অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೆಲವು ಮಾಹಿತಿಗಳು

ಆಟಿಸಂ ಅರಿವು

ಮಗುವಿನ ಜನನದೊಂದಿಗೆ ಕಂಡುಬರುವ ಈ ದೋಷ, ಬೆಳವಣಿಗೆಯ ಎಲ್ಲ ಹಂತದಲ್ಲಿಯೂ ಕಂಡುಬರುತ್ತದೆ. ಹುಟ್ಟುವ ಪ್ರತಿ 10 ಸಾವಿರ ಮಕ್ಕಳಲ್ಲಿ 3ರಿಂದ 5 ಮಕ್ಕಳಿಗೆ ಈ ದೋಷ ಕಂಡುಬರುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ಎನ್ನುವುದೊಂದು ಗಮನಾರ್ಹ ಅಂಶ.

ಬೆಳವಣಿಗೆಯಲ್ಲಿ ದೋಷ: ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಸಮರ್ಪಕವಾಗಿರುವುದಿಲ್ಲ. ಮಗುವಿನ ಬೆಳವಣಿಗೆಯಲ್ಲಿ ಮೈಲಿಗಲ್ಲುಗಳುಂಟು. ಅಂದರೆ ಮಗು ತಾಯಿಯನ್ನು ಗುರುತಿಸುವುದು, ನಗುವುದು, ಬೋರಲಾಗುವುದು, ಅಂಬೆಗಾಲು, ಕುಳಿತುಕೊಳ್ಳುವುದು, ನಿಲ್ಲುವುದು, ನಡಿಗೆ, ಮಾತು, ಅಳು, ಸಿಟ್ಟು. ಈ ಎಲ್ಲವೂ ಮಗುವಿನ ವಯಸ್ಸಿಗೆ ತಕ್ಕಂತೆ ಕಾಣಿಸಿಕೊಳ್ಳುತ್ತದೆ. ಇವು ಎಲ್ಲ  ಮಕ್ಕಳಲ್ಲೂ ಸಾಮಾನ್ಯವಾಗಿ ಕಾಣುವ  ಮೈಲಿಗಲ್ಲುಗಳು.

ಆಟಿಸಂ ಇರುವ ಮಗುವಿನಲ್ಲಿ ಈ  ಮೈಲಿಗಲ್ಲುಗಳೆಲ್ಲವೂ ನಿಧಾನವಾಗಿರುತ್ತವೆ.  ಕಲಿಕೆ, ಗ್ರಹಿಕೆ  ನಿಧಾನವಾಗಿಯೂ ಮಂದಗತಿಯಲ್ಲಿ ಸಾಗುತ್ತದೆ. ಸಾಮಾನ್ಯವಾಗಿ ಒಂದನೇ ವರ್ಷದಲ್ಲಿ ಕಾಣಬರುವ ತೊದಲ ನುಡಿ 5–6ನೇ ವಯಸ್ಸಿಗೆ ಬರಬಹುದು. ನಡಿಗೆಯೂ 5–6ನೇ ವಯಸ್ಸಿಗೆ ಬರಬಹುದು. ಓಡುವುದು, ಮಹಡಿ ಹತ್ತುವುದು ಎಲ್ಲವೂ ತಡವಾಗುತ್ತದೆ. ಭಾವನಾತ್ಮಕ ಪ್ರತಿಕ್ರಿಯೆಯಲ್ಲಿಯೂ ಯಾವುದೇ ಬದಲಾವಣೆಗಳಿರುವುದಿಲ್ಲ. ಅಮ್ಮನನ್ನೂ ಗುರುತಿಸಲಾಗದ ಮಕ್ಕಳು ಇವು.

ಆಟಿಸಂ ಲಕ್ಷಣಗಳು


ನೋಡಲು ಬೇರೆ ಮಕ್ಕಳಂತೆಯೇ ಕಾಣುತ್ತವೆ.  ಎತ್ತರ ಸ್ವಲ್ಪ ಕಡಿಮೆ ಇರಬಹುದು. ಆರೋಗ್ಯದ ದೃಷ್ಠಿಯಿಂದ ನೋಡಿದರೆ ಈ ಮಕ್ಕಳಲ್ಲಿ ಜ್ವರ ಬರುವುದೇ ಕಡಿಮೆ ಎನ್ನಿಸುತ್ತದೆ. ಆದರೆ ಜ್ವರ ಬಂದಾಗಲೂ ಆಟಿಸ್ಟಿಕ್‌ ಮಕ್ಕಳ ಮೈ ಸುಡುವುದಿಲ್ಲ. ಬದಲಾಗಿ ಜ್ವರದಿಂದ ದೇಹದ ಮೇಲೆ ಪರಿಣಾಮ ಆಗುತ್ತದೆ. ಜ್ವರ ಬಂದಾಗ ಮೈಸುಡುವುದು ಮೆದುಳಿನ ಚಟುವಟಿಕೆಯಿಂದ. ಮೆದುಳು ಸರಿಯಾಗಿ ಬೆಳೆಯದೇ ಇದ್ದಾಗ ಉಳಿದ ಕಾರ್ಯವೈಖರಿಯಲ್ಲಿಯೂ ಬದಲಾವಣೆಗಳಾಗುವುದಿಲ್. ಏರುಪೇರು, ಸುಮಾರು ಎಲ್ಲ ಇಂದ್ರಿಯಗಳಿಗೂ ಇದೇ ಸ್ಥಿತಿ. ಶ್ರವಣ, ಸ್ಪರ್ಷ ಯಾವುದೂ ಪೂರ್ಣವಾಗಿ ಕೆಲಸ ಮಾಡುವುದಿಲ್ಲ. ಸ್ಪರ್ಷದಲ್ಲಿ ಜ್ಞಾನವೂ ಕಡಿಮೆ ಇರುವುದರಿಂದ ನೋವು ತಿಳಿಯುವುದಿಲ್ಲ. ಮಗು ನೋವಿಗೆ ಸರಿಯಾಗಿ ಪ್ರತಿಕ್ರಯಿಸುವುದಿಲ್ಲ.

ಭಾವನಾತ್ಮಕ ಬೆಳವಣಿಗೆ


ಈ ಮಕ್ಕಳಿಗೆ ಮನೆಯವರನ್ನು, ಹೊರಗಿನವರನ್ನು ಗುರುತಿಸಲಾಗುವುದಿಲ್ಲ. ಪರಿಚಿತರು, ಅಪರಿಚಿತರು ಎಂಬ ವ್ಯತ್ಯಾಸ ಇರುವುದಿಲ್ಲ. ಆತ್ಮೀಯ ಭಾವನೆಯಾಗಲೀ, ಆತಂಕವಾಗಲೀ ಎರಡನ್ನೂ ವ್ಯಕ್ತ ಪಡಿಸಲಾಗದು. ಈ ಮಕ್ಕಳು ಬೆಳೆದಂತೆ ಓರಿಗೆಯವರೊಡನೆ ಗೆಳೆತನ ಬೆಳೆಸಿಕೊಳ್ಳುವುದಿಲ್ಲ. ಬೇರೆ ಮಕ್ಕಳೊಡನೆ ಆಟ–ಪಾಠ–ಪ್ರೀತಿ ವಾತ್ಸಲ್ಯ ಇವು  ಯಾವವೂ ಬೆಳೆಯುವುದಿಲ್ಲ. ಮಗು  ಒಂಟಿಯಾಗಿಯೇ ಇರಬಯಸುತ್ತದೆ. ಮತ್ತು ಆದರೆ ಕಡ್ಡಿ, ಕಾಗದ, ಕಸ ಮುಂತಾದವುಗಳೊಡನೆ ಒಂಟಿಯಾಗಿಯೇ ಆಡಿಕೊಳ್ಳುತ್ತದೆ.

ದೃಷ್ಟಿ


ಈ ಮಕ್ಕಳ ಕಣ್ಣು ನೋಡಲು ಸಾಮಾನ್ಯ ಮಕ್ಕಳಂತೆಯೇ ಕಾಣುತ್ತವೆ. ಆದರೆ ಈ ಮಕ್ಕಳಿಗೆ ಮನೆಯವರು ಯಾರು ಹೊರಗಿನವರು ಯಾರು ಎಂದು ತಿಳಿಯುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಅಕಸ್ಮಾತ್‌ ಹಾಗೆ ನೋಡಬೇಕಾಗಿ ಬಂದರೆ ಆ ನೋಟನ್ನು ತಪ್ಪಿಸುತ್ತವೆ. ಕಣ್ಣಿನಿಂದ ಮಾಡುವ ಸಂಕೇತ ಭಾಷೆಯನ್ನೂ ಅರಿಯುವುದಿಲ್ಲ, ಇದಕ್ಕೆಲ್ಲಾ ಮತ್ತದೇ ಕಾರಣ. ಬೆಳವಣಿಗೆಯ ದೋಶ. ಈ ಮಕ್ಕಳಿಗೆ ಕಣ್ಣು ಕಾಣಿಸುತ್ತದೆ; ಆದರೆ ದೃಶ್ಯದ ಅರಿವು ಇಲ್ಲ.

ಭಾಷೆಯ ಬೆಳವಣಿಗೆ


ಆಟಿಸ್ಟಿಕ್‌ ಮಕ್ಕಳಲ್ಲಿ ಭಾಷಾಜ್ಞಾನ ಬಹಳ ಕಡಿಮೆ. ಸಾಮಾನ್ಯವಾಗಿ 2–3 ವರ್ಷದ ಮಗುವಿನ ತೊದಲುಮಾತು ಕೇಳು ಚೆನ್ನ, ಆ ಸಹಜ ಮಕ್ಕಳು ಕಂಡಿದ್ದನ್ನೆಲ್ಲಾ ಹೇಳಬೇಕು–ಕೇಳಬೇಕು, ಕೇಳಲು–ಹೇಳಲು ಪದಗಳು ಬಾರದಿದ್ದಲ್ಲಿ ಕೈ–ಬಾಯಿ ಸಂಜ್ಞೆ ಮಾಡಿಯಾದರೂ ತಿಳಿಸುವ ಪ್ರಯತ್ನ ಮಾಡುತ್ತವೆ. ಆದರೆ ಆಟಿಸ್ಟಿಕ್‌ ಮಗು ಹಾಗಲ್ಲ. ಆಟಿಸ್ಟಿಕ್‌ ಮಗುವಿನಲ್ಲಿ ಯಾವುದೇ ಆಸೆ, ಭಾವನೆ ಪ್ರಯತ್ನ ಯಾವುದೂ ಕಾಣಿಸುವುದಿಲ್ಲ, ಈ ಮಕ್ಕಳಿಗೆ ಬರುವುದೇ ಕೆಲವು ಶಬ್ದಗಳು. ಆ ಶಬ್ದಗಳ ಬಳಕೆಯೂ ಕಡಿಮೆ, ಆಡಿದ ಪದಗಳನ್ನೇ ಮತ್ತೆ ಮತ್ತೆ ಆಡುತ್ತಿರುತ್ತವೆ. ಇ ಉದಾ ಹೋಗು ಗು...ಗು...ದು...  ತಾವಾಡುವ ಮಾತು  ಮತ್ತೊಬ್ಬರು ಕೇಳಬೇಕೆಂದೇನೂ ಇಲ್ಲ. ತಾವಾಡುವ ಶಬ್ದಗಳನ್ನು ತಾವೇ ಕೇಳಿಕೊಳ್ಳುತ್ತಿರುತ್ತವೆ.   ಆಡುವ ಮಾತು ಇತರರಿಗೆ ಸರಿಯಾಗಿ ತಿಳಿಯುವುದಿಲ್ಲ. ರೂಢಿಯ ಮೇಲೆ ಆ ಮಾತು ಮಗುವಿನ ತಾಯಿಗೆ ಅಥವಾ ಮನೆಯವರಿಗೆ ಸ್ವಲ್ಪ ತಿಳಿಯಬಹುದು, ಆದರೆ ಓರಗೆಯ ಮಕ್ಕಳಿಗೆ ಏನೇನೂ ತಿಳಿಯುವುದಿಲ್ಲ,  ಮತ್ತು ಆಟಿಸ್ಟಿಕ್‌ ಮಗುವಿಗೆ ಯಾವ ತರಹದ ಹೊಸತನವಾಗಲಿ, ಬದಲಾವಣೆ ಆಗಲಿ ಬೇಕಿಲ್ಲ.  ಭಾಷೆಯೇ ಬೇಡ, ಭಾಷೆಯ ಸಂಪರ್ಕವೂ ಬೇಕಿಲ್ಲ.

ಆಟಿಸ್ಟಿಕ್‌ ಮಕ್ಕಳ ನಡತೆ


ಕೆಲವು ಮಕ್ಕಳಲ್ಲಿ ಅತಿಯಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸ್ವಭಾವ ಕಾಣಿಸಬಹುದು. ಆದರೆ ಬಹುತೇಕ ಮಕ್ಕಳು ಒಂಟಿಯಾಗಿ ತಮ್ಮದೇ ಆದ ಲಹರಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ತಲೆ ಗೋಡೆಗೆ ಬಡಿಯುವುದು, ಕೂದಲು ಕಿತ್ತುವುದು, ಕಚ್ಚಿ ಗಾಯ ಮಾಡಿಕೊಳ್ಳುವುದು, ಕೈಕಾಲು ಆಡಿಸುವುದು, ಉಗುರು ಕಚ್ಚುವುದು, ವಿಚಿತ್ರ ರೀತಿಯಲ್ಲಿ ಕೂರುವುದು ಮುಂತಾದುವುಗಳನ್ನು ಮಾಡುತ್ತಿರುತ್ತಾರೆ. ಇದ್ಯಾವುದಕ್ಕೂ ಕಾರಣ ಬೇಕಿಲ್ಲ. ಗೋಡೆಗೆ ತಲೆ ಬಡಿದಾಗ ಆಗುವ ನೋವಿನ ಅರಿವು ಇವರಿಗಾಗದು. ಅದರೆ   ತಲೆ ಗೋಡೆಗೆ ತಾಗಿದಾಗ ಆಗುವ ‘ಡಗ್‌’ ‘ಡಗ್‌’ ಸದ್ದು ಈ ಮಕ್ಕಳನ್ನು ಸೆಳೆಯುತ್ತದೆ.

ಆಟಿಸ್ಟಿಕ್‌ ಮತ್ತು ಬುದ್ಧಿಮಾಂದ್ಯತೆ


ಈ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಹೆಚ್ಚು (ಎಂ.ಆರ್.) ಅವರ ಐಕ್ಯು ಪ್ರತಿಶತ 50 ಕ್ಕಿಂತ ಕಡಿಮೆ ಇರುತ್ತದೆ. ಆದರೆ ಕೆಲವು ಮಕ್ಕಳಿಗೆ ಮಗ್ಗಿ ಬಾಯಿಪಾಠ ಲೆಕ್ಕ, ಸಂಗೀತ ಇವುಗಳಲ್ಲಿ ಹೆಚ್ಚಿನ ಜ್ಞಾನ ಇರುತ್ತದೆ. ಆಟಿಸಂ ಇರುವ ಮಕ್ಕಳಲ್ಲಿ  ದೃಶ್ಯ, ಶ್ರವ್ಯ, ಸ್ಪರ್ಷ ಇವುಗಳ ದೋಷದ ಜೊತೆಗೆ ಗ್ರಹಣ ಶಕ್ತಿಯ ದೋಷ ಇರುತ್ತದೆ. ಇದರಿಂದ ಈ ಮಕ್ಕಳು ಸ್ಪಂದಿಸುವುದು, ಪ್ರತಿಕ್ರಿಯಿಸುವುದು ಕಡಿಮೆ.

ಈ ಮಕ್ಕಳನ್ನು ನಿಭಾಯಿಸುವುದು ಹೇಗೆ:

ಸುಮಾರು 5–6ನೇ ತಿಂಗಳಿನಲ್ಲಿ ಕಾಣಿಸಿಕೊಂಡ ಈ ದೋಶ ಮಗುವಿನ ಬೆಳವಣಿಗೆಗೆ ಅಡ್ಡಿ ಆಗಿರುತ್ತದೆ. 5–6 ವರ್ಷಗಳಾದರೂ ಮಗುವಿಗೆ ಮಾತು, ನಡಿಗೆ ಬಾರದೆ ಇದ್ದಾಗ ಅದು ಸಂಪೂರ್ಣವಾಗಿ ಮತ್ತೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಇವರು ಬೆಳೆದು ಯುವಕರಾದರೂ ಮತ್ತೊಬ್ಬರ ಸಹಾಯ, ಅವಲಂಬನೆ ಬೇಕೇ ಬೇಕು.

ಚಿಕಿತ್ಸಕ ಹೇಗಿರಬೇಕು?

ಈ ಕೆಲವು ಆಯಾಮಗಳಲ್ಲಿ ತರಬೇತಿ ಕೊಡುವ ಪ್ರಯತ್ನ ಮಾಡಬೇಕು:
  • ದಿನನಿತ್ಯದ ಕಾರ್ಯನಿರ್ವಹಿಸಲು ಸಮರ್ಥನಾಗುವಂಥ ನಡವಳಿಕೆ ಕಲಿಸುವುದು.
  • ಭಾಷೆ ಬಗ್ಗೆ ಅರಿವು.
  • ತಂದೆ–ತಾಯಿಗೆ ಮಗುವಿನ ಕೊರತೆ ಮತ್ತು ಸ್ಥಿತಿಯ ಬಗ್ಗೆ ಮಾಹಿತಿ,  ಮತ್ತು ಆಪ್ತ ಸಲಹೆ.
  • ಅಸ್ವಾಭಾವಿಕ ನಡವಳಿಕೆಗಳನ್ನು ಕಡಿಮೆ ಮಾಡುವುದು.
ಈ ಎಲ್ಲ ಪ್ರಯತ್ನಗಳು ಪ್ರತಿದಿನ ಕೆಲವು ಗಂಟೆಗಳ ಕಾಲ ನಡೆಯಬೇಕು. ಮತ್ತು ಬಹಳ ಸಮಯದವರೆಗೆ ನಡೆಸಬೇಕು.
ಇದಲ್ಲದೇ ವೈದ್ಯಕೀಯ ಸಹಾಯವೂ ಬೇಕಾಗುತ್ತದೆ.
ಹೆಸರನ್ನು ಒಮ್ಮೆ ಅವರ ಕಾರ್ಡ್‌ ನೋಡಿ, ಖಾತ್ರಿ ಮಾಡಿಕೊಳ್ಳಿ.

ಮೂಲ :ಡಾ.ಬಿ.ಎಸ್. ಪ್ರಮೀಳಾ ದೇವಿಪ್ರಜಾವಾಣಿ

ಜಲಜನನ

ಯುಗ ಯುಗ ಗಳಿಂದಲೂ ಸ್ತ್ರೀಯರು ಗರ್ಭಿಣಿಯರಾಗುತ್ತಿದ್ದಾರೆ. ಹೆರಿಗೆಗಳೂ ಆಗುತ್ತಿವೆ. ಆದರೆ ಹೆರಿಗೆ ವಿಧಾನಗಳಲ್ಲಿ ಹೆಚ್ಚಾಗೇನಾದರೂ ಪರಿಷ್ಕಾರಗಳಾಗಿವೆಯೇ ಎಂದರೆ ‘ಅಷ್ಟೇನೂ ಇಲ್ಲ’. ಈ ಏಕತಾನತೆಯನ್ನು ನಿವಾರಿಸಲು ಹೆರಿಗೆಯ ಪ್ರಕ್ರಿಯೆಯಲ್ಲಿ ವೈವಿಧ್ಯವನ್ನು ತರಲು, ಹಾಗೂ ಅದನ್ನು ಇನ್ನಷ್ಟು ಸುರಕ್ಷಿತವಾಗಿಸಲು ಕೆಲ ಪ್ರಯತ್ನಗಳೇನೋ ಜರುಗಿವೆ.

ಸಮ್ಮೋಹನ ವಿಧಾನವನ್ನು ಬಳಸಿ  ಹೆಣ್ಣನ್ನು ಕಾಡುವ ಹೆರಿಗೆ ನೋವನ್ನು ತಗ್ಗಿಸಲು ಅಲ್ಲಲ್ಲಿ ಪ್ರಯತ್ನಗಳಾಗಿವೆ. ನಿಗದಿತ ಉಸಿರಾಟಕ್ಕೆ ಪ್ರಾಧಾನ್ಯ ನೀಡುವ ಲಾಮಾಜ್‌ ವಿಧಾನವಿದೆ. ನಿರ್ವಾತದ ಉಡುಪು ಧರಿಸಿದರೆ, ಹೆರಿಗೆ ಸುಸೂತ್ರವಾಗಿ ಮುಂದುವರಿಯುತ್ತದೆ ಎನ್ನುವವರಿದ್ದಾರೆ. ಅರಿವಳಿಕೆಯಲ್ಲಿಯೂ ಸಾಕಷ್ಟು ಪ್ರಗತಿ ಕಂಡಿದ್ದೇವೆ.

ಇತ್ತೀಚೆಗೆ, ಪತಿಯನ್ನೂ ಹೆರಿಗೆ ಕೋಣೆಗೆ ಬರಮಾಡಿಕೊಂಡು, ಗರ್ಭಿಣಿಯ ಆತಂಕ, ತಲ್ಲಣಗಳನ್ನು ತಗ್ಗಿಸುವ ಪ್ರಯತ್ನಗಳೂ ಉಂಟು, ಆದರೆ ಈ 30–35 ವರ್ಷಗಳಿಂದೀಚೆಗೆ ‘ಜಲಜನನ’ (ವಾಟರ್‌ ಬರ್ತ್) ಜನಪ್ರಿಯವಾಗುತ್ತಿದೆ.

ಹೌದು, ಗರ್ಭಸ್ಥಮಗು, ಇಡೀ ಗರ್ಭಾವಧಿಯಲ್ಲಿ, ನೀರಿನಿಂದಲೇ ‘ಆವೃತವಾಗಿರುತ್ತ’ಲ್ಲವೆ? ಹಾಗಾಗಿ ಅದು ನೀರಿನಲ್ಲೇ ಜನಿಸಿದರೆ ಆ ಕ್ಷಣಗಳಲ್ಲಿ ಜರುಗುವ ವಾತಾವರಣದ ದಿಢೀರ್‌ ವ್ಯತ್ಯಯ ತರುವ ಆಘಾತವನ್ನು ತಪ್ಪಿಸಬಹುದು ತಾನೆ? ಈ ವಿಧಾನದಲ್ಲಿ ಒಂದು ವಿಶಾಲ, ಫೈಬರ್‌ ಗಾಜಿನ ತೊಟ್ಟಿ ಟಬ್‌ ಅನ್ನು ಬಳಸುತ್ತಾರೆ. ಅದರಲ್ಲಿನ ನೀರು ಗರ್ಭಿಣಿಯ ಎದೆಮಟ್ಟದವರೆಗೂ ಬರುವಂತೆ, ಹಾಗೂ ಆ ನೀರಿನ ಉಷ್ಣತೆ 97.7 ಡಿಗ್ರಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಿರುತ್ತಾರೆ. ಗರ್ಭಿಣಿ ಕೂರಲು ಒಂದು ಸಣ್ಣ ಚಾಚುವಿಕೆಯೂ ಇರುತ್ತದೆ. ಸಾಮಾನ್ಯವಾದ ಹೆರಿಗೆ ವಿಧಾನದಲ್ಲಿ ಗರ್ಭಿಣಿಯ ನೋವು ಸುಮಾರಾಗಿ ಹೆಚ್ಚಿದ ನಂತರ, ಅವಳನ್ನು ಮಂಚದ ಮೇಲೆ ಮಲಗಿಸಿ, ಕೊನೆಯವರೆಗೂ ಅವಳು ಅದೇ ನಿಲುವಿನಲ್ಲಿರುವುದೇ ಇದುವರೆಗಿನ ಅಭ್ಯಾಸ. ಹೆಚ್ಚೆಂದರೆ, ಸ್ವಲ್ಪ ಈ ಕಡೆ ಆ ಕಡೆ  ತಿರುಗಿಕೊಳ್ಳಬಹುದು ಅಷ್ಟೆ. ಆದರೆ ಜಲಜನನದಲ್ಲಿ, ಹೆರಿಗೆ ಆಗುತ್ತಿರುವ ಹೆಣ್ಣಿನ ಚಲನವಲನಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿದ್ದು ಅವಳು, ತನಗೆ ಸಮಾಧಾನ ತರುವ ಯಾವುದೇ ಭಂಗಿಯನ್ನು ಅನುಸರಿಸಬಹುದು. ಬಾಗಬಹುದು, ಕುಕ್ಕರಗಾಲಿನಲ್ಲಿ ಕೂರಬಹುದು, ನಿಲ್ಲಬಹುದು, ಇತ್ತ ಅತ್ತ ಸಲೀಸಾಗಿ ತಿರುಗಬಹುದು. ಇದು ಈ ವಿಧಾನದ ಲಾಭ.

ಆ ಸುಖೋಷ್ಣ ನೀರಿನಲ್ಲಿರುವುದು ಗರ್ಭಿಣಿಗೆ ಹಾಯೆನಿಸುತ್ತದೆ. ಹೆಚ್ಚು ಉಡುಪಿನ ಜಂಝಡವಿಲ್ಲ, ಸಡಿಲವಾದೊಂದು ಬ್ರಾ ಇದ್ದರೆ ಸಾಕು, ಮೈಮನಸ್ಸುಗಳು ಹಗುರವಾಗಿರುವ ಕಾರಣ, ಹೆರಿಗೆ

ತೃಪ್ತಿಕರವಾಗಿ ಮುಂದುವರಿಯುವ ಸಂಭವ ಹೆಚ್ಚಾಗಿರುತ್ತದೆ. ಅವಳಿಗೆ ಬೇಕೆನಿಸಿದಾಗ, ತೊಟ್ಟಿಯನ್ನು ಬಿಟ್ಟು ಹೊರಕ್ಕೆ ಬರಲೂಬಹುದು. ಹೆಣ್ಣಿನ ಮನಸ್ಸನ್ನು ಇನ್ನಷ್ಟು ಪ್ರಶಾಂತವಾಗಿರಿಸಲು ಅವಳ ಪತಿಯನ್ನೂ ಹೆರಿಗೆ ಕೋಣೆಗೆ ಕರೆತರುವ ಪ್ರಯೋಗಗಳೂ ಜರುಗಿವೆ. ಅವಳಿಗೆ ನೋವೆದ್ದಾಗ, ಪತಿ, ಸಾಂತ್ವನ ನೀಡುತ್ತಾನೆ, ಅವಳಿಗೆ ಧೈರ್ಯ ಹೇಳುತ್ತಾನೆ, ಅವಳ ಮುಖದಲ್ಲಿನ ಬೆವರನ್ನೂ ಒರೆಸುತ್ತಾನೆ. ಅವಳಿಗೆ ಕುಡಿಯಲು ಏನನ್ನಾದರೂ ನೀಡುತ್ತಾನೆ, ಅವಳ ಬೆನ್ನನ್ನು ಪ್ರೀತಿಯಿಂದ ಸವರುತ್ತಾನೆ. ಇವೆಲ್ಲವೂ ಗರ್ಭಕಂಠದ ವಿಕಸನಕ್ಕೆ ಹಾಗೂ ಗರ್ಭಾಶಯದ ಸ್ನಾಯುಗಳ ಕ್ರಮವಾದ ಆಕುಂಚನಗಳಿಗೆ ಸಹಾಯಕವಾಗುವುದರಲ್ಲಿ ಅನುಮಾನವೇ ಇಲ್ಲ.

ಹೆರಿಗೆ ನೋವು ಪ್ರಾರಂಭವಾದೊಡನೆಯೇ ಗರ್ಭಿಣಿಯನ್ನು ಆ ತೊಟ್ಟಿಯಲ್ಲಿರಿಸುವುದಿಲ್ಲ. ಅದು ಇನ್ನಷ್ಟು ಜೋರಾಗಿ ಎದ್ದು, ಎರಡು ನೋವುಗಳ ನಡುವಣ ಅಂತರ ಕಡಿಮೆಯಾಗಿ ಗರ್ಭಕಂಠ ಅರ್ಧದಷ್ಟಾದರೂ (5 ಸೆಂ.ಮೀ.) ಅಗಲವಾದಾಗ ಅವಳನ್ನು ತೊಟ್ಟಿಗೆ

ಬರಮಾಡುತ್ತಾರೆ. ಅವಳಿಗೆ ಆಸರೆಯಾಗಿ ಕೆಲವೊಮ್ಮೆ ಒಂದು ಗಟ್ಟಿ ಬಲೂನನ್ನು ಅವಳ ಕೈಗಳಲ್ಲಿರಿಸುವುದೂ ಉಂಟು. ಗರ್ಭಿಣಿಯು ತೊಟ್ಟಿಯಲ್ಲಿರುವಾಗಲೂ ತಜ್ಞರು ಅವಳ ನಾಡಿ ಹಾಗೂ ಗರ್ಭಸ್ಥ ಮಗುವಿನ ಹೃದಯದ ಬಡಿತವನ್ನು ಗಮನಿಸುತ್ತಿರುತ್ತಾರೆ, ಗರ್ಭಿಣಿಗೆ ತನ್ನ ಭಾರ ಕಡಿಮೆಯಾದಂತಾಗಿ ಆ ನೀರಿನಲ್ಲಿ ತಾನು ತೇಲುತ್ತಿದ್ದೇನೋ ಎನ್ನುವ ಅನುಭವವಾಗುತ್ತದೆ. ಇದು ಅವಳ ಮನಸ್ಸಿಗೊಂದು ಉಲ್ಲಾಸವನ್ನು ತಂದುಕೊಡುತ್ತದೆ.

ಜಲಜನನವನ್ನು ಆಯ್ಕೆಮಾಡಿ ನೀರಿನಲ್ಲಿರುವ ಗರ್ಭಿಣಿ ಹೆಣ್ಣಿನ ರಕ್ತದೊತ್ತಡ ಹದ್ದುಬಸ್ತಿನಲ್ಲಿರುವುದೊಂದು ವಿಶೇಷವೇ. ಸಾಮಾನ್ಯ ಹೆರಿಗೆಯಲ್ಲಿ ಏರಿದ ರಕ್ತದೊತ್ತಡವು ಬಸಿರು ನಂಜುಗಳಿಗೆ ದಾರಿ ಮಾಡಿಕೊಟ್ಟು ತಾಯಿ ಮಗುವಿಗೆ ಅಪಾಯ ತರುವುದನ್ನು ಕಾಣುತ್ತೇವೆ. ಜಲಜನನದಲ್ಲಿ, ಒತ್ತಡ ಹೆಚ್ಚಿಸುವ ಕ್ಯಾಟಕಾಲಮಿನ್‌, ಆಡ್ರಿನ ಅನ್‌ ರಸದೂತಗಳ ಸ್ರವಿಕೆಗಳು ತಗ್ಗಿ ಮನಸ್ಸಿಗೆ ಉಲ್ಲಾಸ ತರುವ ಆಕ್ಸಿಟೋಸಿಸ್‌ ಹಾಗೂ ಬೀಟಾ ಎಂಡಾರ್ಫಿನ್‌ ರಸದೂತಗಳ ಪ್ರಮಾಣ ಏರುತ್ತದೆ. ಇದರ ಪರಿಣಾಮವಾಗಿ ಅವಳ ಮನಸ್ಸು ಪ್ರಶಾಂತವಾಗಿದ್ದು ಅವಳಲ್ಲಿ ಒಂದು ‘ಆಹಾಭಾವನಕೆ’ ಮೂಡುತ್ತದೆ. ಈ ವಿಧಾನದಲ್ಲಿ ನೋವನ್ನು ತಗ್ಗಿಸಲು ನೀಡುವ ಮದ್ದುಗಳ ಅಗತ್ಯವೂ ಇರುವುದಿಲ್ಲ. ಅಕಸ್ಮಾತ್‌ ಯಾವುದೇ ಅಸಹಜತೆ ಎದ್ದರೆ ಗರ್ಭಿಣಿಯನ್ನು ತೊಟ್ಟಿಯಿಂದ ಹೊರತಂದು, ಅವಳಿಗೆ ಸೂಕ್ತ ಚಿಕಿತ್ಸೆ ಪ್ರಾರಂಭಿಸುತ್ತಾರೆ.

ಜಲಜನನದಲ್ಲಿ ಇನ್ನೊಂದು ಲಾಭವಿದೆ. ಗರ್ಭಿಣಿಯು ಜಲಾವೃತ ಪರಿಸರದಲ್ಲಿರುವಾಗ ಅವಳ ಯೋನಿ ಮುಖವು ಮಿದುವಾಗಿ ಅಲ್ಲಿನ ಸ್ನಾಯುಗಳು ಸುಲಭವಾಗಿ ವಿಸ್ತೃತ­ಗೊಂಡು, ಮಗುವಿನ ತಲೆ ಸಲೀಸಾಗಿ ಹೊರಬರುತ್ತದೆ. ನಾವು ಸಹಜ ಹೆರಿಗೆಯಲ್ಲಿ ರೂಢಿಯಾಗಿ ನೀಡುವ ‘ಯೋನಿಕೊಯ್ತ’ (ಎಪಿಸಿಯಾಟಮಿ) ಇಲ್ಲಿ ಅಷ್ಟಾಗಿ ಬೇಕಾಗುವುದಿಲ್ಲ. ಗರ್ಭಕೋಶದ ಸ್ನಾಯುಗಳ ರಕ್ತಪರಿಚಲನೆಯೂ ಇಲ್ಲಿ ಸಮರ್ಪಕವಾಗಿರುತ್ತದೆ.

ಯಾವುದೇ ಹಂತದಲ್ಲಿ ತಾಯಿಗೆ ಆಯಾಸವಾದಾಗ ಅಥವಾ ಗರ್ಭಸ್ಥ ಮಗುವಿನ ಹೃದಯದ ಬಡಿತ ನಿಮಿಷಕ್ಕೆ 120–140ರ ಮಿತಿಯನ್ನು
ಮೀರಿದಾಗ, ಗರ್ಭಿಣಿಯನ್ನು ಹೊರ ತಂದು, ವಿಶೇಷ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಗರ್ಭಸ್ಥ ಮಗುವಿಗೆ ಆಯಾಸವಾಗಿ, ಅದರ ಹಸಿರು ಗಪ್ಪು ಮಲ (ಮಿಕೋನಿಯಂ)ವೇನಾದರೂ ಹೆಚ್ಚಿನ ಪ್ರಮಾಣದಲ್ಲಿ ಹೊರಬಿದ್ದರೂ, ತುರ್ತು ಚಿಕಿತ್ಸೆ ಬೇಕಾಗುತ್ತದೆ.

ಜಲಜನನದಲ್ಲಿ ಹುಟ್ಟಿದ ಮಗು, ಇನ್ನೂ ತನ್ನ ಸ್ವಾಭಾವಿಕ ಪರಿಸರದಲ್ಲೇ ಇರುವುದರಿಂದ ಅದು ಕೂಡಲೇ ಉಸಿರಾಡಲು ಅಳಲು ತೊಡಗುವುದಿಲ್ಲ. ಕೆಲವು ಕ್ಷಣಗಳು ಅದು ಈ ಸ್ಥಿತಿಯಲ್ಲಿದ್ದರೆ ಅದಕ್ಕೇನೂ ಬಾಧಕವಿಲ್ಲ, ನೀರಿನಿಂದ ಹೊರಬಂದೊಡನೆಯೇ, ಅದರ ಸ್ವಸ್ಥತೆಯ ಸೂಚಕವಾದ ‘ಆಪ್ಲಾಸ್‌ ಸ್ಕೋರ್‌’ ತೃಪ್ತಿಕರವಾಗಿಯೇ ಇರುತ್ತದೆ, ಹುಟ್ಟಿದ ಮೇಲೆ ಮಗುವನ್ನು ತಾಯಿಯ ಹೊಟ್ಟೆಮೇಲೆ ಮಲಗಿಸಿ ಅವಳು ಅದನ್ನು ಅಪ್ಪಿಕೊಂಡು, ತನ್ನ ಮೊಲೆ ತೊಟ್ಟನ್ನು ಅದರ ಬಾಯಿಗಿಟ್ಟಾಗ ತಾಯಿ–ಮಗುವಿನ ದಿವ್ಯ ಅನುಬಂಧಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಅನೇಕ ತಾಯಿಯರನ್ನು ಕಬಳಿಸಿರುವ ಪ್ರಸವೋತ್ತರ ರಕ್ತಸ್ರಾವವೂ ಜಲಜನನ ವಿಧಾನದಲ್ಲಿ ತೀರಾ ಕಡಿಮೆಯೆನ್ನಬಹುದು.

ಈ ಜಲಶಿಶುಗಳು ಸಾಮಾನ್ಯವಾಗಿ ಶಾಂತವಾಗಿರುತ್ತವೆ. ಬೇರೆ ಮಕ್ಕಳಷ್ಟು ಕಿರಿಕಿರಿ ಮಾಡುವುದಿಲ್ಲ. ಶಿಶುಗಳನ್ನು ಬಾಧಿಸುವ ‘ಕೋಲಿಕ್‌’ ತೊಂದರೆ ಇಲ್ಲಿ ಅಪರೂಪ.

ಹೆರಿಗೆಯ ಪ್ರಕ್ರಿಯೆಯು ಯಾವಾಗಲೂ ಕ್ರಿಮಿರಹಿತ ಪರಿಸರದಲ್ಲಿಯೇ ಜರುಗುವ ಅಗತ್ಯವಿರುತ್ತದೆ ಅಲ್ಲವೆ? ಅದರಂತೆ, ಜಲಜನನದಲ್ಲಿಯೂ ಈ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಈ ವಿಧಾನದ ಆಯ್ಕೆಯಾದಾಗ ಗರ್ಭಿಣಿಗೆ ಹಾಗೂ ಅವಳ ಕಡೆಯವರಿಗೆ ಅದರ ವೈಶಿಷ್ಟ್ಯಗಳನ್ನು ಮೊದಲೇ ತಿಳಿಸಿ, ಅವರೆಲ್ಲರ ಒಪ್ಪಿಗೆ ಪಡೆಯುತ್ತಾರೆ.

ಬೆಂಗಳೂರಿನಲ್ಲಿ ಈಗಾಗಲೇ ಕೆಲವು ಪ್ರಸೂತಿ ತಜ್ಞರು ತಮ್ಮ ಆಸ್ಪತ್ರೆಗಳಲ್ಲಿ ಜಲಜನನಕ್ಕೆ ಬೇಕಾಗುವ ಪರಿಕರಗಳನ್ನು ಹೊಂದಿಸಿಕೊಂಡು, ಈ ಪ್ರಕಾರದ ಹೆರಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆ ವಸ್ತುಗಳನ್ನು ಬಾಡಿಗೆಗೆ ಪಡೆಯುವ ಪರಿಪಾಠವೂ ಕೆಲವೆಡೆಗಳಲ್ಲಿ ಉಂಟು.
ಒಟ್ಟಿನಲ್ಲಿ, ಪ್ರಸೂತಿ ತಜ್ಞರ ಬತ್ತಳಿಕೆಯಲ್ಲಿರುವ ಕೆಲವೇ ಬಾಣಗಳಲ್ಲಿ ಜಲಜನನವೂ ಒಂದು, ಎನ್ನಬಹುದು!

ಎಲ್ಲರಿಗೂ ಅಲ್ಲ

ಜಲಜನನಕ್ಕೆ ಎಲ್ಲ ಗರ್ಭಿಣಿಯರೂ ಅರ್ಹರಾಗಿರುವುದಿಲ್ಲ. ಗರ್ಭಿಣಿಯರನ್ನು ಆಯ್ಕೆ ಮಾಡುವಾಗ ಕೆಲವರನ್ನು ದೂರವಿಡುತ್ತಾರೆ.

ಗರ್ಭಸ್ಥ ಮಗುವಿನ ನಿಲುವು ಗಾತ್ರಗಳು ಅಸಹಜವಾಗಿದ್ದಾಗ, ಅದಕ್ಕೆ ವಿಶೇಷ ಚಿಕಿತ್ಸೆ ಬೇಕಾಗುವುದರಿಂದ ಅಂಥಾ ಗರ್ಭಿಣಿಯರಿಗೆ ಜಲಜನನದ ಸಲಹೆ ನೀಡುವುದಿಲ್ಲ? ಸರ್ಪಸುತ್ತು (ಹರ್ಪಿಸ್‌) ಮುಂತಾದ ಚರ್ಮ ವ್ಯಾಧಿಗಳಿದ್ದರೂ ಅಷ್ಟೆ. ಗರ್ಭಿಣಿಯಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅಥವಾ ಅವಳಲ್ಲಿ ಯಾವುದೇ ಸೋಂಕು ಕಂಡುಬಂದಿದ್ದರೆ ಜಲಜನನ ಅವಳಿಗೆ ವರ್ಜ್ಯ. ಅಂಥವರಿಗೆ ಮಾಮೂಲು ಹೆರಿಗೆಯ ವ್ಯವಸ್ಥೆ ಮಾಡಿಕೊಡುತ್ತಾರೆ ಅವಧಿಗೆ ಮುನ್ನವೇ ಹೆರಿಗೆ ನೋವು ಪ್ರಾರಂಭವಾಗಿದ್ದರೂ, ಗರ್ಭಿಣಿಗೆ ಮಾಮೂಲು ಹೆರಿಗೆ ಅವಕಾಶವನ್ನೆ ನೀಡುತ್ತಾರೆ.

ಮೂಲ :– ಡಾ. ಲೀಲಾವತಿ ದೇವದಾಸ್‌

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate