অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಿ ವಿಟಾಮಿನ್

ಸಿ ವಿಟಾಮಿನ್

ಬ್ರೈನ್ ಹೆಮರೇಜ್… ಆ ಹೆಸರು ಕೇಳಿದರೇನೇ ಭಯವಾಗುತ್ತದೆ. ಇನ್ನು ಆ ರೋಗಕ್ಕೆ ತುತ್ತಾದವರ ಕತೆಯಂತೂ ದೇವರಿಗೇ ಪ್ರೀತಿ. ಅತಿಯಾದ ರಕ್ತದೊತ್ತಡದಿಂದ ಮೆದುಳಿನಲ್ಲಿ ರಕ್ತಸ್ರಾವವಾದರೆ ಅಥವಾ ರಕ್ತ ಹೆಪ್ಪುಗಟ್ಟಿದರೆ ಮನುಷ್ಯ ಪಾರ್ಶ್ವಾಘಾತಕ್ಕೆ ಒಳಗಾಗುತ್ತಾನೆ. ಅದರಿಂದ ದೇಹದ ಯಾವುದೋ ಒಂದು ಭಾಗ ಸಂಪೂರ್ಣ ನಿಷ್ಕ್ರಿಯವಾಗುತ್ತದೆ. ಇದರಿಂದ ವ್ಯಕ್ತಿ ಸಹಜವಾಗಿ ಇರಲಾರದೆ, ಮತ್ತೊಬ್ಬರ ಮೇಲೆ ಅವಲಂಬಿತನಾಗಬೇಕಾಗಬಹುದು. ನಿಯಮಿತ ವ್ಯಾಯಾಮವಲ್ಲದೆ ಅದಕ್ಕೆ ಬೇರೆ ಔಷಧವೂ ಸಿಗಲಾರದು. ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಈ ರೋಗಕ್ಕೆ ಮುಖ್ಯಕಾರಣ ಅತಿಯಾದ ರಕ್ತದೊತ್ತಡ. ರಕ್ತದೊತ್ತಡ ಹತೋಟಿಯಲ್ಲಿಟ್ಟುಕೊಳ್ಳುವ ಬಗೆ ಗೊತ್ತಿದ್ದರೆ ಈ ಸಮಸ್ಯೆ ಕಾಡುವುದಿಲ್ಲ.
ಸಿ ಜೀವಸತ್ವ ಹೆಚ್ಚಿರುವ ಆಹಾರ ಸೇವನೆಯಿಂದ ಪಾರ್ಶ್ವಾಘಾತವಾಗದಂತೆ ಎಚ್ಚರಿಕೆವಹಿಸಬಹುದು ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ಬಯಲಿಗೆಳೆದಿದೆ. ಸಿ ವಿಟಾಮಿನ್ ಅಂಶವನ್ನು ಹೆಚ್ಚಾಗಿ ಹೊಂದಿರುವ ಕಿತ್ತಳೆ, ಪಪ್ಪಾಯ, ಕೋಸು, ಕಾಳುಮೆಣಸು, ಸ್ಟ್ರಾಬೆರಿ ಮುಂತಾದವನ್ನು ಸೇವಿಸುವುದರಿಂದ ಪಾರ್ಶ್ವಾಘಾತದ ಅಪಾಯವನ್ನು ತಪ್ಪಿಸಬಹುದು. ಪಾರ್ಶ್ವಾಘಾತಕ್ಕೊಳಗಾದ ಹಲವು ವ್ಯಕ್ತಿಗಳನ್ನು ಪರೀಕ್ಷಿಸಿದಾಗ ಅವರಲ್ಲಿ ಸಿ ವಿಟಾಮಿನ್ನಿನ ಕೊರತೆ ಇದ್ದಿದ್ದು ಕಂಡುಬಂತು. ಪ್ರತಿದಿನವೂ ಒಂದು ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಪಾರ್ಶ್ವಾಘಾತದ ಸಮಸ್ಯೆ ಬರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಕಿತ್ತಳೆ ಹಣ್ಣಿನಲ್ಲಿ ಸಿ ಜೀವಸತ್ವ ಹೆಚ್ಚಾಗಿರುವುದರಿಂದ ಪಾರ್ಶ್ವಾಘಾತ ಮಾತ್ರವಲ್ಲದೆ, ಹೃದಯ ಸಂಬಂಧಿಕಾಯಿಲೆಗಳೂ ದೂರವಾಗುವಂತೆ ಮಾಡುತ್ತದೆ. ನಿಂಬೆ ಹಣ್ಣು, ನೆಲ್ಲಿಕಾಯಿ, ಕಲ್ಲಂಗಡಿ ಹಣ್ಣು, ಬಸಳೆ ಸೊಪ್ಪು, ಈರುಳ್ಳಿ, ಮೂಲಂಗಿ… ಮುಂತಾದವುಗಳಲ್ಲಿ ಸಿ ಜೀವಸತ್ವ ಹೆಚ್ಚಾಗಿರುತ್ತದೆ. ಆದ್ದರಿಂದ ನಿಯಮಿತ ಆಹಾರದಲ್ಲಿ ಇವುಗಳನ್ನು ಬಳಸುವುದರಿಂದ ಪಾರ್ಶ್ವಾಘಾತದಿಂದ ದೂರವುಳಿಯಬಹುದು ಎಂಬುದು ಇತ್ತೀಚಿನ ಪ್ರಯೋಗದಿಂದ ಸಾಬೀತಾಗಿದೆ. ಸಿ ವಿಟಾಮಿನ್ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸುವ ಮತ್ತು ಸಿ ವಿಟಾಮಿನ್ ಅಭಾವದಿಂದ ಬಳಲುತ್ತಿರುವ ಕೆಲ ವ್ಯಕ್ತಿಗಳ ಆರೋಗ್ಯವನ್ನು ಪರೀಕ್ಷಿಸಿದಾಗ ಸಿ ವಿಟಾಮಿನ್ ಕೊರತೆಯಿರುವವರಲ್ಲಿ ಪಾರ್ಶ್ವಾಘಾತದ ಸಾಧ್ಯತೆಗಳು ಹೆಚ್ಚಾಗಿರುವುದು ಕಂಡುಬಂತು. ಅಷ್ಟೇ ಅಲ್ಲ, ಪಾರ್ಶ್ವಾಘಾತಕ್ಕೊಳಗಾದ ವ್ಯಕ್ತಿಗಳನ್ನು ಪರೀಕ್ಷಿಸಿದಾಗ ಅವರಲ್ಲಿ ಸಿ ಜೀವಸತ್ವ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದೂ ಕಂಡುಬಂತು. ಆದ್ದರಿಂದ ಒತ್ತಡ ನಿರ್ವಹಣೆಯ ಜೊತೆಗೆ, ಸಿ ವಿಟಾಮಿನ್ ಹೇರಳವಾಗಿರುವ ಆಹಾರ ಸೇವನೆಯಿಂದ ವ್ಯಕ್ತಿ ಪಾರ್ಶ್ವಾಘಾತದಂಥ ಅಪಾಯಕಾರಿ ಸಮಸ್ಯೆಯಿಂದ ದೂರವುಳಿಯಲು ಸಾಧ್ಯವೆಂದು ತಜ್ಞ ವೈದ್ಯರು ಹೇಳುತ್ತಾರೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate