অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಓಡುವುದು

ಓಡುವುದು

ಆಯುಷ್ಯ ಯಾರಿಗೆ ಬೇಡ? ನೂರು ವರ್ಷವಾದ ಹಣ್ಣು ಹಣ್ಣು ಅಜ್ಜಿಗೂ ರಸ್ತೆ ದಾಟುವಾಗ ಜೀವಭಯವಿಲ್ಲದೆ ಇರುತ್ತದೆಯೇ? ನಮ್ದೆಲ್ಲ ಕಾಳ ಮುಗೀತು, ಇನ್ನೇನಿದ್ರೂ ನಿಮ್ದೇ ಜಮಾನ ಎಂಬ ತಾತಂದಿರಿಗೇನು ಬದುಕುವ ಆಸೆ ಇಲ್ಲವೇ? ಜೀವನ ಎಷ್ಟೇ ಕಷ್ಟವೆನ್ನಿಸಿದರೂ ಆಯುಷ್ಯ ಕಡಿಮೆಯಾಗಲಿ ಎಂದು ಬಯಸುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಹೀಗಿರುವಾಗ ದೀರ್ಘಾಯುಷ್ಯಕ್ಕಾಗಿ ಮನುಷ್ಯ ಬೇಕಷ್ಟು ಕಸರತ್ತನ್ನು ಮಾಡುತ್ತಾನೆ. ಪಥ್ಯದಿಂದ ಹಿಡಿದು ತರಹೇವಾರಿ ಮಾತ್ರೆಗಳನ್ನು ಸೇವಿಸುವಾಗಲೂ ಮನುಷ್ಯ ಗುರಿ ನೆಟ್ಟಿದ್ದುದು ದೀರ್ಘಾಯುಷ್ಯದ ಮೇಲೆಯೇ.


ಅಗತ್ಯ ದೇಹದ ತೂಕ, ಶಿಸ್ತಿನ ಆರೋಗ್ಯ ಶೈಲಿ, ನಿಯಮಿತ ವ್ಯಾಯಾಮ ಇವೆಲ್ಲ ದೀರ್ಘಾಯುಷ್ಯದ ಗುಟ್ಟಾದರೆ ಇದರೊಂದಿಗೆ ಮತ್ತೊಂದು ಅಂಶ ಸೇರ್ಪಡೆಯಾಗಿದೆ. ಓಡುವುದರಿಂದ ಸಹ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಆದರೆ ಓಡುವುದಕ್ಕೂ ನಿಯಮವಿದೆ. ಹೆಚ್ಚು ಶ್ರಮ ತೆಗೆದುಕೊಳ್ಳದೆ ನಿಧಾನವಾಗಿ ಓಡುವುದು ಆರೋಗ್ಯವನ್ನು ವೃದ್ಧಿಸುತ್ತದೆಯಂತೆ.


ಇತ್ತೀಚೆಗೆ ದೇಹದ ತೂಕ ಇಳಿಸುವುದಕ್ಕಾಗಿ ಹಲವರು ಬಗೆಬಗೆಯ ಕಸರತ್ತು ಮಾಡುವುದನ್ನು ನೋಡಿದ್ದೇವೆ. ಅಸಾಧ್ಯವೆನ್ನಿಸಿದರೂ ಬಿಡದೆ ಏದುಸಿರು ಬಿಡುತ್ತಲೇ ಓಡುವ ಹಲವರನ್ನು ಕಂಡಿದ್ದೇವೆ. ಆದರೆ ಅಂಥ ಓಡುವಿಕೆಯಿಂದ ದೇಹಕ್ಕೆ ಸಮಸ್ಯೆಯೇ ಜಾಸ್ತಿ. ತೂಕ ಇಳಿಸುವುದಾಗಲಿ, ಏರಿಸುವುದಾಗಲಿ ಶೀಘ್ರವಾಗಿ ಆಗುವ ಪ್ರಕ್ರಿಯೆಯಲ್ಲ. ಹಾಗೆ ಶೀಘ್ರವಾಗಿ ಆದದ್ದು ಶಾಶ್ವತವೂ ಅಲ್ಲ, ಆರೋಗ್ಯಕರವೂ ಅಲ್ಲ. ಆದ್ದರಿಂದ ಓಡುವುದರಲ್ಲಿ ಒಂದು ಶಿಸ್ತಿರಲಿ. ಬೆಳಗ್ಗಿನ ಸಮಯವಾದರೆ ಹಿತಕರ.  ದಿನಕ್ಕೆ ಅರ್ಧಗಂಟೆಯಾದರೂ ಹೀಗೆ ಓಡುವುದರಿಂದ ದೇಹದ ಸ್ನಾಯುಗಳು ಚಟುವಟಿಕೆಯಿಂದಿರುತ್ತವೆ. ರಕ್ತದ ಸರಾಗ ಸಂಚಾರಕ್ಕೂ ಅನುವು ಮಾಡಿಕೊಡುತ್ತದೆ. ಆಲಸ್ಯ ಮಾಯವಾಗುತ್ತದೆ. ಮನಸ್ಸೂ ಉಲ್ಲಸಿತಗೊಳ್ಳುತ್ತದೆ.


ಹೀಗೆ ಓಡುವಾಗ ಯಾವುದೇ ಚಿಂತೆ, ತಲೆಬಿಸಿಯೂ ಇಲ್ಲದೆ ಮನಸ್ಸು ಪ್ರಶಾಂತವಾಗಿದ್ದರೆ ಮಾತ್ರವೇ ಆರೋಗ್ಯ ಚೆನ್ನಾಗಿರುತ್ತದೆ. ಮಣಬಾರದ ತಲೆಬಿಸಿಯನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಕಾಟಾಚಾರಕ್ಕೆಂಬಂತೆ ಇದನ್ನು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುತ್ತದೆ ಸದರಿ ಸಂಶೋಧನೆ. ದೀರ್ಘಾಯುಷಿಗಳಾಗಬೇಕೆಂದೋ, ಅತೀಶೀಘ್ರದಲ್ಲಿ ದೇಹತೂಕ ಇಳಿಸಬೇಕೆಂದೋ ಜೋರಾಗಿ ಓಡುವುದರಿಂದ ಹೃದಯದ ಆರೋಗ್ಯಕ್ಕೂ ಕುತ್ತು. ಜಾಗಿಂಗ್ ಆದರೂ ಒಂದೇ ದಿನ ಹೆಚ್ಚು ಹೊತ್ತು ಮಾಡುವುದು ತರವಲ್ಲ. ದಿನ ದಿನವೂ ಹಂತ ಹಂತವಾಗಿ ಸಮಯವನ್ನು ಹೆಚ್ಚಿಸುತ್ತಾ ಬಂದರೆ ಯಾವ ತೊಂದರೆಯೂ ಇಲ್ಲ.
ನಿಮಗೂ ದೀರ್ಘಾಯುಷಿಗಳಾಗುವ ಇಚ್ಛೆಯಿದ್ದರೆ ಜಾಗಿಂಗ್ ಆರಂಭಿಸಿ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 7/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate