অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೌಲ್ಯವರ್ದಿತ ಶಿಕ್ಷಣ

ಮೌಲ್ಯವರ್ದಿತ ಶಿಕ್ಷಣ

ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖ-ಶಾಂತಿಗಳಿಲ್ಲದೆ ಹಲವು ಸಮಸ್ಯೆಗಳನ್ನು  ಎದುರಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಡಾ.ರಾಧಾಕೃಷ್ಣನ್ ಹೇಳುವಂತೆ “ಮಾನವ ಹಕ್ಕಿಯಂತೆ ಹಾರಾಡುವುದನ್ನುಮ್ ಮೀನಿನಂತೆ ಈಜುವುದನ್ನು ಕಲಿತ. ಆದರೆ, ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ!”. ಅಂದರೆ, ಮಾನವನಾಗಿ ಬಾಳಲು ಇರಬೇಕಾದ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿದ್ದು, ಈ ಅಂಶಕ್ಕೆ ಸಂಬಂಧಿಸಿದಂತೆ ಇಂದಿನ ಶಿಕ್ಷಣ ಸಂಸ್ಥೆಗಳು(ಖಾಸಗಿ) ವಿಫಲಗೊಳ್ಳುತ್ತಿರುವುದು ಆತಂಕಕಾರಿ  ಹಾಗೂ ವಿಷಾದನೀಯ ಸಂಗತಿ!.

ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕುಟುಂಬ, ಶಾಲೆ ಸ್ನೇಹಿತರು, ಸಮಾಜ, ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಇಂದು ಕುಟುಂಬಗಳು ಬಡತನ, ದಾರಿದ್ರ್ಯ, ಅನಕ್ಷರತೆ ಹಾಗೂ ಅಂಧನಂಬಿಕೆಗಳಿಂದಾಗಿ ತನ್ನ ನೈಜ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ವಿಫಲಗೊಂಡಿವೆ. ಹಾಗಾಗಿ ಈ ಜವಾಭಾರಿಯನ್ನು ಸಮಾಜದ ಮುಖ್ಯ ಕೇಂದ್ರವಾದ ಶಾಲೆ ಅಥವಾ ಶಿಕ್ಷಣ ಕೇಂದ್ರಗಳು ಸಮಾಜದಲ್ಲಿ ಹಿತವಾದ, ಆರೋಗ್ಯಕರ ವಾತಾವರಣವನ್ನು ಸಂರಕ್ಷಿಸುವ ಉದ್ದೇಶ ಹೊಂದಿರಬೇಕಾಗುತ್ತದೆ. ಹಾಗಾದರೆ, ಶಿಕ್ಷಣದ ಗುರಿಗಳು ಹೇಗಿರಬೇಕು? ಎಂಬುದಕ್ಕೆ ಗಾಂಧೀಜಿಯವರು ಹೀಗೆ ಹೇಳುತ್ತಾರೆ, “ಶೀಲ ಸಂವರ್ಧನೆ, ವ್ಯಕ್ತಿಯಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಕೇಂದ್ರಗಳು ಯಶಸ್ವಿಯಾದರೆ ಸಮಾಜವು ತನ್ನಿಂದ ತಾನೇ ಸುಧಾರಿಸುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳುವುದರ ಮುಖೇನ ಶೈಕ್ಷಣಿಕ ಮಹತ್ವವನ್ನು ಸಾರಿದ್ದಾರೆ.

ಶಿಕ್ಷಕನೆಂಬ ಶಿಲ್ಪಿಯ ಗುರಿ ಎಂದರೆ, ವಿದ್ಯಾರ್ಥಿಗಳ ಶರೀರ ಬೆಳೆಸುವುದಲ್ಲ ಅಥವಾ ಕೇವಲ ಜ್ಞಾನ ತುಂಬುವುದಲ್ಲ. ಬದಲಿಗೆ, ಶುದ್ಧ ಮೌಲ್ಯಬಲವನ್ನು ರೂಪಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ವರ್ದಿಸುವುದು.  ನೈತಿಕ ಮೌಲ್ಯವು ವಿದ್ಯಾರ್ಥಿಗಳ ಜೀವನದ ರೂಪುರೇಷೆಯನ್ನೇ ಬದಲಿಸುತ್ತದೆ. ಹೀಗಾಗಿಯೇ ಮೌಲ್ಯರಹಿತ ಶಿಕ್ಷಣಕ್ಕೆ ಯಾವುದೇ ಅರ್ಥವಿರುವುದಿಲ್ಲ. ಮೌಲ್ಯವರ್ಧನೆ ಎಂದರೆ, ಮಕ್ಕಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ದೆ, ನಿಷ್ಟೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯಾ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವುದಾಗಿದೆ. ಮಕ್ಕಳಲ್ಲಿ/ವಿದ್ಯಾರ್ಥಿಗಳಲ್ಲಿ ಈ ಮೌಲ್ಯಗಳನ್ನು ತುಂಬದಿದ್ದರೆ, ತದನಂತರ ’ಗಿಡವಾಗಿ ಬಗ್ಗದು, ಮರವಾಗಿ ಬಗ್ಗಿತೇ?’ ಎಂದು ನಿಟ್ಟುಸಿರು ಬಿಡಬೇಕಾಗುತ್ತದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಮೌಲ್ಯವರ್ಧನೆಗೊಳಿಸುವ ಕಾರ್ಯ ಚುರುಕುಗೊಳ್ಳಬೇಕಾಗಿದೆ. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳು ಹಣಗಳಿಕೆಯ ಮಿಕಗಳಾಗುತ್ತಿರುವುದು ಪ್ರಜ್ಞಾವಂತ ನಾಗರೀಕರೆಲ್ಲರಿಗೂ ಚಿಂತಾಜನಕ ವಿಷಯ. “ಉತ್ತಮ ಕಲಿಕೆ ಹಾಗೂ ವಿದ್ಯಾರ್ಜನೆಗಾಗಿ ಶಿಕ್ಷಣ ಸಂಸ್ಥೆ” ಎನ್ನುವ ಮಾತು ಈಗ ಅಪರೂಪಗೊಂಡು, ಶೈಕ್ಷಣಿಕ ಕ್ಷೇತ್ರಗಳು ಹಣದಾಸೆಯ ಬೆಂಕಿಯ ಸಮೀಪ ಬಂದು ರೆಕ್ಕೆ ಸುಟ್ಟುಕೊಳ್ಳುವ ಪತಂಗಗಳಂತೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ!.

ಶಿಕ್ಷಣ ನೀಡಿಕೆ ನಿಜಕ್ಕೂ ಪವಿತ್ರ ಕಾರ್ಯ. ನಿಸ್ವಾರ್ಥತೆಯಿಂದ ಶಿಕ್ಷಣ ನೀಡಿದಷ್ಟು ಉತ್ತಮ ಫಲ ದೊರೆಯುತ್ತದೆ. ಶಿಕ್ಷಣವಿಲ್ಲದಿದ್ದರೆ, ನೈತಿಕ ಪ್ರಜ್ಞೆ ಇಲ್ಲದಿದ್ದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ!. ವ್ಯಕ್ತಿತ್ವವಿಲ್ಲದೆ ಸಮಾಜದಲ್ಲಿ ಮನ್ನಣೆ ಇಲ್ಲ. ಮನ್ನಣೆಗಾಗಿಯಾದರೂ ನೈತಿಕ ಮೌಲ್ಯಗಳ ಜ್ಞಾನಾರ್ಜನೆ ಅತ್ಯಗತ್ಯ. ಮಕ್ಕಳ ಅಥವಾ ವಿದ್ಯಾರ್ಥಿಗಳ ಮನೋಬಲ ಮತ್ತು ಬೌದ್ದಿಕ ವಿಕಾಸಕ್ಕೆ ಕಲಿಕೆ ವರವಾಗಿ ಪರಿಣಮಿಸಬೇಕು ಎಂದಾದರೆ, ಶಿಕ್ಷಣ ಕೇಂದ್ರಗಳು ಮೌಲ್ಯಯುತ ಶಿಕ್ಷಣ ನೀಡುವುದೆಡೆಗೆ ಹೆಜ್ಜೆ ಹಾಕಬೇಕು.

’ವರ್ತನೆಯ ನರ್ತನಕೆ ಪರಿವರ್ತನೆಯ ಶೃಂಗಾರ’ ಎಂಬ ಕವಿವಾಣಿಯಂತೆ ಮಗುವಿನ ಅನಾರೋಗ್ಯಕರ ವರ್ತನೆಯನ್ನು ತಿದ್ದಿ ತೀಡಿ, ಆರೋಗ್ಯಕರ ವರ್ತನೆಯೆಡೆಗೆ ಪರಿವರ್ತಿಸಿ ಬದಲಾವಣೆಯ ಶೃಂಗಾರ ಮಾಡುವ ಶಿಕ್ಷಣ ಸಂಸ್ಥೆಗಳಿಗೆ ಸ್ವಾಗತ. ಸ್ವಾಮಿ ವಿವೇಕಾನಂದರು “ಈಗಾಗಲೇ ಮಗುವಿನ ಅಂತರಂಗದಲ್ಲಿ ಹುದುಗಿರುವ ಪರಿಪೂರ್ಣತೆಯನ್ನು, ದೈವತ್ವವನ್ನು ಹೊರತರುವುದೇ ಶಿಕ್ಷಣ” ಎಂದು ಶಿಕ್ಷಣದ ಮಹತ್ವವನ್ನು ವರ್ಣಿಸಿದ್ದಾರೆ. ಈ ಹಾದಿಯಲ್ಲಿ ಶಿಕ್ಷಣ ಸಂಸ್ಥೆಗಳು ಸಾಗಿದರೆ ಸಾಮಾಜಿಕರಲ್ಲಿ ಮೌಲ್ಯವರ್ಧನೆ ಖಂಡಿತ. ಮೌಲ್ಯವರ್ಧನೆ ಆದ್ಯತೆ ನೀಡುವ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಲೆಂಬ ಆಶಯದೊಂದಿಗೆ….

ಕೊನೆಯ ಮಾರ್ಪಾಟು : 4/3/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate