অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗ್ಯಾಸ್ಟ್ರಿಕ್‌ ಸಮಸ್ಯೆ

ಮಾನವನನ್ನು ಸತಾಯಿಸುವ ಆರೋಗ್ಯ ಸಮಸ್ಯೆಗಳಲ್ಲಿ, ಗ್ಯಾಸ್ಟ್ರಿಕ್‌ ಸಮಸ್ಯೆ ಮುಂಚೂಣಿಯಲ್ಲಿದೆ. ಉದರದಲ್ಲಿನ ಯಾವುದೇ ಸಮಸ್ಯೆಗೆ  ಗ್ಯಾಸ್ಟ್ರಿಕ್‌ ಎಂಬ ಹಣೆಪಟ್ಟಿ  ಕಟ್ಟುವುದು ಜನರಲ್ಲಿ  ರೂಢಿಯೇ ಆಗಿದೆ. ಆದು ಗ್ಯಾಸ್ಟ್ರಿಕ್‌ ಮಾರಾಯಾ, ಅದಕ್ಕೆ ಹೀಗೆ ಮಾಡಬೇಕು... ನಾನು ಹಾಗೆಯೇ ಮಾಡಿದ್ದು.... ಇತ್ಯಾದಿ ಪುಕ್ಕಟೆ ಸಲಹೆಗಳಂತೂ ಕುಳಿತಲ್ಲೇ ಲಭ್ಯ .

ಇಂತಿಪ್ಪ  ಗ್ಯಾಸ್ಟ್ರಿಕ್‌ ಕಾಯಿಲೆಯ ಮುಷ್ಟಿಯಿಂದ  ತಪ್ಪಿಸಿಕೊಂಡವರೇ ಇಲ್ಲ ಎನ್ನಬಹುದು.


ಏನಿದು ಗ್ಯಾಸ್ಟ್ರಿಕ್‌ ಕಾಯಿಲೆ ? ಹಾಗೊಂದು ಕಾಯಿಲೆ ಇದೆಯೇ ? ಇಲ್ಲವೆಂದಾದಲ್ಲಿ ರೋಗಿಗಳೆಲ್ಲಾ ಸುಳ್ಳು ಹೇಳುವರೇ? ಅವರಿಗಿರುವ ಸಮಸ್ಯೆಯೇನು? ಎಂಬೆಲ್ಲಾ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆ ಎಷ್ಟು  ಸರಳವೋ  ಉತ್ತರ ಅಷ್ಟೇ ಜಟಿಲವಾಗಿದೆ; ಆದರೂ ತಿಳಿಯುವ ಪ್ರಯತ್ನ ಮಾಡೋಣ ಬನ್ನಿ .
ಗ್ರೀಕ್‌ ಭಾಷೆಯಲ್ಲಿ  ಗ್ಯಾಸ್ಟರ್‌ ಎಂದರೆ ಜಠರ. ಆ ಆಧಾರದ ಮೇಲೆ ಯೋಚಿಸಿದರೆ, ಗ್ಯಾಸ್ಟ್ರಿಕ್‌ ಎಂದರೆ  ಜಠರದ ಎಂದರ್ಥ, ಉದಾಹರಣೆಗೆ ಗ್ಯಾಸ್ಟ್ರಿಕ್‌ ಅಲ್ಸರ್‌  ಎಂದರೆ ಜಠರದ ಹುಣ್ಣು ಎಂದರ್ಥ. ಆದರೆ ಜನಸಾಮಾನ್ಯರು ನನಗೆ ಗ್ಯಾಸ್ಟ್ರಿಕ್‌ ಆಗಿದೆ ಎನ್ನುವಾಗ ಅವರ ಮನಸ್ಸಿನಲ್ಲಿರುವುದು ಜಠರದ ಅಲ್ಸರ್‌ ಅಲ್ಲ , ಏಕೆಂದರೆ ಜಠರದ ಅಲ್ಸರ್‌ ಉಂಟು ಮಾಡುವ ರೋಗಲಕ್ಷಣಗಳು ಬಹಳ ಸ್ಪಷ್ಟವಾಗಿರುತ್ತವೆ. ಅವೆಂದರೆ ಉದರದ ಮೇಲ್ಭಾಗದಲ್ಲಿ  ಕಾಣಿಸುವ ಭೋಜನಾನಂತರದ ಉರಿ, ಕೆಲವೊಮ್ಮೆ ವಾಂತಿ... ಇತ್ಯಾದಿ. ಆದರೆ ನಮ್ಮ ಜನರು ಉದರದ ಯಾವುದೇ ಭಾಗದಲ್ಲಿ  ಯಾವುದೇ   ರೀತಿಯ ಅಸಹಜತೆ ( ಉದಾ: ಹಸಿವಾಗದಿರುವಿಕೆ, ಹೊಟ್ಟೆ ಉಬ್ಬರಿಸುವಿಕೆ ಮಲಬದ್ಧತೆ  ತೇಗು ಬರುವುದು, ಹೂಸು ಹೋಗುವಿಕೆ, ಕೆಳಹೊಟ್ಟೆಯಲ್ಲಿ  ನೋವು... ಇತ್ಯಾದಿ ) ಇದ್ದರೂ, ಆದಕ್ಕೆ ಗ್ಯಾಸ್ಟ್ರಿಕ್‌ ಕಾರಣ ಎಂದು ಭಾವಿಸುವುದಿದೆ. ಬೆನ್ನು  ನೋವಿಗೂ ಗ್ಯಾಸ್ಟ್ರಿಕ್‌ ಎನ್ನುವವರಿದ್ದಾರೆ. ಇವೆಲ್ಲ ವನ್ನೂ  ಉಂಟುಮಾಡುವ ಗ್ಯಾಸ್ಟ್ರಿಕ್‌ ಎಂಬ ಕಾಯಿಲೆಯೇ ಇಲ್ಲ  ಎಂದರೆ ಈ ಡಾಕ್ಟ್ರಿಗೆ ಏನೂ ಗೊತ್ತಿಲ್ಲ ಎಂದು ಕೊಳ್ಳುವವರೇ ಜಾಸ್ತಿ.
ಮೇಲ್ಕಾಣಿಸಿದ ಎಲ್ಲಾ ರೋಗಲಕ್ಷಣಗಳು ಉದರದ  ಬೇರೆ ಬೇರೆ ಕಾಯಿಲೆಗಳಲ್ಲಿ  ಒಟ್ಟಾಗಿ ಅಥವಾ  ಬಿಡಿಬಿಡಿಯಾಗಿ ಇರುವುದು ಸಾಧ್ಯ. ಉದಾಹರಣೆಗೆ ಇರಿಟಬಲ್‌ ಬವೆಲ್‌ ಸಿಂಡೋಮ್‌ ಎಂದರೆ ದೊಡ್ಡ ಕರುಳಿನಲ್ಲಿ ಅಸಹಜ ಚಲನೆಗಳು ಇದ್ದವರಿಗೆ ಮಲಬದ್ಧತೆ ಇರಬಹುದು ಆಥವಾ ಆಹಾರ ತಿಂದ ಕೂಡಲೇ ಮಲವಿಸರ್ಜನೆಗೆ ಹೋಗಬೇಕೆಂಬ ಅನುಭವವಾಗಬಹುದು. ತಿಂದದ್ಧು ಜೀರ್ಣವಾಗದೆ ಉಳಿದಾಗ, ಹಸಿವಾಗದೇ  ಇರಬಹುದು. ಹಳಸಿದ ಆಹಾರ ತಿಂದಾಗ ಹೊಟ್ಟೆ  ಉಬ್ಬರಿಸಿದಂತೆ ಆಗಬಹುದು. ಗಬಗಬನೆ ಆಹಾರ ತಿನ್ನುವವರಿಗೆ ತೇಗು ಬರುವುದು ಸಹಜ. ಏಕೆಂದರೆ, ಇವರು ಆಹಾರ ನುಂಗುವಾಗ ಹೆಚ್ಚಿನ ಗಾಳಿಯನ್ನು  ನುಂಗುತ್ತಾರೆ, (ನಮ್ಮೆಲ್ಲರ ಹೊಟ್ಟೆಯಲ್ಲಿನ ಗಾಳಿಯಲ್ಲಿ ಹೆಚ್ಚಿನ ಪಾಲು ನಾವು ಆಹಾರ ಸೇವಿಸುವಾಗ ನುಂಗಿದ ಗಾಳಿಯೇ ಆಗಿರುತ್ತದೆ), ಆದರೆ ಇವೆಲ್ಲಾ ಪ್ರತ್ಯೇಕವಾದ ಮತ್ತು ಪ್ರತ್ಯೇಕ ಚಿಕಿತ್ಸೆ ಬೇಕಾಗುವ ಕಾಯಿಲೆಗಳು. ಇವಲ್ಲದೆ ಪಿತ್ತಕೋಶದ ಕಲ್ಲು, ಮೇದೊಜೀರಕಾಂಗದ ಉರಿಯೂತ, ಲಿವರ್‌ ಕಾಯಿಲೆ, ಹುಳದ ಬಾಧೆ... ಇತ್ಯಾದಿಗಳು ಕೂಡ ಇದೇ ರೀತಿಯ ರೋಗ ಲಕ್ಷಣಗಳನ್ನು ಉಂಟುಮಾಡಬಲ್ಲವು. ಅಪರೂಪಕ್ಕೆ ಕರುಳಿನ ಕ್ಯಾನ್ಸರ್‌ ಕಾಯಿಲೆ  ಕೂಡ ಹೀಗಿಯೇ ವರ್ತಿಸುವುದರಿಂದ, ಪ್ರತಿಯೊಂದಕ್ಕೂ ಗ್ಯಾಸ್ಟ್ರಿಕ್‌ ಎಂದು ಸುಮ್ಮನಾಗುವುದು ಉಚಿತವಲ್ಲ ಎನ್ನಬಹುದು.

ಗ್ಯಾಸ್ಟ್ರಿಕ್‌  ಎಂಬ ಶಬ್ದವನ್ನು  ಇಂಗಿÒàಷ್‌ನಲ್ಲಿ  ಬರೆದಾಗ,ಎಂಬ ಶಬ್ಧ ಅಡಕವಾಗಿರುವುದರಿಂದ,  ಈ ಶಬ್ಧ ಉದರದ ಕಾಯಿಲೆಯ  ಸಂಕೇತವಾಗಿ ಬಳಕೆಗೆ ಬಂದಿರಬಹುದೇನೋ . ಮಾಧ್ಯಮಗಳಲ್ಲಿ  ಬರುವ ಜಾಹೀರಾತುಗಳೂ ಸಹ ಜನರಿಗೆ ಗ್ಯಾಸ್‌ ಎಂಬ ಪೆಡಂಭೂತದ ಹೆದರಿಕೆ ತೋರಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು. ಆದರೆ,  ಸಿದೌªಷಧಿಗಳಿಂದ‌ ಗ್ಯಾಸ್ಟ್ರಿಕ್‌ ಕಾಯಿಲೆ ಬಿಟ್ಟುಹೋಗದು. ಏಕೆಂದರೆ ಗ್ಯಾಸ್ಟ್ರಿಕ್‌  ಎಂದರೆ ಆದೊಂದು ಕಾಯಿಲೆಯಲ್ಲ . ಅದೊಂದು ಮನೋಸ್ಥಿತಿ. ಮಾನವನ  ಮನಸ್ಸಿಗೂ ಜೀರ್ಣಾಂಗದ ಕಾರ್ಯಕ್ಷಮತೆಗೂ  ಹತ್ತಿರದ ಸಂಬಂಧವಿದೆ. ಮೇಲ್ನೋಟಕ್ಕೆ ಈ ಮಾತು ಅಸಂಬದ್ಧ  ಎನಿಸಿದರೂ, ಬೇಸರವಾದಾಗ ಹಸಿವಾಗದಿರುವುದು. ತೀರಾ ಹೆದರಿದಾಗ ಭೇದಿಯಾದಂತೆನಿಸುವುದು, ಕೆಲ ಮಾನಸಿಕ ಅಸ್ವಸ್ಥರಲ್ಲಿ ಹೊಟ್ಟೆ ಬಾಕತನ... ಇತ್ಯಾದಿಗಳನ್ನು ಗಮನಿಸಿದಾಗ ನಿಜವೆನ್ನಿಸದಿರದು.
ಮಾನವನು ತನ್ನ ದೈನಂದಿನ ಜೀವನ ನಿರ್ವಹಣೆಯಲ್ಲಿ  ಸಮತೋಲನವನ್ನು  ಕಳೆದುಕೊಂಡಾಗ ಆತನ ಜೀರ್ಣಾಂಗದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಈ ಅಸಮತೋಲನ, ಆಹಾರ ಸೇವನೆಯಲ್ಲಿರಬಹುದು,  ಕೌಟುಂಬಿಕ ವ್ಯವಹಾರದಲ್ಲಿರಬಹುದು, ಹೊರಗಣ ಕಾರ್ಯಕ್ಷೇತ್ರದಲ್ಲಿರಬಹುದು ಅಥವಾ ದೈನಂದಿನ ಇತರ ಯಾವುದೇ ಚಟುವಟಿಕೆಗಳಲ್ಲಿರಬಹುದು. ತನ್ನ ನೀರಿಕ್ಷೆಗೆ  ತಕ್ಕಂತೆ ತಾನು ಕಾರ್ಯವೆಸಗಲು ಸಾಧ್ಯವಾಗದಾಗ, ಮಾನವನು  ಮಾನಸಿಕವಾಗಿ ಬಳಲುತ್ತಾನೆ. ಆದರಲ್ಲೂ ಇಂದಿನ ಅಸಾಧ್ಯ ವೇಗದ ಜೀವನ ಶೈಲಿಗೆ  ಎಂತಹವರೂ  ಉದ್ವೇಗಕ್ಕೆ ಒಳಗಾಗದೇ ಇರಲಾಗದು. ಗಲಿಬಿಲಿಗೊಂಡ ಮನಸ್ಸು ಜೀರ್ಣಾಂಗಕ್ಕೆ ಸರಿಯಾದ ನಿರ್ದೇಶನ ನೀಡದು. ಹಾಗಾದಾಗ, ವ್ಯಕಿÂಗೆ ಯಾವುದೇ ಒಂದು ರೋಗಲಕ್ಷಣ ಕಾಣಿಸುತ್ತದೆ. ಆದು ಹೊಟ್ಟೆ ಉಬ್ಬರಿಸುವುದಿರಬಹುದು, ಮಲಬದ್ಧತೆ, ಎದೆಯುರಿ, ಬೆನ್ನು ನೋವು... ಇತ್ಯಾದಿ ಏನಾದರೂ ಆಗಬಹುದು. ಅಲ್ಲಿಗೆ ನಮ್ಮ  ಗ್ಯಾಸ್ಟ್ರಿಕ್‌ ಕಾಯಿಲೆ ಪ್ರತ್ಯಕ್ಷವಾದಂತೆಯೇ .


ಈ ಗ್ಯಾಸ್ಟ್ರಿ ಕ್‌ ಸಮಸ್ಯೆಯಿಂದ ಮುಕ್ತಿ  ಪಡೆಯುವುದು ಹೇಗೆ



ಪರಿಹಾರ ಸರಳವಲ್ಲ , ನಿಜ. ಹಾಗೆಂದು ಉದರದ ಸಮಸ್ಯೆಗಳು ಕಾಣಿಸಿಕೊಂಡಾಗಲೆಲ್ಲಾ  ಗ್ಯಾಸ್ಟ್ರಿಕ್‌ ಎಂದೇ ನಿರ್ಲಕ್ಷಿಸಿದರೆ, ಪರಿಹಾರ ಸಾಧ್ಯವಾಗಬಹುದಾದ ಸಮಸ್ಯೆಗಳೂ ಹಾಗೆಯೇ ಉಳಿದು ಬಿಡುತ್ತವೆ . ಉದಾಹರಣೆಗೆ, ಪಿತ್ತಕೋಶದ ಕಲ್ಲು, ಕರುಳಿನ ಹುಣ್ಣು... ಇತ್ಯಾದಿ.

ಗ್ಯಾಸ್ಟ್ರಿ ಕ್‌  ಎಂದು  ತಪ್ಪು  ತಿಳಿವಳಿಕೆಯಿಂದ ಕ್ಯಾನ್ಸರ್‌ನ್ನು ತಿಂಗಳಾನುಗಟ್ಟಲೆ ಅಲಕ್ಷಿಸಿದವರೂ ಇದ್ದಾರೆ.  ಆದ್ದರಿಂದ, ಯಾವುದೇ ಉದರ ರೋಗ ಲಕ್ಷಣಗಳಿದ್ದು , ಅವು ಕೆಲದಿನಗಳಲ್ಲಿ  ಪರಿಹಾರವಾಗದ್ದಿದರೆ, ತಜ್ಞರ ಸಲಹೆ ಒಂದು ಬಾರಿಯಾದರೂ ಪಡೆಯುವುದು ಶ್ರೇಯಸ್ಕರ. ಹಲವು ಸಲ ಬರೀ ರೋಗಲಕ್ಷಣದ ವಿವರಣೆ ಕೇಳಿ ಕೊಡುವ  ಔಷಧಿಯೇ ಸಾಕಾಗಬಹುದು. ಕೆಲವೊಮ್ಮೆ ಮಲಪರೀಕ್ಷೆ , ಅಲ್ಟ್ರಾಸೌಂಡ್‌...
ಇತ್ಯಾದಿ ಸರಳ  ತಪಾಸಣೆಗಳು

ಬೇಕಾಗ ಬಹುದು. ಒಮ್ಮೊಮ್ಮೆ,  ಅದರಲ್ಲೂ  ಸಾಕಷ್ಟು ದಿನಗಳಿಂದ  ನರಳುತ್ತಿರುವ ರೋಗಿಗೆ ಎಂಡೊಸ್ಕೋಪಿ, ಸಿ.ಟಿ. ಸ್ಕ್ಯಾನ್‌ ಇತ್ಯಾದಿ ಘನ ತಪಾಸಣೆಗಳ ಸಲಹೆ ಮಾಡಲಾಗುತ್ತದೆ. ಆಪರೂಪಕ್ಕೆ ರೋಗ ಪತ್ತೆಗಾಗಿಯೇ ಉದರದರ್ಶಕ ಪರೀಕ್ಷೆ  ನಡೆಸಬೇಕಾಗುವುದು ಉಂಟು.

ವಿಶೇಷವೆಂದರೆ, ಹಲವು ರೋಗಿಗಳಲ್ಲಿ  ಯಾವುದೇ ತಪಾಸಣೆಯಲ್ಲಿಯೂ ದೋಷ ಕಂಡು ಬರುವುದಿಲ್ಲ. ಇವರೇ ನಿಜವಾದ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳು  ಎನ್ನಬಹುದು. ಇವರ ಸಮಸ್ಯೆಯ ಪರಿಹಾರ ಕ್ಷಿಷ್ಟ . ಮೊಟ್ಟ ಮೊದಲಾಗಿ  ಅವರ ಆಹಾರ ಕ್ರಮವನ್ನು ಪರಿಶೀಲಿಸಿ, ಪರಿಷ್ಕರಿಸಿಕೊಳ್ಳಬೇಕಾದಲ್ಲಿ  ಸೂಕ್ತ ಸಲಹೆ ನೀಡಲಾಗುತ್ತದೆ. ನಾವು ತಿನ್ನುವ ಆಹಾರಕ್ಕೂ  ಉದರದ ಸಮಸ್ಯೆಗಳಿಗೂ  ನೇರ ಸಂಬಂಧವಿರುವುದರಿಂದ, ಯಾವ ಆಹಾರ ತಿಂದ ತರುವಾಯ ಸಮಸ್ಯೆ ಉಲ್ಬಣಿಸುತ್ತದೆ ಎಂಬುದನ್ನು  ರೋಗಿಯೇ ಪರಿಶೀಲನೆಯ ಮೂಲಕ ಪತ್ತೆ ಹಚ್ಚಿ , ಆಹಾರವನ್ನು ಬದಲಿಸಿಕೊಳ್ಳಬೇಕು.

ಉದಾಹರಣೆಗೆ, ಹಲವು ಜನರಲ್ಲಿ ಗೋಧಿ, ಹಾಲು, ಬೇಳೆ ಇತ್ಯಾದಿ ಆಹಾರಗಳು ಸರಿಯಾಗಿ ಪಚನವಾಗುವುದಿಲ್ಲ . ಅವರಿಗೆ  ಈ ತೆರನ ಆಹಾರ ಸೇವನೆಯ ನಂತರ ಉದರದ ಸಮಸ್ಯೆ ತಲೆದೋರುತ್ತಿದ್ದಲ್ಲಿ, ಅಂತಹವರು ಆಯಾ ಆಹಾರ-ಪದಾರ್ಥಗಳನ್ನು  ವರ್ಜಿಸದೇ ಅನ್ಯ ದಾರಿಯಿಲ್ಲ .
ಇನ್ನು ದೈನಂದಿನ ಆಹಾರ ಸೇವನೆಯೂ ನಿಯಮಿತ ಸಮಯದಲ್ಲಿ  ನಡೆಯಬೇಕಾದದ್ದು ಆವಶ್ಯಕ.ಒಂದೊಂದು ದಿನ ಒಂದೊಂದು ಸಮಯದಲ್ಲಿ ಊಟ-ತಿಂಡಿ ಮಾಡಿದ್ದೇ ಆದರೆ, ಮಾನವನ ಜೀರ್ಣಾಂಗ ವ್ಯೂಹ ಗಲಿಬಿಲಿಯಾಗಿ, ಸರಿಯಾಗಿ ಕೆಲಸ ಮಾಡದು. ಆಹಾರ ಸೇವಿಸುವಾಗ  ಅವಸರಿಸದೇ ಇರುವುದು  ಮತ್ತು ಹೆಚ್ಚು  ಮಾತನಾಡದೇ ಇರುವುದು ಅಪೇಕ್ಷಣೀಯ. ಗಬಗಬನೇ ನುಂಗುವುದರಿಂದ
ಇಲ್ಲವೇ ಎಡೆಬಿಡದೇ ಮಾತನಾಡುತ್ತಲೇ ತಿನ್ನು ವುದರಿಂದ ಆವಶ್ಯಕತೆಗಿಂತ ಹೆಚ್ಚಿನ ಗಾಳಿ  ನುಂಗಲ್ಪಟ್ಟು,  ಜಠರವನ್ನು ಸೇರುತ್ತದೆ. ಭರ್ಜರಿ ಊಟದ ನಂತರ ಢರ್ರೆಂದು ಹೊರಬರುವ ತೇಗು ನಾವು ನುಂಗಿದ  ಗಾಳಿಯಲ್ಲದೇ ಬೇರೇನೂ ಅಲ್ಲ .

ಆಹಾರದಲ್ಲಿ ಮೊಸರು ಆಥವಾ ಮಜ್ಜಿಗೆಯನ್ನು  ಬಳಸುವುದು ಜೀರ್ಣಾಂಗದ ಆರೋಗ್ಯಕ್ಕೆ ಪೂರಕವೆಂದು  ಈಗಾಗಲೇ ದೃಢ ಪಟ್ಟಿ ದೆ. ಭಾರತೀಯ ಸಂಸ್ಕೃತಿಯಲ್ಲಿ ಊಟದ ಕೊನೆಗೆ ಮಜ್ಜಿಗೆ ಅಥವಾ  ಮೊಸರಿನ ಬಳಗೆ ಪ್ರಾಚೀನ ಕಾಲದಿಂದ ಬಂದಿದೆಯಾದರೂ, ಪ್ರೊ ಬಯಾಟಿಕ್‌  ಎಂಬ ಹೆಸರಿನಲ್ಲಿ  ಮೊಸರಿನಲ್ಲಿನ ಅಂಶವಿರುವ  ಗುಳಿಗೆ ಬಳಸಲ್ಪಟ್ಟ  ನಂತರ ನಾವೂ ಅದರ ಮಹತ್ವವನ್ನು  ಮನಗಂಡಿದ್ದೇವೆ. ಹಾಗೆಯೇ ಪ್ರಕೃತಿದತ್ತವಾದ ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳೂ ಜೀರ್ಣಾಂಗದ ಸಮಸ್ಯೆಗಳನ್ನು  ನಿವಾರಿಸಲು ಸಹಕರಿಸುತ್ತವೆ.

ಇವೆಲ್ಲದರಷ್ಟೇ  ಮುಖ್ಯವಾದದ್ದೆಂದರೆ ರೋಗಿಯ ಮನೋಸ್ಥಿತಿ. ತನಗೇನೋ ಘನವಾದ  ಕಾಯಿಲೆಯಿದೆ ಎಂಬ ಸಂಶಯದ ಕೀಟ ಒಮ್ಮೆ ಮನಸ್ಸನ್ನು ಹೊಕ್ಕರೆ, ಉದರದ ಮಟ್ಟಿಗೆ ಅದು ನಿಜವೇ ಆಗಿ ಬಿಡುತ್ತದೆ. ಎಷ್ಟೆಂದರೆ, ಕೆಲವೊಮ್ಮೆ ಇದಕ್ಕೆ ಮನೋವಿಶ್ಲೇಷಣಾತ್ಮಕ ಚಿಕಿತ್ಸೆಯೇ ಬೇಕಾಗಬಹುದು. ಆದ್ದರಿಂದಲೇ ಹಲವಾರು ರೋಗಿಗಳು ಯೋಗ, ಪ್ರಾಣಾಯಾಮ   ಇತ್ಯಾದಿ ಮನೋಶಮನ  ಕ್ರಿಯೆಗಳಿಂದ ಉದರ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳಲು ಶಕ್ತರಾಗುತ್ತಾರೆ.ಆಂತೂ ಈ ಗ್ಯಾಸ್ಟ್ರಿಕ್‌ ಎಂಬ ಮೂರಕ್ಷರದ ಸಮಸ್ಯೆ


ರೋಗಿಗಳ ಜೊತೆಗೆ ತಜ್ಞರನ್ನು ಕೂಡ ಗೋಳು ಹೊಯ್ದುಕೊಳ್ಳುತ್ತಿರುವುದು ಸುಳ್ಳಲ್ಲ.

ಮೂಲ : ಅರೋಗ್ಯ ವಾಣಿ

ಕೊನೆಯ ಮಾರ್ಪಾಟು : 7/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate