অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತ್ವಚೆಯ ಆರೈಕೆ

ಸಾಮಾನ್ಯವಾಗಿ ಮುಖ, ಕುತ್ತಿಗೆ, ಭುಜ, ಬೆನ್ನುಗಳ ಮೇಲೆ ಉಂಟಾಗುವ ಕಲೆಗಳಿಗೆ ಮೊಡವೆಗಳು ಪ್ರಮುಖ ಕಾರಣ. ಜತೆಗೆ ಹಾರ್ಮೋನುಗಳ ಏರುಪೇರು, ವಂಶಪಾರಂಪರ್ಯವಾಗಿ, ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಇರುವುದು, ಅನಿಯಮಿತ ಆಹಾರ ಪದ್ಧತಿ...ಹೀಗೆ ಹಲವಾರು ಕಾರಣಗಳಿಂದ ಕಲೆಗಳು ಮುಖವನ್ನು ಆವರಿಸಿಕೊಳ್ಳುತ್ತವೆ.

ಮೊಡವೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಮುಚ್ಚಿ ಹೋಗಿರುವ ಚರ್ಮದ ರಂಧ್ರಗಳ ರೂಪದಲ್ಲಿ ಈ ಕಲೆಗಳು ಕಾಣಿಸಿಕೊಳ್ಳುತ್ತವೆ. ಮುಖ, ಕುತ್ತಿಗೆ, ಭುಜ, ಬೆನ್ನುಗಳಲ್ಲಿ ಇಂತಹ ಕಲೆಗಳು ಕಂಡುಬರುತ್ತವೆ. ಇಂತಹ ಕಲೆಗಳು ನೋಡುಗರನ್ನು ಅಸಹ್ಯಗೊಳಿಸುವುದಲ್ಲದೆ ಹಲವಾರು ಸಮಸ್ಯೆಗಳನ್ನೂ ಉಂಟು ಮಾಡುತ್ತವೆ.

ಮಾರುಕಟ್ಟೆಗಳಲ್ಲಿ, ಮೆಡಿಕಲ್‌ಗಳಲ್ಲಿ ಇಂತಹ ಸಮಸ್ಯೆಗಳಿಗೆ ಹಲವಾರು ಔಷಧಗಳು ಲಭ್ಯ ಇವೆಯಾದರೂ ಅವುಗಳು ದುಬಾರಿ ಹಾಗೂ ರಾಸಾಯನಿಕಯುಕ್ತವಾಗಿರುತ್ತವೆ. ಇದನ್ನು ಅವಾಯ್ಡ್ ಮಾಡಲು, ಮನೆಗಳಲ್ಲೇ ಸಿಗುವ ಹಲವಾರು ಔಷಧಯುಕ್ತ ವಸ್ತುಗಳನ್ನು ಬಳಸುವುದರಿಂದ ಕಲೆಗಳಿಗೆ ಮುಕ್ತಿ ನೀಡಬಹುದು.

ನಿಂಬೆ ರಸ

  1. ನಿಂಬೆ ರಸ ಕಪ್ಪು ಕಲೆಗಳನ್ನು ನಿವಾರಿಸಿ ಶ್ವೇತವರ್ಣದ ತ್ವಚೆಯನ್ನು ಹೊಂದಲು ಸಹಕಾರಿಯಾದುದು. ಇದರಲ್ಲಿ ಸಿಟ್ರಿಕ್ ಆ್ಯಸಿಡ್ ಅಧಿಕವಾಗಿರುವುದರಿಂದ ಇದು ಚರ್ಮದಲ್ಲಿನ ಜಿಡ್ಡಿನ ಅಂಶವನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಮೊಡವೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
  2. ತಾಜಾ ನಿಂಬೆ ರಸವನ್ನು ಮುಖಕ್ಕೆ ಲೇಪಿಸಿ 10-20 ನಿಮಿಷದ ನಂತರ ಉಗುರು ಬೆಚ್ಚನೆ ನೀರಿನಲ್ಲಿ ಮಖವನ್ನು ತೊಳೆಯಬೇಕು. ಈ ರೀತಿ ಸುಮಾರು ಒಂದು ತಿಂಗಳ ಕಾಲ ಮಾಡುವುದರಿಂದ ಉತ್ತಮ ಫಲಿತಾಂಶ ದೊರಕುತ್ತದೆ.
  3. ನಿಂಬೆ ರಸದ ಜತೆಗೆ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯುವುದರಿಂದ ಮೊಡವೆಗಳಿಗೆ ಕಡಿವಾಣ ಹಾಕಬಹುದು.
  4. ನಿಂಬೆರಸ, ಟೊಮೇಟೊ ರಸಗಳನ್ನು ಸೇರಿಸಿಯೂ ಮುಖಕ್ಕೆ ಲೇಪಿಸಬಹುದು.

ಟೊಮೇಟೊ ರಸ

  1. ವಿಟಮಿನ್ ಸಿ ಹೆಚ್ಚಾಗಿರುವ ಟೊಮೇಟೊ ರಸವು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾದದ್ದು. ಕಲೆ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಮೊಡವೆ, ಸನ್‌ಬರ್ನ್‌ಗಳನ್ನು ಹೋಗಲಾಡಿಸಲು ಕೂಡ ಉಪಯುಕ್ತ.
  2. ಟೊಮೇಟೊ ರಸವನ್ನು ಮುಖಕ್ಕೆ ಹಚ್ಚಿ 10-15 ನಿಮಿಷ ನಂತರ ತಣ್ಣನೆ ನೀರಿನಲ್ಲಿ ಮುಖ ತೊಳೆಯಬೇಕು. ಕೆಲವು ವಾರಗಳ ಕಾಲ ಈ ರೀತಿ ಮಾಡುವುದರಿಂದ ಕಲೆಗಳನ್ನು ನಿವಾರಿಸಬಹುದು.

ಆ್ಯಪಲ್ ಸೈಡರ್ ವಿನೆಗರ್

-1:3 ಪ್ರಮಾಣದಲ್ಲಿ ನೀರು ಸೇರಿಸಿ, ಹತ್ತಿಯ ಉಂಡೆಗಳನ್ನು ಅದರಲ್ಲಿ ಅದ್ದಿ, ಬಳಿಕ ಮುಖಕ್ಕೆ ಲೇಪಿಸುವುದರಿಂದ ಚರ್ಮವು ಕಾಂತಿಯುತವಾಗಿರುತ್ತದೆ. ಇದನ್ನು ಮುಖಕ್ಕೆ ಲೇಪಿಸಿ, 15 ನಿಮಿಷ ಬಳಿಕ ಮುಖ ತೊಳೆಯಬೇಕು.

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಪಿಷ್ಠದ ಅಂಶ ಹೆಚ್ಚಾಗಿದ್ದು, ಕಲೆಗಳನ್ನು ನಿವಾರಿಸಲು ಸಹಕಾರಿ. ಒಂದು ಸಣ್ಣ ಹಸಿ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ತುರಿದು ಅದರ ರಸವನ್ನು ಹತ್ತಿಯ ಉಂಡೆಗಳ ಸಹಾಯದಿಂದ ಮುಖದ ಮೇಲೆ ಲೇಪಿಸಬೇಕು. 10-15 ನಿಮಿಷಗಳ ಬಳಿಕ ನೀರಿನಿಂದ ತೊಳೆಯಬೇಕು. ಇದು ಕಣ್ಣುಗಳ ಕೆಳಗಿನ ಕಪ್ಪು ವರ್ತುಲವನ್ನು ನಿವಾರಿಸುವಲ್ಲಿಯೂ ಸಹಕಾರಿ.

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿಯು ಡೆಡ್ ಸ್ಕಿನ್‌ಗಳನ್ನು ತೆಗೆಯುವಲ್ಲಿ ಸಹಕಾರಿ. ಜಿಡ್ಡಿನ ಅಂಶಗಳನ್ನು ತೆಗೆದು ಕಲೆಗಳನ್ನು ನಿವಾರಿಸಿ ಚರ್ಮವನ್ನು ಕೋಮಲವಾಗಿಸುತ್ತದೆ. ಇದನ್ನು ರೋಸ್ ವಾಟರ್, ಗ್ರೀನ್ ಟೀ, ಸೌತೆಕಾಯಿ ರಸ, ಲಿಂಬೆ ರಸ, ಟೊಮೇಟೊ ರಸ ಅಥವಾ ನೀರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಬಹುದು. 20 ನಿಮಿಷ ನಂತರ ನೀರಿನಿಂದ ತೊಳೆಯಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

ಲೋಳೆ ರಸ ಅಥವಾ ಅಲೋ ವೆರಾ

  1. ಲೋಳೆ ರಸದಲ್ಲಿ ಪಾಲಿಸೆಕರೈಡ್‌ಗಳು ಹೇರಳವಾಗಿವೆ. ಇವುಗಳು ಚರ್ಮದಲ್ಲಿನ ಕಲೆ ಹಾಗೂ ಮೊಡವೆಗಳನ್ನು ನಿವಾರಿಸುವಲ್ಲಿ ಸಹಕಾರಿ.
  2. ತಾಜಾ ಲೋಳೆ ರಸವನ್ನು ಮುಖಕ್ಕೆ ಹಚ್ಚಿ ಅದು ಸಂಪೂರ್ಣ ಒಣಗುವವರೆಗೆ ಬಿಡಬೇಕು. ನಂತರ ನೀರಿನಲ್ಲಿ ಮುಖ ತೊಳೆಯಬೇಕು. ಹೀಗೆ ಒಂದು ತಿಂಗಳ ಕಾಲ ಮಾಡುವುದರಿಂದ ತ್ವಚೆ ಕಾಂತಿಯುತವಾಗಿ ಮಾಡಬಹುದು.
  3. ಲೋಳೆರಸದೊಂದಿಗೆ ಲಿಂಬೆ ರಸ ಹಾಗೂ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತಿನ ನಂತರ ತೊಳೆಯುವುದರಿಂದಲೂ ಮುಖ ಕಾಂತಿಯುತವಾಗುತ್ತದೆ

ಮೂಲ: ವಿದ್ಯಾ ಮಹೇಶ್

ಕೊನೆಯ ಮಾರ್ಪಾಟು : 2/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate