অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೇಪಾಳ

ನೇಪಾಳ

ಮನುಷ್ಯರಿಗೆ ಮನೆ, ಕಚೇರಿ, ಅರಮನೆ, ಸ್ಮಾರಕ ಎಂದರೆ ಅವರ ಬಯಕೆ, ನೆನಪು, ಅಹಮು, ಅಸ್ತಿತ್ವಗಳ ಮೊತ್ತ. ಆದರೆ ನೆಲಕ್ಕೆ? ಮನುಷ್ಯನ ಹೆಮ್ಮೆಯ ರಚನೆಗಳೆಲ್ಲ ಕೇವಲ ಇಟ್ಟಿಗೆ, ಮಣ್ಣು, ಗಾರೆ. ಹಾಗೆಂದು ಮೊನ್ನೆ ಏಪ್ರಿಲ್ 25 ರಂದು ಮತ್ತೆ ಸಾಬೀತಾಯಿತು.

ಕಠ್ಮಂಡು ೨.೮ ಕೋಟಿ ಜನಸಂಖ್ಯೆಯ ನೇಪಾಳದ ರಾಜಧಾನಿ. ಆಧುನಿಕ ವೇಗದ ಜಗತ್ತಿಗೆ ಪುರಾತನ ಸಾಂಪ್ರದಾಯಿಕ ಲೋಕದ ಕೊನೆಯ ಕೊಂಡಿಯಂತೆ ತೋರುವ ಹಿಮಾಲಯದ ನಗರ ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. ಏಪ್ರಿಲ್ ೨೪, ಶುಕ್ರವಾರ ರಾತ್ರಿ ಕಠ್ಮಂಡುವಿನ ಬೀದಿ ಸಾವಿರಾರು ವಿದೇಶಿ ಪ್ರವಾಸಿಗರಿಂದ ತುಂಬಿತ್ತು. ನಡುರಾತ್ರಿ ಕಳೆದರೂ ನಗರ ಮಲಗದೇ ಬೆಳಗಿನ ಜಾವದವರೆಗೂ ಚಟುವಟಿಕೆಯಲ್ಲಿತ್ತು. ಬೆಳಗಾಯಿತು. ತಡವಾಗಿ ಎದ್ದರೂ ಒಂದು ಸುತ್ತು ತಿರುಗಲು ಹೊರಬಂದವರು ಬದುಕಿದರು. ನಡುಮಧ್ಯಾನ್ಹವಾದರೂ  ಹೋಟೆಲು, ಮನೆಗಳೊಳಗೇ ಉಳಿದವರು ಇನ್ನಿಲ್ಲವಾದರು.

ಮಧ್ಯಾಹ್ನ ೧೨ ಕ್ಕೆ ಇನ್ನು ೪ ನಿಮಿಷ ಇದೆ ಎನ್ನುವಾಗ ಭೂಮಿ ಒಮ್ಮೆ ಮೈಕೊಡವಿತು. ಅಷ್ಟೆ, ಬರೀ ೧೫ ಸೆಕೆಂಡು. ನೋಡನೋಡುತ್ತ ಹೋಟೆಲು, ಅಂಗಡಿ, ಕಟ್ಟಡ, ಸ್ಮಾರಕ, ಕಂಬಗಳು ನೆಲಕ್ಕುರುಳಿದವು. ಎಲ್ಲೆಲ್ಲೂ ಹಾಹಾಕಾರ, ಭಯದ ಕಿರಿಚಾಟ. ನೆಲವೇ  ಅಲುಗತೊಡಗಿ ಬೀದಿಯ ಎರಡೂ ಕಡೆ ನಿಂತ ಎತ್ತರೆತ್ತರದ ಕಟ್ಟಡಗಳು ಕಲ್ಲು ಇಟ್ಟಿಗೆಗಳನ್ನು ಗುಂಡಿನಂತೆ ಸಿಡಿಸಿ ನೆಲಕ್ಕುರುಳ ತೊಡಗಿದವು. ಏನಾಗುತ್ತಿದೆ? ಎಲ್ಲಿ ಹೋಗಿ ರಕ್ಷಣೆ ಪಡೆಯುವುದು? ಯಾರ ಬಳಿ ಕೇಳುವುದು? ನನ್ನವರು ತನ್ನವರು ಈಗೆಲ್ಲಿದ್ದಾರೆ? ಹತ್ತು ಹಲವು ಪ್ರಶ್ನೆಗಳು ಜನರ ಮನದಲ್ಲಿ ಸುಲಿದು 'ಆಕ್ಷನ್, ಕಟ್, ಟೇಕ್ ' ಹೇಳುವುದರಲ್ಲಿ ಎಲ್ಲ ಮುಗಿದೇ ಹೋಯಿತು. ಬೀದಿಯಲ್ಲಿದ್ದು ಬದುಕಿದವರು, ಅವಶೇಷಗಳಡಿ ಸಿಕ್ಕಿಹಾಕಿಕೊಂಡವರು, ಸತ್ತವರು, ಅನಾಥವಾದವರು, ವಿದೇಶಿಯರು - ಒಬ್ಬೊಬ್ಬರದು ಒಂದೊಂದು ತೆರನ ಸಂಕಟ, ಚೀರಾಟ. ಕಳ್ಳನೆನದೆ ಪೋಲೀಸನೆನದೆ; ಅಮ್ಮನೆನದೆ ಮಗುವೆನದೆ; ರೋಗಿಯೆನದೆ ಶುಶ್ರೂಷಕರೆನದೆ; ರಾಜನೆನದೆ ಸೇವಕನೆನದೆ ಎಲ್ಲರನ್ನೂ ನೆಲ ಒಂದೇ ರೀತಿ ಅಲುಗಾಡಿಸಿಬಿಟ್ಟಿತು. ಇಡಿಯ ಸಮಾಜವೇ ಹೀಗೆ ದಿಕ್ಕೆಟ್ಟು ನಿಂತ ಹೊತ್ತಲ್ಲಿ ಸಮವಸ್ತ್ರ ಧರಿಸಿದವರೂ ಕಿಂಕರ್ತವ್ಯ ವಿಮೂಢರಾಗಿ ನಿಂತರು. ಸಾವುನೋವಿನ ಸಂಖ್ಯೆ ಹೆಚ್ಚುತ್ತ, ಹೆಚ್ಚುತ್ತಲೇ ಹೋಯಿತು. ಗುಡ್ದುಗಾಡಿನ ಜನರಂತೂ ಅನ್ನ ನೀರು ಸೂರಿಲ್ಲದೆ ವಾರ ಕಳೆಯುವಂತಾಯಿತು..

ಭಕ್ತಾಪುರ ಕಠ್ಮಂಡುವಿನ ಹೊರವಲಯದ ಜಿಲ್ಲೆ. ಆ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಒಂದು ಹಳ್ಳಿಯಿಡೀ ಇವತ್ತು ಕುಸಿದ ಬೆಟ್ಟಮನೆಕಲ್ಲುಮಣ್ಣುಗಳ ರಾಶಿ. ಅಂಥ ಒಂದು ಕುಸಿದ ಮಣ್ಣುಗುಪ್ಪೆಯೆದುರು ತಾಯ್ತಂದೆಯರು ನಿಂತು ರೋದಿಸುತ್ತಿದ್ದಾರೆ. ಆ ರಾಶಿಯೊಳಗಿಂದ ಅವ್ವಾ, ಅಪ್ಪಾ ಎಂಬ ದನಿ ಕೇಳುತ್ತಿದ್ದದ್ದು ಬರಬರುತ್ತ ಕ್ಷೀಣವಾಗಿ ಈಗ ನಿಂತೇ ಹೋಗಿದೆ. ಹಿರಿಯರೆಲ್ಲ ಕೆಲಸಕ್ಕೆ ಹೊರಹೋಗಿದ್ದಾಗ ಮನೆಯಲ್ಲಿದ್ದ ಪುಟ್ಟ ಹುಡುಗಿ ಕುಸಿದ ಭಾರದಡಿ ಎಲ್ಲೋ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳನ್ನು ರಕ್ಷಿಸಬೇಕು. ಆದರೆ ಮುಟ್ಟಿದರೆ ಪಿಸಿಪಿಸಿ ಹಿಸಿದು ಬೀಳುವ ಮಣ್ಣು, ಕಲ್ಲು, ಹೆಂಚು, ಕಟ್ಟಿಗೆಯ ರಾಶಿಯನ್ನು ಎಲ್ಲಿಂದ ತೆಗೆದು ಎಲ್ಲಿ ಹಾಕುವುದು? ಹೇಗೆ ತೆಗೆಯುವುದು? ಇಡೀ ಊರಲ್ಲಿ ಎಲ್ಲರದು ಒಂದೇ ಕತೆಯಾಗಿರುವಾಗ ಸಹಾಯಕ್ಕೆ ಒದಗುವವರಾರು? ಹುಡುಗಿಯ ಅಜ್ಜಿ ಮನೆಯ ಸುತ್ತಮುತ್ತ ತಿರುಗುತ್ತ ಮೊಮ್ಮಗಳಿಗೆ ಕೂಗಿ ಕೂಗಿ ಹೇಳುತ್ತ ಏನೋ ನಿರ್ದೇಶನ ಮಾಡುತ್ತಿದ್ದಾಳೆ. ಅದು ಮಗುವಿಗೆ ಕೇಳುತ್ತಿರಬಹುದೇ? ತಾಯಿ ಎದೆ ಎದೆ ಬಡಿದುಕೊಂಡು ಅಳುತ್ತಿದ್ದರೆ ಅಪ್ಪ, 'ನನಗೆ ನಮ್ಮ ಮಗಳು ಬೇಕು, ಅವಳೀಗ ಬದುಕಿಲ್ಲ, ಆದರೂ ಅವಳು ಬೇಕೇ ಬೇಕು. ಪರಿಹಾರ ಕಾರ್ಯಕರ್ತರು ಬರುವವರೆಗೆ ನಾನು ಏಳುವುದಿಲ್ಲ' ಎನ್ನುತ್ತಿದ್ದಾನೆ.

ಕೆಲವೇ ತಾಸಿನ ಕೆಳಗೆ ತಮ್ಮ ಅಡಿಗೆ ಮನೆಯಾಗಿದ್ದ ಪ್ರದೇಶದಲ್ಲಿ ಮುದುಕಿಗೆ ಏನೋ ಕಾಣಿಸಿತು. ಹೊರಗೆಳೆದರೆ ಒಂದೆರಡು ಉಪ್ಪಿನಕಾಯಿ ಪ್ಯಾಕೆಟ್ಟು ಕೈಗೆ ಬಂದವು. ಕೈ ಕೊಂಚ ಮುಂದೊಯ್ದು ಏನಾದರೂ ಕೈಗೆಟುಕಿತೇನೋ ಎನ್ನುವಾಗ ಧಸಕ್ ಎಂದು ತೊಲೆಯೊಂದು ಕೈ ಮೇಲೆ ಬಿತ್ತು. ಗಾಯದ ಕೈ ಹೊತ್ತು  ಊರ ಹೊರಗೆ ನಡೆದ ಮುದುಕಿ ಬಯಲಲ್ಲಿ ನಿಂತು ಕೈ ಮುಗಿದು ಪರ್ವತ ದೇವರನ್ನು ಪ್ರಾರ್ಥಿಸುತ್ತಿದ್ದಾಳೆ;  'ನಿಲ್ಲಿಸು, ದಯವಿಟ್ಟು ನಿಲ್ಲಿಸು. ನಮ್ಮನೇಕೆ ದೇವ ನೀ ಹೀಗೆ ಶಿಕ್ಷಿಸುವುದು?ನಿನ್ನ ಮಕ್ಕಳ ರಕ್ಷಿಸು..'

ಸಾವು, ಸರ್ವನಾಶ, ನಿರಾಶೆ, ಹಸಿವೆ, ಅಸಹಾಯಕತೆಗಳೆಲ್ಲ ಒಟ್ಟಾದರೆ ಮತ್ತೇನು ಮಾಡಬಹುದು ನರಮನುಷ್ಯ, ಪ್ರಾರ್ಥಿಸುವುದರ ಹೊರತು?

ಇದು ಪರ್ವತಾರೋಹಿಗಳಿಗೆ ಹಿಮಾಲಯದ ಶಿಖರಗಳ ಏರುವ ಉಮೇದಿನ ಕಾಲ. ಆಕಾಶಕ್ಕೆ ಏಣಿಯಂತೆ ನಿಂತ ಹಿಮಾಲಯದ ಧವಳಗಿರಿಗಳು ಸಾಹಸ ಪ್ರಿಯರನ್ನು ಇನ್ನಿಲ್ಲದಂತೆ ಸೆಳೆಯುತ್ತವೆ. ಅದರಲ್ಲೂ ಪ್ರಪಂಚದ ಅತ್ಯುನ್ನತ ಶಿಖರ ಎವರೆಸ್ಟಿನ ಬೇಸ್ ಕ್ಯಾಂಪಿನಲ್ಲಿ ತೀವ್ರ ಚಟುವಟಿಕೆಯಿರುತ್ತದೆ. ಈ ಬಾರಿಯೂ ಹಾಗೇ. ಏಪ್ರಿಲ್ ಕೊನೆಯ ವಾರ ದೇಶವಿದೇಶಗಳ ಒಟ್ಟು ೩೫೦ ಚಾರಣಿಗರು ಎವರೆಸ್ಟ್ ಏರುವ ಹಾದಿಯ ನಾನಾಹಂತಗಳಲ್ಲಿದ್ದರು.ಪ್ರತಿ ಚಾರಣಿಗನ ಜೊತೆಯೂ ಅವರ ಸಾಮಾನು ಹೊತ್ತ ಗುಡ್ಡಗಾಡಿನ ಶೆರ್ಪಾ ಜನ. ಅವರಲ್ಲದೆ ಪರ್ವತಾರೋಹಿಗಳಿಗೆ ಸಹಾಯ ಮಾಡುವ ಸ್ಥಳೀಯ ಸಮುದಾಯ ಶೆರ್ಪಾಗಳ ಕುರಿತು ಜರ್ಮನಿಯ ಒಂದು ಕಂಪನಿ ಸಾಕ್ಷ್ಯ ಚಿತ್ರ ಚಿತ್ರೀಕರಣ ನಡೆಸುತ್ತಿತ್ತು.

ಆ ತಂಡದ ಕ್ಯಾಮೆರಾಮನ್ ಗೆ ಇದ್ದಕ್ಕಿದ್ದಂತೆ ಯಾರೋ ದೂಡಿ ಬೀಳಿಸಿದಂತಾಯಿತು. ತ್ರಿಪಾದದ ಮೇಲೆ ಇಳಿಜಾರಿನಲ್ಲಿ ಗಟ್ಟಿಯಾಗಿ ನಿಲ್ಲಿಸಿದ್ದ ಕ್ಯಾಮೆರಾ ಓಲಾಡಿ ಓಲಾಡಿ ನೆಲಕ್ಕುರುಳಿತು. ಆಟ ಚತುರ. ತನಗೆ ಆಧಾರ ತಪ್ಪಿಸುತ್ತಿರುವುದು ನೆಲವೇ ಎಂದು ಕೂಡಲೇ ಅರ್ಥವಾಗಿ ಕೂಗಿಕೊಂಡ: 'ಭೂಕಂಪವಾಗುತ್ತಿದೆ'...

ಎಲ್ಲರಿಗೂ ಕ್ಷಣಾರ್ಧದಲ್ಲಿ ಏನಾಗುತ್ತಿದೆಯೆಂದು ಅರ್ಥವಾಯಿತು. ಹತ್ತಿರದಲ್ಲೇ ಆಕಾಶಕ್ಕೆ ತಲೆಯೆತ್ತಿ ನಿಂತಂತಿದ್ದ ಶಿಖರದ ತುದಿಗಳಿಂದ ಹಿಮ, ಕಲ್ಲುಬಂಡೆ, ಮಣ್ಣು ಎಲ್ಲವೂ ಧಡ ಧಡ ಭಯಾನಕ ಸದ್ದಿನೊಂದಿಗೆ ಗಂಟೆಗೆ ೩೦೦ ಕಿ.ಮೀ.ವೇಗದಲ್ಲಿ ಕೆಳಗುರುಳುರುಳಿ ಬರತೊಡಗಿದವು. ಕೂಡಲೇ ಶೆರ್ಪಾಗಳ ಸೂಚನೆಯಂತೆ ಎಲ್ಲರೂ ವಿರುದ್ದ ದಿಕ್ಕಿಗೆ ಓಡಿ ಹೆಬ್ಬಂಡೆಯೊಂದರ ಬಳಿ ನಿಂತರು. ನೋಡನೋಡುತ್ತಿದ್ದಂತೆ ಅವಾ ಕಣ್ಣೆದುರೇ ಬೇಸ್ ಕ್ಯಾಂಪ್, ಚಿತ್ರೀಕರಣದ ಸೆಟ್ ಧೂಳಲ್ಲಿ ಹೂತು ಹೋಯಿತು. ದೂರದ ಕಣಿವೆಯಿಂದ ಧೂಳಿನ ಮೋಡ ಮೇಲೇಳ ತೊಡಗಿತು. ಚಿತ್ರೀಕರಣ ತಂಡದಲ್ಲಿದ್ದ ಶೆರ್ಪಾಗಳಿಗೆ ಖಚಿತವಾಯಿತು, ತಮ್ಮ ಕಣಿವೆಯ ಹಳ್ಳಿಯೇ ಮಾಯವಾಗುತ್ತಿದೆ.

ಪರ್ವತದ ಮಕ್ಕಳ ಮಾಸದ ಕಿರುನಗೆಯ ಮುಖದಲ್ಲಿ ತಾಂಡವವಾಡುತ್ತಿರುವುದು  ಭಯ, ಕೇವಲ ಭಯ...

ಸ್ಯಾಟಲೈಟ್ ಫೋನಿನಿಂದ ಕರೆಗಳೇನೋ ಹೋದವು. ಆದರೆ ಸಹಾಯಕ್ಕೆ ಯಾರಾದರೂ ಬರುವುದು ಹೇಗೆ ರಸ್ತೆಯೆಲ್ಲ ಕುಸಿದು ನಾಶವಾಗಿರುವಾಗ? ಭಯದಲ್ಲಿ, ಹಿಮದ ಕೊರೆತದಲ್ಲಿ ನಡುಗುತ್ತ, ಅಣ್ಣ ನೀರಿಲ್ಲದೆ ಕುಳಿತವರನ್ನು ಕೊನೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರುಗಳು ಹೊತ್ತೊಯ್ದವು. ಚಾರಣಿಗರಲ್ಲಿ ೨೨ ಜನ ಕೂಡಲೇ ಸತ್ತರು. ೧೦೦ ಜನ ಕಾಣೆಯಾದರು, ಲೆಕ್ಕ ಸಿಗದೆ ಕಳೆದು ಹೋದವರೆಷ್ಟೋ. ಕಾಲದೇಶಗಳ ಅಳತೆಗೆ ಸಿಗಲಾರದ ಬದುಕುಳಿದವರ ಸಂಕಟ, ಸಂಕಷ್ಟ ಇನ್ನೆಷ್ಟೋ...

೫೦  ಚದರ ಕಿಮೀ ವಿಸ್ತೀರ್ಣದ, ಭಾಗಮತಿ ನದಿ ದಂಡೆಯಲ್ಲಿರುವ, ಸುತ್ತ ಎತ್ತರದ ಬೆಟ್ಟಗಳಿಂದ ಸುತ್ತುವರೆದಿರುವ, ಎಂಟು ನದಿಗಳು ಹರಿವ ನಗರ ಕಠ್ಮಂಡು. ಶತಮಾನಗಳಿಂದ ಅದು ವ್ಯಾಪಾರ ವಾಣಿಜ್ಯದ ಕೇಂದ್ರ. ಭಾರತ ಮತ್ತು ಚೀನಾದ ನಡುವಿರುವ ಅದರ ಆಯಕಟ್ಟಿನ ಸ್ಥಾನ ಹಿಮಾಲಯದ ವಾಣಿಜ್ಯ ನಗರಿಯಾಗಲು ಕಾರಣವಾಗಿದೆ. ಫಲವತ್ತಾದ ಕಠ್ಮಂಡು ಕಣಿವೆಯ ಕೃಷಿ ಆಧಾರಿತ ಆರ್ಥಿಕತೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದ ದಿಕ್ಕಿನಲ್ಲಿ ಗಮನಾರ್ಹವಾಗಿ ಬೆಳೆದಿದೆ. ಭಾರತ ಉಪಖಂಡದ ರಾಜಕೀಯ-ಧಾರ್ಮಿಕ ಹಿತಾಸಕ್ತಿಗಳು ನೇಪಾಳದ ಮೇಲೂ ಪ್ರಭಾವ ಬೀರಿವೆ.

೧೯೩೫ ರಲ್ಲಿ ನೇಪಾಳ ಕಂಡ ಭಾರೀ ಭೂಕಂಪದ ನಂತರ ಆ ದೇಶವನ್ನು ಅಲುಗಾಡಿಸಿದ್ದು ಈ ಭೂಕಂಪ. ಲೆಕ್ಕ ಸಿಕ್ಕಿದ ಸತ್ತವರ ಸಂಖ್ಯೆ ಅಂದಾಜು ೧೦,೦೦೦. ನಿಜವಾಗಿ ಸತ್ತವರ ಸಂಖ್ಯೆ ಪಶುಪತಿನಾಥ ದೇವಸ್ಥಾನ ಆವರಣದ ಸ್ಮಶಾನದಲ್ಲಿ, ಭಾಗಮತಿಯ ದಂಡೆಯಲ್ಲಿ , ಕಳೆದೆರಡು ವಾರಗಳಿಂದ ನೂರಾರು ಹೆಣ ಸುಡುತ್ತಿರುವ ಅಪ್ಪ- ಮಗ ಬುಧಿರಾಮ - ಮಂಗಲರಿಗೂ ಗೊತ್ತಿಲ್ಲ; ಸರ್ಕಾರಕ್ಕೂ ಲೆಕ್ಕ ಸಿಕ್ಕಿಲ್ಲ. ೧೫ ಸೆಕೆಂಡಿನ ನೆಲದ ಸಿಟ್ಟಿಗೆ ಛಿದ್ರಗೊಂಡ ಸಾವಿರಾರು ಬದುಕುಗಳು ಮತ್ತೆ ರೂಪುಗೊಳ್ಳಲು ಬೇಕಿರುವುದು ಇನ್ನೆಷ್ಟೋ ವರುಷ.

ಹೀಗೇಕಾಯಿತು? ನಡುಗಿದಲ್ಲಿಯೇ ಮತ್ತೆ ಮತ್ತೆ ಭೂಮಿ ಏಕೆ ಕಂಪಿಸಿತು?

ಸಿಡಿಯಲು ಕ್ಷಣಗಣನೆ ನಡೆಸುತ್ತಿರುವ ಸರ್ವಸನ್ನದ್ದ ಜೀವಂತ ಬಾಂಬ್ ಈ ಹಿಮಾಲಯ. ಹಿಮಾಲಯ ಪ್ರತಿವರ್ಷ ಒಂದು ಸೆಂ.ಮೀ. ಎತ್ತರ ಬೆಳೆಯುತ್ತಿದೆ. ಅದಕ್ಕೆ ಕಾರಣವಿದೆ.ಐದು ಕೋಟಿ ವರ್ಷ ಕೆಳಗೆ ಪ್ರಪಂಚದ ಭೂಪಟ ಹೀಗಿರಲಿಲ್ಲ. ಆಗ ದಕ್ಷಿಣ ಭಾರತದ ಕೆಳಗಿನ ಭೂಭಾಗ, ಶ್ರೀಲಂಕ, ಆಫ್ರಿಕಾ, ಆಸ್ಟ್ರೇಲಿಯಾ, ಎಲ್ಲವೂ ಒಟ್ಟಿಗಿದ್ದವು. ಅದನ್ನು ಗೊಂಡ್ವಾನ ಎನ್ನುತ್ತಿದ್ದರು. ಗೊಂಡ್ವಾನದ ಒಂದು ಭಾಗ- ಹಿಮಾಲಯದ ಕೆಳಗಿನ ಭಾರತ - ಚಲಿಸುತ್ತ ಮೇಲೆ ಹೋಗಿ ಇವತ್ತಿನ ಏಷ್ಯಾ - ಯೂರೋಪು ಭಾಗಕ್ಕೆ ಢಿಕ್ಕಿ ಹೊಡೆಯಿತು. ಆ ಘರ್ಷಣೆಯಿಂದ ಮಡಿಕೆಯಾಗಿ ಮೇಲೆದ್ದ ಭೂಮಿಯೇ ಹಿಮಾಲಯ. ಈಗಲೂ ನೆಲದಾಳದ ಭೂಭಾಗಗಳು ಚಲಿಸುತ್ತಲೇ ಇರುತ್ತವೆ. ಆಗಾಗ ಢಿಕ್ಕಿ ಹೊಡೆಯುತ್ತಲೇ ಇರುತ್ತವೆ. ಹೀಗೆ ಹುಟ್ಟುವ ಭಾರೀ ಒತ್ತಡಕ್ಕೆ ಭೂಮಿ ಕಂಪಿಸುತ್ತದೆ. ನಿಯಮಿತವಾಗಿ ೭೫-೧೦೦ ವರ್ಷಗಳಿಗೊಮ್ಮೆ ಒಂದು ದೊಡ್ಡ ಭೂಕಂಪ ಸಂಭವಿಸುತ್ತದೆ.ನಡು ನಡುವೆ ಭೂಮಿ ಸಣ್ಣ ಪುಟ್ಟದಾಗಿ ನಡುಗಿ ಸುಮ್ಮನಾಗುತ್ತದೆ.

ಎಂದರೆ ಹಿಮಾಲಯ ಪ್ರದೇಶಕ್ಕೆ ಭೂಕಂಪ ಹೊಸದಲ್ಲ. ಹಿಮಾಲಯ ಶ್ರೇಣಿಯ ಉನ್ನತ ಪ್ರದೇಶದ ಕಣಿವೆಗಳಲ್ಲಿ, ಬಯಲುಗಳಲ್ಲಿ ಹರಡಿರುವ ನೇಪಾಳ ದೇಶಕ್ಕೂ ಭೂಕಂಪ ಹೊಸದಲ್ಲ. ಆದರೆ ಭೂಕಂಪಕ್ಕೆ ಜನ ಹೆದರಲಿಲ್ಲ. ಅಲ್ಲಿ ಹರಿವ ನದಿಗಳ ಬಯಲು, ಸಂಪದ್ಭರಿತ ಪ್ರಾಣಿ ಪಕ್ಷಿ ಸಂಕುಲ, ಪರ್ವತಗಳ ತಪ್ಪಲು ಜನರನ್ನು ಸೆಳೆದು ಹಿಮಾಲಯ ಜನಭರಿತವೂ ಆಯಿತು.ಈಗ ಯಾವಾಗ, ಎಲ್ಲಿ, ಎಷ್ಟು ಪ್ರಮಾಣದ ಭೂಕಂಪ ಸಂಭವಿಸುವುದರ ಮುನ್ಸೂಚನೆ ಊಹಿಸಬಹುದು, ಅದರ ಪರಿಮಾಣವನ್ನು ರಿಕ್ಟರ್ ಮಾಪಕದಲ್ಲಿ ಅಳೆಯಬಹುದು. ಭೂಕಂಪನ ನಿಲ್ಲಿಸಲಾರೆವಾದರೂ ಭೂಕಂಪವಾದಾಗ ಸಾವು ನೋವು ಕಡಿಮೆ ಮಾಡಬಲ್ಲ ಕಟ್ಟಡ ನಿರ್ಮಾಣ ಕೌಶಲ್ಯ ಉಪಯೋಗಿಸಬಹುದು.

ತಂತ್ರಜ್ಞಾನ ಈ ಪರಿ ಬೆಳೆಯುವ ಮೊದಲೂ ಬಹುಮಹಡಿಯ, ಭಾರೀ ಕಟ್ಟಡ ಕಟ್ಟುತ್ತಿದ್ದರು. ಆರೇಳು ಸಾವಿರ ವರ್ಷ ಹಳೆಯ ಪಿರಮಿಡ್ ಗಳು ಇದಕ್ಕೆ ಉದಾಹರಣೆ. ಆಗ ಕಟ್ಟಡ ನಿರ್ಮಾಣದ ವೇಳೆ ಒಂದು ಸರಳ, ಅನುಭವಾಧಾರಿತ ಜ್ಞಾನ ಬಳಸಿ ಭೂಕಂಪವನ್ನು ತಡೆದುಕೊಳ್ಳಬಲ್ಲ ರಚನೆ ನಿರ್ಮಿಸುತ್ತಿದ್ದರು. ನಮ್ಮ ತಾಜಮಹಲು, ಕುತುಬ್ ಮಿನಾರು, ಎಷ್ಟೋ ದೇವಾಲಯಗಳು, ಪಿರಮಿಡ್ ಹೀಗೆ ಭೂಕಂಪ ನಿರೋಧಿ ವಿನ್ಯಾಸದಲ್ಲಿ ಸೃಷ್ಟಿಯಾದವು. ಈಗಲೂ ಜಪಾನ್ ದೇಶದ ವಿಶಿಷ್ಟ ಗೃಹ ನಿರ್ಮಾಣ ತಂತ್ರಜ್ಞಾನ ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪಗಳಲ್ಲಿ ಸಾವುನೋವನ್ನು ಕಡಿಮೆ ಮಾಡುತ್ತದೆ. ಬಹುಮಹಡಿ ಕಟ್ಟಡಗಳೂ ಇದರಂತೆ ಕಟ್ಟಲ್ಪಡುತ್ತವೆ. ಆ ವಿನ್ಯಾಸ ಜಗತ್ತಿಗೇ ಮಾದರಿಯಾಗಬೇಕಾಗಿದೆ.

ಇತ್ತೀಚಿಗೆ ಅತಿ ವೇಗವಾಗಿ ಬೆಳೆದ ಕಠ್ಮಂಡು ನಗರದ ರಚನೆಗಳು ಇಂಥ ಯಾವ ಮುನ್ನೆಚ್ಚರಿಕೆಯನ್ನು ವಹಿಸಲಿಲ್ಲ. ತಮ್ಮದು ಹಿಮಾಲಯದ ದೇಶವೆನ್ನುವುದನ್ನು, ಹಳೆಯ ಭೂಕಂಪದ ನೆನಪುಗಳನ್ನು ಅದು ಇಟ್ಟುಕೊಳ್ಳಲಿಲ್ಲ. (ಈ ಮಾತು  ಭಾರತಕ್ಕೂ ಅನ್ವಯಿಸುತ್ತದೆ.!) ಕಠ್ಮಂಡು ಜನಸಂಖ್ಯೆ ೧೦ ಲಕ್ಷ +. ಜನಸಾಂದ್ರತೆ ಪ್ರತಿ ಚದರ ಕಿ.ಮೀಗೆ ೨೦೨೮೮! ಏರುತ್ತಿರುವ ಜನಸಂಖ್ಯೆಗೆ ಪ್ರತಿಯಾಗಿ ಮನೆ ಮೇಲೆ ಮನೆ, ಮನೆಮೇಲೆ ಮನೆ, ಮನೆಮೇಲೆ ಮನೆ ,ಮನೆಮೇಲೆ ಮನೆ - ಹೀಗೆ ಬಹುಮಹಡಿ ಕಟ್ಟಡ ತಲೆಯೆತ್ತಿದ ಕಾರಣಕ್ಕೇ ಇವತ್ತು ಸಾವು ನೋವು ಲೆಕ್ಕಕ್ಕೆ ಸಿಗುವುದೂ ಕಷ್ಟವಾಗಿದೆ. ಆಧುನಿಕ ತಂತ್ರಜ್ಞಾನ ಕಾಲದ ಪರೀಕ್ಷೆಯಲ್ಲಿ ಸೋಲುತ್ತಲೇ ಬಂದಿದೆ.

ಅದಕ್ಕೆ ಸಾಕ್ಷಿಯಾಗಿ ಮನೆಮಾರುಗಳು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಕುಸಿದು ನಾಶವಾಗಿವೆ. ನೇಪಾಳ ಬ್ಯಾಂಕಿನ ಕಚೇರಿ, ಅದರ ಸ್ಟ್ರಾಂಗ್ ರೂಂ ನೆಲದಾಳ ಸೇರಿವೆ. ಅದರಲ್ಲಿದ್ದ ಕೋಟಿಗಟ್ಟಲೆ ರೂಪಾಯಿ ಹಣ, ಬಂಗಾರ ನೆಲದೊಡಲು ಸೇರಿದೆ. ಅದರಿಂದ ೨.೮ ಕೋಟಿ ರೂ. ಹುಡುಕಿ ತೆಗೆಯಲಾಗಿದ್ದರೆ ಉಳಿದಿದ್ದು ನಿಧಿಯಾಗಿ ಭೂತಳಕ್ಕೆ ಸರಿದಿದೆ. ಧರಹರಾ ಗೋಪುರ ೧೯೩೫ ರಲ್ಲಿ ಭೂಕಂಪದಿಂದ ಭಾಗಶಃ ಹಾಳಾಗಿದ್ದರೂ ಅದನ್ನು ಮತ್ತೆ ದುರಸ್ಥಿಗೊಳಿಸಲಾಗಿತ್ತು. ಅದೂ ಸಹಾ ನಿಮಿಷಾರ್ಧದಲ್ಲಿ ತನ್ನ ಮೈ ಮೇಲಿದ್ದ ಪ್ರವಾಸಿಗಳ ಸಮೇತ ನೆಲಕ್ಕುರುಳಿದೆ. ಯುನೆಸ್ಕೋ ತಾಣವೆಂದು ಗುರುತಿಸಲ್ಪಟ್ಟ ದರ್ಬಾರ್ ಚೌಕದ ೭ ರಲ್ಲಿ ೪ ನೆಲ ತಾಣಗಳು ನೆಲಕಚ್ಚಿವೆ. ಪಶುಪತಿನಾಥ ದೇವಾಲಯ ಭಾಗಶಃ ಹಾಳಾಗಿದೆ ಕಠ್ಮಂಡುವಿಗೆ ಆ ಹೆಸರು ಬರಲು ಕಾರಣವಾದ ಕಷ್ಟ ಮಂಟವೂ ಸೇರಿ ಹಲವು ದೇವಾಲಯಗಳು ನೆಲಕ್ಕುರುಳಿವೆ.

ಪಟ್ಟಿ ಮಾಡುತ್ತ ಹೋದರೆ ತಿಳಿಯುತ್ತದೆ, ನೆಲಕ್ಕುರುಳಿದ್ದು ಕಟ್ಟಡಗಳಲ್ಲ, ಮನುಷ್ಯ ಹೆಮ್ಮೆ ಮತ್ತು ತಲೆ ತಲಾಂತರಗಳಿಂದ ಕಟ್ಟಿಕೊಂಡ ಬದುಕು. ಉರುಳಿ ಬಿದ್ದ ಕಸ ರಾಶಿಯನ್ನು ತೆರವುಗೊಳಿಸುವುದು, ಅದರಡಿ ಸಿಲುಕಿರುವ ಜೀವಂತ ದೇಹ, ಶವ, ವಸ್ತು, ಹಣಗಳನ್ನು ಹೊರತೆಗೆಯುವುದು ಅತಿ ಪ್ರಯಾಸದ ಕೆಲಸ. ಕಟ್ಟುವುದರ ಜೊತೆಗೆ ಈ ವಿಲೇವಾರಿ ಕೆಲಸಕ್ಕೆ ಬಿಲಿಯನ್ನುಗಟ್ಟಲೆ ಹಣ ಬೇಕಾಗಿದೆ. ಕಲ್ಲುಗಾರೆಸುಣ್ಣಗಳು ಬಿದ್ದ ಕಟ್ಟಡಗಳನ್ನು ಕೆಲಸಮಯದಲ್ಲಿ ಎದ್ದು ನಿಲ್ಲಿಸಬಹುದು. ಆದರೆ ಕಳೆದುಹೋದ ಜೀವಗಳು ಉಳಿಸಿಹೋದ ಒಡೆದ ಬದುಕು? ರಿಪೇರಿ ಮಾಡಲಾರದಂತೆ ಮುರಿದು ಬಿದ್ದ ಸಾವಿರಾರು ಕುಟುಂಬಗಳ ಬದುಕು ಬಹುಶಃ ಒಂದು ತಲೆಮಾರಿನ ಜೊತೆಜೊತೆಗೇ ತಾನೂ ನಾಶವಾಗಿದೆ.

ನಾವು ನೇಪಾಳದ ನೆರೆಯವರಲ್ಲವೇ? ಈ ವಿಪತ್ತಿಗೆ ಭಾರತ ಕೂಡಲೇ ಸ್ಪಂದಿಸಿತು. ಭುಜ್ ನಂತಹ ಭಾರೀ ಭೂಕಂಪದ ನಂತರ ಪ್ರಾಕೃತಿಕ ವಿಕೋಪ ಪಡೆಯನ್ನೇ ಇಟ್ಟುಕೊಂಡವರು ನಾವು. ತಕ್ಷಣ ನಮ್ಮ ಯುದ್ದ ವಿಮಾನಗಳು ಪೂರೈಕೆಯ ಸಾಮಗ್ರಿಗಳನ್ನು ಹೊತ್ತೊಯ್ದವು. ತಾವೇನು ಕಡಿಮೆ ಎಂದು ಚೀನಾ ಪಾಕಿಸ್ತಾನಗಳೂ ಮುಂದೆ ಬಂದವು. ಚೀನಾ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ತನ್ನ ವಾಯುಗಡಿ ಉಲ್ಲಂಘಿಸುತ್ತಿದೆ ಎಂದು ನೇಪಾಳಕ್ಕೆ ದೂರಿತು. ವಿಶ್ವದ ಎಲ್ಲೆಡೆಯಿಂದ ಜನ-ಧನ-ಔಷಧಿ ಸಹಾಯ ಹರಿದು ಬರುತ್ತಾ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಿಕ್ಕಿರಿದು ಹೋಯಿತು. ಭಾರತೀಯ ಮಾಧ್ಯಮಗಳು ತಮ್ಮ ದೇಶ ಕೊಟ್ಟ ಸಹಾಯ, ಅದನ್ನು ಕೊಟ್ಟ ತಮ್ಮ ಮಹಾನ್ ನಾಯಕ, ನೇಪಾಳ, ಸರ್ಕಾರದ ಅಸಾಮರ್ಥ್ಯದ ಕುರಿತು ಉತ್ಪ್ರೇಕ್ಷಿತ ವರದಿಗಳನ್ನು ಬರೆದವು. ಇದು ಸ್ವಾಭಿಮಾನಿ ನೇಪಾಳವನ್ನು, ನೇಪಾಳಿಗರನ್ನು ಕೆರಳಿಸಿತು. ನೇಪಾಳ ಸರ್ಕಾರ, '೧೦ ದಿನ ಕಳೆಯಿತು, ಸಹಾಯ ಮಾಡಬಂದವರಿಗೆ ಧನ್ಯವಾದ, ನೀವಿನ್ನು ಹೊರಡಿ' ಎಂದು ಗೇಟ್ ಪಾಸ್ ನೀಡಿತು.

ಯಾರೇ ಈ ದೇಶವನ್ನು ಆಳುತ್ತಿದ್ದರೂ ಭಾರತದ ವಿಪತ್ತು ನಿರ್ವಹಣಾ ಪಡೆ ಸರ್ವ ಸನ್ನದ್ದ ಸ್ಥಿತಿಯಲ್ಲಿರುತ್ತದೆ . ಇಂಡೋನೇಷ್ಯಾ ಸುನಾಮಿ, ಪಾಕಿಸ್ತಾನದ ಭೂಕಂಪ, ಅಮೇರಿಕದ ಕತ್ರಿನಾ ದುರಂತ, ಮಾಲ್ಡೀವ್ಸ್ ಜಲ ವಿಕೋಪ ಮತ್ತಿತರ ಕಡೆಗಳಲ್ಲಿ ಎನ್ ಜಿ ಒ ಆಧಾರಿತ ವಿದೇಶಿ ಸಹಾಯ ಬರುವುದರೊಳಗಾಗಿ ಭಾರತೀಯರು ಅಲ್ಲಿದ್ದರು. ಆದರೆ ಈ ಬಾರಿ ನಮ್ಮ 'ಸೇವೆ' ಯನ್ನು ನಾವೇ ಅತಿಯಾಗಿ ಬಿಂಬಿಸಿ ದೇಶದ ಮಾನ ಕಳೆದೆವು.

ಸಹಾಯ ಮಾಡುವುದು ಪಡೆವವನ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಿರಬಾರದು ಎಂಬ ದಾನಮೀಮಾಂಸೆಯ ಮೊದಲ ಪಾಠವನ್ನು ಸನಾತನ ರಾಷ್ಟ್ರ ಭಾರತ ಮರೆಯಿತೇ?.

ನಮ್ಮ ಸುತ್ತಲ ಪರಿಸರ ನಮ್ಮ ಮನೋಭಾವವನ್ನು ರೂಪಿಸುತ್ತದೆ ಎಂದು ಎಲ್ಲೋ ಓದಿದ ನೆನಪು. ನೇಪಾಳ ಪ್ರಕೃತಿ ವಿಕೋಪದಷ್ಟೇ ಧಾರ್ಮಿಕ - ಸಾಂಸ್ಕೃತಿಕ -ರಾಜಕೀಯ ಬಿಕ್ಕಟ್ಟುಗಳನ್ನೆದುರಿಸುತ್ತಲೆ ಬಂದಿದೆ. ರಾಜಮನೆತನ, ಬಂಡುಕೋರರು ಹಾಗೂ ಜನಪ್ರತಿನಿಧಿಗಳ ನಡುವೆ ಅಲ್ಲಿನ ಜನ ಬದುಕು ನಲುಗಿದೆ. ಆದರೂ ಹೇಗೆ ಹಿಮಾಲಯವು ಬೇಸಿಗೆಯಲ್ಲಿ ಕರಗಿ ಹರಿದು, ಚಳಿಗಾಲದಲ್ಲಿ ಹಿಮ ಪೇರಿಸಿಕೊಳ್ಳುತ್ತ ಮತ್ತೆ ಭವ್ಯವಾಗುವುದೊ ಹಾಗೆ ಅಲ್ಲಿಯ ಜನರ ಬದುಕು ಕಷ್ಟ ನಷ್ಟ ಪ್ರಕೋಪಗಳ ನಡುವೆಯೇ ಮುಂದುವರೆದಿದೆ. ಪರ್ವತಗಳ ನಾಡಿನ ನೇಪಾಳಿಗರು ಧೈರ್ಯಶಾಲಿಗಳು, ಸ್ವಾಭಿಮಾನಿಗಳು. ಈ ಭೂಕಂಪದಿಂದ ನೇಪಾಳ ಎದ್ದು, ನಿಲ್ಲಲಿದೆ, ಪಶುಪತಿನಾಥನ ಸಾಕ್ಷಿ, ಭಾಗಮತಿ ನದಿ ಸಾಕ್ಷಿ, ಪುಡಿಯಾಗಿ ಮುಸುಕಿದ ಹಿಮಾಲಯ ಸಾಕ್ಷಿ ನೇಪಾಳ ಮತ್ತೆ ಮೊದಲಿನ ಸ್ಥಿತಿಗೆ ಮರಳಲಿದೆ. ಆದರೆ ನೆನಪಿಡುವ , ತಾಯಿ ಭೂಮಿಯನ್ನು ಹೇಗೆ ನಡೆಸಿಕೊಳ್ಳುತ್ತಿರುವೆವೆನ್ದುಮರು ಮರು ಯೋಚಿಸುವ ಕಾಲ ಈಗ ಬಂದಿದೆ.

ಮೂಲ:ಸೈನ್ಸ್ ಫಾರ್ ಸೋಶಿಯಲ್ ಚೇಂಜ್

ಕೊನೆಯ ಮಾರ್ಪಾಟು : 7/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate