অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸುತ್ತೂರು ಶ್ರೀ ಕ್ಷೇತ್ರ

ಸುತ್ತೂರು ಶ್ರೀ ಕ್ಷೇತ್ರ

ಭೌಗೊಳಿಕ ಹಿನ್ನಲೆ

ಯಾವುದೇ ಒಂದು ನಾಗರೀಕತೆ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಭೌಗೊಳಿಕ ಅಂಶಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಮಾನವನ ವಲಸೆ ಮಾತು ಸಾಂಸ್ಕೃತಿಕ ಸೋಲು ಗೆಲುವುಗಳು ಹೆಚ್ಚಾಗಿ ಅವಲಂಬಿಸಿದ್ದು ಭೌಗೋಳಿಕ ಅಂಶಗಳ ಆಧಾರದ ಮೇಲೆ ನಿಂತಿದೆ. ಅವುಗಳೆಂದರೆ ಪರಿಸರ ಮತ್ತು ಮಾನವ. ಮಾನವನ ಬೆಳವಣಿಗೆಯಲ್ಲಿ ಪರಿಸರದ ಪಾತ್ರ ಮುಖ್ಯವಾದದ್ದು. ಅಂತೆಯೇ ಸುತ್ತೂರಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಅರಿಯಬೇಕಾದರೆ ಇಲ್ಲಿನ ಭೌಗೋಳಿಕ ಅಂಶಗಳ ಪ್ರಭಾವವನ್ನು ಕುರಿತು ಸ್ಥೂಲವಾಗಿ ಅಧ್ಯಯನ ಮಾಡಿದಾಗ ಇಂದು ಕೇವಲ ಹಳ್ಳಿಯಾಗಿರುವ ಸುತ್ತೂರು ಸಾವಿರ ವರ್ಷಗಳಿಗಿಂತ ಹಿಂದೆ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತ್ಯಂತರಗಳನ್ನು ಸೃಷ್ಟಿಸಿದ್ದು ಇಲ್ಲಿನ ಭೌಗೊಳಿಕ ಅಂಶಗಳ ಪ್ರಭಾವದಿಂದಾಗಿ.

ಅಂದರೆ ಒಂದು ಸ್ಥಳದ, ಪ್ರದೇಶದ ಅಭಿವೃದ್ದಿಗೆ ಅಲ್ಲಿನ ಭೌಗೊಳಿಕ ಪರಿಸರ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿರುತ್ತದೆ. ಒಂದು ಊರಿನ ಭೌಗೊಳಿಕತೆಯಲ್ಲಿ ನದಿಗಳ ಪಾತ್ರ ಬಹು ಮುಖ್ಯವಾದದ್ದು, ಜಗತ್ತಿನ ಎಲ್ಲಾ ನಾಗರೀಕತೆಗಳ ಮತ್ತು ಸಾಮ್ರಾಜ್ಯಗಳ ಉಗಮ ಮತ್ತು ಬೆಳವಣಿಗೆಯಲ್ಲಿ ನದಿ ಮೈದಾನಗಳು ಬಹು ಮುಖ್ಯವಾದ  ಪಾತ್ರವಹಿಸುತ್ತವೆ. ಇದೇ ರೀತಿಯಲ್ಲಿ ಸುತ್ತೂರಿನ ಭೌಗೊಳಿಕತೆಯಲ್ಲಿ ಕೂಡ ಕಾವೇರಿ ನದಿಯ ಉಪನದಿಯಾದ ಕಪಿಲಾನದಿ (ಕಬಿನಿ) ತನ್ನದೇ ಆದ ಪ್ರಭಾವವನ್ನು ಬೀರಿದೆ. ಕಪಿಲಾ ನದಿಯ ದಂಡೆಯ ಮೇಲೆ ಅನೇಕ ಪುಣ್ಯ ಕ್ಷೇತ್ರಗಳ ಬೆಳವಣಿಗೆಯನ್ನು ಕಾಣಬಹುದಾಗಿದೆ. ಆ ರೀತಿಯಲ್ಲಿ ಬೆಳವಣಿಗೆ ಕಂಡ ಧಾರ್ಮಿಕ ಕ್ಷೇತ್ರಗಳಲ್ಲಿ ಸುತ್ತೂರು ಕ್ಷೇತ್ರವೂ ಸಹ ಒಂದು. ೧೨ ನೇ ಶತಮಾನದ ಹೊಯ್ಸಳರ ಕಾಲದ ಶಾಸನವೊಂದರಲ್ಲಿ ಸುತ್ತೂರಿನ ಹೆಸರು ಕಂಡು ಬರುತ್ತದೆ. ಅದು ನದಿ ದಂಡೆಯ ಮೇಲಿನ ಒಂದು ಹಳ್ಳಿಯೆಂದು ತಿಳಿಸಿದೆ. ಆದರೆ ಮತ್ತೊಂದು ಶಾಸನವು ಕಪಿಲಾ ನದಿಯ ಬಲದಂಡೆಯ ಕಪಿಲಾ-ಕೌಂಡಿನಿ ನದಿಗಳ ಸಂಗಮವಾಗುವ ಹತ್ತಿರದ ಹಳ್ಳಿಯೆಂದು ಭೌಗೊಳಿಕ ಹಿನ್ನಲೆಯನ್ನು ನೀಡಿದೆ. ಕ್ರಿ.ಶ.೧೫೩೦ ರ ಶಾಸನವೊಂದರಲ್ಲಿ ಈ ಸ್ಥಳವನ್ನು ಹೊಳೆಯ ಸುತ್ತೂರು ಎಂದು ಕರೆಯಲಾಗಿದೆ. ಈ ಶಾಸನದ ಪ್ರಕಾರ ಸುತ್ತೂರು, ತಾಯೂರು ಸ್ಥಳದಲ್ಲಿನ ಮೂಗೂರು ಸೀಮೆಯಲ್ಲಿತ್ತು.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೋಕಿನಲ್ಲಿ ಪಶ್ಚಿಮ -ಪೂರ್ವವಾಗಿ ಹರಿಯುವ ಕಪಿಲಾ ನದಿಯ ದಂಡೆಯ ಮೇಲೆ ಸುತ್ತೂರು ನೆಲೆಗೊಂಡಿದೆ.ಮೈಸೂರಿನಿಂದ ದಕ್ಷಿಣಕ್ಕೆ ೨೮ ಕಿಲೋಮೀಟರ್ (ವರುಣಾ ಗ್ರಾಮದ ಮೂಲಕ ರಾಜ್ಯ ಹೆದ್ದಾರಿಗೆ ಸಂಪರ್ಕ ಹೊಂದಿದೆ) ಹಾಗೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದ ೧೭೦ ಕಿ.ಮಿ. ದೂರದಲ್ಲಿದೆ ಮತ್ತು ನಂಜನಗೂಡಿನ ಈಶಾನ್ಯಕ್ಕೆ ೧೫ ಕಿ.ಮೀ. ದೂರದಲ್ಲಿದೆ. ಈ ಊರು ೧೨ ಡಿಗ್ರಿ .೧೦ ಉತ್ತರ ಅಕ್ಷಾಂಶ ಮತ್ತು ೨೬ ಡಿಗ್ರಿ . ೫೦ ಪೂರ್ವ ರೇಖಾಂಶದಲ್ಲಿ ಕಂಡು ಬರುತ್ತದೆ. ಇದರ ಒಟ್ಟು ಭೌಗೊಳಿಕ ಪ್ರದೇಶವು ಸರಿ ಸುಮಾರು ೯೦೦ ಎಕರೆಗಳು. ಈ ಗ್ರಾಮವನ್ನು ಕಪಿಲಾ ನದಿಯು ಬಳಸಿ ಅಥವಾ ಸುತ್ತಿ  ಹರಿಯುತ್ತಿರುವುದರಿಂದ ಈ ಗ್ರಾಮಕ್ಕೆ ಸುತ್ತೂರು ಎಂಬ ಹೆಸರು ಬಂದಿರಬಹುದೆಂದು ಭೋಗೊಳಶಾಸ್ತ್ರಗ್ನರು ಅಭಿಪ್ರಾಯಪಟ್ಟಿದ್ದಾರೆ.

ಈ ಗ್ರಾಮದ ಉತ್ತರಕ್ಕೆ ತುಮ್ಮನೇರಲೆ, ಹೊಸಕೋಟೆ, ದಕ್ಸಿನಕ್ಕೆ ಕುಪ್ಪರವಲ್ಲಿ, ಬಿಳಗೆರೆ, ಪೂರ್ವಕ್ಕೆ ಬಿಳುಗಲಿ ಮತ್ತು ಪಶ್ಚಿಮಕ್ಕೆ ಆಲತ್ತೂರು ಗ್ರಾಮಗಳಿದ್ದು ಸುತ್ತೂರಿನ ಅಭಿವೃದ್ದಿಯಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿವೆ. ಅಲ್ಲದೆ ಈ ಗ್ರಾಮದ ಮಧ್ಯಬಾಗದಲ್ಲಿ ನೀರಾವರಿ ನಾಲೆಯೊಂದು ಹಾದುಹೋಗಿದೆ. ಅದನ್ನು ಹುಲ್ಲಹಳ್ಳಿ ನಾಲೆ ಎಂದು ಕರೆಯಲಾಗುತ್ತದೆ. ಆರಂಭದಲ್ಲಿ ಭತ್ತ, ರಾಗಿ, ಜೋಳ, ಹಿಪ್ಪುನೇರಳೆ, ದ್ವಿದಳ ಧಾನ್ಯದ ಬೆಳೆಗಳು, ಸೊಪ್ಪು, ತರಕಾರಿ, ಹಣ್ಣು, ಹೂ ಮಾವು, ಬೇವುಗಳನ್ನು ಇಲ್ಲಿ ಬೆಳೆಯಲಾಗುತ್ತಿತ್ತು.ಆದರೆ ಇತ್ತೇಚೆಗೆ ಆರ್ಥಿಕ ದೃಷ್ಟಿ ಬದಲಾಗಿ ಇಲ್ಲಿ ಭತ್ತ, ಬಾಳೆ, ಕಬ್ಬಿನ ಬೆಳೆಗಳನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಇಲ್ಲಿ ಹುಲ್ಲಹಳ್ಳಿ ನಾಲೆಯ ಜೊತೆಗೆ ಕಬಿನಿ ಬಲದಂಡೆ ನಾಲೆಯೂ ಹರಿಯುತ್ತಿದ್ದು ಈ ಪ್ರದೇಶ ಫಲವತ್ತಾದ ಹಾಗೂ ಲಾಭದಾಯಕವಾದ ಕೃಷಿ ಚಟುವಟಿಕೆಗಳಿಗೆ ಉತ್ತೇಜನಕಾರಿಯಾಗಿದೆ.

ಸುತ್ತೂರು ಪ್ರದೇಶದಲ್ಲಿ ವಿಭಿನ್ನ ರೀತಿಯ ಮಣ್ಣು ಕಂಡುಬರುತ್ತದೆ. ಮೆಕ್ಕಳುಮನ್ನು, ಕೆರೆಮಣ್ಣು, ಕೆಂಪುಮಣ್ಣು, ಕೆಂಪು ಜೇಡಿಮಣ್ಣುಗಳು ಅಲ್ಲಲ್ಲಿ ಕಂಡುಬರುತ್ತದೆ. ಈ ಮಣ್ಣುಗಳು ವ್ಯವಸಾಯಕ್ಕೆ ಯೋಗ್ಯವಾಗಿದ್ದು ಊರಿನ ಆರ್ಥಿಕ ಅಭಿವೃದ್ದಿಗೆ ತನ್ನದೇ ಆದಂತಹ ಕೊಡುಗೆಯನ್ನು ನೀಡಿದೆ. ಈ ಪ್ರದೇಶದಲ್ಲಿ ಕೃಷಿಯ ಜೊತೆಗೆ ಪಶುಸಾಕಾಣಿಕೆಯು ಪ್ರಧಾನವಾಗಿ ಕಂಡುಬರುವ ಕಸುಬಾಗಿದೆ. ಕೃಷಿ ಕ್ಷೇತ್ರವು ದನಗಳಿಗೆ ಬೇಕಾದ ಮೇವು, ನೀರು ಇತ್ಯಾದಿಗಳನ್ನು ಒದಗಿಸುತ್ತದೆ. ಈ ಊರಿನ ಭೂ ರಚನೆಯು ವಿಶಾಲವಾದ ನದಿ ಮೈದಾನ ಪ್ರದೇಶದಿಂದ ಕೂಡಿದ್ದು ದಖನ್ ಪ್ರಸ್ಥಭೂಮಿ (ಮೈಸೂರು ಪ್ರಸ್ಥಭೂಮಿ ) ಭಾಗವಾಗಿದೆ. ಇಲ್ಲಿನ ವಾಯುಗುಣವು ಉಷ್ಣ ಮಾನ್ಸೂನ್ ಮಾದರಿ (Tropical Maansoon Climate) ವಾಯುಗುಣವನ್ನು ಹೊಂದಿದೆ. ಒಟ್ಟಾರೆ ಹೇಳುವುದಾದರೆ ಸುತ್ತೂರು ಒಂದು ಪ್ರಮುಖ ಸಾಂಸ್ಕೃತಿಕ ಕ್ಷೇತ್ರವಾಗಿ ಬೆಳವಣಿಗೆ ಹೊಂದಲು ಈ ಕೆಳಗಿನ ಅಂಶಗಳು ಪ್ರೇರಕವಾಗಿವೆ.

  • ಕಪಿಲಾ ನದಿಯ ಹರಿವು
  • ಮಣ್ಣಿನ ಫಲವತ್ತತೆ
  • ಕಾಲುವೆ ನೀರಾವರಿ (ಭತ್ತದ ಬೇಸಾಯ)
  • ನದಿಯ ಮೂಲಕ ಸಾಗಾಣಿಕೆ -ಸರಕು ಸಾಗಾಣಿಕೆ, ಪ್ರಯಾಣಿಕರ ಸಾಗಾಣಿಕೆ
  • ನೆರೆ-ಹೊರೆಯ ಪ್ರದೇಶಗಳೊಂದಿಗಿನ ಸಂಪರ್ಕ.
  • ಈ ಪ್ರದೇಶದಲ್ಲಿ ಆಳಿದ ಸಂತತಿಗಳ ಭೂದಾನ ಮುಂತಾದವುಗಳ ಕೊಡುಗೆ.

ಹೀಗೆ ಸುತ್ತೂರಿನ ಮೇಲೆ ಮೇಲ್ಮೈ ಲಕ್ಷಣ, ವಾಯುಗುಣ, ನದಿ, ಕಾಲುವೆಗಳು, ಮಣ್ಣುಗಳು ಮುಂತಾದವುಗಳು ತಮ್ಮದೇ ಆದಂತಹ ಪ್ರಭಾವವನ್ನು ಬೀರಿ ಸುತ್ತೂರನ್ನು ಒಂದು ಪ್ರಮುಖ ಸಾಂಸ್ಕೃತಿಕ ಮತ್ತು ಬೌಗೊಳಿಕ ಕ್ಷೇತ್ರವನ್ನಾಗಿ ಮಾಡಿದೆ.

ಐತಿಹಾಸಿಕ ಹಿನ್ನಲೆ

ಹಿಂದೆ ಈ ಊರಿಗೆ 'ಶ್ರೊತ್ರಿಯೂರು' ಎಂಬ ಹೆಸರಿದ್ದುದಾಗಿ ಕ್ರಿ.ಶ. ೧೦೩೨ ರ ಚೋಳರ ಶಾಸನದಿಂದ ಹಾಗೂ 'ಸೊತ್ತಿಯೂರು' ಎಂಬ ಹೆಸರಿದ್ದುದಾಗಿ ಕ್ರಿ.ಶ. ೧೧೬೯ ರ ಹೊಯ್ಸಳರ ಶಾಸನದಿಂದ ತಿಳಿದುಬರುತ್ತದೆ. ಸೊತ್ತಿಯೂರು ರಾಜಧಾನಿ ಎಂಬುದು ಕ್ರಿ.ಶ.೧೧೬೯ ರ ಶಾಸನದಲ್ಲಿದೆ. ಜನಪದವಾದರು ಬಳಸಿ ಬಳಸಿಕೊಂಡು ಬರುವ ಊರಾದ ಕಾರಣ ಸುತ್ತೂರು  ಎಂದು ಹೆಸರಾಯಿತು. ಅಲ್ಲದೆ ಸುತ್ತೂರು ನಾಮ ವಿಜಯನಗರದ ಕಾಲದ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಸುತ್ತೂರಿನ ಐತಿಹಾಸಿಕ ಹಿನ್ನಲೆಯನ್ನು ನೋಡಿದಾಗ ೧೧ ನೇ ಶತಮಾನದ ಆರಂಭದಲ್ಲಿ ಶ್ರೋತ್ರಿಯೂರೆಂದು ಪ್ರಸಿದ್ದವಾಗಿದ್ದ ಈ ಸ್ಥಳಕ್ಕೆ ಅನೇಕ ಶತಮಾನಗಳ ಇತಿಹಾಸವಿದೆ ಎನ್ನಬಹುದು. ಈ ಗ್ರಾಮವು ಶ್ರೋತ್ರಿಯೂರೆಂದು, ಶ್ರುತಿ, ಆಗಮ, ವೇದ ಮೊದಲಾದವುಗಳಲ್ಲಿ ಪಾರಂಗತವಾಗಿದ್ದ ವಿದ್ವಾಂಸರ ಸ್ಥಳವೊಂದಾಗಿತ್ತೆಂದು ತಿಳಿದುಬರುತ್ತದೆ.ಅಂದರೆ ೧೧ ನೇ ಶತಮಾನ ಮತ್ತು ಅದಕ್ಕೂ ಹಿಂದೆ ಈ ಊರು ಬ್ರಾಹ್ಮಣರ ಪ್ರಮುಖ ವಾಸಸ್ಥಾನವಾಗಿದ್ದು ವೈಷ್ಣವ ಪರಂಪರೆಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಆದರೆ ೧೨ ನೇ ಶತಮಾನದ ವೇಳೆಗೆ ಹೊಯ್ಸಳರ ಒಂದನೆಯ ನರಸಿಂಹನ ದಂಡ ನಾಯಕನಾದ ಲಕ್ಷ್ಮೈಯ್ಯ ಈ ಊರನ್ನು ತನ್ನ ಆಡಳಿತ ಕೇಂದ್ರವನ್ನಾಗಿ ಮಾಇಕೊನ್ದನು (ಕ್ರಿ.ಷ.೧೧೨೯). ಅಲ್ಲದೆ ಇಲ್ಲಿ ಒಂದು ಶೈವ ದೇವಾಲಯವನ್ನು ನಿರ್ಮಿಸಿದನು. ಇದೇ ಇಂದಿನ ಸೋಮೇಶ್ವರ ದೇವಾಲಯವೆನ್ನಲಾಗಿದೆ. ಅವನ ಕಾಲದಲ್ಲಿ ಜೈನ ಧರ್ಮವೂ ಸಹ ಸುತ್ತೂರಿನ ಪ್ರಮುಖ ಧರ್ಮಗಳಲ್ಲಿ ಒಂದಾಗಿತ್ತು ಎಂಬುದನ್ನು ಇಲ್ಲಿ ದೊರೆತಿರುವ ಅನೇಕ ಜೈನ ಶಿಲ್ಪಗಳು ದೃಧೀಕರಿಸಿವೆ ಹಾಗೂ ಇಲ್ಲಿ ಜೈನ ಬಸದಿಗಳು ನಿರ್ಮಾಣವಾಗಿದ್ದ ಅವಶೇಷಗಳು ಸಹ ದೊರೆತಿವೆ. ಆದರೆ ಈಗ ಇಲ್ಲಿನ ಜೈನಶಿಲ್ಪಗಳನ್ನು ಪಕ್ಕದ ಊರಾದ ಬಿಳುಗಲಿಯಲ್ಲಿ ಪ್ರತಿಷ್ಟಾಪಿಸಲಾಗಿದೆ ಮತ್ತೆ ಕೆಲವು ಸುತ್ತೂರಿನ ವಸ್ತು ಸಂಗ್ರಹಾಲಯದಲ್ಲಿವೆ. ಆದರೆ ಸುತ್ತೂರಿನ ಇತಿಹಾಸ ಇಬ್ಬರು ಮಹಾವ್ಯಕ್ತಿಗಳಿಂದ ಆರಂಭವಾಗುತ್ತದೆ. ಅವರೆಂದರೆ ಒಬ್ಬರು ಶ್ರೀ ಶಿವರಾತ್ರೀಶ್ವರರು, ಮತ್ತೊಬ್ಬರು ರಾಜೇಂದ್ರ ಚೋಳರು.

ದಕ್ಷಿಣ ಭಾರತದ ಮಹಾ ಸಾಮ್ರಾಜ್ಯಗಳಲ್ಲಿ ತಂಜಾವೂರಿನ ಚೋಳ ಸಾಮ್ರಾಜ್ಯವೂ ಸಹ ಒಂದು. ಅವರ ರಾಜ ಲಾಂಛನ ಹುಲಿ. ಚೋಳರ ದೊರೆಗಳಲ್ಲಿ ಅತ್ಯಂತ ಪ್ರಬಲನಾದ ದೊರೆ ರಾಜೇಂದ್ರ ಚೋಳ. ಇವನು ಅಧಿಕಾರಕ್ಕೆ ಬಂದ ನಂತರ ವಿಜಯ ಯಾತ್ರೆ ಕೈಗೊಂಡು ಎಲ್ಲಾ ಕಡೆ ವಿಜಯಗಳನ್ನು ಸಾಧಿಸಿ ಕರ್ನಾಟಕದ ತಲಕಾಡಿನ ಕಡೆ ತನ್ನ ಸೈನ್ಯವನ್ನು ಮುನ್ನಡೆಸಿದನು. ಆಗ ತಲಕಾಡನ್ನು ಗಂಗರ ದೊರೆಯಾದ ೪ ನೇ ರಾಚಮಲ್ಲನು ಆಳುತ್ತಿದ್ದನು. ರಾಜೇಂದ್ರ ಚೋಳನು ಸೈನ್ಯ ಸಮೇತ ಮೊದಲು ಗರಳ ಪುರಿ (ನಂಜನಗೂಡು) ಕ್ಷೇತ್ರಕ್ಕೆ ಪೂಜೆ ಸಲ್ಲಿಸಿ ಪೂರ್ವಾಭಿಮುಖವಾಗಿ ಹೊರಟು ಶ್ರೋತ್ರಿಯೂರನ್ನು (ಸುತ್ತೂರು) ತಲುಪಿದನು. ತುಂಬಿ ಹರಿಯುತ್ತಿದ್ದ ಕಪಿಲೆ ಸುತ್ತಲಿನ ಪ್ರದೇಶವನ್ನು ಸಮೃದ್ದಗೊಳಿಸಿದ್ದಳು. ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಂದ ಕಪಿಲೆ ಇಲ್ಲಿ ಉತ್ತರಕ್ಕೆ ತಿರುಗಿ ಹರಿದು ಮುಂದೆ ಮತ್ತೆ ಪೂರ್ವದ ಕಡೆ ಹರಿದು ಹೋಗಿತ್ತು. ಅಂದರೆ ಈ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುವುದಕ್ಕೆ ಕಪಿಲೆಗೆ ಇಚ್ಚೆ ಇಲ್ಲವೇನೋ, ಆದ್ದರಿಂದಲೇ ಇಲ್ಲಿಯೇ ಸುತ್ತುತಿದೆ ಎಂಬ ಭಾವನೆ ಬರುತ್ತಿತ್ತು. ಇದರಿಂದಾಗಿ ಈ ಊರಿಗೆ ಸುತ್ತೂರು ಎಂಬ ಹೆಸರು ಬಂದಿತ್ತು. ರಾಜೇಂದ್ರ ಚೋಳ ಆ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುತ್ತಾ ಬರುತ್ತಿದ್ದ. ಆದರೆ ಅವನು ಏರಿದ್ದ ಕುದುರೆಯ ನಡಿಗೆ ಹಿಂದಿನ ರೀತಿಯದಾಗಿರಲಿಲ್ಲವೆಂದು ಅವನಿಗೆ ಅನಿಸತೊಡಗಿತು. ರಾಜನ ನಿಯಂತ್ರಣಕ್ಕೆ ಒಳಪಡದೆ ನದಿಯ ಬಳಿಯಲ್ಲಿರುವ ಮಂಟಪದ ಹತ್ತಿರಕ್ಕೆ ಬಂದು ಅದಕ್ಕೆ ಪ್ರದಕ್ಷಿಣೆ ಹಾಕಲಾರಂಭಿಸಿತು. ಹೀಗೆ ಕುದುರೆ ಪ್ರದಕ್ಷಿಣೆ ಹಾಕಿದುದರಿಂದ ಈ ಊರಿಗೆ 'ಪ್ರದಕ್ಷಿಣೆಪುರ' ವೆಂದು ಹೆಸರಾಯಿತು. ಕುದುರೆಯ ನಡವಳಿಕೆಯಿಂದ ಆಶ್ಚರ್ಯಚಕಿತನಾದ ರಾಜೇಂದ್ರ ಚೋಳ ಅಲ್ಲಿ ಏನಿರಬಹುದೆಂದು ತಿಳಿಯಲು ಇಚ್ಚೆ ಪಟ್ಟು ಕುದುರೆಯಿಂದ ಇಳಿದು ತನ್ನ ಸೈನಿಕರನ್ನು ಆ ಮಂಟಪವನ್ನು ಗಿಡಗಂಟೆಗಳಿಂದ ತೆರವುಗೊಳಿಸಲು ಆಜ್ಞೆ ಮಾಡಿದನು. ಸಂಜೆಯಾದುದರಿಂದ ಕೆಲಸವನ್ನು ನಿಲ್ಲಿಸಿದರು. ಆ ರಾತ್ರಿ ತುಂಬಾ ಮಳೆಯಾಗಿ ಕಪಿಲೆಯಲ್ಲಿ ಪ್ರವಾಹ ತುಂಬಿ ಹರಿಯತೊಡಗಿತು.ಮರುದಿನ ಮಧ್ಯಾಹ್ನದ ಹೊತ್ತಿಗೆ ಪ್ರವಾಹ ಇಳಿಮುಖವಾಗಿ ಮಂಟಪ ನಿಚ್ಚಳವಾಗಿ ಕಾಣತೊಡಗಿಸಿತು. ಸೈನಿಕರು ರಾಜನಿಗೆ ವಿಚಾರ ಮುಟ್ಟಿಸಿದರು.ರಾಜೇಂದ್ರ ಚೋಳನು ಮಂಟಪದ ಬಳಿ ಬಂದು ಅಲ್ಲಿನ ದೃಶ್ಯವನ್ನು ನೋಡಿ ಸ್ತಂಭೀಭೂತನಾದನು. ಅಲ್ಲಿ ಇಷ್ಟ ಲಿಂಗದಲ್ಲಿಯೇ ದೃಷ್ಟಿಯನ್ನು ಕೇಂದ್ರಿಕರಿಸಿದ ಯೊಗಿಯೊಬ್ಬರು ಮಂಟಪದ ಮಧ್ಯದಲ್ಲಿ ಕುಳಿತಿರುವುದನ್ನು ನೋಡಿ ಭಕ್ತಿ ಪರವಶನಾಗಿ ಯತಿಗಳಿಗೆ ವಂದಿಸಿದನು. ಅವರೇ ಸುತ್ತೂರು ಶ್ರೀ ಮಠದ ಆದಿಗುರುಗಳಾದ ಶ್ರೀ ಶಿವರಾತ್ರೀಶ್ವರರು. ಇವರ ಮಾತುಗಳಿಂದ ಪ್ರಭಾವಿತನಾದ ರಾಜೇಂದ್ರ ಚೋಳ ಗಂಗರಾಜ್ಯದ ಮೇಲೆ ದಂಡೆತ್ತಿ ಹೋಗುವ ಆಸೆಯನ್ನು ಬಿಟ್ಟು ಗಂಗರ ದೊರೆ ರಾಚಮಲ್ಲನೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದನು ಮತ್ತು  ಶಿವರಾತ್ರೀಶ್ವರರಿಂದ ಊರಿನಲ್ಲಿ ಒಂದು ಮಠವನ್ನು ಸ್ಥಾಪಿಸುವಂತೆ ಕೋರಿಕೊಂಡನು. ಆ ಮಠವೇ ಮುಂದೆ ಶ್ರೀ ಶಿವರಾತ್ರೀಶ್ವರ ವೀರಸಿಂಹಾಸನ ಮಠವೆಂದು ಪ್ರಸಿದ್ದಿಯನ್ನು ಪಡೆಯಿತು. ರಾಜೇಂದ್ರ ಚೋಳನ ಕುದುರೆ ಶಿವರಾತ್ರೀಶ್ವರರನ್ನು ಪ್ರದಕ್ಷಿಣೆ ಹಾಕಿದ್ದರಿಂದ ಶ್ರೋತ್ರಿಯೂರು ಮುಂದೆ ಸೊತ್ತಿಯೂರು, ಸುತ್ತೂರು ಎಂದು ಹೆಸರನ್ನು ಪಡೆದು ಕೊಂಡಿತು.

ಸುತ್ತೂರಿನ ಅಧ್ಯಯನಕ್ಕಾಗಿ ಶಿಲಾಶಾಸನಗಳು ೧೦ನೇ  ಶತಮಾನದಿಂದ ೧೮ನೇ  ಶತಮಾನದವರೆಗೆ ಲಭಿಸುತ್ತವೆ. ಎಪ್ಹಿಗ್ರಾಫಿಯ ಕರ್ನಾಟಕದ 3ನೇ ಸಂಪುಟದಲ್ಲಿ ೨೫ ಪ್ರಕಟಿತ ಶಾಸನಗಳು ಇವೆ. ತಂಜಾವೂರಿನ ಚೋಳರು, ದೋರಸಮುದ್ರದ ಹೊಯ್ಸಳರು, ವಿಜಯನಗರ ಪ್ರಾಂತ್ಯಾಧಿಕಾರಿಗಳು, ಮೈಸೂರಿನ ಒಡೆಯರು ಮತ್ತು ಕೆಲವು ಚಿಕ್ಕ ಚಿಕ್ಕ ಪಾಳೇಗಾರರು. ಉದಾ: ಉಮ್ಮತ್ತೂರು, ಹದಿನಾಡು ಪಾಳೇಗಾರರು, ರಾಜಕೀಯವಾಗಿ ಸುತ್ತೂರು ಮತ್ತು ಸುತ್ತಲಿನ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಿದ್ದರು. ಈ ರಾಜಕೀಯ ಸಂಪರ್ಕವೇ ಸುತ್ತೂರಿನಲ್ಲಿ ಸಾಂಸ್ಕೃತಿಕ ಪರಿಸರದ ಸೃಷ್ಟಿಗೆ ಕಾರಣವಾಯಿತು. ಆದ್ದರಿಂದ ರಾಜಕೀಯ ಸಂತತಿಗಳು ಬಹಳ ಪ್ರಾಮುಖ್ಯತೆ ಹೊಂದಿವೆ. ಗಂಗರು ಮತ್ತು ಚೋಳರ ಕಾಲದ ನಾಲ್ಕು ಶಾಸನಗಳು, ಹೊಯ್ಸಳರ ಕಾಲದ ೧೪ ಶಾಸನಗಳು, ವಿಜಯನಗರದ ಎರಡು, ಉಮ್ಮತ್ತೂರಿನ ಪಾಳೇಗಾರರ ಒಂದು ಮತ್ತು ಮೈಸೂರು ಒಡೆಯರ ನಾಲ್ಕು ಶಾಸನಗಳು ಎಂಬುದಾಗಿವೆ. ರಾಜಕೀಯ ಪ್ರತಿಕ್ರಿಯೆಯ ದೃಷ್ಟಿಯಿಂದ ಕ್ರಿ.ಶ. ೧೧೧೨ ರಿಂದ ೧೨೭೭ ರವರೆಗಿನ ಹೊಯ್ಸಳರ ಕಾಲದ ಶಾಸನಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆತಿವೆ. ಚೋಳರ ಕಾಲದ ಕೇವಲ ಎರಡು ಶಾಸನಗಳು ದೊರೆತಿದ್ದರೂ ಸಹ ಅವು ಐತಿಹಾಸಿಕ ದೃಷ್ಟಿಯಿಂದ ತಮ್ಮದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.

ಹೊಯ್ಸಳರ ೧೧೬೯ ರ ಶಾಸನದ ಪ್ರಕಾರ ದೊರೆಯಾದ ಮೊದಲನೇ ನರಸಿಂಹನ ಪ್ರಧಾನಿಯಾದ ಲಕುಮಯ್ಯನ (ಲಕ್ಷ್ಮಯ್ಯ) ಪ್ರಮುಖ ಸ್ಥಳವಾಗಿತ್ತೆಂದೂ ಹಾಗೂ ಹೊಯ್ಸಳರ ಉಪ ಪ್ರಾಂತ್ಯ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ಇವರು ಧರ್ಮ ಭೀರುವಾಗಿದ್ದು ಸೋಮೇಶ್ವರ ಮಾತು ನಾರಾಯಣ (ನಾಗ ಕೇಶವ)  ದೇವಾಲಯಗಳನ್ನ್ ಕಟ್ಟಿಸಿದರೆಂಬ ಉಲ್ಲೇಖವಿದೆ. ಇವರ ದಾಖಲೆಗಳಲ್ಲಿ ಸೊತ್ತಿಯೂರು ಎಂದು ಸುತ್ತೂರನ್ನು ಹೆಸರಿಸಲಾಗಿದೆ.

ಈ ಊರಿನಲ್ಲಿ ಪ್ರಾಚೀನ ಪರಂಪರೆಯ ಒಂದು ವೀರಶೈವ ಮಠವಿದ್ದು, ಇದರ ಸ್ಥಾಪನೆಯ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಈ ಮಠದ ಪ್ರಾಚೀನತೆ ೧೦ನೇ ಶತಮಾನದ ಮಧ್ಯ ಭಾಗಕ್ಕೆ ಹೋಗಿದೆ. ನಂಜನಗೂಡಿನ ಮತ್ತು ೧೦೨೩-೧೦೯೦ ರ ಶಾಸನದಲ್ಲಿ ಉಕ್ತವಾಗಿರುವ ಈಶಾನೇಶ್ವರ ಒಡೆಯರ್ ಎಂಬುವರು ಕಂಚಿಯ ರಾಜೇಂದ್ರ ಚೋಳನಿಗೆ ರಾಜಗುರುವಾಗಿದ್ದರೆಂದು ಶಾಸನ ತಿಳಿಸುತ್ತದೆ.

ಮೇಲಿನ ಅಂಶಗಳಲ್ಲದೆ ಸುತ್ತೂರಿನ ಗ್ರಾಮದೇವತೆಯಾದ ಸುತ್ತೂರಮ್ಮಳ ಬಗ್ಗೆ ಜನಗಳಲ್ಲಿ ಅನೇಕ ಕಥೆಗಳಿವೆ. ಅವುಗಳಲ್ಲಿ ಒಂದು ಈ ರೀತಿ ಇದೆ. ಸುತ್ತೂರಮ್ಮ ಮತ್ತು ಹೊಸಕೋಟೆಯ ಕಾಳಿಕಾಂಬರ ನಡುವೆ ಊರಿನ ಮಹತ್ವದ ಬಗ್ಗೆ ಚರ್ಚೆಯಾಗಿ, ಚರ್ಚೆ ವಿಕೋಪಕ್ಕೆ ತಿರುಗಿ ಸುತ್ತೂರಮ್ಮ "ಹತ್ತೂರು ಮುಳುಗಿದರೂ ಸುತ್ತೂರು ಮುಳುಗುವುದಿಲ್ಲ" ವೆಂದು ಪ್ರತಿಜ್ಞೆ ಮಾಡಿ ಕಲ್ಲಾಗಿ ಸುತ್ತೂರಿನಲ್ಲಿ ನೆಲೆ ನಿಂತಳೆಂದು ಐತಿಹ್ಯವಿದೆ. ಅಲ್ಲದೆ ಅದೇ ರೀತಿಯಲ್ಲಿ ಸುತ್ತೂರಿನ ನಾಲ್ಕನೇ ಗುರುಗಳಾದ ಶ್ರೀ ಸಿದ್ದನಂಜ ದೇಶೀಕೇಂದ್ರ ಮಹಾಸ್ವಾಮಿಗಳ ಕಾಲದಲ್ಲಿ ಮಹಾಶರಣನಾದ ಮರಿದೇವರು ಅಥವಾ ಮಹದೇಶ್ವರರು ಮಹದೇಶ್ವರ ಬೆಟ್ಟದಲ್ಲಿ ನೆಲೆನಿಲ್ಲುವ ಮೊದಲು ಸುತ್ತೂರಿಗೆ ಬಂದಿದ್ದರು. ಇಲ್ಲಿ ಅವರಿಗೆ ರಾಗಿ ಬೀಸುವ ಕಾಯಕವನ್ನು ವಹಿಸಲಾಯಿತು. ಮಹದೇಶ್ವರ ತಮ್ಮ ತಪಃ ಶಕ್ತಿಯಿಂದ ಖಂಡುಗ ಖಂಡುಗ ರಾಗಿಯನ್ನು ಕೆಲವೇ ಕ್ಷಣದಲ್ಲಿ ಬೀಸಿಬಿಡುತ್ತಿದ್ದರು ಎಂಬುದಾಗಿ ಮೌಖಿಕ ದಾಖಲೆಗಳಲ್ಲಿ ದಾಖಲಾಗಿದೆ.ಇಂದಿಗೂ ಸಹ ಸುತ್ತೂರಿನಲ್ಲಿ ಮಹದೇಶ್ವರರು ಬೀಸಿದ ರಾಗಿ ಕಲ್ಲು ಮಾತು ಅವರು ಬಳಸಿದರೆನ್ನಲಾದ ಕೆಲವ ವಸ್ತುಗಳಿದ್ದು, ಮಹದೇಶ್ವರರ ಗದ್ದಿಗೆಯೂ ಇದೆ. ಈ ಭಾಗದ ಹಾಗೂ ಕೊಳ್ಳೇಗಾಲದ ಭಾಗದ ಜನಪದರ ಹಾಡುಗಳಲ್ಲಿ ಸುತ್ತೂರು ಮತ್ತು ಮಹದೇಶ್ವರರ ಅವಿನಾಭಾವ ಸಂಬಂಧವನ್ನು ಕಾಣಬಹುದಾಗಿದೆ.ಅಂದಿನಿಂದ ಸುತ್ತೂರಿನ ಹೆಸರಿನ ಜೊತೆಗೆ ಹೊಸದೊಂದು ಗಾದೆಯ ಮಾತೇ ಹುಟ್ಟಿಕೊಂಡಿತೆನ್ನಬಹುದು. ಅದೇನೆಂದರೆ "ಸುತ್ತೂರು ಸುಖವೆಂದು ಹೋದರೆ, ಕುಕ್ಕೇಲಿ ರಾಗಿ ತುಂಬಿಟ್ಟರು"ಎಂಬುದೇ ಆಗಿದೆ (ಇದು ಜನಪದಗಳಲ್ಲಿ ದಾಖಲಾಗಿದೆ). ಹೀಗೆ ಸುತ್ತೂರು ಅತ್ಯಂತ ಪ್ರಾಚೀನವಾದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು ೧೨ ನೇ ಶತಮಾನದ ಶರಣರ ಬೀಡಾಗಿತ್ತೆಮ್ಬುದನ್ನು ತಿಳಿಯಬಹುದಾಗಿದೆ. ಒಟ್ಟಾರೆ ಸುತ್ತೂರು ಒಂದು ಐತಿಹಾಸಿಕ ಸ್ಥಳವಾಗಿದ್ದು ತಪೋಭೂಮಿಯಾಗಿ  ಇಂದಿಗೂ ಸಹ ತನ್ನ ಪ್ರಭಾವವನ್ನು ದಿಗಂತಗಳಲ್ಲಿ ಹರಡುತ್ತಿದೆ.

ಸುತ್ತೂರು ಶ್ರಿಮಠದಲ್ಲಿರುವ ವಸ್ತುಸಂಗ್ರಹಾಲಯವು ಸುತ್ತೂರಿನ ಇತಿಹಾಸವನ್ನು ಅರ್ಥಗರ್ಭಿತವಾಗಿ ಸಾರುತ್ತಿದೆ.

ಮೂಲ:ರಜತ ದರ್ಪಣ.

 

 

ಕೊನೆಯ ಮಾರ್ಪಾಟು : 7/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate