವಿಷಾನಿಲಗಳಿಂದ ರಕ್ಷಣೆ ಪಡೆಯುವ ಮುಖವಾಡಗಳನ್ನು ತಯಾರಿಸಿದನು. 1918ರಲ್ಲಿ ಅಮೋನಿಯ ಸಂಶ್ಲೇಷಣೆಗಾಗಿ ಹಾಬರ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1933ರಲ್ಲಿ ಹಾಬರ್, ಯಹೂದಿ ವಿರೋದಿ ನೀತಿ ಪ್ರತಿಭಟಿಸಿ ತನ್ನ ಹುದ್ದೆಗೆ ರಾಜಿನಾಮೆ ನೀಡಿ , ಕೇಂಬ್ರಿಜ್‍ಗೆ ಹೋಗಿ ನೆಲೆಸಿದನು.  ಆದರೆ ತನ್ನ ಶತ್ರು ದೇಶದಲ್ಲಿರಲು ಅವನ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ಇಟಲಿಯಿಂದ ಬಂದ ಅಹ್ವಾನ  ಮನ್ನಿಸಿ  ಯಾತ್ರೆ ಕೈಗೊಂಡಾಗ , ಮಾರ್ಗ ಮಧ್ಯದಲ್ಲೇ ಅಸು ನೀಗಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate