অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೌಂದರ್ಯ ವರ್ಧಕಗಳು

ಸೌಂದರ್ಯ ವರ್ಧಕಗಳು

ಕಾಲೇಜಿನ ವಿದ್ಯಾಭ್ಯಾಸದ ಸಮಯದಲ್ಲಿ ನಿತ್ಯ ನಿತ್ಯವೂ ಕಾಟ ಕೊಡುತ್ತಿದ್ದುದು ಮೊಡವೆಗಳು. ಮುಖದಲ್ಲಿ ಎಲ್ಲೆಂದರಲ್ಲಿ ಮೂಡಿ ಎದ್ದು ಕಾಣುತ್ತಿದ್ದ ಈ ಮೊಡವೆಗಳ ಕಾಟ ಹೈಸ್ಕೂಲಿನಲ್ಲಿ ಇರಲಿಲ್ಲ. ನಾಳೆ ದೊಡ್ಡ ಗಾತ್ರದಲ್ಲಿ ಮೊಡವೆ ಕಾಟ ಇದೆ ಎಂಬುದರ ಸೂಚನೆ ಮುನ್ನಾದಿನವೇ ಆ ಭಾಗದ ನೋವು ತಿಳಿಸಿಕೊಡುತ್ತಿತ್ತು. ಏನು ಮಾಡುವುದೆಂದು ಗೊತ್ತಾಗದೆ ಇದ್ದಾಗ ಮಾಧ್ಯಮಗಳು ಮೋಡಿ ಹಾಕುವ ಜಾಹೀರಾತುಗಳನ್ನು ನಂಬಿದ್ದೆವು. ಜಾಹೀರಾತಿನಲ್ಲಿ ತಿಳಿಸಿದಂತೆ ಬಳಕೆ ಶುರುಮಾಡಿದ ನಾಲ್ಕೇ ವಾರದಲ್ಲಿ ನಮ್ಮಗಳ ಮುಖ ನುಣುಪಾಗಿ, ನಯವಾಗಿ, ಕಲೆರಹಿತವಾಗಿ ಸುಂದರವಾಗಿ ಪ್ರಕಾಶಿಸುವುದರ ಕನಸು ಹೊತ್ತು ರಾತ್ರಿ, ಭಕ್ತಿಯಿಂದ ಲೇಪನ ಮಾಡುತ್ತಿದ್ದೆವು. ತಾಜಾ ಗಂಧಕದ ವಾಸನೆಯ, ಗಂಧದ ಬಣ್ಣದ ಮಂದ ದ್ರವ. ಬೆಲೆಯೋ ದುಬಾರಿ. ಒಳ್ಳೆಯ ಕ್ವಾಲಿಟಿಯದಾದ ಕಾರಣ ದುಬಾರಿ ದರ ಎಂದು ಸಮಾಧಾನ ಅಷ್ಟೇ. ತಿಂಗಳು ಹೋಗಿ ಮತ್ತೊಂದು ತಿಂಗಳು ಬಂದರೂ ಮೊಡವೆಗಳು ನಿರಾತಂಕವಾಗಿ ಮೂಡಿ ಬರುತ್ತಿತ್ತು. ಯಕಃಶ್ಚಿತ್ ಉಪಯೋಗವೂ ಇಲ್ಲ. ಲೇಪಿಸುತ್ತಿದ್ದ ಮುಖದ ಅಷ್ಟೂ ಭಾಗದ ಚರ್ಮ ಬಣ್ಣಗೆಟ್ಟಂತೆ ಕಾಣುತ್ತಿತ್ತು. ಆಗ ಸಾಮೂಹಿಕವಾಗಿ ಜ್ಞಾನೋದಯವಾಗಿತ್ತು. ಇವುಗಳಿಂದ ಒಂಚೂರೂ ಉಪಯೋಗವಿಲ್ಲ. ನಮ್ಮ ಹಣ ಅವರ ಜೇಬಿಗೆ ಹೋಯ್ತು ಅಷ್ಟೇ. ಆ ಮೇಲೆ ಅವರಿವರು ಹೇಳಿದಂತೆ ಗಂಧ, ಚಂದನ, ತುಳಸಿರಸ, ಸಾಂಬ್ರಾಣಿ ರಸ, ನಿಂಬೆರಸ ಎಂದು ಆರೈಕೆಯೂ ನಡೆಯಿತು. ನಿಶ್ಚಿಂತೆಯಿಂದ ಮುಖದ ತುಂಬ ಮೊಡವೆಗಳು ಕಾರುಬಾರು ಮಾಡುತ್ತಿದ್ದವು. ಸತತವಾಗಿ ಒಂದೆರಡು ವರ್ಷ ಹೀಗೆ ಆರೈಕೆ ಆದರೂ ಫಲ ಕಾಣದೆ ಇದ್ದಾಗ ಹೇಗೆ ಬೇಕಾದರೂ ಇರಲಿ ಎಂದು ತೆಪ್ಪಗೆ ಇದ್ದೆವು. ಮೇಲಿಂದ ಮೇಲೆ ಬರುವ ಮೊಡವೆಗಳು ತನ್ನಿಂದ ತಾನೇ ನಿಂತು ಹೋಯಿತು. ಅದೂ ಉಪಚಾರ, ಆರೈಕೆ ಇಲ್ಲದೆ! 
ಮಾಧ್ಯಮ ದಲ್ಲಿನ ಜಾಹೀರಾತೊಂದು ಕಂಡಾಗ ಇದು ನೆನಪಾಯಿತು. ‘ನಿಮ್ಮ ಹಳೆಯ ಫೇಸ್‌ಕ್ರೀಂ ಇನ್ನೂ ಬದಲಾಯಿಸಲಿಲ್ಲವೇ? ಅದನ್ನು ಬದಲಿಸಿ ನಮ್ಮ ಹೊಸಾ ಸುಂದರ ಮುಖಕಾಂತಿ ಕೊಡುವ, ಬೆಳ್ಳಗಿನ ತ್ವಚೆ ತರುವ, ಕಲೆ, ಸುಕ್ಕು ತಡೆವ ಫೇಸ್‌ಕ್ರೀಂ ಖರೀದಿಸಿ, ಬಳಸಿ. ತಿಂಗಳಲ್ಲಿ ಸೌಂದರ್ಯ ಹೆಚ್ಚಾಗುತ್ತದೆ.
ಜಾಹೀರಾತು ನೋಡಿದರೆ ಯಾರೂ ಮರುಳಾಗಬೇಕು – ಜೋಲು ಮುಖದ ತುಸು ಕಪ್ಪು ಮುಖದ ಚರ್ಮದ ಯುವತಿ ಸಪ್ಪಗಿರುವ ಚಿತ್ರ. ಅವಳ ಬಳಿ ಸುಂದರ ಮುಖದ, ಬಿಳಿಯ ಲವಲವಿಕೆಯ ತರುಣಿ. ಆಕೆಯ ಕೈಲಿ ಹಿಡಿದ ಫೇಸ್‌ಕ್ರೀಂ. ಆಸೆಯಿಂದ ಈ ಯುವತಿಯೂ ಮುಖಕ್ಕೆ ಲೇಪಿಸುವ ಚಿತ್ರ. ಜೊತೆಗೆ ವಾರದಿಂದ, ವಾರಕ್ಕೆ ಆಕೆಯ ಸೌಂದರ್ಯ ಉಜ್ವಲವಾಗುತ್ತದೆ. ಕೊನೆಯ ವಾರವಂತೂ ಆತ್ಮ ವಿಶ್ವಾಸದ ನಗು ಬೀರುತ್ತ ಉಲ್ಲಾಸದಿಂದ ನಲಿಯುವ ಸುಂದರಿ. ಕೈಲಿ ಅದೇ ಫೇಸ್‌ಕ್ರೀಂ,’’ಸುಕ್ಕಿಲ್ಲದ, ಉಜ್ವಲ ಮುಖ ಕಾಂತಿ. ಅದೂ ಕಲೆ ರಹಿತ, ಜೊತೆಗೆ ಹೆಚ್ಚಿನ ಬಿಳುಪು’’.
ದೇವಲೋಕದ ಮಂತ್ರದಂಡವೇ ಕೈಲಿ ಹಿಡಿದಂತಿರುವ ಇಂಥ ಜಾಹೀರಾತುಗಳು, ಅದರ ಪ್ರಚಾರದ ರೂಪದರ್ಶಿಗಳು ಹದಿಹರೆಯದ ಯುವತಿಯರನ್ನು ಚುಂಬಕದಂತೆ ಸೆಳೆಯುತ್ತವೆ. ಹರೆಯದಲ್ಲಿ ಮುಖದಲ್ಲಿ ಮೊಡವೆ ಸಹಜ, ತ್ವಚೆ ಎಣ್ಣೆಯಿಂದ ಕೂಡಿರುವುದೂ ಇದೆ. ಆದರೆ ಅದು ತಮ್ಮ ಚೆಲುವನ್ನು ಹಾಳು ಮಾಡುತ್ತದೆ ಎಂದು ತರುಣಿಯರು ಇಂಥ ಕ್ರೀಂಗಳ ಮೊರೆ ಹೋಗುತ್ತಾರೆ. ಚರ್ಮ ರಂಧ್ರಗಳನ್ನು ಮುಚ್ಚಿ ಮುಖದಲ್ಲಿ ನಿಲ್ಲುವ ಈ ಲೇಪಕಗಳು ಮುಖದಲ್ಲಿ ಇಳಿಯುತ್ತದೆ. ಆ ಹೊತ್ತಿಗೆ ಬೆವರು ಹೊರ ಹೊಮ್ಮಲು ದಾರಿ ಇಲ್ಲ. ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿದ್ದರಿಂದ ಮುಖದ ಕ್ರೀಂ ತೊಳೆಯದೆ ಆಗದು. 
ಹದಿಹರೆಯದವರ ಪಿಂಪಲ್, ಕಲೆಗಳ, ಬಿಳುಪಾಗುವ, ಮುಖಕಾಂತಿ ಹೆಚ್ಚಿಸುವ ಹಂಬಲವನ್ನೇ ಮೂಲವಾಗಿಟ್ಟುಕೊಂಡು ಕಾಸ್ಮೆಟಿಕ್ ಕಂಪೆನಿಗಳು ಕೊಳ್ಳೆ ಹೊಡೆಯುತ್ತಿವೆ. ದುಬಾರಿ ದರದ ಕಾಸ್ಮೆಟಿಕ್ಸ್ ಮಾರುಕಟ್ಟೆಯನ್ನು ಲಗ್ಗೆ ಹಾಕುತ್ತಿವೆ. ಆಕರ್ಷಕ ಬಣ್ಣನೆ, ಮಾಡೆಲ್‌ಗಳ ಸೌಂದರ‌್ಯ ಕಂಡು ಭ್ರಾಮಕತೆಗೆ ಬಿದ್ದ ಟೀನೇಜರ್ಸ್‌ ಸಹಿತ ಎಲ್ಲ ವಯಸ್ಸಿನ ಸ್ತ್ರೀಯರು ಇಲ್ಲಿಗೆ ದುಡ್ಡು ಸುರಿಯುವುದರಲ್ಲಿ ಹಿಂದೆ ನಿಲ್ಲುವುದಿಲ್ಲ. ಈ ಆಸೆಯನ್ನು ಬಳಸಿಕೊಂಡು ಮಾರುಕಟ್ಟೆ ತುಂಬುವ ಸೌಂದರ್ಯವರ್ಧಕಗಳಿಗೆ ಲೆಖ್ಖವಿಲ್ಲ.
ರಾಸಾಯನಿಕಗಳೇ ತುಂಬಿರುವ ಇವುಗಳ ಬಳಕೆಯಿಂದ ಚರ್ಮದಲ್ಲಿ ಅಲರ್ಜಿ, ಕಾಣಿಸುವುದಿದೆ. ಕಲೆಗಳೂ ಬೀಳಬಹುದು. ಇದರಿಂದಾಗಿ ಅನೇಕರು ಆಯುರ್ವೇದಿಕ್ ಎಂಬ ಲಾಂಛನ ಹೊತ್ತ ಫೇಸ್‌ಕ್ರೀಂಗಳನ್ನೂ ಬಯಸುತ್ತಾರೆ. ಇದರಲ್ಲೂ ಕಂಪೆನಿಗಳು ಹಿಂದೆ ಬಿದ್ದಿಲ್ಲ. ನಾಲ್ಕು ನೆಲ್ಲಿಕಾಯಿ, ಲೋಳೆಸರ (ಅಲೊವೇರಾ), ತುಳಸಿ, ನಿಂಬೆಯ ಚಿತ್ರ ಹಾಕಿದರೆ ಸಾಕು. ಅದು ಹೌದಾ ಅಲ್ಲವಾ ಎಂಬ ಚಿಂತನೆ ಇಲ್ಲದೆ ಬಿಕರಿಯಾಗುತ್ತವೆ. ಕೋಟಿಗಳನ್ನು ಬಾಚಿಕೊಳ್ಳುವ ಕಾಸ್ಮೆಟಿಕ್ ಕಂಪೆನಿಗಳು ಸ್ತ್ರೀಯರ ಚೆಲುವಿನ ಹಂಬಲ ಇರುವಷ್ಟು ಕಾಲವೂ ಸುಲಿಗೆ ಮಾಡುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate