অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲಂಬಾಣಿಗರ ಪರಿಚಯ

ಲಂಬಾಣಿಗರ ಪರಿಚಯ

ಭಾರತದ ತುಂಬೆಲ್ಲ ಅಲ್ಲಲ್ಲಿ ಚದುರಿಕೊಂಡು  ಅನೇಕತೆಯಲ್ಲಿ ಏಕತೆಯನ್ನು ಸಾರುವಂತೆ ಒಂದೇ ತೆರನಾದ ಆಚಾರ, ವಿಚಾರ, ಭಾಷೆ, ಉಡಿಗೆ-ತೊಡಿಗೆಗಳಿಂದ ಬಹು ಬೇಗ ಗುರುತಿಸಲ್ಪಡುವ ಬುಡಕಟ್ಟು ಜನಾಂಗಗಳಲ್ಲಿ ಲಂಬಾಣಿಗರು ಬಹುಷಃ ಮೊದಲಿಗರೆಂದರೆ ತಪ್ಪಾಗಲಾರದು.

ಮಹಿಳೆಯರು ಉಡುವ ಲೆಹಂಗ, ಕುಪ್ಪಸ, ಮೆಲುಡುಪುಗಳು ಕಸೂತಿಯಿಂದ ವಿರಚಿತವಾದ ಹೂವಿನ ಚಿತ್ತಾರ . ಮಿರಿಮಿರಿ  ಮಿಂಚುವ ಕನ್ನಡಿ, ಬಣ್ಣದ ಬಟ್ಟೆಯ ಜೋಡಣೆಗಳು, ವಿಶಿಷ್ಟವಾಗಿದ್ದು ತಲೆಯ ಕೂದಲಿಗೆ ಕಿವಿಯ ಪಕ್ಕದಲ್ಲಿ ಹೆಣೆದ ಬೆಳ್ಳಿಯ ಗೊಬ್ಬಿಗಳು, ಮೂಗಿಗೊಂದು ಭೂರಿಯ ಚಿತ್ತಾರದ ಮೂಗುನತ್ತು, ಚಿನ್ನದ  ಅಥವಾ ಓಲೆ, ಕತ್ತಿನಲ್ಲಿ ಬೆಳ್ಳಿ/ಚಿನ್ನದ ಕಾಸುಗಳು, ಕೈಗಳ ತುಂಬಾ ಬಿಳಿಯ ಕಡವೇ ಕೋಡಿನ, ದಂತದ ಬಳೆಗಳು, ಕಾಲುಗಳಲ್ಲಿ ಕಡಗ, ಗೆಜ್ಜೆ ಇವೆಲ್ಲವೂ ಅವರು ಧರಿಸಿರುವ ಉಡಿಗೆ ತೊಡಿಗೆಗಳಾಗಿವೆ. ಇವರನ್ನು ಸಂತೆಮಾಳ ಅಂಗಡಿ ಬೀದಿ, ಅಥವಾ ಅವರ ತಾನ್ದಗಳಲ್ಲಿ  ನೋಡಿದ ಕೂಡಲೇ ಇವರು ಲಂಬಾಣಿಗರೆನ್ದು ಗುರುತಿಸಲ್ಪಡುತ್ತಾರೆ.ಈಗಂತೂ ಇಂತಹ ಉಡುಪುಗಳು ಫ್ಯಾಶನ್ ತೊಡಿಗೆಗಳಾಗಿವೆ. ಅದುವೇ ಉತ್ತರ ಕರ್ನಾಟಕದ ಉತ್ತರ ಭಾರತದಲ್ಲಿ ಯತೇಚ್ಛವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಮೈಸೂರು, ಚಾಮರಾಜನಗರದ ಕಡೆಗಳಲ್ಲಿ ಬೆರೆಳೆಣಿಕೆಯಷ್ಟು ವಯಸ್ಸಾದವರು ಮಾತ್ರ ಈ ಉಡುಗೆಯಲ್ಲಿ ಕಾಣಸಿಗುತ್ತಾರೆ. ಉಳಿದ ಮಹಿಳೆಯರು ಆಯಾ ಪ್ರಾಂತ್ಯದ ಅಧುನಿಕ ಉಡುಗೆ ತೊಡುಗೆಗಳಿಗೆ ಮಾರುಹೋಗಿರುತ್ತಾರೆ. ನೋಡುಗರಿಗೆ 'ಇವರದೆಂತಹ ಸಂಸ್ಕೃತಿ ಮಾರಾಯ'! ಎಂದೆನಿಸಿದರೂ ಒಳ ಹೊಕ್ಕವನಿಗೆ ಹಾಲು ಅನ್ನ ಜೇನುತುಪ್ಪದಂತಹ ಮಾಹಿತಿಗಳು ಸಿಗುವುದರಲ್ಲಿ ಆಶ್ಚರ್ಯವಿಲ್ಲ.

ಇವರು ೪೦ ವರುಷಗಳ ಹಿಂದೆ ಒಂದು ಮದುವೆಯನ್ನು ಒಂದು ತಿಂಗಳು ಮಾಡುತ್ತಿದ್ದರಂತೆ. ಮದುವೆ ಮಾಡಿಸಲು ಹುಡುಗಿ ನೋಡಿ ಒಪ್ಪಂದ ಮಾಡಲು "ಹಿರಿಯರದೆ ಅಂತಿಮ ತೀರ್ಮಾನವಾಗಿರುತ್ತದೆ" ಅದಕ್ಕೆ ಒಂದು ಉದಾ:ಒಬ್ಬ ಹಿರಿಯರು ಹೇಳಿದ ಪ್ರಕಾರ ಒಮ್ಮೆ ಗಂಡು ಮದುವೆಯಾಗಿದ್ದ ಹೆಣ್ಣಿಗೆ ಮುಂದಿನ ಎರಡು ಹಲ್ಲು ಇಲ್ಲವೆಂಬುದು ಮದುವೆಯಾದ ನಂತರವೇ ಅಂದರೆ ಮೊದಲರಾತ್ರಿಯ ನಂತರ ಬೆಳಿಗ್ಗೆ ಪತಿಗೆ ಟೀ ಕೊಡಲೆಂದು ಬಾಯಿ ತೆರೆದು "ಮಾವ" ಎಂದು ಕರೆದಾಗಲೇ ಗಂಡನಿಗೆ ಹೆಂಡತಿಯ ಎರಡು ಹಲ್ಲು ಇಲ್ಲವೆಂದು ಗೊತ್ತಾಯಿತಂತೆ. ಅದಕ್ಕೆ ಗಂಡು ಸಿಡಿಮಿಡಿಗೊಂಡಾಗ ಹಿರಿಯರು ಹೇಳಿದರಂತೆ ಕೈ ಕಾಲು ಗಟ್ಟಿಯಾಗಿವೆ ಒಳ್ಳೆ ಕುಲದ ಹೆಣ್ಣು ಸಿಕ್ಕಿದ್ದಾಳೆ ದುಡಿದು ತಿನ್ನಿ ಎಂದು ಸಮಾಧಾನ ಪಡಿಸಿದರಂತೆ.

ಹೆಣ್ಣನ್ನು ಸಂತೆಮಾಳದಲ್ಲಿ ಗಂಡು  ಮದುವೆ ಆಗುವ ಮೊದಲು ದೂರದಿಂದಲೇ ನೋಡಬಹುದಾಗಿತ್ತು. ಆದರೆ ಈಗಿನ ರೀತಿಯಲ್ಲಿ ಹತ್ತಿರ ಹೋಗಿ ಮಾತನಾಡುವ ಸಂಪ್ರದಾಯವಿರಲಿಲ್ಲ. ಮದುವೆ ಮುಗಿದ ಮೇಲೆ ತಾಮ್ರದ ತಟ್ಟೆ ಅಥವಾ ಲೋಟದಲ್ಲಿ ನೀರು ತುಂಬಿಸಿ ಅದರಲ್ಲಿ ಹೆಣ್ಣು ಗಂಡು ತಮ್ಮ ಮುಖಗಳನ್ನು ನೋಡಿದ ನಂತರವೇ ಒಬ್ಬರನ್ನೊಬ್ಬರು ಮಾತನಾಡುತ್ತಿದರಂತೆ.

ಮದುವೆ ಎಂದರೆ ಪ್ರತಿಯೊಂದು ಜನಾಂಗದವರಲ್ಲಿ ತಮ್ಮದೇ ಆದ ಕಟ್ಟುಪಾಡುಗಳಿರುತ್ತವೆ. ಅದನ್ನು ಮೀರಿ ಯಾರು ಸಹ ಮದುವೆಯಾಗಲು ಒಪ್ಪುವುದಿಲ್ಲ. ಹಾಗಾಗಿ ಮದುವೆಗಳಲ್ಲಿ ಕುಲ ಗೋತ್ರಗಳು ಬಹುಮುಖ್ಯವಾಗಿರುತ್ತದೆ. ಜನಾಂಗ ಹಚ್ಚಿದಂತೆ ಈ ಗೋತ್ರಗಳು ಹೆಚ್ಚಾಗಬಹುದೆಂದು ಹೇಳಬೇಕಾಗಿಲ್ಲ ಎಷ್ಟೇ ಜನಸಂಖ್ಯೆ ಹಾಗೂ ಹೊಸಬರ ಸೇರ್ಪಡೆಗಳು ಆದರೂ ಇಂತಿಷ್ಟೇ ಇರಲು ಸಾಧ್ಯ ಎಂದು ಅಭಿಪ್ರಾಯ ಪಡಬಹುದು.

ಲಂಬಾಣಿ ಸಮುದಾಯದ ಬಗೆಗಿನ ಗೋತ್ರಗಳು ಇಷ್ಟೇ ಎಂದು ಹೇಗೆ ಹೇಳಲು ಸಾಧ್ಯ ಅದನ್ನು ಅಳತೆ ಮಾಡಿದವರ್ಯಾರು? ಅದನ್ನು ಕಂಡವರ್ಯಾರು ? ಎಂಬ ಹಲವು ಪ್ರಶ್ನೆಗಳು ಮೂಡಬಹುದು. ಆದರೆ, ಯಾವುದೇ ಜನಾಂಗದ ಗೋತ್ರಗಳು ಸಹ ತಿಳಿಯಲು ಹೊರಟಾಗ ಆಚರಣೆಯಿಲ್ಲಿರುವುದನ್ನು ಶ್ರಮವಹಿಸಿ ಆಸಕ್ತಿಯಿಂದ ಅವುಗಳನ್ನು ಸಂಗ್ರಹಿಸಿದ ಹಲಾವಾರು ಮಾಹಿತಿಗಳ ಗ್ರಂಥ ಋನಗಳು ಬಹಳ ಮುಖ್ಯ. ಇದೇ ಹಾದಿಯಲ್ಲಿ ಒಂದಿಷ್ಟು ಹಿರಿಯರಿಂದ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ಕ್ರೊಢಿಕರಿಸಿ ನೋಡಿದಾಗ 'ಭಾರತದ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ಸುಮಾರು ೨೫ ಲಕ್ಷ ಲಂಬಾನಿಗರೆಂದು ಕರ್ನಾಟಕದ ಮಟ್ಟಿಗೆ ಗುರುತಿಸಲ್ಪಟ್ಟಿದ್ದರು.' ಇವರಲ್ಲಿ ಯಾವುದೇ ಸಂದರ್ಭದಲ್ಲಿ ಎಲ್ಲೆಯೆ ಹೋಗಿ ಕೇಳಿದರೂ ಸಹ ಗೋತ್ರಗಳು ಮದುವೆ ಮಾಡಿಸಲು ಬಹುಮುಖ್ಯವಾಗಿರುವಂತದ್ದಗಿ ಕಂಡುಬರುತ್ತದೆ.

ಕುಲದ ಬಗ್ಗೆ ತಿಳಿಯಲು ಹೋದಾಗ ಶ್ರೀ ಕೃಷ್ಣನ ಕುಲದವರೆಂದು ಹೇಳುತ್ತಾರೆ. ಯಾಕೆಂದರೆ ತಿರುಪತಿಯ ತಿಮ್ಮಪ್ಪ ಅಂದರೆ ಬಾಲಾಜಿ ಪ್ರತ್ಯಕ್ಷನಾಗಿ ದರ್ಶನ ನೀಡಿದ್ದು ಸಂತ ಶ್ರೀ ಹಾತಿರಾಮ್ ಬಾವಾಜಿಗೆ ಇಟಾ ಲಂಬಾಣಿಗನಾಗಿದ್ದು ತಿರುಪತಿಯಲ್ಲಿ ಹಾತಿರಾಮ ಬಾವಾಜಿಯ ಮಠವಿದ್ದು ಉತ್ತರಾಧಿಕಾರಿಯಾಗಿ ಈಗಲೂ ಸಹ ಗುರುಗಳು ಅಲ್ಲಿರುವುದನ್ನು ಕಾಣುತ್ತೇವೆ. "ಲಂಬಾಣಿ ಉಡುಪಿನಲ್ಲಿ" ಹೋದರೆ ಸುಮಾರು ೧೦ ವರುಷಗಳ ಹಿಂದೆ ತಿಮ್ಮಪ್ಪನ ನೇರ ದರುಶನಕ್ಕೆ ಅವಕಾಶವೂ ಸಹ ಕಲ್ಪಿಸಿ ಕೊಡಲಾಗಿತ್ತು.ಆದರೆ ಈಗಿನ ರಾಜಕೀಯ ಹಾಗೂ ಬ್ರಾಹ್ಮಿ ಪದ್ದತಿಯ ಪ್ರಾಬಲ್ಯದಿಂದ ಅಂತಹ ಸವಲತ್ತುಗಳಿಂದ ಈಗ ವಂಚಿತರಾಗಿದ್ದಾರೆ. ಲಂಬಾಣಿಗರು ಕುಲದೇವತಾ ಪೂಜೆಯಲ್ಲಿ ಬಾಲಾಜಿಗೆ ಬೋಗ್ ಎಂಬ ಕಾರ್ಯಕ್ರಮವನ್ನು ನೆರವೆರಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ.

ತದನಂತರ ಇವರ ಗ್ರಾಮದೆವತೆಗಳಾಗಿ, ಮರಿಯಮ್ಮ, ಸೇವಾಲಾಲ್, ಮೀಟು ಭೂಕ್ಕ ತಡೊ ಎಂಬ ಹೆಸರಿನ ದೇವತೆಗಳನ್ನು ಪೂಜಿಸುತ್ತಿದ್ದಾರೆ.

ಮಧ್ಯದಲ್ಲಿ ಗೊತ್ರಗಳಾದಾಗ ಉನಾಶಕ್ತಿ  ಕೇಶಿಶಕ್ತಿ, ಮತ್ರಾಲ್ ತೊಳಜಾ, ಭವಾನಿ, ಇತ್ಯಾದಿ ಹೆಣ್ಣು ದೇವತೆಗಳನ್ನು ಸಹ ೩ ಅಥವಾ ಐದು ವರುಷಗಳಿಗೊಮ್ಮೆ ಪೂಜಿಸುತ್ತಾರೆ.

ಕ್ರಮೇಣ ಶಿವ್ವನ ಆರಾಧಕರಾಗಿಯೂ ನಂತರ ಇತರ ಸಾದುಸಂತರುಗಳ ಆಶಿರ್ವಾದಗಳು ಲಭಿಸಿ ಅವರನ್ನು ಪೂಜಿಸುವುದುಂಟು ಹಿಂದೂ ಸಂಪ್ರದಾಯದಲ್ಲಿ ಶ್ರೀ ಕೃಷ್ಣನ ಹಬ್ಬವೆಂದೇ ಹೇಳುವ ದೀಪಾವಳಿ ಇವರಿಗೆ ಬಹಳ ವಿಶೇಷವಾದ ಹಬ್ಬ ಈ ಹಬ್ಬಕ್ಕಾಗಿ ವಲಸೆ ಹೋದವರೆಲ್ಲಾ ಮತ್ತೆ ಊರಿಗೆ ಬಂದು ಹೊಸಬಟ್ಟೆ ತೊಟ್ಟು ಅಮಾವಾಸ್ಯೆ ದಿನ ಅಂದರೆ ಕಾಳಿಮಾಸ್ ನಲ್ಲಿ ಮರಿ ಕೂಯ್ದು ಖಾದ್ಯ ತಯಾರಿಸಿ ಪೂಜೆ ಮಾಡಿ ತಮ್ಮ ತಮ್ಮ ಪಾಲುಗಳನ್ನು ಪಡೆದು ಅವರವರ ಮನೆಯಲ್ಲಿ ಅಡಿಗೆ ಮಾಡಿ ಸೇವಿಸುವುದು ಮೊದಲನೇ ದಿನವಾದರೆ ಮಾರನೆ ದಿನ, ಮನೆಯನ್ನು ಶುದ್ಧಿಕರಿಸಿ ಹೊಸ ಬಟ್ಟೆಯೊಂದಿಗೆ ಸತ್ತವರಿಗೆ ಸತ್ಕಾರ್ಯವನ್ನು ಮಾಡುತ್ತಾರೆ. ಇದನ್ನು ದೀಪಾವಳಿಯ ಡಬುಕಾರ್ ಎನ್ನುತ್ತಾರೆ.

ಹೆಣ್ಣು ಮಕ್ಕಳು ರಾತ್ರಿಯಲ್ಲಿ ಒಂದೆಡೆ ಕೂಡಿ ಮಾಡಿದ ಸಿಹಿ ಅನ್ನವನ್ನು ಮಾರನೆ ದಿನ ದೀಪಾವಳಿಗೆ ಅವರವರ ಮನೆಗೆ ಕಳುಹಿಸಿ ನಂತರ ಹೂವು ತರಲೆಂದು ಹೊರಡುತ್ತಾರೆ. ಗಂಡುಮಕ್ಕಳು ಲಗೋರಿ ಆಟವಾಡುವರು. ಈ ಆಟಕ್ಕಾಗಿ ಮೂರು ಪಾಡಾದವರು ಎರಡು ತಂಡ ಅಂದರೆ, ರಾಥೋಡ್ ನನ್ನು ಭೂಕ್ಯ ಎಂದು, ಚೌಹಾನ್ ಹಾಗೂ ಪಮಾರ್ ಇವರನ್ನು ಮೂಡ್ (ಜಾತ್ತೇರ್) ಎಂದು ಭೂಕ್ಯ ಹಾಗೂ ಮೂಡ್ ತಂಡದವರು ಆಟವಾಡುವರು. ಮತ್ತೊಂದೆಡೆ ಮೊರೆಯಾಗುವ ಕೆಲವು ಪಡ್ಡೆ ಹುಡುಗರು, ಹುಡುಗಿಯರು ತರುವ ಹೂವುಗಳನ್ನು ಕಿತ್ತಾಕುತ್ತಾರೆ. ಹೆಣ್ಣುಮಕ್ಕಳು ಅವರ ಕಣ್ಣು ತಪ್ಪಿಸಿ ಹೂವು ತಂದು ಎಲ್ಲರ ಮನೆ ಬಾಗಿಲಲ್ಲಿ ಗೊಬ್ಬರದ ಹುಂಡೆಯಲ್ಲಿ ಹೂವನ್ನು ಇಟ್ಟು ಪೂಜಿಸಿ ಹೋಗುತ್ತಾರೆ. ಇದನ್ನು ಗೋಜನೋ ಎಂದು ಕರೆಯುವುದುಂಟು.

ಹೀಗೆ ವಿವಿಧ ಆಚರಣೆಗಳೊಂದಿಗೆ ದೀಪಾವಳಿಯನ್ನು ಆಚರಿಸುವ ಇವರು ಉಳಿದ ಹಬ್ಬಗಳೆಂದರೆ ಮಕ್ಕಳು ಹುಟ್ಟಿದಾಗ, ಅಂಬೆಗಾಲಿಡುವಾಗ, ಮಾತನಾಡುವಾಗ, ನಡೆಯುವಾಗ, ನಂತರ ಮದುವೆ ಎಂಬ ಸಂಬ್ರಮಗಳೊಂದಿಗೆ ನಡೆಯುತ್ತಿತ್ತು. ಆದರೆ, ಈಗ ಪ್ರಾಂತೀಯ ಹಬ್ಬಗಳನ್ನು ಸಹ ಆಚರಿಸುವ ರೂಢಿಯಾಗಿದೆ.

ಕೋಡುಗೆದಾರರು : ಪಳನಿಸ್ವಾಮಿ ಜಾಗೇರಿ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate