অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮರೆಯಾಗುತ್ತಿರುವ ಬೀದಿ ನಾಟಕಗಳು

ಮರೆಯಾಗುತ್ತಿರುವ ಬೀದಿ ನಾಟಕಗಳು

 

ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಇತ್ತೀಚಿನ ಬೀದಿ ನಾಟಕಗಳ ಯಶಸ್ಸು ಗಮನಾರ್ಹವಾದ ಸಂಗತಿ. ಎ.ಎನ್ ಮೂರ್ತಿ ಮತ್ತು ವಿಜಯಾರವರು ಮೊದಲು ಬೀದಿ ನಾಟಕವನ್ನು ಪ್ರಚಾರಕ್ಕೆ ತಂದವರಾದರೆ, ಬೀದಿ ನಾಟಕವನ್ನು ಒಂದು ಅರ್ಥವತ್ತಾದ ರಂಗ ಚಳುವಳಿಯಾಗಿ ಪರಿವರ್ತಿಸಿದವರೆಂದರೆ ಸಮುದಾಯದ ಪ್ರಸನ್ನ ಹಾಗೂ ಸಿ.ಜಿ,ಕೆ (ಸಿ.ಜಿ ಕೃಷ್ಣಸ್ವಾಮಿ)ರವರು.

"ಪ್ರೇಕ್ಷಕರಿದ್ದಲ್ಲಿಗೆ ನಾಟಕವನ್ನು ಒಯ್ದು ಆಡಿಸುವುದೇ ಬೀದಿ ನಾಟಕ”. ಇದರಿಂದ ನಾಟಕ ಪ್ರದರ್ಶನಕ್ಕೆ ಬೇರೆ ಬೇರೆ ಕಡೆಯಿಂದ ಪ್ರೇಕ್ಷಕರು ಬರುವುದು ತಪ್ಪುತ್ತದೆ. ನಾಟಕದಲ್ಲಿನ ವಸ್ತು ತೀರಾ ಸಮಕಾಲೀನವಾದುದಾಗಿದ್ದು, ಇದಕ್ಕೆ ಮೂಲ ವೃತ್ತ ಪತ್ರಿಕೆಗಳು ಮತ್ತು ಸಮಾಜದಲ್ಲಿ ಜನಜೀವನ. ಭವ್ಯವಾದ ಸಲಕರಣೆಗಳು, ಸುಸಜ್ಜಿತವಾದ ರಂಗಮಂದಿರ, ಬೆಳಕಿನ ವಿನ್ಯಾಸದ ಚಾತುರ್ಯ ವೇಷಭೂಷಣ ಮುಂತಾದ ರಂಗಭೂಮಿಯ ಪ್ರತಿಷ್ಠಿತ ನೆರವುಗಳನ್ನು ನಿರೀಕ್ಷಿಸದೆ ಬೀದಿ ನಾಟಕದ ನಿರ್ಮಿತಿ, ಸರಳವಾದದ್ದು ಹಾಗೂ ಗುರಿ ನೇರವಾಗಿರುವಂತದ್ದು. ನಾಲ್ಕು ರಸ್ತೆಗಳು ಸೇರುವ ಯಾವುದೇ ಸ್ಥಳ ಬೀದಿ ನಾಟಕಕ್ಕೆ ಸರಿಯಾದ ರಂಗಸ್ಥಳವಾಗುತ್ತದೆ. ಇದ್ದಕ್ಕಿದ್ದಂತೆ ನಾಟಕವನ್ನು ಆಡಿಸುವುದರಿಂದ, ಇರುವ ಬೀದಿ ದೀಪಗಳನ್ನೇ ಬಳಸಲಾಗುತ್ತದೆ. ಬೀದಿಯ ನಡುವೆ ತಾವೇ ತಯಾರಿಸಿದ ಚೌಕಟ್ಟಿನಲ್ಲಿ ನಟರು ಕುಳಿತುಕೊಳ್ಳುವರು.ತಮ್ಮ ಸರದಿ ಬಂದಾಗ ಎದ್ದು ನಟಿಸುವರು. ನಾಲ್ಕು ಕಡೆ ಬೀದಿಯ ಹಾದಿ ಹೋಕರೇ ಪ್ರೇಕ್ಷಕರಾಗಿ ನಿಂತಿರುತ್ತಾರೆ. ಹಾಡುಗಳು, ಭಾಷಣ, ಮೊದಲಾದವನ್ನು ಅನೇಕ ತಂತ್ರಗಳ ಸಹಾಯದಿಂದ ಪ್ರತಿಪಾದಿಸಲಾಗುತ್ತದೆ.ಸಮಾಜದಲ್ಲಿನ ಜನಜೀವನಕ್ಕೆ ಜೀವಂತವಾಗಿ ಪ್ರತಿಸ್ಪಂದಿಸುವುದೇ ಬೀದಿ ನಾಟಕದ ಮುಖ್ಯ ಗುರಿಯಾಗಿರುತ್ತದೆ.

ಕೆಳವರ್ಗದ ಕೂಲಿಕಾರರ ಮತ್ತು ದಲಿತರ ಶೋಷಣೆಯ ವಿರುದ್ಧ ಜನಜಾಗೃತಿಯನ್ನುಂಟು ಮಾಡುವ ಗುರಿಯಿಟ್ಟುಕೊಂಡು ಪ್ರಚಲಿತವಾದ ಬೀದಿ ನಾಟಕಗಳು ಅನೇಕ ಜ್ವಲಂತ ಸಮಕಾಲೀನ ಸಮಸ್ಯೆಗಳನ್ನು ನಡೆದ ಘಟನೆಗಳನ್ನಾಧರಿಸಿದವುಗಳಾಗಿರುತ್ತವೆ.ಹೆಮ್ಮಾರಿಯಂತ ಭಯಂಕರ ರೋಗಗಳಿಗೆ ಸಂಬಂಧಿಸಿದಂತೆ, ಸಮಾಜದಲ್ಲಿನ ವರದಕ್ಷಿಣೆ ಸಮಸ್ಯೆಗೆ ಸಂಗಂಧಿಸಿದಂತೆ, ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ  ಪ್ರದರ್ಶಿತಗೊಳ್ಳುವ ಬೀದಿ ನಾಟಕದ ಪರಿಣಾಮ ಕೇವಲ ರಂಗಭೂಮಿಯ ಚಳುವಳಿಗೆ ಮಾತ್ರ ಸೀಮಿತಗೊಳ್ಳದೆ ಒಟ್ಟು ಜನ ಜೀವನವನ್ನೇ ವ್ಯಾಪಿಸುವಂತಹುದು. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ರಂಗಭೂಮಿಯ ಮಾಧ್ಯಮವನ್ನು ಬಳಸಿಕೊಂದು ಜನತೆಯನ್ನು ಎಚ್ಚರಿಸುವ, ಸಾಮಾಜಿಕ ಅನ್ಯಾಯಗಳ ವಿರುದ್ಧ ಬಂಡಿದೆಬ್ಬಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುವ ಸಾಧ್ಯತೆಯನ್ನು ಬೀದಿ ನಾಟಕಗಳು ತೋರಿಸಿಕೊಟ್ಟಿವೆ.

ಆದರೆ ಇಂದಿನ ಆಧುನೀಕರಣ, ಜಾಗತೀಕರಣದ ಸೋಗಿನಲ್ಲಿ ಬೀದಿನಾಟಕಗಳು ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತಿರುವುದು ವಿಶಾದನೀಯ ಸಂಗತಿಯಾಗಿದೆ. ಪರಿಪೂರ್ಣ ಕಲೆಯಾಗಿ ಪರಿಣಮಿಸಿರುವ ದೂರದರ್ಶನ, ಕಂಪ್ಯೂಟರ್, ಮೊಬೈಲ್ ಫೋನು ಮೊದಲಾದವುಗಳ ಪ್ರಭಾವ, ಅವುಗಳ ಜನಪ್ರಿಯತೆಯ ಮುಂದೆ ಸೀಮಿತ ಕಲೆಯಾಗಿ ಪರಿಗಣಿಸುವ ಬೀದಿ ನಾಟಕಗಳು ಜನಪ್ರಿಯತೆಯಿಂದ ವಿಮುಖವಾಗಿ ಕಣ್ಮರೆಯಾಗುತ್ತಿವೆ. ಇದರಿಂದ ಬೀದಿ ನಾಟಕ ಆಡುವವರು ನಿರುದ್ಯೋಗಿಗಳಾಗುತ್ತಿರುವುದು ಒಂದು ಕಡೆಯಾದರೆ, ಜನಜಾಗೃತಿಯ ಕಾರ್ಯವು ಕಡಿಮೆಯಾಗುತ್ತಿರುವುದು ಮತ್ತೊಂದು ಕಡೆ ಕಾಣಬಹುದು. ಅಂದರೆ ಜನಜಾಗೃತಿ ಕಾರ್ಯದಲ್ಲಿ ಆಧುನಿಕ ದೃಕ್ ಶ್ರವಣ ಮಾಧ್ಯಮಗಳ ಕಾರ್ಯ ಇಲ್ಲವೆಂದಲ್ಲ. ಬೀದಿ ನಾಟಕಗಳಷ್ಟು ಪ್ರಭಾವಿ ಮಾಧ್ಯಮವಾಗಿ ಈ ಆಧುನಿಕ ಸಾಧನಗಳಾಗದೆ ಇರುವುದನ್ನು ಕಾಣಬಹುದು. ಮಾತಿನಲ್ಲಿ ಆಗದೆ ಇರುವ ಕಾರ್ಯವನ್ನು ಬೀದಿ ನಾಟಕಗಳು ಮಾಡಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅದು ಆರೋಗ್ಯದ ಬಗ್ಗೆಯಾಗಬಹುದು. ಇಲ್ಲವೇ ಸಾಮಾಜಿಕ ಕಾರ್ಯಗಳಾಗಬಹುದು. ಉದಾಹರಣೆ: ಬೆಲ್ಚಿ(ಸಿ.ಜಿ,ಕೆ ವಿರಚಿತ) ಎಂಬ ನಾಟಕವನ್ನೆ ತೆಗೆದುಕೊಳ್ಳೋಣ. ಇದೊಂದು ಕುಲಿಕಾರರ ಮೇಲೆ ಆಳುವ ವರ್ಗದ ದಬ್ಬಾಳಿಕೆಯನ್ನು ಸೂಚಿಸುವಂತಹ ವಿಷಯಕ್ಕೆ ಸಂಬಂಧಿಸಿದ್ದಾಗಿರುವಂತಹದ್ದಾಗಿದ್ದು, ಇದನ್ನು ಬೀದಿ ನಾಟಕದ ಮೂಲಕ ಪ್ರದರ್ಶಿಸಿದಾಗ ಜನರಲ್ಲಿ ನಿಜ ಸ್ಥಿತಿಯ ಮನವರಿಕೆಯಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದವರಿಗೆ ನ್ಯಾಯ ದೊರೆತಂತಾಯಿತು.

ಸ್ವಾತಂತ್ರ ಪೂರ್ವಕಾಲದಿಂದಲೂ ಬೀದಿ ನಾಟಕಗಳು ಮಹತ್ವಯುತ ಪಾತ್ರ ವಹಿಸಿಕೊಂಡು ಬಂದು, ಪರಿಣಾಮಕಾರಿ ಪ್ರಭಾವವನ್ನು ಬೀರಿರುವುದು ಇತಿಹಾಸ ಪುಟಗಳನ್ನು ತಿರುವಿದಾಗ ನಮ್ಮ ಕಣ್ಣಮುಂದೆ ಬರುತ್ತದೆ. ಇಂತಹ ಬೀದಿ ನಾಟಕಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವುದು ವಿಶಾದನೀಯ ಸಂಗತಿ. ಬೀದಿ ನಾಟಕ ಕಲೆಯ ಮಹತ್ವವನ್ನು ಮನಗಂಡ ಕೆಲವು ಸಂಘ ಸಂಸ್ಥೆಗಳು, ನಾಟಕ ಕಲಾವಿದರು ಬೀದಿ ನಾಟಕವನ್ನು ಉಳಿಸಲು ಮುಂದಾಗಿರುವುದು ಪ್ರಶಂಸನೀಯ. ಇದರಿಂದ ಸಾಂಕ್ರಾಮಿಕ ರೋಗಗಳ ಬಗ್ಗೆ, ಸ್ವಚ್ಛತೆಯ ಬಗ್ಗೆ ಇನ್ನೂ ಮೊದಲಾದ ವಿಷಯಕ್ಕೆ  ಸಂಬಂಧಿಸಿದಂತೆ ಜನಜಾಗೃತಿಯಾಗಿರುವುದನ್ನು ಕಾಣಬಹುದು.  ಹೀಗಾಗಿ ಬನ್ನೀ ಸಹೃದಯರೇ ನಾವೆಲ್ಲರೂ ಬೀದಿ ನಾಟಕ ಕಲೆಯನ್ನು ಪ್ರೋತ್ರಾಹಿಸುವ ಮೂಲಕ ಅದನ್ನು ಉಳಿಸಿ ಬೆಳೆಸಲು ಸಹಕರಿಸೋಣ.

ಕೊನೆಯ ಮಾರ್ಪಾಟು : 7/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate