ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಲಂಬಾಣಿಗರ ಮದುವೇ ಶಾಸ್ತ್ರ

ಲಂಬಾಣಿಗರ (ಬಂಜಾರರ) ಮದುವೇ ಶಾಸ್ತ್ರ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಲಂಬಾಣಿಗಳು ತಿಂಗಳಾನುಗಟ್ಟಲೆ ಮದುವೆ ಮಾಡುತ್ತಿದ್ದರಂತೆ. ಕಾಲಕ್ರಮೇಣ ಅದು ೭ ದಿನಕ್ಕೆ ೫ ದಿನಕ್ಕೆ ಈಗ ಮೂರು ದಿನಕ್ಕೆ ವಧು ವರರು ಒಂದೇ ಊರಿನವರಾದರೆ ಎರಡು ದಿನದಲ್ಲಿ ಮದುವೆ ಮಾಡಿಸುತ್ತಾರೆ. ಮದುವೆಗೆ ನಿಶ್ಚಿತಾರ್ಥವಾದ ನಂತರ ಅರಿಸಿನ ನೀರನ್ನು ಅವರವರ ಅನುಕೂಲಕ್ಕೆ ತಕ್ಕ ದಿನಗಳನ್ನು ಗುರುತಿಸುತ್ತಾರೆ. ಮದುವೆಯ ಎರಡು ದಿನದ ಹಿಂದೆ ವರನ ಸ್ವಗೃಹದಲ್ಲಿ ಸ್ಥಂಭ ಮುಹೂರ್ತ ಹಾಕುತ್ತಾರೆ. ಇದನ್ನು ಕಳಸ್ ಹುಬ್ಬರ ಕಾಡೇರೋ ಶಾಸ್ತ್ರ ಎಂದು ಹೇಳುತ್ತಾರೆ. ಇದಕ್ಕಾಗಿ ಮೂರು ಅಥವಾ ಐದು ಜನರು ಮಡಿಯುಟ್ಟು ಕಾಡಿಗೆ ಹೋಗಿ ಅಳಗನ ಮರವನ್ನು ತಂದು ಮನೆಯ ಚಪ್ಪರದ ಬಾಗಿಲ ಮುಂದೆ ಗುಂಡಿ ತೋಡಿ ಒಂದು ರೂಪಾಯಿ ಹಾಕಿ ಗುಂಡಿಗೆ ಪೂಜೆ ಮಾಡಿ ಮರದ ತುದಿಗೆ ಗಣ್ಣೋರ್ ಅಂದರೆ ದಾರಗಳಿಂದ ನೇಯ್ದ  ಸಿಮ್ಮಿ  ಮತ್ತು ಕವಡೆ ಬೆಳ್ಳಿಕಾಸುಗಳಿಂದ ವಿವಿಧ ರೀತಿಯ ಎಮರಾಯಿಡ್ ಮಾಡಿದ ವಿಶೇಷ ಸಿಮ್ಮಿಸಹಿತ ಕರವಸ್ತ್ರ ಇತ್ತು ಅದರ ಮೇಲೆ ಒಂದು ಲೋಟ ಎಲೆ ಅಡಿಕೆ ೧ ರೂಪಾಯಿ ಹಾಕಿ ಅದರ ಮೇಲೊಂದು ಲಂಬಾಣಿಗಳು ಬಳಸುವ ಗಣ್ಣೋ ಬಟ್ಟೆಯಿಂದ ಅಲಂಕರಿಸಿ ಕಳಸದ ರೀತಿ ಮಾಡಿ ಆ ಕಂಬವನ್ನು ನೆಡುತ್ತಾರೆ.

ಕಂಬವನ್ನು ನಿಲ್ಲಿಸಿದಾಗ ಮುಂದೆ ಅರ್ಧ ಭಾಗ ಚಪ್ಪರದಿಂದ ಮೇಲಕ್ಕೆ ಬಂದಿರುತ್ತದೆ. ನಂತರ ಹಣ್ಣು ಕಾಯಿ ಕರ್ಪೂರ ಗಂಧದ ಕಡ್ಡಿಯಿಂದ ಪೂಜಿಸುತ್ತಾರೆ. ಲಂಬಾಣಿಗರ ಶಾಸ್ತ್ರಕ್ಕೆ ಇದೊಂದು ಹೊಸ ಸೇರ್ಪಡೆ. ಹೊಸ ಸೇರ್ಪಡೆಯಾಗಿ ಇನ್ನು ಕೆಲವರು ೫ ತರದ ಧಾನ್ಯಗಳು & ಕಳಸದ ಮೇಲೆ ತೆಂಗಿನಕಾಯಿಯ ಜುಟ್ಟು ಮೇಲೆ ಬರುವಂತೆ ಅದರ ಕೆಳಗೆ ಎಲೆ ಅಡಿಕೆ ಮಡಗಿ ಕಟ್ಟುತ್ತಾರೆ. ಹಾಗೂ ನೆಟ್ಟ ಮರದ ಬುಡಕ್ಕೆ ಹಾಲೆರೆಯುತ್ತಾರೆಂದೂ ಸಹ ಹೇಳುತ್ತಾರೆ. ಹಾಗೂ ಇದೇ ಸಂದರ್ಭದಲ್ಲಿ ಕೊಂಡಾಮುಡುಗು ಮರ ಅಂದರೆ ಅಸವಾರ ಮರವನ್ನು ಸಹ ತಂದು ಮುತ್ತೈದೆಯರು ಪೂಜಿಸುತ್ತಾರೆಂದೂ ಸಹ ಹೇಳುತ್ತಾರೆ.  ಈ ಸಂದರ್ಭದಲ್ಲಿಯೇ ಮನೆ ಮುಂದೆ ಚಪ್ಪರ ಹಾಕುತ್ತಾರೆ.

ಈ ಮೇಲಿನ ಶಾಸ್ತ್ರದ ನಂತರ ವೇಕ್ ಕಳಪೇನ್ ಡಬಕಾರ್ ದೇರೋ ಎಂಬ ಶಾಸ್ತ್ರ ಮಾಡಲಾಗುತ್ತದೆ.

ವೇಕ್ ಕಳಪೇರೋ ಎಂದರೆ ಮದುವೆಯಾಗುವ ಗಂಡನ ಕಡೇಯವರ ದಾಯಾದಿಯಲ್ಲಿ ಮಕ್ಕಳುಟ್ಟಿದರೆ ಅವರಿಗೆ ಶಾಸ್ತ್ರೋಕ್ತವಾಗಿ (ತೀಟ್ ಕಾಡೇರೋ ) ಶುದ್ಧೀಕರಿಸಿ ನಂತರ ಡಬಕಾರ್ ದೇರೋ  ಎಂಬ ಶಾಸ್ತ್ರ ಮಾಡುತ್ತಾರೆ. ಚಪ್ಪರದ ಮುಂದೆ ಮೂರು ಕಲ್ಲಿನ ಒಲೆಯನ್ನು ಹಚ್ಚಿ ನುಚ್ಚಕ್ಕಿಯಿಂದ ಜಡಿದ ಬೆಲ್ಲದ ಸಿಹಿ ತಿಂಡಿಯನ್ನು ಮಾಡಿ ಕಂಚಿನ ತಟ್ಟೆಯಲ್ಲಿ ತುಪ್ಪದೊಂದಿಗೆ ಐದು ಬೆರಳಿನಿಂದ ತಮ್ಮ ಸತ್ತ ದಾಯಾದಿಗಳ ಹೆಸರನ್ನು ಹೇಳಿ ಅದನ್ನು ಸ್ವೀಕರಿಸಲು ಬೇಡಿಕೊಂಡು ಹುಂಡೆ ಮಾಡಿ ಬೆಂಕಿ ಕೆಂಡದ ಮೇಲೆ ಹಾಕಿ ತುಪ್ಪ ಸುರಿಯುವಂತದ್ದು. ಹಾಗೂ ಹಣ್ಣುಕಾಯಿ ಕರ್ಪೂರದಿಂದ ಪೂಜಿಸಿ ಕೈ ಮುಗಿದು ವಿನಂತಿಸುತ್ತಾರೆ.

ನಂತರ ಗೊಳಸಿಯಾಯರ್  ದಾಗ್ ಎಂಬ ಶಾಸ್ತ್ರ ಮಾಡಲಾಗುತ್ತದೆ.

ಇದನ್ನು ವರನಿಗೆ ಪವಿತ್ರಗೊಳಿಸಲಿಕ್ಕಾಗಿ ಮಾಡುವ ಶಾಸ್ತ್ರವಾಗಿದೆ. ಹಾಗೂ ಮತ್ತೊಬ್ಬ ಸಹೋದರನಿದ್ದರೆ ಮದುವೆಯಾಗದಿರುವನ ನೆನಪು ಮದುವೆಯಾದವನಿಗೆ ಇರಲಿ ಎಂಬುದಕ್ಕೆ ಅಂದು ಅವನನ್ನು ಬ್ರಹ್ಮಚರ್ಯದಿಂದ ಸಂಸಾರಿಕನಾಗಲು ಗ್ರೀನ್ ಸಿಗ್ನಲ್ ನೀಡುವುದಾಗಿದೆ.

ಚಿನ್ನದ ಸೂಜಿಯನ್ನು ದೀಪದಲ್ಲಿ ಕಾಯಿಸಿ ಬಿಸಿ ಬಿಸಿಯಾಗಿರುವಂತೆ ವರನ ತೋಳಿಗೆ ಏಳು ಭಾರಿ ಈ ಕೆಳಗಿನ  ಶಾಸ್ತ್ರೋಕ್ತ ಶ್ಲೋಕದೊಂದಿಗೆ ಬರೆ ನೀಡುತ್ತಾರೆ. ತಮ್ಮನಿದ್ದರೆ ತಮ್ಮನಿಗೂ ಬರೆ ಎಳೆಯುತ್ತಾರೆ. ಇಲ್ಲದಿದ್ದ ಪಕ್ಷದಲ್ಲಿ ಚೀಲಕ್ಕೆ (ಓಕ್ರಾಗೆ) ಬರೆ ಹಾಕುತ್ತಾರೆ.

ಗೊಳಸಾಯಿಬಾವಾರ್ ದಾಗ್

ಕೋಳಿ ಆವ ಕೋಳಿ ಜಾವ

ದೋಳೋ ಘೋಡೋ ಹಾಸ್ಲೋ

ಊಪ್ಪರ್ ಬೇಟೋ ಪಾಲ್ತಿಯಾ

ಸೋನೇರ್ ಮೂಟ್

ಥರ್ ವಾರೇರೋ ಥಾರ್ (ಪೂಟ್)

ಗೊರಸಾಯಿ ಬಾವಾರೋ ಸದಾ ಸದಾ.".....

ನೋಟ್ ಈಗ ಚಿನ್ನದ ಸೂಜಿ ಇರಲಿ ಬೆಳ್ಳಿಯೂ ದುಬಾರಿ ಯಾಗಿರುವುದರಿಂದ ಈಗ ಕಬ್ಬಿಣದ ಸೂಜಿಯಿಂದ ಶಾಸ್ತ್ರ ನಡೆಯುತ್ತದೆ. ಚರ್ಮದಲ್ಲಿ ಬರೆ ಬರುವಂತೆ ಸುಡಬೇಕು ಆದರೆ ಅಷ್ಟು ಧೈರ್ಯವಿಲ್ಲದ ಈಗಿನವರೆಗೆ ಬರೆಬಂದಿದೆನ್ನುತ್ತಾರೆ ಅಷ್ಟೆ. ಬರೆ ಹಾಕಿಸಿಕೊಂಡವರಿಗೆ ಚೂರ್ಮೇರ್ ಏಳು ಹುಂಡೆ ಅಂದರೆ ಅಕ್ಕಿರೊಟ್ಟಿ ಮತ್ತು ಬೆಲ್ಲದ ಮಿಶ್ರಣದ ಹುಂಡೆಯನ್ನು ಒಮ್ಮೆ ಶ್ಲೋಕ ಹೇಳಿದಾಗ ಒಂದು ಉಂಡೆಯಂತೆ ನೀಡುತ್ತಾರೆ. ಮೇಲಿನ ಶಾಸ್ತ್ರ ಮುಗಿದ ಮೇಲೆ ಬಂದವರಿಗೆಲ್ಲಾ ಊಟ ಬಡಿಸಿ ನಂತರ ನಿದ್ರೇಗೆ ಹೋಗುತ್ತಾರೆ.

ಮಾರನೆ ದಿನದ ಶಾಸ್ತ್ರ ಮುಂದಿನ ದಿನದ ಧಾರೆಗಾಗಿ ಗಂಡನ ಮನೆಯಲ್ಲಿ ತಮ್ಮ ಕಡೆಯವರಿಗೆ ಊಟೋಪಚಾರ. ನೀಡಿ ಮೊಯ್ ಪಡೆಯುವ ಕಾರ್ಯಕ್ರಮವಿರುತ್ತದೆ. ಇದನ್ನು ಟೇಳೋ ಎಂದು ಕರೆಯುವರು. ಬೆಳಗ್ಗೆ ಎದ್ದು ವರನು ಸ್ನಾನ ಮಾಡಿ ತಂದೆ ತಾಯಿ ಅಜ್ಜಿ ತಾತ & ಹಿರಿಯರ ಪಾದಗಳಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ಮನೆಯೊಳಗೆ ಹೋಗುವಾಗ ವರನ ಮಾಡುವೆ ಬಟ್ಟೆಗಳನ್ನು ಅಲ್ಲಿನ ನಾಯ್ಕ, ಡಾವ್ ಕಾರಬಾರಿ & ಸಭೆಗೆ ತಿಳಿಸಲು ವೆಚ್ಚಂ -ಬಚ್ಚಂ ತಮಾರೆ ಎಂದು ಹೇಳಿ ಅದನ್ನು ಮದುವೆ ಗಂಡಿಗೆ ಉಡಿಸುತ್ತಾರೆ. ಮದುವೇ ಗಂಡು ಕಚ್ಚೆ ಪಂಚೆ, ಪೇಟ, ಶರ್ಟ್ & ಶಲ್ಯಾದೊಂದಿಗೆ ಸಿಂಗರಿಸಿಕೊಂಡು ದಿಷ್ಟಿಯಾಗದಿರಲೆಂದು ಗಲ್ಲದ ಪಕ್ಕ ಒಂದು ದಿಷ್ಟಿ ಬೊಟ್ಟು ಇಟ್ಟು ಕೈಯಲ್ಲೊಂದು ಸಿಂಗರಿಸಿದ ವರನ (ಲಾಲ್) ದಂಡ, ಮತ್ತು ಕಠಾರಿಯನ್ನು ನೀಡಿ ಜೊತೆಯಲ್ಲಿ ಬಾವ ಬಾವಂದಿರನ್ನು ಲಾರಿಯಾ ಅಂದರೆ ಜೊತೆಗಾರನಾಗಿ ನಿಲ್ಲಿಸಿ ಹೆಂಗಳೆಯರು ಹಾಡುತ್ತಾ ಮದುವೆಗಂಡಿನ ಗುಣದಾನ ಹಾಗೂ ಗೌರವದೊಂದಿಗೆ ಸಾಡಿತಾಣೇರ್ ಕಾರ್ಯದಲ್ಲಿ ಅವನನ್ನು ಹೊರತರಲು ತಲೆಯ ಮೇಲೆ ಸೀರೆಯನ್ನು ಹಿಡಿದು ನಿಧಾನವಾಗಿ ಹೊರಬರ ಮಾಡಿಕೊಳ್ಳುವರು.

ಅವರಿಗಾಗಿ ಹಾಸಿರುವ ಚಾಪೆಯ ಮೇಲೆ ನಿಂತಾಗ ಒಂದು ಲೋಟ ನೀರನ್ನು ಹೆಂಗಸರು ತಕ್ಕೋಳಿ ಎಂದು ಹೇಳಿದಾಗ ಅಲ್ಲಿದ್ದವರು ಜಲ್ ಲೋ ಎನ್ನುವರು (ನೀರು ತೆಗೆದು ಕೋ ಎಂದು ) ಆಗ ಲಾರಿಯ ನೀರನ್ನು ತೆಗೆದುಕೊಂಡು ಒಂದೆರಡು ಗುಟುಕು ಕುಡಿದು ನಂತರ ವರನಿಗೆ ನೀಡುವನು. ವರನೂ ಕುಡಿದ ನಂತರ ಹೆಂಗಳೆಯರು ಕುಳಿತು ಕೊಳ್ಳಿ ಎಂದು ಹೇಳುವರು. ಹೀಗೆ ಈ ಶಾಸ್ತ್ರ ಮುಗಿದ ನಂತರ ಠೇಳೋ ಊಟೋಪಚಾರದ ಕಾರ್ಯಕ್ರಮ ನಡೆಯುವ ಮೊದಲು ಊಟದ ಹಂಡೆಯೊಂದನ್ನು ಊರ ನಾಯ್ಕನ ಮುಂದೆ ತಂದು ಇಡುವಾಗ ಊರನಾಯ್ಕ ಈ ಕೆಳಗಿನ ಅರ್ಥಾನಿಯನ್ನು ಹೇಳುತ್ತಾನೆ.

ಸಕಲ್ ಕಚೇರಿ ಪಂಚ್ ಪಂಚಾಯ್ತೇರಾ

ರಾಜ ಬೋಜಾರಿ ಸಭಾ

ಪಂಚ್ಹೇರೋ ಲಾಕ್,

ಅನಪಂಚ್ಹೇರೋ ಸವಾಲಕ್

ಖಡ ಕಡಿಯಾವಾಳೋ ಟೋಖನೊ

ಸೀಜೋ  ಕೊಡಚಿ ಪಾಡೀ ವಾಟ್!

ಬೇಟೋ ಮಳಾಯರೋ ಥಾಟ್

ಸುತ್ತೇರೋ ಓಕ್ರ ಭರ್ತೇರ್ ಥಾಳಿ

ಭರಗಡ್ಡಾರಿರ್ ರೇನ್,

ಮೊಳಾ ಘೋರೇರ್ ಛಾಲ್

ಬಾಯೀನ್  ಚಕಾ ಅನ್ಲೂನಿ)

ಎಂದು ನಾಯ್ಕ ಹೇಳಿದಾಗ ಎಲ್ಲರೂ ಲ ಎನ್ನುವರು ನಾಯ್ಕ ಆದವರು ಮೊದಲು ತಿಂದು ನಂತರ ಎಲ್ಲರಿಗೂ ಊಟ ಬಡಿಸುತ್ತಿದ್ದರಂತೆ. ನಂತರ ಮೊಯಿ ತೆಗೆದುಕೊಂಡು ವರನು ಅಥವಾ ಲಾರಿಯಾ ಆದವರು ಎಲೆ ಅಡಿಕೆ ಕೈಯಲ್ಲಿ ಕೊಟ್ಟು ಕಳುಹಿಸುತ್ತಾರೆ. ಲಾರಿಯಾ ಆದವನು ಅಲ್ಲಿರುವವರಿಗೆ ಎಲೆ ಅಡಿಕೆ ಕೊಡುವಾಗ ಅವನು ಇರುವ ಉದ್ದ ತುಂಡ,  ದಪ್ಪ ಹಾಗೂ ಅವನ ವಕ್ರತೆ ಬಗ್ಗೆ ಹೆಂಗಳೆಯರು ಹಾಡು ಹೇಳಿ ಅವರು ಎಲೆ ಅಡಿಕೆ ತೆಗೆದುಕೊಳ್ಳುವವರಿಗೂ ಅವನನ್ನು ಬಗ್ಗಿಸಿರುತ್ತಾರೆ.ಇದು ಅಲ್ಲಿ ವಿನೋದದಲ್ಲೂ ಗೌರವಿಸುವುದನ್ನು ನೋಡುತ್ತೇವೆ.

ನೋಟ್ : (ಮೇಲಿನ ಅರ್ಥಾನಿಯನ್ನು ಇತ್ತೀಚಿಗೆ ಯಾರು ಹೇಳುತ್ತಿರುವಂತೆ ಕಾಣುತ್ತಿಲ್ಲ. ಉಳಿದ ಶಾಸ್ತ್ರಗಳು ನಡೆಯುತ್ತದೆ. ಹೀಗೆ ಠೇಳೋ ಕಾರ್ಯಕ್ರಮದ ನಂತರ ಹೆಣ್ಣಿನ ಮನೆ ದೂರ ಇದ್ದರೆ ಬೇಗವಾಗಿ ತಾವು ಮಾಡಿರುವ ಲಾರಿ ಬಸ್ಸು ಹತ್ತಿ ತಮ್ಮ ನೆಂಟರಿಷ್ಟರು & ಗ್ರಾಮಸ್ತರ ಒಡಗೂಡಿ ಪ್ರಯಾಣ ಬೆಳೆಸುತ್ತಾರೆ.

ಮದುವೆ ಅದೇ ಊರಿನಲ್ಲಿದ್ದರೆ ಸಂಜೆ ೫ ಆರು ಗಂಟೆಗೆ ವಧುವಿನ ಊರಿನ ಚಾವಡಿ ಮನೆ ಅಥವಾ ಸೇವಾ ಮೀಠೊ  ಭೂಕ್ಯನ  ಗುಡಿಯಲ್ಲಿ ಆಗಲೇ ಚಾಪೆ ಹಾಸಿ ಬೆಳಕಿನ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿ ವಧುವಿನ ಕಡೆಯವರು ನೀರಿನ ಲೋಟ ನೀಡಿ ಸ್ವಾಗತಿಸಿ ಅಲ್ಲಿ ಕೂರಿಸುತ್ತಾರೆ. ವರನು ಎದ್ದು ನಿಂತು ಗೌರವ ಕೊಟ್ಟು ಸೌಜನ್ಯತೆಯಿಂದ ನಡೆದು ಕೊಳ್ಳುವರು. ಬಂದಂತಹವರಿಗೆ ಊಟೋಪಚಾರ ಮಾಡಿಸಿ ಹೆಣ್ಣಿನ ಕಡೆಯವರು ವರನಿಗೆ & ಲಾರಿಯಾನಿಗೆ ಊಟವನ್ನು ಅಲ್ಲೇ ತಂದು ದೃಷ್ಟಿಯಾಗದಿರಲೆಂದು ಒಂದು ಶ್ಯಾಲ್ ಅಥವಾ ಬೆಸೀಟ್ ಮೇಲೆ ಹಾಕಿ ಇವರಿಬ್ಬರಿಗೂ ಗುಪ್ತವಾಗಿ ಊಟ ಬಡಿಸುತ್ತಾರೆ. ಇವರ ಊಟೋಪಚಾರ ನಡೆಯುತ್ತಿದ್ದಂತೆ ವಧುವಿನ ಊರಿನ ನಾಯಕನ ಹಟ್ಟಿಗೆ ವರನ ಕಡೆಯ ಐವರು ಹೋಗಿ ಗ್ರಾಮದಲ್ಲಿ ಮದುವೆ  ಮಾಡಿಕೊಡಲು ಖರ್ಚಿಗೆ ೧೦೦ ಇನ್ನೊರೋ ನೀಡಿ ಜೊತೆಗೆ ಐದು ಬಾಟಲಿ ಸರಾಪನ್ನು ಸಹ ನೀಡುವರು. ಗೌರವದಿಂದ ಕರೆದ ಇವರಿಗೆ ನಾಯಕನ ಮನೇಲ್ಲಿಯೊ ಊಟೋಪಚಾರ ಮಾಡಿಸಲಾಗುವುದು. ಆದರೆ ಚಪ್ಪರದಲ್ಲಿಯೇ ಊಟ ತಯಾರಿಸಿರುವುದರಿಂದ ಕಾಫಿ, ಟೀ ನಿಂದ ಅವರಿಗೂ ತೃಪ್ತಿ ಪಡಿಸಿ ನಂತರ ನಾಯ್ಕ, ಡಾವ್ ಕಾರ್ಬಾರಿ  ಡಾಡಿ, ಡಾಲ್ಯ & ಗ್ರಾಮದವರೊಂದಿಗೆ ಮದುವೆ ಚಪ್ಪರಕ್ಕೆ ಬಂದು ಮದುವೇ ಶಾಸ್ತ್ರಕ್ಕೆ ಚಾಲನೆ ನೀಡುತ್ತಾರೆ.

ವಧುವಿನ ಚಪ್ಪರದಡಿಯಲ್ಲಿ ನಡೆಯುವ ಶಾಸ್ತ್ರ

ನಿಶ್ಚಿತಾರ್ಥ ಮೊದಲೇ ಆಗದಿದ್ದರೆ ಅಲ್ಲಿಯೇ ಮಾತಾಡುತ್ತಾರೆ. ನಿಶ್ಚಿತಾರ್ಥದ ವಿವರವನ್ನು ಪು. ಸಂ.೭೪ ರಲ್ಲಿ ನೀಡಿದೆ.

ಕೋತಲಿ ದೊಂಡೇರೋ

ಹೆಣ್ಣಿನ ಮನೇಯವರು ಹೆಣ್ಣಿನ ತಾಯಿ ನಾಯಕನ ಹೆಂಡತಿ ಮತ್ತಿತರು ವರನಿರುವಲ್ಲಿಗೆ ಹೋಗಿ ಮೊಯಿ ಸಕ್ಕರೆ & ಅಕ್ಕಿನುಚ್ಚಿನ ಮಿಶ್ರಣ ಹಂಚಿ ಅದರಲ್ಲಿರುವ ೧ ರೂಪಾಯಿಯನ್ನು ಊರನಾಯ್ಕನಿಗೆ ತಲುಪಿಸಿ ಮೊಯ್ಯನ್ನು ಕೆಲವರು ಖುಷಿಗಾಗಿ ಇನ್ನೊಬ್ಬರ ಕೆನ್ನೆ  ಮುಖಕ್ಕೆ ಹಚ್ಚಿ ತಮಾಸೆ ಮಾಡುತ್ತಾರೆ. ರಾತ್ರಿ ಕತ್ತಲಲ್ಲಿ ಮುಖ ಬೆಳ್ಳಗೆ ಕಾಣಲಿ ಎಂದಿರಬೇಕು. ನಂತರ ಹೆಂಗಳೆಯರು ಸ್ವಾಗತದ ಹಾಡಿನೊಂದಿಗೆ ವರನನ್ನು ಚಪ್ಪರಕ್ಕೆ ಕರೆ ತರುತ್ತಾರೆ. ಅಲ್ಲಿ ಚಾಪೆ ಹಾಕಿ ನೀರು ನೀಡಿ ಕೂರಿಸುತ್ತಾರೆ. ನಂತರದ ಶಾಸ್ತ್ರ.

ಟೀಕೋ ದೇರ್ ಶಾಸ್ತ್ರ

ಒಂದು ತಟ್ಟೆಯಲ್ಲಿ ಹೊಸ ಬಿಳಿ ಟವಾಲ್ ಹಾಗೂ ತಾಳಿ ಇಡುವ ಸಂಪ್ರದಾಯವಿರುತ್ತದೆ. ಸಾಂಪ್ರದಾಯಿಕ ಉಡುಪು ಇದ್ದರೆ ಕಿವಿಯ ಪಕ್ಕದಲ್ಲಿ ಕೂದಲಿಗೆ ಅಲಂಕರಿಸಿರುವ ಗೆಜ್ಜೆಯುಳ್ಳ ಗೊಬ್ಬಿಯನ್ನು & ಕತ್ತಿಗೆ ಹಾಕುವ ಬೆಳ್ಳಿ ಕಾಸಿನ ಸರವನ್ನು ಅಂದರೆ ಚೋಟಲಾ  ಚವಳನ್ನು ಇಡುತ್ತಿದ್ದರು. ಗಂಧ ಇಲ್ಲವೆ ಅರಿಸಿನದ ತಿಲಕವನ್ನು ವಧುವಿನ ತಮ್ಮ ಅಥವಾ ಅಣ್ಣನಾದವನು ಪಂಚೆ, ಪೇಟ ಕಟ್ಟಿಕೊಂಡು ವಧುವಿಗೆ ತಿಲಕವನ್ನು ಇಡಲು ಹೋದಾಗ ದುಃಖವಾದಾಗ ಕೊರಳು ಹಿಡಿದು ಆಳುತ್ತಾಳೆ ಅಲ್ಲಿದ್ದವರು ಸಮಾಧಾನ ಪಡಿಸಿ ತಿಲಕವನ್ನು ಸಹೋದರನ ಮಧ್ಯದ ಬೆರಳಿನಿಂದ ವಧುವಿನ ಹಣೆಗೆ ಇಡಿಸುತ್ತಾರೆ. ನಂತರ ವರನಿಗೆ ತಿಲಕವನ್ನಿಡಿಸುತ್ತಾರೆ.

ಡಬಕಾರ್ ದೇರೋ

ಗಂಡಿನ ಮನೆಯವರ ಮನೆಯಲ್ಲಿ ಈ ಶಾಸ್ತ್ರ ಮಾಡಿದಂತೆ ಹೆಣ್ಣಿನ ಮನೆಯವರೂ ಸಹ ಡಬಕಾರ್ ಶಾಸ್ತ್ರವನ್ನು ಮಾಡುತ್ತಾರೆ. ಪು.ಸಂ.೫೨ರ ಕೊನೆ ಪ್ಯಾರದಲ್ಲಿ ವಿವರಿಸಿದೆ.

ಹಾಂಡೀ ಬಾಂದೇರ್

ನಾಲ್ಕು ಮೂಲೆಗೆ ಹಸಿಮಡಿಕೆ ಕಟ್ಟುವುದು. ಒಂದೊಂದು ಕಡೆಗೆ ೫/ ೭ ಮಡಿಕೆಗಳನ್ನು ಅವುಗಳ ಗಾತ್ರ ಕೆಳಗಿನಿಂದ ಮೇಲಕ್ಕೆ ಇಳಿಕೆ ಕ್ರಮದಲ್ಲಿದ್ದು ಮೇಲೆ ಕಳಸದ ರೀತಿಯ ಮಣ್ಣಿನ ಆಕಾರದ ಮಡಿಕೆ ಇದನ್ನು ಬೋಳಾ ಎಂದು ಕರೆಯುತ್ತಾರೆ. ಮಡಿಕೆಯನ್ನು ಹಾಂಡಿ ಎನ್ನುತ್ತಾರೆ. ಮಡಕೆಯ ಕೆಳಗೆ ಮಣ್ಣಲ್ಲಿ ಒಂದೆರಡು ರೂಪಾಯಿ ಹಾಕಿ ಎಕ್ಕಡ ಎಲೆ ಕಡ್ಡಿಯಿಂದ ಮಡಿಕೆಗಳನ್ನು ಬಳಸಿ ಕಟ್ಟುತ್ತಾರೆ. ಹೀಗೆ ನಾಲ್ಕು ಮೂಲೆಗೂ ಕಟ್ಟಿದ ನಂತರ ಶಾಸ್ತ್ರಗಳು ಪ್ರಾರಂಭ.

ಈ ಮಡಿಕೆಗಳನ್ನು & ಶಾಸ್ತ್ರಕ್ಕೆ ಬೇಕಾದ ಉಳಿದ ಮಡಿಕೆ ಕುಡಿಕೆಗಳನ್ನು ವರನೆ ತರಬೇಕಾಗುತ್ತದೆ. ಹಾಗೂ ಇದನ್ನು ಕಟ್ಟುವವರು ವಧುವಿನ ಕಡೆಯವರಾಗಿರುತ್ತಾರೆ. ಕಟ್ಟುವವರಿಗೆ ವರನ ಕಡೆಯವರು ಅವರ ಶಕ್ತಾನುಸಾರ ೧೦೦ ರಿಂದ ೧೦೦೦ ರೂ.ಗಳ ವರೆವಿಗೂ ಸಹ ನೀಡುತ್ತಾರೆ. ಮಡಿಕೆ ಕಟ್ಟಿದವರೇ ಮತ್ತೆ ಅವನ್ನು ಬಿಚ್ಚುವ ಕರ್ತವ್ಯ ಹೊಂದಿರುತ್ತಾರೆ. ಇದಕ್ಕಾಗಿ ಇಂತಿಷ್ಟೇ ಜನ ಸೇರಿ ಕಟ್ಟಬೇಕೆಂದಿದ್ದಲ್ಲ ಅವರ ಖುಷಿಗೆ ತಕ್ಕಷ್ಟು ಜನ ಸೇರಿಕೊಳ್ಳುತ್ತಾರೆ.

ಮಡಿಕೆಯ ಮಧ್ಯದಲ್ಲಿ ಎರಡು ಒಣಕೆಯನ್ನು ಪೂರ್ವ ಪಶ್ಚಿಮವಾಗಿ ನೆಟ್ಟು ಅದರ ಮೇಲೆ ಹಸಿಗೊಬ್ಬರವಿಟ್ಟು ಮಣ್ಣಿನ ದೀಪ ಹಚ್ಚುತ್ತಾರೆ. ಹಾಗೂ ಒಣಕೆ ಎರಡಕ್ಕೂ ಒಂದು ದಾರದಲ್ಲಿ ಕಡವೆ, ಮೆಂಡಲ್  ಮಗಾರೆ ಕಾಯಿ ಒಂದು ತಂತಿಸುರುಳಿಯಲ್ಲಿ ಪೋಣಿಸಿ ಎರಡು ಒನಕೆಗೂ ಪ್ರತ್ಯೇಕವಾಗಿ ಕಟ್ಟುತ್ತಾರೆ. ಹಾಗೂ ವರನ ಕಾಲೀಗೂ ಸಹ ಇದನ್ನು ಕಟ್ಟುತ್ತಾರೆ.

ಒನಕೆ ನೆಡುವಾಗ ಅದರ ಕೆಳಗೆ ೧ ರೂಪಾಯಿಯನ್ನು ಸಹ ಹಾಕಲಾಗುತ್ತದೆ.ಒನಕೆ ಮಧ್ಯದಲ್ಲಿ ಸ್ನಾನಕ್ಕಾಗಿ ಹಸಿ ನೀರಿನ ಮಡಿಕೆಯಲ್ಲಿ ನೀರು ತುಂಬಿಡುತ್ತಾರೆ. ಅದು ಕುಳು ಕುಳು ಎಂದು ತಣ್ಣೀರು ಚಳಿ ಹಿಡಿಯುವಂತಿರುತ್ತದೆ.

ಒಕ್ಕುಳಿ ದೋಗಾಯೇರ್ ಶಾಸ್ತ್ರ ತಿಪ್ಪೇಗುಂಡಿ ಅಗೆಯುವುದು

ಗಂಡು & ಹೆಣ್ಣಿಗೆ ಹೆಂಗಳೆಯರು ಹಾಡುತ್ತಾ ಅವರನ್ನು ತಿಪ್ಪೆಗುಂಡಿಗೆ ಕರೆದೊಯ್ದು ತಿಪ್ಪೆ ಆಗಿಸುತ್ತಾರೆ. ಆಗ ಕಾಲಿಗೊಂದಿಷ್ಟು ತಿಪ್ಪೆ ತಾಗಬೇಕಂತೆ ಅದಾದನಂತರ ಹಸಿಮದಿಕೆಯ ಮುಚ್ಚುಳದಲ್ಲಿ ಒಂದಿಷ್ಟು ಪೂರಿ, ಒಂದೊಂದು ರೂಪಾಯಿ ಹಾಕಿ ಅದರಲ್ಲಿರುವ ಹಣವನ್ನು ಇಳಿತೆಗೆದ ಮಕ್ಕಳಿಗೆ ಕೊಡುತ್ತಾರೆ. ಬೇರೆ ಬೇರೆ ಗೋತ್ರದ ಹೆಣ್ಣು & ಗಂಡು ಮಕ್ಕಳಿಂದ ಇಳಿ ತೆಗೆಸುತ್ತಾರೆ.

ನೋಟ್ಸ್ : ತಿಪ್ಪೆಯನ್ನು ಕಾಲಿಗೆ ತಾಗಿಸಲು ತಿಪ್ಪೆ ಗುಂಡಿಗಳಿಗೆ ಹೋಗುವುದಿಲ್ಲ. ಆದರೆ ತೊಪ್ಪೆಯನ್ನು ಚಪ್ಪರದಿಂದ ಸ್ವಲ್ಪ ದೂರದಲ್ಲಿಟ್ಟು ಅದನ್ನು ಅಗಿಸುತ್ತಾರೆ. ಗೊಬ್ಬರ ಲಕ್ಷ್ಮಿಯ ಸಂಕೇತ. ವ್ಯವಸಾಯಕ್ಕೆ ಪುಷ್ಟಿದಾಯಕ ಆಹಾರವಾಗಿರುವುದರಿಂದ ಇದರ ಕಾಯಕ ಮಾಡುವಂತೆಯೂ ಅಥವಾ ಇವರು ಎಥೇಚ್ಛವಾಗಿ ರಾಸುಗಳನ್ನು ಹೊಂದಿದ್ದು ಅವುಗಳ ಮೂಲಕ ವ್ಯಾಪಾರ ವಹಿವಾಟು ಮಾಡುತ್ತಿದ್ದುದರಿಂದ ಅವುಗಳ ಮಲಮೂತ್ರವನ್ನು ಶುದ್ಧಿಕರಿಸಲು ಆಗಿಸುವ ಕೆಲಸ ಮಾಡಿಸಿಸುತ್ತಾರೆಂದೆನಿಸುತ್ತದೆ.

ಮೇದಪಟ್ಟಿ ಗಸ್ಸೇರೋ ಅಂದರೆ, ಮೇನ್ದಿ ಹಚ್ಚುವ ಶಾಸ್ತ್ರ

ಮೆಂದಿ ಸೊಪ್ಪನ್ನು ಒಣಗಿಸಿ ರಾಗಿಹಿಟ್ಟಲ್ಲಿ ಕಲಿಸಿರುತ್ತಾರೆ. ಅದು ಪೌಡರನ  ರೀತಿ ಇದ್ದು ಅದನ್ನು ವಧುವಿಗೆ ಮೊದಲು ಏಳುಜನ ಹಚ್ಚುತ್ತಾರೆ. ನಂತರ ವರನಿಗೆ ಏಳು ಜನ ಹಚ್ಚಿದಾಗ ವಧು ವರರು ತಟ್ಟೆಂದು ಮೇಲೇಳುತ್ತಾರೆ. ಅವರಲ್ಲಿ ಯಾರು ಮೊದಲು ಎದ್ದರೋ ಅವರಿಗೆ ಹಾಗೂ ಕೊನೆಯಲ್ಲಿ ಎದ್ದವರಿಗೆ ಈ ಕೆಳಗಿನ ಹಾಡು ಹಾಡುತ್ತಾರೆ.

ಚೋರ ಜೀವಗೋ ಚೋರಿ ಹಾರಗಿ

ಕನ್ನಡ ಅರ್ಥ: ಹುಡುಗ ಗೆದ್ದ ಹುಡುಗಿ ಸೋತಳು

ಅಥವಾ

ಚೋರಿ ಜೀವಗಿ ಚೋರ ಹಾರಗೋ

ಅಂದರೆ ಹೆಣ್ಣು ಗೆದ್ದಳು ಗಂಡು ಸೋತನು ಎಂದು ಹಾಡುತ್ತಾ ವಿನೋದ  ಕೂಡುವುದು. ಎರಡು ಕಡೆಯವರಿಂದ ಮಾರಿ ಮಾರಿ ತಮ್ಮಗಳ ವಧುವರರ ಬಗ್ಗೆ ಗೆದ್ದವರು ಸೋತವರು ಎಂದು ಹೇಳುತ್ತಾ ಮುಂದಿನ ಕಾರ್ಯಕ್ರಮ ನಡೆಸುತ್ತಾರೆ.

ಸಿಳೋ ಪಾನೀರ್ ಉಂಗೋಳಿ

ಹೆಣ್ಣಿಗೆ ಮೆಹಂದಿಯನ್ನು ಈಗಾಗಲೇ ಭುಜ, ಕೈ, ಕೆನ್ನೆ, ಬೆನ್ನು, ಕಾಲಿಗೆಲ್ಲಾ ಹಚ್ಚಿರುತ್ತಾರೆ. ಅದಕ್ಕಾಗಿ ತಣ್ಣೀರಿನ ಸ್ನಾನವನ್ನು ಹೆಂಗಳೆಯರು ಅಲ್ಲೇ ಒಂದು ರಗ್ಗಿನಿಂದ ಅಥವಾ ಸೀರೆಯಿಂದ ಮರೆ ಮಾಡಿ ತಲೆಯಿಂದ  ನೀರುಯ್ಯುತ್ತಾರೆ. ಈಗ ಚಳಿ ತಡೆಯೋಕೆ ಆಗದ ಬೆಡಗಿಯರಿರುವುದರಿಂದ ಶಾಸ್ತ್ರಕ್ಕೆ ತಲೆ ಮೇಲೆ ನೀರು ಚಿಮುಕಿಸುತ್ತಾರೆ. ಅದಕ್ಕೂ ಹಾಡುಗಳಿವೆ. ವರನನ್ನು ಸ್ನಾನ ಮಾಡಿಸುವಾಗ ವರನನ್ನು ಕುರಿತು ಹಾಡುತ್ತಾರೆ.

ಹಾಡು:   ಹಾಂಡೀಸೋ ಪೇಟೇರೋ

ಕರ್ಮ ಕೋಟಿಯ

ತೋನ ಪಾನಿ ಕತ್ತಿ ರೇಡುರೇ ,

ಮಿಚ್ಚು ತಾಟಿಯಾ

ಮೊದಲು ವಧುವಿಗೆ ಒನಕೆಯ ಮಧ್ಯದಲ್ಲಿ ಕೂರಿಸಿ ಸ್ನಾನವಾದ ಮೇಲೆ ಅವಳ ಸುತ್ತ ನಾಲ್ಕು ಚಿಕ್ಕ ಕುಡಿಕೆ ಗೊಂಬೆಯನ್ನಿಟ್ಟು ಅದರಲ್ಲಿ ನೀರು ಎಲೆ ತೆಂಗಿನ ಕಾಯಿಟ್ಟು ಹಸಿದಾರದಿಂದ ಮಡಿಕೆಯ ಸುತ್ತ ಏಳು ಸುತ್ತು ಸುತ್ತಿ ನಂತರ ಕತ್ತಿನ ಭಾಗದಲ್ಲಿ ಸರಿಸಿ ಕಟ್ಟು ಬಿಗಿಯಾಗದಂತೆ ಉರಿ ಮಾಡಿ ಏಳು ಗಂಟನ್ನು ಹುಡುಗಿಯ ತಂದೆ, ತಾಯಿ, ಸಂಬಂಧಿಕರು ಹಾಕುತ್ತಾರೆ. ಹೀಗೆ ಏಳು ಗಂಟಿನ ದಾರವನ್ನು ಸರಳವಾಗಿ ಮತ್ತೆ ಚಿಕ್ಕು ಆಗದಂತೆ ಬಿಚ್ಚ ಬೇಕಾಗಿರುವುದರಿಂದ ಅದನ್ನು ಸಡಿಲವಾಗಿ ಕಟ್ಟಿಗೆ ಸುತ್ತಿರುತ್ತಾರೆ.

ಹಾಗೆಯೇ ಮತ್ತೆ ನಾಲ್ಕು ಚಿಕ್ಕ ಕುಡಿಕೆಗಳಲ್ಲಿ ಮೊದಲು ಮಾಡಿದಂತೆ ಬಲಗೈ ಮಧ್ಯ ಮಡಗಿಸಿ ಕಟ್ಟುತ್ತಾರೆ. ಕೈಗಳಿಗೂ ೭ ಗಂಟನ್ನು ಅವರ ಸಂಬಂಧಿಕರು ಗಂಟಾಕುತ್ತಾರೆ.

 

ಈ ಶಾಸ್ಥ್ರಕ್ಕಾಗಿ ಮಹಿಳೆಯರು ಹಾಡನ್ನು ಹಾಡುತ್ತಾರೆ. ಅದು ಈ ರೀತಿಯಾಗಿರುತ್ತದೆ. ಆಜಿ ರಾತೇರೋ ಬಾಂದೋ ಡೋರನೋ

ಬಾಪೇರೋ ಹಾತೋರೋ ಡೋರಣೆ .... ದಾದಿರೋ ಹಾತೇರೋ ಡೋರನೋ ಇತ್ಯಾದಿಯಾಗಿ ಹಾಡುತ್ತಾರೆ.

ನೋಟ್: ಇದೇ ರೀತಿಯಲ್ಲಿ ಗಂಡಿಗೂ ಕೂಡ ಸ್ನಾನ ಮಾಡಿಸಿ ಕತ್ತಿಗೆ & ಕೈಗಳಿಗೆ ಕಂಕಣ ಕಟ್ಟುತ್ತಾರೆ,  ಕಂಕಣ ಕಟ್ಟುವುದು ಈ ರೀತಿ  ಇರುತ್ತದೆ. ೪ ಮೂಲೆಯಲ್ಲೂ ಸಹ ಒಬ್ಬೊಬ್ಬರು ಕುಳಿತು ಎಡಗೈಯಲ್ಲಿ ಕುಡಿಕೆ ಕಳಸ ಹಿಡಿದು ಬಲಗೈಯಲ್ಲಿ ದಾರದ ಉಂಡೆಯನ್ನು ಒಳಗಿನಿಂದ ಪಡೆದು ಪಕ್ಕದವರಿಗೆ ನೀಡಬೇಕು. ಏಳು ಸುತ್ತು ಸಹ ಚಿಕ್ಕಾಗದೆ ಗಂಟು ಬೀಳದಿರುವಂತೆ ನೋಡಿಕೊಳ್ಳಬೇಕು. ಹಾಗೇನಾದರೂ ಚಿಕ್ಕು ಗಂಟು ಬಿದ್ದರೆ ಸಂಸಾರದಲ್ಲೂ ಸಹ ಚಿಕ್ಕಾಗಿರುತ್ತದೆಂದು ಭಾವಿಸಲಾಗಿದೆ.

ಅದಕ್ಕೆ ಎಚ್ಚರಿಕೆ ವಹಿಸುತ್ತಾರೆ. ನಾಲ್ಕು ಮೂಲೆಯಿಂದಲೂ ನಿನಗೆ ದೈವಿಕ ಶಕ್ತಿಯ ರಕ್ಷಣೆಯಿದ್ದು ನಿನ್ನ ಸಂಸಾರವನ್ನು ಸಪ್ತ ಸಾಗರದಾಚೆಗೆ ಕರೆದೊಯ್ದರೂ ಸಹ ಒಡಕಾಗಬಾರದೆಂದು ವಧುವರರನ್ನು ಅವರ ಸಂಬಂಧಿಕರ ಮೂಲಕ ಸಪ್ತ ಋಷಿಗಳು ಬಂದು ಆಶಿರ್ವಾದಿಸುವ ಗಂಟೆಂದು ಅರ್ಥ  ಹೇಳುತ್ತಾರೆ. ಅದಕ್ಕಾಗಿ ಒಂದೊಂದು ಗಂಟು ಹಾಕಿ ವಧು-ವರರನ್ನು ಆಶಿರ್ವಾದಿಸುತ್ತಾರೆ. ಇದಕ್ಕೆ ಸ್ವಲ್ಪ ಅರ್ಥ ಗೊತ್ತಿಲ್ಲದಿದ್ದರೂ ಸಹ ಶಾಸ್ತ್ರ ಮಾತ್ರ ಬಹಳ ಅಚ್ಚುಕಟ್ಟಾಗಿ ನಡೆಸುತ್ತಾರೆ, ಇದನ್ನು ನೀಲಕಂಠ ಶಾಸ್ತ್ರಿ ಅಂದು ತನ್ನ ಮಗಳನ್ನು ನೀಡಿ ಇಂತದೆಲ್ಲಾ ಶಾಸ್ತ್ರಗಳನ್ನು ಅಂದು ಮಾಡಿಸಿದರೆಂದೂ ಕತೆ ಹೇಳುತ್ತಾರೆ.

ಸಾಕಿಯಾ ಪುರಾಯೆರೋ ಶಾಸ್ತ್ರ ಬೆನ್ನಿನ ಮೇಲೆ ಸ್ವಸ್ಥ ಚಿನ್ಹೆ ಹಾಕುವುದು

ಲಂಬಾಣಿಗಳ ಚಿನ್ಹೆ ಸ್ವಸ್ತ ಆಗಿದೆ ಇದು ಭಾರತದ ಬ್ರಾಹ್ಮೀ ಪದ್ದತಿಯಲ್ಲೂ ಪವಿತ್ರವೆಂದೆನಿಸುತ್ತದೆ. ಸ್ನಾನದ ಜಾಗದಿಂದ ಹೊರನಡೆದು ನಿಗದಿಪಡಿಸಿದ ಚಾಪೆಯ ಮೇಲೆ ವರನ ಬಲಕ್ಕೆ ವಧು ಕುಳಿತಿರುತ್ತಾಳೆ. ಮೊದಲು ಹೆಣ್ಣಿನ ಬೆನ್ನಿನ ಮೇಲೆ ರವಕೆಗೆ ಅರಿಸಿನದಿಂದ ಸ್ವಸ್ಥ ಚಿನ್ಹೆಯನ್ನು ಹಾಕುತ್ತಾರೆ. ನಂತರ ಗಂಡಿನ ಬೆನ್ನಿನ ಬನಿಯನ್ ಮೇಲೆ ಹಾಕಿ ಮುಗಿಸಿದ ಕೂಡಲೇ ಥಟ್ ಎಂದು ಮೇಲೇಳುತ್ತಾರೆ. ಗೆದ್ದವರು ಸೋತವರಿಗಾಗಿ ಹಾಡು ತಮಾಷೆಗಳು ನಡೆಯುತ್ತದೆ.

ನೋಟ್ : (ಹಸಿ ಮಡಿಕೆಯ ಚಳಿ ಹಿಡಿಸುವ ನೀರಿನ ಸ್ನಾನದ ನಂತರ ಬಟ್ಟೆ ಬದಲಿಸುತ್ತಾರೆ. ಹೊಸಬಟ್ಟೆಯಲ್ಲಿ ಲಗ್ನ ಹಾಗೂ ಸಾಕಿಯಾ ಪುರಾಯೇರ್ ಕಾರ್ಯಕ್ರಮ ನಡೆಯುತ್ತದೆ. ಇದಕ್ಕಿರುವ ಕತೆ : ನೀಲಕಂಠ ಶಾಸ್ತ್ರಿಯವರು ಅವರ ಮಕ್ಕಳೆಂದು ಊರ ಕಡೆ ಬಂದಾಗ ತಿಳಿಯಲಿ ಎಂದು ಬೆನ್ನ ಮೇಲೆ ಸ್ವಸ್ಥ ಚಿನ್ಹೆ ಹಾಕಿ ಅದನ್ನು ಮೇಲ್ ಉಡುಪಿನಿಂದ ಮುಚ್ಚಿದರೆಂದು ತಮ್ಮ ಕತೆಯಲ್ಲಿ ಹೇಳುತ್ತಾರೆ.

ಕೋಲಿಯಾ ಕರಾಯೇರೋ ಶಾಸ್ತ್ರ

ಒನಕೆಯ ಮಧ್ಯೆ ತಾರಿಸಿ ಸುಮಾರು ಐದು ಇಂಚಿನ ವೃತ್ತ ಹಾಕಿ ಮಧ್ಯದಲ್ಲಿ ನಾಲ್ಕು ಭಾಗ ಮಾಡಿ ಗೆರೆಯ ತುದಿಯ ಬಿಂದು ಮತ್ತು ಮಧ್ಯದಲ್ಲಿ ಒಂದೊಂದು ರೂಪಾಯಿ ಇಟ್ಟು ಗೋಣಿಚೀಲ ಮಡಚಿ ಅದರ ಮೇಲಿಟ್ಟು ಚಾಪೆ ಹಾಕಿ ಗಂಡು ಉತ್ತರದಲ್ಲಿ ಹೆಣ್ಣು ದಕ್ಷಿಣದಲ್ಲಿರುವಂತೆ ಕೂರಿಸಿ ಗೋಣಿಚೀಲದ ಮೇಲೆ ತಟ್ಟೆ ಇಟ್ಟು ಅದರಲ್ಲಿ ಅಕ್ಕಿ ಹಿಟ್ಟು ಸಕ್ಕರೆ ತುಪ್ಪ ಹಾಕಿ ಅತ್ತೆಯಾದವಳು ಶಾಸ್ತ್ರ ನಡೆಸುತ್ತಾಳೆ. (ಹೆಣ್ಣಿನ ತಾಯಿ), ಒಂದು ಲೋಟ ನೀರು ಎಲೆ ಅಡಿಕೆ, ಸುಣ್ಣದೊಣ್ದಿಗೆ ಹೆಣ್ಣಿನ ಕೈ ಕೆಳಗೆ ಗಂಡಿನ ಕೈ ಹಿಡಿಸಿ, ಏಳು ಬಾರಿ ಸಿಹಿ ತಿಂಡಿಯ ಪುಡಿಯನ್ನು ಗಂಡಿಗೆ ತಿನ್ನಿಸಿ ನಂತರ ಗಂಡಿನ ಕೈ ಮೇಲೆ ಬರುವಂತೆ ಮಾಡಿ ಹೆಣ್ಣಿಗೆ ತಿನ್ನಿಸಿ. ನಂತರ ಗಂಡು ಹೆಣ್ಣು ಎಲೆ, ಅಡಿಕೆ ಸುಣ್ಣ ಹಾಕಿಕೊಂಡು ಜಗಿಯುತ್ತಾರೆ. ಮೊದಲು ಹೆಣ್ಣು ನೀರು ಕುಡಿದು ನೀರು ಕುಡಿದಂತೆ ನಾಟಕವಾಡಿ ನೀರಿನಲ್ಲಿಯೇ ಮುಕ್ಕಳಿಸಿಬಿಡುತ್ತಾಳೆ ಅಂದರೆ ಎಂಜಿಲು ಮಾಡುತ್ತಾಳೆ. ಅದನ್ನು ಗಂಡು ಕುಡಿದ ನಂತರ ಗಂಡು ಅತ್ತೆಗೆ ಎಲೆ ಅಡಿಕೆ ಮಡಗಿ ನಂತರ ತಟ್ಟೆಂದು ವಧು-ವರರು ಮೇಲೇಳುತ್ತಾರೆ. ಅಲ್ಲೂ ಸಹ ಗೆದ್ದವರು & ಸೋತವರ ಬಗ್ಗೆ ಹಾಡು ಹಾಸ್ಯ ವಿನೋದಗಳಿರುತ್ತದೆ.

ನೋಟ್ : ಹೆಣ್ಣು ಗಂಡು ಮೊದಲ ಬಾರಿಗೆ ಸಿಹಿ ಊಟ ಮಾಡಿ ಎಂಜಿಲಲ್ಲು ಸಹ ಭಾಗಿಗಳಾಗುತ್ತಾರೆ. ಈ ಕಾರ್ಯ ಮಾಡುವಾಗ ವಧು-ವರರನ್ನು ಶ್ಯಾಲ್ ಅಥವಾ ಬೆಸಿಟಿನಿಂದ ಮುಚ್ಚಿರುತ್ತಾರೆ. ಅತ್ತೆ ಒಂದು ಸಂದಿಯಲ್ಲಿ ಬಟ್ಟೆ ಸರಿಸಿ ಈ ಶಾಸ್ತ್ರದ ಕಾರ್ಯದಲ್ಲಿ ತೊಡಗಿರುತ್ತಾಳೆ.

ಸಾವ್ - ದಾನ್

ಇದೊಂದು ತಮಾಷೆ & ವಿನೋದಕ್ಕಾಗಿ ಮಾಡುವ ಶಾಸ್ಥ್ರವೆನ್ನುತ್ತಾರೆ. ವಧು ವರರಿಗೆ ರಗ್ಗು ಮುಚ್ಚಿ ಸಿಹಿ ತಿನ್ನಿಸುವ ಶಾಸ್ತ್ರ ನಡೆಯುತ್ತಿರುತ್ತದೆ, ಆ ಸಂಧರ್ಭದಲ್ಲಿ ಒಬ್ಬರು ಬ್ರಾಮ್ಹಣರ ರೀತಿ ಜನೀವಾರ ಹಾಕಿಕೊಂಡು ಹೋಮ ಕುಂಡ ರಚಿಸಿ ಬೆಂಕಿ ಹಾಕಿ ಅದರಲ್ಲಿ ಏಳು ಬಗೆಯ ಧಾನ್ಯ & ಒಳ್ಳೆಣ್ಣೆಯನ್ನು ಹಾಕುತ್ತಾ ಈ ಕೆಳಗಿನ ರೀತಿ ಹೇಳುತ್ತಾರಂತೆ.

ಛೊರೀನ್ ಛೋರಲಡಪಡೆ ಸಾವ್ - ದಾನ್

ಹಾಂಡಿ ಗುಡಿಯ ಲಡ ಪಡೆ ಸಾವ್ ದಾನ್

ಬೀರನ್ ಮಾಟಿ ಲಡ ಪಡೆ ಸಾವ್ ದಾನ್

ಅರ್ಥ: ಹುಡುಗ ಹುಡುಗಿಗೆ ಜಗಳ ಆಯಿತು. ಸಾವ್ ದಾನ್, ಮಡಿಕೆ ಕುಡಿಕೆ ಶಬ್ದವಾಗುತ್ತಿದ್ದರೆ, ಸಾವ್ ದಾನ್, ಗಂಡು-ಹೆಣ್ಣು ಜಗಳಾ ಆಡುತ್ತಾರೆ ಸಾವ್ ದಾನ್ ಎಂದು ಎಲ್ಲಾದಕ್ಕೂ ಸಮಾಧಾನವಿರಲೆಂದೂ ಅದೆಲ್ಲಾ ಸಂಸಾರದಲ್ಲಿ ಸಹಜ, ಸಾವಧಾನವಾಗಿರಲಿ ಎಂದು ಹೋಮಕುಂಡ ಮಾಡುವ ಶಾಸ್ತ್ರ ಮಾಡುತ್ತಿದ್ದರಂತೆ ಈಗ ಕೆಲವು ಕಡೆ ಅದು ನಿಂತು ಹೋಗಿದೆ,

ಫೇರಾ ಫ಼ೇರೇರೋ ಶಾಸ್ತ್ರ (ದೀಪದ ಒನಕೆ ಸುತ್ತುವುದು)

ಗಂಡು ಮುಂದೆ ಹೆಣ್ಣು ಹಿಂದೆ ನಿಂತು ಗಂಡಿನ ಬಲಗೈಯಲ್ಲಿ ಎಲೆ ಅಡಿಕೆ ಒಂದು ರೂಪಾಯಿಯೊಂದಿಗೆ ಹೆಣ್ಣಿನ ಹಸ್ತವನ್ನು ಗಟ್ಟಿಯಾಗಿ ಬಳಸಿ ಹಿಡಿದಿರಬೇಕು.ಗಂಡಿ ಮುಂದಾಗಿ ಹೆಣ್ಣು ಹಿಂಡಾಗಿ ನಡೆಯುತ್ತಾ ಮೊದಲಿಗೆ ಬಾಗಿಲ ಪಕ್ಕದ ಒನಕೆಯನ್ನು ಬಲದಿಂದ ೪ ಬಾರಿ ಸುತ್ತಿ ನಂತರ ಮತ್ತೊಂದು ಒನಕೆಯನ್ನು ೩ ಬಾರಿ ಸುತ್ತಿ ನಂತರ   ಮೊದಲನೇ ಒನಕೆಯ ಬಲಭಾಗದಿಂದ  ಸೀದಾ ಮನೆಯೊಳಗೇ ಕರೆದುಕೊಂಡು ಹೋಗುವನು. ಗಂಡಿಗೆ ರಭಸವಾಗಿ ಎಳೆದುಕೊಂಡು ಹೋಗು ಎಂದು ಹಿರಿಯರು ಕಿವಿ ಮಾತು ಹೇಳುತ್ತಾರೆ. ಒಳಗೆ ಹೋಗುವವರೆವಿಗೂ ಕೈಗಳನ್ನು ಬಿಡಬಾರದು.

ಮನೆಯಲ್ಲಿ ಹೋದ ಮೇಲೆ ಈಗ ಗಂಡ ಹೆಂಡತಿ ಸ್ವಲ್ಪ ಮಾತುಕತೆ ಆಡುತ್ತಾರೆ. ಅಲ್ಲಿಯವರೆವಿಗೂ ಇವರಿಗೆ ಮಾತನಾಡುವ ಅವಕಾಶವಿರುವುದಿಲ್ಲ.

ಈಗ ನಾಲ್ಕು ಭಾಗದಲ್ಲಿ ಕಟ್ಟಿರುವ ಎರಡು ಮೂಲೆಯ ಮಡಿಕೆ ಬಿಚ್ಚಿಡುತ್ತಾರೆ.

ಗಪ್ತೀರ್ ಉಂಗೋಳಿ

ಹುಡುಗಿಗೆ ಮತ್ತೆ ಸ್ನಾನ ಮಾಡಿಸಿ ಅವಳ ಕೂದಲನ್ನು ಚನ್ನಾಗಿ ತುಪ್ಪ ಹಚ್ಚಿ ಬಾಚಿ, ವಧುವಿನ ನೆತ್ತಿಯ ಜುಟ್ಟನ್ನು ಸ್ವಲ್ಪವಾಗಿ ನೇವಿಸಿ ತಾಯಿ/ ಚಿಕ್ಕಮ್ಮನವರು ಗ್ನದನ ಕಡೆಯವರು ಜುಟ್ಟಿಗೆ ನೀರಾಕಿದಾಗ ಅದರಲ್ಲಿ ಬರುವ ನೀರನ್ನು ಬೊಗಸೆಯಿಂದ ಕುಡಿಯಲು ಹೋದಾಗ ಗಂಡಿನ ಕಡೆಯವರು ಕೈಯನ್ನು ತಟ್ಟುತ್ತಾರೆ, ಅಂದರೆ ನೀರು ಕುಡಿಯದಿರಲೆಂದು ಆದರೂ ಸಹ ಅಲ್ಪ  ಸ್ವಲ್ಪ ಭದ್ರಮಾಡಿ ತಾಯಿಯಾದವಳು ಕುಡಿಯುತ್ತಾಳೆ.

ನಂತರ ಗಂಡಿಗೂ ಸ್ನಾನಮಾಡಿಸಿ ಅವರ ಜುಟ್ಟು ನೀರನ್ನೂ ಸಹ ಅವರ ಅತ್ತೆಯಾದವರು ಕುಡಿಯುತ್ತಲೇ. ಅದಕ್ಕೂ ಕುಡಿಯದಿರುವಂತೆ ತಟ್ಟಿಬಿಡುತ್ತಾರೆ.

ನಂತರ ಅತ್ತೆ ಅಳಿಯ ಗಟ್ಟಿ ಇದ್ದಾನೋ ಇಲ್ಲವೋ ಎಂದು ನೋಡಲು ಸೊಂಟಕ್ಕೆ ಕೈ ಹಾಕಿ ಎಳೆಯುತ್ತಾಳೆ. ವರನು ಲಾರಿಯಾನ ಮೊಣಕಾಲು ಹಿಡಿದು ಭದ್ರವಾಗಿ ಕೂರುತ್ತಾನೆ .

ನೋಟ್: ಇದು ವಿನೋದಕ್ಕೆ ಮಾಡುವುದಲ್ಲ. ಕಾಲ್ತೊಳೆದು ಅನ್ಯಾದಾನ ಮಾಡುವಂತೆ ಇಲ್ಲಿ ಸ್ನಾನ ಮಾಡಿಸಿ ಜುಟ್ಟು ನೀರು ಕುಡಿದು ಕನ್ಯಾದಾನ ಮಾಡುತ್ತಾರೆಂದು ಭಾವಿಸಿದರೂ ಸಹ, ಭವಿಷ್ಯದಲ್ಲಿ ಎಂತಹ ಕಷ್ಟದಲ್ಲೂ ಮಗ & ಅಳಿಯನಿಂದನೀರು ಕುಡಿಯಲು ಅನ್ನವನ್ನು ಸ್ವೀಕರಿಸುವವಲಾಗಿರು ವೆನೆನ್ದಿರಬಹುದೆನ್ದೆನಿಸುತ್ತದೆ.

ಮುಸಳ್ ಚಛಾಯೇರ್ ಶಾಸ್ತ್ರ

ಗಂಡು ಕಾನ್ಕೂಡಿಪರ್ ಹುಬ್ಬರನು ಅಂದರೆ ಗಂಡು ಹಲಗೆ ಮೇಲೆ ನಿಂತಾಗ ಅತ್ತೆಯಾದವರು ಅಥವಾ ನಾಡಿನಿಯಾದವರು ಕಟ್ಟಿಗೆ ಟವಾಲು ಹಾಕಿ ಹಿಡಿದುಕೊಂಡು ಮುದ್ದೇ ಜಡಿಯೂ ದೊಣ್ಣೆಯಿಂದ ನನ್ನ ಮಗಳನ್ನು ಬೋಯ್ಯುತ್ತೀಯಾ!? ಹೊಡೆಯುತ್ತೀಯಾ ಎಂದಾಗ!? ಗ್ಸ್ನ್ದು ಎದೆಗುಂದದೆ ಹೌದೆನ್ನಬೇಕು . ದೊಣ್ಣೆಯಿಂದ ಅತ್ತೆ ಹೆಗಲ ಮೇಲೆ ಸೋಕಿಸಿ ಹೊಡೆಯುವ ರೀತಿ ನಟಿಸುತ್ತಾಳೆ. ನಂತರ ಅದಕ್ಕೂ ಜಗ್ಗದಿದ್ದಾಗ ನಾದಿನಿಯಾದವಳು ಕಿವಿಗೆ ಸಣ್ಣ ಕಲ್ಲುಗಳನ್ನು ಬದಿಗಿರಿಸಿ ನೋವಾಗುವ ರೀತಿಯಲ್ಲಿ ಒತ್ತಿ ಈಗ ಹೇಳು ನನ್ನ ಅಕ್ಕನಿಗೆ ತಂಗಿಗೆ ಬಯ್ಯುತ್ತೀಯಾ!? ಹೊಡೆಯುತ್ತೀಯಾ !? ಎಂದು ಗದರಿಸುತ್ತಾಳೆ! ಆಗಲೂ ಗಂಡು ಹೆದರಿಕೊಳ್ಳದೆ ಹೌದೆನ್ನುವನು! ಇನ್ನು ಕೆಲವರು ನೋವು ತಾಳಲಾರದೆ ಇಲ್ಲಾ ಎಂದು ಶರಣಾಗುವುದುಂಟು. ಅಂದು ಬಹುಷಃ ಯಾರು ಅತ್ತೆಯ ಎದುರಿಸುವಿಕೆಗೆ ಹೆದರಲಾರರು! ಆದರೆ ಮುಂದೆ........!?

ಡೋಸ್ಕಿಯಾ  ಫ಼ೋಡೇರೋ  ಶಾಸ್ತ್ರ

 

ಹಸಿ ಮಡಿಕೆ ಮುಚ್ಚುವ: ದೊಡ್ಡ ಮುಚ್ಚುಳವನ್ನು ಬಾಮೈದನಾದವನು ಉಲ್ಟಾ ಮಾಡಿ ಏಳು ಬಾರಿ ವರನಿಗೆ ಇಳಿ ತೆಗೆದು ಏಳನೇ ಬಾರಿಗೆ ಪಾದದ ಬಳಿ ತೆಗೆದುಕೊಂಡು ಹೋದಾಗ ಅದನ್ನು ವರನು ಕಾಲಿನ ಹಿಮ್ಮಡಿಯಿಂದ ತುಳಿದು ಚೂರು ಮಾಡಬೇಕು. ತಡ ಮಾಡಬಾರದು. ದಿಷ್ಟಿ ತೆಗೆಯುವುದಕ್ಕೆ ಈ ರೀತಿ ಮಾಡುತ್ತಿರಬಹುದೆನ್ದೆನಿಸುತ್ತದೆ.

ಡೋರಣೋ ಛೋಡೇರೋ ಶಾಸ್ತ್ರ

 

ಕಂಕಣವನ್ನು ವಧು & ವರನ ಕಡೆಯವರು ಮುಟ್ಟಿ ಗಂಟಾಕಿರುತ್ತಾರೆ. ಮತ್ತೆ ಅದನ್ನು ಈಗ ಹೆಣ್ಣು & ಗಂಡಿಗೆ ಕೂರಿಸಿ ಮೊದಲು ಹೆಣ್ಣಿನ ಕಟ್ಟಿಗೆ ಕಟ್ಟಿರುವ ದಾರದ ಗಂಟುಗಳನ್ನು ಚಿಕ್ಕಾಗದಿರುವ ರೀತಿಯಲ್ಲಿ ಒಂದೊಂದಾಗಿ ವರನು ಬಿಡಿಸುತ್ತಾನೆ.  ನಂತರ ವಧು ವರನ ಕತ್ತು ಮತ್ತು ಕೈಗಳಲ್ಲಿರುವ ಗಂಟನ್ನು ಒಂದೊಂದಾಗಿ ಬಿಡಿಸುತ್ತಾಳೆ.

ನೋಟ್: ಬಹುಶಃ ಈ ಶಾಸ್ತ್ರದ ಹಿನ್ನಲೆಯನ್ನು ಗಮನಿಸಿದರೆ ಸಂಬಂಧಿಕರು ಹಾಕಿದ ಗಂಟುಗಳನ್ನು ಗಂಡ ಹೆಂಡತಿಯರು ಬಿಡಿಸುತ್ತಾರೆಂದರೆ ತಮ್ಮವರುಗಳ ಕಡೆಯಿಂದ ಸಾಕಷ್ಟು ವಿಚಾರಗಳು ಸಂಸಾರದಲ್ಲಿ ಬರಬಹುದು ಅದು ಒಳ್ಳೆಯದೋ, ಕೆಟ್ಟದೋ ಎಂದು ಇಬ್ಬರೂ ಕೂಂತು ವಿಮರ್ಶಿಸಿ ಅವುಗಳನ್ನು ಬಿಡಿಸಿ ಅಂದರೆ ಬಗೆಹರಿಸಿಕೊಳ್ಳಬೆಕೆಂಬುದಿರಬಹುದು. ಇಲ್ಲವೇ ನಾಲ್ಕು ಮೂಲೆಗಳಿಂದ  ಸಪ್ತ ಋಷಿಗಳು ಸಂಬಂಧಿಕರ ಮೂಲಕ ಬಂದು ಆಶೀರ್ವದಿಸಿ ಇತರರಿಂದ ಕೇಡುಂಟಾಗದಿರಲೆನ್ದು ಹರಸಿ ಹಾಕಿದ ಗಂಟುಗಳೆನ್ದು ಪರಿಭಾವಿಸಿದರೆ ತಪ್ಪಾಗಲಾರದೆನಿಸುತ್ತದೆ. ವಧುವಿನ ಈ ದಾರದಿಂದಲೇ ಗಂಡು ತಂದ ತಾಳಿಯನ್ನು ಪೋಣಿಸಿ ಬೆಳಗ್ಗೆ ತಾಳಿ ಕಟ್ಟಿಸುತ್ತಾರೆ.

ಹಾಗೂ, ಈ ಶಾಸ್ತ್ರದ ನಂತರವೇ ಇತರ ಶಾಸ್ತ್ರವೇ ನಡೆಯುವುದರಿಂದ ವಧು ವರನ ಮದುವೆ  ಶಾಸ್ತ್ರ  ಸುಸೂತ್ರವಾಗಿ ನೆರವೇರಲಿ ಎಂದು ಕಟ್ಟಿಸಿರಬಹುದೆನ್ದೆನಿಸುತ್ತದೆ. ಒಟ್ಟಿನಲ್ಲಿ ಇದು ಲಂಬಾಣಿಗಳ ಮದುವೆಯಲ್ಲಿ ಬಹಳ ಮಹತ್ವವೆನಿಸುತ್ತದೆಯಂತೆ.

ಮಾಂಢೇಮ ಪಿಸಾಪಖಡೇರೋ

ಕಾಕೋಟಿ ಅಂದರೆ ಅಗಲ ಬಾಯಿಯ ಮರದ ಪಾತ್ರೆಯಲ್ಲಿ ಗಂಜಿ ನೀರು ಸುರಿದು ಇಬ್ಬರನ್ನು ಎದುರು ಬದುರು ಕೂರಿಸಿ ಮದ್ಯದಲ್ಲಿ ಗಂಜೀ ಪಾತ್ರೆ ಇಟ್ಟು ೧ ರೂಪಾಯಿ, ಗೋಟು ಅಡಿಕೆ, ಕವಡೆ ಹೀಗೆ ಮೂರನ್ನು ಒಮ್ಮೆಗೆ ನೀರಿನಲ್ಲಿ ಹಾಕಿದಾಗ ವಧು ವರರು ನೀರಲ್ಲಿ ಕೈ ಹಾಕಿ ದುಡ್ಡನ್ನು ಎತ್ತಿಕೊಳ್ಳಬೇಕು. ಈ ಸಂದರ್ಭವಂತೂ ಹೆಣ್ಣು & ಗಂಡಿನ ಕಡೆಯ ಗುಂಪು ಸೋಲು ಗೆಲುವಿನ ಹಾಡನ್ನು ಹಾಡಿಸಿ ಉತ್ತೇಜಿಸಿ ಪ್ರೂತ್ಸಾಹಿಸುವರು. ಸಾಮಾನ್ಯವಾಗಿ ೭ ಬಾರಿ ಹಣವನ್ನು ನೀರಿಗೆ ಹಾಕಿದಾಗ ಮೊದಲ ಬಾರಿಗೆ ಗಂಡು ಹಿಡಿಯಬೇಕು. ಹಾಗೂ ಕೊನೆಯ ಬಾರಿಗೂ ಗಂಡುಹಿಡಿಯಬೆಕೆಮ್ಬ ಅಭಿಪ್ರಾಯದಲ್ಲಿ ಗಂಡಿನ ಹಿಡಿತದಲ್ಲಿ ಸಂಸಾರವಿರುತ್ತದೆ. ಎಂಬ ನಂಬಿಕೆ ಇದೆ. ಆದರೆ ಇಲ್ಲಿ ಕೆಲವೊಮ್ಮೆ ಹೆಣ್ಣೇ ಮೊದಲು & ಕೊನೆಯ ಹಣ ಹಿಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಇದನ್ನು ಪಿಸಾಪಕಡೆರ್ ಶಾಸ್ಥ್ರವೆನ್ನುತ್ತಾರೆ.

ಮಾಂಡ್ ರಮ್ಮೇರ್

ಇಲ್ಲಿಯೂ ಸಹ ದುಡ್ಡು ಹಿಡಿದ ಪಾತ್ರೆಯಲ್ಲಿ ನೀರು ತುಂಬಿಸಿ ಮತ್ತೊಂದು ಕಂಚಿನ ತಟ್ಟೆಯಿಂದ ಮೊದಲು ಹೆಣ್ಣು ಅದನ್ನು ಉಲ್ಟಾ ಮಾಡಿ ಗಂಡಿನ ಮುಖದವರೆವಿಗೂ ನೀರು ಚೆಲ್ಲುವಂತೆ ಏಳು  ಭಾರಿ ಎರಚುತ್ತಾಳೆ. ನಂತರ ಗಂಡನ ಸರದಿ ಬಂದಾಗ ಗಂಡು ಸಹ ಎರಚುತ್ತಾನೆ. ಆದರೆ, ನೀರು ಸಾಮಾನ್ಯವಾಗಿ ಮಂಡಿ & ಹೊಟ್ಟೆಯವರೆವಿಗು ತಾಗುವುದುಂಟು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮಗೆ ಸಿಕ್ಕ ಅವಧಿಯಲ್ಲಿ ಎರಚಾಟವು ಚಪ್ಪರದ ಒಳಗೆ ನಡೆಯುವ ಕೊನೆಯ ರಾತ್ರಿಯ ಶಾಸ್ಥ್ರವಾಗಿರುತ್ತದೆ.

ನೋಟ್: (ಇಲ್ಲಿ ಹೆಣ್ಣು ಗಂಡಿಗಷ್ಟೇಯಲ್ಲಾ ಕೊನೆಯ ಶಾಸ್ತ್ರದಲ್ಲಿ ಕೆಲವರು ಇದ್ದಬದ್ದವರಿಗೆಲ್ಲಾ ನೀರು ಎರಚಿ ಆಟವಾಡುತ್ತಾರೆ. ಆಗ ಮಡಿಕೆ ಕುಡಿಕೆ ನೀರು ಖಾಲಿ ಖಾಲಿ ಯಾಗಿರುವ ಸಂದರ್ಭಗಳುಂಟು. ಬಹುಷಃ ಮಾಡುವೆ ಮನೆಯ ರಾತ್ರಿಯ ಶಾಸ್ತ್ರಗಳು ಮುಗಿಯುವುದು. ಬೆಳಗ್ಗೆ ೫ ಗಂಟೆಯಾಗಿರುತ್ತದೆ.

ಆಡಿಯ ಲಾಪ್ಸ್ ಆಂಗ್ನಿಯಾ ಲಾಪ್ಸಿ

ಮನೆಯಲ್ಲಿ ನೆಲವನ್ನು ತಾರಿಸಿ ಸುಮಾರು ೪.೫ ಇಂಚಿನ ತ್ರಿಜ್ಯವುಳ್ಳ ವ್ರುತ್ತವನ್ನೂ ರಂಗೋಲಿಯಿಂದ ಹಾಕಿ ನಾಲ್ಕು ಭಾಗ ಮಾಡಿ ಸರಳ ರೇಖೆಯ ತುದಿಯ ಬಿಂದುವಿನಲ್ಲಿ ಮತ್ತು ಮಧ್ಯದಲ್ಲಿ ೧ ಒಂದೊಂದು ರೂಪಾಯಿ ಇಟ್ಟು (ಅದರ ಮೇಲೆ ಒಕ್ರ, ಅಂದರೆ ಗೋಣಿಚೀಲ ಮಡಚಿಟ್ಟು ಅದರ ಮೇಲೆ ಚಾಪೆ ಹಾಸಿ ಅವರನ್ನು ಹೊರಗೆ ಕೋಳಿಯಾ ತಿನಿಸಿದಂತೆ ಸಿಹಿ ಅನ್ನವನ್ನು ಕೈ ಮೇಲೊಂದು ಕೈ ಇಟ್ಟು, ಒಬ್ಬೊಬ್ಬರಿಗೆ ಏಳು ಭಾರಿ ತಿನ್ನಿಸಿ ಈಗ ಗಂಡು ಕುಡಿದ ನೀರನ್ನು ಹೆಣ್ಣಿಗೆ ಕೊಟ್ಟು ನಂತರ ವರನು ಅತ್ತೆಗೆ ಎಲೆ ಅಡಿಕೆ ಮಡಗಿದ ನಂತರ ಅವರಿಬ್ಬರೂ ತಟ್ಟೆಂದು ಮೇಲೇಳುತ್ತಾರೆ.ಆಗಲೂ ಕೊನೆ ಹಾಡು ಗೆಲವು ಮತ್ತು ಸೋಲನ್ನು ಹೇಳುತ್ತಾರೆ. ಇಲ್ಲಿಗೆ ರಾತ್ರಿ ಎಲ್ಲಾ ಶಾಸ್ತ್ರ ಮುಗಿಸಿರುತ್ತಾರೆ. ನಂತರ ವಧು, ವರರು ಸ್ವಲ್ಪ ಹೊತ್ತು ಮಾತನಾಡಿಕೊಂಡು ನಂತರ ಸ್ನಾನಕ್ಕಾಗಿ ಅವರವರ ಕೊಠಡಿಗೆ ಹೊರಟು ಹೋಗುತ್ತಾರೆ.

ನೋಟ್: ಇಲ್ಲಿ ರಾತ್ರಿಯಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳೂ  ಸಹ ಮುಗಿದಿವೆ. ಗಿಜುಗುಡುತ್ತಿದ್ದವರ ಮುಖದಲ್ಲಿ ನಿದ್ರೆಯ ಛಾಯೆ ಬರುತ್ತಿದ್ದಂತೆ ಕಣ್ಣು ರೆಪ್ಪೆ ಮುಚ್ಚುವುದರೊಳಗೆ ಸೂರ್ಯೋದಯ ಸಮೀಪಿಸುತ್ತದೆ. ಕಾಫಿ, ಟೀ, ನಿತ್ಯ ಶೌಚ ಕರ್ಮಗಳಲ್ ನಿರತರಾಗಿರುವ ಜನ ಹೆಣ್ಣು & ಗಂಡಿಗೆ ಸ್ನಾನ ಮಾಡಿಸಿ ಸಿಂಗರಿಸಿಸುತ್ತಾರೆ. ಸೂರ್ಯ ಹುಟ್ಟುವ ಮೊದಲೇ ಹೆಣ್ಣಿಗೆ ಸಾಂಪ್ರದಾಯಿಕ ಉಡಿಗೆ ತೊಡಿಗೆಗಳನ್ನು ಹಾಕಿಸಿರುತ್ತಾರೆ. ತಾಳಿಕಟ್ಟುವ ಶುಭವೇಳೆ ಇರುವ ಸಮಯದಲ್ಲಿ ಹೆಣ್ಣಿನ ತಲೆಕೂದಲನ್ನು ಎಣೆದು ಕಿವಿಯ ಪಕ್ಕದಲ್ಲಿ ಗೆಜ್ಜೆಯಿಂದ ಕೂಡಿರುವ ಗೊಬ್ಬಿ, ಹಾಕಿಸಿ ಕುತ್ತಿಗೆಗೆ ಚವಳ್ ಬೆಳ್ಳಿಕಾಸಿನ ಸರವನ್ನು ಎಲ್ಲರ ಸಮ್ಮುಖದಲ್ಲಿ ತಾಳವಾದ್ಯಗಳೊಂದಿಗೆ ವರನು ವಧುವಿನ ಕತ್ತಿಗೆ ಕಟ್ಟುತ್ತಾನೆ.ಇದೇ ಆಗಿನ ತಾಳಿ.

ಆಧುನಿಕತೆಯ ಲಂಬಾಣಿಗಳು ಕಟ್ಟುವ ತಾಳಿ

ಆಧುನಿಕತೆಯ ಗಾಳಿ  ಲಂಬಾಣಿಗರ ಉಡುಪು ಮತ್ತು ತಾಳಿ ಸಂಪ್ರದಾಯದ ಮೇಲೆ ಪರಿಣಾಮ ಬೀರಿದೆ. ಹಿತ್ತಲ ಗಿಡ ಮದ್ದಾಗಲ್ಲಾ ಎಂಬಂತೆ ತಮ್ಮಲ್ಲಿದ್ದ ಹಿರಿತನದ ಸಂಪ್ರದಾಯವನ್ನು ಮರೆತು ಆಯಾ ಪ್ರಾಂತ್ಯದಲ್ಲಿ ಚಾಲ್ತಿಯಲ್ಲಿರುವ ತಾಳಿಯನ್ನು ತಂದು ಬ್ರಾಹ್ಮಣರನ್ನು ಕರೆಸಿ ಶಾಸ್ತ್ರ ಮಾಡಿಸಿ ಕಟ್ಟಿಸಲಾಗುತ್ತಿದೆ.ಕೊನೆಯಲ್ಲಿ ಲಂಬಾಣಿಗಳಲ್ಲಿ ಶೀಲದ ಬಗ್ಗೆ ಸತ್ವ ಪರೀಕ್ಷೆ ನಡೆಸುತ್ತಾರೆ.

ಹವೇಲಿ ಸೇರಾಯೇರೋ ಶಾಸ್ತ್ರ

 

ಕೆಲವರು ಹೇಳುವಂತೆ ಪುರಾತನ ಕಾಲದಲ್ಲಿ ಋತುಮತಿಯಾಗುವ ಮೊದಲೇ ಮದುವೆ ಆಗುತ್ತಿದ್ದರು. ಆದರೆ ಕೆಲವೊಮ್ಮೆ ಮದುವೆಗೆ ಮೊದಲು ಋತುಮತಿಯಾಗಿದ್ದರೆ ಅವರನ್ನು ಕಣ್ಣು ಕಟ್ಟಿ ಆ ಹೆಣ್ಣು ಮಕ್ಕಳನ್ನು ಕಾಡಿಗೆ ಬಿಡಲಾಗುತ್ತಿತ್ತು. ಹಿರಿಯರು ಚಿಂತಿಸಿ ಮದುವೆಗೆ ಮೊದಲು ಋತುಮತಿಯರಾದರೆ ಶೀಲ ಶಂಕಿಸಿ ಅವರನ್ನು ಕಾಡಿಗೆ ಬಿಡುವ ಬದಲು ಶೀಲದ ಬಗ್ಗೆ ಸತ್ವ ಪರೀಕ್ಷೆ ಮಾಡಿ ಮದುವೆ ಮಾಡಿಕೊಟ್ಟರಾಯಿತೆಂದು  ಯೋಚಿಸಿ ಲದನಿಯ ಎತ್ತಿನ ಮೇಲೆ ಕೂರಿಸಿ ಸೂರ್ಯ ನಮಸ್ಕಾರ ಮಾಡಿಸಿ ಸೂರ್ಯ ಚಂದ್ರ ಭೂಮಿ ಆಕಾಶ ವಾಯುವಿನ ಜಲದ ಸಾಕ್ಷಿಯಾಗಿ ಈ ಹೆಣ್ಣು ಶೀಲವತಿಯಾದರೆ ಎತ್ತು ಅವಳನ್ನು ಹೊತ್ತೊಯ್ಯುತ್ತದೆ. ಇಲ್ಲದಿದ್ದರೆ ಮಂಡಿಹೂರಿ ಕೂರುತ್ತದೆಂಬ ನಂಬಿಕೆಯಲ್ಲಿ ಈ ಶಾಸ್ತ್ರ ನಡೆಯುತ್ತಿತ್ತು.

ಈ ಶಾಸ್ತ್ರದಂತೆ ಲದನಿಯ ಎತ್ತು ಅವಳನ್ನು ಹೊತ್ತೊಯ್ದರೆ ಅವಳಿಗೆ ಊರಿನಲ್ಲಿ ಮೆರವಣಿಗೆಯಾಗುತ್ತಿತ್ತು. ಈ ಸಂಪ್ರದಾಯವನ್ನು ಬಹುಕಾಳದವರೆವಿಗೂ ಮುಂದುವರೆಸಿಕೊಂಡು ಬರಲಾಯಿತು. ಬಹುಶಃ ನನಗೆ ತಿಳಿದ ಮಟ್ಟಿಗೆ ೩೦ ವರುಷಗಳ ಹಿಂದೆ ಗೋಪಿನಾಥಮ್ ನಲ್ಲೂ ಸಹ ಈ ಸಂಪ್ರದಾಯವಿತ್ತು. ಒಂದು ಮದುವೆಯಲ್ಲಿ ತ್ತು ಕುಂತುಬಿಟ್ಟಿತು. ಆಗ ಗಂಡು ಸಂಶಯಪಟ್ಟನೆಂಬ ವಿಷಯ ತಿಳಿದು ಹಿರಿಯರು ಅಂದಿನಿಂದ ಎತ್ತಿನ ಮೇಲೆ ಕೂರಿಸುವ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಲಾಯಿತು. ಅಚಾತುರ್ಯದಿಂದ ಗೊತ್ತಿಲ್ಲದೇ ಕೆಲವು ಪ್ರಸಂಗಗಳು ನಡೆಯಬಹುದು. ಅದಕ್ಕಾಗಿ ನಮ್ಮ ಮನೆ ಮಕ್ಕಳ ಮರ್ಯಾದೆ ತೆಗೆಯುವುದು ಬೇಡವೆಂದು ಎತ್ತಿನ ಮೇಲೆ ಕೂರಿಸಿ  ಶೀಲ ಪರೀಕ್ಷೆ ಮಾಡುವ ಸಂಪ್ರದಾಯ ನಿಲ್ಲಿಸಲಾಗಿದೆ.

ನೋಟ್: ಹಿಂದೆ ತಂದೆ ತಾಯಿಗಳೊಂದಿಗೆ ಊರೂರು ವ್ಯಾಪಾರಕಾಗಿ ಹೋಗುತ್ತಿದ್ದರು.ಹಾಗೂ ಹೆಂಗಸರು ತಾಂಡಾಗಳಲ್ಲಿ ಕೂಲಿ ಕೆಲಸಕ್ಕೆ ಹೋಗದೆ ತಮ್ಮ ಸಮವಸ್ತ್ರದ ನೇಯ್ಗೆ ಕಾರ್ಯದಲ್ಲಿರುತ್ತಿದ್ದರು. ಆಗ ಹೆಣ್ಣು ಮಕ್ಕಳಿಗೆ ಹತ್ತಿರದಿಂದ ರಕ್ಷಣೆಯಾಗುತ್ತಿತ್ತು. ಯಾವಾಗ ಬ್ರಿಟಿಷರ ಸಾರಿಗೆ ಸಂಪರ್ಕ ಬಂತೋ ಲಂಬಾಣಿಗಳ ರಾಸುಗಳ ಮೇಲೆ ಸಾಗುತ್ತಿದ್ದ ಸರಕು ಸಾಮಾನುಗಳಿಗೆ ಪೆಟ್ಟಾಯಿತು. ಬಡತನಕ್ಕೆ ಇಳಿದ ಈ ಜನರು ಕೂಲಿ ಕೆಲಸಕ್ಕೆ ಕಾಡು ಮೇಡು ಅಲೆಯುತ್ತಾ ತಮ್ಮ ತಾಂಡಾಗಳನ್ನು ಬಿಟ್ಟು ಹೋಗಬೇಕಾಗಿತ್ತು. ಈ ಸಂದರ್ಭದಲ್ಲಿ ದುಷ್ಟರ ರಕ್ಷಣೆಯಿಂದ ಪಾರಾಗಲು ಕಷ್ಟವಾಗುತ್ತಿದೆಮ್ಬುದರಲ್ಲಿ ಎರಡು ಮಾತಿಲ್ಲ.

ನಿಶ್ಚಿತಾರ್ಥ

ಮದುವೆಯ ಮೊದಲು ಹೆಣ್ಣು ಗಂಡು ಒಪ್ಪಂದವಾದಾಗ ಗಂಡಿನ ಮನೆಯವರು ಹೆಣ್ಣಿನ ಮನೆಗೆ ಬಂದು ಚಾಪೆಯ ಮೇಲೆ ಎರಡು ಕಡೆಯವರು ಎದುರು ಬದರು ಕುಳಿತು ಮೂರು ಅಥವಾ ಐದು ತಟ್ಟೆಗಳಿಂದ ಹಣ್ಣುಕಾಯಿ ತಾಂಬೂಲ ಸೀರೆ ಬಟ್ಟೆ ಬೆಲ್ಲವನಿಟ್ಟು ಕೊಡುವ ಮತ್ತು ತೆಗೆದುಕೊಳ್ಳುವುದರ ಬಗ್ಗೆ ಊರನಾಯ್ಕ ಕೇಳಿದಾಗ ಇಬ್ಬರೂ ಸಹ ಒಪ್ಪುತ್ತಾರೆ. ನಂತರ ವರದಕ್ಷಿಣೆ ಕೊಡುವ ತೆಗೆದು ಕೊಳ್ಳುವುದರ ಬಗ್ಗೆ ಇವರಿಬ್ಬರಿಗೂ ಮೊದಲೇ ಒಪ್ಪಂದ ಆಗಿರುವುದರ ಪ್ರಕಾರವಾಗಿ ಸಭೆಯಲ್ಲಿ ಪ್ರಸ್ತಾಪಿಸುತ್ತಾರೆ.ನಂತರ ಇಬ್ಬರ ಬಗ್ಗೆ ಶಾಸ್ತ್ರ ಕೇಳಲೆಂದು ಮೂವರು ಬೆಲ್ಲದ ತಟ್ಟೆಯನ್ನು ಹೊತ್ತೊಯ್ಯುತ್ತಾರೆ. ಅವರು ಸ್ವಲ್ಪ ದೂರ ಹೋಗಿ ಒಂದಚ್ಚು ಬೆಲ್ಲವನ್ನು ಸ್ವಲ್ಪ ಸ್ವಲ್ಪವಾಗಿ ತಿಂದು ಬರುವರು ಬಂದಂತವರಲ್ಲಿ ಒಬ್ಬರು ಈ ಕೆಳಗಿನ ಅರ್ಥಾಣಿಯನ್ನು ಹೇಳುತ್ತಾರೆ.

ಸಕಲ್, ಕಚೇರಿ ಪಂಚಪಂಚಾಯ್ತೇರ್ ರಾಜ ಬೋಜಾರಿ ಸಭಾ

ಪಂಚೇರೋಲಾಕ್ ಅನಪಂಚ್ಹೀರೂ ಸವಾಲಾಕ್

ಸೇಕ್ ಸಗಾಯಿ ಹುಲ್ಲಿವಾಡಿ ಪರ್ಕಲರೇನಾಯಕ್

ಗಡೇ ಗಡೇರೋ  ಬೇರು

ಜಾತ್ ಜಾತ್ ದೋಯಿ ಬರೋ ಬರ್ರೆ ನಾಯ್ಕ

ತೇಜೇರ್ ಕಾನ್ ದೋಯಿ ಬರೋ ಬರ್ರೆದೇ ನಾಯ್ಕ

ಸೇನ್ ಕತ್ತೊದಡಿಯರ್ ಸೇನ್ ಕರನ್ ನೆನಚಮತ್ತರೇ ನಾಯ್ಕ

ಬೇಟ್ಟೊದಕ್ಕೋಸೇ ಸಘ್ಹಾಸೇನರೇ ನಾಯ್ಕ

ಥಾಳಿ ದಿನ್ನೇ ಕಛೋಳೋ ದಿನ್ನೇ

(ಘೋರ ) ಹೋರ್ ದಿನ್ನೆ ಲೋಟ

ಭೂಲ್ ಡಾಲ್ ಸೇ -ತಾರ್ ಕೊಳೇಮಾರ್ ರೇ ನಾಯೆಕ್

ಥಾರ್ ಸರ್ ಮಾಫೂಜ್ ಕರನು ನಾಯಕ್

ಎಂದು ಶಾಸ್ತ್ರದಲ್ಲಿ ಜಾತಕ ಕೂಡಿ ಬಂದು ಬಹಳ ಚನ್ನಾಗಿ ಆಗಿದೆನ್ನುವುದಕ್ಕೆ ಈ ಅರ್ಥ ಹೇಳಿ ಎಲ್ಲರು ಭಾಹ್ಮಣಿಯ ಗೋಳ್ (ಬೆಲ್ಲ) ಖದ್ದೇಕ ಎಂದು ಕೇಳಿದಾಗ ತಿಂದೋ ಎನ್ನುತ್ತಾರೆ. ಹೇಗಿತ್ತು ಎಂದಾಗ ಬಹಳ ಸಿಹಿಯಾಗಿತ್ತೆಂದು ಹೇಳಿ ತಂದಿದ್ದ ಬೆಲ್ಲವನ್ನು ಎಲ್ಲರಿಗೂ ಹಂಚುತ್ತಾರೆ. ನಂತರ ಕೆಂಪುನೀರನ್ನು ಅರಳೆಣ್ಣೆಯಲ್ಲಿ ಮಾಡಿ ಸ್ವಲ್ಪ ಸ್ವಲ್ಪ ವಿರುದ್ದ  ಗೋತ್ರದವರು ಪಂಚೆ ಅಥವಾ ಟವಾಲಿನ ತುದಿಗೆ ಅಡ್ಡಿ ಸಾಕ್ಷಿಭೂತರಾಗುತ್ತಾರೆ. ನಂತರ ತಟ್ಟೆಯನ್ನು ಗಂಡನ ಕಡೆಯವರು ಹೆಣ್ಣಿನ ಕಡೆಯವರಿಗೆ ನೀಡಿ ನಂತರ ಒಂದು ಲೋಟ ನೀರನ್ನು ಹೆಣ್ಣು & ಗಂಡಿನ ಕಡೆಯವರು ಕುಡಿಯುತ್ತಾರೆ. ತಟ್ಟೆ ಬದಲಾಯಿಸುವುದು ಅನ್ಯ ಸಂಪ್ರದಾಯದಿಂದ ಬಂದಿದ್ದು. ಬೆಲ್ಲ & ಅಕ್ಕಿ ನುಚ್ಚಿನ ಸಿಹಿ ತಿಂಡಿಯ ತಿನ್ನುವುದು ಲಂಬಾಣಿಗರ ಸಂಪ್ರದಾಯ ಇತ್ತೀಚಿಗೆ ಸಿನಿಮಾದಲ್ಲಿ ಮಾಡುವಂತೆ ಉಂಗರ ಬದಲಾಯಿಸುವುದು ತಟ್ಟೆ ಬದಲಾಯಿಸುವುದೆಲ್ಲಾ  ಈಗಿನ ಫ್ಯಾಶನ್ ಲಂಬಾಣಿಗ ಸಂಪ್ರದಾಯದಂತೆ ನಿಶ್ಚಿತಾರ್ಥಕ್ಕೆ ಗಂಡು ಬರುವುದೇ ಇಲ್ಲ ಹಿರಿಯರೇ ನಿಶ್ಚಿತಾರ್ಥ ಕಾರ್ಯ ಮುಗಿಸಿ ಬರುತ್ತಾರೆ.

ಕೋಡುಗೆದಾರರು:ಪಳನಿಸ್ವಾಮಿ ಜಾಗೇರಿ

2.95098039216
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top