অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಂದಿ ಜ್ವರ

ಹಂದಿ ಜ್ವರ

  1. ಹಂದಿ ಜ್ವರ ಎಂದರೇನು?
  2. ಇದು ಅತ್ಯಂತ ಸಾಂಕ್ರಾಮಿಕ ಕ್ರಿಮಿಯಾಗಿದೆ
  3. ಇದು ಹೇಗೆ ಹರಡುತ್ತದೆ?
  4. ಈ ಜ್ವರ ಪ್ರಾಣಾಪಾಯವನ್ನು ತರಬಲ್ಲುದೇ?
  5. ಈ ಜ್ವರದ ಲಕ್ಷಣಗಳೇನು?
  6. ಈ ಜ್ವರ ಬರದಂತೆ ತಡೆಗಟ್ಟುವುದು ಹೇಗೆ?
  7. ಕೇವಲ ಮಾಸ್ಕ್ ಧರಿಸುವುದರಿಂದ ಈ ಜ್ವರವನ್ನು ತಡೆಗಟ್ಟಬಹುದೇ?
  8. ಈ ಜ್ವರಕ್ಕೆ ಔಷಧಿ ಇದೆಯೇ?
  9. ಈ ಜ್ವರ ಬರದಂತೆ ತಡೆಗಟ್ಟುವ ಲಸಿಕೆ ಇದೆಯೇ?
  10. ಹಂದಿ ಮಾಂಸದ ಸೇವನೆಯಿಂದ ಈ ಜ್ವರ ಬರುತ್ತದೆಯೇ?
  11. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಏನು ಮಾಡಬೇಕು?
  12. ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?
  13. ವಯಸ್ಕರಲ್ಲಿ ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?
  14. ಯಾವ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು?
  15. ಯಾವುದಾದರೂ ಮನೆಮದ್ದು ಲಭ್ಯವಿದೆಯೇ?
  16. ಮಾರಕ ಹಂದಿ ಜ್ವರದ ಹೆಡೆಮುರಿ ಕಟ್ಟಿಹಾಕುವ ಅದ್ಭುತ ಮನೆಮದ್ದು
  17. ತುಳಸಿ ಎಲೆಗಳು
  18. ಅಮೃತಬಳ್ಳಿ (Giloi - ವೈಜ್ಞಾನಿಕ ಹೆಸರುTinospora cordifolia)
  19. ಕರ್ಪೂರ
  20. ಬೆಳ್ಳುಳ್ಳಿ
  21. ಉಗುರುಬೆಚ್ಚನೆ ಬಿಸಿಯಾದ ಹಸುವಿನ ಹಾಲು
  22. ಲೋಳೆಸರ
  23. ಕಹಿಬೇವು
  24. ಪ್ರತಿದಿನದ ಪ್ರಾಣಾಯಾಮ
  25. ವಿಟಮಿನ್ ಸಿ
  26. ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

ಹಂದಿ ಜ್ವರ ಎಂದರೇನು?

ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಇನ್ಫ್ಲೂಯೆಂಜಾ ಎ (influenza A) ಎಂಬ ಹೆಸರಿನ ವೈರಸ್ ಮೂಲಕ ಮನುಷ್ಯರಿಗೆ ಹರಡುವ ಜ್ವರವನ್ನೇ ಹಂದಿಜ್ವರ ಅಥವಾ ಸ್ವೈನ್ ಫ್ಲೂ ಎಂದು ಕರೆಯುತ್ತಾರೆ.

ಇದು ಅತ್ಯಂತ ಸಾಂಕ್ರಾಮಿಕ ಕ್ರಿಮಿಯಾಗಿದೆ

ಈ ಜ್ವರಕ್ಕೆ ಹೆದರಬೇಕಾದ ಪ್ರಮುಖ ಕಾರಣ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ. ನೋಡುನೋಡುತ್ತಲೇ ಇಡಿಯ ಊರಿಗೆ ಊರೇ ಈ ವೈರಸ್ ಧಾಳಿಗೆ ತುತ್ತಾಗಿರುವುದು ಮೆಕ್ಸಿಕೋದಲ್ಲಿ ಕಂಡುಬಂದಿದೆ. ಸೂಕ್ತ ಮುಂಜಾಕರೂಕತೆಯಿಂದ ಈ ಹರಡುವಿಕೆಯನ್ನು ನಿಯಂತ್ರಿಸಬಹುದು. ಇದಕ್ಕಾಗಿ ಎಲ್ಲರೂ ಈ ಬಗ್ಗೆ ತಿಳಿದುಕೊಂಡಿರುವುದು ಅಗತ್ಯವಾಗಿದೆ.

ಇದು ಹೇಗೆ ಹರಡುತ್ತದೆ?

ಇದು ಹರಡುವುದು ಹೀಗೇ ಎಂದು ಒಂದೇ ಮಾತಿನಲ್ಲಿ ಕಡ್ದಿ ಮುರಿದಂತೆ ಹೇಳಲು ಸಾಧ್ಯವಿಲ್ಲ. ಈ ಜ್ವರದ ಬಗ್ಗೆ ಅಧ್ಯಯನ ನಡೆಸಿದ ವೈದ್ಯರ ತಂಡದ ಅಭಿಪ್ರಾಯದ ಪ್ರಕಾರ ವೈರಸ್ ಬೆರೆತ ನೀರು, ಮಾಂಸ, ಸೇವಿವುದರಿಂದ ಕೊಂಚ ಮಟ್ಟಿಗೆ ಹರಡಬಹುದಾದರೂ ಬಹುಮಟ್ಟಿಗೆ ಈ ಜ್ವರಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ, ಈ ದ್ರವವನ್ನು ಒರೆಸಿಕೊಂಡ ಕೈಯನ್ನು ಮುಟ್ಟಿದ ಜಾಗವನ್ನು ಬೇರೆಯವರು ಮುಟ್ಟಿ ಆಹಾರವಸ್ತುಗಳನ್ನು ಮುಟ್ಟಿದಾಗ ಇದು ಹರಡುತ್ತದೆ. ಸತತ ಕೆಮ್ಮು ಈ ಜ್ವರದ ಒಂದು ಲಕ್ಷಣವಾಗಿದ್ದು ಜನನಿಬಿಡ ಸ್ಥಳಗಳಲ್ಲಿ ಸೀನುವುದರಿಂದ ಅಥವಾ ಕೆಮ್ಮುವುದರಿಂದ ತಕ್ಷಣ ಅಲ್ಲಿ ಉಪಸ್ಥಿತರಿದ್ದ ಅಷ್ಟೂ ಜನರು ಪೀಡಿತರಾಗುತ್ತಾರೆ.

ಈ ಜ್ವರ ಪ್ರಾಣಾಪಾಯವನ್ನು ತರಬಲ್ಲುದೇ?

ಮೆಕ್ಸಿಕೋ, ಭಾರತ ಸೇರಿದಂತೆ ಕೆಲವೆಡೆ ಈ ಜ್ವರದಿಂದ ಸಾವುಗಳಾಗಿರುವ ವರದಿಯಾಗಿದೆ. ಆದರೆ ಇದಕ್ಕೆ ಸೂಕ್ತ ಚಿಕಿತ್ಸೆ ಸಕಾಲಕ್ಕೆ ಸಿಗದೇ ಇದ್ದುದು ಈ ಸಾವುಗಳಿಗೆ ಕಾರಣವಾಗಿದೆ. ಈ ಜ್ವರವನ್ನು ನಿಯಂತ್ರಿಸಲು ಸೂಕ್ತ ಔಷಧಿಗಳು ಲಭ್ಯವಿವೆ. ಒಂದು ವೇಳೆ ಕ್ಲುಪ್ತಕಾಲಕ್ಕೆ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ಪ್ರಾಣಾಪಾಯವಿದೆ.

ಈ ಜ್ವರದ ಲಕ್ಷಣಗಳೇನು?

ಈ ಜ್ವರದ ಪ್ರಮುಖ ಲಕ್ಷಣಗಳೆಂದರೆ ಸತತ ಕೆಮ್ಮು, ಅತೀವ ಜ್ವರ, ಕಫಗಟ್ಟಿರುವ ಗಂಟಲು, ಇಡಿಯ ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಅತೀವ ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು. ಕೆಲವರಲ್ಲಿ ವಾಂತಿ ಮತ್ತು ಬೇಧಿಯಾಗಿರುವುದನ್ನೂ ಗಮನಿಸಲಾಗಿದೆ.

ಈ ಜ್ವರ ಬರದಂತೆ ತಡೆಗಟ್ಟುವುದು ಹೇಗೆ?

ಈ ಜ್ವರವಿರುವ ಊರಿನಲ್ಲಿ ಅಥವಾ ಇರಬಹುದೆಂಬ ಅನುಮಾನವಿರುವ ಯಾವುದೇ ಸ್ಥಳದಲ್ಲಿ ನಿಮ್ಮ ಮೂಗು ಮತ್ತು ಬಾಯಿಯನ್ನು ಒಂದು ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಅಥವಾ ಔಷಧಿ ಅಂಗಡಿಗಳಲ್ಲಿ ದೊರಕುವ ಮಾಸ್ಕ್ ಗಳನ್ನೂ ಬಳಸಬಹುದು. (ಆದರೆ ಪ್ರತಿಬಾರಿ ಹೊಸತನ್ನೇ ಬಳಸಬೇಕು, ಉಪಯೋಗಿಸಿದ್ದನ್ನು ಸುಟ್ಟುಬಿಡಬೇಕು). ಸಾರ್ವಜನಿಕ ಸ್ಥಳಗಳಲ್ಲಿ ಅನಿವಾರ್ಯವಾಗಿ ಸ್ಪರ್ಶಿಸಲೇಬೇಕಾದ ಮೆಟ್ಟಿಲ ಪಕ್ಕದ ಕಟಕಟೆ,ಬಾಗಿಲ ಹಿಡಿ, ಚಿಕಲ ಮೊದಲಾದವುಗಳನ್ನು ಸ್ಪರ್ಶಿಸಿದ ಬಳಿಕ ತಪ್ಪಿಯೂ ಕೈ ತೊಳೆಯದೇ ಯಾವುದೇ ಆಹಾರವಸ್ತುಗಳನ್ನೂ ನಿಮ್ಮ ಮೂಗು, ಬಾಯಿ, ಕಣ್ಣುಗಳನ್ನು ಸ್ಪರ್ಶಿಸಲೇ ಬೇಡಿ. ಈ ಜ್ವರ ಬಂದವರ ಸಾಂಗತ್ಯದಿಂದ ದೂರವಿರಿ. ಈಗ ನೀರಿಲ್ಲದೇ ಕೈತೊಳೆಯಬಹುದಾದ hand sanitizer ಎಂಬ ದಟ್ಟಸೋಪಿನ ದ್ರಾವಣ ಔಷಧಿ ಅಂಗಡಿಯಲ್ಲಿ ಲಭ್ಯವಿದೆ. ಕೊಂಚ ದುಬಾರಿಯೆಂದು ಕಂಡುಬಂದರೂ ಪರವಾಗಿಲ್ಲ, ಒಂದು ಚಿಕ್ಕ ಬಾಟಲಿ ಸದಾ ನಿಮ್ಮೊಂದಿಗಿರಲಿ. ಈ ದ್ರವದಿಂದ ಕೈತೊಳೆದುಕೊಂಡು ಕಾಗದದ ವಸ್ತ್ರದಿಂದ ಒರೆಸಿಕೊಳ್ಳುವ ಮೂಲಕ ಈ ಜ್ವರದಿಂದ ಪೀಡಿತರಾಗುವ ಸಂಭವದಿಂದ ಪಾರಾಗಬಹುದು.

ಕೇವಲ ಮಾಸ್ಕ್ ಧರಿಸುವುದರಿಂದ ಈ ಜ್ವರವನ್ನು ತಡೆಗಟ್ಟಬಹುದೇ?

ನಮ್ಮಲ್ಲಿ ಹೆಚ್ಚಿನವರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಕೇವಲ ಮಾಸ್ಕ್ ತೊಡುವುದರಿಂದ ಗಾಳಿಯಲ್ಲಿ ತೇಲಿ ಬರುತ್ತಿರುವ ಕ್ರಿಮಿಗಳನ್ನು ತಡೆಗಟ್ಟಬಹುದೇ ವಿನಃ ನಿಮ್ಮ ಕೈಗಳ ಮೂಲಕ ಬರುವ ಕ್ರಿಮಿಗಳನ್ನಲ್ಲ. ಆದುದರಿಂದ ಸ್ವಚ್ಛತೆಯನ್ನು ಎಲ್ಲಾ ರೀತಿಯಲ್ಲಿ ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಹಿಂದಿರುಗಿದ ಬಳಿಕ ಕೈ, ಕಾಲು, ಮುಖಗಳನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆದ ಬಳಿಕವೇ ಯಾವುದೇ ಕೆಲಸಕ್ಕೆ ತೊಡಗುವುದು ಉತ್ತಮ.

ಈ ಜ್ವರಕ್ಕೆ ಔಷಧಿ ಇದೆಯೇ?

ಹೌದು, ಇಂದು ಈ ವೈರಸ್ಸುಗಳನ್ನು ಸದೆಬಡಿಯಲು ಸಮರ್ಥವಾಗಿರುವ ಔಷಧಿಗಳು ಲಭ್ಯವಿದ್ದು ಎಲ್ಲಾ ದೇಶಗಳ ಸರ್ಕಾರಗಳು ಇವುಗಳ ಸುಲಭ ವಿಲೇವಾರಿಗೆ ರೆಡ್ ಕ್ರಾಸ್ ಸಂಸ್ಥೆಯ ನೆರವಿನೊಂದಿಗೆ ವ್ಯವಸ್ಥೆ ಮಾಡಿಕೊಂಡಿವೆ. ಹಾಗಾಗಿ ಈ ಜ್ವರದ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರು ನೀಡುವ ಚಿಕಿತ್ಸೆ ಮತ್ತು ರೋಗ ಹರಡದಂತೆ ಕೈಗೊಳ್ಳುವ ಕ್ರಮಗಳನ್ನು ಪಾಲಿಸಿ. ಉಲ್ಬಣಾವಸ್ಥೆಗೂ ಮುನ್ನ ಔಷಧಿ ತೆಗೆದುಕೊಳ್ಳುವ ಮೂಲಕ ಈ ಜ್ವರವನ್ನು ನಿಗ್ರಹಿಸಬಹುದು.

ಈ ಜ್ವರ ಬರದಂತೆ ತಡೆಗಟ್ಟುವ ಲಸಿಕೆ ಇದೆಯೇ?

ಇಲ್ಲ, ಇದುವರೆಗೂ ಈ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಈ ಬಗ್ಗೆ ವಿವಿಧ ದೇಶಗಳಲ್ಲಿ ಸಂಶೋಧನೆಗಳು ಪ್ರಗತಿಯಲ್ಲಿದ್ದು ಶೀಘ್ರವೇ ಲಸಿಕೆಯನ್ನು ಕಂಡುಹಿಡಿಲು ಸಾಧ್ಯವಾಗಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ.

ಹಂದಿ ಮಾಂಸದ ಸೇವನೆಯಿಂದ ಈ ಜ್ವರ ಬರುತ್ತದೆಯೇ?

ಈ ಜ್ವರ ಬರಲು ಹಂದಿಮಾಂಸ ತಿನ್ನುವುದು ಪ್ರಮುಖ ಕಾರಣವಲ್ಲ. ಆದರೆ ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ಮಾತ್ರ ರೋಗ ಹರಡುವ ಸಂಭವವಿದೆ. ಅಲ್ಲದೇ ಇಂತಹ ಮಾಂಸವನ್ನು ಸೇವಿಸುವುದರಿಂದ ಇತರ ರೋಗಗಳಿಗೂ ಆಹ್ವಾನ ನೀಡಿದಂತಾಗುತ್ತದೆ.

ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಏನು ಮಾಡಬೇಕು?

ಪ್ರಥಮವಾಗಿ ನಿಮ್ಮ ಮೂಗು, ಬಾಯಿಗಳನ್ನು ಕರವಸ್ತ್ರ ಅಥವಾ ಮಾಸ್ಕ್ ನಿಂದ ಮುಚ್ಚಿಕೊಂಡು ನಿಮ್ಮ ಕುಟುಂಬ ವೈದ್ಯರ ಅಥವಾ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ. ನಿಮ್ಮ ಕುಟುಂಬವರ್ಗದವರಿಗೆ ನಿಮ್ಮಿಂದ ಈ ರೋಗ ಹರಡುವ ಎಲ್ಲಾ ಸಂಭವವಿರುವುದರಿಂದ ಅತಿಹೆಚ್ಚಿನ ಕಾಳಜಿ ವಹಿಸಿ. ಬಳಿಕ ನಿಮ್ಮ ವೈದ್ಯರು ಸೂಚಿಸುವ ಔಷಧಿಗಳನ್ನು ಮತ್ತು ಸ್ವಚ್ಛತೆಯ ಕ್ರಮಗಳನ್ನು ಕೈಗೊಳ್ಳಿ. ಶೀಘ್ರದಲ್ಲಿಯೇ ನೀವು ಗುಣಮುಖರಾಗುವಿರಿ.

ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?

ಈ ಜ್ವರ ನಿಮಗೆ ಉಸಿರಾಡಲು ತೊಂದರೆ, ನೀರು ಕುಡಿಯಲು ಕಷ್ಟವಾಗುವುದು, ಚರ್ಮ ನೀಲಿಗಟ್ಟುವುದು ಮತ್ತು ಅತೀವವಾದ ಜ್ವರ ಪ್ರಮುಖವಾದ ಲಕ್ಷಣಗಳಾಗಿವೆ.

ವಯಸ್ಕರಲ್ಲಿ ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?

ಜ್ವರದ ಲಕ್ಷಣಗಳು ಕಂಡುಬಂದ ಕೆಲವೇ ಸಮಯದಲ್ಲಿ ವಾಂತಿ, ತಲೆಸುತ್ತುವುದು, ಹೊಟ್ಟೆಯಲ್ಲಿ ನೋವು, ಉಸಿರಾಟದಲ್ಲಿ ತೊಂದರೆ ಮತ್ತು ಗೊಂದಲದಲ್ಲಿರುವುದು ಮೊದಲಾದ ಪರಿಣಾಮಗಳನ್ನು ನೋಡಬಹುದು.

ಯಾವ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು?

ಒಂದು ವೇಳೆ ನಿಮ್ಮ ವಸತಿ ಪ್ರದೇಶದಲ್ಲಿ ಹಂದಿಜ್ವರ ಕಾಣಿಸಿಕೊಂಡರೆ ಇದಕ್ಕೆ ಅಗತ್ಯವಾದ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ಮುಂಚಿತವಾಗಿ ಕೊಂಡು ಶೇಖರಿಸಿಟ್ಟುಕೊಳ್ಳಿ. ಜ್ವರದ ಲಕ್ಷಣಗಳು ಕಂಡು ಬಂದ ಕೂಡಲೇ ಈ ಔಷಧಿಗಳನ್ನು ರೋಗಿಗೆ ಸೇವಿಸಲು ನೀಡಿ ಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಿರಿ

ಯಾವುದಾದರೂ ಮನೆಮದ್ದು ಲಭ್ಯವಿದೆಯೇ?

ಈ ವೈರಸ್ ಅತ್ಯಂತ ಮಾರಕವಾಗಿದ್ದು ಯಾವುದೇ ಮನೆಮದ್ದಿಗೆ ಬಗ್ಗುವುದಿಲ್ಲವಾದುದರಿಂದ ವೈದ್ಯರು ಶಿಫಾರಸ್ಸು ಮಾಡಿದ ಔಷಧಿಗಳನ್ನೇ ಅನುಸರಿಸಿ. ಯಾವುದೇ ಕಾರಣಕ್ಕೂ ಈ ಜ್ವರವನ್ನು ಲಘುವಾಗಿ ಪರಿಗಣಿಸುವುದು ತರವಲ್ಲ. ಮನೆಮದ್ದು ಈ ಜ್ವರಕ್ಕೆ ಸೂಕ್ತವಲ್ಲ.

ಮಾರಕ ಹಂದಿ ಜ್ವರದ ಹೆಡೆಮುರಿ ಕಟ್ಟಿಹಾಕುವ ಅದ್ಭುತ ಮನೆಮದ್ದು

ಹಂದಿಜ್ವರ (Swine influenza) ಒಬ್ಬರಿಂದೊಬ್ಬರಿಗೆ ಹರಡುವ ಮಾರಕ ರೋಗವಾಗಿದೆ. ಸಾಮಾನ್ಯವಾಗಿ ಕೊಳಕಾಗಿರುವ ಹಂದಿಗಳ ಶ್ವಾಸನಳಿಕೆಯಲ್ಲಿ ಬೆಳೆಯುವ ಈ ರೋಗಕ್ಕೆ ಕಾರಣವಾದ ವೈರಸ್ಸುಗಳು ಶೀಘ್ರವಾಗಿ ವಂಶಾಭಿವೃದ್ಧಿಗೊಂಡು ನೀರಿನ ಅಥವಾ ಆಹಾರವಾಗಿ ಮನುಷ್ಯರ ದೇಹ ಸೇರುತ್ತದೆ. ಮನುಷ್ಯರಲ್ಲಿ ಹಂದಿಯ ಹೊರತಾಗಿಯೂ ಈ ವೈರಸ್ಸು ದೇಹವನ್ನು ಪ್ರವೇಶಿಸಬಹುದು, ಇದಕ್ಕೆ ಪರ್ಯಾಯ ಕಾರಣಗಳಿರಬಹುದು. ಒಮ್ಮೆ ವೈರಸ್ಸು ದೇಹ ಹೊಕ್ಕಿದ ಬಳಿಕ ಕೆಮ್ಮು, ಸುಸ್ತು, ವಾಂತಿ, ವಾಕರಿಕೆ, ಜ್ವರ, ಅತಿಸಾರ, ಮೈಕೈನೋವು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಇದು ರೋಗಿಯ ಸೀನಿನ ತುಂತುರು, ಜೊಲ್ಲು ಮೊದಲಾದವುಗಳ ಮೂಲಕ ಗಾಳಿಯನ್ನು ಸೇರಿ ಇನ್ನೊಬ್ಬರಿಗೆ ಹರಡುತ್ತದೆ. ಈ ವೈರಸ್ ಧಾಳಿಯಿಟ್ಟ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಸ್ಪರ್ಶಿಸುವ ವಸ್ತುಗಳನ್ನು (ಕಟಕಟೆ, ಬಾಗಿಲ ಚಿಲಕ ಮೊದಲಾದವು) ಸ್ಪರ್ಶಿಸುವವರೂ ವೈರಸ್ಸಿನ ಧಾಳಿಗೆ ತುತ್ತಾಗಬಹುದು. ಇದನ್ನು ಬುಡಸಹಿತ ನಿರ್ನಾಮ ಮಾಡಲು ಸಂಶೋಧನೆಗಳು ನಡೆಯುತ್ತಿವೆ. ಆದರೂ ಎಲ್ಲರೂ ಈ ಬಗ್ಗೆ ಜಾಗರೂಕರಾಗಿರುವುದು ಅತ್ಯಂತ ಅಗತ್ಯವಾಗಿದೆ. ಸಂತೋಷದ ವಿಷಯವೆಂದರೆ ಇಂದು ಈ ಜ್ವರಕ್ಕೆ ಮದ್ದು ಲಭ್ಯವಿದೆ ಆಯುರ್ವೇದದಲ್ಲಿ ಈ ಜ್ವರವನ್ನು ವಾತ ಕಫಜ ಜ್ವರ ಎಂದು ಕರೆಯಲಾಗಿದೆ. ದೇಹದ ವಾತ (ವಾಯು) ಮತ್ತು ಕಫ (ನೀರು) ದ ಅಂಶಗಳು ಬಾಧಿತವಾಗಿರುವುದರಿಂದ ಈ ಹೆಸರನ್ನು ಸೂಚಿಸಲಾಗಿದೆ. ಇದು ನಮ್ಮ ಶ್ವಾಸವ್ಯವಸ್ಥೆಯ ಮೇಲೆ ಧಾಳಿಯಿಟ್ಟು ಗಾಳಿಯಾಡುವ ಕೊಳವೆಗಳಲ್ಲಿ ನಿರಾಳವಾಗಿ ಗಾಳಿಯಾಡದಂತೆ ತಡೆಯೊಡ್ಡುತ್ತದೆ. ಇದರಿಂದ ಕೆಮ್ಮು, ಸುಸ್ತು, ಮೈ ಕೈ ನೋವು ಮೊದಲಾದ ತೊಂದರೆಗಳು ಕಂಡುಬರುತ್ತದೆ.

ಒಂದು ವೇಳೆ ನೀವು ಜ್ವರದಿಂದ ಬಳಲುತ್ತಿದ್ದರೆ ಮತ್ತು ಫ್ಲೂ ಎಂದು ಕಂಡುಬಂದರೆ ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳಿಂದ ಮದ್ದು ತಯಾರಿಸಿಕೊಳ್ಳಬಹುದು. ಕೆಳಗೆ ವಿವರಿಸಿದ ವಿಧಾನಗಳಲ್ಲಿ ನಿಮಗೆ ಅತ್ಯಂತ ಸೂಕ್ತವಾದ ಒಂದು ವಿಧಾನ ಅಥವಾ ಎರಡಕ್ಕಿಂತ ಹೆಚ್ಚಿನ ವಿಧಾನಗಳನ್ನು ಅನುಸರಿಸಬಹುದು. ಆದರೆ ಇವು ಪ್ರಾರಂಭಿಕ ಅಥವಾ ಚಿಕ್ಕದಾಗಿ ಬಂದ ಜ್ವರಕ್ಕೆ ಮಾತ್ರ ಅನ್ವಯವಾಗುತ್ತದೆ.

ಒಂದು ವೇಳೆ ಜ್ವರದ ಲಕ್ಷಣಗಳು ತೀವ್ರ ಸ್ವರೂಪ ಪಡೆಯುವಂತಿದ್ದರೆ ಈ ವಿಧಾನಗಳು ಹೆಚ್ಚಿನ ಪರಿಣಾಮವನ್ನುಂಟುಮಾಡಲಾರವು. ಅದರಲ್ಲೂ ನಿಮ್ಮ ಜ್ವರ (ಹೆಚ್1 ಎನ್ 1) ಆಗಿದ್ದರೆ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಜೊತೆಗೆ ನಿಮ್ಮಿಂದ ಇತರರಿಗೆ ಈ ಜ್ವರ ಹರಡದಂತೆ ಒಂಟಿತನದಲ್ಲಿರುವುದೂ ಜಾಗರೂಕತಾ ಕ್ರಮವಾಗಿದೆ.

ತುಳಸಿ ಎಲೆಗಳು

ಪ್ರತಿದಿನ ಬೆಳಿಗ್ಗೆ ಚೆನ್ನಾಗಿ ತೊಳೆದ ಐದು ಪೂರ್ಣಗಾತ್ರದ ತುಳಸಿ ಎಲೆಗಳನ್ನು ಹಸಿಯಾಗಿ ಜಗಿದು ನುಂಗಿರಿ (ಚಿಕ್ಕದಾದರೆ ಏಳರಿಂದ ಎಂಟು ಎಲೆಗಳು). ಚೆನ್ನಾಗಿ ನೀರಾಗುವವರೆಗೆ ಅಗಿಯುವುದು ಅಗತ್ಯ. ತುಳಸಿ ಎಲೆಗಳು ಹಲವು ಕಾಯಿಲೆಗಳಿಗೆ ಉತ್ತಮ ಚಿಕಿತ್ಸಕವಾಗಿದೆ. ಈ ಎಲೆಗಳನ್ನು ನುಂಗುವುದರಿಂದ ಶ್ವಾಸಕೋಶಗಳು ಶುದ್ಧಿಯಾಗುವುದು ಮತ್ತು ಶ್ವಾಸನಳಿಕೆಯಲ್ಲಿ ವೈರಸ್ಸಿನಿಂದ ಸೋಂಕು ಉಂಟಾಗಿದ್ದರೆ ಅದನ್ನು ನಿವಾರಿಸಲು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು.

ಅಮೃತಬಳ್ಳಿ (Giloi - ವೈಜ್ಞಾನಿಕ ಹೆಸರುTinospora cordifolia)

ಹಂದಿಜ್ವರಕ್ಕೆ ಅಮೃತಬಳ್ಳಿಯೂ ಉತ್ತಮ ಮತ್ತು ಪರಿಣಾಮಕಾರಿಯಾದ ಔಷಧಿಯಾಗಿದೆ. ಈ ಬಳ್ಳಿಯ ಸುಮಾರು ಒಂದು ಅಡಿ ಉದ್ದವನ್ನು ಕತ್ತರಿಸಿಕೊಂಡು ನೀರಿನಲ್ಲಿ ಬೇಯಿಸಿ. ಈ ನೀರಿಗೆ ಐದರಿಂದ ಆರು ತುಳಸಿ ಎಲೆಗಳನ್ನು ಸೇರಿಸಿ. ಸುಮಾರು ಇಪ್ಪತ್ತು ನಿಮಿಷಗಳ ಕುದಿಯುವಿಕೆಯ ಬಳಿಕ ಎಲೆ ತನ್ನ ಸಾರವನ್ನೆಲ್ಲಾ ನೀರಿನಲ್ಲಿ ಬಿಡುತ್ತದೆ. ಈ ನೀರಿಗೆ ಹಿಮಾಲಯದ ಸೇಂಧಾ ಉಪ್ಪು (ಹಿಮಾಲಯದ ಕೆಂಪು ಕಲ್ಲುಪ್ಪು), ಕೆಲವು ಕಾಳು ಕಾಳುಮೆಣಸು, ಕಪ್ಪು ಉಪ್ಪು (black salt), ಕಲ್ಲುಸಕ್ಕರೆಯ ಚಿಕ್ಕ ತುಂಡು ಹಾಕಿ ಕದಡಿ ಹಾಗೇ ಬಿಡಿ. ಸ್ವಲ್ಪ ತಣಿದ ಬಳಿಕ ಈ ನೀರನ್ನು ಸೋಸಿ ಉಗುರುಬೆಚ್ಚಗಿರುವಂತೆಯೇ ಕುಡಿಯಿರಿ. ಇದು ವೈರಸ್ ದಾಳಿಗೂ ಉತ್ತಮವಾಗಿದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಒಂದು ವೇಳೆ ಹಸಿ ಅಮೃತಬಳ್ಳಿಯ ಎಲೆಗಳು ಸಿಗದೇ ಇದ್ದರೆ ಆಯುರ್ವೇದ ಅಂಗಡಿಗಳಲ್ಲಿ ಒಣ ಎಲೆಗಳ ಪುಡಿಯೂ ಸಿಗುತ್ತದೆ. ಈ ದ್ರವವನ್ನು ಪ್ರತಿದಿನ ಒಂದು ಲೋಟ ಕುಡಿಯಬೇಕು. ರಾತ್ರಿ ಮಲಗುವ ಮುನ್ನ ಸೇವಿಸಿದರೆ ಉತ್ತಮ.

ಕರ್ಪೂರ

ಒಂದು ಚಿಕ್ಕ ಗುಳಿಗೆಯ ಗಾತ್ರದ ಕರ್ಪೂರವನ್ನು ನೀರಿನಲ್ಲಿ ಕದಡಿ ಕರಗಿದ ಬಳಿಕ ಕುಡಿಯುವುದೂ ಹಂದಿಜ್ವರಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಆದರೆ ಇದರ ಪ್ರಮಾಣ ತಿಂಗಳಿಗೆ ಒಂದು ಲೋಟ ಮಾತ್ರ. ಜ್ವರ ಹೆಚ್ಚಿದ್ದರೆ ತಿಂಗಳಿಗೆ ಎರಡು ಲೋಟ ಕುಡಿಯಬಹುದು. ಮಕ್ಕಳಿಗೆ ನೀಡುವುದಾದರೆ ಬೇಯಿಸಿದ ಆಲುಗಡ್ಡೆಯಲ್ಲಿ ಕರ್ಪೂರವನ್ನು ಪುಡಿಮಾಡಿ ಮಿಶ್ರಣಮಾಡಿ ನೀಡಬಹುದು. ಮಕ್ಕಳಿಗೆ ಒಂದು ಬಿಲ್ಲೆಯ ಕಾಲರಿಂದ ಅರ್ಧಭಾಗದಷ್ಟು ಮಾತ್ರ ನೀಡಬೇಕು.

ಬೆಳ್ಳುಳ್ಳಿ

ಜ್ವರವಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸಬೇಕು. ಇದರಿಂದ ವೈರಸ್ಸುಗಳ ಮೇಲೆ ಧಾಳಿಯಾಗಿ ಜ್ವರ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಉಗುರುಬೆಚ್ಚನೆ ಬಿಸಿಯಾದ ಹಸುವಿನ ಹಾಲು

ಜ್ವರವಿದ್ದಾಗ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ಹಾಲಿನಲ್ಲಿ ಅರ್ಧ ಚಿಕ್ಕಚಮಚ ಹಳದಿಪುಡಿಯನ್ನು ಸೇರಿಸಿ ಕುಡಿಯುವುದರಿಂದಲೂ ಉತ್ತಮ ಪರಿಣಾಮ ಪಡೆಯಬಹುದು.

ಲೋಳೆಸರ

ಲೋಳೆಸರದ ಕೋಡೊಂದನ್ನು ಮುರಿದು ಅದರಿಂದ ಒಸರುವ ಲೋಳೆಯನ್ನು ಸಂಗ್ರಹಿಸಿ. ವಾಸನಾರಹಿತವಾದ ಈ ಲೋಳೆಯನ್ನು ಒಂದು ಲೋಟಕ್ಕೆ ಒಂದು ಚಮಚದಷ್ಟು ಪ್ರಮಾಣದಲ್ಲಿ ತಣ್ಣನೆಯ ನೀರಿನಲ್ಲಿ ಕದಡಿ ದಿನಕ್ಕೊಂದು ಲೋಟ ಕುಡಿಯಿರಿ. ಇದರಿಂದ ಬರೆಯ ಜ್ವರ ಕಡಿಮೆಯಾಗುವುದು ಮಾತ್ರವಲ್ಲ, ದೇಹದ ಇತರ ತೊಂದರೆಗಳಾದ ಮೂಳೆಗಂಟು ನೋವು, ಮೈಕೈ ನೋವು ಮೊದಲಾದವುಗಳೂ ಕಡಿಮೆಯಾಗುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ಜೊತೆಗೇ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಕಹಿಬೇವು

ಕಹಿಬೇವಿನ ಮರ ಮನೆಯ ಬಳಿ ಇದ್ದರೆ ನೀವು ಸೇವಿಸುವ ಗಾಳಿ ಸ್ವಚ್ಛವಾಗಿರುತ್ತದೆ. ಈ ಗಾಳಿ ವಾಯುವಿನ ಮೂಲಕ ತೇಲಿ ಬರುವ ವೈರಸ್ಸುಗಳನ್ನು ಹೊಡೆದೋಡಿಸುತ್ತದೆ. ಕಹಿಬೇವಿನ ನಾಲ್ಕೈದು ಎಲೆಗಳನ್ನು ಪ್ರತಿದಿನ ಜಗಿದು ಸೇವಿಸುವುದರಿಂದ ರಕ್ತಶುದ್ಧಿಯಾಗುತ್ತದೆ ಹಾಗೂ ದೇಹ ಜ್ವರದ ವಿರುದ್ಧ ಸೆಣೆಸಲು ಹೆಚ್ಚು ಸಬಲವಾಗುತ್ತದೆ.

ಪ್ರತಿದಿನದ ಪ್ರಾಣಾಯಾಮ

ಜ್ವರವಿದ್ದಾಗಲೂ ಬೆಳಿಗ್ಗೆ ನಡಿಗೆ ಅಥವಾ ನಿಧಾನಗತಿಯ ಓಟದ ಮೂಲಕ ನಿಮ್ಮ ಶ್ವಾಸಕೋಶ, ಗಂಟಲು ಮತ್ತು ಶ್ವಾಸನಾಳಗಳನ್ನು ಉತ್ತಮ ಸ್ಥಿತಿಯಲ್ಲಿರಿಸಬಹುದು. ಜೊತೆಗೆ ಪ್ರಾಣಾಯಾಮವನ್ನೂ ಅನುಸರಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದು ಮತ್ತು ವೈರಸ್ಸುಗಳ ವಿರುದ್ಧ ಹೋರಾಡಲು ದೇಹ ಶಕ್ತವಾಗುತ್ತದೆ. ಉತ್ತಮ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳುವ ಜೊತೆಗೇ ಗಾಳಿಯ ಮೂಲಕ ಹರಡುವ (ಹಂದಿಜ್ವರದ ವೈರಸ್ ಸಹಿತ) ರೋಗಗಳು ಸುಲಭವಾಗಿ ದೇಹ ಬಾಧೆಗೊಳಗಾಗದಂತೆ ರಕ್ಷಿಸುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ ಹೆಚ್ಚಿರುವ ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಿ. ಅದರಲ್ಲಿಯೂ ನೆಲ್ಲಿಕಾಯಿ ಫ್ಲೂ ಜ್ವರಕ್ಕೆ ಅತ್ಯುತ್ತಮವಾಗಿದೆ. ಆದರೆ ವರ್ಷದ ಎಲ್ಲಾ ಕಾಲದಲ್ಲಿ ನೆಲ್ಲಿಕಾಯಿ ಲಭ್ಯವಿಲ್ಲದಿರುವುದರಿಂದ ಸಿದ್ಧರೂಪದಲ್ಲಿ ಸಿಗುವ ನೆಲ್ಲಿಕಾಯಿಯ ರಸವನ್ನು ಸಹಾ ಸೇವಿಸಬಹುದು.

ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

ಹಂದಿಜ್ವರ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಂದ ನಿಮಗೆ ಬರಬಹುದಾದ ಸಾಧ್ಯತೆ ಅತ್ಯಂತ ಹೆಚ್ಚಾಗಿರುವುದರಿಂದ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಸಾರ್ವಜನಿಕ ಸ್ಥಳಗಳಲ್ಲಿ ಏನನ್ನು ಸ್ಪರ್ಶಿಸಿದರೂ ಸೋಪು (ಅಥವಾ hand sanitizer) ಉಪಯೋಗಿಸಿ ಕೈ ತೊಳೆಯದೇ ಆಹಾರ ವಸ್ತುಗಳನ್ನಾಗಲೀ ನಿಮ್ಮ ಮೂಗು ಬಾಯಿ ಗಳನ್ನಾಗಲೀ ಮುಟ್ಟಬೇಡಿ. ಸೋಪಿನಿಂದ ತೊಳೆದುಕೊಳ್ಳುವುದಾದರೆ ಕಾಟಾಚಾರಕ್ಕೆ ತೊಳೆದಂತೆ ಮಾಡಬೇಡಿ, ಸುಮಾರು ಇಪ್ಪತ್ತು ಸೆಕೆಂಡುಗಳ ಕಾಲ ಎರಡೂ ಹಸ್ತಗಳು ಸೋಪಿನಿಂದ ಸಂಪೂರ್ಣವಾಗಿ ಆವರಿಸುವಂತೆ ತೊಳೆದುಕೊಳ್ಳಿರಿ. ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಸಾಧ್ಯವಾದರೆ ಮಾಸ್ಕ್ ಧರಿಸಿ.ಯಾವುದೇ ಆಹಾರವಸ್ತುಗಳನ್ನು ಕೈತೊಳೆಯದೇ ಮುಟ್ಟಬೇಡಿ. ಈ ಜ್ವರ ಇರುವ ಸ್ಥಳಗಳಲ್ಲಿ ತೆರೆದ ಸ್ಥಳಗಳಲ್ಲಿ ಮಾರಾಟಕ್ಕಿಟ್ಟ ಆಹಾರವಸ್ತುಗಳನ್ನು ಖರೀದಿಸಬೇಡಿ. ಪ್ರತಿದಿನವೂ ಸ್ವಚ್ಛಗೊಂಡಿರುವ ಬಟ್ಟೆಗಳನ್ನೇ ತೊಡಿರಿ, ಕೊಳೆಬಟ್ಟೆಗಳನ್ನು ಬಿಸಿನೀರು ಉಪಯೋಗಿಸಿಯೇ ಒಗೆಯಿರಿ. ನಿಮ್ಮ ಸುತ್ತ ಮುತ್ತ ನೈರ್ಮಲ್ಯವನ್ನು ಸಾಧ್ಯವಿದ್ದಷ್ಟು ಹೆಚ್ಚು ಪಾಲಿಸಿ.

ಮೂಲ : ಬೋಲ್ಡ್ ಸ್ಕೈ (http://www.boldsky.com/)

ಕೊನೆಯ ಮಾರ್ಪಾಟು : 4/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate