অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭಕೋಶ ಜಾರುವ ತೊಂದರೆ

ಗರ್ಭಕೋಶ ಜಾರುವ ತೊಂದರೆ

ಕಳೆದ ಕೆಲವು ದಶಕಗಳಿಂದೀಚೆಗೆ ಅಭಿವೃದ್ಧಿಶೀಲ ದೇಶಗಳಲ್ಲಿ ಕ್ರಮೇಣ ಆಗಿರುವ ಜೀವನಾವಧಿಯಲ್ಲಿನ ಹೆಚ್ಚಳದಿಂದಾಗಿ, ವಯಸ್ಕ ಮಹಿಳೆಯರಲ್ಲಿ ಪ್ರಜನನ - ಮೂತ್ರಾಂಗಗಳಲ್ಲಿ ಹೊರಜಾರುವಿಕೆ ( genito-urinary prolapse), ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ಇದನ್ನು ಆಡು ಮಾತಿನಲ್ಲಿ ಗರ್ಭಕೋಶ ಜಾರುವ ತೊಂದರೆ ಅಥವಾ ಕೆಲವೊಮ್ಮೆ ಯೋನಿದ್ವಾರದಲ್ಲಿ ಗರ್ಭಕೋಶ ಹೊರಜಾರಿರುವ ತೊಂದರೆ ಎಂದೂ ಗುರುತಿಸಲಾಗುತ್ತದೆ. ಸೊಂಟದ ತಳಭಾಗದಲ್ಲಿರುವ ಅಂಗಗಳು ತಮ್ಮ ಸಹಜ ಸ್ಥಾನದಿಂದ ಕೆಳಗಿಳಿದಿರುವ ಅಥವಾ ಹೊರಜಾರಿರುವ ಸ್ಥಿತಿ ಇದು.

ಈ ರೀತಿ ಜಾರಿಹೋಗಬಲ್ಲ ಸೊಂಟದ ತಳಭಾಗದ ಅಂಗಗಳೆಂದರೆ -ಗರ್ಭಕೋಶ (ಗರ್ಭಕೋಶದ ಜಾರುವಿಕೆ), ಯೋನಿಯ ಮೇಲುಭಾಗ (ಅಪಿಕಲ್‌ ವೆಜಿನಲ್‌ ಪ್ರೊಲಾಪ್ಸ್‌), ಯೋನಿಯ ಹಿಂಭಾಗ (ಸಿಸ್ಟೋಸೀಲ್‌) ಅಥವಾ ಯೋನಿಯ ಮುಂಭಾಗ (ರೆಕ್ಟೋಸೀಲ್‌). ವಯಸ್ಕ ಮಹಿಳೆಯರನ್ನು ತಪಾಸಣೆ ಮಾಡಿದಾಗ ಹೆಚ್ಚಿನವರಿಗೆ ಸ್ವಲ್ಪ ಪ್ರಮಾಣದಲ್ಲಾ ದರೂ ಈ ರೀತಿಯ ಹೊರಜಾರುವಿಕೆ ಕಂಡುಬರುವುದು ಸಹಜ, ಆದರೆ ಯಾವುದೇ ತೊಂದರೆ ನೀಡದ ಈ ರೀತಿಯ ಸ್ಥಿತಿಗಳು ವೈದ್ಯಕೀಯ ದೃಷ್ಟಿಯಿಂದ ಚಿಂತಾದಾಯಕವಲ್ಲ ಮತ್ತು ಅವಕ್ಕೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ಗರ್ಭಕೋಶ ಹೊರಜಾರುವಿಕೆ ಸಂಭೋಗ ಮತ್ತು ಶಿಶು ಜನನಕ್ಕೆ ಅಗತ್ಯವಿರುವ ಹಿಗ್ಗು ಸಾಮರ್ಥ್ಯವನ್ನು ಯೋನಿಯ ಗೋಡೆಗಳು ನೈಸರ್ಗಿಕವಾಗಿ ಹೊಂದಿರುತ್ತವೆ.

ಯೋನಿಯ ಆಸುಪಾಸುಗಳಲ್ಲಿರುವ ಸ್ನಾಯುಗಳು, ಬಂಧಕ ಅಂಗಾಂಶಗಳು ಮತ್ತು ಚರ್ಮ ಒಟ್ಟಾಗಿ ಸೊಂಟದ ತಳದ ಅಂಗಗಳು, ತಮ್ಮ ಸ್ಥಳದಲ್ಲಿ ಸ್ಥಿರವಾಗಿರುವಂತೆ ಬೆಂಬಲಿಸುವ ಸಂರಚನೆಗಳಾಗಿ ವರ್ತಿಸುತ್ತವೆ. ಈ ಬೆಂಬಲ ಜಾಲದಲ್ಲಿ ಯೋನಿ ಗೋಡೆಯ ಚರ್ಮ ಮತ್ತು ಸ್ನಾಯುಗಳೂ ಸೇರಿವೆ (ಇವನ್ನು ಪಾಸಿಯಾ ಎಂದು ಕರೆಯಲಾಗುತ್ತದೆ). ಈ ಬೆಂಬಲ ಜಾಲ ಕ್ರಮೇಣ ದುರ್ಬಲಗೊಂಡಾಗ ಅಥವಾ ಹಾನಿಗೀಡಾದಾಗ ಕಂಡುಬರುವ ಸ್ಥಿತಿಯೇ ಯೋನಿಭಾಗದಲ್ಲಿ ಹೊರಜಾರುವಿಕೆ.

ಯೋನಿಭಾಗದಲ್ಲಿ ಹೊರಜಾರುವಿಕೆ ಎಂದರೆ ಗರ್ಭಕೋಶ, ಗುದನಾಳ, ಮೂತ್ರಕೋಶ, ಮೂತ್ರನಾಳ, ಸಣ್ಣ ಕರುಳು ಅಥವಾ ಯೋನಿ ತಾನೇ ತನ್ನ ಸ್ಥಳದಿಂದ ಜಾರುವ ಅಥವಾ ಹೊರಜಾರಿರುವ ಸ್ಥಿತಿ, ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಅಥವಾ ಶಸ್ತ್ರಕ್ರಿಯೆ ಇಲ್ಲದಿದ್ದರೆ, ಈ ಜಾರುವಿಕೆಗಳು ಇನ್ನಷ್ಟು ತೀವ್ರಗೊಂಡು, ಅವು ಯೋನಿಭಾಗಕ್ಕೆ ಅಥ‌ವಾ ಯೋನಿದ್ವಾರದ ತನಕವೂ ಹೊರಜಾರಬಹುದು. ಸುಮಾರು 30-40% ಸ್ತ್ರೀಯರಲ್ಲಿ ಯೋನಿಭಾಗದಲ್ಲಿ ಹೊರಜಾರುವಿಕೆ ಕಂಡುಬಂದಿರುತ್ತದೆ. ಹೆಚ್ಚಾಗಿ ಇದು ಮುಟ್ಟು ನಿಂತ ಬಳಿಕ, ಶಿಶು ಜನನದ ಬಳಿಕ ಅಥವಾ ಗರ್ಭಕೋಶ ತೆಗೆದುಹಾಕುವ ಶಸ್ತ್ರಕ್ರಿಯೆಯ ಬಳಿಕ ಕಂಡುಬರುತ್ತದೆ. ಹೆಚ್ಚಾಗಿ 40 ವರ್ಷ ಪ್ರಾಯದ ಬಳಿಕ ಈ ತೊಂದರೆ ಕಾಣಿಸಿಕೊಂಡಿರುತ್ತದೆ. ಈ ತೊಂದರೆ ಇರುವ ಹೆಚ್ಚಿನ ಮಹಿಳೆಯರು ನಾಚಿಕೆ ಅಥವಾ ಹಿಂಜರಿಕೆ ಮತ್ತಿತರ ಕಾರಣಗಳಿಂದಾಗಿ ತಮ್ಮಲ್ಲಿರುವ ಈ ತೊಂದರೆಗೆ ವೈದ್ಯಕೀಯ ಸಹಾಯ ಪಡೆಯುವ ಗೋಜಿಗೆ ಹೋಗುವುದಿಲ್ಲ.

ಕೆಲವರಿಗೆ ಈ ತೊಂದರೆ ಇದ್ದರೂ, ಅದರ ಲಕ್ಷಣಗಳು ಅವರ ಗಮನಕ್ಕೆ ಬಂದಿರುವುದಿಲ್ಲ. ಜನನಾಂಗ ಭಾಗದ ಹೊರಜಾರುವಿಕೆಯ ವಿಧಗಳು ಗರ್ಭಕೋಶ ಹೊರಜಾರುವಿಕೆ: ಯೋನಿಯ ಮೇಲುಭಾಗದಲ್ಲಿ ಗರ್ಭಕೋಶವನ್ನು ಕಟ್ಟಿ ಹಿಡಿ ಯುವ ಬಂಧಕ ಅಂಗಾಂಶಗಳ ಗುಂಪೊಂದು ದುರ್ಬಲಗೊಂಡಾಗ (ಪೊÂಬೊಸರ್ವೈಕಲ್‌, ಟ್ರಾನ್ಸ್‌ವರ್ಸ್‌ ಸರ್ವೈಕಲ್‌ ಮತ್ತು ಯುಟೆರೊಸಾಕ್ರಲ್‌ ಬಂಧಕ ಅಂಗಾಂಶಗಳು) ಈ ಸ್ಥಿತಿ ಕಾಣಿಸಿ ಕೊಳ್ಳುತ್ತದೆ. ಇದರಿಂದಾಗಿ ಗರ್ಭಕೋಶ ಕೆಳಜಾರುತ್ತದೆ ಮತ್ತು ಇದರ ಫಲವಾಗಿ ಯೋನಿಯ ಎದುರು ಮತ್ತು ಹಿಂಭಾಗದ ಗೋಡೆಗಳೆರಡೂ ದುರ್ಬಲಗೊಳ್ಳುತ್ತವೆ. ಗರ್ಭಕೋಶದ ಮುಂಭಾಗವನ್ನು ಗರ್ಭಕೋಶದ ಕತ್ತು (ಸೆರ್ವಿಕ್ಸ್‌) ಎಂದು ಕರೆಯಲಾಗುತ್ತದೆ ಮತ್ತು ಈ ಸೆರ್ವಿಕ್ಸ್‌ನ ಸ್ಥಾನವನ್ನಾಧರಿಸಿ, ಹೊರಜಾರುವಿಕೆ ಎಷ್ಟು ತೀವ್ರವಾಗಿದೆ ಎಂದು ಈ ರೀತಿ ವಿಶ್ಲೇಷಿಸಲಾಗುತ್ತದೆ.

ಮೊದಲ ಹಂತದ ಹೊರಜಾರುವಿಕೆ: ಸೆರ್ವಿಕ್ಸ್‌ ಯೋನಿಯ ಮೇಲುಭಾಗಕ್ಕೆ ಜಾರಿರುತ್ತದೆ. ಎರಡನೇ ಹಂತದ ಹೊರಜಾರುವಿಕೆ: ಸೆರ್ವಿಕ್ಸ್‌ ಯೋನಿಯ ಕೆಳಭಾಗಕ್ಕೆ ಜಾರಿರುತ್ತದೆ. ಮೂರನೇ ಹಂತದ ಹೊರಜಾರುವಿಕೆ: ಗರ್ಭಕೋಶದ ತಳಭಾಗದಲ್ಲಿರುವ ಸೆರ್ವಿಕ್ಸ್‌ ಕೆಳಜಾರಿ, ಯೋನಿದ್ವಾರದ ಹೊರಭಾಗದಲ್ಲಿ ಕಂಡುಬರುತ್ತದೆ. ನಾಲ್ಕನೇ ಹಂತದ ಹೊರಜಾರುವಿಕೆ: ಇಡಿಯ ಗರ್ಭಕೋಶ (ಗರ್ಭಕೋಶ ಮತ್ತು ಸೆರ್ವಿಕ್ಸ್‌ ಎರಡೂ) ಯೋನಿಯಿಂದ ಹೊರಭಾಗದಲ್ಲಿ ಕಾಣಸಿಗುತ್ತವೆ. ಈ ಸ್ಥಿತಿಯನ್ನು ಸಂಪೂರ್ಣ ಹೊರಜಾರುವಿಕೆ ಅಥವಾ ಪ್ರೊಸಿಡೆಂಟಿಯಾ ಎಂದು ಕರೆಯಲಾಗುತ್ತದೆ. ಸಿಸ್ಟೋಸೀಲ್‌ (ಮೂತ್ರಕೋಶದ ಹೊರಜಾರುವಿಕೆ): ಯೋನಿಯ ಎದುರು ಗೋಡೆ ಹೊರಜಾರಿದಾಗ ಇದು ಸಂಭವಿಸುತ್ತದೆ. ಇದರ ಫಲವಾಗಿ, ಮೂತ್ರಕೋಶ ಯೋನಿಯ ಒಳಭಾಗಕ್ಕೆ ಜಾರಬಹುದು. ಈ ಸ್ಥಿತಿ ಕಾಣಿಸಿಕೊಂಡಾಗ, ಮೂತ್ರನಾಳ ಕೂಡ ಸಾಮಾನ್ಯವಾಗಿ ಕೆಳಜಾರಿರುತ್ತದೆ.

ಈ ಮೂತ್ರನಾಳದ ಹೊರಜಾರುವಿಕೆಯನ್ನು ಯುರೆಥ್ರೊಸೀಲ್‌ ಎಂದು ಕರೆಯಲಾಗುತ್ತದೆ. ಮೂತ್ರಕೋಶ ಮತ್ತು ಮೂತ್ರನಾಳಗಳೆರಡೂ ಹೊರಜಾರಿರುವ ಸ್ಥಿತಿಯನ್ನು ಸಿಸ್ಟೊಯುರೆಥ್ರೊಸೀಲ್‌ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಿಂದಾಗಿ ಒತ್ತಡ ಆಧರಿತ ಮೂತ್ರದ ನಿಯಂತ್ರಣ ತಪ್ಪುವಿಕೆ (ಕೆಮ್ಮು, ಸೀನು, ವ್ಯಾಯಾಮಗಳ ವೇಳೆ ಮೂತ್ರ ಜಿನುಗುವ ತೊಂದರೆ) ಸಂಭವಿಸಬಹುದು. ರೆಕ್ಟೋಸೀಲ್‌ (ಗುದನಾಳದ ಹೊರಜಾರುವಿಕೆ) ಯೋನಿಯ ಹಿಂಭಾಗದ ಗೋಡೆ ಹೊರಜಾರಿದಾಗ ಈ ಸ್ಥಿತಿ ಉಂಟಾಗುತ್ತದೆ. ಯೋನಿಯ ಹಿಂಗೋಡೆ ದುರ್ಬಲಗೊಂಡಾಗ, ಗುದನಾಳವು ಈ ಗೋಡೆಯ ಮೇಲೆ ಒತ್ತಡ ಹಾಕುತ್ತದೆ ಮತ್ತು ಉಬ್ಬನ್ನು ಸೃಷ್ಟಿಸುತ್ತದೆ. ಈ ಉಬ್ಬು ಮಲ ವಿಸರ್ಜನೆಯ ವೇಳೆ ಗೋಚರಕ್ಕೆ ಬರಬಹುದು. ಎಂಟೆರೊಸೀಲ್‌ (ಹೊರಜಾರಿರುವ ಸಣ್ಣ ಕರುಳು) ಯೋನಿಯ ಮೇಲುಭಾಗದ ಬೆಂಬಲಗಳು ದುರ್ಬಲಗೊಂಡಾಗ,

ಈ ರೀತಿಯ ಯೋನಿಭಾಗದ ಹೊರಜಾರುವಿಕೆ ಕಾಣಿಸಿಕೊಳ್ಳುತ್ತದೆ. ಯೋನಿಯ ಮೇಲುಭಾಗ ಕೆಳಜಾರಿದಾಗ ಅದರ ಜೊತೆ ಕೆಲವೊಮ್ಮೆ ಸಣ್ಣ ಕರುಳಿನ ಸುರುಳಿಗಳೂ ಕೆಳಜಾರಬಹುದು. ಯೋನಿಚೀಲದ ಹೊರಜಾರುವಿಕೆ ಗರ್ಭಾಶಯವನ್ನು ಕತ್ತರಿಸಿ ತೆಗೆಯುವ ಹಿಸ್ಟರೆಕ್ಟಮಿ ಶಸ್ತ್ರಕ್ರಿಯೆಗೆ ಒಳಗಾಗಿರುವವರಲ್ಲಿ ಈ ರೀತಿಯ ಹೊರಜಾರುವಿಕೆ ಕಾಣಿಸಿಕೊಳ್ಳಬಹುದು. ಯೋನಿಚೀಲದ ಹೊರಜಾರುವಿಕೆಯಲ್ಲಿ , ಯೋನಿಯ ಮೇಲುಭಾಗ ಕ್ರಮೇಣ ಯೋನಿದ್ವಾರದ ಕಡೆಗೆ ಜಾರುತ್ತದೆ. ಇದರಿಂದಾಗಿ ಯೋನಿಯ ಗೋಡೆಗಳೆಲ್ಲ ದುರ್ಬಲಗೊಳ್ಳುತ್ತವೆ ಮತ್ತು ಕ್ರಮೇಣ, ಯೋನಿಯ ಮೇಲುಭಾಗ ಯೋನಿದ್ವಾರದ ಮೂಲಕ ದೇಹದ ಹೊರಗೆ ಗೋಚರಗೊಳ್ಳಬಹುದು. ಇದು ಯೋನಿ ಚೀಲದ ಒಳ ಗೋಡೆ ಹೊರಬದಿಗೆ ಬಂದಿರುವ ತಿರುವು ಮುರುವಿನ ಸ್ಥಿತಿ.

ಜನನಾಂಗಗಳ ಹೊರ ಜಾರುವಿಕೆಗೆ ಕಾರಣಗಳು ಸೊಂಟದ ತಳದ ಅಂಗಗಳಿಗೆ (ಗರ್ಭಕೋಶ, ಯೋನಿ, ಮೂತ್ರಕೋಶ ಮತ್ತು ಗುದನಾಳ) ಸ್ಥಿರವಾಗಿರಲು ಸ್ನಾಯುಜಾಲ (ಮುಖ್ಯವಾಗಿ ಲೆವೇಟರ್‌ ಅನಿ),ಫಾಸಿಯಾ ಮತ್ತು ಬಂಧಕ ಅಂಗಾಂಶಗಳು ಬಲ ನೀಡುತ್ತವೆ. ಈ ಬೆಂಬಲ ಜಾಲ ದುರ್ಬಲಗೊಂಡಾಗ ಅಥವಾ ಹಾನಿಗೀಡಾದಾಗ, ಯೋನಿ ಮತ್ತು ಅದರ ಆಸುಪಾಸಿನ ಭಾಗಗಳು ತಮ್ಮನ್ನು ಸ್ವಸ್ಥಾನದಲ್ಲಿ ಹಿಡಿದಿಡುವ ಕೆಲವು ಅಥವಾ ಎಲ್ಲ ಬೆಂಬಲ ಸಂರಚನೆಗಳ ಬೆಂಬಲವನ್ನು ಕಳೆದುಕೊಳ್ಳಬಹುದು. ಈ ಸ್ಥಿತಿಯನ್ನು ಸಂಗ್ರಾಹ್ಯವಾಗಿ ಪೆಲ್ವಿಕ್‌ ತಳ ಸಡಿಲವಾಗುವುದು ಎಂದು ಕರೆಯಲಾಗುತ್ತದೆ.

ಯೋನಿಯನ್ನು ಅದರ ಸ್ಥಾನದಲ್ಲಿ ಬಂಧಿಸಿಡುವ ಮತ್ತು ಅದರ ಭಾರ ಹೊರಬಲ್ಲ ಸಂರಚನೆಗಳು ದುರ್ಬಲಗೊಂಡಾಗ ಯೋನಿಭಾಗದ ಹೊರಜಾರುವಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಗುದನಾಳ, ಮೂತ್ರಕೋಶ‌, ಗರ್ಭಕೋಶ, ಸಣ್ಣ ಕರುಳು, ಮೂತ್ರನಾಳಗಳೆಲ್ಲ ಅಸ್ಥಿರಗೊಳ್ಳತೊಡಗಬಹುದು. ಯೋನಿಭಾಗದ ಹೊರಜಾರುವಿಕೆಗೆ ಸಾಮಾನ್ಯವಾಗಿ ಕಾರಣವಾಗುವ ಕೆಲವು ಕಾರಣಗಳು ಈ ಕೆಳಗಿನಂತಿವೆ. ಶಿಶು ಜನನ (ಅದರಲ್ಲೂ ಹೆಚ್ಚು ಅಂತರವಿಲ್ಲದೆ ಹಲವು ಶಿಶು ಜನನಗಳು) ಶಿಶು ಜನನದ ವೇಳೆ ಯೋನಿಯ ಆಸುಪಾಸಿನ ಅಂಗಾಂಶಗಳು, ಸ್ನಾಯಗಳು, ಬಂಧಕ ಅಂಗಾಂಶಗಳು ಒತ್ತಡಕ್ಕೀಡಾಗಿರುತ್ತವೆ. ಅದರಲ್ಲೂ, ದೀರ್ಘ‌ಕಾಲ ತೆಗೆದುಕೊಳ್ಳುವ ಅಥವಾ ಕಷ್ಟದಾಯಕ ಹೆರಿಗೆ ಮತ್ತು ದೊಡ್ಡ ಗಾತ್ರದ ಶಿಶು ಜನನದ ವೇಳೆ ಆ ಭಾಗಗಳಿಗೆ ಹೆಚ್ಚಿನ ಒತ್ತಡ ಬಿದ್ದಿರುತ್ತದೆ. ಅಸಮರ್ಪಕ ಹೆರಿಗೆ ತಂತ್ರಗಳ ಬಳಕೆ, ಸುಸೂತ್ರ ಸೌಲಭ್ಯಗಳಿಲ್ಲದ ಮನೆ ಹೆರಿಗೆಯಂತಹ ಹಿನ್ನೆಲೆಗಳಿರುವವರಲ್ಲಿ ಸೊಂಟದ ತಳದ ಬೆಂಬಲಗಳಿಗೆ ಶಾಶ್ವತ ಹಾನಿ ಆಗಿರುತ್ತದೆ.

ಮುಟ್ಟು ನಿಲ್ಲುವುದು: ಸೊಂಟದ ತಳಭಾಗದ ಸ್ನಾಯುಗಳು ಸ್ಥಿರವಾಗಿರುವಲ್ಲಿ ಈಸ್ಟ್ರೋಜೆನ್‌ ಹಾರ್ಮೋನಿನ ಪಾತ್ರ ಬಹಳ ಮುಖ್ಯವಾದುದು. ಮುಟ್ಟು ನಿಂತ ಬಳಿಕ, ಈಸ್ಟ್ರೋಜನ್‌ ಮಟ್ಟ ದೇಹದಲ್ಲಿ ಕುಸಿದಿರುತ್ತದೆ; ಹಾಗಾಗಿ ಬೆಂಬಲ ಜಾಲ ದುರ್ಬಲಗೊಳ್ಳುತ್ತ ಬರುತ್ತದೆ. ಕಿಬ್ಬೊಟ್ಟೆಯ ಒಳಗೆ ಒತ್ತಡ ಹೆಚ್ಚಿಸುವ ಕೆಲವು ಸ್ಥಿತಿಗಳು ದೈಹಿಕ ಶ್ರಮದ ಕೆಲಸಗಳ ವೇಳೆ ಭಾರವನ್ನು ಎತ್ತುವಾಗ,ದೀರ್ಘ‌ಕಾಲಿಕ ಕೆಮ್ಮು ಇರುವವರಲ್ಲಿ, ಶ್ವಾಸಕೋಶ ಗಳಲ್ಲಿ ಅಡ್ಡಿಯ ತೊಂದರೆ ಇರುವವ ರಲ್ಲಿ, ಕಿಬ್ಬೊಟ್ಟೆಯ ಭಾಗದಲ್ಲಿ ಗಡ್ಡೆಗಳಿರುವವರಲ್ಲಿ ಅಥವಾ ಕಿಬ್ಬೊಟ್ಟೆಯ ಕುಳಿಯಲ್ಲಿ ದ್ರವ ಸಂಗ್ರಹ ಆಗಿರುವವರಲ್ಲಿ (ಅಸೈಟ್ಸ್‌) ಹೊರಜಾರುವಿಕೆ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು . ಹಿಸ್ಟರೆಕ್ಟಮಿ ಸಮರ್ಪಕವಾಗಿ ಆಗಿರದಿರುವುದು: ಗರ್ಭಕೋಶವು ಯೋನಿಯ ಮೇಲುಭಾಗದಲ್ಲಿ ಬೆಂಬಲ ಜಾಲದ ಬಹುಮುಖ್ಯ ಭಾಗ್ಯ, ಹಿಸ್ಟರೆಕ್ಟಮಿ ಶಸ್ತ್ರಕ್ರಿಯೆಯ ವೇಳೆ ಈ ಗರ್ಭಕೋಶವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಗರ್ಭಕೋಶ ಇಲ್ಲದ ಸ್ಥಿತಿಯಲ್ಲಿ, ಯೋನಿಯ ಮೇಲುಭಾಗ ಕ್ರಮೇಣ ಯೋನಿದ್ವಾರದ ಕಡೆಗೆ ಕೆಳಮುಖವಾಗಿ ಕುಸಿಯುತ್ತಾ ಬರಬಹುದು, ಇದನ್ನು ಯೋನಿ ಚೀಲದ ಹೊರಜಾರುವಿಕೆ ಎಂದು ಕರೆಯಲಾಗುತ್ತದೆ. ಕೆಲವು ಸ್ತ್ರೀಯರಲ್ಲಿ, ಜನ್ಮದತ್ತವಾಗಿ ಪೆಲ್ವಿಕ್‌ ತಳದ ಬಂಧಕ ಅಂಗಾಂಶಗಳು ದುರ್ಬಲವಾಗಿರುತ್ತವೆ.

ಅವರಲ್ಲಿ ಈ ಹೊರಜಾರುವಿಕೆ ಸಾಧ್ಯತೆ ಹೆಚ್ಚು. ಪ್ರಾಯ ಹೆಚ್ಚಿದಂತೆ, ಬೊಜ್ಜು ಇರುವವರಲ್ಲಿ, ಪೆಲ್ವಿಕ್‌ ತಳದ ಸ್ನಾಯುಗಳಿಗೆ ವ್ಯಾಯಾಮ ಸಮರ್ಪಕವಾಗಿ ಸಿಗದಿರುವವರಲ್ಲಿ ಅಥವಾ ಹೆರಿಗೆ ಆದ ಬಳಿಕ ಸೂಕ್ತ ಬಾಣಂತಿ ವಿಶ್ರಾಂತಿ ಪಡೆಯದೆ ಶ್ರಮ ಸಹಿತ ಕೆಲಸಗಳಿಗೆ ಮರಳುವವರಲ್ಲಿ ಕೂಡ ಹೊರಜಾರುವಿಕೆ ಸಾಧ್ಯತೆ ಹೆಚ್ಚು. ಜನನಾಂಗಗಳಲ್ಲಿ ಹೊರ ಜಾರುವಿಕೆ ರೋಗ ಲಕ್ಷಣಗಳು ರೋಗಿಯಲ್ಲಿ ಉಂಟಾಗಿ ರುವ ಯೋನಿಯಲ್ಲಿನ ಹೊರಜಾರುವಿಕೆ ಯನ್ನಾಧರಿಸಿ, ಅದರ ರೋಗಲಕ್ಷಣಗಳು ಕಂಡುಬರುತ್ತವೆ. ಎಲ್ಲ ವಿಧದ ಯೋನಿಯಲ್ಲಿನ ಹೊರಜಾರುವಿಕೆಗಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಲಕ್ಷಣವೆಂದರೆ, ಯೋನಿಯಲ್ಲಿನ ಅಂಗಾಂಶಗಳು ಅಥವಾ ಸಂರಚನೆಗಳು ಸ್ವಸ್ಥಾನದಲ್ಲಿ ಇಲ್ಲ ಎಂದು ರೋಗಿಗೆ ಅನ್ನಿಸುವುದು. ಕೆಲವು ಮಹಿಳೆಯರು ಇದನ್ನು ವೈದ್ಯರಲ್ಲಿ ""ಏನೋ ಕೆಳಗೆ ಬಂದಂತೆ ಅನ್ನಿಸುತ್ತದೆ' ಅಥವಾ ಏನೋ ಎಳೆದಂತಾಗುತ್ತದೆ ಎಂದು ವಿವರಿಸುತ್ತಾರೆ. ಇದರಲ್ಲಿ ಹಾಗನ್ನಿಸುವ ಭಾಗದಲ್ಲಿ ಅಂಗಭಾಗವೊಂದು ಹೊರಗೆ ಜಾರಿರುವುದು ಅಥವಾ ಉಳಿದ ಅಂಗಗಳ ಮೇಲೆ ಒತ್ತಡ ಹಾಕುತ್ತಿರುವುದು ಒಳಗೊಂಡಿರುತ್ತದೆ.

ಮೂಲ : ಅರೋಗ್ಯ ವಾಣಿ

ಕೊನೆಯ ಮಾರ್ಪಾಟು : 5/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate