অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪುರುಷ ಸ್ತನ ಕ್ಯಾನ್ಸರ್

ಪುರುಷ ಸ್ತನ ಕ್ಯಾನ್ಸರ್

ಹೌದು ಪುರುಷರಿಗೂ ಸ್ತನ ಕ್ಯಾನ್ಸರ್ ಉಂಟಾಗಬಹುದು. ಆದರೆ ಬಹುಮಂದಿಗೆ ಇದರ ಬಗ್ಗೆ ಅರಿವಿಲ್ಲ. ಸ್ತ್ರೀಯರನ್ನು ಸ್ತನ ಕ್ಯಾನ್ಸರ್ ಪೀಡಿಸಬಹುದೆಂದು ಎಲ್ಲರಿಗೂ ಗೊತ್ತು. ಅದರ ಬಗ್ಗೆ ಬಹುಮಟ್ಟಿನ ಮಾಹಿತಿ ಕೂಡ ಲಭ್ಯವಿದೆ. ಪ್ರತಿ ವರ್ಷ "ಬ್ರೆಸ್ಟ್ ಕ್ಯಾನ್ಸರ್ ಡೇ" ಆಚರಿಸಿ ಜನರಲ್ಲಿ ಅದರ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದರೆ, ಪುರುಷ ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ಅದು ಸಾಧ್ಯವೆಂದು ಅನೇಕರು ನಂಬಲಾರರು. ಆದರೆ, ಅಂಕಿಅಂಶಗಳು ಹೇಳುವ ಕತೆಯೇ ಬೇರೆ.

ಬ್ರಿಟನ್ನಿನಲ್ಲಿ ಪ್ರತಿ ವರ್ಷ ಸುಮಾರು 250 ಪುರುಷರಲ್ಲಿ ಸ್ತನ ಕ್ಯಾನ್ಸರ್ ತೋರುತ್ತದೆಂದು ವರದಿಯಾಗಿದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ಪ್ರತಿ ವರ್ಷ ಸುಮಾರು 1800 ಪುರುಷ ಸ್ತನ ಕ್ಯಾನ್ಸರ್ಗಳನ್ನು ಪತ್ತೆಹಚ್ಚಲಾಗುತ್ತಿದೆ. ಅದು ಒಟ್ಟು ಸ್ತನ ಕ್ಯಾನ್ಸರ್ನ (ಮಹಿಳೆಯರ ಸ್ತನ ಕ್ಯಾನ್ಸರ್ ಸೇರಿ) ಶೇಕಡ ಒಂದು ಭಾಗ.Indian Council of Medical Researchನ ಒಂದು ವರದಿಯಲ್ಲಿ ಬೆಂಗಳೂರಿನಲ್ಲಿ 2001- 2003 ರ ಅವಧಿಯಲ್ಲಿ ಸುಮಾರು 24 ಪುರುಷ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲಾಯಿತು. 11 ಮಂದಿ ಸಾವಿಗೀಡಾದರು. ಅದೇ ಅವಧಿಯಲ್ಲಿ 1781 ಸ್ತ್ರೀ ಸ್ತನ ಕ್ಯಾನ್ಸರ್ ದಾಖಲಾಗಿತ್ತು. 340 ಮರಣ ಹೊಂದಿದರು.

ಸ್ತನ ಒಂದು ಸಂಕೀರ್ಣ ಅಂಗ. ಎಳೆ ಕೂಸಿಗೆ ಹಾಲುಣಿಸುವುದು ಅದರ ಪರಮೋದ್ದೇಶ. ಅದಕ್ಕಾಗಿ ಅದರಲ್ಲಿ ವಿವಿಧ ಅಂಗಾಂಶಗಳ ಒಂದು ಜಾಲವೇ ಇದೆ. ಹುಟ್ಟಿನಿಂದಲೇ ಮಗುವಿನಲ್ಲಿ- ಅದು ಹೆಣ್ಣಾಗಲಿ, ಗಂಡಾಗಲಿ- ಸ್ತನದ ಅಂಗಾಂಶಗಳು ಇರುತ್ತವೆ. ಹೆಣ್ಣು ಮಗು ಪ್ರೌಡಾವಸ್ಥೆಗೆ ಬಂದಾಗ ಸ್ತನಗಳು ಬೆಳೆದು ಪಕ್ವಗೊಳ್ಳುತ್ತವೆ.  ಗಂಡು ಮಗು ಬೆಳೆದಂತೆ ಸ್ತನಗಳು ಗಣನೀಯವಾಗಿ ವೃದ್ಧಿಯಾಗುವುದಿಲ್ಲ. ಆದರೆ ಈ ಅಂಗಾಂಶಗಳ ಕೋಶಗಳಲ್ಲಿ ಯಾವುದೇ ಕೆಲವು ಕೋಶಗಳು ಅಸಹಜವಾಗಿ ವಿಭಜಿಸಲಾರಂಭಿಸಿದರೆ ಅದು ಪುರುಷ ಸ್ತನ ಕ್ಯಾನ್ಸರ್ಗೆ ನಾಂದಿಯಾಗಬಹುದು. ಕಾಲ ಕ್ರಮೇಣ ವಿಭಜನೆ ತೀವ್ರಗೊಂಡು ಗೆಡ್ಡೆಯ ರೂಪ ತಾಳುವುದು. ಅಷ್ಟೇ ಅಲ್ಲ. ಅದು ಇತರ ಅಂಗಾಂಗಗಳಿಗೂ ಹರಡಬಹುದು.

ಕಾರಣಗಳು:

ಪುರುಷ ಕ್ಯಾನ್ಸರ್ಗೆ ಅನೇಕ ಕಾರಣಗಳುಂಟು. ಅದರಲ್ಲಿ ವಯಸ್ಸೂ ಒಂದು. ಹಿರಿಯರಲ್ಲಿ (ಸರಾಸರಿ 67 ವರ್ಷ ವಯಸ್ಸು) ಸಾಧ್ಯತೆ ಜಾಸ್ತಿ. ಮತ್ತೊಂದು ಕಾರಣ ಲಿಂಗ ನಿರ್ಧಾರಕ ಹಾರ್ಮೋನ್ಗಳ ಪ್ರಮಾಣದಲ್ಲಿ ಆಗುವ ವ್ಯತ್ಯಾಸಗಳು. ಮನುಷ್ಯನಲ್ಲಿ ಲಿಂಗ ನಿರ್ಧಾರಕ ಗುಣಲಕ್ಷಣಗಳ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನ್ಗಳಲ್ಲಿ  ಟೆಸ್ಟೋಸ್ಟಿರೋನ್ ಮತ್ತು ಈಸ್ಟ್ರೊಜೆನ್ ಪ್ರಮುಖವಾದವು. ಪುರುಷ ಲಕ್ಷಣಗಳಾದ ದೇಹದ ಆಕಾರ, ಗಡ್ಡ, ಮೀಸೆ, ವೃಷಣಗಳ ಬೆಳವಣಿಗೆ, ವೀರ್ಯಾಣು ಉತ್ಪಾದನೆ, ಇತ್ಯಾದಿಗಳಿಗೆ ಟೆಸ್ಟೋಸ್ಟಿರೋನ್ ಕಾರಣ. ಅದೇರೀತಿ ಸ್ತ್ರೀ ಲಕ್ಷಣಗಳಾದ ಸ್ತನಗಳ ಬೆಳವಣಿಗೆ, ಅಂಡೋತ್ಪತ್ತಿ,  ಋತುಚಕ್ರ ಇತ್ಯಾದಿಗಳಿಗೆ ಈಸ್ಟ್ರೊಜೆನ್ ಕಾರಣ. ಆದರೆ, ಪುರುಷನಲ್ಲಿ ಈಸ್ಟ್ರೊಜೆನ್, ಸ್ತ್ರೀಯಲ್ಲಿ ಟೆಸ್ಟೋಸ್ಟಿರೋನ್ ಉತ್ಪತ್ತಿಯಾಗುವುದಿಲ್ಲವೆಂದೇನಲ್ಲ. ಸ್ವಲ್ಪ ಮಟ್ಟಿಗೆ ಆಗುತ್ತವೆ. ಅವಶ್ಯವೂ ಹೌದು. ಆದರೆ ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಅವುಗಳ ನಡುವೆ ಒಂದು ಸಮತೋಲನವಿರಬೇಕು. ಪುರುಷನಲ್ಲಿ ಈ ಸಮತೋಲನ ಏರುಪೇರಾಗಿ ಈಸ್ಟ್ರೊಜೆನ್ ಪ್ರಮಾಣ ಜಾಸ್ತಿಯಾದರೆ ಸ್ತನ ಅಂಗಾಂಶಕೋಶಗಳ ಅಸಹಜ ವಿಭಜನೆ ಆರಂಭವಾಗಿ ಸ್ತನ ಕ್ಯಾನ್ಸರ್ಗೆ ನಾಂದಿಯಾಗಬಹುದು.

ಈ ಸಮತೋಲನ ಕಾಪಾಡುವುದರಲ್ಲಿ ಯಕೃತ್ತು ಪಾತ್ರವಹಿಸುತ್ತದೆ. ಸಿರೋಸಿಸ್ ಮುಂತಾದ ಕೆಲವು ರೋಗಗಳಿಂದಾಗಿ ಯಕೃತ್ತಿನ ಕೋಶಗಳು ನಾಶವಾಗುವುದರಿಂದ ಹಾರ್ಮೋನ್ಗಳ ಸಮತೋಲನಕ್ಕೆ ಭಂಗ ಉಂಟಾಗುತ್ತದೆ. ಕ್ಲೆಯಿನ್ಫೆಲ್ಟರ್ ಸಿಂಡ್ರೋಮ್ ಎಂಬ ಆನುವಂಶಿಕ ರೋಗದಲ್ಲಿ ಪುರುಷ ದೇಹಕೋಶಗಳಲ್ಲಿ ಒಂದಕ್ಕಿಂತ ಹೆಚ್ಚು ಘಿ- ಕ್ರೋಮೊಸೊಮ್ಗಳಿರುತ್ತವೆ. ಅಂತಹ ಪುರುಷರಲ್ಲಿ ಈಸ್ಟ್ರೊಜೆನ್ ಪ್ರಮಾಣ ಅಧಿಕವಾಗಿರುತ್ತದೆ. ಇದಲ್ಲದೆ ಹೃದಯರೋಗ, ರಕ್ತ ಒತ್ತಡ ಮುಂತಾದವುಗಳ ಚಿಕಿತ್ಸೆಯಲ್ಲಿ ಸೇವಿಸುವ ಕೆಲವು ಔಷಧಿಗಳು ಹಾರ್ಮೋನ್ಗಳ ಸಮತೋಲನವನ್ನು ಏರುಪೇರು ಮಾಡಬಲ್ಲವು. ಬೊಜ್ಜು ಕೂಡ ಇದಕ್ಕೆ ಕಾರಣವಾಗಬಹುದು. ಮತ್ತೆ ಕೆಲವು ಸಂದರ್ಭಗಳಲ್ಲಿ ಇತರ ಲೈಂಗಿಕ ಹಾರ್ಮೋನ್ಗಳನ್ನು ಉತ್ಪತ್ತಿ ಮಾಡುವ ವೃಷಣ, ಆಡ್ರಿನಲ್ ಗ್ರಂಥಿಗಳು, ಪಿಟ್ಯೂಟರಿ ಗ್ರಂಥಿಗಳು ಇವುಗಳಲ್ಲಿನ ನ್ಯೂನತೆಗಳಿಂದಾಗಿ ಹಾರ್ಮೋನ್ಗಳ ಸಮತೋಲನ ತಪ್ಪಬಹುದು. ಇದಲ್ಲದೆ ಊoಜgಞiಟಿ ಮತ್ತು ಓoಟಿ-ಊoಜgಞiಟಿ ಟಥಿmಠಿhomಚಿಗಳಿಗೆ ನೀಡುವ ವಿಕಿರಣ ಚಿಕಿತ್ಸೆಯಿಂದಲೂ ಸ್ತನ ಕೋಶಗಳು ಪರಿವರ್ತನೆಗೊಂಡು ಸ್ತನ ಕ್ಯಾನ್ಸರ್ಗೆ ನಾಂದಿಯಾಗಬಹುದು.

ಕೌಟುಂಬಿಕ ಕೊಡುಗೆ:

ನಮ್ಮಲ್ಲಿರುವ ಪ್ರತಿ ಜೀನ್ನ ಒಂದು ಪ್ರತಿಯನ್ನು ತಾಯಿಯಿಂದಲೂ ಮತ್ತೊಂದನ್ನು ತಂದೆಯಿಂದಲೂ ಪಡೆಯುತ್ತೇವೆ. ಹೀಗೆ ಪಡೆದ ಜೀನ್ನಲ್ಲಿ ನ್ಯೂನತೆಗಳೇನಾದರೂ ಇದ್ದಲ್ಲಿ ಅದರ ಪರಿಣಾಮ ನಮ್ಮ ಜೀವಮಾನದಲ್ಲಿ ತೋರಿಬರಬಹುದು. ಅಷ್ಟೇ ಅಲ್ಲ. ಅದನ್ನು ನಾವು ನಮ್ಮ ಪೀಳಿಗೆಗೂ ವರ್ಗಾಯಿಸಬಹುದು.  ಕ್ಯಾನ್ಸರ್ ಒಂದು ಮಾರಕ ರೋಗ. ಅದನ್ನು ತಪ್ಪಿಸಲು ದೇಹದಲ್ಲಿ ಅನೇಕ ರಕ್ಷಣಾ ವ್ಯವಸ್ಥೆಗಳಿವೆ. ಸ್ತನ ಕ್ಯಾನ್ಸರ್ಗೆ ಸಂಬಂಧಪಟ್ಟಂತೆ BRCA1 ಮತ್ತು BRCA2 ಎಂಬ ಎರಡು ಜೀನ್ಗಳು ಕೆಲವು ವಿಶಿಷ್ಟ ಪ್ರೋಟೀನ್ಗಳನ್ನು ಉತ್ಪತ್ತಿ ಮಾಡಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಗಟ್ಟುತ್ತವೆ. ಆದರೆ ಯಾವುದೇ ಕಾರಣದಿಂದ ಈ ಜೀನ್ಗಳಲ್ಲಿ ಪರಿವರ್ತನೆ (Mutation) ಉಂಟಾದರೆ, ಆಗ ಆ ರಕ್ಷಣೆ ಇಲ್ಲವಾಗಿ ವ್ಯಕ್ತಿಯಲ್ಲಿ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ ಅಂತಹ ಕುಟುಂಬದ ಅನೇಕರಲ್ಲಿ- ಅಜ್ಜಿ ,ತಾಯಿ, ತಂಗಿ, ಅಕ್ಕ, ಇತ್ಯದಿ- ರೋಗ ಕಾಣಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಪರಿವರ್ತನೆಗೊಂಡ ಜೀನ್ನನ್ನು ಆನುವಂಶಿಕವಾಗಿ ಪಡೆಯಬಹುದು. ಸ್ತ್ರೀಯರಲ್ಲಿ ಎರಡು ಜೀನ್ಗಳೂ ಪ್ರಭಾವ ಬೀರಬಹುದು. ಪುರುಷರಲ್ಲಿ BRCA2 ಮಾತ್ರ ಪರಿಣಾಮಕಾರಿ.  ಒಟ್ಟು ಸ್ತ್ರೀ ಸ್ತನ ಕ್ಯಾನ್ಸರ್ನ ಶೇಕಡ ಸುಮಾರು 10ರಷ್ಟು ಆನುವಂಶಿಕವಾದದ್ದು, ಅಂತಹ ಕುಟುಂಬಗಳಲ್ಲಿ ಪುರುಷ ಸ್ತನ ಕ್ಯಾನ್ಸರ್ ಕೂಡ ಸಾಮಾನ್ಯಕ್ಕಿಂತ ಸುಮಾರು 2.5 ಪಟ್ಟು ಅಧಿಕವಾಗಿರುತ್ತದೆ. ಯಾವುದೇ ಪುರುಷ ಆನುವಂಶಿಕವಾಗಿ ಸಹಜ BRCA2 ನ್ನೇ ಪಡೆದಿದ್ದರೂ, ಅನೇಕ ಕಾರಣಗಳಿಂದಾಗಿ ಆತನ ಜೀವಿತ ಕಾಲದಲ್ಲಿಯೇ ಅದು ಪರಿವರ್ತನೆಗಳ್ಳಬಹುದು. ಹಾಗಾದಲ್ಲಿ ಆತನಿಗೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಸಾಮಾನ್ಯ ಪುರುಷರಿಗಿಂತಾ 100 ಪಟ್ಟು ಜಾಸ್ತಿಯಾಗುತ್ತದೆ, ಹಾಗೂ ಆತನ ಪೀಳಿಗೆಗೆ ಅದು ಕೌಟುಂಬಿಕ ಕೊಡುಗೆಯಾಗಬಹುದು.

ಪುರುಷ ಸ್ತನ ಕ್ಯಾನ್ಸರ್ನ ಚಿಹ್ನೆಗಳೇನು? ಆಶ್ಚರ್ಯವೆಂದರೆ, ಪುರುಷ ಹಾಗೂ ಸ್ತ್ರೀ ಸ್ತನ ಕ್ಯಾನ್ಸರ್ಗಳಲ್ಲಿ ಒಂದೇ ರೀತಿಯ ಚಿಹ್ನೆಗಳು ತೋರಿಬರುತ್ತವೆ- ಸ್ತನ ಅಥವ ಕಂಕುಳಲ್ಲಿ ಸಣ್ಣ, ಅಷ್ಟೇನೂ ನೊವಿಲ್ಲದ ಗೆಡ್ಡೆ, ಸ್ತನದ ತೊಟ್ಟು ಒಳಗೆ

ಮಡುಚಿಕೊಂಡಿರುವುದು, ತೊಟ್ಟಿನಿಂದ ಕೀವಿನ ವಿಸರ್ಜನೆ- ಕೆಲವೊಮ್ಮೆ ರಕ್ತಭರಿತ, ಸ್ತನದ ಆಕಾರ, ಗಾತ್ರದಲ್ಲಿ ವ್ಯತ್ಯಾಸ, ಹೀಗೆ. ರೋಗ ತಪಾಸಣೆಯಲ್ಲೂ ಏನೂ ವ್ಯತ್ಯಾಸವಿಲ್ಲ. ಗೆಡ್ಡೆ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಸ್ವಯಂ ಪರೀಕ್ಷೆ (Self-breast examination),  ಮಾಡಿಕೊಳ್ಳುವುದು, ಸ್ತನ ಘಿ-ರೇ (Mammography), ಕೊನೆಗೆ ಬಯಾಪ್ಸಿ- ಶಂಕಿತ ಭಾಗದಿಂದ ಕೆಲವು ಜೀವಕೋಶಗಳನ್ನು ತೆಗೆದು ಪರೀಕ್ಷಿಸುವುದು, ಇವೆಲ್ಲ ರೋಗ ತಪಾಸಣೆಯ ಕ್ರಮಗಳು. ಇನ್ನು ಚಿಕಿತ್ಸೆಯ ಕ್ರಮವೂ ಅಷ್ಟೆ. ರೋಗ ಬಹುಮಟ್ಟಿಗೆ ಮುಂದುವರಿದಿದ್ದರೆ ಶಸ್ತ್ರಚಿಕಿತ್ಸೆಮಾಡಿ ಕ್ಯಾನ್ಸರ್ ಸ್ತನವನ್ನು ತೆಗೆದುಹಾಕುವುದು (Mastectomy). ಆರಂಭದ ಹಂತದಲ್ಲಿದ್ದರೆ, ವಿಕಿರಣ ಅಥವ ಕೆಮೊ ಚಿಕಿತ್ಸೆ. ಹಾರ್ಮೋನ್ ಸಮತೋಲನದಲ್ಲಿ ಉಂಟಗಿರುವ ಏರುಪೇರುಗಳನ್ನು ಸರಿಪಡಿಸಲು ಕೆಲವೊಮ್ಮೆ ಹಾರ್ಮೋನ್ ಚಿಕಿತ್ಸೆಯನ್ನೂ ನೀಡಬಹುದು. ಅನೇಕ ಸಂದರ್ಭಗಳಲ್ಲಿ ಈ ನಾಲ್ಕೂ ವಿಧಾನಗಳನ್ನು ವಿವಿಧ ಪ್ರಮಾಣಗಳಲ್ಲಿ ಬಳಸಬಹುದು.

ಪುರುಷರಲ್ಲಿ ಸ್ತನ ಕ್ಯಾನ್ಸರ್ನ್ನೇ ಹೋಲುವ ಮತ್ತೊಂದು ಪರಿಸ್ಥಿತಿ Gynecomastia-- ಸ್ತನಗಳು ಅಸಹಜವಾಗಿ ಬೆಳೆದು ದೊಡ್ಡದಾಗುವುದು.  ಹಾರ್ಮೋನ್ಗಳ ಸಮತೋಲನದಲ್ಲಿ ಆಗುವ ಏರುಪೇರುಗಳೇ ಇದಕ್ಕೂ ಕಾರಣ. ಇದು ಕ್ಯಾನ್ಸರ್ ಅಲ್ಲ. ಆದರೆ, ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗಬಹುದು.

ವಿಪರ್ಯಾಸವೆಂದರೆ, ಬಹುಮಂದಿ ಪುರುಷರಿಗೆ ಸ್ತನ ಕ್ಯಾನ್ಸರ್ನ ಸಾಧ್ಯತೆಗಳಾಗಲಿ, ಚಿಹ್ನೆಗಳಾಗಲಿ, ಚಿಕಿತ್ಸಾ ಮಾರ್ಗಗಳಾಗಲಿ- ಇದಾವುದರ ಬಗ್ಗೆ ಅರಿವೇ ಇರುವುದಿಲ್ಲ. ಅಲ್ಲದೆ ಅದರ ಬಗ್ಗೆ ಯಾರೊಂದಿಗೆ ಚರ್ಚಿಸಲೂ ಬಹಳ ಮುಜುಗರ. ಹಾಗಾಗಿ ವೈದ್ಯರನ್ನು ಸಂದರ್ಶಿಸಿ ಚಿಕಿತ್ಸೆ ಪಡೆಯುವವೇಳೆಗೆ  ರೋಗ ಬಹುಮಟ್ಟಿಗೆ ಮುಂದುವರಿದು (Stage IV), ಚಿಕಿತ್ಸೆಯನಂತವೂ ಶೇಕಡ 70ರಷ್ಟು ಸಂದರ್ಭಗಳಲ್ಲಿ ಮಾರಣಾಂತಿಕವಾಗುತ್ತದೆ.  ಇದಕ್ಕೆ ಇರುವ ಒಂದೇ ಮಾರ್ಗ ರೋಗದ ಬಗ್ಗೆ ಅರಿತು, ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸುವುದು. ಇತರ ಎಲ್ಲ ಕ್ಯಾನ್ಸರ್ಗಳಂತೆ ಪುರುಷ ಸ್ತನ ಕ್ಯಾನ್ಸರ್ನ್ನೂ ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಅದನ್ನು ಗುಣಪಡಿಸಬಹುದು.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate