অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಂಧಿವಾತ

ಸಂಧಿವಾತ

  1. ಎಲ್ಲ ಸಂಧಿವಾತಗಳು ಒಂದೇ ಸಮಾನ - ಆದುದರಿಂದ ಒಂದೇ ರೀತಿಯ ಚಿಕಿತ್ಸೆ ಸಾಕು ತಪ್ಪು
  2. ಬೇಳೆಕಾಳುಗಳು, ಮೊಸರು, ಮಾಂಸ ಇತ್ಯಾದಿ ತಿನ್ನುವುದರಿಂದ ಸಂಧಿವಾತ ಬರುತ್ತದೆ/ತೀವ್ರವಾಗುತ್ತದೆ ತಪ್ಪು
  3. ಅಲೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಸಂಧಿವಾತಕ್ಕೆ ಮದ್ದಿಲ್ಲ ತಪ್ಪು
  4. ಸಂಧಿವಾತಕ್ಕೆ ಕೊಡುವ ಮದ್ದುಗಳಲ್ಲಿ ತೀವ್ರ ಅಡ್ಡಪರಿಣಾಮಗಳಿವೆ ತಪ್ಪು
  5. ಸಂಧಿವಾತ ಹಿರಿಯ ವಯಸ್ಕರಲ್ಲಿ ಮಾತ್ರ ಆಗುತ್ತದೆ ತಪ್ಪು
  6. ಸಂಧಿವಾತವು ಮೂಲತಃ ಎಲುಬಿನ ರೋಗ ತಪ್ಪು
  7. ಸಂಧಿವಾತ ಚಿಕಿತ್ಸೆಯಲ್ಲಿ ಸ್ಟಿರಾಯ್ಡ ಬಳಕೆ ಅತ್ಯಗತ್ಯ ತಪ್ಪು
  8. ಸಂಧಿವಾತವು ತಂಪು ವಾತಾವರಣದಲ್ಲಿ ಉಂಟಾಗುತ್ತದೆ ತಪ್ಪು
  9. ಸಂಧಿವಾತದ ಕಾರಣವನ್ನು ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದು ತಪ್ಪು
  10. ಸಂಧಿವಾತದ ರೋಗಿಗಳು ಆಟೋಟಗಳಲ್ಲಿ ಭಾಗವಹಿಸುವಂತಿಲ್ಲ ತಪ್ಪು

ಎಲ್ಲ ಸಂಧಿವಾತಗಳು ಒಂದೇ ಸಮಾನ - ಆದುದರಿಂದ ಒಂದೇ ರೀತಿಯ ಚಿಕಿತ್ಸೆ ಸಾಕು ತಪ್ಪು


ಸಂಧಿವಾತವು (ಗಂಟು ನೋವು) ಬೇರೊಂದು ಮೂಲ ಕಾಯಿಲೆಯ ಲಕ್ಷಣವಾಗಿರುತ್ತದೆ - ಹಾಗೂ 150 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳಿಂದ ಸಂಧಿವಾತ ಉಂಟಾಗಬಹುದು. ಪ್ರತಿಯೊಂದು ಕಾಯಿಲೆಯ ಚಿಕಿತ್ಸೆಯು ಭಿನ್ನವಾದುದರಿಂದ ಸರಿಯಾದ ರೋಗವನ್ನು ಕಂಡುಹಿಡಿಯುವುದು ಅತೀ ಪ್ರಮುಖವಾಗಿದೆ. ಎಲ್ಲ  ರೀತಿಯ ಸಂಧಿವಾತಗಳಿಗೆ ಒಂದೇ ರೀತಿಯ ಚಿಕಿತ್ಸೆ ಸಾಧ್ಯವಿಲ್ಲ.

ಬೇಳೆಕಾಳುಗಳು, ಮೊಸರು, ಮಾಂಸ ಇತ್ಯಾದಿ ತಿನ್ನುವುದರಿಂದ ಸಂಧಿವಾತ ಬರುತ್ತದೆ/ತೀವ್ರವಾಗುತ್ತದೆ ತಪ್ಪು


ಇಂದಿನವರೆಗೂ ಯಾವುದೇ ಸಂಧಿವಾತದ ರೋಗದಲ್ಲಿ ಆಹಾರವು ಕಾರಣವಾಗಿದೆ ಎಂದು ಋಜುವಾತಾಗಿಲ್ಲ. ಆದುದರಿಂದ ನಾವು ನಮ್ಮೆಲ್ಲ ಸಂಧಿವಾತದ ರೋಗಿಗಳಿಗೆ ಎಲ್ಲಾ ರೀತಿಯ ಆಹಾರವನ್ನು ತಿನ್ನಲು ಪ್ರೋತ್ಸಾಹಿಸುತ್ತೇವೆ. ರೋಗವನ್ನು ನಾವು ಸರಿಯಾದ ಚಿಕಿತ್ಸೆಯಿಂದ ಗುಣಪಡಿಸಬೇಕೇ ಹೊರತು ಆಹಾರವನ್ನು ಕಡಿತಗೊಳಿಸಿ ಸ್ವಾಸ್ಥ್ಯವನ್ನು ಹದಗೆಡಿಸುವುದಲ್ಲ. ಗೌಟ್‌ ನಿಂದ ಉಂಟಾಗುವಂತಹ ಸಂಧಿವಾತ ರೋಗದಲ್ಲಿ ಮಾತ್ರ ಕೆಲವು ತರಹದ ಆಹಾರವನ್ನು ಕಡಿತಗೊಳಿಸಲು ಸಲಹೆ‌ ನೀಡಲಾಗುತ್ತದೆ.

ಅಲೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಸಂಧಿವಾತಕ್ಕೆ ಮದ್ದಿಲ್ಲ ತಪ್ಪು


ಇತ್ತೀಚಿನ ವರ್ಷಗಳಲ್ಲಿ ಸಂಧಿವಾತದ ರೋಗಗಳ ಚಿಕಿತ್ಸೆಯಲ್ಲಿ  ವಿಶೇಷ ಪ್ರಗತಿಗಳಾಗಿವೆ. ಸರಿಯಾದ ಸಮಯದಲ್ಲಿ  (ಗಂಟುಗಳಲ್ಲಿ ಶಾಶ್ವತ ಹಾನಿಯಾಗುವ ಮುಂಚೆ) ಚಿಕಿತ್ಸೆ ನೀಡಿದಲ್ಲಿ ರೋಗಿಗಳು ಸಹಜ ಜೀವನವನ್ನು ನಡೆಸಬಹುದಾಗಿದೆ.

ಸಂಧಿವಾತಕ್ಕೆ ಕೊಡುವ ಮದ್ದುಗಳಲ್ಲಿ ತೀವ್ರ ಅಡ್ಡಪರಿಣಾಮಗಳಿವೆ ತಪ್ಪು


ನುರಿತ ಇಮ್ಯುನಾಲಜಿಸ್ಟ್‌ ಹಾಗೂ ರುಮಟಾಲಜಿಸ್ಟ್‌ ರವರ ಸಲಹೆಯಿಂದ ಸರಿಯಾದ ರೀತಿ ಹಾಗೂ ಪ್ರಮಾಣದಲ್ಲಿ ಉಪಯೋಗಿಸಿದಲ್ಲಿ ಈ ಮದ್ದುಗಳಿಂದ ಯಾವುದೇ ಅಡ್ಡಪರಿಣಾಮಗಳಾಗುವ ಸಾಧ್ಯತೆಗಳು ತೀರಾ ಕಡಿಮೆ. ದುರದೃಷ್ಟಕ್ಕೆ ಅಡ್ಡಪರಿಣಾಮಗಳು ಉಂಟಾದರೂ ಸಹ, ಅವೆಲ್ಲ ಔಷಧಿ ನಿಲ್ಲಿಸಿದ ಕೂಡಲೆ ಮರೆಯಾಗುತ್ತವೆ.

ಸಂಧಿವಾತ ಹಿರಿಯ ವಯಸ್ಕರಲ್ಲಿ ಮಾತ್ರ ಆಗುತ್ತದೆ ತಪ್ಪು


ಸಂಧಿವಾತದ ರೋಗಗಳು ಯಾವುದೇ ವಯೋಮಾನದವರಲ್ಲಿ ಶುರುವಾಗಬಹುದು. ಮಕ್ಕಳಲ್ಲಿ ಕೂಡ ಹಲವಾರು ತರಹದ ಸಂಧಿವಾತವು ಉಂಟಾಗಬಹುದು.

ಸಂಧಿವಾತವು ಮೂಲತಃ ಎಲುಬಿನ ರೋಗ ತಪ್ಪು


ಸಂಧಿವಾತವು ನಮ್ಮ ದೇಹದಲ್ಲಿನ ರೋಗ ಪ್ರತಿರೋಧಕ ಶಕ್ತಿಯ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆ. ಆದುದರಿಂದ ಈ ರೋಗಿಗಳಲ್ಲಿ ಗಂಟುಗಳಲ್ಲದೆ ಬೇರೆ ಅಂಗಾಂಗಗಳಲ್ಲಿಯೂ ಕೂಡ ಲಕ್ಷಣಗಳು ಕಂಡುಬರಬಹುದು. ಚಿಕಿತ್ಸೆಯನ್ನು ಸರಿಯಾಗಿ ಮಾಡದಿದ್ದಲ್ಲಿ, ರೋಗವು ಉಲ್ಬಣಗೊಂಡು ಎಲುಬನ್ನು ಹಾನಿಗೊಳಿಸಬಹುದು.

ಸಂಧಿವಾತ ಚಿಕಿತ್ಸೆಯಲ್ಲಿ ಸ್ಟಿರಾಯ್ಡ ಬಳಕೆ ಅತ್ಯಗತ್ಯ ತಪ್ಪು


ಚಿಕಿತ್ಸೆಯ ಮೊದಲ ಹಂತದಲ್ಲಿ ಸ್ಟಿರಾಯ್ಡ ಬಳಕೆಯಾದರೂ ಅದು ಶಾಶ್ವತವಾದ ಚಿಕಿತ್ಸಾ  ವಿಧಾನವಲ್ಲ. ಪರಿಣಾಮಕಾರಿ ಹಾಗೂ ಸುರಕ್ಷಿತವಾದ ಇತರ ಔಷಧಿಗಳನ್ನು ಸರಿಯಾಗಿ ಬಳಸಿದಲ್ಲಿ ಸ್ಟಿರಾಯ್ಡ ಅನ್ನು ನಾವು ಎಲ್ಲ ರೋಗಿಗಳಲ್ಲಿ ನಿಲ್ಲಿಸಬಹುದಾಗಿದೆ.

ಸಂಧಿವಾತವು ತಂಪು ವಾತಾವರಣದಲ್ಲಿ ಉಂಟಾಗುತ್ತದೆ ತಪ್ಪು


ತಂಪಾದ ವಾತಾವರಣದಲ್ಲಿ ಸಂಧಿವಾತದ ರೋಗಿಗಳಿಗೆ ಹೆಚ್ಚು ನೋವಿನ ಅನುಭವವಾಗುತ್ತದೆಯೇ ಹೊರತು, ಅವರ ರೋಗದ ತೀವ್ರತೆ ಹೆಚ್ಚಾಗುವುದಿಲ್ಲ. ಸರಿಯಾದ ಚಿಕಿತ್ಸೆ ಮಾಡಿದಲ್ಲಿ ರೋಗಿಗಳು ತಂಪು ವಾತಾವರಣದಲ್ಲಿ ಕೂಡ ಸಹಜವಾಗಿ ನೋವಿಲ್ಲದೆ ಜೀವಿಸಬಹುದು.

ಸಂಧಿವಾತದ ಕಾರಣವನ್ನು ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದು ತಪ್ಪು


ಸಂಧಿವಾತದ ಕಾರಣ ಯಾವುದು ಎಂದು ಕಂಡುಹಿಡಿಯುವುದು ವೈದ್ಯರ ಕುಶಲತೆಯ ಮೇಲೆ ಹೊಂದಿಕೊಂಡಿರುತ್ತದೆ ವಿನಃ ರಕ್ತ ಪರೀಕ್ಷೆಯ ಫ‌ಲಿತಾಂಶಗಳ ಮೇಲಲ್ಲ. ವಾಸ್ತವವಾಗಿ, ಸಂಧಿವಾತದ ಪರೀಕ್ಷೆಗಳು (ಉದಾ: Rಅ ಊಚcಠಿಟ್ಟ) ಹಲವಾರು ಸಹಜ ಸ್ಥಿತಿಯ ಆರೋಗ್ಯಕರವಾದ ಜನರಲ್ಲಿಯೂ ಕಾಣಸಿಗಬಹುದು. ಆದುದರಿಂದ, ನುರಿತ ತಜ್ಞ ವೈದ್ಯರಿಂದ ಪರೀಕ್ಷಣೆ ಸಂಧಿವಾತದ ರೋಗಪತ್ತೆಗೆ ಅತ್ಯಗತ್ಯ.

ಸಂಧಿವಾತದ ರೋಗಿಗಳು ಆಟೋಟಗಳಲ್ಲಿ ಭಾಗವಹಿಸುವಂತಿಲ್ಲ ತಪ್ಪು


ಸಂಧಿವಾತದ ರೋಗವನ್ನು ಸಕಾಲದಲ್ಲಿ  ಪತ್ತೆಹಚ್ಚಿ ಅದರ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಮಾಡಿದಲ್ಲಿ, ರೋಗಿಗಳು ಸಹಜ ಜೀವನವನ್ನು ನಡೆಸಬಹುದು - ಆಟೋಟಗಳಲ್ಲಿ ಭಾಗವಹಿಸಿ, ಎಲ್ಲ ಶಾರೀರಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಬಹುದು.

ಮೂಲ : ಉದಯವಾಣಿ

ಕೊನೆಯ ಮಾರ್ಪಾಟು : 5/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate