অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಲ್ಲುಗಳ ಆರೋಗ್ಯಕ್ಕೆ ಸೂತ್ರ

ಹಲ್ಲುಗಳ ಆರೋಗ್ಯಕ್ಕೆ ಸೂತ್ರ

ಫಳ ಫಳ ಮಿನುಗುವ, ನೇರವಾದ ಹಲ್ಲುಗಳ ಸಾಲು ಎಲ್ಲರ ಕನಸು. ಚೆಂದದ ಹಲ್ಲುಗಳಿಂದ ಕೂಡಿದ ಅಂದದ ನಗು, ವ್ಯಕ್ತಿಯೊಬ್ಬ ಧರಿಸಬಹುದಾದ ಅಮೂಲ್ಯ ಆಭರಣ. ದಂತಾರೋಗ್ಯ ಕಾಪಾಡಲು ಉತ್ತಮ ಆಹಾರ ಸೇವನೆ, ದಿನಕ್ಕೆರಡು ಬಾರಿ ಸರಿಯಾಗಿ ಬ್ರಷ್ ಮಾಡಿಕೊಳ್ಳುವುದು ಮತ್ತು ನಿಯಮಿತವಾಗಿ ದಂತವೈದ್ಯರ ಭೇಟಿ ಮುಖ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾವು ನಿತ್ಯ ಸೇವಿಸುವ ಆಹಾರ ಮತ್ತು ರೂಢಿಸಿಕೊಂಡ ಅಭ್ಯಾಸಗಳು ಹಲ್ಲು–-ವಸಡಿಗೆ ಹೇಗೆ ಹಾನಿಕಾರಕ ಎಂಬುದು ಅನೇಕರಿಗೆ ತಿಳಿಯದ ಸಂಗತಿ.

*ಕಾಫಿ ಕುಡಿಯುವುದು
ಲಕ್ಷಾಂತರ ಜನರಿಗೆ  ದಿನವೂ ಬೆಳಗಾಗುವುದೇ ಹಬೆಯಾಡುವ ರುಚಿಕರ ಪೇಯದಿಂದ! ಆದರೆ ದಿನಕ್ಕೆ ಎರಡು ಕಪ್‌ಗಳಿಗಿಂತ ಹೆಚ್ಚು ಕಾಫಿ ಸೇವಿಸಿದರೆ ಹಲ್ಲಿನ ಬಣ್ಣ ನಿಧಾನವಾಗಿ ಬದಲಾಗುತ್ತದೆ. ಕಾಫಿಯ ಗಾಢ ಬಣ್ಣ ಹಾಗೂ ಆಮ್ಲೀಯ ಗುಣದಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

*ಆಲೂಗಡ್ಡೆ ಚಿಪ್ಸ್
ಚಳಿ, ಮಳೆ, ಬಿಸಿಲು ಎಲ್ಲಾ ಕಾಲದಲ್ಲೂ ತಿನ್ನಬಹುದಾದ ಕುರುಕುರು ಖಾರ-ಖಾರ ಆಲೂಚಿಪ್ಸ್ ಎಲ್ಲರಿಗೂ ಇಷ್ಟ. ಚಿಪ್ಸ್ ತಿಂದಾಗ ಅದರ ಸಣ್ಣ ಸಣ್ಣ ಚೂರುಗಳು ಹಲ್ಲುಗಳ ಸಂದಿಯಲ್ಲಿ ಉಳಿಯುವುದು ಸಾಮಾನ್ಯ. ಬಾಯಿಯಲ್ಲಿರುವ ಸೂಕ್ಷ್ಮಾಣುಜೀವಿಗಳಿಗೆ ಈ ಪಿಷ್ಟಯುಕ್ತ ಆಹಾರ ಅಂದರೆ ಪ್ರೀತಿ. ಅದನ್ನು ತಿಂದು ಹಲ್ಲು ನಾಶಪಡಿಸುವ ಆಸಿಡ್ ಉತ್ಪಾದಿಸುತ್ತವೆ. ಒಂದು ಬಾರಿ ಚಿಪ್ಸ್ ತಿಂದ ನಂತರ ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ಹಲ್ಲುಗಳ ಮೇಲೆ ಆಸಿಡ್ ದಾಳಿ, ಪರಿಣಾಮ ದಂತಕ್ಷಯ! ಆದ್ದರಿಂದ ಆಲೂ ಚಿಪ್ಸ್ ತಿನ್ನುವುದನ್ನು ಕಡಿಮೆ ಮಾಡಿ ಮತ್ತು ತಿಂದ ನಂತರ ಶುದ್ಧ ನೀರಿನಿಂದ ತಪ್ಪದೇ ಚೆನ್ನಾಗಿ ಬಾಯಿ ಮುಕ್ಕಳಿಸಿ.

*ಹಣ್ಣಿನ ರಸ, ಐಸ್
ವಿಟಮಿನ್‌ಗಳಿಂದ ಕೂಡಿದ ಆಂಟಿ ಆಕ್ಸಿಡೆಂಟ್ ಹೊಂದಿರುವ ಹಣ್ಣಿನ ರಸ ದಾಹ ತೀರಿಸುವುದಷ್ಟೇ ಅಲ್ಲ, ಸ್ವಾದಿಷ್ಟವೂ. ಆದರೆ ಅದರಲ್ಲಿರುವ ಸಕ್ಕರೆ ಅಂಶ ಹೆಚ್ಚಿದಷ್ಟೂ ಹಲ್ಲುಗಳಿಗೆ ತೊಂದರೆ, ದಂತಕ್ಷಯಕ್ಕೆ ರಾಜಮಾರ್ಗ. ತಾಜಾ ಹಣ್ಣು ಹಾಗೇ ತಿನ್ನುವುದು ಒಳ್ಳೆಯದು. ಹಣ್ಣಿನ ರಸ ಕುಡಿಯುವುದಾದಲ್ಲಿ ಸಕ್ಕರೆ ಸೇರಿಸದೇ  ಕುಡಿಯಬಹುದು.

ಐಸ್: ಬರೀ ನೀರಿನಿಂದ ಮಾಡಿದ ಐಸ್ ಕ್ಯೂಬ್‌ಗಳನ್ನು ‘ಕುಟುಂ’ ಎಂದು ಕಡಿಯುತ್ತಾ ತಿನ್ನುವುದು ಬಹಳ ಜನರಿಗೆ ಇಷ್ಟ. ಆದರೆ ಶೈತ್ಯೀಕರಿಸಿದ ಕ್ಯೂಬ್ ಗಟ್ಟಿ ಇದ್ದು, ತಿನ್ನುವಾಗ ಒತ್ತಡ ಹೆಚ್ಚಾಗಿ ಹಲ್ಲಿನಲ್ಲಿ ಬಿರುಕು ಮೂಡಬಹುದು ಅಥವಾ ಮುರಿಯಲೂ ಸಾಧ್ಯ. ಅತೀ ತಂಪು ವಸಡಿಗೆ ಕಿರಿಕಿರಿ ಉಂಟು ಮಾಡಿ ಆಗಾಗ್ಗೆ ಹಲ್ಲು ನೋವು ಕಾಣಿಸಬಹುದು.

*ಸೋಡಾಯುಕ್ತ ಲಘು ಪಾನೀಯಗಳು
ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಬಾಟಲಿಗಳಲ್ಲಿ ಬರುವ ಈ ಲಘು ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ, ಪಾಸ್ಫಾರಿಕ್, ಸಿಟ್ರಿಕ್ ಆಮ್ಲ ಇರುತ್ತದೆ. ಇವುಗಳ ನಿರಂತರವಾದ ಸೇವನೆಯಿಂದ ಹಲ್ಲಿನ ಪದರಗಳು ಕರಗುತ್ತವೆ. ಮೇಲ್ಪದರ ಸವೆದಂತೆ ನರತುದಿಗಳು ಹೊರಗಿನ  ವಾತಾವರಣಕ್ಕೆ ತೆರೆದುಕೊಂಡು ‘ಜುಂ’ ಎನ್ನುವ ಸಂವೇದನೆ ಕಾಡುತ್ತದೆ.

*ವೈನ್ ಸೇವನೆ
ವೈನ್ ದಂತಾರೋಗ್ಯಕ್ಕೆ ಒಳ್ಳೆಯದಲ್ಲ. ವೈಟ್ ವೈನ್‌ನಲ್ಲಿ ಇರುವ ಶಕ್ತಿಶಾಲಿ ಆಸಿಡ್ ಹಲ್ಲುಗಳನ್ನು ಕೊರೆಯುತ್ತವೆ. ರೆಡ್ ವೈನ್‌ನಲ್ಲಿನ ಆಸಿಡ್ ಹಲ್ಲಿನ ಹೊರಪದರ ಎನಾಮೆಲ್ ಕೊರೆಯುತ್ತಾ ಅಸಮ ಮೇಲ್ಮೈ ಮಾಡುತ್ತದೆ. ಇದರಿಂದಾಗಿ ಕಲೆ ಕೂರುವ ಸಾಧ್ಯತೆ ಹೆಚ್ಚು. ಇದಲ್ಲದೆ ವರ್ಣಕಾರಕಗಳಾದ ಕ್ರೋಮೋಜೆನ್-ಟಾನಿನ್, ಹಲ್ಲಿಗೆ ಅಂಟಿ ಕೂರುತ್ತದೆ. ವೈನ್ ಸೇವಿಸುವಾಗ ಚೀಸ್ ತಿನ್ನುವುದರಿಂದ ಆಮ್ಲೀಯ ಗುಣ ಕಡಿಮೆ ಆಗುತ್ತದೆ. ವೈನ್ ನಂತರ ಬಾಯಿ ಮುಕ್ಕಳಿಸುವುದು ಕಡ್ಡಾಯ.

*ಪೆನ್ಸಿಲ್/ ಪೆನ್ ತುದಿ ಕಚ್ಚುವುದು
ಕೆಲವರಿಗೆ ಕೆಲಸ ಮಾಡುವಾಗ, ಓದುವಾಗ ಅವರಿಗೇ ಅರಿವಿಲ್ಲದೇ ಪೆನ್,-ಪೆನ್ಸಿಲ್ ತುದಿ ಕಚ್ಚುವುದು ರೂಢಿ. ಹೀಗೆ ಮಾಡಿದಾಗ ಹಲ್ಲಿನ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇದರಿಂದ ಹಲ್ಲಿನ ಬಿರುಕು/ಮುರಿತ ಕಾಣಬಹುದು.

*ಉಗುರು ಕಡಿಯುವುದು
ಮನಸ್ಸಿಗೆ  ಕಿರಿ-ಕಿರಿ, ಹೆದರಿಕೆ, ಗಾಬರಿ, ಒತ್ತಡ ಉಂಟಾದಾಗ ಉಗುರು ಕಚ್ಚುವ ಅಭ್ಯಾಸ ಸಾಕಷ್ಟು ಜನರಿಗೆ ಇರುತ್ತದೆ. ಉಗುರಿನಲ್ಲಿರುವ ಸೂಕ್ಷ್ಮಾಣುಜೀವಿಗಳು  ಬಾಯಿಗೆ ನೇರ ಪ್ರವೇಶ ಪಡೆದು, ಜಠರ ತಲುಪಿ ಸೋಂಕು ಉಂಟಾಗಬಹುದು. ಸತತ ಘರ್ಷಣೆಯಿಂದ ಹಲ್ಲುಗಳ ಎನಾಮೆಲ್ ಕ್ರಮೇಣ ಸವೆಯಲು, ಬಿರುಕು ಬಿಡಲು ಸಾಧ್ಯ.

*ಹಲ್ಲಿಂದ ಹರಿಯುವುದು
ಸೀಲ್ ಆದ ಕವರ್, ಬಟ್ಟೆಗಳ ಮೇಲಿನ ಟ್ಯಾಗ್, ಕೆಚಪ್ ಬಾಟಲ್, ಪಿಸ್ತಾದ ಹೊರಕವಚ ಇವನ್ನೆಲ್ಲಾ ತೆಗೆಯಲು ತಕ್ಷಣವೇ ಬಳಕೆಯಾಗುವುದು ಹಲ್ಲುಗಳು!  ತೆಗೆಯುವ ಭರದಲ್ಲಿ ಹಲ್ಲುಗಳ ಮೇಲೆ ಅನಗತ್ಯ ಬಲ ಪ್ರಯೋಗವಾಗಿ ಅದು ನೋವು, ಬಿರುಕು, ಮುರಿತಕ್ಕೆ ಕಾರಣವಾಗಬಹುದು.

*ಬೆರಳು ಚೀಪುವಿಕೆ , ಬಾಯಿಯಿಂದ ಉಸಿರಾಟ
ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಕೆಟ್ಟ ಪರಿಣಾಮ ಬೀರುವ ಅಭ್ಯಾಸಗಳಿವು. ಬೆರಳು ಚೀಪುವಿಕೆಯಿಂದ ಮೇಲಿನ ಮುಂದಿನ ಹಲ್ಲುಗಳು ಮುಂದಾಗಿ ಬಂದು ಕೆಳದವಡೆಯ ಮುಂದಿನ ಹಲ್ಲುಗಳು ಹಿಂದೆ ಹೋಗುತ್ತವೆ. ಈ ಎರಡೂ ಅಭ್ಯಾಸಗಳಿಂದ ಅಸಮರ್ಪಕ ಹಲ್ಲುಗಳ ಜೋಡಣೆ ಮತ್ತು ದವಡೆಗಳ ಬೆಳವಣಿಗೆಯಲ್ಲಿ ವ್ಯತ್ಯಾಸ ಕಾಣಿಸಬಹುದು.

*ಹಲ್ಲುಕಡ್ಡಿ ಬಳಕೆ:
ತಿಂದ ಆಹಾರ ಹಲ್ಲುಗಳ ನಡುವಿನ ಸಂದಿಯಲ್ಲಿ ಸಿಕ್ಕಿದಾಗ ಅದನ್ನು ತೆಗೆಯಲು ಹಲ್ಲುಕಡ್ಡಿ ಉಪಯುಕ್ತ ನಿಜವೇ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜೋರಾಗಿ ಚುಚ್ಚಿ ವಸಡಿಗೆ ನೋವಾಗುತ್ತದೆ. ಪದೇ ಪದೇ ಹಲ್ಲು ಕಡ್ಡಿ ಹಾಕುವುದರಿಂದ ಹಲ್ಲಿನ ನಡುವಿನ ಸಂದಿ ದೊಡ್ಡದಾಗುವ, ಹಲ್ಲಿನ ಬೇರಿಗೂ ಪೆಟ್ಟಾಗುವ ಸಾಧ್ಯತೆ ಇದೆ. ಹಲ್ಲು ಕಡ್ಡಿ ಬದಲು ಫ್ಲಾಸ್ ಬಳಕೆ  ಒಳ್ಳೆಯದು.

*ತಪ್ಪಾಗಿ ಬ್ರಷ್ ಮಾಡುವುದು
ಹೆಚ್ಚು ಕಾಲ ಗಸ ಗಸ ತಿಕ್ಕಿದಷ್ಟೂ ಹಲ್ಲು ಫಳಗುಟ್ಟುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಬಿರುಸಾದ ಎಳೆಯುಳ್ಳ ಬ್ರಶ್‌ನಿಂದ ಹೆಚ್ಚು ಕಾಲ ಬ್ರಶ್ ಮಾಡಿದಂತೆ ಹಲ್ಲಿನ ಮೇಲ್ಪದರ ಸವೆಯುತ್ತಾ ಬರುತ್ತದೆ. ವಸಡಿನ ಹಿಂಸರಿಯುವಿಕೆ ಮತ್ತು ಸಂವೇದನಾಶೀಲ ಹಲ್ಲುಗಳು ಇದರ ಪರಿಣಾಮ.
ಹಲ್ಲು ಸ್ವಚ್ಛವಾಗಲು ದಿನಕ್ಕೆರಡು ಬಾರಿ ಮೂರರಿಂದ ನಾಲ್ಕು ನಿಮಿಷ ಮೃದು ಎಳೆಯ ಬ್ರಶ್‌ಗಳಿಂದ  ವೃತ್ತಾಕಾರವಾಗಿ ಬ್ರಶ್ ಮಾಡಿದರೆ ಸಾಕು.
ಹೀಗೆ ನಮ್ಮ ಆಹಾರ-ಅಭ್ಯಾಸಗಳಿಗೂ ಮತ್ತು ದಂತಾರೋಗ್ಯಕ್ಕೂ ನಿಕಟವಾದ ಸಂಬಂಧ ಇರುವುದರಿಂದ ಅದರ ಬಗ್ಗೆ ಕಾಳಜಿ ಅಗತ್ಯ.

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate