অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೈಸೂರು

ಮೈಸೂರು

ಮೈಸೂರು ಜಿಲ್ಲೆಯು ಶ್ರೀಮಂತ ಇತಿಹಾಸದ ಜೊತೆಗೆ ಪುರಾತತ್ವ, ವಾಸ್ತುಶಿಲ್ಪ ಮತ್ತು ಪರಂಪರೆಯ ಮೌಲ್ಯವನ್ನು ಚಿತ್ರಿಸುವ ಹಲವಾರು ಪ್ರಾಗೈತಿಹಾಸಿಕ ಸ್ಥಳಗಳು, ಸ್ಮಾರಕಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳನ್ನು ಹೊಂದಿದೆ. ಮೈಸೂರು ಜಿಲ್ಲೆಯು ಹಿತಕರವಾದ ಹವಾಮಾನದ ಜೊತೆಗೆ ನದಿಗಳು, ಬೆಟ್ಟ ಗುಡ್ಡಗಳು, ಕೆರೆ ಸರೋವರಗಳನ್ನು ಹೊಂದಿದೆ.

ಮೈಸೂರು ನಗರ, ಮೈಸೂರು ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಮೈಸೂರೂ ಒಂದು. 1973ಕ್ಕೂ ಹಿಂದೆ ಕರ್ನಾಟಕ ರಾಜ್ಯವನ್ನು ಮೈಸೂರು ರಾಜ್ಯ ಎಂದೇ ಗುರುತಿಸಲಾಗುತ್ತಿತ್ತು. ಮೈಸೂರು ಬೆಂಗಳೂರಿನಿಂದ ನೈಋತ್ಯ ದಿಕ್ಕಿನಲ್ಲಿ 139 ಕಿ.ಮೀ ದೂರದಲ್ಲಿದೆ. ಉತ್ತಮ ರಸ್ತೆ ಮತ್ತು ರೈಲು ಸಂಪರ್ಕವಿದೆ. ಇದು 128.42 ಚದುರ ಕಿ.ಮೀ. ನಷ್ಟು ಪ್ರದೇಶವನ್ನು ಒಳಗೊಂಡಿದೆ ಹಾಗೂ 1977ರಿಂದ ಮಹಾನಗರ ಪಾಲಿಕೆಯನ್ನೂ ಹೊಂದಿದೆ. 2011ರ ಜನಗಣತಿಯ ತಾತ್ಕಾಲಿಕ ವರದಿಗಳ ಪ್ರಕಾರ ಮೈಸೂರಿನ ಜನಸಂಖ್ಯೆ 8,87,446. ಇದರಲ್ಲಿ 4,43,813 ಪುರುಷರು ಮತ್ತು 4,43,633 ಮಹಿಳೆಯರಿದ್ದಾರೆ.

ಮೈಸೂರಿನ ಭವ್ಯ ಮೈಸೂರು ಅರಮನೆ, ರಾಜ ಮಹಲುಗಳು, ಸಾರ್ವಜನಿಕ ಕಟ್ಟಡಗಳು, ಉದ್ಯಾನಗಳು, ಕೆರೆಗಳು ಮತ್ತು ಯೋಜಿತ ಮಾರುಕಟ್ಟೆಗಳು 1862ರಲ್ಲೇ  ಮಹಾರಾಜರು, ಅವರ ದಿವಾನರು ಮತ್ತು ನಗರ ಪುರಸಭೆಯ ಇತರೆ ಪ್ರತಿಭಾವಂತರು ಸೇರಿ ನನಸು ಮಾಡಿದ ಕನಸಿನ ಬಗ್ಗೆ ಒಂದು ಅಳಿಸಲಾಗದ ಪ್ರಭಾವ ಬೀರುತ್ತವೆ.

ಕಟ್ಟಡಗಳು, ಸರೋವರಗಳು, ಉದ್ಯಾನಗಳು, ಹಸಿರು  ಬಯಲುಗಳ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ, ಇವೆಲ್ಲವುಗಳ ನಡುವೆ ಇರುವ ಸಾಮರಸ್ಯ, ಮೈಸೂರು ನಗರದ ಆಕರ್ಷಣೆಯನ್ನು ಹೆಚ್ಚಾಗಿಸುತ್ತದೆ.

ಮೈಸೂರಿನ ಪ್ರಾಚೀನತೆ ಮಹಾಭಾರತದ ದಿನಗಳಷ್ಟು ಹಿಂದಿನದು. ಮಹಿಷಾಸುರನ ವಾಸಸ್ಥಾನವಾದ ಇಲ್ಲಿಗೆ ಚಾಮುಂಡೇಶ್ವರಿಯು ಬಂದು ಮಹಿಷಾಸುರನನ್ನು ಸಂಹರಿಸಿದಳು ಎಂದು ಪುರಾಣವು ತಿಳಿಸುತ್ತದೆ. ಹಾಗೂ ಮೈಸೂರು ಎಂಬ ಹೆಸರು ಇದೇ ವಿಚಾರಕ್ಕೆ ಸಂಬಂಧಿಸಿದೆ. ಮೌರ್ಯ ಚಕ್ರವರ್ತಿಯಾಗಿದ್ದ ಅಶೋಕನು ಬೌದ್ಧ ಧರ್ಮಪ್ರಚಾರಕ್ಕಾಗಿ ಬೌದ್ಧ ಧರ್ಮಪ್ರಚಾರಕನಾದ ಮಹಾದೇವನನ್ನು ಮಹಿಶಮಂಡಲಕ್ಕೆ ರವಾನಿಸಿದನು ಎಂದು  ಮಹಾವಂಶ ಮತ್ತು ದೀಪವಂಶವೆಂಬ ಎರಡು ಬೌದ್ಧ ಗ್ರಂಥಗಳು  ಪರೋಕ್ಷವಾಗಿ ಸೂಚಿಸುತ್ತವೆ. ಶಾಸನಗಳಲ್ಲಿ ಮಹಿಷಪುರ, ಮಹಿಸುರಾಪುರ, ಮಹಿಷಾಸುರಾಪುರ ಎಂಬ ಪ್ರಸ್ತಾಪಗಳಿವೆ. ತಮಿಳನಲ್ಲಿ ಉಲ್ಲೇಖವಾಗಿರುವ ಇರುಮೈನಾಡ್ ಕೂಡ ಮೈಸೂರು ಎಂದೇ ಗುರುತಿಸಲಾಗಿದೆ ಹಾಗೂ ಮಂಡ್ಯ ತಾಲ್ಲೂಕಿನ ಕಡಲೂರಿನಲ್ಲಿ ಸಿಕ್ಕ ಕ್ರಿ.ಶ. 862ರ ಒಂದು ಶಾಸನವು ಈ ಜಾಗಕ್ಕೆ ಮೇಸೂರು ಎಂದು ಸೂಚಿಸುತ್ತದೆ. 10 ನೇ ಶತಮಾನದಲ್ಲಿ, ಈ ನಗರವನ್ನು 70 ಹಳ್ಳಿಗಳ ಮೈಸೂರು ನಾಡು ಎಂದು ಗುರುತಿಸಲಾಗುತ್ತಿತ್ತು. 1499 ನಂತರ, ಈ ಪಟ್ಟಣವನ್ನು ಸ್ಪಷ್ಟವಾಗಿ ಮೈಸೂರು ಎಂದೇ ಉಲ್ಲೇಖಿಸಲಾಗಿದೆ.

ನವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ಸಾಂಪ್ರದಾಯಿಕ ದಸರಾದ ಉಲ್ಲಾಸಭರಿತ, ವೈಭವೋಕ್ತ ಆಚರಣೆಯಿಂದಾಗಿ ಪ್ರಪಂಚದಾದ್ಯಂತ ಮೈಸೂರು ಹೆಸರುವಾಸಿಯಾಗಿದೆ. ದಸರಾದ ಅತ್ಯಾಕರ್ಷಕ ಜಂಬೂ ಸವಾರಿಯನ್ನು(ಆನೆಗಳ ಮೆರವಣಿಗೆಯನ್ನು) ವೀಕ್ಷಿಸಲು ದೇಶ ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಮೈಸೂರು ನಗರಕ್ಕೆ ಮುತ್ತಿಗೆ ಹಾಕುತ್ತಾರೆ. ಈ ಜಂಬೂ ಸವಾರಿಯಲ್ಲಿ ಹಲವಾರು ಆನೆಗಳು ಸಾಲಂಕೃತವಾಗಿ ಘನ ಗಾಂಭೀರ್ಯದಿಂದ ಸಾಗುತ್ತವೆ. ಹಿಂದಿನ ಕಾಲದಲ್ಲಿ ಪಟ್ಟದಾನೆಯ ಮೇಲೆ ಹೊರಿಸಲಾದ ಚಿನ್ನದ ಅಂಬಾರಿಯಲ್ಲಿ ಮಹಾರಾಜರು ಆಸೀನರಾಗಿರುತ್ತಿದ್ದರು.  ಭಾರತ ಸ್ವಾತಂತ್ರ್ಯಪಡೆದ ಒಂದು ದಶಕದವರೆಗೂ ಇದೇ ಪದ್ಧತಿಯನ್ನು ಅಬಾಧಿತವಾಗಿ ಮುಂದುವರಿಸಿಕೊಂಡು ಬರಲಾಗುತ್ತಿತ್ತು. ಬದಲಾದ ರಾಜಕೀಯ ಮತ್ತು ಆಡಳಿತದ ಸನ್ನಿವೇಶದಲ್ಲಿ ದಸರಾ ಮಹೋತ್ಸವವನ್ನು ಈಗ ನಾಡಹಬ್ಬದ ಹೆಸರಿನಲ್ಲಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಇತ್ತೀಚಿನ ದಸರಾ ಆಚರಣೆಯಲ್ಲಿ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯಲ್ಲಿ ಹೊತ್ತೊಯ್ಯಲಾಗುವ ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಹಾಗೂ ಇತರೆ ಸ್ಥಬ್ದ ಚಿತ್ರಗಳು  ವಿಶೇಷ ಆಕರ್ಷಣೆಯಾಗಿವೆ.

ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಲವಾರು ಕೈಗಾರಿಕಾ ಘಟಕಗಳನ್ನು ಹೊಂದಿವೆ. ಮೈಸೂರು ನಗರವು ಒಂದು ಶೈಕ್ಷಣಿಕ ಕೇಂದ್ರವಾಗಿದ್ದು ಹಲವಾರು ಕಾಲೇಜುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದ ಜೊತೆಗೆ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಫಾರ್ಮಸಿ ಕಾಲೇಜುಗಳು,ವಾಕ್ ಮತ್ತು ಶ್ರವಣ ಸಂಸ್ಥೆ ಹಾಗೂ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯನ್ನೂ ಹೊಂದಿದೆ. ಅತ್ಯಂತ ಹಳೆಯದಾದ ಚಾಮರಾಜೇಂದ್ರ ಮೃಗಾಲಯ, ಹಲವಾರು ಉದ್ಯಾನಗಳು ಮತ್ತು ಉಪವನಗಳು ಮೈಸೂರಿನಲ್ಲಿವೆ. ಮೈಸೂರಿನಿಂದ ಸುಮಾರು 8 ಕಿ.ಮೀ ದೂರದಲ್ಲಿ ಮಂಡಕಳ್ಳಿ ವಿಮಾನನಿಲ್ದಾಣವಿದೆ. ಮೈಸೂರಿನಲ್ಲಿರುವ ಹಲವಾರು ಕೆರೆಗಳ ಪೈಕಿ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ ಹಾಗೂ ಲಿಂಗಾಂಬುದಿ ಕೆರೆಗಳು ಹೆಚ್ಚು ಜನಪ್ರಿಯವಾಗಿದೆ.

ಮೂಲ : ಮೈಸೂರು ದಸರಾ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate