অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಲ್ಲು ಕೀಳಲೇಬೇಕೆ

ಹಲ್ಲು ಕೀಳಲೇಬೇಕೆ

‘ಹಲ್ಲಿನಲ್ಲಿ ಏನಾದರೂ ತೊಂದರೆ ಇದ್ದರೆ  ಅದನ್ನು ಕೀಳಿಸು’ ಎಂಬ ತಪ್ಪು ನಂಬಿಕೆ ಸಾಮಾನ್ಯ. ಸೌಂದರ್ಯ, ಮಾತು, ಮುಖ, ದವಡೆಗಳ ಬೆಳವಣಿಗೆ, ಆಹಾರ ಅಗಿಯಲು ಅವಶ್ಯಕವಾಗಿರುವ ಹಲ್ಲುಗಳು ಆತ್ಮವಿಶ್ವಾಸ ಹೆಚ್ಚಿಸುವ ಅಂಗಗಳೂ ಹೌದು. ಸರಿಯಾದ ರೀತಿಯಲ್ಲಿ ಕಾಳಜಿ ವಹಿಸಿದಾಗ ಶಾಶ್ವತ ಹಲ್ಲುಗಳು ಮಾನವನ ಜೀವಮಾನವಿಡೀ ಬಾಳಿಕೆ ಬರುವುದಾದರೂ, ಕೆಲವೊಂದು ಸಂದರ್ಭಗಳಲ್ಲಿ ಹಲ್ಲನ್ನು ಕೀಳಲೇಬೇಕಾದ ಅನಿವಾರ್ಯ ಎದುರಾಗಬಹುದು.

ಮುರಿದು ಹೋದ/ತುಂಡಾದ ಹಲ್ಲು­ಗಳನ್ನು, ಎಲ್ಲರನ್ನು ಕಾಡುವ ಹುಳುಕು ಹಲ್ಲುಗಳನ್ನು ಪ್ರಾರಂಭಿಕ ಹಂತದಲ್ಲೇ ಪ್ರತಿಬಂಧಿಸದಿದ್ದರೆ ಅದು ಬೇರಿನವರೆಗೂ ಹರಡಿ ಹಲ್ಲು ದುರ್ಬಲವಾಗಿ ಮುರಿಯಬಹುದು. ಹಾಗೆಯೇ ಪೆಟ್ಟು ಬಿದ್ದಾಗ, ಅಪಘಾತದಲ್ಲಿ ಹಲ್ಲು ತುಂಡಾಗಿ ಬೇರಾವ ಚಿಕಿತ್ಸೆಯೂ ಸಾಧ್ಯವಾಗದೇ ಇದ್ದಾಗ ಹಲ್ಲು ಕೀಳಬೇಕಾ­ಗಿ ಬರಬಹುದು.

ಇದಲ್ಲದೆ,  ಜಾಗ ಇಲ್ಲದೇ ಹಲ್ಲುಗಳ ದಟ್ಟಣೆ ದವಡೆಯ ಉದ್ದ  ಚಿಕ್ಕದಿದ್ದು ಅಥವಾ ಹಲ್ಲುಗಳ ಗಾತ್ರ ದೊಡ್ಡದಿದ್ದು ಇವೆರಡರ ನಡುವೆ ಅಸಮತೋಲನ ಇದ್ದಾಗ ಹಲ್ಲುಗಳಿಗೆ ಜಾಗ ಸಾಲದೇ ಹಿಂದೆ ಮುಂದೆ, ಅಕ್ಕ- ಪಕ್ಕ ಬರುವ ಸಾಧ್ಯತೆ ಇದೆ. ಇದನ್ನು ಸರಿಪಡಿಸಲು ವಕ್ರದಂತ ಚಿಕಿತ್ಸೆ ಕೈಗೊಳ್ಳುವಾಗ ಹಲ್ಲುಗಳನ್ನು ಕೀಳಲಾಗು­ತ್ತದೆ. ಅದೇ ರೀತಿ ಕೊನೆಯಲ್ಲಿ ಬರುವ ಬುದ್ಧಿಹಲ್ಲು ಅಡ್ಡಲಾಗಿ ಸಿಕ್ಕು ಸಮಸ್ಯೆ ಕೊಟ್ಟಾಗ ಕೀಳಿಸುವುದೇ ಉತ್ತಮ ಪರಿಹಾರ.

ಸೋಂಕು: ಹಲ್ಲಿನ ಹುಳುಕು ಮೇಲ್ಭಾಗ­ದಿಂದ ಬೇರಿನ­ವರೆಗೂ ಹಬ್ಬಿ ತೀವ್ರ ನೋವು -ಊತ ಇರುತ್ತದೆ. ಇಂಥ ಸಂದರ್ಭದಲ್ಲಿ ಬರೀ ಫಿಲ್ಲಿಂಗ್ ಸಾಧ್ಯವಿಲ್ಲ. ಬೇರುನಾಳ ಚಿಕಿತ್ಸೆಯ ಅಗತ್ಯವಿದೆ. ಆದರೆ ಸುತ್ತಲಿನ ಮೂಳೆ ದುರ್ಬಲವಾಗಿದ್ದರೆ, ಹಲ್ಲು ತುಂಬಾ ಸಡಿಲವಾಗಿದ್ದರೆ, ಸೋಂಕು ತೀವ್ರವಾಗಿದ್ದರೆ ಹಲ್ಲನ್ನು ಕೀಳಲಾಗುತ್ತದೆ.

ವಸಡಿನ ಉರಿಯೂತ / ಮೂಳೆಯ ಸಮಸ್ಯೆ: ಹಲ್ಲು ಚೆನ್ನಾಗಿರಲು ಅದರ ಸುತ್ತಲೂ ಇರುವ ವಸಡು-ಮೂಳೆಯೂ ಆರೋಗ್ಯವಾಗಿರಬೇಕು. ಇಲ್ಲಿ ಕೀವು- ತೀವ್ರ ಸೋಂಕು ಇದ್ದಲ್ಲಿ ಹಲ್ಲು ಸಡಿಲವಾಗುತ್ತದೆ. ಇಂಥ ಸಂದರ್ಭದಲ್ಲಿ ಹಲ್ಲನ್ನು ಕೀಳಬೇಕಾಗಬಹುದು.

ಸೋಂಕಿನ ಸಾಧ್ಯತೆ: ಅಂಗಾಂಗ ಕಸಿ, ಕೀಮೊಥೆರಪಿ ಮುಂತಾದ ಸಮಯದಲ್ಲಿ ದೇಹದ  ರೋಗ ನಿರೋಧಕ ಶಕ್ತಿ ತೀರಾ ಕಡಿಮೆ ಇರುತ್ತದೆ. ಹೀಗಿದ್ದಾಗ ಬಾಯಿ- ಹಲ್ಲಿನಲ್ಲಿ ಕಾಣುವ ಯಾವುದೇ ಸೋಂಕು ಅಪಾಯಕಾರಿ. ಹಾಗಾಗಿ ಮುಂದಾಗುವ ಸೋಂಕಿನ ತೀವ್ರತೆ ತಪ್ಪಿಸಲು ಹಲ್ಲು ತೆಗೆಯಲಾಗುತ್ತದೆ.

ಹಲ್ಲು ಕೀಳುವ ಮುನ್ನ: ಹಲ್ಲು ಕೀಳುವಿಕೆ ಅತ್ಯಂತ ಸುರಕ್ಷಿತ ಚಿಕಿತ್ಸಾ ವಿಧಾನ. ಆದರೂ ಹಾನಿಕಾರಕ ಸೂಕ್ಷ್ಮಾಣುಜೀವಿಗಳು. ಬಾಯಿ­ಯಿಂದ ದೇಹದ ರಕ್ತಚಲನೆಯಲ್ಲಿ ಸೇರುವ ಸಾಧ್ಯತೆ ಇದೆ. ವಸಡುಗಳಲ್ಲೂ ಇವು ಪ್ರವೇಶಿಸ­ಬಹುದು. ಸೋಂಕಿನ ಸಾಧ್ಯತೆ ಹೆಚ್ಚಿದ್ದರೆ ಹಲ್ಲು ಕೀಳುವ ಮುನ್ನ ಮತ್ತು ನಂತರ ಆಂಟಿಬ­ಯಾಟಿಕ್‌ಗಳನ್ನು ನೀಡಲಾ­ಗುತ್ತದೆ. ಹಲ್ಲು ಕೀಳಿಸುವ ಮುನ್ನ ದಂತ­ವೈ­ದ್ಯರ ಬಳಿ  ತೆಗೆದು­ಕೊಳ್ಳುತ್ತಿರುವ ಮಾತ್ರೆ­ಗಳು ಆದ ಶಸ್ತ್ರಚಿಕಿತ್ಸೆ­ಇರುವ ಹೃದಯ ಸಂಬಂಧಿ, ಶ್ವಾಸಕೋಶ, ಇನ್ನಿತರ ತೊಂದರೆ ಮಧುಮೇಹ, ರಕ್ತದೊ­ತ್ತಡ ಅಸ್ತಮಾ, ಥೈರಾಯ್ಡ್ ಸಮಸ್ಯೆ ಅಲರ್ಜಿ ಗರ್ಭಿಣಿಯಾಗಿದ್ದಲ್ಲಿ ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.

ಹಲ್ಲು ಕೀಳುವಾಗ: ಹಲ್ಲು ಕೀಳುವಾಗ ಮೊದಲು ಸ್ಥಾನಿಕ ಅರಿವಳಿಕೆ (ಲೋಕಲ್ ಅನಸ್ತೇಶಿಯಾ) ನೀಡಲಾಗುತ್ತದೆ. ಇದರಿಂದ ಸ್ಪರ್ಶದ ಅನುಭವ ಇದ್ದರೂ ನೋವಿನ ಅರಿವಾಗುವುದಿಲ್ಲ. ಹೆಚ್ಚು ಸಂಖ್ಯೆಯ ಹಲ್ಲುಗಳನ್ನು ಏಕಕಾಲಕ್ಕೆ ತೆಗೆಯುವುದಾದರೆ ಸಾಮಾನ್ಯ ಅರಿವಳಿಕೆ ಬಳಸಲಾಗು­ತ್ತದೆ. ಹಲ್ಲು ತೆಗೆಯುವಾಗ ಅಂಟಿಕೊಂಡಿರುವ ವಸಡನ್ನು ನಿಧಾನವಾಗಿ ಬೇರ್ಪಡಿಸಲಾಗುತ್ತದೆ. ಹಲ್ಲು ಮುರಿ­ದಿದ್ದರೆ ಅಥವಾ ತೀರಾ ಗಟ್ಟಿಯಾಗಿದ್ದರೆ ಮೂಳೆಯ ಭಾಗವನ್ನು ಒಂದಿಷ್ಟು ತೆಗೆದು, ನಂತರ ಇಕ್ಕಳದಂಥ ಸಾಧನ ಹಾಕಲಾಗು­ತ್ತದೆ. ಇದರಿಂದ ಹಲ್ಲನ್ನು ಬೇರು ಸಮೇತ ಹಿಡಿದು ದೃಢವಾಗಿ ಹಿಂದೆ-ಮುಂದೆ ಚಾಲನೆ ನೀಡುವುದ­ರಿ­ಂದ ಹಲ್ಲು ಬುಡದಲ್ಲಿ ಸಡಿಲ­ವಾಗಿ ಹೊರ­ಬರು­ತ್ತದೆ. ಹಲ್ಲು ತೀರಾ ಒಳಗೆ ಇದ್ದರೆ /ಗಟ್ಟಿ­ಯಾಗಿ ಅಂಟಿ­ಕೊಂಡಿದ್ದರೆ 2–3 ಭಾಗ ಮಾಡಿ ಚಿಕ್ಕ ಭಾಗಗಳಲ್ಲಿ ತೆಗೆಯಲಾಗುತ್ತದೆ.

ಹಲ್ಲು ಕಿತ್ತ ನಂತರ:- ಸ್ಥಾನಿಕ ಅರಿವಳಿಕೆಯ ಪ್ರಭಾವ ನಿಧಾನವಾಗಿ ಕಡಿಮೆಯಾಗುತ್ತಾ ಬಂದಂತೆ ನೋವು ಕಾಣಹುದು. ಹಾಗಾಗಿ ವೈದ್ಯರು ಹೇಳಿದ ಮಾತ್ರೆಗಳನ್ನು ಸಮ­­ಯಕ್ಕೆ ಸರಿಯಾಗಿ ಸೇವಿಸಬೇಕು. ಹತ್ತಿ­ಯನ್ನು ಗಟ್ಟಿ­ಯಾಗಿ ಕಚ್ಚಿಡಿ. ಇದರಿಂದ ರಕ್ತ­ಸ್ರಾವ ಕಡಿಮೆ ಆಗುವುದಲ್ಲದೆ ರಕ್ತ ಬೇಗ ಹೆಪ್ಪುಗಟ್ಟುತ್ತದೆ.

ಐಸ್‌ಕ್ರೀಂ ತಿನ್ನುವುದರಿಂದ ರಕ್ತಸ್ರಾವ ಹತೋಟಿಗೆ ಬರುತ್ತದೆ ಹಾಗೂ ಐಸ್‌ಬ್ಯಾಗ್ ಅನ್ನು ಹೊರಗಿನಿಂದ ಇಟ್ಟಾಗ ಊತ ಕಡಿಮೆಯಾ­ಗುತ್ತದೆ. ಜೋರಾಗಿ ಉಗುಳುವುದು, ಬಾಯಿ ಮುಕ್ಕಳಿಸುವುದು, ಬ್ರಶ್ ಮಾಡುವುದು, ಸ್ಟ್ರಾ ಉಪಯೋಗಿಸಿ ಕುಡಿಯುವುದು ಬೇಡ. ಏಕೆಂದರೆ ಇದರಿಂದ ಹೆಪ್ಪುಗಟ್ಟಿದ ರಕ್ತ ಪಲ್ಲಟವಾಗಬಹುದು. ಧೂಮಪಾನ ಕನಿಷ್ಠ ಒಂದು ದಿನ ಕೂಡದು ಗಟ್ಟಿ, ಬಿಸಿ, ಮಸಾಲೆ ಆಹಾರ ತಿನ್ನುವುದು ಬೇಡ. ಮೊದಲ ದಿನ ಆದಷ್ಟು ಮೆತ್ತಗಿನ ದ್ರವ ಪದಾರ್ಥ ಒಳ್ಳೆಯದು. ಬಾಯಿಯ ಸ್ವಚ್ಛತೆ ಕಡೆ ಗಮನವಿರಲಿ.

ಹಲ್ಲು ಕಿತ್ತ ಜಾಗ ಬಿಟ್ಟು ಬೇರೆಡೆ ಮತ್ತು ನಾಲಗೆಯನ್ನು ಬ್ರಶ್ ಮಾಡಿ ಶುಚಿಯಾಗಿ ಇಡುವುದರಿಂದ ಬಾಯಿಯಲ್ಲಿನ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಕಡಿಮೆ ಆಗುತ್ತದೆ.  ಮಲಗುವಾಗ ತಲೆ ಎತ್ತರದಲ್ಲಿರುವಂತೆ ದಿಂಬಿಟ್ಟು ಮಲಗುವುದು ಉತ್ತಮ. ಸಮದಲ್ಲಿ ಮಲಗಿದಾಗ ರಕ್ತಸ್ರಾವ ಹೆಚ್ಚಬಹುದು.

ದಂತವೈದ್ಯರನ್ನು ಕಾಣಬೇಕಾದ ತುರ್ತು ಪರಿಸ್ಥಿತಿ: ನಾಲ್ಕು ತಾಸುಗಳಿಗಿಂತ ಮಿಗಿಲಾಗಿ ತೀವ್ರ ನೋವು, ನಿರಂತರ ರಕ್ತಸ್ರಾವ, ವಾಕರಿಕೆ, ಚಳಿ, ಜ್ವರ, ಊತ, ಕೀವು ಸೋರುವಿಕೆ ಕೆಮ್ಮು, ಎದೆನೋವು, ಉಸಿರಾಡಲು ಕಷ್ಟ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಒಮ್ಮೆ ದಂತವೈದ್ಯರನ್ನು ಭೇಟಿ ಮಾಡಿ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಕೊನೆಯ ಮಾರ್ಪಾಟು : 4/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate