অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾನಸಿಕ ತುಮುಲ

ಮೂರು ದಿನಗಳ ಹಿಂದಷ್ಟೇ ಆ ಮಹಿಳೆಗೆ ಮಧುಮೇಹ ಇರುವುದು ದೃಢಪಟ್ಟಿತ್ತು. ತನಗೆ ಮಧುಮೇಹ ಇದೆ ಎಂಬುದನ್ನು ಅವರಿಗೆ ಒಪ್ಪಿಕೊಳ್ಳಲಾಗುತ್ತಿರಲಿಲ್ಲ. ಇನ್ನು ತಮ್ಮ  ದಿನಚರಿ ರೂಢಿಸಿಕೊಳ್ಳುವುದು, ಆಹಾರ ಪದ್ಧತಿ ಬದಲಿಸಿಕೊಳ್ಳುವುದು, ನಿಯಮಿತ ವಾಕಿಂಗ್- ವ್ಯಾಯಾಮ ಮಾಡುವುದು ಹೇಗೆ ಎಂದು ಅವರು ಗಾಬರಿಯಾಗಿದ್ದರು.

ಇದನ್ನೆಲ್ಲಾ ಮೊದಲೇ ಮಾಡಿದ್ದರೆ ಮಧುಮೇಹ ಬರುತ್ತಿರಲಿಲ್ಲವೇನೋ, ತಾನೇ ತರಿಸಿಕೊಂಡೆನೇನೂ ಎಂಬ ತಪ್ಪಿತಸ್ಥ ಭಾವನೆ. ಪದೇ ಪದೇ ತಾನು ಡುಮ್ಮಿ, ಕುರೂಪಿ, ಜತೆಗೆ ರೋಗಿಷ್ಟೆಯಾದೆ ಎಂಬ ಬೇಸರ. ಈ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಮತ್ತೆ ವೈದ್ಯರ ಬಳಿ ಓಡಿ ಬಂದಿದ್ದಳು.

ಇನ್ನೊಬ್ಬರಿಗೆ ಮಧುಮೇಹ ಇರುವ ಪತಿಯ ಸಿಟ್ಟು- ಸೆಡವು ಸಹಿಸಲಾಗುತ್ತಿಲ್ಲ ಎಂಬ ಅಸಹಾಯಕತನ. 20 ವರ್ಷದಿಂದ ಟೈಪ್–2 ಡಯಾಬಿಟಿಸ್ ಇರುವ ಪತಿ  ಕಳೆದ ನಾಲ್ಕು ತಿಂಗಳಿಂದ ವಿಪರೀತವಾಗಿ ಆಡುತ್ತಿದ್ದ. ಅತಿರೇಕದ ವರ್ತನೆಯಿಂದ ನಿಮಿಷ ನಿಮಿಷವೂ ಆತಂಕದಿಂದ ಕಳೆಯುವ ಸ್ಥಿತಿ ಅವರದ್ದಾಗಿತ್ತು.

ಮಧುಮೇಹದಂತಹ ಸ್ಥಿತಿ ಎದುರಾದಾಗ ರೋಗಿಯ ಮೇಲೆ ಉಂಟಾಗುವ ಮಾನಸಿಕ ಆಘಾತಕ್ಕೆ ಇವು ಉದಾಹರಣೆಗಳಷ್ಟೆ. ಎಲ್ಲ ದೀರ್ಘಕಾಲೀನ ರೋಗಗಳು ರೋಗಿಯ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತವೆ. ಆಧುನಿಕ ಔಷಧಗಳು ಕಾಯಿಲೆಗಳನ್ನು ವಾಸಿ ಮಾಡಬಹುದು ಅಥವಾ ನಿಯಂತ್ರಿಸಬಹುದು ಆದರೆ ಆತನನ್ನು ಭಾವನಾತ್ಮಕವಾಗಿ ಸದೃಢಗೊಳಿಸಲಾರವು. ಈ ರೋಗಗಳಿಂದ ಮನುಷ್ಯ ಸಾವನ್ನು ತಪ್ಪಿಸಿಕೊಂಡರೂ ಗುಣಮಟ್ಟದ ಜೀವನ ಸಾಗಿಸುವುದು ಕಷ್ಟ. ಇದೇ ಆತನನ್ನು ಭಾವನಾತ್ಮಕವಾಗಿ ಹೈರಾಣ ಮಾಡುವುದು. ಬೇಕಿದ್ದು ತಿನ್ನುವಂತಿಲ್ಲ, ಕೆಲವು ಪ್ರಕರಣಗಳಲ್ಲಿ ಕುಟುಂಬದ ಮೇಲೆ ಮಿತಿಮೀರಿದ ಅವಲಂಬಿತರಾಗಬೇಕಾಗುವುದು, ಜತೆಗೆ ಚಿಕ್ಕ ವಯಸ್ಸಿನಲ್ಲೇ ಬಂದರೆ ಉದ್ಯೋಗ- ಸಂಬಂಧಗಳ ಮೇಲೂ ಪರಿಣಾಮ ಬೀರುವುದರಿಂದ ರೋಗಿಯ ಮಾನಸಿಕ ತುಮುಲ ಕೆಲ ಬಾರಿ ಹತೋಟಿ ಮೀರಿ ಬಿಡುತ್ತದೆ.  ಇಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಅಂಶದ ಏರಿಳಿತ ರೋಗಿಯ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ.  ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ಡಯಾಬಿಟಿಸ್ ಬಂತು ಎಂದೊಡನೆಯೇ ತೂಕ ಇಳಿಸಿಕೊಳ್ಳಿ, ಸಕ್ಕರೆ ಇಲ್ಲದ ಪದಾರ್ಥ ತಿನ್ನಿ, ವ್ಯಾಯಾಮ ಮಾಡಿ, ಆಗಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಪಾಸಣೆ ಮಾಡಿಕೊಳ್ಳಿ, ಜತೆಗೆ ಮಾತ್ರೆಯನ್ನೋ ಅಥವಾ ಇನ್ಸುಲಿನ್ ಇಂಜೆಕ್ಷನ್ ಅನ್ನೋ ತೆಗೆದುಕೊಳ್ಳಿ ಎಂದು ವೈದ್ಯರು ಹೇಳುತ್ತಾರೆ. ಇದೆಲ್ಲ ಒಂದು ರೀತಿಯಲ್ಲಿ ರೋಗಿಯನ್ನು ಗೊಂದಲಕ್ಕೀಡು ಮಾಡುವುದು ಸತ್ಯ. ಮಧುಮೇಹ ಪತ್ತೆಯಾದ ಕೂಡಲೇ ಉಂಟಾಗಬಹುದಾದ ಆಘಾತಗಳು ಹಾಗೂ ವಹಿಸಬೇಕಿರುವ ಎಚ್ಚರಿಕೆ, ಅನುಸರಿಸಬೇಕಿರುವ ಮಾರ್ಗಗಳು ಇಲ್ಲಿವೆ:

ಒಪ್ಪಿಕೊಳ್ಳದೇ ಇರುವುದು

ಮೊದಲಿಗೆ ತಮಗೆ ಮಧುಮೇಹವಿದೆ ಎಂಬುದನ್ನು ರೋಗಿ ಒಪ್ಪುವುದಿಲ್ಲ. 2-3 ಸಲ ದೃಢಪಟ್ಟ ಮೇಲೂ ತಾನು ಈಚೆಗೆ ತಿಂದಿದ್ದ ಸಿಹಿ ತಿನಿಸುಗಳಿಂದ ಸಕ್ಕರೆ ಅಂಶ ಏರಿಕೆಯಾಗಿದೆಯೇನೋ ಎಂದು ಸಂಶಯ ಪಡುತ್ತಾನೆ. ಇದು  ಮೊದಲ ಪ್ರತಿಕ್ರಿಯೆ. ಒಂದು ರೀತಿಯಲ್ಲಿ ಇದು ಒಳ್ಳೆಯದು. ನಿಧಾನವಾಗಿ ರೋಗಿ ಮಧುಮೇಹ ಇದೆ ಎಂಬುದನ್ನು ನಂಬುವುದರಿಂದ ಆಘಾತ ಆಗದು.  ಆದರೆ ಆದಷ್ಟು ಬೇಗ ರೋಗವಿದೆ ಎಂಬುದನ್ನು ಒಪ್ಪಿಕೊಂಡು ನಿಗದಿತ ಪಥ್ಯಾಹಾರ, ವ್ಯಾಯಾಮ ಜತೆಗೆ ಔಷಧ ಸೇವನೆಗೆ ಒಗ್ಗಿಕೊಳ್ಳುವುದು ಅತ್ಯಗತ್ಯ.

ಗೊಂದಲ

ಬಹಳಷ್ಟು ಮಂದಿ ತಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟ ಹಾಗೂ ಔಷಧಗಳ ಕುರಿತು ಗೊಂದಲಕ್ಕೊಳಗಾಗುತ್ತಾರೆ.  ಯಾವ ಚಿಕಿತ್ಸೆಗೆ ಒಗ್ಗಿಕೊಳ್ಳಬೇಕು? ಯಾವ ಪದ್ಧತಿಯಲ್ಲಿ ರೋಗ ವಾಸಿಯಾಗಬಹುದು ಇಂಥವೇ ಅನುಮಾನಗಳ ನಡುವೆ ಹಲವು ವೈದ್ಯರನ್ನು ಎಡತಾಕುತ್ತಾರೆ. ಇದು ಗೊಂದಲವನ್ನು ಸೃಷ್ಟಿಸುತ್ತದೆ. ಕುಟುಂಬದ ವೈದ್ಯರ ಸಲಹೆಯಂತೆ ಮುಂದುವರಿಯುವುದು ಒಳಿತು.  ತಮ್ಮ ಸಕ್ಕರೆ ಮಟ್ಟ, ವ್ಯಾಯಾಮ, ಪಥ್ಯದ ಕುರಿತು ಡೈರಿ ಮಾಡಿಟ್ಟುಕೊಳ್ಳುವುದು ಉತ್ತಮ. ವೈದ್ಯರ ಬಳಿ ಏನೇನು ಕೇಳಿಕೊಳ್ಳಬೇಕು ಎಂಬ ತಿಳಿವಳಿಕೆಯೂ ಬರುತ್ತದೆ.

ಸಿಟ್ಟು

ನನಗೇಕೆ ಈ ರೋಗ ಬಂತು?  ಹತೋಟಿಗೆ ಯಾಕೆ ಬರುತ್ತಿಲ್ಲ ಎಂಬ ಸಿಟ್ಟೂ ಕಾಡಬಹುದು. ಆದರೆ ಇದೇ ಸಿಟ್ಟಿನಿಂದ ಕಟ್ಟುನಿಟ್ಟಿನ ಪಥ್ಯ ಮಾಡಿ, ದೇಹದಂಡನೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು.

ಒತ್ತಡ

ಮಾನಸಿಕ ಒತ್ತಡ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿಸುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿವೆ. ಜತೆಗೆ ಒತ್ತಡದಲ್ಲಿ ಹೊತ್ತೊತ್ತಿಗೆ ಊಟ ಮಾಡುವುದು, ಮಾತ್ರೆ ತೆಗೆದುಕೊಳ್ಳುವುದು, ವ್ಯಾಯಾಮ ಎಲ್ಲ ಏರುಪೇರಾಗಿ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಸಕಾರಾತ್ಮಕ ಯೋಚನೆಯಿಂದ, ಶಿಸ್ತುಬದ್ಧವಾಗಿ ಬದುಕುವ ನಿರ್ಣಯದಿಂದ ಒತ್ತಡವನ್ನು ನಿಭಾಯಿಸಬಹುದಾಗಿದೆ.

ದುಃಖ

ಬಹಳ ಸಲ ಯಾರಿಗೂ ಬರದ ರೋಗವೊಂದು ತಮ್ಮ ಬದುಕನ್ನೇ ನುಂಗಿದೆ. ಸಾಯುವವರೆಗೂ ಮಾತ್ರೆಗಳೊಂದಿಗೆ ಬದುಕಬೇಕು ಎನ್ನುವ ದುಃಖ ಬಹುತೇಕ ಜನರಿಗೆ ಕಾಡುತ್ತದೆ. ಆದರೆ ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬ ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗುತ್ತದೆ.

ಲೈಂಗಿಕ ದೌರ್ಬಲ್ಯ

ಇನ್ಸುಲಿನ್ ಡೋಸ್ ಆರಂಭಿಸುವಾಗ ಮಾನಸಿಕ ಏರು ಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಲೈಂಗಿಕ ದೌರ್ಬಲ್ಯವೂ ಕಾಣಿಸಿಕೊಳ್ಳುತ್ತದೆ.

ಹಲವು ವರ್ಷಗಳಿಂದ ಡಯಾಬಿಟಿಸ್ ಇದ್ದವರಿಗೂ ಕೀಳರಿಮೆ, ತಾನು ಸಂಪೂರ್ಣನಲ್ಲ ಎಂಬ ಭಾವ, ಆತಂಕ, ಒತ್ತಡಗಳು ಆರಂಭವಾಗಿ ಖಿನ್ನತೆ, ಲೈಂಗಿಕ ನಿರಾಸಕ್ತಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವು ಸಂಬಂಧಗಳನ್ನೇ ನಾಶ ಮಾಡಬಹುದು.

ಅಧ್ಯಯನವೊಂದರ ಪ್ರಕಾರ ಡಯಾಬಿಟಿಸ್ ಇರುವ ನಾಲ್ವರು ಪುರುಷರಲ್ಲಿ ಒಬ್ಬರಿಗೆ ಲೈಂಗಿಕ ದೌರ್ಬಲ್ಯ ಉಂಟಾಗುವುದು ಕಂಡುಬಂದಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಿಮಗೆ ಡಯಾಬಿಟಿಸ್ ಬಂತು ಎಂದೊಡನೆ ಬೇರೆ ರೀತಿ ವರ್ತಿಸುವಂತೆ ಭಾಸವಾಗುತ್ತದೆ. ಇದರಿಂದಾಗಿ ಏಕಾಂಗಿಯಾದ ಭಾವನೆಯೂ ಬರಬಹುದು.

ನರಗಳ ನೋವು

ಮಧುಮೇಹ ಜೀವನಪೂರ್ತಿ ಜತೆಗಿರುವ ಸಂಗಾತಿ. ಇದರಿಂದಾಗಿ ನರಗಳ ನೋವು ಕಾಣಿಸಿಕೊಳ್ಳಬಹುದು. ಇದು ಗುಣವಾಗಲು ಹೆಚ್ಚು ಸಮಯ ಬೇಕಾಗಬಹುದು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಯಮಿತ ವ್ಯಾಯಾಮ ಮಾಡಿದರೆ ಸಾಮಾನ್ಯವಾಗಿ ಯಾವುದೇ ಸಮಸ್ಯೆ ಉಂಟಾಗದು. ಅಷ್ಟಾದರೂ ಅಂಗೈ, ಅಂಗಾಲು ನೋವಿಗೆ ಔಷಧ ತೆಗೆದುಕೊಳ್ಳಬಹುದು.

ಡಯಾಬಿಟಿಸ್ ಮತ್ತು ಖಿನ್ನತೆ

ಶೇ. 15ರಷ್ಟು ಡಯಾಬಿಟಿಸ್ ರೋಗಿಗಳನ್ನು ಖಿನ್ನತೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಪಥ್ಯ- ವ್ಯಾಯಾಮ- ಔಷಧಗಳತ್ತ ಗಮನ ವಹಿಸದ ರೋಗಿಗೆ ಮಧುಮೇಹ ಉಲ್ಬಣಗೊಳ್ಳುತ್ತದೆ.

ಸಕ್ಕರೆ ಅಂಶದ ಏರಿಳಿತ ರೋಗಿಗೆ ಸುಸ್ತು ಮಾಡುತ್ತದೆ, ಆತಂಕ ಉಂಟು ಮಾಡುತ್ತದೆ ಜತೆಗೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ಈ ಲಕ್ಷಣಗಳು ಖಿನ್ನತೆಯಂತೆ ಕಂಡು ಬಂದರೂ ಇದು ಖಿನ್ನತೆ ರೋಗವಲ್ಲ. ಇದಕ್ಕೆ ಹಾರ್ಮೋನ್ ವೈಪರೀತ್ಯವೂ ಕಾರಣ. ವೈದ್ಯರು ಇದನ್ನು ನಿರ್ಧರಿಸಿ ಔಷಧ ನೀಡುತ್ತಾರೆ.

ಸಕರಾತ್ಮಕ ಧೋರಣೆ: ಜೀವನದಲ್ಲಿಯ ಉತ್ತಮ, ಸಂತೋಷದ ಸಂಗತಿಗಳನ್ನು ನೆನೆಸಿಕೊಳ್ಳುವುದು, ಆಶಾವಾದವಿದ್ದರೆ ಯಾವುದೇ ರೋಗವೂ ಸಹ್ಯವಾಗುತ್ತದೆ.

ನಿಮ್ಮ ಮೇಲೆ ನಿಮಗೆ ಕರುಣೆ ಇರಲಿ: ಮಾಡಲಾಗದ್ದನ್ನೆಲ್ಲ ಮಾಡಬೇಕೆಂಬ ಒತ್ತಡವನ್ನು ನಿಮ್ಮ ಮೇಲೆ ನೀವು ಹೇರಿಕೊಳ್ಳಬೇಡಿ. ನಿಮ್ಮಿಂದ ಎಷ್ಟು ಸಾಧ್ಯ ಎಂಬುದನ್ನು ನಿರ್ಧರಿಸಿ, ಅಷ್ಟೇ ಗುರಿ ಇಟ್ಟುಕೊಳ್ಳಿ.

ಬದಲಾಯಿಸಲು ಸಾಧ್ಯವಿಲ್ಲದ್ದನ್ನು ಒಪ್ಪಿಕೊಳ್ಳಿ: ತೀರಾ ಒತ್ತಡ ಉಂಟು ಮಾಡುವಂತಹ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ನಿಮ್ಮನ್ನು ನೀವು ಈ ಮೂರು ಪ್ರಶ್ನೆ ಕೇಳಿಕೊಳ್ಳಿ; 1) ಇನ್ನೆರಡು ವರ್ಷದ ನಂತರ ನನಗೆ ಈ ವಿಷಯ ಮುಖ್ಯವಾಗಿಯೇ ಇರುತ್ತದೆಯೆ? 2) ಪರಿಸ್ಥಿತಿ ಮೇಲೆ ನನಗೆ ನಿಯಂತ್ರಣವಿದೆಯೇ? 3) ನನ್ನ ಪರಿಸ್ಥಿತಿ ಬದಲಿಸಿಕೊಳ್ಳಲು ನನಗೆ ಸಾಧ್ಯವಿದೆಯೇ? ಇವುಗಳಿಗೆ ನಿಮ್ಮ ಮನಸ್ಸು ನೀಡುವ ಉತ್ತರದ ಆಧಾರದ ಮೇಲೆ ಮನಸ್ಸು ಗಟ್ಟಿಮಾಡಿಕೊಳ್ಳಿ.

ಭಾವನೆ ಹಂಚಿಕೊಳ್ಳಿ: ನಿಮಗೆ ಏನೆನಿಸುತ್ತಿದೆ ಎಂಬುದನ್ನು ನಿಮ್ಮೊಳಗೆ ಇಟ್ಟುಕೊಂಡು ಕೊರಗಬೇಡಿ. ಕುಟುಂಬ ಸದಸ್ಯರ ಜತೆ ಅಥವಾ ಸ್ನೇಹಿತರ ಜತೆ ಹೇಳಿಕೊಳ್ಳಲು ಮುಜುಗರ ಎನಿಸಿದರೆ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.

ವ್ಯಾಯಾಮ ಮಾಡಿ: ವ್ಯಾಯಾಮದಿಂದ ಒತ್ತಡ ಬಹಳಷ್ಟು ಕಡಿಮೆಯಾಗುತ್ತದೆ.

ರಿಲ್ಯಾಕ್ಸ್ ಆಗಿ: ಒತ್ತಡದಿಂದ ಹಗುರಾಗಲು ಹಲವು ರೀತಿಯ ರಿಲ್ಯಾಕ್ಸ್ ಪದ್ಧತಿಗಳಿವೆ. ಸ್ನಾಯುಗಳ ವಿಶ್ರಮಿಸುವಿಕೆ, ದೀರ್ಘ ಶ್ವಾಸೋಚ್ಛಾಸ, ಧ್ಯಾನ ಮತ್ತಿತರ ಪದ್ಧತಿಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ವೈದ್ಯರ ಬಳಿ ಸಲಹೆ ಪಡೆದು ನಿಮಗೆ ಸರಿ ಅನಿಸಿದ ರಿಲ್ಯಾಕ್ಸ್ ಪದ್ಧತಿ ಅನುಸರಿಸಿ. ಒಟ್ಟಾರೆ ರೋಗ ಬಂತೆಂದು ಅಂಜದೆ  ಮಾನಸಿಕವಾಗಿ ಸಿದ್ಧಗೊಂಡರೆ ಅರ್ಧ ರೋಗವನ್ನು ಗೆದ್ದಂತೆ.

ಮೂಲ :ಪ್ರಜಾವಾಣಿ

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate