অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕನ್ನಡಿಗ ಭಾರತದ ರತ್ನ

ಕನ್ನಡಿಗ ಭಾರತದ ರತ್ನ

ಈ ಮೂಲಕ ಮೂರನೇ ಬಾರಿಗೆ ಕನ್ನಡಿಗರೊಬ್ಬರಿಗೆ ಈ ಬಿರುದು ದೊರೆತಂತಾಗಿದೆ. ಈ ಮೊದಲು ಸರ್ ಎಂ.ವಿಶ್ವೇಶ್ವರಯ್ಯ(1955) ಮತ್ತು ಪಂಡಿತ ಬೀಮಸೇನ ಜೋಶಿ (2008) ಅವರಿಗೆ ಬಾರತ ರತ್ನ ನೀಡಲಾಗಿತ್ತು. ಹಾಗೆನೇ ರಾವ್ ಅವರುಸಿ.ವಿ.ರಾಮನ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಮ್ ಅವರ ಬಳಿಕ ಬಾರತ ರತ್ನ ಪಡೆದುಕೊಂಡ ಮುಂಚೂಣಿ ಅರಿಮೆಗಾರರ (scientist) ಪಟ್ಟಿಗೂ ಸೇರಿದಂತಾಗಿದೆ.

ಚಿಂತಾಮಣಿ ನಾಗೇಶ ರಾಮಚಂದ್ರ (C.N.R.) ರಾವ್ ಹುಟ್ಟಿದ್ದು 30.06.1934 ರಂದು ಬೆಂಗಳೂರಿನಲ್ಲಿ. ಅವರ ತಂದೆ ಹನುಮಂತ ನಾಗೇಶ ರಾವ್ ಮತ್ತು ತಾಯಿ ನಾಗಮ್ಮ ನಾಗೇಶ ರಾವ್. ತಮ್ಮ ಮೊದಲ ಹಂತದ ಕಲಿಕೆಯನ್ನು ತಾಯ್ನುಡಿ ಕನ್ನಡದಲ್ಲಿಯೇ ಮುಗಿಸಿದ ರಾವ್, 1951 ರಲ್ಲಿ ಮಯ್ಸೂರು ಕಲಿಕೆವೀಡಿನಿಂದ ಅರಿಮೆಯ (BSc) ಪದವಿ, 1953 ರಲ್ಲಿ ಬನಾರಸ್ ಹಿಂದೂ ಕಲಿಕೆವೀಡಿನಿಂದ ಅರಿಮೆಯ ಮೇಲ್ಪದವಿ (MSc) ಮತ್ತು 1958 ರಲ್ಲಿ ಅಮೇರಿಕಾದ ಪರ‍್ದ್ಯೂ ಕಲಿಕೆವೀಡಿನಿಂದ (Purdue University) ಪಿ.ಎಚ್.ಡಿ. ಪಡೆದರು.

ಪ್ರೊ.ರಾವ್ ಅವರು ’ಗಟ್ಟಿರೂಪದ ಇರ‍್ಪರಿಮೆ’ (solid state chemistry) ಇಲ್ಲವೇ ’ವಸ್ತುಗಳ ಇರ‍್ಪರಿಮೆ’ (material chemistry) ಎಂದು ಕರೆಯಲಾಗುವ ಅರಿಮೆಯ ಕವಲಿನಲ್ಲಿ ಹೆಚ್ಚಿನ ಅರಕೆ ನಡೆಸಿದ್ದಾರೆ. ಅರಿಮೆಯ ಈ ಕವಲು ಗಟ್ಟಿರೂಪದ ವಸ್ತುಗಳ ಕಟ್ಟಣೆ, ಅವುಗಳ ಇಟ್ಟಳ structure ಮತ್ತು ಪರಿಚೆಗಳ ಕುರಿತಾದುದಾಗಿದೆ.

ಎತ್ತುಗೆಗೆ: ಗಟ್ಟಿರೂಪದ ವಸ್ತುಗಳನ್ನು ಹೆಚ್ಚಿನ ಬಿಸುಪಿಗೆ ಒಳಪಡಿಸಿದಾಗ ಇಲ್ಲವೇ ಬೆಳಕಿಗೆ ಒಡ್ಡಿದಾಗ ಅವು ತೋರುವ ಗುಣಗಳ ಕುರಿತು ತಿಳಿದುಕೊಳ್ಳುವುದು, ಬೇರೆ ರೂಪದ ವಸ್ತುಗಳೊಡನೆ ಗಟ್ಟಿರೂಪದ ವಸ್ತುಗಳು ತೋರುವ ಚಟುವಟಿಕೆಗಳು, ವಸ್ತುಗಳಲ್ಲಾಗುವ ಮಾರ‍್ಪಾಟುಗಳ ಹಂತಗಳು ಮುಂತಾದ ವಿಶಯಗಳು ಈ ಕವಲಿನಲ್ಲಿ ಸೇರಿವೆ.

ವಸ್ತುಗಳ ಹಲವಾರು ವಿಶಯಗಳತ್ತ ಬೆಳಕುಚೆಲ್ಲುವ ಈ ಅರಿಮೆಯು ಅದಿರರಿಮೆ (mineralogy), ಜಲ್ಲಿಯರಿಮೆ (metallurgy), ಕಾವರಿಮೆಯಂತಹ (thermodynamics) ಇತರ ಅರಿಮೆಯ ಕವಲುಗಳಿಗೂ ನೆರವಾಗುತ್ತದೆ.

ಸರಿಸುಮಾರು 1960 ರಶ್ಟು ಹಿಂದೆಯೇ ವಸ್ತುಗಳ ಇರ‍್ಪರಿಮೆಯಲ್ಲಿ ಜಗತ್ತಿನ ಮುಂಚೂಣಿ ಅರಿಮೆಗಾರರೊಡನೆ ಸೇರಿ ಅರಕೆ ನಡೆಸಿದ ಪ್ರೊ.ರಾವ್, Re03 ಅಂತಹ ಜಲ್ಲಿ ಆಕ್ಸಾಯಡಗಳ ಮಾರ‍್ಪಾಟು, ಅವುಗಳು ತಡೆವೆಗಳಿಂದ (insulator) ಬಿಡುವೆಗಳಾಗಿ (conductor) ಮಾರ‍್ಪಾಟಾಗುವ ಕುರಿತಾಗಿ ಅರಕೆ ನಡೆಸಿದ್ದರು.

ಕಡುಬಿಸುಪಿನಲ್ಲಿ ಮೀರಿ-ಬಿಡುವೆತನ (high-temperature superconductivity), ಮ್ಯಾಂಗನೀಸನಂತಹ ವಸ್ತುಗಳನ್ನು ಸೆಳೆಗಲ್ಲ ಬಯಲಿಗೆ ಒಳಪಡಿಸಿದಾಗ ತೋರುವ ಬೆರುಗುಗೊಳಿಸುವ ’ಹಿರಿ ಸೆಳೆತಡೆತನ’ದ (colossal magnetoresistance) ಇಳಿತ, ವಸ್ತುಗಳಲ್ಲಿ ಇಲೆಕ್ಟ್ರಾನಿಕ್ ಹಂತಗಳ ಬೇರ‍್ಪಡುಗೆ ಮುಂತಾದ ವಿಶಯಗಳ ಕುರಿತಾಗಿ ಪ್ರೊ.ರಾವ್ ಅವರು ತಮ್ಮ ಅರಕೆಹಾಳೆಗಳೊಂದಿಗೆ (research papers) ಜಗತ್ತಿನ ಅರಿಮೆಗಾರರ ಗಮನ ಸೆಳೆದಿದ್ದಾರೆ.

ಹಾಗೆನೇ ಗೆಲಿಯಂ ನಯ್‍ಟ್ರಾಯಡ್, ಬೋರೋನಾ ನಯ್‍ಟ್ರಾಯಡ್‍ನಂತಹ ವಸ್ತುಗಳನ್ನು ಮಾಡುವಲ್ಲಿ ಹೊಸದಾದ ಬಗೆಗಳು, ಹೊಸ ವಸ್ತುಗಳ ಕಂಡುಹಿಡಿಯುವಿಕೆ, ಅಲೆಪಟ್ಟಿನೋಟ (spectroscopy) ಕುರಿತಾಗಿ ಅನೇಕ ಹೊಸ ವಿಶಯಗಳನ್ನು ಪ್ರೊ.ರಾವ್ ಕಂಡುಹಿಡಿದಿದ್ದಾರೆ.

ಇತ್ತೀಚಿನ ವರುಶಗಳಲ್ಲಿ ಮುಂಚೂಣಿಗೆ ಬರುತ್ತಿರುವ ಕಿರುಚಳಕ ಕುರಿತಾಗಿಯೂ ಪ್ರೊ.ರಾವ್ ತಮ್ಮ ಅರಕೆ ಕಯ್ಗೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 1400 ಅರಕೆಹಾಳೆಗಳನ್ನು (research papers), ಸುಮಾರು 44 ಅರಿಮೆಯ ಹೊತ್ತಗೆಗಳನ್ನು ಬರೆದಿರುವ ಪ್ರೊ.ರಾವ್, ಅರಿಮೆಯ ಜಗತ್ತಿನಲ್ಲಿ ತಮ್ಮ ಅಚ್ಚೊತ್ತಿದ್ದಾರೆ.

ಅರಿಮೆಯ ನೆಲದಲ್ಲಿ ತಮ್ಮ ಅರಕೆಯ ಕೆಲಸದಿಂದಾಗಿ ಹಿರಿಮೆ, ಗರಿಮೆ ಗಳಿಸುತ್ತಾ ಬಂದಿರುವ ಪ್ರೊ.ರಾವ್, ಈಗ ಬೆಂಗಳೂರಿನಲ್ಲಿರುವ ’ಜವಾಹರಲಾಲ ನೆಹರು ಅರಿಮೆಯ ಅರಕೆವೀಡಿ’ನ (Jawaharlal Nehru Centre for Advanced Scientific Research) ಮುಂದಾಳುಗಳಾಗಿ, ಪ್ರದಾನಮಂತ್ರಿಗಳ ಅರಿಮೆಯ ಸಲಹೆ ಕೂಟದಲ್ಲಿ ಕೆಲಸ ಮಾಡುತ್ತಾ ಬಾರತದ ಅರಿಮೆಯ ಕವಲಿಗೆ ಹೊಸ ದಾರಿ ತೋರಿಸುತ್ತಿದ್ದಾರೆ.

ರಾವ್ ಅವರ ಮುಂಚೂಣಿಯಲ್ಲಿ ನಿಲ್ಲುವ ಅರಕೆಯಿಂದಾಗಿ ಆಕ್ಸಪರ‍್ದ್, ಲಿವರ್ ಪೂಲ್, ಕೋಲರಾಡೋನಂತಹ ಜಗತ್ತಿನ ಹತ್ತು ಹಲವಾರು ಮುಂಚೂಣಿ ಕಲಿಕೆವೀಡುಗಳು ಅವರಿಗೆ ಡಾಕ್ಟರೇಟ್ ಪಟ್ಟವನ್ನು ನೀಡಿವೆ. ಕರ‍್ನಾಟಕ ರತ್ನ ಸೇರಿದಂತೆ ಇತರ ಹಲವಾರು ಮದಿಪು-ಮನ್ನಣೆಗಳು ಅವರಿಗೆ ಸಂದಿವೆ.

ತಾಯ್ನುಡಿ ಕನ್ನಡದಲ್ಲಿ ತಮ್ಮ ಮೊದಲ ಹಂತದ ಕಲಿಕೆ ನಡೆಸಿದ ರಾವ್ ಅವರು ಅದರಿಂದಾಗುವ ಒಳಿತನ್ನು, ಅರಿಮೆಯ ಹಿರಿಮೆಯನ್ನು ಕನ್ನಡ ನಾಡೆನೆಲ್ಲೆಡೆ ಪಸರಿಸಲು ’ವಿಜ್ನಾನ ಕಲಿಯೋಣ’ದಂತಹ ಹಲವಾರು ಕಾರ‍್ಯಕ್ರಮಗಳಲ್ಲೂ ತೊಡಗಿಕೊಂಡಿದ್ದು, ಅವರ ನಾಡಪರ ಕಾಳಜಿಯನ್ನು ತೋರಿಸುತ್ತದೆ.

ಜಗತ್ತಿನ ಅರಿಮೆಯ ನೆಲದಲ್ಲಿ ತಮ್ಮ ಅಚ್ಚೊತ್ತಿರುವ ಪ್ರೊ.ರಾವ್ ಅವರಿಗೆ ’ಬಾರತ ರತ್ನ’ ಸಂದಿರುವ ಈ ಹೊನ್ನಿನ ಹೊತ್ತಿನಲ್ಲಿ ಜಗತ್ತಿನೆಲ್ಲೆಡೆ ನೆಲೆಸಿರುವ ಕನ್ನಡಿಗರ ನಲ್ಮೆಯ ಹಾರಯ್ಕೆಗಳು. ಕನ್ನಡಿಗರು ಜಗದೆಲ್ಲೆಡೆ ಹೀಗೆಯೇ ಬೆಳಗುತ್ತಿರಲಿ.

ಮೂಲ : ಹೊನಲು

ಕೊನೆಯ ಮಾರ್ಪಾಟು : 6/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate