অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಿದ್ಧ

ಸಿದ್ಧ ಪದ್ಧತಿಯ ಮೂಲ

ಸಿದ್ಧ ವೈದ್ಯಕೀಯ ಪದ್ಧತಿಯು ಭಾರತದ ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಗಳಲ್ಲಿ ಒಂದು. ಸಿದ್ಧ ಅಂದರೆ ಸಾಧನೆ ಎಂದು ಅರ್ಥ. “ಸಿದ್ಧರು” ವೈದ್ಯಕೀಯದಲ್ಲಿ ಸಾಕಷ್ಟು ಗಣನೀಯ ಫಲಿತಾಂಶವನ್ನು ನೀಡುತ್ತಿದ್ದ ಸಂತರಾಗಿದ್ದವರು. ಈ ಒಂದು ವೈದ್ಯಕೀಯ ಪದ್ಧತಿಯ ಪ್ರಗತಿಗೆ 18 ಮಂದಿ ಸಿದ್ಧರು ಕಾಣಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಸಿದ್ಧ ಸಾಹಿತ್ಯವು ತಮಿಳು ಭಾಷೆಯಲ್ಲಿದ್ದು, ಭಾರತ ಮತ್ತು ಹೊರದೇಶಗಳ ತಮಿಳು ಆಡು ಭಾಷೆಯಿರುವ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಸಿದ್ಧ ಪದ್ಧತಿಯು ಸ್ವಭಾವದಲ್ಲಿ ಹೆಚ್ಚು ಚಿಕಿತ್ಸಾತ್ಮಕವಾಗಿದೆ.

ಸಿದ್ಧ ಪದ್ಧತಿಯ ಇತಿಹಾಸ

ಮಾನವ ಜೀವಿಗಾಗಿ ಸೃಷ್ಟಿಕರ್ತನು ಭೂಮಿಯ ಮೇಲೆ ಮೀಸಲಿಟ್ಟ ಪ್ರದೇಶವೆಂದರೆ, ಪೂರ್ವ ದಿಕ್ಕಿನ ಫಲವತ್ತಾದ ಹಾಗೂ ಉಷ್ಣವಲಯದ ಪ್ರದೇಶ , ಅದರಲ್ಲೂ ಭಾರತದ ಭೂಪ್ರದೇಶ. ಇಲ್ಲಿಂದಲೇ ಮಾನವ ಜೀವಿಯ ಸಂಸ್ಕೃತಿ ಮತ್ತು ವೃತ್ತಿಯ ಉಗಮವಾಯಿತು. ಆದುದರಿಂದ ಮಾನವ ಜನಾಂಗದ ಸಂಸ್ಕೃತಿ ಮತ್ತು ನಾಗರಿಕತೆಯು ಮೊತ್ತಮೊದಲು ಭಾರತದಲ್ಲಿ ಹುಟ್ಟಿ ವಿಶ್ವದ ವಿವಿಧೆಡೆಗೆ ಹರಡಲ್ಪಟ್ಟಿತು ಎಂದು ಹೇಳುವುದು ಸಮಂಜಸವಾಗಿದೆ. ಭಾರತೀಯ ಇತಿಹಾಸದಲ್ಲಿ ಆರ್ಯರ ಆಕ್ರಮಣಕ್ಕೂ ಮುಂಚೆ ದ್ರಾವಿಡರು ಭಾರತದ ಮೂಲನಿವಾಸಿಗಳಾಗಿದ್ದರು ಹಾಗೂ ತಮಿಳರು ಅವರಲ್ಲಿ ಪ್ರಮುಖರಾಗಿದ್ದರು. ತಮಿಳರು ಮೊತ್ತ ಮೊದಲ ಸುಸಂಸ್ಕೃತ ಜನಾಂಗವಾಗಿದ್ದುದಲ್ಲದೆ, ಇತರ ಮೂಲನಿವಾಸಿಗಳಿಗಿಂತ ನಾಗರೀಕತೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದವರಾಗಿದ್ದರು. ಭಾರತದ ಭಾಷೆಯು ಎರಡು ಪ್ರಮುಖ ಭಾಗಗಳಾಗಿ ವಿಂಗಡನೆಯಾಗಿತ್ತು. ಉತ್ತರದಲ್ಲಿ ಸಂಸ್ಕೃತವು ಪ್ರಮುಖ ಅಂಶವಾಗಿದ್ದರೆ, ದಕ್ಷಿಣದಲ್ಲಿ ದ್ರಾವಿಡ ಭಾಷೆಯು ಸ್ವಂತಂತ್ರ ತಳಹದಿಯಾಗಿ ಬೆಳೆದು ನಿಂತಿತ್ತು. ವೈದ್ಯಕೀಯ ವಿಜ್ಞಾನವು ಮಾನವನ ಉತ್ತಮ ಜೀವನ ಮತ್ತು ಉಳಿವಿಗೆ ಅತಿ ಮುಖ್ಯವಾಗಿದೆ. ಆದುದರಿಂದ ಅದು ಮಾನವನೊಂದಿಗೆ ಹುಟ್ಟಿ ನಾಗರೀಕತೆಯೊಂದಿಗೆ ಬೆಳೆದಿರಬೇಕು. ಆದುದರಿಂದ, ಈ ಪದ್ಧತಿಗಳು ಯಾವ ನಿರ್ದಿಷ್ಟ ಕಾಲಘಟ್ಟದಲ್ಲಿ ಆರಂಭವಾದುವು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುವುದರಲ್ಲಿ ಯಾವುದೇ ಹುರುಳಿಲ್ಲ. ಅವುಗಳು ಸರ್ವಕಾಲಿಕವಾಗಿವೆ. ಅವುಗಳು ಮಾನವನೊಂದಿಗೆ ಹುಟ್ಟಿ ಮಾನವನೊಂದಿಗೆ ಕೊನೆಗಾಣಬಹುದು. ದಕ್ಷಿಣದಲ್ಲಿ ಹೆಚ್ಚು ಪ್ರಚಾರದಲ್ಲಿದ್ದು ಜನಜನಿತವಾಗಿದ್ದ ಪದ್ಧತಿಯೆಂದರೆ ‘ಸಿದ್ಧ’. ಉತ್ತರದಲ್ಲಿ ಮನೆಮಾತಾಗಿದ್ದ ಪದ್ಧತಿಯೆಂದರೆ ಆಯುರ್ವೇದ. ಯಾವುದೇ ಒಬ್ಬ ವ್ಯಕ್ತಿಯ ಹೆಸರನ್ನು ಈ ಪದ್ಧತಿಗಳ ಜನಕ ಎಂದು ಹೆಸರಿಸುವುದರ ಬದಲು ನಮ್ಮ ಹಿರಿಯರು ಸೃಷ್ಟಿಕರ್ತನನ್ನೇ ಈ ಪದ್ಧತಿಗಳ ಜನಕ ಎಂದು ಕರೆದರು. ಸಂಪ್ರದಾಯಗಳ ಪ್ರಕಾರ ಸಿದ್ಧ ಪದ್ಧತಿಯ ಜ್ಞಾನವನ್ನು ಬಹಿರಂಗಗೊಳಿಸಿದವನು ಭಗವಾನ್ ಶಿವ. ಆತ ತನ್ನ ಪತ್ನಿ ಪಾರ್ವತಿಗೆ ಇದನ್ನು ತಿಳಿಯಪಡಿಸಿದರೆ, ಪಾರ್ವತಿಯು ನಂದಿ ದೇವನಿಗೆ ಹಸ್ತಾಂತರಿಸಿದಳು ಮತ್ತು ಆತ ಆ ಜ್ಞಾನವನ್ನು ಸಿದ್ಧರಿಗೆ ಹಸ್ತಾಂತರಿಸಿದ. ಸಿದ್ಧರು ಪುರಾತನ ಕಾಲದ ಮಹಾನ್ ವಿಜ್ಞಾನಿಗಳಾಗಿದ್ದರು.

ಸಂಪ್ರದಾಯಗಳ ಪ್ರಕಾರ ಸಿದ್ಧ ವೈದ್ಯಕೀಯ ಪದ್ಧತಿಯ ಉಗಮವು ಅಗಸ್ತ್ಯ ಮಹಾಮುನಿಯಿಂದಾಯಿತು ಎನ್ನಲಾಗುತ್ತದೆ. ಅವರ ಕೆಲವು ಗ್ರಂಥಗಳು ಈಗಲೂ ಸಿದ್ಧ ವೈದ್ಯಕೀಯ ಶಿಕ್ಷಣವನ್ನು ಅನುಸರಿಸುವವರಿಗೆ ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸೆಯ ಬಹುಮಾನ್ಯ ಪಠ್ಯವಾಗಿವೆ.

ಸಿದ್ಧ ಪದ್ಧತಿಯ ಮೂಲಭೂತ ಪರಿಕಲ್ಪನೆಗಳು

ವೈದ್ಯಜನ್ಯ ರಾಸಾಯನ ಶಾಸ್ತ್ರದ ಪರಿಣತಿಯನ್ನೊಳಗೊಂಡ ಈ ಪದ್ಧತಿಯ ಮೂಲಭೂತ ಹಾಗೂ ಅನ್ವಯಿಕ ಸಿದ್ಧಾಂತಗಳು ಮತ್ತು ತತ್ವಗಳು, ಆಯುರ್ವೇದದ ತತ್ವಗಳೊಂದಿಗೆ ಬಹಳವೇ ತಾಳೆಯಾಗುತ್ತವೆ. ಈ ಪದ್ಧತಿಗೆ ಅನುಸಾರವಾಗಿ ಮಾನವನ ಭೌತಿಕ ಕಾಯವು ವಿಶ್ವದ ಪ್ರತಿರೂಪವಾಗಿದೆ. ಹಾಗೆಯೇ, ಅವುಗಳ ಮೂಲ ಯಾವುದೇ ಆಗಿದ್ದರೂ, ಆಹಾರ ಮತ್ತು ಔಷಧಿಗಳು ಸಹ, ಆಯುರ್ವೇದದಂತೆಯೇ, ಈ ಪದ್ಧತಿಯೂ ವಿಶ್ವದ ಎಲ್ಲಾ ಕಾಯಗಳೂ, ಮಾನವನ ದೇಹವೂ ಸೇರಿದಂತೆ ಐದು ಪ್ರಮುಖ ಅಂಶಗಳಿಂದ ಮಾಡಲ್ಪಟ್ಟಿದೆ (ಪಂಚಭೂತಗಳು) ಎಂದು ಹೇಳುತ್ತದೆ. ಅವುಗಳೆಂದರೆ, ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶ. ಮಾನವನ ದೇಹವು ತೆಗೆದುಕೊಳ್ಳುವ ಆಹಾರ ಮತ್ತು ಔಷಧಿಗಳೂ ಕೂಡ ಈ ಐದು ಅಂಶಗಳಿಂದಲೇ ಮಾಡಲ್ಪಟ್ಟಿದೆ. ಔಷಧಿಯಲ್ಲಿರುವ ಈ ಐದು ವಸ್ತುಗಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ ಹಾಗೂ ಅವುಗಳ ತೂಕ ಯಾ ಪ್ರಾಮುಖ್ಯತೆ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೆಲವು ನಿರ್ದಿಷ್ಟ ಕ್ರಿಯೆಗಳಿಗೆ ಮತ್ತು ಚಿಕಿತ್ಸಾತ್ಮಕ ಫಲಿತಾಂಶಗಳಿಗೆ ಕಾರಣವಾಗಿದೆ ಎಂದು ಹೇಳಬಹುದು.

ಆಯುರ್ವೇದದಂತೆಯೇ, ಸಿದ್ಧ ಪದ್ಧತಿಯೂ ಮಾನವ ದೇಹವನ್ನು ಮೂರು ದೇಹಧಾತುಗಳ, ಏಳು ಮೂಲಭೂತ ಅಂಗಾಂಶಗಳ ಮತ್ತು ದೇಹದ ತ್ಯಾಜ್ಯವಸ್ತುಗಳಾದ ಮಲ ಮೂತ್ರ, ಮತ್ತು ಬೆವರು ಇವುಗಳ ಮಿಶ್ರಣವೆಂದು ಪರಿಗಣಿಸುತ್ತದೆ. ಮಾನವನ ದೇಹವನ್ನು ನಿರ್ಮಿಸುವ ಮೂಲಭೂತ ವಸ್ತುವೇ ಆಹಾರ. ಅದು ಮುಂದೆ ಸಂಸ್ಕರಣೆಗೊಂಡು ದೇಹಧಾತು, ಅಂಗಾಂಶಗಳು ಹಾಗೂ ತ್ಯಾಜ್ಯವಾಗಿ ಪರಿವರ್ತಿತವಾಗುತ್ತದೆ. ಧಾತುವಿನ ಸಂತುಲಿತತೆಯೇ ಆರೋಗ್ಯ ಮತ್ತು ಅದರಲ್ಲಾಗುವ ವ್ಯತ್ಯಾಸಗಳೇ ಖಾಯಿಲೆಗೆ ಕಾರಣ. ಈ ಪದ್ಧತಿಯು ಜೀವನದಲ್ಲಿನ ಮುಕ್ತಿಯ ಪರಿಕಲ್ಪನೆಯ ಕುರಿತೂ ವ್ಯವಹರಿಸುತ್ತದೆ. ಈ ಪದ್ಧತಿಯನ್ನು ಪ್ರತಿಪಾದಿಸುವವರು ಔಷಧಿ ಹಾಗೂ ಧ್ಯಾನದಿಂದ ಮುಕ್ತಿಯ ಸ್ಥಿತಿಯನ್ನು ತಲುಪುದು ಸಾಧ್ಯವೆಂದು ನಂಬುತ್ತಾರೆ.

ಮೆಟೀರಿಯಾ ಮೆಡಿಕಾ

ಈ ಪದ್ಧತಿಯು ಅತ್ಯಂತ ಶ್ರೀಮಂತ ಹಾಗೂ ಅನುರೂಪವಾದ ಔಷಧೀಯ ಜ್ಞಾನದ ಭಂಡಾರವನ್ನು ಹೊಂದಿದೆ. ಇಲ್ಲಿ ಲೋಹ ಹಾಗೂ ಖನಿಜಗಳ ಬಳಕೆಯನ್ನು ಬಹುವಾಗಿಯೇ ಸಲಹೆ ಮಾಡಲಾಗುತ್ತದೆ. ಈ ಪದ್ಧತಿಯಲ್ಲಿರುವ ಲೋಹ ಹಾಗೂ ಖನಿಜಗಳ ಕುರಿತಾದ ಜ್ಞಾನದ ಆಳವನ್ನು ಮೆಟೀರಿಯಾ ಮೆಡಿಕಾದಲ್ಲಿರುವ ಸವಿವರವಾದ ಔಷಧಿಯ ವರ್ಗೀಕರಣದಿಂದ ತಿಳಿದುಕೊಳ್ಳಬಹುದು. ಅವುಗಳನ್ನು ಈ ಕೆಳಗೆ ಸೂಕ್ಷ್ಮವಾಗಿ ವಿಷದೀಕರಿಸಲಾಗಿದೆ:

  • ಉಪ್ಪು ಎಂದು ಕರೆಯಲ್ಪಡುವ ಒಟ್ಟು 25 ವಿಧವಾದ, ನೀರಿನಲ್ಲಿ ವಿಲಯನವಾಗುವ ಅಥವಾ ಕರಗುವ ನಿರವಯವ ಸಂಯುಕ್ತಗಳಿವೆ. ಅವುಗಳು ವಿವಿಧ ರೀತಿಯ ಕ್ಷಾರಗಳು ಮತ್ತು ಲವಣಗಳಾಗಿವೆ.
  • 64 ವಿಧದ ಖನಿಜ ಔಷಧಿಗಳಿವೆ. ಅವುಗಳು ನೀರಿನಲ್ಲಿ ಕರಗುವುದಿಲ್ಲ ಆದರೆ ಬೆಂಕಿಯಲ್ಲಿ ಹಾಕಿದಾಗ ಆವಿ ಅಥವಾ ಅನಿಲವನ್ನು ಹೊರಸೂಸುತ್ತವೆ. ಇವುಗಳಲ್ಲಿ 32 ಸ್ವಾಭಾವಿಕವಾಗಿದ್ದು ಉಳಿದವುಗಳು ಕೃತಕವಾಗಿವೆ.
  • ನೀರಿನಲ್ಲಿ ಕರಗದ ಏಳು ಔಷಧಿಗಳು ಇವೆ. ಆದರೆ ಅವು ಬೆಂಕಿಗೆ ಹಾಕಿದಾಗ ಆವಿ ಅಥವಾ ಅನಿಲವನ್ನು ಹೊರಸೂಸುತ್ತವೆ.
  • ಈ ಪದ್ಧತಿಯು, ಬಿಸಿ ಮಾಡಿದಾಗ ಕರಗಿ ತಣ್ಣಗಾಗುವಾಗ ಘನರೂಪಕ್ಕೆ ಬರುವಂತಹ ಲೋಹ ಮತ್ತು ಮಿಶ್ರ ಲೋಹಗಳ ಪ್ರತ್ಯೇಕ ವರ್ಗೀಕರಣವನ್ನು ಮಾಡಿದೆ. ಇವುಗಳು ಚಿನ್ನ, ಬೆಳ್ಳಿ, ತಾಮ್ರ, ಸೀಸ ಮತ್ತು ಕಬ್ಬಿಣವನ್ನು ಒಳಗೊಂಡಿವೆ. ಇವುಗಳನ್ನು ವಿಶೇಷವಾದ ಪ್ರಕ್ರಿಯೆಯಲ್ಲಿ ಉರಿಸಿ ಔಷಧಿಯಲ್ಲಿ ಬಳಸಲಾಗುತ್ತದೆ.
  • ಶಾಖ ನೀಡಿದಾಗ ಉತ್ಪತನಕ್ಕೊಳಗಾಗುವ ಗುಂಪಿನ ಔಷಧಿಗಳಿವೆ. ಈ ಗುಂಪು ಪಾದರಸ ಮತ್ತು ಅದರ ವಿಭಿನ್ನ ರೂಪಗಳನ್ನು, ಉದಾಹರಣೆಗೆ, ಪಾದರಸದ ಕೆಂಪು ಸಲ್ಫೈಡ್, ಪಾದರಸದ ಕ್ಲೋರೈಡ್, ಮತ್ತು ಪಾದರಸದ ರೆಡ್ ಆಕ್ಸೈಡ್ -ಇವುಗಳನ್ನು ಒಳಗೊಂಡಿದೆ.
  • ಚಿಕಿತ್ಸಾತ್ಮಕ ಮತ್ತು ಆರೋಗ್ಯ ನಿರ್ವಹಣೆಯ ವಿಷಯದಲ್ಲಿ, ನೀರಿನಲ್ಲಿ ವಿಲಯನವಾಗದ ಗಂಧಕವು ಪಾದರಸ ಜೊತೆ ಸಿದ್ಧೌಷಧಿಯ ಮೆಟೀರಿಯಾ ಮೆಡಿಕಾದಲ್ಲಿ ಮಹತ್ತರ ಸ್ಥಾನ ಪಡೆದಿದೆ.
  • ಈ ಮೇಲಿನ ವರ್ಗೀಕರಣವು ಚಿಕಿತ್ಸಾ ಕ್ರಮವಾಗಿ ಈ ಪದ್ಧತಿಯು ಕಂಡುಕೊಂಡಿರುವ ವಿವರವಾದ ಜ್ಞಾನದ ಕುರಿತು ಮತ್ತು ಖನಿಜಗಳ ಅಧ್ಯಯನದ ಕುರಿತು ಪುರಾವೆ ನೀಡುತ್ತದೆ. ಇವುಗಳಲ್ಲದೆ ಪ್ರಾಣಿ ಮೂಲದಿಂದ (ಪ್ರಾಣಿಜನ್ಯ) ಪಡೆದ ಔಷಧಿಗಳೂ ಈ ಪದ್ಧತಿಯಲ್ಲಿವೆ. ಈ ಪದ್ಧತಿಯು ಸಾಮಾನ್ಯ ಖಾಯಿಲೆಗಳಿಗೆ ಸಿದ್ಧ ಚಿಕಿತ್ಸೆ ಎನ್ನುವ ಕಿರು ಹೊತ್ತಿಗೆಯನ್ನೂ ಪ್ರಕಟಿಸಿದೆ.

ಸಿದ್ಧದಲ್ಲಿ ರಾಸಾಯನ ಶಾಸ್ತ್ರ

ಸಿದ್ಧದಲ್ಲಿ ರಾಸಾಯನ ಶಾಸ್ತ್ರವು ವೈದ್ಯಕೀಯ ಶಾಸ್ತ್ರ ಮತ್ತು ರಸವಿದ್ಯೆಗೆ ಪೂರಕವಾಗಿರುವ ವಿಜ್ಞಾನವಾಗಿ ಬೆಳೆದಿದೆ. ಔಷಧಿಗಳ ತಯಾರಿಯಲ್ಲಿ ಮಾತ್ರವಲ್ಲದೆ ಇತರ ಮೂಲಭೂತ ಲೋಹಗಳನ್ನು ಚಿನ್ನವಾಗಿ ಪರಿವರ್ತಿಸುವಲ್ಲಿಯೂ ಇದು ನೆರವಾಗಿದೆ. ಸಸ್ಯ ಮತ್ತು ಖನಿಜಗಳ ಜ್ಞಾನವು ಉನ್ನತ ಮಟ್ಟದ್ದಾಗಿದ್ದು, ಅವರು ಸಾಮಾನ್ಯವಾಗಿ ವಿಜ್ಞಾನದ ಎಲ್ಲಾ ವಿಭಾಗಗಳ ಕುರಿತು ಉತ್ತಮ ಪರಿಚಯವನ್ನು ಹೊಂದಿದ್ದರು. ಸಿದ್ಧರು ಹಲವಾರು ಪ್ರಕ್ರಿಯೆಗಳಾಗಿ ಅಂದರೆ, ಸುಣ್ಣಮಾಡುವಿಕೆ (ಕ್ಯಾಲ್ಸಿನೇಶನ್), ಉತ್ಪತನ (ಸಬ್ಲಿಮೇಶನ್), ಆಸವನ ಅಥವಾ ಭಟ್ಟಿ ಇಳಿಸುವಿಕೆ (ಡಿಸ್ಟಿಲೇಶನ್), ಸಮ್ಮಿಲನ (ಫ್ಯೂಶನ್), ಪ್ರತ್ಯೇಕಿಸುವಿಕೆ (ಸೆಪರೇಶನ್), ಸಂಯೋಗ (ಕಂಜಂಕ್ಷನ್) ಅಥವಾ ಸಂಯೋಜನೆ (ಕಾಂಬಿನೇಶನ್), ಘನೀಭವನ (ಕಂಜೀಲೇಶನ್), ಮಿಶ್ರ ಲೋಹ ತಯಾರಿಕಾ ಪಾತ್ರೆಗೆ ಹೊಸದಾಗಿ ಆಹಾರವನ್ನು ಒದಗಿಸುವುದು (ಸಿಬೇಶನ್), ಹುದುಗುವಿಕೆ(ಫರ್ಮೆಂಟೇಶನ್), ತೀಕ್ಷ್ಣೀಕರಣ ಅಂದರೆ, ಚಿನ್ನವನ್ನು ಸಂಸ್ಕರಿಸುವ ಪ್ರಕ್ರಿಯೆ, ಸ್ಥಿರೀಕರಣ ಅಂದರೆ, ಬಹುಬೇಗ ಆವಿಯಾಗುವಿಕೆಯಾಗದ ಅಥವಾ ಭಾಷ್ಪೀಭವನವಾಗದ ಸ್ಥಿತಿಗೆ ತರುವುದು, ಅಂದರೆ ಬೆಂಕಿಯ ಪರಿಣಾಮವನ್ನು ನಿರೋಧಿಸುವ ಸ್ಥಿತಿಗೆ ತರುವುದು, ಶುದ್ಧೀಕರಣ, ಲೋಹಗಳನ್ನು ಸುಡುವುದು (ಇನ್ಸಿನರೇಶನ್), ದ್ರವೀಕರಣ, ಸಾರ ತೆಗೆಯುವಿಕೆ (ಎಕ್ಸ್ ಟ್ರಾಕ್ಷನ್ ) ಇವೇ ಮೊದಲಾದ ಇನ್ನೂ ಹಲವಾರು ರಸವಿದ್ಯೆಯ ಪ್ರಕ್ರಿಯೆಗಳ ಕುರಿತೂ ಅರಿವುಳ್ಳವರಾಗಿದ್ದರು .

ಅರಬರಿಂದ ಕಂಡುಹಿಡಿಯಲ್ಪಟ್ಟಿದೆ ಎಂದು ಹೇಳಲಾದ, ಮಿಶ್ರಲೋಹ ತಯಾರಿಯಲ್ಲಿ ಪ್ರಮುಖ ಪ್ರಕ್ರಿಯೆಯಾದ ಚಿನ್ನ ಹಾಗೂ ಬೆಳ್ಳಿಯ ಕ್ಯೂಪಲನ ವಿದ್ಯೆಯೂ ಸಿದ್ಧರಿಗೆ ಅರಬರಿಗೂ ಮುನ್ನ, ಬಹು ಕಾಲದ ಹಿಂದೆಯೇ ಕರಗತವಾಗಿತ್ತು ಎಂದು ಹೇಳಲಾಗುತ್ತದೆ . ಅವರು ಬಹು ಔಷಧ ತಯಾರಿಯ ತಜ್ಞರಾಗಿದ್ದರು ಹಾಗೂ ರಾಸಾಯನಿಕ ವಸ್ತುಗಳ ಕುದಿಸುವಿಕೆ, ವಿಲೀನಗೊಳಿಸುವಿಕೆ, ಅವಕ್ಷೇಪನ, ಮತ್ತು ಘನೀಭವನ ಮೊದಲಾದ ವಿದ್ಯೆಗಳಲ್ಲಿ ಪರಿಣತರಾಗಿದ್ದರು. ಕೆಲವು ಆವಿಯಾಗುವ ಗುಣವುಳ್ಳ ಪದಾರ್ಥಗಳನ್ನು, ಉದಾಹರಣೆಗೆ ಪಾದರಸ, ಗಂಧಕ, ಇಂಗಲೀಕ (ವರ್ಮಿಲಿಯಾನ್), ಹರಿದಳ (ಆರ್ಪಿಮೆಂಟ್) ಮತ್ತು ಆರ್ಸೆನಿಕ್ ಮೊದಲಾದುವುಗಳನ್ನು ಸ್ಥಿರೀಕರಿಸಿ ಬೆಂಕಿಯ ಕ್ರಿಯೆಯನ್ನು ನಿರೋಧಿಸುವ ಸ್ಥಿತಿಯನ್ನು ಹೊಂದುವಂತೆ ಮಾಡುವ ಅವರ ರಹಸ್ಯ ಕ್ರಿಯಾ ವಿಧಾನಗಳು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ಸಿದ್ಧ ಪದ್ಧತಿಯ ಶಕ್ತಿ

ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಧವಾದ ಖಾಯಿಲೆಗಳಿಗೆ ಚಿಕಿತ್ಸೆ ಮಾಡುವ ಸಾಮರ್ಥ್ಯವನ್ನು ಸಿದ್ಧ ಪದ್ಧತಿಯು ಹೊಂದಿದೆ. ಸಂಧಿವಾತ (ಆರ್ತ್ರೈಟಿಸ್) ಮತ್ತು ಅಲರ್ಜಿ ವ್ಯಾಧಿಗಳು ಸೇರಿದಂತೆ ಸಾಮಾನ್ಯವಾಗಿ, ಈ ಪದ್ಧತಿಯು ಎಲ್ಲಾ ರೀತಿಯ ಚರ್ಮವ್ಯಾಧಿಗಳನ್ನು ವಿಶೇಷವಾಗಿ, ಸೋರಿಯಾಸಿಸ್, ಎಸ್.ಟಿ.ಡಿ (ಲೈಂಗಿಕ ಸಂಬಂದೀ ಖಯಿಲೆಗಳು), ಮೂತ್ರನಾಳದ ಸೋಂಕು ರೋಗಗಳು, ಪಿತ್ತ ಜನಕಾಂಗದ ಖಾಯಿಲೆಗಳು, ಜಠರ ಹಾಗೂ ಕರುಳು ಹಾದಿಯ ಖಾಯಿಲೆಗಳು, ಸಾಮಾನ್ಯ ನಿಶ್ಯಕ್ತಿ, ಪ್ರಸವಾನಂತರದ ರಕ್ತಹೀನತೆ, ಅತಿಸಾರ ಮತ್ತು ಸಾಮಾನ್ಯ ಜ್ವರಗಳನ್ನು ವಾಸಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಸಿದ್ಧ ಪದ್ಧತಿಯಲ್ಲಿ ರೋಗ ನಿರ್ಧಾರ ಮತ್ತು ಚಿಕಿತ್ಸೆ

ರೋಗ ನಿರ್ಧಾರವು ಅದರ ಕಾರಣವನ್ನು ಪತ್ತೆಹಚ್ಚುವುದರ ಮೇಲೆ ನಿರ್ಭರವಾಗಿದೆ. ನಾಡಿ, ಮೂತ್ರ, ಕಣ್ಣು, ಸ್ವರದ ಅಧ್ಯಯನ, ಶರೀರದ ಬಣ್ಣ, ನಾಲಿಗೆ ಮತ್ತು ಜೀರ್ಣಾಂಗ ವ್ಯೂಹದ ಸ್ಥಿತಿಯ ಪರೀಕ್ಷೆಗಳ ಮೂಲಕ ರೋಗದ ಕಾರಣೀಭೂತವಾದ ಅಂಶವನ್ನು ಪತ್ತೆಹಚ್ಚುವುದು, ಈ ಪದ್ಧತಿಯು ಮೂತ್ರ ಪರೀಕ್ಷೆಗೆ ವಿವರವಾದ ಕ್ರಿಯಾವಿಧಾನವನ್ನು ಬಳಕೆಗೆ ತಂದಿದೆ. ಇದರಲ್ಲಿ ಮೂತ್ರದ ಬಣ್ಣ, ವಾಸನೆ, ಸಾಂದ್ರತೆ, ಪ್ರಮಾಣ ಮತ್ತು ತೈಲದ ಬಿಂದು ಹರಡುವ ವಿನ್ಯಾಸದ ಪರೀಕ್ಷೆಗಳು ಒಳಗೊಂಡಿವೆ. ಅದು ತನ್ನ ಹಾದಿಯಲ್ಲಿ ಸಮಗ್ರವಾಗಿದ್ದು, ಒಬ್ಬ ವ್ಯಕ್ತಿಯ ರೋಗ ನಿರ್ಧಾರದಲ್ಲಿ, ಕೇವಲ ಆತನ ಖಾಯಿಲೆ ಮಾತ್ರವಲ್ಲದೆ, ಆತನ ಸಂಪೂರ್ಣ ಪರೀಕ್ಷೆ ಮಾಡಲಾಗುತ್ತದೆ.

ಸಿದ್ಧ ಔಷಧೀಯ ಪದ್ಧತಿಯ ಪ್ರಕಾರ ವೈದ್ಯಕೀಯ ಚಿಕಿತ್ಸೆ ಕೇವಲ ರೋಗ ನಿವಾರಣೆಯ ಕುರಿತಾದುದಲ್ಲ. ಅದರಲ್ಲಿ ವ್ಯಕ್ತಿ/ ರೋಗಿ, ಪರಿಸರ, ಹವಾಮಾನ, ವಯಸ್ಸು, ಲಿಂಗ, ಮತ, ರೂಢಿ, ಮಾನಸಿಕ ಚೌಕಟ್ಟು, ನೆಲೆ, ಹಸಿವು, ಆಹಾರ ಸೇವನಾ ಕ್ರಮ, ದೈಹಿಕ ಪರಿಸ್ಥಿತಿ, ಶರೀರ ರಚನೆ, ಇತ್ಯಾದಿಗಳನ್ನೂ ಪರಿಗಣಿಸಲಾಗುತ್ತದೆ. ಅಂದರೆ ಚಿಕಿತ್ಸಾ ವಿಧಾನಗಳು ವ್ಯಕ್ತಿಯ ಮೇಲೆ ಆಧರಿತವಾಗಿರುತ್ತವೆ. ಆದ್ದರಿಂದ ಈ ಪದ್ಧತಿಯು ರೋಗ ನಿರ್ಧಾರ ಅಥವಾ ಚಿಕಿತ್ಸೆಗಳಲ್ಲಿ ಸಂಭವಿಸಬಹುದಾದ ತಪ್ಪುಗಳನ್ನು ಪರಿಣಾಮಕಾರಿಯಾಗಿ ಕಡಿಮೆಯಾಮಾಡಲು ಸಹಕಾರಿಯಾಗುತ್ತದೆ.

ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬಿರುವ ಸಮಸ್ಯೆಗಳಿಗೆ ಸಿದ್ಧ ಪದ್ಧತಿಯಲ್ಲಿ ಪರಿಹಾರಗಳು ಲಭ್ಯವಿದೆ. ಜೊತೆಗೆ ಬಹಳಷ್ಟು ಔಷದೀಯ ಸಾಮಗ್ರಿಯ ತಯಾರಿಗಳು ಸಿದ್ದ ಶಾಸ್ತ್ರೀಯ ಪದ್ಧತಿಯಲ್ಲಿ ಲಭ್ಯವಿದ್ದು, ಇದು ಸಮಸ್ಯೆಯನ್ನು ಬಗೆಹರಿಸಿ ಉತ್ತಮ ಜೀವನಕ್ಕೆ ದಾರಿಮಾಡಿಕೊಡುತ್ತದೆ. ಮಹಿಳೆಯರ ಆರೋಗ್ಯದ ಕಾಳಜಿ ,ಹೆಣ್ಣು ಮಗು ಹುಟ್ಟಿದ ಮೊದಲ ದಿನದಿಂದ ಆರಂಭವಾಗುತ್ತದೆ. ಮಗುವಿನ ಮೊದಲ ಮೂರು ತಿಂಗಳು ಖಡ್ಡಾಯವಾಗಿ ಮೊಲೆಹಾಲುಣಿಸುವುದನ್ನು ಸಿದ್ಧ ಪದ್ಧತಿಯು ಬಲವಾಗಿ ಸಲಹೆ ನೀಡುತ್ತದೆ. ಆಹಾರವೇ ಔಷಧಿ ಎನ್ನುವ ತತ್ವವನ್ನು ಸಿದ್ಧ ಪದ್ಧತಿಯು ನಂಬಿದ್ದು, ಹಾಲೂಡಿಸುವ ಈ ಮೊದಲ ಅವಧಿಯಲ್ಲಿ, ಹಾಲುಣಿಸುವ ತಾಯಂದಿರು ಕಬ್ಬಿಣ, ಪ್ರೋಟೀನು, ಮತ್ತು ನಾರಿನಂಶ ಅಧಿಕವಾಗಿರುವ ಆಹಾರವನ್ನು ಸೇವಿಸಬೇಕೆಂಬ ಸಲಹೆ ನೀಡಿದೆ. ಇದು ಪೌಷ್ಟಿಕಾಂಶದ ಕೊರತೆಯ ಲಕ್ಷಣಗಳಿಂದ ತಾಯಿ ಹಾಗೂ ಮಗುವನ್ನು ರಕ್ಷಿಸುತ್ತದೆ. ತಾಯಂದಿರು ಹುಳುವಿನ ಬಾಧೆಯಿಂದ ದೂರವಿರಲು ಹಾಗೂ ಅದರಿಂದಾಗುವ ರಕ್ತಹೀನತೆಯಿಂದ ರಕ್ಷಣೆ ಪಡೆದುಕೊಳ್ಳಲು , ಪ್ರತಿ 15 ದಿನಗಳಿಗೊಮ್ಮೆ, ಸರಳ ಔಷಧಿಗಳನ್ನು ಸೇವಿಸಬೇಕೆಂದು ಸಲಹೆ ನೀಡುತ್ತದೆ.

ಸೋಂಕು ಅಥವಾ ಇತರ ಯಾವುದೇ ಖಾಯಿಲೆಗಳಿಗೆ, ಚಿಕಿತ್ಸೆಯು ಆ ವ್ಯಕ್ತಿಯ ಪರೀಕ್ಷೆಯ ನಂತರ ವೈಯಕ್ತಿಕವಾಗಿರುತ್ತದೆ. ಒಮ್ಮೆ ಹೆಣ್ಣು ಮಗು ಋತುಮತಿಯಾದಳೆಂದರೆ, ಸಿದ್ಧ ಪದ್ಧತಿಯಲ್ಲಿ ವಿವಿಧ ತಯಾರಿಗಳಿದ್ದು, ಅವು ಆಕೆಯ ಗರ್ಭಕೋಶವನ್ನು ಬಲಪಡಿಸಿ, ಭವಿಷ್ಯದಲ್ಲಿ ಆರೋಗ್ಯವಂತ ಶಿಶುವಿಗೆ ಜನ್ಮನೀಡುವುದಕ್ಕೆ ಸಹಕಾರಿಯಾಗುತ್ತವೆ. ಜೊತೆಗೆ, ಋತುಸ್ರಾವ ನಿಲ್ಲುವ ಲಕ್ಷಣಕ್ಕೆ, ವಿಶೇಷವಾದ ಚಿಕಿತ್ಸೆಯು ಲಭ್ಯವಿದ್ದು ,ಅದರಲ್ಲೂ ಹಾರ್ಮೋನುಗಳ ಅಸಮತೋಲನ ಸಂಬಂಧಿತ ಸಮಸ್ಯೆಯನ್ನು ದೂರಮಾಡಲು ಸೂಕ್ತವಾದ ಚಿಕಿತ್ಸೆಗಳು ಲಭ್ಯವಿದೆ.

ಪಿತ್ತಜನಕಾಂಗ, ಚರ್ಮದ ವ್ಯಾಧಿಗಳು, ಅದರಲ್ಲೂ ಸೋರಿಯಾಸಿಸ್, ವಾತದ ಸಮಸ್ಯೆಗಳು, ರಕ್ತಹೀನತೆ, ಪ್ರೊಸ್ಟ್ರೇಟ್ ಗ್ರಂಥಿಯ ಹಿಗ್ಗುವಿಕೆ, ರಕ್ತಸ್ರಾವವಿರುವ ಮೂಲವ್ಯಾಧಿ, ಮತ್ತು ಪೆಪ್ಟಿಕ್ ಅಲ್ಸರುಗಳಂತಹ ದೀರ್ಘಾವಧಿಯ ರೋಗಗಳನ್ನು ನಿವಾರಿಸುವುದರಲ್ಲಿ ಸಿದ್ಧ ಔಷಧವು ಬಹಳವೇ ಪರಿಣಾಮಕಾರಿಯಾಗಿದೆ. ಪಾದರಸ, ಆರ್ಸೆನಿಕ್, ಸೀಸ, ಗಂಧಕಗಳನ್ನು ಒಳಗೊಂಡಿರುವ ಸಿದ್ಧ ಔಷಧವು ಗುಪ್ತ ರೋಗಗಳನ್ನು ಒಳಗೊಂಡಂತೆ, ಕೆಲವೊಂದು ಸೋಂಕುರೋಗಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆಯೆಂದು ಕಂಡುಬಂದಿದೆ. ಸಿದ್ಧ ವೈದ್ಯಕೀಯ ಪದ್ಧತಿಯನ್ನು ಅನುಸರಿಸುವವರು ಹೆಚ್.ಐ.ವಿ/ಏಡ್ಸ್ ಇರುವವರಲ್ಲಿ ಕಂಡುಬರುವ ಕೆಲವೊಂದು ನಿಶ್ಯಕ್ತಿಯನ್ನುಂಟುಮಾಡುವ ಸಮಸ್ಯೆಗಳನ್ನು ಕುಗ್ಗಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಹೇಳುತ್ತಾರೆ. ಈ ಔಷಧಗಳ ಪರಿಣಾಮಕಾರಿತ್ವದ ಬಗ್ಗೆ ಹೆಚ್ಚಿನ ಸಂಶೋಧನೆಗಳು ಪ್ರಗತಿಯಲ್ಲಿವೆ.

ರಾಷ್ಟ್ರೀಯ ಸಿದ್ಧ ಸಂಸ್ಥೆ (NIS) ಚೆನ್ನೈ

ರಾಷ್ಟ್ರೀಯ ಸಿದ್ಧ ಸಂಸ್ಥೆ (NIS), ಚೆನ್ನೈಯು ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ, ಆಯುಶ್ ಇಲಾಖೆಯ ನಿಯಂತ್ರಣದಲ್ಲಿದೆ. ಅದನ್ನು 14.78 ಎಕರೆ ಭೂಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಸಂಸ್ಥೆಯನ್ನು ಸೊಸೈಟೀಸ್ ಆಕ್ಟ್ ನ ಅಡಿಯಲ್ಲಿ ನೋಂದಾಯಿಸಲಾಗಿತ್ತು. ಸಿದ್ಧ ಪದ್ಧತಿಯ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸುತ್ತದೆ, ಈ ಪದ್ಧತಿಯ ಮೂಲಕ ವೈದ್ಯಕೀಯ ಶುಶ್ರೂಶೆಯನ್ನು ನೀಡುತ್ತದೆ ಮತ್ತು ಅದರ ವಿವಿಧ ಅಂಶಗಳ ಮೇಲೆ ಸಂಶೋಧನೆಯನ್ನೂ ನಡೆಸುತ್ತದೆ. ಜೊತೆಗೆ ಈ ವಿಜ್ಞಾನದ ಅಭಿವೃದ್ಧಿ, ಪ್ರಚಾರ, ಮತ್ತು ಮುಂದುವರಿಕೆಯಲ್ಲಿ ತೊಡಗಿದೆ. ಈ ಸಂಸ್ಥೆಯು ಸಿದ್ಧ ವೈದ್ಯಕೀಯ ಶಾಸ್ತ್ರವನ್ನು ಅಂದರೆ ತಮಿಳು ವೈದ್ಯಕೀಯ ಪದ್ಧತಿಯನ್ನು ಜನಸಾಮಾನ್ಯರೆಡೆಗೆ ಕೊಂಡೊಯ್ಯುತ್ತಿರುವುದಲ್ಲದೆ, ಸಂಶೋಧನೆಯನ್ನೂ ಉತ್ತೇಜಿಸುತ್ತಿದೆ.

ಸರಕಾರದಿಂದ ಈ ಸಂಸ್ಥೆಯನ್ನು ತಮಿಳು ನಾಡಿನ ಸರಕಾರದೊಂದಿಗಿನ ಜಂಟಿ ಯೋಜನೆಯಾಗಿ ಸ್ಥಾಪಿಸಲಾಗಿದೆ. ಭಾರತ ಸರಕಾರ ಹಾಗೂ ತಮಿಳು ನಾಡು ರಾಜ್ಯ ಸರಕಾರಗಳು ಮೂಲಧನವ್ಯಯಗಳನ್ನು 60:40 ಅನುಪಾತದಲ್ಲಿ ಮತ್ತು ಪುನರಾವರ್ತಿತ ವೆಚ್ಚಗಳನ್ನು 75:25 ಅನುಪಾತದಲ್ಲಿ ಹಂಚಿಕೊಂಡಿವೆ. ನಮ್ಮ ಮಾನ್ಯ ಪ್ರಧಾನ ಮಂತ್ರಿಗಳಾದ ಡಾ .ಮನಮೋಹನ ಸಿಂಘ್ ರವರು 3-9-05 ರಂದು ಈ ಸಂಸ್ಥೆಯನ್ನು ನಮ್ಮ ರಾಷ್ಟ್ರಕ್ಕೆ ಅರ್ಪಿಸಿದರು.

ಪ್ರತಿ ವರ್ಷ ಈ ಸಂಸ್ಥೆಯಲ್ಲಿ 46 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಮತ್ತು ಸ್ನಾತಕೋತ್ತರ ಎಂ.ಡಿ (ವೈದ್ಯಶಾಸ್ತ್ರ)ದ ಆರು ವಿಷಯಗಳಲ್ಲಿ ಅಂದರೆ, ಮರುತುವಂ (ಸಾಮಾನ್ಯ ವೈದ್ಯಶಾಸ್ತ್ರ), ಗುಣಪದಂ (ಔಷಧ ಶಾಸ್ತ್ರ), ಸಿರಪ್ಪು ಮರುತುವಂ (ವಿಶಿಷ್ಟ ಔಷಧಿ), ಕುಳಂದೈ ಮರುತುವಂ (ಮಕ್ಕಳ ವೈದ್ಯಶಾಸ್ತ್ರ), ನೋಯ್ ನದಲ್ (ಸಿದ್ಧ ರೋಗ ಶಾಸ್ತ್ರ) ಮತ್ತು ನಂಜು ನೂಲುಂ ಮರುತುವ ನೀತಿ ನೂಲುಂ (ವಿಷವಸ್ತು ಶಾಸ್ತ್ರ ಮತ್ತು ವೈದ್ಯಕೀಯ ನ್ಯಾಯಶಾಸ್ತ್ರ) ಇವುಗಳ ಕುರಿತಾದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ಸಂಸ್ಥೆಯು ತಮಿಳು ನಾಡು ಡಾ. ಎಂ. ಜಿ ಆರ್. ವೈದ್ಯಕೀಯ ವಿಶ್ವವಿದ್ಯಾಲಯ, ಚೆನ್ನೈ, ನಿಂದ ’ಸಿದ್ಧ ಪದ್ಧತಿಯಲ್ಲಿ ಪಿ ಹೆಚ್ ಡಿ ಪದವಿ ಪ್ರಧಾನ ಮಾಡುವ ಕೇಂದ್ರ’ವಾಗಿ ಅನುಮೋದನೆಯನ್ನು ಪಡೆದುಕೊಂಡಿದೆ.

ಮೂಲ:ಆಯುಶ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರಕಾರ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate