অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೋರಿಯಾಸಿಸ್‌

ಸೋರಿಯಾಸಿಸ್‌ ಎಂದರೇನು

ಸೋರಿಯಾಸಿಸ್‌ ಎಂಬುದು ಸುಮಾರು 2%ನಷ್ಟು ಜನಸಮುದಾಯವನ್ನು ಬಾಧಿಸುವ ಒಂದು ಸಾಮಾನ್ಯ ರೀತಿಯ ಚರ್ಮದ ಅಸ್ವಸ್ಥತೆ. ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಸಮಾನವಾಗಿ ಮತ್ತು  ಯಾವುದೇ ವಯಸ್ಸಿನಲ್ಲಿಯಾದರೂ ಇದು ಕಾಣಿಸಿಕೊಳ್ಳಬಹುದು. ಇದು ಸಾಂಕ್ರಾಮಿಕವಲ್ಲದ ಒಂದು ರೀತಿಯ ದೀರ್ಘ‌ಕಾಲಿಕ ಕಾಯಿಲೆ ಆಗಿದ್ದು, ಬಹುಸಂಖ್ಯೆಯಲ್ಲಿ ಚರ್ಮದ ಕೋಶಗಳು ಚೆಕ್ಕೆ ಏಳುವ ಗುಣಲಕ್ಷಣವನ್ನು ಹೊಂದಿರುತ್ತವೆ.

ಸೋರಿಯಾಸಿಸ್‌ ಹೇಗೆ ಕಾಣಿಸುತ್ತದೆ

ಈ ಕಾಯಿಲೆಯಲ್ಲಿ  ಸಾಮಾನ್ಯವಾಗಿ ತಲೆಯ ನೆತ್ತಿ, ದೇಹ, ಕೈ-ಕಾಲುಗಳ ಚರ್ಮಭಾಗಗಳಲ್ಲಿ ಕೆಂಪು ಚೆಕ್ಕೆಯಂತಹ ತೇಪೆಗಳು ಕಾಣಿಸಿಕೊಳ್ಳುತ್ತವೆ. ತಲೆಯ ನೆತ್ತಿಯಲ್ಲಿ ಕಾಣಿಸಿಕೊಳ್ಳುವ ಚೆಕ್ಕೆಯ ತೇಪೆಗಳು ಸಾಮಾನ್ಯವಾಗಿ ದಪ್ಪಗಿರುತ್ತವೆ ಮತ್ತು ಸಾಮಾನ್ಯ ತಲೆಹೊಟ್ಟಿಗಿಂತ ಹೆಚ್ಚು ವ್ಯಾಪಕವಾಗಿ ಹರಡಿರುತ್ತವೆ. ಸೋರಿಯಾಸಿಸ್‌ ಹೆಚ್ಚು ಬಾಧಿಸುವ ಅಂಗ ಭಾಗಗಳು ಅಂದರೆ ಮೊಣಕೈ, ಮೊಣಕಾಲುಗಳು ಮತ್ತು ಬೆನ್ನು ಬಿಸಿ ತೇವಾಂಶದ ವಾತಾವರಣ ಇದ್ದಲ್ಲಿ ಹೆಚ್ಚು ತುರಿಕೆ ಇರಬಹುದು.

ಕಾರಣ ಏನು

ಸೋರಿಯಾಸಿಸ್‌ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಆನುವಂಶಿಕ ದೇಹಸ್ಥಿತಿ ಮತ್ತು ಪರಿಸರದ ಅಂಶಗಳ ಸಂಪರ್ಕದ ಸಂಕೀರ್ಣ ಪ್ರಭಾವವು ಸೋರಿಯಾಸಿಸ್‌ ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎನ್ನುವುದು ಕೆಲವು ಅಧ್ಯಯನಗಳ ಅಭಿಪ್ರಾಯ.

ಚರ್ಮ ಎನ್ನುವುದು ಅನೇಕ ಬೇರೆ ಬೇರೆ ಪದರಗಳಿಂದ ನಿರ್ಮಾಣವಾಗುವ ಒಂದು ಸಂಕೀರ್ಣ ಅಂಗ. ಚರ್ಮದ ಅತ್ಯಂತ ಹೊರಪದರವು (ಎಪಿಡರ್ಮಿಸ್‌) ಜೀವಕೋಶಗಳನ್ನು ಹೊಂದಿರುತ್ತವೆ.

ಅವು ತಳದಲ್ಲಿ ಉತ್ಪತ್ತಿಯಾಗಿ, ಆ ಬಳಿಕ ಮೇಲೆ ಸಾಗುತ್ತವೆ. ಈ ರೀತಿ ಮೇಲಕ್ಕೆ ಚಲಿಸುವಾಗ ಆ ಜೀವಕೋಶಗಳು ನಿಧಾನವಾಗಿ ಬದಲಾಗುತ್ತಿರುತ್ತವೆ. ಅವು ಮೇಲ್ಮೆ„ಯಿಂದ ಕಳಚಿಕೊಳ್ಳುವುದಕ್ಕೆ ಮೊದಲು ಅಂತಿಮವಾಗಿ ನಶಿಸುತ್ತವೆ.

ಸಾಮಾನ್ಯವಾಗಿ 3ರಿಂದ 4 ವಾರಗಳ ಮಧ್ಯೆ ಈ ಪ್ರಕ್ರಿಯೆಯು ಸಾಗುತ್ತಿರುತ್ತವೆ. ಆದರೆ ಸೋರಿಯಾಸಿಸ್‌ ಇರುವವರಲ್ಲಿ, ಈ ಮಾರ್ಪಾಟಿನ ವೇಗವು ಬಾಧಿತ ಚರ್ಮ ಭಾಗದಲ್ಲಿ ವಿಲಕ್ಷಣವಾಗಿ ಮತ್ತು ಹೆಚ್ಚು ಕ್ಷಿಪ್ರವಾಗಿ ಸಾಗುತ್ತಿರುತ್ತವೆ. ಈ ರೋಗಿಗಳ ಚರ್ಮದಲ್ಲಿ, ಚರ್ಮ - ಕೋಶಗಳ ಉತ್ಪತ್ತಿ ಮತ್ತು ಕಳಚಿಕೊಳ್ಳುವ ಪ್ರಕ್ರಿಯೆಯು 3ರಿಂದ 4 ದಿನಗಳ ಸಣ್ಣ ಅವಧಿಯ ಒಳಗೆ ಮುಗಿದು ಹೋಗುತ್ತದೆ.

ಮಾತ್ರವಲ್ಲದೆ ಈ ರೋಗಿಗಳಲ್ಲಿ ಸೋರಿಯಾಸಿಸ್‌ ಬಾಧಿತ ಚರ್ಮದಲ್ಲಿ ಉರಿಯೂತ ಮತ್ತು ಆ ಭಾಗದ ರಕ್ತನಾಳಗಳ ಸಂಖ್ಯಾಭಿವೃದ್ಧಿ ಇರುತ್ತದೆ. ಈ ರೀತಿ ಆಗಲು ಕಾರಣ ಏನೆಂಬುದು ಇನ್ನೂ ಪೂರ್ತಿಯಾಗಿ ತಿಳಿದು ಬಂದಿಲ್ಲ.

ಸೋರಿಯಾಸಿಸ್‌ ಕಾಣಿಸಿಕೊಂಡಿರುವ ಹೆಚ್ಚಿನ ರೋಗಿಗಳಲ್ಲಿ ಅಥವಾ ಆಗಾಗ ಸೋರಿಯಾಸಿಸ್‌ ಕಾಣಿಸಿಕೊಂಡು ಮರೆಯಾಗುತ್ತಿರುವ ಜನರಲ್ಲಿ, ಈ ರೀತಿ ಆಗಲು ನಿಖರವಾದ ಕಾರಣ ಏನೆಂಬುದನ್ನು ಪತ್ತೆ ಮಾಡುವುದು ಅಸಾಧ್ಯವಾಗುತ್ತದೆ. ವಿಶೇಷವಾಗಿ ಮದ್ಯಪಾನ ಮಾಡುವುದು ಮತ್ತು ಧೂಮಪಾನದಿಂದ ಸೋರಿಯಾ ಸಿಸ್‌ ಬಾಧೆ ಇನ್ನಷ್ಟು ಕೆರಳಬಹುದು. ಇತರ ರೋಗಪರಿಸ್ಥಿತಿಗಳಿಗೆ ಸೇವಿಸುವ ಔಷಧಿ ಗಳಾದ ಲಿಥಿಯಂ, ಮಲೇರಿಯಾ ಚಿಕಿತ್ಸೆಗಾಗಿ ಉಪಯೋಗಿಸುವ ಮಾತ್ರೆಗಳು, ಬೀಟಾ ಬ್ಲಾಕರ್ಸ್‌ನಂತಹ ಇತರ ಔಷಧಿಗಳಿಂದ (ಹೆಚ್ಚಾಗಿ ಆಂಜಿನಾ ಮತ್ತು ಅಧಿಕ ರಕ್ತದೊತ್ತಡಕ್ಕೆ ಉಪಯೋಗಿಸಲಾಗುವ ಔಷಧಿಗಳು) ಸೋರಿಯಾಸಿಸ್‌ ಹೆಚ್ಚಾಗಬಹುದು.

ಚರ್ಮ ಅಲ್ಲದೆ ದೇಹದ ಇತರ ಭಾಗಗಳೂ ಸಹ ಬಾಧೆಗೆ ಒಳಗಾಗಬಹುದು. ಸುಮಾರು ಅರ್ಧದಷ್ಟು ಜನರಲ್ಲಿ, ಅವರ ಉಗುರುಗಳು ಬಣ್ಣ ಕಳೆದುಕೊಂಡು, ಕಂದುಬಣ್ಣಕ್ಕೆ ತಿರುಗುತ್ತವೆ. ಉಗುರುಗಳಲ್ಲಿ ಗುಳಿಗಳು ಉಂಟಾಗುತ್ತವೆ. ಸೋರಿಯಾಸಿಸ್‌ ಬಾಧೆ ಇರುವಂತಹ, ಸುಮಾರು 5% ಜನರಲ್ಲಿ  ಸಂಧಿ ನೋವು ಮತ್ತು ಊತ ಇರುತ್ತದೆ. ಮತ್ತು ವಿಶೇಷವಾಗಿ ಬಾಧಿಸುವವರಲ್ಲಿ ಅದು ಪ್ರತಿಶತ 40ರಷ್ಟು ಮಂದಿಯಲ್ಲಿ ಕಾಣಿಸಬಹುದು. ಸಾಮಾನ್ಯವಾಗಿ ಈ ರೋಗ ಲಕ್ಷಣಗಳು 20ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ, ನವಜಾತ ಶಿಶುಗಳಲ್ಲಿ ಮತ್ತು ವೃದ್ಧರಲ್ಲಿಯೂ ಕಾಣಿಸಿಕೊಳ್ಳುವುದಿದೆ.

ಸೋರಿಯಾಸಿಸ್‌ನ ರೋಗ ಲಕ್ಷಣಗಳು ಯಾವುವು

ಸೋರಿಯಾಸಿಸ್‌ ಬಾಧೆಗೆ ಒಳಗಾಗುವ ಹೆಚ್ಚಿನ ಜನರಿಗೆ ಉಂಟಾಗುವ ಸಮಸ್ಯೆ ಅಂದರೆ ಅದು ಚರ್ಮದ ಮೇಲೆ ಕಾಣಿಸುವ ರೀತಿ ಮತ್ತು ಅದಕ್ಕೆ ಇತರ ಜನಗಳಿಂದ ಬರುವ ಟೀಕೆಯ ಮಾತುಗಳು. ಇದು ಸೋರಿಯಾಸಿಸ್‌ ಇರುವ ಜನರ ಜೀವನದ ಗುಣಮಟ್ಟದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.

ಸೋರಿಯಾಸಿಸ್‌ ಕಾಯಿಲೆಯಲ್ಲಿ  ತುರಿಕೆ ಇರುತ್ತದೆ ಮತ್ತು ಬಾಧೆಗೆ ಒಳಗಾದ ಚರ್ಮವನ್ನು ತುರಿಸಿದಾಗ ಅದು ಒಡೆಯುತ್ತದೆ. ಇದು ಬಹಳ ನೋವಿನಿಂದ ಕೂಡಿರುತ್ತದೆ.

ಸೋರಿಯಾಸನಿಂದ ಬಳಲುತ್ತಿರುವ ಕೆಲವು ಜನರಿಗೆ ಸಂಧಿಗಳು ಗಡುಸಾಗಬಹುದು ಮತ್ತು ನೋವಿನಿಂದ ಕೂಡಿರಬಹುದು. ಸೋರಿಯಾಸಿಸ್‌ ಜೊತೆಗೆ ಬರುವ ಸಂಧಿ ಉರಿಯೂತದ ಕಾರಣದಿಂದಾಗಿ ಈ ರೀತಿ ನೋವು ಕಾಣಿಸಿಕೊಳ್ಳುತ್ತಿರಬಹುದು ಮತ್ತು ಇಂತಹ ಪರಿಸ್ಥಿತಿಗೆ ಸೋರಿಯಾಟಿಕ್‌ ಅಥೆùìಟಿಸ್‌ ಎಂದು ಹೆಸರು. ಈ ರೀತಿಯ ಸಂಧಿ ಉರಿಯೂತದಿಂದ ಕೈ ಮತ್ತು ಕಾಲಿನ ಬೆರಳಿನ ತುದಿ ಭಾಗದ ಸಂಧಿಗಳು ಹೆಚ್ಚು ಬಾಧೆಗೆ ಒಳಗಾಗುತ್ತವೆ.

ಸೋರಿಯಾಸಿಸ್‌ ಅನ್ನು  ತೀವ್ರಗೊಳಿಸುವ ಅಂಶಗಳು

ದೈಹಿಕ ಮತ್ತು ಮಾನಸಿಕ ಒತ್ತಡಗಳು ಸೋರಿಯಾಸಿಸ್‌ ಅನ್ನು ಕೆರಳಿಸುತ್ತವೆ ಅನ್ನುವುದು ನಿಖರವಾಗಿ ತಿಳಿದಿರುವ ಅಂಶಗಳು. ಕೆಲವರಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಗಂಟಲಿನ ಸೋಂಕುಗಳು ಸೋರಿಯಾಸಿಸ್‌ ಉಲ್ಬಣಕ್ಕೆ ಚಾಲನೆ ನೀಡಬಹುದು. ಚಳಿಗಾಲದಲ್ಲಿ ಸೋರಿಯಾಸಿಸ್‌ ಇನ್ನಷ್ಟು ಬಿಗಡಾಯಿಸುವುದು ಕಂಡು ಬಂದಿದೆ.

ಸಾಮಾನ್ಯವಾಗಿ ಸೂರ್ಯನ ಬೆಳಕು ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಆದರೆ ಅಪರೂಪಕ್ಕೆ ಕೆಲವು ಬಾರಿ ಸೂರ್ಯನ ಬೆಳಕಿನಿಂದಲೂ ಸಹ ಪರಿಸ್ಥಿತಿ ಹದಗೆಡಬಹುದು.

ಸೋರಿಯಾಸಿಸ್‌ ಅನ್ನು  ಗುಣಪಡಿಸಬಹುದೇ

ದುರಾದೃಷ್ಟವಶಾತ್‌ ಸೋರಿಯಾಸಿಸ್‌ಗೆ ಪರಿಹಾರ ಅಥವಾ ಉಪಶಮನ ಎಂಬುದು ಯಾವುದೂ ಇಲ್ಲ. ಆದರೆ ಸೋರಿಯಾಸಿಸ್‌ಗೆ ನೀಡುವ ಚಿಕಿತ್ಸೆಗಳು ಕಾಯಿಲೆಯ ನಿಯಂತ್ರಣದಲ್ಲಿ ಪರಿಣಾಮಕಾರಿ ಆಗಿರುತ್ತವೆೆ. ಒಂದು ಕೋರ್ಸ್‌ ಚಿಕಿತ್ಸೆಯ ಅನಂತರ ಸೋರಿಯಾಸಿಸ್‌ ಗುಣವಾಗಬಹುದು. ಆದರೆ ಅದು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಮರುಕಳಿಸುವಿಕೆಯು ಕೆಲವು ವರ್ಷಗಳ ವರೆಗೆ ಕಾಣಿಸಿಕೊಳ್ಳದೆ, ಕೆಲವು ವಾರಗಳ ಒಳಗೆ ಮತ್ತೆ ಕಾಣಿಸಿಕೊಳ್ಳಬಹುದು. ಸೋರಿಯಾಸಿಸ್‌ ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯಬಹುದಾದ ಯಾವುದೇ ಚಿಕಿತ್ಸೆಗಳು ಪ್ರಸ್ತುತ ಲಭ್ಯ ಇರುವುದಿಲ್ಲ.

ಚಿಕಿತ್ಸೆ

ಸಣ್ಣ ಪ್ರಮಾಣದಲ್ಲಿ ಸೋರಿಯಾಸಿಸ್‌ನಿಂದ ಬಾಧಿತರಾಗಿರುವ ಜನರಿಗೆ ಮಾಯಿಶ್ಚರೈಸಿಂಗ್‌ ಕ್ರೀಂ ಮತ್ತು ಮುಲಾಮುಗಳಿಂದ ವಿಶೇಷ ಪರಿಹಾರ ಸಿಗಬಹುದು. ಸೋರಿಯಾಸಿಸ್‌ಗೆ ಕೊಡುವ ಚಿಕಿತ್ಸೆಯು ಹಚ್ಚುವಂತಹ ಮುಲಾಮು (ಚರ್ಮದ ಮೇಲೆ ನೇರವಾಗಿ ಹಚ್ಚುವಂತಹ) ಅಥವಾ ಔಷಧಿ ಸೇವನೆಯ ರೂಪದಲ್ಲಿ  ಇರಬಹುದು.

ಸೋರಿಯಾಸಿಸ್‌ನಲ್ಲಿ  ಉಪಯೋಗಿಸುವಂತಹ  ಬಹು ಮುಖ್ಯವಾದ  ಹಚ್ಚುವಂತಹ  ಮುಲಾಮು ಚಿಕಿತ್ಸೆ ಯಾವುದು? ಸೋರಿಯಾಸಿಸ್‌ ಚಿಕಿತ್ಸೆಯ ಪ್ರಮುಖ ಉದ್ದೇಶ ಅಂದರೆ, ಉರಿಯೂತ ಇರುವ, ದಪ್ಪಗಾದ, ಚೆಕ್ಕೆಯ ತೇಪೆಗಳನ್ನು ಕಡಿಮೆ ಮಾಡುವುದು. ಕೆಲವೊಮ್ಮೆ, ದೇಹದ ಬೇರೆ ಬೇರೆ ಭಾಗಗಳಿಗೆ ಬೇರೆ ಬೇರೆ ಚಿಕಿತ್ಸೆಗಳನ್ನು ಸೂಚಿಸಬಹುದು. ಮತ್ತು ಹೆಚ್ಚು ಜಟಿಲವಾದ ಭಾಗಗಳಿಗೆ ವಿವಿಧ ರೀತಿಯ ಚಿಕಿತ್ಸೆಗಳನ್ನು ಸಂಯೋಜನೆಯಲ್ಲಿ ಉಪಯೋಗಿಸುವುದರಿಂದ ಉತ್ತಮ ಪ್ರಯೋಜನ ಸಿಗಬಹುದು. ಸೋರಿಯಾಸಿಸ್‌ ಈ ಕೆಳಗಿನ ಚಿಕಿತ್ಸೆಗಳನ್ನು ಒಳಗೊಂಡಿರುತ್ತವೆ.

ಎಮೋಲಿಯೆಂಟ್‌ಗಳು (ಮಾಯಿಶ್ಚರೈಸರ್‌ಗಳು): ಎಮೋಲಿಯೆಂಟ್‌ಗಳು ಒಣ ಚರ್ಮವನ್ನು ತೇವಭರಿತಗೊಳಿಸಲು ಸಹಾಯ ಮಾಡುತ್ತವೆ. ಸೋರಿಯಾಸಿಸ್‌ ರೋಗಿಗಳ ಚರ್ಮದಲ್ಲಿ  ಚಕ್ಕೆ ಏಳುವುದನ್ನು ತಗ್ಗಿಸಿ ಏರುತಗ್ಗು ಇರುವ ಭಾಗಗಳನ್ನು ಮೃದುಗೊಳಿಸುತ್ತವೆ. ಒಣಚರ್ಮದ ತುರಿಕೆ ಮತ್ತು ಒಣಗಿರುವಿಕೆಯನ್ನು ಇವು ತಗ್ಗಿಸುತ್ತವೆ ಮತ್ತು ಇತರ ಮುಲಾಮು ಚಿಕಿತ್ಸೆಗಳು (ಟಾಪಿಕಲ್‌) ಪರಿಣಾಮಕಾರಿಯಾಗಿ ಒಳಸೇರಲು ಸಹಾಯ ಮಾಡುತ್ತವೆ. ನಿರ್ದಿಷ್ಟ ಮುಲಾಮು ಔಷಧಿಯನ್ನು ಹಚ್ಚುವುದಕ್ಕೆ ಮೊದಲು ಇವನ್ನು ಉಪಯೋಗಿಸಬೇಕು. ಅಂದರೆ ಎಮೋಲಿಯೆಂಟ್‌ಗಳನ್ನು ಹಚ್ಚಿ. 30 ನಿಮಿಷ ಬಿಟ್ಟ ಬಳಿಕ ಸೂಚಿಸಿದಂತಹ ಮುಲಾಮು ಔಷಧಿಯನ್ನು ಹಚ್ಚಬೇಕು. ಸೋರಿಯಾಸಿಸ್‌ ಬಹಳ ಸೌಮ್ಯ ಸ್ವರೂಪದ್ದಾಗಿದ್ದರೆ, ಒಂದು ಎಮೋಲಿಯೆಂಟ್‌ಗಳನ್ನು ಯಥೇತ್ಛವಾಗಿ ಮತ್ತು ಪದೇ ಪದೇ ಹಚ್ಚಬೇಕು.

ಟಾಪಿಕಲ್‌ ಸ್ಟಿರಾಯ್ಡಗಳು:ಉರಿಯೂತ ಇರುವ ಚರ್ಮಕ್ಕೆ ಟಾಪಿಕಲ್‌ ಸ್ಟೀರಾಯ್ಡ (ಹಚ್ಚುವಂತಹ ಸ್ಟೀರಾಯ್ಡ ) ಔಷಧಿಯಿಂದ ಪ್ರಯೋಜನ ಆಗಬಹುದು. ಬಹಳ ಸೌಮ್ಯರೂಪದ ಟಾಪಿಕಲ್‌ ಸ್ಟೀರಾಯ್ಡ ಗಳನ್ನು ಅಲ್ಪಾವಧಿಗೆ, ಮುಖಕ್ಕೆ ಮತ್ತು ಚರ್ಮದ ಮಡಿಕೆಗಳಿಗೆ ಹಚ್ಚುವುದರಿಂದ (ಉದಾ: ಕಂಕುಳಿಗೆ) ಪ್ರಯೋಜನ ಸಿಗಬಹುದು. ಬಲವಾದ ಟಾಪಿಕಲ್‌ ಸ್ಟೀರಾಯ್ಡ ಅನ್ನು ಹಚ್ಚುವುದರಿಂದ ಸೋರಿಯಾಸಿಸ್‌ನ ದೊರಗು ಚೆಕ್ಕೆಗಳನ್ನು ಮತ್ತು ಅಂಗೈ. ಅಂಗಾಲು ಮತ್ತು ಹಿಮ್ಮಡಿಯ ಚೆಕ್ಕೆಗಳನ್ನು ಹೋಗಲಾಡಿಸಲು ಸಹಾಯ ಆಗಬಹುದು.

ಟಾಪಿಕಲ್‌ ಸ್ಟಿರಾಯ್ಡ ಅಥವಾ ಹಚ್ಚುವ ಮುಲಾಮನ್ನು ನಿಲ್ಲಿಸಿದ ಕೂಡಲೇ ಸೋರಿಯಾಸಿಸ್‌ ಕ್ಷಿಪ್ರವಾಗಿ ಮತ್ತೆ ಮರಳುತ್ತದೆ. ವಿಶೇಷವಾಗಿ ಬಲವಾದ ಸ್ಟೀರಾಯ್ಡ ಅನ್ನು ಉಪಯೋಗಿಸುತ್ತಿದ್ದರೆ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಟಾಪಿಕಲ್‌ ಸ್ಟೀರಾಯ್ಡ ಅನ್ನು ನೀವು ಬಳಸುತ್ತಿರುವುದನ್ನು ನಿಮ್ಮ ವೈದ್ಯರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರಬೇಕಾಗುತ್ತದೆ.

ಟಾರ್‌ ಉತ್ಪನ್ನಗಳು:ಟಾರ್‌ ಉತ್ಪನ್ನಗಳು ಅಂದರೆ ಕ್ರೀಂ, ಮುಲಾಮು ಅಥವಾ ಶ್ಯಾಂಪೂ ರೂಪದಲ್ಲಿ ಇರುವ ಉತ್ಪನ್ನಗಳು. ಹೆಚ್ಚಿನ ರೋಗಿಗಳಿಗೆ ಇವುಗಳಿಂದ ಪ್ರಯೋಜನ ಆಗಬಹುದು. ಆದರೆ ಕೆಲವು ರೋಗಿಗಳು ಈ ಔಷಧಿಯು ಬಹಳ ಕಿರಿಕಿರಿಯದ್ದು ಮತ್ತು ಬಟ್ಟೆಗಳಿಗೆ ಕಲೆ ಉಂಟು ಮಾಡುವಂಥದ್ದು ಎಂದು ಹೇಳುತ್ತಾರೆ.

ಡೈಥÅನಾಲ್‌ ಆಯ್ದು ಭಾಗಗಳಲ್ಲಿ ಇರುವ ಚೆಕ್ಕೆ ಏಳುವ ಸೋರಿಯಾಸಿಸ್‌ಗೆ ಡೈಥÅನಾಲ್‌ ಬಹಳ ಒಳ್ಳೆಯ ಚಿಕಿತ್ಸೆ ಮತ್ತು ಮನೆಯಲ್ಲಿ ಉಪಯೋಗಿಸಲು ಇದನ್ನು ಶಿಫಾರಸು ಮಾಡಬಹುದು. ಡೈಥÅನಾಲ್‌ ಅನ್ನು ಸೋರಿಯಾಸಿಸ್‌ನಿಂದ ಬಾಧೆಗೆ ಒಳಗಾದ ಚರ್ಮಭಾಗದ ಮೇಲೆ ಮಾತ್ರವೇ ಬಹಳ ತೆಳುವಾಗಿ ಹಚ್ಚಬೇಕು. ಅಪರೂಪಕ್ಕೆ ಕೆಲವು ಬಾರಿ ಡೈಥÅನಾಲ್‌ ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. ಮತ್ತು ಈ ಕಾರಣದಿಂದಾಗಿ ಚಿಕಿತ್ಸೆ ನೀಡುತ್ತಿರುವ ಚರ್ಮದ ಸುತ್ತಲೂ ಉರಿಯೂತ ಮತ್ತು ಹುಣ್ಣನ್ನು ಉಂಟು ಮಾಡಬಹುದು. ಡೈಥÅನಾಲ್‌ ಅನ್ನು ಮುಖದ  ಮೇಲೆ ಮತ್ತು ಚರ್ಮದ ಮಡಿಕೆಯ ಮೇಲೆ ಹಚ್ಚಬಾರದು ಯಾಕೆಂದರೆ ಈ ಭಾಗಗಳಲ್ಲಿ  ಹಚ್ಚುವುದರಿಂದ ಇದು ಬಹಳ ಕಿರಿಕಿರಿಯನ್ನು ಉಂಟು ಮಾಡಬಹುದು.

ವಿಟಮಿನ್‌ ಡಿ ಅನಲಾಗ್‌ಗಳು: ಇದು ವಿಟಾಮಿನ್‌ ಡಿ ಯ ವಿವಿಧ ಸಾದೃಶ್ಯ ಅಂಶಗಳನ್ನು ಕ್ಯಾಲ್ಸಿಪೊಟ್ರಿಯೋಲ್‌, ಟ್ಯಾಕಾಲ್ಸಿಟಾಲ್‌ ಮತ್ತು  ಕ್ಯಾಲ್ಸಿಟ್ರಿಯೋಲ್‌ ಆಧರಿಸಿರುವಂತಹ ಮತ್ತು ಬಹಳ ಯಶಸ್ವಿ ಎನಿಸಿರುವ ಉತ್ಪನ್ನವಾಗಿದೆ. ಈ ಉತ್ಪನ್ನಗಳು ಬಹಳ  ಪ್ರಯೋಜನಕಾರಿ, ಸುರಕ್ಷಿತ ಮತ್ತು  ಬಳಕೆಗೆ ಯೋಗ್ಯವಾದಂತವುಗಳು. ಆದರೆ ಈ ಉತ್ಪನ್ನಗಳನ್ನು  ಗರ್ಭಧಾರಣೆ ಮತ್ತು ಹಾಲೂಡಿಸುವ ಅವಧಿಗಳಲ್ಲಿ  ಬಳಸಬಾರದು. ಈ ಚಿಕಿತ್ಸಾ  ಔಷಧಿಯನ್ನು ದಿನದಲ್ಲಿ ಒಂದು ಅಥವಾ ಎರಡು ಬಾರಿ ಹಚ್ಚಬೇಕು ಮತ್ತು ಎಷ್ಟು ಸಮಯ ಸಾಧ್ಯವೋ ಅಷ್ಟು ಸಮಯ ಮುಂದುವರಿಸಬಹುದು. ಕೆಲವು ವಿಟಾಮಿನ್‌ ಡಿ ಅನಲಾಗ್‌ಗಳನ್ನು  ಸ್ಟಿರಾಯ್ಡ ಮುಲಾಮುಗಳ ಜೊತೆಗೆ ಸಂಯೋಜನೆಯಲ್ಲಿ ಅಲ್ಪಾವಧಿಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ.

ವಿಟಾಮಿನ್‌ ಅನಲಾಗ್‌ಗಳು: ಟಾಝರೋಟಿನ್‌ ಎಂಬುದು ವಿಟಾಮಿನ್‌ ಅ ಜೆಲ್‌ ಆಗಿದ್ದು , ಇದನ್ನು ದಿನದಲ್ಲಿ  ಒಂದು ಬಾರಿ ಪ್ರತಿದಿನ ಸೋರಿಯಾಸಿಸ್‌ ತೇಪೆಗಳ ಮೇಲೆ ಹಚ್ಚಬೇಕು.

ಇದನ್ನು ಮುಖ, ಚರ್ಮದ ಮಡಿಕೆಗಳು  ಮತ್ತು ಕಿರಿಕಿಯನ್ನು  ಉಂಟು ಮಾಡುವ ದೊಡ್ಡ ಚರ್ಮಭಾಗಗಳ ಮೇಲೆ ಹಚ್ಚಬಾರದು. ಗರ್ಭಿಣಿಯಾಗಿರುವಾಗ ಮತ್ತು ಮಗುವಿಗೆ ಹಾಲುಣಿಸುತ್ತಿರುವಾಗ ಈ ಔಷಧಿಯನ್ನು ಉಪಯೋಗಿಸಬಾರದು.ಸೋರಿಯಾಸಿಸ್‌ನ ಗಂಭೀರ ಪ್ರಕರಣಗಳನ್ನು  ಅಲ್ಟ್ರಾವಯೋಲೆಟ್‌ ಚಿಕಿತ್ಸೆಯಿಂದ (ಫೋಟೋ ಥೆರಪಿ) ನಿಯಂತ್ರಿಸಬಹುದು. ಫೊÕàರಾಲಿನ್‌ ಮಾತ್ರೆಯನ್ನು ಸೇವಿಸಲು ಕೊಟ್ಟು ಎರಡು ಗಂಟೆಗಳ  ನಂತರ  ಒಂದು ವಿಶೇಷ ಕೋಶದಲ್ಲಿ (ಛೇಂಬರ್‌) ಅಲ್ಟ್ರಾ ವೈಲೆಟ್‌ಗೆ ದೇಹವನ್ನು  ಒಡ್ಡಿಕೊಳ್ಳುವಂತೆ ಮಾಡಲಾಗುತ್ತದೆ. ಬೆಳಕಿನ ಪ್ರಮಾಣವನ್ನು   ನಿಧಾನವಾಗಿ ಹೆಚ್ಚಿಸುತ್ತಾ ಬರುತ್ತಾರೆ. ಈ ರೀತಿಯಲ್ಲಿ ವಾರದಲ್ಲಿ ಮೂರು ಚಿಕಿತ್ಸೆಯನ್ನು ನೀಡಲಾಗುತ್ತದೆ ಮತ್ತು ಕೆಲವು ವಾರಗಳು ಅಥವಾ ತಿಂಗಳುಗಳವರೆಗೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ. ರೋಗಿಗಳಿಗೆ ಸ್ನಾನದ ತೊಟ್ಟಿಯಲ್ಲಿ ಪೊÕàರಾಲಿನ್‌ ಬಾತ್‌ ಚಿಕಿತ್ಸೆ ಮತ್ತು ಆ ಬಳಿಕ  ಅಲ್ಟ್ರಾವಾಯ್ಲೆಟ್‌ಗೆ ಒಡ್ಡಿಕೊಳ್ಳುವಂತೆ ಮಾಡಲಾಗುತ್ತದೆ.ನ್ಯಾರೋ ಬ್ಯಾಂಡ್‌ ಅಲ್ಟ್ರಾವಾಯ್ಲೆಟ್‌ ಆ ಲೈಟ್‌ ಚಿಕಿತ್ಸೆಯೂ ಸಹ ಸೋರಿಯಾಸಿಸ್‌  ನಿರ್ವಹಣೆಯಲ್ಲಿ  ಬಹಳ ಪ್ರಯೋಜನಕಾರಿ.

ಆಂತರಿಕ ಚಿಕಿತ್ಸೆಗಳು

ಕಾಯಿಲೆಯು ಬಹಳ ತೀವ್ರ ಸ್ವರೂಪದಲ್ಲಿದ್ದರೆ ಅಥವಾ ಗಂಭೀರವಾಗಿದ್ದರೆ, ರೋಗಿಗೆ ಬಾಯಿಯ ಮೂಲಕ ಚಿಕಿತ್ಸೆಯನ್ನು ಪಡೆಯುವುದು ಆವಶ್ಯಕವಾಗಬಹುದು. ಆದರೆ ಬೇರೆ ಬೇರೆ ವಿಧದ ಔಷಧಿಗಳಲ್ಲಿ ಅಪಾಯಗಳು ಬೇರೆಬೇರೆ ಮಟ್ಟದಲ್ಲಿ  ಇರಬಹುದು. ಈ ಚಿಕಿತ್ಸೆಯ ಜೊತೆಗೆ ನೀವು ಈಗಾಗಲೆ ಪಡೆಯುತಿತರುವ ಮುಲಾಮು ಚಿಕಿತ್ಸೆಯನ್ನು  ಮುಂದುವರಿಸಬೇಕಾಗುತ್ತದೆ.

 

ನೀವು ಈ ವಿಧದ ಚಿಕಿತ್ಸೆಯನ್ನು ಆರಂಭಿಸುವಾಗ ಇರುವ ಅಪಾಯದ ಬಗ್ಗೆ  ನಿಮ್ಮ ಚರ್ಮತಜ್ಞರ ಜೊತೆಗೆ ಚರ್ಚಿಸಿ. ಕೆಲವು ಔಷಧಿಗಳು ಇತರ ಔಷಧಿಗಳಿಗೆ ಅಡ್ಡಿ ಪಡಿಸುವ ಸಾಧ್ಯತೆಯೂ ಇರುತ್ತದೆ. ಎಲ್ಲಾ ಬಗೆಯ ಮಾತ್ರೆಗಳ ಸೇವನೆಯ ಮುಂಚೆ ರಕ್ತ ಪರೀಕ್ಷೆ ಆವಶ್ಯಕ.

ಸೋರಿಯಾಸಿಸ್‌ಗೆ ಯಾವುದೇ ಮಾತ್ರೆಯನ್ನು ತೆಗೆದುಕೊಳ್ಳುತ್ತಿರುವ ಮಹಿಳಾ ರೋಗಿಗಳು ಈ ಅವಧಿಯಲ್ಲಿ ಗರ್ಭಧರಿಸಬಾರದು. ಅದರಂತೆಯೇ ಪುರುಷ ರೋಗಿಗಳೂ ಸಹ ಕೆಲವೊಂದು ಔಷಧಿಯನ್ನು ತೆಗೆದುಕೊಳ್ಳುತ್ತಿರುವಾಗ, ತಮ್ಮ ಸಂಗಾತಿಯು ಗರ್ಭಧರಿಸದಂತೆ ಎಚ್ಚರಿಕೆಯನ್ನು ವಹಿಸಬೇಕು.

ಮೇಲಿನ ಅಂಶಕ್ಕೆ ಸಂಬಂಧಿಸಿದಂತೆ, ಚರ್ಚಾಸ್ಪದ ಮಾತ್ರೆಗಳು ಅಂದರೆ, ಅಸಿಟ್ರೇಟಿನ್‌ (ವಿಟಾಮಿನ್‌ ಅ ಗೆ ಸೈಕ್ಲೋನ್ಪೋರಿನ್‌ (ರೋಗಪ್ರತಿರೋಧಕ ಶಕ್ತಿಯನ್ನು ತಗ್ಗಿಸುತ್ತದೆ) ಮಿಥೋ ಟ್ರೇಕ್ಸೇಟ್‌ (ಸೋರಿಯಾಸಿಸ್‌ನಲ್ಲಿ ಚರ್ಮದ ಜೀವಕೋಶಗಳು ವಿಭಜನೆ ಆಗುವುದನ್ನು ತಗ್ಗಿಸುತ್ತದೆ) ಮತ್ತು ಹೈಡ್ರಾಕ್ಸಿ ಕಾರ್ಬಮೈಡ್‌ (ಈ ಹಿಂದೆ ಹೈಡ್ರಾಕ್ಸಿ ಯೂರಿಯ ಎಂದು ಗುರು ತಿಸಲಾಗಿದ್ದ - ಇದೂ ಸಹ ಚರ್ಮದ ಕೋಶಗಳ ವಿಭಜನೆಯನ್ನು  ತಗ್ಗಿಸುತ್ತದೆ.

ಗಂಭೀರ ರೀತಿಯ ಸೋರಿಯಾಸಿಸ್‌ನಲ್ಲಿ  ಅನೇಕ ರೀತಿಯ ಇಂಜೆಕ್ಷನ್‌ ಚಿಕಿತ್ಸೆಗಳೂ ಸಹ ಲಭ್ಯ ಇವೆ. ಇವು ಜೈವಿಕ ರೀತಿಯ ಔಷಧಿಗಳಾಗಿದ್ದು, ಪ್ರತಿರೋಧಕ ವ್ಯವಸ್ಥೆಯ ಮೇಲೆ ಈ ಔಷಧಿಗಳು ಹೆಚ್ಚು  ವ್ಯವಸ್ಥಿತ ರೀತಿಯಲ್ಲಿ  ಕಾರ್ಯವೆಸಗುತ್ತವೆ.

ಬಾಯಿಯಿಂದ ಸೇವಿಸುವ ಕಾರ್ಟಿಕೋ ಸ್ಟೀರಾಯ್ಡಗಳನ್ನು ಉಪಯೋಗಿಸಿ ನಿಲ್ಲಿಸಿದ ನಂತರ, ಸೋರಿಯಾಸಿಸ್‌ ಮತ್ತೆ ಮರುಕಳಿಸುವ ಪರಿಣಾಮವನ್ನು  ತೋರಿಸುವುದರಿಂದ ಕಾರ್ಟಿಕೋಸ್ಟಿರಾಯ್ಡಗಳನ್ನು ಹೆಚ್ಚು ಉಪಯೋಗಿಸದೆ ಇದ್ದರೆ ಒಳ್ಳೆಯದು.

ಆಹಾರ ಕ್ರಮ

ಸೋರಿಯಾಸಿಸ್‌ ಬಾಧಿತ ವ್ಯಕ್ತಿಗಳು ಯಾವ ಆಹಾರವನ್ನಾದರೂ ತೆಗೆದುಕೊಳ್ಳಬಹುದು ಆದರೆ ಹಸುರು ಸೊಪ್ಪು ತರಕಾರಿಗಳಿಂದ ಕೂಡಿರುವ ಪೋಷಣಾ ಭರಿತವಾದ ಸಂತುಲಿತ ಆಹಾರವಾಗಿದ್ದರೆ ಉತ್ತಮ. ಮದ್ಯಪಾನದಿಂದ ದೂರವಿರಬೇಕು.

 

ಸೋರಿಯಾಸಿಸ್‌ ಅನ್ನು ನಿರ್ವಹಿಸುವುದು ಅಂದರೆ, ಅದು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬಹಳ ಕಷ್ಟಕರವಾದ ವಿಚಾರ. ಈ ರೋಗಿಗಳು ಖನ್ನತೆ, ಕಿರಿಕಿರಿ ಮತ್ತು ಏಕಾಂಗಿತನದ ಭಾವನೆಯಿಂದ ಬಳಲಬಹುದು. ಇಂತಹ ಪರಿಸ್ಥಿತಿಯಿಂದ ಬಳಲುತ್ತಿರುವವರು ತಾವೊಬ್ಬರೆ ಎಂದು ಈ ರೋಗಿಗಳಿಗೆ ಅನ್ನಿಸಬಹುದು. ಆದರೆ ವಾಸ್ತವ ಏನೆಂದರೆ ಇಡೀ ಜಗತ್ತಿನಲ್ಲಿ ಸುಮಾರು 125 ಮಿಲಿಯಕ್ಕಿಂತಲೂ ಹೆಚ್ಚು  ಜನರು ಸೊರಿಯಾಸಿಸ್‌ನಿಂದ ಬಳಲುತ್ತಿದ್ದಾರೆ. ಸೋರಿಯಾಸಿಸ್‌ ಅಂದರೆ ಅದು ಒಂದು ಪಾಪ ಅಲ್ಲ. ಅದನ್ನೂ ಸಹ ನಮ್ಮ ಬದುಕಿನ ಒಂದು ಅಂಶ ಎನ್ನುವ ರೀತಿಯಲ್ಲಿ ನಾವು ಸ್ವೀಕರಿಸಲು ಕಲಿಯಬೇಕು. ಸ್ವ ಅನುಕಂಪದಲ್ಲಿ ಮುಳುಗಿ ಜನರಿಂದ ತಪ್ಪಿಸಿಕೊಳ್ಳದಿರಿ. ಕುಟುಂಬದ ಜನರು, ಗೆಳೆಯರು ಮತ್ತು ವೈದ್ಯರ ಜತೆಗೆ ಕಾಯಿಲೆಯ ಬಗ್ಗೆ ಮಾತನಾಡುವುದರಿಂದ ನಿಮ್ಮ ಶರೀರ  ಮತ್ತು ಮನಸ್ಸಿನ ಸಮಸ್ಯೆಗೆ ಸಮಾಧಾನ ಸಿಗಬಹುದು.

ಡಾ| ಸತೀಶ್‌ ಪೈ ಬಿ., ಮುಖ್ಯಸ್ಥರು ಡಾ| ಶ್ರೀಚರಿತ್‌ ಶೆಟ್ಟಿ ,ಸಹ ಪ್ರಾಧ್ಯಾಪಕರು,ಚರ್ಮ ರೋಗಗಳ ಚಿಕಿತ್ಸಾ  ವಿಭಾಗ, ಕೆ.ಎಂ.ಸಿ. ಮಣಿಪಾಲ.

ಮೂಲ : ಉದಯವಾಣಿ

ಕೊನೆಯ ಮಾರ್ಪಾಟು : 4/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate