অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಸಂತ ಋತು

ವಸಂತ ಋತು

ಕವಿಗಳಿಗೆ ಸ್ಫೂರ್ತಿದಾಯಕವಾದ ಋತು, ‘ವಸಂತ ಬಂದ ಋತುಗಳ ರಾಜ ತಾ ಬಂದ….’ ಕವಿವಾಣಿ ಇಲ್ಲಿ ಉಲ್ಲೇಖನೀಯ. ಈ ಋತುವಿನಲ್ಲಿ ಗಿಡಮರಗಳು ಹಸಿರೆಲೆಗಳಿಂದ ಹೂವು, ಹಣ್ಣು ಕಾಯಿಗಳಿಂದ ನಳನಳಿಸುತ್ತವೆ. ಹೂದೋಟಗಳಲ್ಲಿ ಉದ್ಯಾನವನಗಳಲ್ಲಿ ವಿವಿಧ ರೀತಿಯ ಪಕ್ಷಿಗಳನ್ನು ನೋಡುವುದೇ ಮನಸ್ಸಿಗೆ ಮುದವನ್ನು ನೀಡುವುದು. ಬೇರೆ ಬೇರೆ ಪ್ರದೇಶಗಳಿಂದ ಪಕ್ಷಿಗಳು ವಲಸೆಗೆ ಬರುತ್ತವೆ.

ಹೇಮಂತ ಋತುವಿನಲ್ಲಿ ಸಂಚಯವಾದ ಕಫದೋಷವು ವಸಂತ ಋತುವಿನ ಬಿಸಿಲಿನ ಶಾಖಕ್ಕೆ ಕರಗಿ ಕಫ ಸಂಬಂಧಿ ತೊಂದರೆಗಳು ಉದರ ಸಂಬಂಧಿ ತೊಂದರೆಗಳು ಹಾಗೂ ಚರ್ಮದ ಸೋಂಕುಗಳನ್ನು ಉಂಟು ಮಾಡುವುದು. ಇದರಿಂದ ಮನುಷ್ಯನ ಜೀರ್ಣ ಶಕ್ತಿಯೂ ಕುಂದುವುದು. ಆದುದರಿಂದ ಈ ಋತುವಿನಲ್ಲಿ ಒಣಗಿದ, ದ್ರವಾಂಶ ಕಡಿಮೆ ಇರುವ, ಜೀರ್ಣಕ್ಕೆ ಹಗುರವಾದಂಥಹ ಆಹಾರ ಸೇವನೆ ಮಾಡಬೇಕು.

ಆಹಾರ
1. ಖಾರ, ಕಹಿ, ಒಗರು ರಸ ಪ್ರಧಾನವಾಗಿ ಹೊಂದಿರುವ ಕ್ಷಾರ ಹಾಗೂ ತೀಕ್ಷ್ಣ ಗುಣಗಳುಳ್ಳ ಆಹಾರ ಸೇವನೆ ಈ ಋತುವಿನಲ್ಲಿ ಹಿತಕರ.
2. ಪಡುವಲಕಾಯಿ, ಹೀರೇಕಾಯಿ, ಹಾಗಲಕಾಯಿ, ಮೂಲಂಗಿ ಕ್ಯಾರೆಟ್, ನುಗ್ಗೇಕಾಯಿ, ಬದನೇಕಾಯಿ ಇತ್ಯಾದಿ ತರಕಾರಿಗಳಿಂದ ಸಿದ್ಧಪಡಿಸಿದ ಆಹಾರ ಈ ಋತುವಿನಲ್ಲಿ ಒಳ್ಳೆಯದು.3. ದಾಳಿಂಬೆ ಹಣ್ಣು, ನೆಲ್ಲಿಕಾಯಿ, ಮಾದಲ ಹಣ್ಣು, ಖರ್ಜೂರ ಈ ಋತುವಿನಲ್ಲಿ ಉತ್ತಮ.

4. ಬೆಳ್ಳುಳ್ಳಿ ಹಾಗೂ ಈರುಳ್ಳಿಗಳನ್ನು ಅಡುಗೆಯಲ್ಲಿ ಯಥೇಚ್ಛವಾಗಿ ಬಳಸಬಹುದು.
5. ಜೀರಿಗೆ, ಶುಂಠಿ, ಇಂಗು ಹಿಪ್ಪಲಿ, ಕಾಳುಮೆಣಸುಗಳನ್ನು ಅಡುಗೆಯಲ್ಲಿ ಬಳಸಬಹುದು.
6. ಬಾರ್ಲಿ, ಜವೆಗೋಧಿ, ಗೋಧಿ, ಹೆಸರುಬೇಳೆ ಕೆಂಪಕ್ಕಿ ಈ ಋತುವಿನಲ್ಲಿ ಹಿತಕರ.
7. ಶುಂಠಿಯನ್ನು ಹಾಕಿ ಕುದಿಸಿ ಸಿದ್ಧ ಪಡಿಸಿದ ನೀರು ಚಂದನ ಸೇರಿಸಿ ತಯಾರಿಸಿದ ನೀರು, ಜೇನುತುಪ್ಪವನ್ನು ಸೇರಿಸಿ ತಯಾರಿಸಿದ ನೀರು ಈ ಋತುವಿನಲ್ಲಿ ಅಗತ್ಯ.
8. ಹಣ್ಣುಗಳಿಂದ (ದ್ರಾಕ್ಷಿ ಇತ್ಯಾದಿ) ತಯಾರಿಸಿದ ಆಸವ, ಅರಿಷ್ಟಗಳನ್ನು ವೈದ್ಯರ ಸಲಹೆಯ ಮೇರೆಗೆ ಬಳಸಬಹುದು.

ವಿಹಾರ

1. ವ್ಯಾಯಾಮ ಈ ಋತುವಿನಲ್ಲಿ ಅಗತ್ಯ.
2. ನಸ್ಯ (ಔಷಧಿ ದ್ರವ್ಯಗಳನ್ನು ಮೂಗಿಗೆ ಹಾಕಿಕೊಳ್ಳುವುದು) ಅಂಜನ (ಕಣ್ಣಿಗೆ ಕಾಡಿಗೆ ಹಚ್ಚುವುದು).
3. ಕವಲ ಗ್ರಹ (ತೀಕ್ಷ್ಣ ದ್ರವ್ಯಗಳ ಕಷಾಯಗಳಿಂದ ಬಾಯಿ ಮುಕ್ಕಳಿಸುವುದು).
4. ನಿತ್ಯವೂ ಮೈಗೆ ಎಣ್ಣೆ ಹಚ್ಚಿ, ತಿಕ್ಕಿ ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದು.
5. ಹೂದೋಟದಲ್ಲಿ ವಿಹರಿಸುವುದು.
6. ಕರ್ಪೂರ, ಚಂದನ ಇತ್ಯಾದಿ ಸುಗಂಧ ದ್ರವ್ಯಗಳನ್ನು ಮೈಗೆ ಲೇಪಿಸಿಕೊಳ್ಳುವುದು. ಇವೆಲ್ಲವೂ ಹಿತಕರ.
7. ಹಗಲು ನಿದ್ದೆ ಈ ಋತುವಿನಲ್ಲಿ ನಿಷಿದ್ದ.
8. ಜೀರ್ಣಕ್ಕೆ ಭಾರವಾದಂಥಹ ಆಹಾರ, ಜಿಡ್ಡಿನಿಂದ ಕೂಡಿದ ಆಹಾರ, ಅತಿಯಾಗಿ ಹುಳಿ, ಸಿಹಿ, ಉಪ್ಪಿನ ಸೇವನೆ ಈ ಋತುವಿನಲ್ಲಿ ಹಿತಕರ.
9. ದೇಹ ಶುದ್ಧಗೋಸ್ಕರ ಆಯುರ್ವೇದದ ಪಂಚಕರ್ಮಗಳಲ್ಲಿ ಒಂದಾದ ವಮನವನ್ನು ತಜ್ಞ ವೈದ್ಯರ ನೇರ ನಿಗಾವಣೆ ಹಾಗೂ ಸಲಹೆಯ ಮೇರೆಗೆ ಮಾಡಿಸಿಕೊಳ್ಳಬಹುದು.

ಮೂಲ : ಕರುನಾಡು.

ಕೊನೆಯ ಮಾರ್ಪಾಟು : 4/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate