অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೊಬೆಟೆಕ್ ಲೇಸರ್

ರೊಬೆಟೆಕ್ ಲೇಸರ್

ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖ ಎಂದು ನಂಬಲಾಗುತ್ತದೆ. ದೃಷ್ಟಿ ಇಲ್ಲದ ಜೀವನವನ್ನು ಊಹಿಸುವುದೂ ಕಷ್ಟ. ಹೀಗೆ ದೃಷ್ಟಿ ಕಳೆದುಕೊಳ್ಳುವುದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಕಣ್ಣಿನ ಪೊರೆಯೂ ಒಂದು. ಕಣ್ಣಿನಲ್ಲಿರುವ ನೈಸರ್ಗಿಕ ಮಸೂರವು ನಿರ್ಮಲ ಮತ್ತು ಪಾರದರ್ಶಕವಾಗಿದ್ದು ಬೆಳಕಿನ ಯಾವುದೇ ಅಡಚಣೆಯಿಲ್ಲದೆ ಅಕ್ಷಿಪಟಲದ ಮೇಲೆ ಕೇಂದ್ರೀಕೃತವಾಗಲು ಸಹಾಯ­ವಾಗುತ್ತದೆ. ಮನುಷ್ಯನಿಗೆ ವಯಸ್ಸಾದಂತೆ ಈ ನೈಸರ್ಗಿಕ ಮಸೂರವು ತನ್ನ ಪಾರದರ್ಶಕತೆ ಕಳೆದುಕೊಳ್ಳುತ್ತದೆ. ಇದನ್ನೇ ಪೊರೆ ಬೆಳೆದಿರುವುದು ಎಂದು ಹೇಳಲಾಗುತ್ತದೆ.

ಭಾರತದಲ್ಲಿ ಕಣ್ಣಿನ ಪೊರೆಯಿಂದಾಗಿಯೇ ಬಹಳಷ್ಟು ಮಂದಿ ಕುರುಡುತನ ಅನುಭವಿಸುತ್ತಿದ್ದಾರೆ ಎಂದು ಕೆಲವು ದಾಖಲೆಗಳು ಹೇಳುತ್ತವೆ. ಈಗಿನ ದಿನಗಳಲ್ಲಿ ಕಣ್ಣಿನ ಪೊರೆ ನಿವಾರಣೆಗೆ ಹಲವು ಬಗೆಯ ಶಸ್ತಚಿಕಿತ್ಸಾ ಪದ್ಧತಿಗಳು ಕಾಲಿಟ್ಟಿವೆ, ಫೇಕೋಎಮಲ್ಸಿಫಿಕೇಶನ್‌, ಮೈಕ್ರೋ ಇನ್ಸಿಷನ್‌ ಇತ್ಯಾದಿ. ಈ ಎಲ್ಲವೂ ವೈದ್ಯರನ್ನು ಅವಲಂಭಿಸಿದ ಶಸ್ತ್ರಕ್ರಿಯೆ­ಗಳು. ಆದರೆ ಅದನ್ನೂ ಮೀರಿದ ಹೊಸ ತಂತ್ರಜ್ಞಾನ ಇದೀಗ ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟಿದೆ. ಲೇಸರ್‌ ಕಿರಣದ ಮೂಲಕ ರೊಬೊಟಿಕ್‌ ಸ್ಪರ್ಶದಲ್ಲಿ ನಡೆಸಲಾಗುವ ಯಂತ್ರದ ಹೆಸರು ‘ಕ್ಯಾಟಲಿಸ್‌ ಫೆಮ್ಟೊ ಸೆಕೆಂಡ್‌ ಲೇಸರ್‌’ ಎಂದು. ಇದು ನಡೆಸುವ ಶಸ್ತ್ರಚಿಕಿತ್ಸೆಯನ್ನು ರೊಬೊಟಿಕ್‌ ಲೇಸರ್‌ ಶಸ್ತ್ರಚಿಕಿತ್ಸೆ ಎಂದೂ ಕರೆಯಲಾಗುತ್ತದೆ.

ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾದ ಈ ಉಪಕರಣ ಭಾರತ­ದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ನೇತ್ರಧಾಮ ಕಣ್ಣಿನ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ. ರೋಗಿಯ ಕಣ್ಣಿಗೆ ಪುಟ್ಟದೊಂದು ಸಾಧನದ ಮೂಲಕ ಈ ಉಪಕರಣ ಅಳವಡಿಸಲಾಗುತ್ತದೆ. ಲಿಕ್ವಿಡ್‌ ಆಪ್ಟಿಕ್ಸ್‌ ಇಂಟರ್‌ಫೇಸ್‌ ಎಂಬ ತಂತ್ರಜ್ಞಾನದ ಮೂಲಕ ಯಂತ್ರದಲ್ಲಿರುವ ದ್ರವವು ಕಣ್ಣಿನೊಂದಿಗೆ ಸಂಪರ್ಕ ಹೊಂದುತ್ತದೆ. ಇದರ ಮೂಲಕ ಕಣ್ಣನ್ನು ಸಂಪೂರ್ಣವಾಗಿ ಪರಿಶೀಲಿಸಿ ಕರಿಗುಡ್ಡೆ, ಪೊರೆ ಹಾಗೂ ಪಾಪೆಯ 3ಡಿ ಚಿತ್ರವನ್ನು ಈ ಯಂತ್ರ ನೀಡಲಿದೆ.

ಇದೇ ತಂತ್ರಜ್ಞಾನವನ್ನು ಅಸ್ಟಿಗ್ಮಾಟಿಸಂ ಎಂಬ ಕರಿಗುಡ್ಡೆಗೆ ಸಂಬಂಧಿಸಿದ ದೃಷ್ಟಿ ದೋಷವನ್ನು ಸರಿಪಡಿಸಲು ಬಳಸ­ಬಹುದಾಗಿದೆ. ಪ್ರತಿಯೊಂದು ಶಸ್ತ್ರಚಿಕಿತ್ಸೆಯೂ ಬಗೆಬಗೆಯ ದೃಷ್ಟಿಯುಳ್ಳ ವ್ಯಕ್ತಿಗಳ ಕಣ್ಣಿಗೆ ಅನುಗುಣವಾಗಿ ನಡೆಸಬಹು­ದಾ­ದ್ದರಿಂದ ಈ ರೊಬೊಟಿಕ್‌ ಶಸ್ತ್ರಚಿಕಿತ್ಸೆಯು ಸಾಧಾರಾಣ ಶಸ್ತ್ರ­ಚಿಕಿತ್ಸೆಗಿಂತ ಹತ್ತುಪಟ್ಟು ಹೆಚ್ಚು ನಿಖರವಾಗಿದೆ. ಮತ್ತೊಂದು ವಿಶೇಷತೆ ಎಂದರೆ ಕಣ್ಣಿನ ಪೊರೆ ಹಾಗೂ ಅಸ್ಟಿಗ್ಮಾಟಿಸಂ ಎರಡೂ ಶಸ್ತ್ರಕ್ರಿಯೆಯನ್ನು ಏಕಕಾಲದಲ್ಲಿ ನಡೆಸುವ ಸಾಮರ್ಥ್ಯ ಈ ಉಪಕರಣಕ್ಕಿದೆ ಎಂದು ನೇತ್ರಧಾಮದ ಹಿರಿಯ ನೇತ್ರ ತಜ್ಞ ಡಾ. ಶ್ರೀಗಣೇಶ್‌ ವಿವರಿಸುತ್ತಾರೆ.

ವೈದ್ಯರನ್ನೇ ಅವಲಂಬಿಸಿರುವ ಫೇಕೋಎಮಲ್ಸಿಫಿಕೇಶನ್‌

ನೇತ್ರ ತಜ್ಞ ಶ್ರೀಗಣೇಶ್‌

ಫೇಕೋಎಮಲ್ಸಿಫಿಕೇಶನ್‌ ಎಂಬ ಅಲ್ಟ್ರಾಸೌಂಡ್‌ ಕಣ್ಣಿನಪೊರೆ ಶಸ್ತ್ರಚಿಕಿತ್ಸೆ ಈಗ ಚಾಲ್ತಿಯಲ್ಲಿರುವ ಕಣ್ಣಿನ ಶಸ್ತ್ರಚಿಕಿತ್ಸೆ. ಆದರೆ ಅಲ್ಲಿಯೂ ಕಣ್ಣಿನ ಒಂದು ಭಾಗದಲ್ಲಿ ಸಣ್ಣದೊಂದು ರಂಧ್ರಮಾಡಿ ಅದರ ಮೂಲಕ ಪಾರದರ್ಶಕತೆ ಕಳೆದುಕೊಂಡಿರುವ ಕಣ್ಣಿನ ಪೊರೆಯನ್ನು ಸಂಪೂರ್ಣವಾಗಿ ಕತ್ತರಿಸಿ, ತುಂಡು ತುಂಡುಗಳನ್ನಾಗಿ ಮಾಡಲಾಗುತ್ತದೆ. ಅದನ್ನು ಪುಟ್ಟದೊಂದು ವ್ಯಾಕ್ಯೂಮ್‌ ಉಪಕರಣದ ಮೂಲಕ ಹೊರತೆಗೆಯಲಾಗುತ್ತದೆ. ನಂತರ ಅದೇ ರಂಧ್ರದ ಮೂಲಕ ಲೆನ್ಸ್‌ ಅಳವಡಿಸಲಾಗುತ್ತದೆ.

ಈ ಶಸ್ತ್ರಚಿಕಿತ್ಸೆಯಲ್ಲಿ ಪೊರೆ ಕರಗಿಸಲು ಶಾಖ ನೀಡಲಾಗುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಾದಲ್ಲಿ ಕರಿಗುಡ್ಡೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಇಲ್ಲಿ ಬಹುತೇಕ ಕೆಲಸಗಳು ಕೈಯಲ್ಲೇ ನಡೆಯುತ್ತದೆ. ಹೀಗಾಗಿ ಇದರಲ್ಲಿ ವ್ಯತ್ಯಾಸ ಬರಬಹುದು. ಶೇ 80ರಷ್ಟು ಕೈಯಲ್ಲೇ ಮಾಡುವುದರಿಂದ ಪ್ರತಿಯೊಂದು ಶಸ್ತ್ರಚಿಕಿತ್ಸೆಯೂ ಭಿನ್ನವಾಗಿರುತ್ತದೆ. ಹೀಗಾಗಿ ಫಲಿತಾಂಶವೂ ಭಿನ್ನವಾಗಿರಲಿದೆ. ಶಸ್ತ್ರಚಿಕಿತ್ಸೆಯ ನಂತರ ಒಂದು ವಾರ ಕಾಲ ವಿಶ್ರಾಂತಿ ಅಗತ್ಯ.

‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಪೊರೆ ತೆಗೆಯುವುದೇ ಒಂದು ದೊಡ್ಡ ಕೌಶಲ. ಪೊರೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹೀಗಾಗಿ ಅದನ್ನು ಅತ್ಯಂತ ಸೂಕ್ಷ್ಮವಾಗಿ ತೆಗೆಯಬೇಕು. ಇದರಿಂದ ಲೆನ್ಸ್‌ ಅಳವಡಿಸಲು ಸಹಕಾರಿ. ಲೇಸರ್ ಶಸ್ತ್ರಚಿಕಿತ್ಸೆಯಲ್ಲಿ ಬ್ಲೇಡ್‌ನ ಅವಶ್ಯಕತೆ ಇಲ್ಲ. ಕಣ್ಣಿನ ಗುಡ್ಡೆಯಲ್ಲಿ ರಂಧ್ರ ಮಾಡುವುದು, ಪೊರೆ ಹೊರತೆಗೆಯುವುದು ಹೀಗೆ ಅನೇಕ ಕೆಲಸಗಳನ್ನು ಕ್ಯಾಟಲಿಸ್‌ ಯಂತ್ರ ಒಂದೇ ಮಾಡುತ್ತದೆ. ನಂತರ ನಿಸರ್ಗದತ್ತ ಲೆನ್ಸ್‌ ಚೀಲದಲ್ಲಿ ಕೃತಕ ಲೆನ್ಸ್‌ ಕೂರಿಸುವ ಅತ್ಯಂತ ನಾಜೂಕಾದ ಕೆಲಸದ ಭಾಗ.

ಈ ಹಿಂದೆ ಇದು ವೈದ್ಯರ ಕೌಶಲ್ಯದ ಮೇಲೆ ಅವಲಂಭಿಸಿತ್ತು. ಲೆನ್ಸ್‌ ಸರಿಯಾಗಿ ಕೂರಿಸಿದಲ್ಲಿ ದೃಷ್ಟಿ ಸರಿಯಾಗಿರುತ್ತದೆ. ಆದರೆ ಕೆಟಲಿಸ್‌ ರೊಬೊಟಿಕ್‌  ಲೇಸರ್‌ ಶಸ್ತ್ರಚಿಕಿತ್ಸೆಯಲ್ಲಿ ಇಂಥ ಯಾವುದೇ ಲೋಪಕ್ಕೆ ಅವಕಾಶವಿಲ್ಲ, ಅತ್ಯಂತ ಕರಾರುವಕ್ಕಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸುತ್ತದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು ತೆಗೆದುಕೊಳ್ಳುವ ಸಮಯ ಕೇವಲ 10ರಿಂದ 15 ನಿಮಿಷಗಳು ಮಾತ್ರ.’ ಎಂದೆನ್ನುತ್ತಾರೆ ಡಾ. ಶ್ರೀಗಣೇಶ್‌.

ಉತ್ತಮ ಫಲಿತಾಂಶ
ಶಸ್ತ್ರಚಿಕಿತ್ಸೆಯಲ್ಲಿ ಲೇಸರ್‌ ಕಿರಣಗಳು ಯಂತ್ರದಲ್ಲಿರುವ ದ್ರವದ ಮೂಲಕ ಹಾದು ಕಣ್ಣು ತಲುಪುವುದರಿಂದ ನಿಖರತೆ ಹೆಚ್ಚಾಗಿರುತ್ತದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗುವುದು ಗುಣಮಟ್ಟದ ಲೆನ್ಸ್‌ ಬಳಸಿ ದೃಷ್ಟಿಯಲ್ಲಿ ಉತ್ತಮವಾದಾಗ ಮಾತ್ರ. ‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಡುವವರಿಗೆ ಮಲ್ಟಿಫೋಕಲ್‌ ಲೆನ್ಸ್‌ಗಳು ಸದ್ಯ ಲಭ್ಯವಿರುವ ಅತಿ ಹೆಚ್ಚು ಸ್ಪಷ್ಟತೆ ಹಾಗೂ ನಿಖರತೆ ಹೊಂದಿರುವ ಲೆನ್ಸ್‌ಗಳು. ಇವುಗಳ ಬಳಕೆಯಿಂದ ಬಾಲ್ಯದಲ್ಲಿನ ದೃಷ್ಟಿಯಂತೆಯೇ ದೂರ ಹಾಗೂ ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ’ ಎಂದು ತಿಳಿಸಿದ ವೈದ್ಯ ಡಾ. ಶ್ರೀಗಣೇಶ್‌ ಅವರು ಈಗಾಗಲೇ 50ಕ್ಕೂ ಹೆಚ್ಚು ಮಂದಿಗೆ ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರಂತೆ. ಶಸ್ತ್ರಚಿಕಿತ್ಸೆಯ ನಂತರ ಕೇವಲ 48 ಗಂಟೆಗಳಲ್ಲಿ ಅವರೆಲ್ಲರೂ ಸಹಜ ಜೀವನಕ್ಕೆ ಮರಳಿದ್ದಾರೆ ಎನ್ನುವುದು ಡಾ. ಶ್ರೀಗಣೇಶ್‌ ಅವರ ಭರವಸೆ.

ಕಣ್ಣಿನ ಪೊರೆಯ ಲಕ್ಷಣಗಳು
ಮಂದವಾಗಿರುವ ದೃಷ್ಟಿ, ಬಣ್ಣಗಳ ಗ್ರಹಿಕೆಯಲ್ಲಿ ವ್ಯತ್ಯಾಸವಾಗುವುದು, ಬಿಸಿಲು ಹಾಗೂ ಪ್ರಕಾಶಮಾನವಾಗಿರುವ ದೀಪಗಳ ಮುಂದೆ ಕಣ್ಣು ಬಿಡಲು ಕಷ್ಟವಾಗುವುದು, ವಾಹನ ಚಾಲನೆ ಮಾಡುವಾಗ ತೊಂದರೆಯಾಗುವುದು, ಕನ್ನಡಕವನ್ನು ಪದೇ ಪದೇ ಬದಲಾಯಿಸಬೇಕಾಗಿ ಬರುವುದು ಇತ್ಯಾದಿ.

ಕಣ್ಣಿನ ಪೊರೆಗೆ ಕಾರಣಗಳು
ವೃದ್ಧಾಪ್ಯವು ಪೊರೆ ಬೆಳವಣಿಗೆಗೆ ಪ್ರಮುಖ ಕಾರಣ. ಹುಟ್ಟು ಮತ್ತು ಬೆಳವಣಿಗೆ ದೋಷಗಳು, ಕಣ್ಣಿನ ಗಾಯ, ಮಧುಮೇಹ, ಥೈರಾಯಿಡ್ ಹಾರ್ಮೋನ್ ಕೊರತೆ ಇತರ ಕಾರಣಗಳು.
(ಮಾಹಿತಿಗೆ: 26088000/ 97410 26369)

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate