ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಂಶೋಧನೆ / ಮೆಟ್ರೋ ಸುರಂಗ ಸ್ಫೋಟ : ಪರಿಣಾಮಗಳತ್ತ ಒಂದು ನೋಟ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೆಟ್ರೋ ಸುರಂಗ ಸ್ಫೋಟ : ಪರಿಣಾಮಗಳತ್ತ ಒಂದು ನೋಟ

ಇತ್ತೀಚೆಗೆ ಹೆಚ್ಚಾಗುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಯೋಚಿಸಿದಾಗ , ಭೂತಳದ ರೈಲು ಸುರಂಗಗಳಲ್ಲಿ ಸಂಭವಿಸಬಹುದಾದ ಸ್ಫೋಟದ ಪರಿಣಾಮಗಳ ಕುರಿತು ಗಮನಹರಿಸಬೇಕಾದ್ದು ಅತೀ ಅವಶ್ಯಕ. ಅಗ್ನಿ ದುರ0ತ, ಕೊಳವೆಗಳಲ್ಲಿ ಬಿರುಕುಂಟಾಗಿ ಅನಿಲ ಸೋರಿಕೆ, ಅಂತರ್ಜಲದ ಪ್ರವಾಹ, ನೆಲದ ಮೇಲ್ಮೈನಲ್ಲಿರುವ ಕಟ್ಟಡಗಳಿಗೆ ಹಾನಿ ಈ ಎಲ್ಲಾ ಅವಘಡಗಳಿಗೆ ಇ0ಥ ಸ್ಫೋಟ ಕಾರಣವಾಗಬಹುದು. ಹೀಗಾಗಿ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನೆಲದಾಳದ ಸುರ0ಗಮಾರ್ಗಗಳ ಸ್ಥಿರತೆ, ದೃಢತೆಗಳ ಲೋಪದ ಕುರಿತಾಗಿ ಅಧ್ಯಯನ ನಡೆಸುವುದು ಹಾಗೂ ದೋಷರಹಿತ ಸುರಂಗಮಾರ್ಗಗಳ ರಚನೆಯತ್ತ ಹೆಜ್ಜೆಹಾಕುವುದು ಇಂದಿನ ಅಗತ್ಯವಾಗಿದೆ.

ಸಾರ್ವಜನಿಕ ಸಾರಿಗೆ

ನಮ್ಮ ಬೆಂಗಳೂರು ಸೇರಿದಂತೆ ಪ್ರಪಂಚದ ಅನೇಕ ಮಹಾನಗರಗಳು ಮೆಟ್ರೋ ರೈಲಿನ ಮೂಲಕ ಸಾರ್ವಜನಿಕ ಸಾರಿಗೆಯ ಸವಾಲುಗಳಿಗೆ ಉತ್ತರ ಕಂಡುಕೊಂಡಿವೆ. ಇಂಥ ನಗರಗಳ ಅತಿಯಾದ ಜನಸಾಂದ್ರತೆಯ ಕಾರಣದಿಂದಾಗಿ ರಸ್ತೆಯನ್ನು ನಿರ್ಮಿಸಿದಂತೆ ಎಲ್ಲ ಕಡೆಯಲ್ಲಿ ನೆಲದ ಮೇಲೆಯೇ ರೈಲು ಹಳಿಗಳನ್ನು ಹಾಕುವುದು ಅಷ್ಟು ಸಮಂಜಸವಲ್ಲ. ಬೆಂಗಳೂರಿನ ನಮ್ಮ ಮೆಟ್ರೋ ಉದಾಹರಣೆ ತೆಗೆದುಕೊಂಡರೆ, ಜನನಿಬಿಡ ಹಾಗೂ ವ್ಯಾವಹಾರಿಕ ಚಟುವಟಿಕೆ ಇರುವ ಪ್ರದೇಶದ ಒಟ್ಟೂ 42 ಕಿ.ಮೀ. ಉದ್ದದ ಮೆಟ್ರೋ ಹಳಿಯ ಪೈಕಿ 20% ಅಂದರೆ ಸುಮಾರು 8 ಕಿ.ಮೀ. ನಷ್ಟು ಹಳಿಗಳನ್ನು ನೆಲದಡಿಯಲ್ಲೇ ನಿರ್ಮಿಸಲಾಗಿದೆ.

ಇತ್ತೀಚೆಗೆ ಹೆಚ್ಚಾಗುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಯೋಚಿಸಿದಾಗ , ಭೂತಳದ ರೈಲು ಸುರಂಗಗಳಲ್ಲಿ ಸಂಭವಿಸಬಹುದಾದ ಸ್ಫೋಟದ ಪರಿಣಾಮಗಳ ಕುರಿತು ಗಮನಹರಿಸಬೇಕಾದ್ದು ಅತೀ ಅವಶ್ಯಕ. ಅಗ್ನಿ ದುರ0ತ, ಕೊಳವೆಗಳಲ್ಲಿ ಬಿರುಕುಂಟಾಗಿ ಅನಿಲ ಸೋರಿಕೆ, ಅಂತರ್ಜಲದ ಪ್ರವಾಹ, ನೆಲದ ಮೇಲ್ಮೈನಲ್ಲಿರುವ ಕಟ್ಟಡಗಳಿಗೆ ಹಾನಿ ಈ ಎಲ್ಲಾ ಅವಘಡಗಳಿಗೆ ಇ0ಥ ಸ್ಫೋಟ ಕಾರಣವಾಗಬಹುದು. ಹೀಗಾಗಿ ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನೆಲದಾಳದ ಸುರ0ಗಮಾರ್ಗಗಳ ಸ್ಥಿರತೆ, ದೃಢತೆಗಳ ಲೋಪದ ಕುರಿತಾಗಿ ಅಧ್ಯಯನ ನಡೆಸುವುದು ಹಾಗೂ ದೋಷರಹಿತ ಸುರಂಗಮಾರ್ಗಗಳ ರಚನೆಯತ್ತ ಹೆಜ್ಜೆಹಾಕುವುದು ಇಂದಿನ ಅಗತ್ಯವಾಗಿದೆ.

ಬೆ0ಗಳೂರಿನ ಭಾರತೀಯ ವಿಜ್ಞಾನ ಮಂದಿರ ಹಾಗೂ ತಂಜಾವೂರಿನ ಸಾಸ್ತ್ರ ವಿಶ್ವವಿದ್ಯಾಲಯದ ನಾಲ್ಕು ಸಂಶೋಧಕರನ್ನೊಳಗೊಂಡ ತಂಡವೊಂದು ಬೆಂಗಳೂರಿನ ಭೂಗತ ಮೆಟ್ರೋದ ಅವಳಿ ಸುರಂಗಗಳ ಮೇಲೆ ಸ್ಫೋಟವು ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕ ಬರಹವನ್ನು ಪ್ರಕಟಿಸಿದೆ. ಸಾರ್ವಜನಿಕ ಸುರಕ್ಷತಾ ಅಭಿಯಾನದ ಅಡಿಯಲ್ಲಿ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಯೋಜನೆಯ ಪ್ರಾಥಮಿಕ ಹಂತದ ಅಧ್ಯಯನವು ಇದಾಗಿದ್ದು ಮೆಟ್ರೋ ಸುರಂಗಗಳ ಮೇಲೆ ಸ್ಫೋಟದ ಪರಿಣಾಮಗಳು ಹಾಗೂ ಸ್ಫೋಟದ ಸನ್ನಿವೇಶಗಳಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯದ ಬಗೆಗಿನ ವರದಿ ಪ್ರಕಟಗೊಂಡಿದೆ.

ಬೆಂಗಳೂರಿನ ಮೆಟ್ರೋ

ಬೆಂಗಳೂರಿನ ಮೆಟ್ರೋ ರೈಲಿನ ಪೂರ್ವ-ಪಶ್ಚಿಮ ಪಥದ ಭಾಗವಾದ ಸಿಟಿ ರೈಲು ನಿಲ್ದಾಣ - ಮೆಜೆಸ್ಟಿಕ್ - ಸೆಂಟ್ರಲ್ ಕಾಲೇಜು - ರಾಜಭವನ ಮಾರ್ಗದ ಅವಳಿ ಸುರಂಗಗಳನ್ನು ಈ ಕಾಲ್ಪನಿಕ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. 5.6 ಮೀಟರ್ ವ್ಯಾಸ ಹೊಂದಿರುವ ಈ ಸುರಂಗಗಳಿಗೆ 28 ಸೆಂಟಿಮೀಟರ್ ದಪ್ಪನೆಯ ಕಾಂಕ್ರೀಟ್ ಹೊದಿಕೆ ಇದೆ. ನೆಲದಿಂದ ಸುಮಾರು 55 ಅಡಿ ಕೆಳಗೆ ಇರುವ ಈ ಅವಳಿ ಸುರಂಗಗಳ ಕೇಂದ್ರಗಳು ಪರಸ್ಪರ 50 ಅಡಿ ದೂರದಲ್ಲಿವೆ.

ವಿವಿಧ ಒತ್ತಡಗಳಿಗೆ ಸುರಂಗಗಳ ಪ್ರತಿಕ್ರಿಯೆಯನ್ನು ಅಭ್ಯಸಿಸುವ ಸಲುವಾಗಿ ಸುರಂಗದ 'ಪರಿಮಿತ ಘಟಕ ಮಾದರಿ'ಯನ್ನು ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ.  ಸಂಕೀರ್ಣ ರಚನೆಯುಳ್ಳ ಯಾವುದೇ ದೈತ್ಯ ವಸ್ತುವಿನ ಮೇಲೆ ವಿವಿಧ ಪ್ರಕಾರದ ಬಲವು ಬೀರುವ ಪರಿಣಾಮವನ್ನು "ಪರಿಮಿತ ಘಟಕ ವಿಶ್ಲೇಷಣೆ"ಯ ಮೂಲಕ ಸುಲಭವಾಗಿ ಅರಿಯಬಹುದು. ಈ ವಿಧಾನದಲ್ಲಿ ಇಡಿಯ ವಸ್ತುವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿಲಾಗುತ್ತದೆ. ಯಾವುದೇ ಬಲಕ್ಕೆ ಆ ಘಟಕಗಳು ತೋರುವ ಪ್ರತಿಕ್ರಿಯೆಯ ಆಧಾರದ ಮೇಲೆ ಇಡಿಯ ವಸ್ತುವಿನ ಪ್ರತಿಕ್ರಿಯೆಯನ್ನು ಅಂದಾಜಿಸಲಾಗುತ್ತದೆ.

ಗಣಕೀಕೃತ ಮಾದರಿ (ಮಾಡೆಲಿಂಗ್) ಎಂಬುದು ನೈಜ ಪ್ರಾಯೋಗಿಕ ಅಧ್ಯಯನವಲ್ಲ. ಬದಲಾಗಿ ಅದೊಂದು ಸಂಕೀರ್ಣ ಸೈದ್ಧಾಂತಿಕ ಅನುಕರಣಾ ಪ್ರಕ್ರಿಯೆ.  ಸುರಂಗದಂಥ ವ್ಯವಸ್ಥೆಯ ಗಣಕೀಕೃತ ಮಾದರಿಯನ್ನು ಸಿದ್ಧಪಡಿಸುವಾಗ ಅದರ ತೂಕ, ಅದರ ಮೇಲಿ ಗುರುತ್ವಾಕರ್ಷಣ ಬಲ, ಸುತ್ತಲಿನ ನೀರಿನಿಂದಾಗಿ ಅದರ ಮೇಲೆ ಹಾಕಲ್ಪಟ್ಟ ಒತ್ತಡ, ಮುಂತಾದ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಸುರಂಗದ ಸೈದ್ಧಾಂತಿಕ ಮಾದರಿ ಸಿದ್ಧವಾದ ನಂತರ ಅತೀ ಒತ್ತಡದ ಅಲೆಗಳಿಗೆ ಈ ಮಾದರಿ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ವಿಶ್ಲೇಷಿಸುವ ಮೂಲಕ ಸುರಂಗದ ಮೇಲೆ ಟಿಎನ್‍ಟಿ ಸ್ಫೋಟದ ಪರಿಣಾಮ ಏನಾಗಬಹುದೆಂದು ಅಧ್ಯಯನ ನಡೆಸಲಾಯಿತು. ಸ್ಫೋಟವಾದ ಘಳಿಗೆಯಿಂದ ಪ್ರತಿ ಮಿಲಿಸೆಕೆಂಡಿನ ಅಂತರದಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಭೌತಿಕ ಅಂಶಗಳನ್ನು ದಾಖಲಿಸಿಕೊಳ್ಳಲಾಯಿತು.

ಅಧ್ಯಯನದಿಂದ ತಿಳಿದುಬಂದಿದ್ದೇನೆಂದರೆ, ಒಂದು ಸುರಂಗದಲ್ಲಿ 30 ಕೆ.ಜಿ. ಟಿಎನ್‍ಟಿ ಸ್ಫೋಟದಿಂದ ಸೃಷ್ಟಿಯಾಗುವ ಒತ್ತಡದಲೆಗಳು ಆ ಸುರಂಗದಗುಂಟ ಚಲಿಸಿ ತನ್ನ ಅವಳಿ ಸುರಂಗವನ್ನೂ ತಾಕುತ್ತದೆ. ಅದೇ 70 ಕೆ.ಜಿ. ಟಿಎನ್‍ಟಿ ಸ್ಫೋಟವು ಸುರಂಗದ ಸುತ್ತಲಿನ ಕಾಂಕ್ರೀಟ್ ಪದರವನ್ನು ಜಖಂಗೊಳಿಸುತ್ತದೆ. ನೆಲದಿಂದ ಹೆಚ್ಚು ಆಳವಿಲ್ಲದ ಸುರಂಗಗಳಲ್ಲೇನಾದರೂ ಇಂಥ ಸ್ಫೋಟ ಸಂಭವಿಸಿದಲ್ಲಿ ಸ್ಫೋಟದ ಒತ್ತಡದಲೆಗಳು ಸುರಂಗದ ಸುತ್ತಲಿನ ಮಣ್ಣಿನ ಪದರಗಳ ಮೂಲಕವಾಗಿ ನೆಲದ ಮೇಲ್ಮೈಯನ್ನೂ ತಲುಪಬಲ್ಲವು.

ಪ್ರಕಟಗೊಂಡ ಲೇಖನದ ಲೇಖಕರಲ್ಲೊಬ್ಬರಾದ ಭಾರತೀಯ ವಿಜ್ಞಾನ ಮಂದಿರದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಕನ್ನಡಿಗ ಪ್ರೊ. ಟಿ. ಜಿ. ಸೀತಾರಾಮ ಹೇಳುತ್ತಾರೆ "ಇದು ಇಂಡೋ-ಜರ್ಮನ್ ಕಾರ್ಯಯೋಜನೆಯ ಪ್ರಾರಂಭಿಕ ಅಧ್ಯಯನವಾಗಿದ್ದು ಈ ಮಾದರಿಯು ಪ್ರಾಥಮಿಕ ಹಂತದ ಕೆಲಸವಾಗಿದೆ. ಸೈದ್ಧಾಂತಿಕ ಮಾದರಿಯನ್ನು ಸಿದ್ಧಗೊಳಿಸುವುದು ಜಟಿಲ ಪ್ರಕ್ರಿಯೆಯಾಗಿದ್ದು ಸಂಪೂರ್ಣ ಸುರಂಗದ ಎಲ್ಲಾ ಪ್ರಾಕೃತಿಕ, ಭೌತಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ."

ಪ್ರೊ. ಸೀತಾರಾಮ ಹಾಗೂ ತಂಡದವರು (ಕಾರ್ಯಯೋಜನೆ ಅನುಮೋದಿಸಲ್ಪಟ್ಟಲ್ಲಿ) ಸ್ಫೋಟದ ಸಂದರ್ಭದಲ್ಲಿ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ, ಜನಸಂದಣಿಯ ವರ್ತನೆ, ಸುರಕ್ಷತಾ ಪ್ರಾತ್ಯಕ್ಷಿಕೆಗಳ ಬಗೆಗೂ ಸಂಶೋಧನೆ ನಡೆಸಲು ಆಸಕ್ತಿ ಹೊಂದಿದ್ದಾರೆ. ಅಲ್ಲದೇ, ಬೆಂಗಳೂರು ಹಾಗೂ ದೆಹಲಿಯ ಮೆಟ್ರೋ ನಿಗಮಗಳ ಅಧಿಕಾರಿಗಳನ್ನೂ ತಮ್ಮ ಅಧ್ಯಯನದಲ್ಲಿ ಸೇರಿಸಿಕೊಳ್ಳುವ ಬಯಕೆ ಇರುವ ಸಂಶೋಧಕರು,  ಆ ಮೂಲಕ ತಾವು ವಿಶ್ಲೇಷಿಸಿದ ಫಲಿತಾಂಶಗಳನ್ನು ನೈಜ ಪರಿಸ್ಥತಿಗಳಲ್ಲೂ ಅಳವಡಿಸುವ ಇಚ್ಛೆ ಹೊಂದಿದ್ದಾರೆ.

ಕೊಡುಗೆದಾರರು: ಭರತಕುಮಾರ ಹೆಗಡೆ ಕನ್ನಳ್ಳಿ

2.98795180723
kiran Nov 03, 2016 04:38 PM

ಟೂ ಗುಡ್

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top