অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಸಗಳು

ಬಾಳೆ ದಿಂಡಿನ ರಸ

6-8 ಇಂಚು ಉದ್ದವಿರುವ ಬಾಳೆದಿಂಡನ್ನು ಜಜ್ಜಿ ನೀರು ಹಾಕಿ ಅರೆಯುವುದರಿಂದ ಇಲ್ಲವೇ ಮಿಕ್ಸಿಯಲ್ಲಿ ರುಬ್ಬುವುದರಿಂದ ರಸವನ್ನು ಪಡೆಯಬುಹುದು. ಈ ರಸವನ್ನು ನೇರವಾಗಿ ಕುಡಿಯಲು ಸಾಧ್ಯವಾಗದಿದ್ದಲ್ಲಿ ಎಳನೀರು ಅಥವಾ ಮಜ್ಜಿಗೆಯೊಡನೆ ಬೆರೆಸಿ ಕುಡಿಯಬಹುದು. ಮೂತ್ರಪಿಂಡದಲ್ಲಿರುವ ಕಲ್ಲನ್ನು ಕರಗಿಸುವ ಶಕ್ತಿ ಈ ರಸಕ್ಕಿದೆ. ಅಲ್ಲದೆ ಉರಿ ಮೂತ್ರ, ವಿರಳ ಮೂತ್ರ ಮತ್ತು ಮೂತ್ರ ಪಿಂಡಗಳ ಕ್ರಿಯಾಶಕ್ತಿ ಕುಂದಿರುವ ಸಂದರ್ಭದಲ್ಲಿ ತುಂಬಾ ಪ್ರಯೋಜನಕಾರಿ. ಶರೀರದ ಕೆಲವು ಅಂಶಿಕ ಊತಗಳಲ್ಲೂ ಇದನ್ನು ಸೇವಿಸುವುದರಿಂದ ಗುಣಪಡೆಯಬಹುದು.

ಬೂದುಗುಂಬಳ ಕಾಯಿ ರಸ

ಬೂದುಗುಂಬಳ ಕಾಯಿಯನ್ನು ತುರಿದು ಹಿಂಡಿ ರಸ ತೆಗೆಯಬಹುದು. ಇಲ್ಲವೇ ಹೋಳುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ, ಶೋಧಿಸಿ ರಸ ಪಡೆಯಬಹುದು. ಇದು ಅತ್ಯುತ್ತಮ ಪಿತ್ತಹಾರಿ. ಇದನ್ನು ಸೇವಿಸುವುದರಿಂದ ಹೊಟ್ಟೆಯ ಹುಣ್ಣುಗಳು ವಾಸಿಯಾಗುತ್ತವೆ. ಇದು ದೇಹಕ್ಕೆ ತುಂಬಾ ತಂಪನ್ನು ನೀಡಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬೊಜ್ಜು, ಹೊಟ್ಟೆನೋವು, ಮೂಲವ್ಯಾಧಿ, ಕಾಲುನೋವು ಮೊದಲಾದ ರೋಗಗಳಿಗೆ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

ಮೆಂತೆ ಸೊಪ್ಪಿನ ರಸ

ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಜಜ್ಜಿ ಅಥವಾ ರುಬ್ಬಿ ರಸ ತೆಗೆಯಬಹುದು. ಇಲ್ಲವೇ ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಬೆರೆಸಿ ರುಬ್ಬಿ ರಸವನ್ನು ಪಡೆಯಬಹುದು. ಮೆಂತೆ ಸೊಪ್ಪಿನ ರಸವೂ ದೇಹಕ್ಕೆ ಬಹಳ ತಂಪು. ಅತ್ಯುತ್ತಮವಾದ ಎಲ್ಲಾ ಟಾನಿಕ್ ಗುಣಗಳೂ ಈ ರಸದಲ್ಲಿವೆ. ಕೀಲುವಾತ, ಕೀಲು ಉರಿತಕ್ಕೆ ಇದು ಉತ್ತಮ ಔಷಧಿ. ಕಬ್ಬಿಣಾಂಶ ಕೊರತೆ ಇರುವವರು ಇದನ್ನು ವಿಶೇಷವಾಗಿ ಸೇವಿಸುವುದು ಉತ್ತಮ. ಮೊಸರಿನ ಜೊತೆಯಲ್ಲಿ ಈ ರಸವನ್ನು ಬೆರೆಸಿ ಸೇವಿಸುವುದರಿಂದ ಹೊಟ್ಟೆನೋವು ಗುಣವಾಗುತ್ತದೆ. ಸುಮಾರು 15ಮಿಲಿ ಲೀಟರಿನಿಂದ 200ಮಿಲಿ ಲೀಟರಿನವರೆಗೂ ಸೇವಿಸಬಹುದು.

ಬಿಲ್ವರಸ

ಬಿಲ್ವ ಪತ್ರೆಯ 8-10 ಎಲೆಗಳನ್ನು ಚೆನ್ನಾಗಿ ತೊಳೆದು ನೀರಿನೊಡನೆ ಬೆರೆಸಿ ರುಬ್ಬಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ರಸ ಪಡೆಯಬಹುದು. ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಔಷಧಿ. ಈ ರಸದ ಸೇವನೆಯಿಂದ ರಕ್ತವು ಶುದ್ಧೀಕರಣಗೊಳ್ಳುತ್ತದೆ. ಪಿತ್ತಜನಕಾಂಗದ ತೊಂದರೆಗಳಲ್ಲಿ 3ರಿಂದ 5 ಚಮಚ ರಸವನ್ನು ಸೇವಿಸುವುದರಿಂದ ಉತ್ತಮ ಫಲ ದೊರಕುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

ಹಾಗಲಕಾಯಿ ರಸ

ಹಾಗಲಕಾಯಿಯನ್ನು ಹೋಳುಗಳಾಗಿ ಹೆಚ್ಚಿ, ಜಜ್ಜಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ರಸವನ್ನು ಪಡೆಯಬಹುದು. ಇದು ಮಧುಮೇಹಕ್ಕೆ ದಿವ್ಯೌಷಧ. ದಿನಕೊಮ್ಮೆ 200 ಮಿಲಿ ಲೀಟರಿನಷ್ಟು ರಸವನ್ನು ಸೇವಿಸುವುದರಿಂದ ರಕ್ತ ಹಾಗೂ ಮೂತ್ರದಲ್ಲಿ ಸಕ್ಕರೆಯ ಅಂಶವನ್ನು ತಡೆಯಲು ಸಹಾಯಕವಾಗುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 4/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate