অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭನಿರೋಧಕ

ಗರ್ಭನಿರೋಧಕ

ಗರ್ಭನಿರೋಧಕವು ಗರ್ಭಧಾರಣೆಯನ್ನು ಉದ್ದೇಶ ಪೂರ್ವಕವಾಗಿ ತಡೆಗಟ್ಟುವ ಪ್ರಯತ್ನ. ಅಂಡಾಣುವು ವೀರ್ಯಾಣುವನ್ನು ಭೇಟಿಯಾದಾಗ ಗರ್ಭಧಾರಣೆಯಾಗುತ್ತದೆ. ಈ ಜೈಗೋಟ್‌ (ವೀರ್ಯಾಣು ಮತ್ತು ಅಂಡಾಣುಗಳ ಮಿಲನದ ಉತ್ಪನ್ನ) ಗರ್ಭಾಶಯದ  ಗೋಡೆಗೆ ಅಂಟಿಕೊಳ್ಳುತ್ತದೆ. ಮತ್ತು ಅಲ್ಲಿಯೇ ಬೆಳೆಯುತ್ತದೆ. ಈ ಪ್ರಕ್ರಿಯೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಗರ್ಭಧಾರಣೆಯನ್ನು ತಡೆಗಟ್ಟಲು ಮೂಲಭೂತವಾಗಿ ಮೂರು ವಿಧಾನಗಳಿವೆ:

  • ಅತ್ಯಂತ ಸಾಮಾನ್ಯ ವಿಧಾನವೆಂದರೆ ಲೈಂಗಿಕ ಸಂಪರ್ಕ ನಡೆಸದೇ ಇರುವುದು. ಶಿಶ್ನ ಮತ್ತು ಯೋನಿಯ ನಡುವೆ ಸಂಪರ್ಕವಾಗದಂತಿರುವುದು. ಮಹಿಳೆಯ ಋತುಚಕ್ರದ ಫಲಿತ ದಿನಗಳಲ್ಲಿ ಶಿಶ್ನ ಮತ್ತು ಯೋನಿಯ ಸಂಪರ್ಕವನ್ನು ತಪ್ಪಿಸುವುದು. (ರಿದಮ್‌ ವಿಧಾನ, ಫಲವತ್ತತೆಯ ಅರಿವಿನ ವಿಧಾನ)
  • ಇನ್ನೊಂದು ಸರಳ ವಿಧಾನವೆಂದರೆ, ಅಂಡಾಣುವು ವೀರ್ಯಾಣುವನ್ನು ತಲುಪದಂತೆ ತಡೆಯುವುದು. ಇದು ಹಲವು ವಿಧಾನಗಳನ್ನು ಒಳಗೊಂಡಿದೆ. (ಸ್ತ್ರೀ ಮತ್ತು ಪುರುಷ ಕಾಂಡೋಂಗಳು, ಡಯಾಫ್ರಂ, ಸವೆಕಲ್‌ ಕ್ಯಾಪ್‌) ಮತ್ತು ಶಾಶ್ವತ ವಿಧಾನಗಳಾದ ವ್ಯಾಸೆಕ್ಟಮಿ (ಪುರುಷ ಸಂತಾನಶಕ್ತಿ ಹರಣ) ಮತ್ತು ಟ್ಯೂಬಲ್‌ ಲಿಗೇಶನ್‌ (ಮಹಿಳೆಯರ ಸಂತಾನಶಕ್ತಿ ಹರಣ)
  • ಮೂರನೆಯ ವಿಧಾನವೆಂದರೆ ಪುರುಷನು ವೀರ್ಯಾಣುಗಳನ್ನು ಅಥವಾ ಮಹಿಳೆಯು ಅಂಡಾಣುಗಳನ್ನು ಉತ್ಪಾದಿಸದಂತೆ ತಡೆಯುವುದು. ಅದರಲ್ಲಿ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು, ಇಂಜೆಕ್ಷನ್‌ಗಳನ್ನು ಮತ್ತು ಚರ್ಮದ ಕೆಳಗೆ ಇಂಪ್ಲಾಂಟ್‌ ಮಾಡಬಹುದಾದ ಸಾಧನಗಳನ್ನು ಸೇರಿಸುವುದು ಮುಂತಾದ ಹಾರ್ಮೋನ್‌ ವಿಧಾನಗಳನ್ನು ಒಳಗೊಂಡಿವೆ. ಮಹಿಳೆಯರು ಮತ್ತು ಪುರುಷರಲ್ಲಿ ಫಲವತ್ತತೆ ನಿರೋಧಕ ಹಾರ್ಮೋನುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಅವುಗಳನ್ನೂ ಕೂಡ ಇದೇ ವಿಭಾಗದಲ್ಲಿ ಸೇರಿಸಬಹುದು.
  • ಫಲಿತ ಅಂಡಾಣುವು ಗರ್ಭಾಶಯದ ಗೋಡೆಗೆ ಅಂಟಿಕೊಳ್ಳದಂತೆ ತಡೆಯುವುದು. ಉದಾಹರಣೆಗೆ ಗರ್ಭಾಶಯದ ಒಳಗೆ ಅಳವಡಿಸಬಹುದಾದ ಸಾಧನಗಳು (ಐಯುಡಿ) ಮತ್ತು ನಾನ್‌ ಸ್ಟಿರಾಯ್ಡಲ್‌ ಮಾತ್ರೆಗಳು
  • ಭ್ರೂಣವು ಫಲಿತಗೊಂಡು ಗರ್ಭಗೋಡೆಗೆ ಅಂಟಿಕೊಂಡ ನಂತರವೂ ಅದನ್ನು ತೆಗೆದು ಹಾಕುವುದು ೫ನೆಯ ವಿಧಾನ. ಉದಾ. ಗರ್ಭಪಾತ ಮತ್ತು ಗರ್ಭಪಾತದ ಮಾತ್ರೆಗಳು.

ಹೀಗೆ, ಪ್ರತಿ ಗರ್ಭನಿರೋಧಕ ವಿಧಾನವೂ ಕೂಡ ಬೇರೆಬೇರೆ ಬಗೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರತಿ ವ್ಯಕ್ತಿಯೂ ತನ್ನ ಅಗತ್ಯಕ್ಕೆ ಅನುಗುಣವಾದ ಮತ್ತು ಆತನ/ಆಕೆಯ ಆರೋಗ್ಯ ಮತ್ತು ಜೀವಕ್ಕೆ  ಅಪಾಯವೊಡ್ಡದ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಜೀವಮಾನ ಪೂರ್ತಿ ಪರಿಣಾಮ ಬೀರುವ ನಿರ್ಧಾರವಲ್ಲ. ಗರ್ಭನಿರೋಧಕವನ್ನು ಆರಿಸುವಾಗ ಗಮನದಲ್ಲಿರಿಸಿಕೊಳ್ಳಬೇಕಾದ ಅಂಶಗಳು

  • ಅದು ಪರಣಾಮಕಾರಿಯಾಗಿದೆಯೇ ಅಂದರೆ, ಗರ್ಭಧಾರಣೆಯಾಗುವ ಸಾಧ್ಯತೆಗಳು
  • ಗರ್ಭನಿರೋಧಕವು ಸುರಕ್ಷಿತವೇ?, ಅಥವಾ ಗಂಭೀರ ಸ್ವರೂಪದ ಅಡ್ಡಪರಿಣಾಮಗಳಿವೆಯೇ?
  • ಇದರಿಂದ ದೀರ್ಘಕಾಲೀನ ದುಷ್ಪರಿಣಾಮಗಳಿವೆಯೇ?
  • ಎದೆಹಾಲೂಡಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆಯೇ? ಗರ್ಭನಿರೋಧಕದ ಪರಿಣಾಮವು ಎದೆಹಾಲಿನಲ್ಲೂ ಇರುವುದೇ?
  • ಅದು ಭವಿಷ್ಯದಲ್ಲಿ ಆ ಸ್ತ್ರೀಗೆ ಜನಿಸಬಹುದಾದ ಮಗುವಿನ ದುಷ್ಪರಿಣಾ ಬೀರುತ್ತದೆಯೇ?
  • ಗರ್ಭನಿರೋಧಕವು ಕೆಲ ವಿಶೇಷ ನಿಯಮಗಳಿವೆಯೇ? ಉದಾ: ಅನಿಯಮಿತ ರಕ್ತಸ್ರಾವವಿರುವ ಮಹಿಳೆಯರು ಅಥವಾ ಜನನಾಂಗ ನಾಳದಲ್ಲಿ ಸೋಂಕು ಇರುವವರು ಬಳಸಬಾರದು ಇತ್ಯಾದಿ
  • ಗರ್ಭನಿರೋಧಕದ ನಿಯಂತ್ರಣವು ಬಳೆಕೆದಾರರ ಕೈಯಲ್ಲಿದೆಯೋ ಅಥವಾ ಅದು ಆರೋಗ್ಯ ಸೇವೆ ನೀಡುತ್ತಿರುವವರನ್ನು ಆಧರಿಸಿದೆಯೋ?

ನೈಸರ್ಗಿಕ ವಿಧಾನಗಳು (ವಿಶೇಷವಾಗಿ ಫಲವತ್ತತೆಯ ದಿನಗಳಲ್ಲಿ ಜನನಾಗಂದಿಂದ ಜನನಾಂಗದ ಸಂಪರ್ಕವನ್ನು ತಡೆಯುವುದು)

ಗರ್ಭಧಾರಣೆಯನ್ನು ನಿರೋಧಿಸುವ ಅತ್ಯಂತ ಸುಲಭ ಮತ್ತು ಅತಿ ಸುರಕ್ಷಿತ ವಿಧಾನವೆಂದರೆ ಲೈಂಗಿಕ ಕ್ರಿಯೆಯನ್ನು ನಡೆಸದೇ ಇರುವುದು. ಅದಲ್ಲದೆ ಮತ್ತೊಂದು ಉತ್ತಮ ವಿಧಾನವೆಂದರೆ ಜನನಾಂಗಗಳ ಸಂಪರ್ಕವನ್ನು ಹೊಂದದೇ ಇರುವುದು- ಇದಿಲ್ಲದೆಯೂ ಲೈಂಗಿಕ ಕ್ರಿಯೆಯು ಸಂತೃಪ್ತಿದಾಯಕವಾಗಿರಬಹುದು. ತಿಂಗಳ ಕೆಲವು ದಿನಗಳಲ್ಲಿ ಮಾತ್ರ ಗರ್ಭಧಾರಣೆ ಸಾಧ್ಯ ಎಂಬುದು ಮಹಿಳೆಯರಿಗೆ ಪುರಾತನ ಕಾಲದಿಂದಲೂ ತಿಳಿದಿತ್ತು. ಹಾಗಾಗಿ ಆ ದಿನಗಳಲ್ಲಿ ಲೈಂಗಿಕ ಕ್ರಿಯೆಯನ್ನು ತಪ್ಪಿಸಿದರೆ ಗರ್ಭಧಾರಣೆಯನ್ನು ತಡೆಯಬಹುದು ಎಂಬುದರ ಅರಿವಿತ್ತು. ಈ ವಿಧಾನಗಳಿಂದ ಯಾವುದೇ ಬಗೆಯ ಕೃತಕ ಗರ್ಭನಿರೋಧಕಗಳನ್ನು ಬಳಸದೆ ಗರ್ಭಧಾರಣೆಯನ್ನು ತಡೆಯಬಹುದು.

ಗರ್ಭಧಾರಣೆಯನ್ನು ನಿರೋಧಿಸುವ ಅತ್ಯಂತ ಸುಲಭ ಮತ್ತು ಅತಿ ಸುರಕ್ಷಿತ ವಿಧಾನವೆಂದರೆ ಲೈಂಗಿಕ ಕ್ರಿಯೆಯನ್ನು ನಡೆಸದೇ ಇರುವುದು. ಅದಲ್ಲದೆ ಮತ್ತೊಂದು ಉತ್ತಮ ವಿಧಾನವೆಂದರೆ ಜನನಾಂಗಗಳ ಸಂಪರ್ಕವನ್ನು ಹೊಂದದೇ ಇರುವುದು- ಇದಿಲ್ಲದೆಯೂ ಲೈಂಗಿಕ ಕ್ರಿಯೆಯು ಸಂತೃಪ್ತಿದಾಯಕವಾಗಿರಬಹುದು. ತಿಂಗಳ ಕೆಲವು ದಿನಗಳಲ್ಲಿ ಮಾತ್ರ ಗರ್ಭಧಾರಣೆ ಸಾಧ್ಯ ಎಂಬುದು ಮಹಿಳೆಯರಿಗೆ ಪುರಾತನ ಕಾಲದಿಂದಲೂ ತಿಳಿದಿತ್ತು. ಹಾಗಾಗಿ ಆ ದಿನಗಳಲ್ಲಿ ಲೈಂಗಿಕ ಕ್ರಿಯೆಯನ್ನು ತಪ್ಪಿಸಿದರೆ ಗರ್ಭಧಾರಣೆಯನ್ನು ತಡೆಯಬಹುದು ಎಂಬುದರ ಅರಿವಿತ್ತು. ಈ ವಿಧಾನಗಳಿಂದ ಯಾವುದೇ ಬಗೆಯ ಕೃತಕ ಗರ್ಭನಿರೋಧಕಗಳನ್ನು ಬಳಸದೆ ಗರ್ಭಧಾರಣೆಯನ್ನು ತಡೆಯಬಹುದು.

  • ರಿದಮ್‌ (ಕ್ಯಾಲೆಂಡರ್‌)ವಿಧಾನ: ಮಹಿಳೆಯು ತನ್ನ ಋತುಸ್ರಾವದ ಹತ್ತು ದಿನಗಳ ನಂತರ ಫಲವತ್ತತೆ ಪಡೆಯುತ್ತಾಳೆ. ಹಾಗಾಗಿ ಆ ದಿನಗಳಲ್ಲಿ ಲೈಂಗಿಕ ಕ್ರಿಯೆಯನ್ನು ಮಾಡದಿರುವುದರಿಂದ ಗರ್ಭಧಾರಣೆಯನ್ನು ತಪ್ಪಿಸಬಹುದು. ಹಾಗಾಗಿ ಋತುಸ್ರಾವದ ಮೊದಲ ಒಂದು ವಾರ ಮತ್ತು ನಂತರದ ಒಂದು ವಾರವನ್ನು ‘ಸುರಕ್ಷಿತ ದಿನಗಳು’ ಎಂದು ಕರೆಯಬಹುದು. ಆದರೆ ಇದು ಅಷ್ಟು ವಿಶ್ವಾಸಾರ್ಹ ವಿಧಾನವಲ್ಲ. ಏಕೆಂದರೆ ಇದರಲ್ಲಿ ಋತುಚಕ್ರದ ಏರುಪೇರನ್ನು ಈ ವಿಧಾನದಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ರಿದಮ್‌ ವಿಧಾನದಲ್ಲಿ ಎಲ್ಲ ಸ್ತ್ರೀಯರ ಋತುಚಕ್ರವು ೨೮ ದಿನಗಳು ಎಂದೇ ಪರಿಗಣಿಸಲಾಗಿದೆ. ಹಾಗಾಗಿ ಅಂಡಾಣುವು ತಿಂಗಳ ಮಧ್ಯದಲ್ಲಿ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪ್ರತಿ ಮಹಿಳೆಯೂ ತನ್ನದೇ ಆದ ವಿಭಿನ್ನ ಋತುಚಕ್ರದ ಅವಧಿಯನ್ನು ಹೊಂದಿದ್ದಾಳೆ. ಹಾಗಾಗಿ ಅಂಡಾಣುವಿನ ಉತ್ಪತ್ತಿಯು ವಿಭಿನ್ನ ಕಾಲದಲ್ಲಿ ಆಗಬಹುದು. ಇದು ಯಾವುದೇ ಬಗೆಯ ಗರ್ಭನಿರೋಧಕ ವಿಧಾನವನ್ನು ಬಳಸದೇ ಇರುವುದಕ್ಕಿಂತ ಉತ್ತಮ ಅಷ್ಟೇ.
  • ಸರ್ವೇಕಲ್‌ ಮ್ಯೂಕಸ್‌/ ಬಿಲ್ಲಿಂಗ್ಸ್‌ ಒವುಲೇಷನ್‌ ವಿಧಾನ ಬಹುತೇಕ ಸ್ತ್ರೀಯರಲ್ಲಿ ತಿಂಗಳ ಬಹುತೇಕ ಭಾಗದಲ್ಲಿ ಸ್ವಲ್ಪ ಪ್ರಮಾಣದ ಸ್ರಾವವನ್ನು ಹೊಂದಿರುತ್ತಾರೆ. ಇದು ಆರೋಗ್ಯಕರ ಚಿಹ್ನೆಯಾಗಿದೆ. ಈ ಸ್ರಾವವು ಅದರ ಪ್ರಮಾಣ, ಬಣ್ಣ ಮತ್ತು ಸಾಂದ್ರತೆಯಲ್ಲಿ ಬೇರೆಬೇರೆಯಾಗಿರುತ್ತದೆ. ಕೆಲಬಾರಿ ಅದು ಬಿಳಿಯ ಅಂಟು ಸ್ರಾವವಾಗಿರಬಹುದು, ಕೆಲಬಾರಿ ಪಾರದರ್ಶಕ ಜಾರುವಂತಿರುವ ಸ್ರಾವವಾಗಿರಬಹುದು. ಇದು ಋತುಚಕ್ರದ ದಿನಗಳನ್ನು ಆಧರಿಸಿರುತ್ತದೆ. ಋತುಚಕ್ರ ಮುಗಿದ ತಕ್ಷಣದ ದಿನಗಳಲ್ಲಿ ಸ್ರಾವವು ಒಣ, ಗಟ್ಟಿಯಾದ, ಗೋದಿಬಣ್ಣವನ್ನು ಹೊಂದಿರುತ್ತದೆ. ಅಂಡಾಣುವು ಫಲಿತವಾಗುವುದಕ್ಕೆ ಸಿದ್ಧವಾಗುತ್ತಿದ್ದಂತೆಯೇ ದೇಹದಲ್ಲಿನ ಈಸ್ಟ್ರೋಜನ್‌ ಹಾರ್ಮೊನ್‌ ನಿಂದಾಗಿ ಸ್ರಾವವು ಪಾರದರ್ಶಕವಾಗಿ, ಹಿಗ್ಗುವಂತಿದ್ದು, ಜಾರುತ್ತಿರುತ್ತದೆ. ಅಂಡಾಣು ಫಲಿತವಾಗುವ ಮತ್ತು ಅದರ ನಂತರದ ಒಂದು ದಿನ ಈ ಬಗೆಯ ಸ್ರಾವವಿರುತ್ತದೆ. ಹಾಗಾಗಿ ಮಹಿಳೆಯ ಯೋನಿಯ ಸ್ರಾವವು ಆಕೆಯ ಫಲಿತ ದಿನಗಳ ಮೊದಲ ಲಕ್ಷಣ. ಸ್ತ್ರೀಯು ಸರ್ವೆಕಲ್‌ ಸ್ರಾವವನ್ನು ತನ್ನ ಬೆರಳುಗಳ ಮೂಲಕ ಪರೀಕ್ಷಿಸಿ ಅದರ ಲಕ್ಷಣವನ್ನು ಆಧರಿಸಿ ಆಕೆ ತನ್ನ ಫಲವತ್ತತೆಯ ಮತ್ತು ಸುರಕ್ಷಿತ ದಿನಗಳನ್ನು ಕಂಡುಕೊಳ್ಳಬಹುದು.
  • ದೇಹದ ಮೂಲ ಉಷ್ಣತ

ಮಹಿಳೆಯು ಪ್ರತಿದಿನವೂ ನಿದ್ದೆಯಿಂದೆದ್ದ ತಕ್ಷಣ ನಿಗದಿತ ಸಮಯದಲ್ಲಿ ತನ್ನ ದೇಹದ ಉಷ್ಣತೆಯನ್ನು ನೋಡಿಕೊಳ್ಳಬೇಕು. ಅಂಡಾಣು ಫಲಿತಗೊಳ್ಳುವ ಸಮಯದಲ್ಲಿ ದೇಹದ ಉಷ್ಣತೆಯಲ್ಲಿ ಗಣನೀಯವಾಗಿ ಏರಿಕೆ (ಸುಮಾರು ೧-೨ ಡಿಗ್ರಿ ಫ್ಯಾರನ್‌ಹೀಟ್) ಕಂಡು ಬರುತ್ತದೆ. ಅದು ಮುಂದಿನ ಋತುಚಕ್ರದ ವರೆಗೆ ಇರುತ್ತದೆ. ಇದನ್ನೇ ಗರ್ಭನಿರೋಧಕ ವಿಧಾನವಾಗಿ ಅನುಸರಿಸಿದರೆ ೧-೧೬ ದಿನಗಳವರೆಗೆ ಜನನಾಂಗಗಳ ಸ್ಪರ್ಶ ಸಲ್ಲ. ಅಲ್ಲದೆ ಅಂಡಾಣು ಬಿಡುಗಡೆಯಾದ ಎರಡು ದಿನವರೆಗೆ ಫಲಪ್ರದ ದಿನಗಳೆಂದು ಪರಿಗಣಿಸಲಾಗುತ್ತದೆ ಹಾಗಾಗಿ ಇಲ್ಲಿ ಲೈಂಗಿಕ ಕ್ರಿಯೆಯ ದಿನಗಳು ಅತ್ಯಂತ ಕಡಿಮೆಯಾಗಿವೆ. ಅಲ್ಲದೆ ದಿನವೂ ಬೆಳಿಗ್ಗೆ ದೇಹದ ಉಷ್ಣತೆಯನ್ನು ಅಳೆಯುವುದರಿಂದಾಗಿ ಇದು ತುಸು ಕಷ್ಟದಾಯಕ ವಿಧಾನ.

ತಡೆ ವಿಧಾನ/ : (ಅಂಡಾಣುವು ವೀರ್ಯಾಣುವಿನೊಂದಿಗೆ ಸೇರುವುದನ್ನು ತಡೆಯುವ ವಿಧಾನ

ಪರುಷರ ಕಾಂಡೋಂ ಇದು ಸಿಲಿಂಡರ್‌ ಆಕಾರದ ಲೆಟೆಕ್ಸ್‌ ಸಂಚಿ. ಇದನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ತೊಟ್ಟುಕೊಳ್ಳಬೇಕು. ಇದು ಯೋನಿಯಲ್ಲಿ ವೀರ್ಯ ಪ್ರವೇಶಿಸುವುದನ್ನು ತಡೆಯುತ್ತದೆ. ಶಿಶ್ನವು ಯೋನಿಯೊಳಗೆ ಪ್ರವೇಶಿಸುವ ಮುನ್ನ ಕಾಂಡೋಂಅನ್ನು ತೊಡಬೇಕು. ಶಿಶ್ನದಿಂದ ಹೊರಬರುವ ಸ್ವಲ್ಪ ಸ್ರಾವದಲ್ಲಿಯೂ ಕೂಡ ವೀರ್ಯಾಣುಗಳು ಮತ್ತು ಲೈಂಗಿಕ ಸೋಂಕುಗಳಿರುವ ಸಾಧ್ಯತೆಯಿರುವುದರಿಂದ ಜನನಾಂಗಗಳ ಸಂಪರ್ಕದ ಮೊದಲೇ ಇದನ್ನು ಧರಿಸಬೇಕು. ವೀರ್ಯಸ್ಖಲನದ ನಂತರ ಶಿಶ್ನವನ್ನು ಯೋನಿಯಿಂದ ಹುಶಾರಾಗಿ ಹೊರತೆಗೆಯಬೇಕು. ವೀರ್ಯ ಯೋನಿಯಲ್ಲಿ ಒಸರದಂತೆ ನೋಡಿಕೊಳ್ಳಬೇಕು. ನಂತರ ಕಾಂಡೋಮ್‌ ಅನ್ನು ಹೊರತೆಗೆದು ಎಸೆಯಬೇಕು. ಒಂದು ಕಾಂಡೋಮ್‌ ಅನ್ನು ಒಂದೇ ಬಾರಿ ಬಳಸಬೇಕು. ಕಾಂಡೋಮ್‌ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಬಾರದು. ಪರುಷರ ಕಾಂಡೋಮ್‌ ಅತ್ಯಂತ ಸುರಕ್ಷಿತ ಗರ್ಭನಿರೋಧಕಗಳಲ್ಲಿ ಒಂದು. ಇದರ ಬಳಕೆಯಿಂದ ಮಹಿಳೆಗಾಗಲೀ ಅಥವಾ ಪುರುಷರಿಗಾಗಲೀ ಯಾವುದೇ ಬಗೆಯ ಅಡ್ಡಪರಿಣಾಮಗಳಿಲ್ಲ. ಕಾಂಡೋಮ್‌ ಎಚ್‌ಐವಿ ಮತ್ತಿತರ ಲೈಂಗಿಕ ರೋಗಗಳನ್ನು ತಡೆಯಬಹುದು. ಇದರ ಇನ್ನೊಂದು ಉಪಯೋಗವೆಂದರೆ ಅಂತರವನ್ನು ಕಾಪಾಡಿಕೊಳ್ಳುವುದು. ಇದು ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಗರ್ಭನಿರೋಧಕ. ಕಾಂಡೋಮ್‌ಗಳು ಸಂಭೋಗದ ಸ್ಫೂರ್ತಿ ಮತ್ತು ಸುಖವನ್ನು ತೆಗೆದು ಬಿಡುತ್ತವೆ ಎಂದು ಕೆಲವರ ಅದರಲ್ಲೂ ಪುರುಷರ ಅಭಿಪ್ರಾಯ. ಕೆಲವರು ಲ್ಯಾಟೆಕ್ಸ್‌ ರಬ್ಬರ್‌ಗೆ ಅಲರ್ಜಿ ಹೊಂದಿರುತ್ತಾರೆ. ಕಾಂಡೋಮ್‌  ಕಳಪೆ ದರ್ಜೆಯದ್ದಾಗಿದ್ದರೆ, ಹಳೆಯ ದಾಸ್ತಾನಾಗಿದ್ದರೆ ಇಲ್ಲವೇ ತುಂಬ ಬಿಸಿಯಾದ ಜಾಗದಲ್ಲಿ ದಾಸ್ತಾನು ಮಾಡಿದ್ದರೆ ಅವು ಹರಿಯುವ ಸೋರುವ ಸಾಧ್ಯತೆ ಹೆಚ್ಚು. ಅದನ್ನು ಸರಿಯಾಗಿ ಬಳಸದೇ ಇದ್ದಾಗ ಉದಾ: ಸರಿಯಾಗಿ ಬಿಡಿಸದೇ ಇದ್ದಾಗ ಅಥವಾ ಕಾಂಡೋಂನಲ್ಲಿ ಸೂಕ್ತ ಜಾರುವಿಕೆ ಇಲ್ಲದಿರುವಾಗ ಮಿಲನದ ಸಮಯದಲ್ಲಿ ಹರಿಯಬಹುದು. ಕಾಂಡೋಂ ಬಳಕೆ ಅತ್ಯಂತ ಸುರಕ್ಷಿತ ಮಾರ್ಗವಾಗಿದ್ದರೂ ಕೂಡ, ಗರ್ಭಧಾರಣೆಯನ್ನು ತಡೆಯುವಲ್ಲಿನ ಜವಾಬ್ದಾರಿಯನ್ನು ಹೊರಲು ಸಿದ್ಧರಿಲ್ಲದಿರುವುದೂ ಕೂಡ ಅನೇಕ ಪುರುಷರು ಕಾಂಡೋಂ ಬಳಸದಿರಲು ಪ್ರಮುಖ ಕಾರಣ. ಕಾಂಡೋಮ್‌ ಹಾಕುವುದೇ ಲೈಂಗಿಕ ಕ್ರೀಡೆಯ ಭಾಗವಾದಾಗ, ಅದೊಂದು ಸಂತೋಷದಾಯಕ ಚಟುವಟಿಕೆಯಾಗಬಹುದು. ಎಚ್‌ಐವಿ ಮತ್ತು ಇತರ ಲೈಂಗಿಕ ಸೋಂಕು ಹರಡುವುದನ್ನು ತಡೆಯುವುದು ಮತ್ತು ಅದರ ಬಳಕೆಯಿಂದ ದೊರೆಯುವ ಸುರಕ್ಷತೆಗಳ ಬಗ್ಗೆ ಯೋಚಿಸಿದಾಗ ಪುರುಷರಲ್ಲಿ ಕಾಂಡೋಂ ಬಳಕೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸುವುದು ಉತ್ತಮ. ಡಯಾಫ್ರಂ: ಡಯಾಫ್ರಂಅನ್ನು ೧೯ನೇ ಶತಮಾನದಲ್ಲಿ ಕಂಡು ಹಿಡಿಯಲಾಯಿತು. ಇದು ಸ್ತ್ರೀಯರಿಗೆ ತಮ್ಮ ಫಲವತ್ತತೆಯ ಮೇಲೆ ಹಿಡಿತ ಕೊಟ್ಟಿತು. ವೃತ್ತಾರಕಾರದ, ಗುಮ್ಮಟದಂತಿರುವ ಗಟ್ಟಿಯಾದ ರಿಮ್‌ ಹೊಂದಿರುವ ಡಯಾಫ್ರಂ ಅನ್ನು ಯೋನಿಯೊಳಗೆ ಗರ್ಭಕಂಠ (ಸರ್ವೆಕ್ಸ್‌)ವನ್ನು ಮುಚ್ಚುವಂತೆ ಅಳವಡಿಸಲಾಗುತ್ತದೆ. ಇದು ವೀರ್ಯಾಣುಗಳು ಗರ್ಭಕೋಶವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಡಯಾಫ್ರಂ ಅನ್ನು ಮೊದಲಬಾರಿ ಅಳವಡಿಸುವಾಗ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರು ಮಾಡುತ್ತಾರೆ. ಡಯಾಫ್ರಂ ೨- ೪ ಇಂಚುಗಳಲ್ಲಿ ದೊರೆಯುವುದರಿಂದ ನುರಿತ ವೈದ್ಯರ ನೆರವು ಅಗತ್ಯ. ಸರಿಯಾದ ಅಳತೆಯ ಡಯಾಫ್ರಂ ಕೂರಿಸಿದ ಮೇಲೆ ಮಹಿಳೆಯು ಅಗತ್ಯಬಿದ್ದಾಗ ಹಾಕಿ ತೆಗೆದು ಮಾಡಬಹುದು. ಲೈಂಗಿಕ ಕ್ರಿಯೆಯ ಮೊದಲು ತೊಡಬೇಕು ಮತ್ತು ಕ್ರಿಯೆಯ ನಂತರದ ೬ ತಾಸು ಅದನ್ನು ತೊಟ್ಟಿರಬೇಕು. ಹಾಗೆ ಮಾಡುವುದರಿಂದ ಯೋನಿಯಲ್ಲಿ ಪ್ರವೇಶಿಸಿದ ವೀರ್ಯಾಣುಗಳನ್ನು ಕೊಂದು ಹಾಕಲು ಸಹಾಯಕವಾಗುತ್ತದೆ. ಆರು ತಾಸಿನ ನಂತೆ ತೆಗೆದು ಸೋಪು ಮತ್ತು ನೀರಿನಲ್ಲಿ ಚೆನ್ನಾಗಿ ತೊಳೆದು ಒಣಗಿಸಿ ಮತ್ತೊಂದು ಬಳಕೆಯವರೆಗೆ ತೆಗೆದಿಡಬಹುದು. ಡಯಾಫ್ರಂನ ಸಮಸ್ಯೆಯೆಂದರೆ ಅದು ಮುಂದಕ್ಕೆ ಸರಿದು ಗರ್ಭಾಶಯ ಅಥವಾ ಯುರೇತ್ರದ ಮೂತ್ರಕೋಶಗಳಲ್ಲಿ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಇದು ಕೆಲ ಮಹಿಳೆಯರಲ್ಲಿ ಯುರೆತ್ರೈಟಿಸ್‌ ಅಥವಾ ಸಿಸ್ಟ್ ಗಳು ಬೆಳೆಯಲು ಕಾರಣಬಾಗಬಹುದು. ಹಾಗಾಗಿ ಕೆಳಗಿಳಿದ ಗರ್ಭಾಶಯ ಮತ್ತು ಮೂತ್ರನಾಳ ಸೋಂಕಿನ ಅಪಾಯವಿರುವ ಮಹಿಳೆಯರು ಇದನ್ನು ಬಳಸಬಾರದು. ಡಯಾಫ್ರಂನ ಬಳಕೆ ಮಹಿಳೆಯ ಕೈಯಲ್ಲೇ ಇರುವುದು ಇದರ ಧನಾತ್ಮಕ ಅಂಶಗಳಲ್ಲೊಂದು. ಇದು ಭಾರತದಲ್ಲಿ ಸುಲಭವಾಗಿ ದೊರೆಯುವುದಿಲ್ಲ. ಕೆಲ ಮಹಿಳಾ ಪರ ಸಂಘಟನೆಗಳು ಇವುಗಳನ್ನು ಆಮದು ಮಾಡಿಕೊಂಡು ವಿತರಿಸಿವೆ. ಒಂದು ಡಯಾಫ್ರಂನ ಬೆಲೆ ರು. ೪೦೦ಗಳಾದರೂ ಮರುಬಳಕೆ ಮಾಡುವುದರಿಂದ ಹಾಗೂ ಅದನ್ನು ಸರಿಯಾಗಿ ಬಳಸಿದಾಗ ಮೂರು ವರ್ಷಗಳವರೆಗೆ ಬಾಳಿಕೆ ಬರುವುದರಿಂದ ತುಂಬಾ ತುಟ್ಟಿ ಎನಿಸದು. ಸರ್ವೆಕಲ್‌ ಕ್ಯಾಪ್‌ (ಗರ್ಭಕೊರಳಿನ ಟೋಪಿ) ಇದು ಚಿಕ್ಕ ಟೋಪಿಯಾಕಾರದ ರಬ್ಬರ್‌ ಸಾಧನದು ಗರ್ಭಕೊರಳಿನ ಮೇಲೆ ಕೂರುತ್ತದೆ. ಡಯಾಫ್ರಂ ನಂತೆಯೇ ಇದೂ ಕೂಡ ವೀರ್ಯಾಣುಗಳು ಗರ್ಭಾಶಯವನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಹೀರುವಿಕೆ ಅಥವಾ ಮೇಲ್ಮುಖ ಒತ್ತಡದಿಂದಾಗಿ ಅದು ಗರ್ಭಕೊರಳಿನ ಹತ್ತಿರವೇ ಅಂಟಿಕೊಂಡಿರುತ್ತದೆ. ಆದರೆ ದುರದೃಷ್ಟವಶಾತ್‌ ಅದು ಭಾರತದಲ್ಲಿ ದೊರೆಯುವುದಿಲ್ಲ.ಫೀಮೇಲ್‌ ಕಾಂಡೋಂ ಇದು ಮೃದುವಾದ ಸಡಿಲವಾದ ಪಾಲಿಯುರೇಥಾನ್‌ನಿಂದ ಮಾಡಿದ ಚೀಲ. ಇದು ಒಂದು ಬದಿಗೆ ಮುಚ್ಚಿರುತ್ತದೆ. ಇದು ಯೋನಿಯಲ್ಲಿ ವೀರ್ಯ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಲೈಂಗಿಕ ಕ್ರಿಯೆಗೆ ತೊಡಗುವ ಮೊದಲೇ ಇದನ್ನು ಯೋನಿಯಲ್ಲಿ ಸೇರಿಸಬೇಕು. ಇದರಲ್ಲಿ ಸ್ಥಿತಿ ಸ್ಥಾಪಕ ಗುಣವುಳ್ಳ ರಿಂಗ್‌ ಇದರ ಎರಡೂ ಬದಿಯಲ್ಲಿರುತ್ತದೆ. ಒಂದು ಗರ್ಭಕೊರಳಿನ ಬಳಿಯಿದ್ದರೆ ಇನ್ನೊಂದು ಯೋನಿದ್ವಾರದ ಬಳಿಯಿರುತ್ತದೆ. ಹೊರಗಿನ ಉಂಗುರವು ಶಿಶ್ನದ ಮೂಲ ಮತ್ತು ಲೆಬಿಯಾದ ನಡುವೆ ತಡೆಗೋಡೆಯಂತೆ ವರ್ತಿಸುತ್ತದೆ. ಸ್ತ್ರೀಯರ ಕಾಂಡೋಂ ಅನ್ನು ಮಿಲನದ ಮುನ್ನ ಅಳವಡಿಸಬೇಕು. ಸ್ತ್ರೀ ಎದ್ದು ನಿಲ್ಲುವ ಮೊದಲೇ ವೀರ್ಯವು ಯೋನಿಯೊಳಗೆ ತುಳುಕದಂತೆ ಎಚ್ಚರಿಕೆಯಿಂದ ತೆಗೆಯಬೇಕು. ಇದು ಡಯಾಫ್ರಂ ಮತ್ತು ಕಾಂಡೋಮ್‌ ಎರಡರ ಲಕ್ಷಣಗಳು ಇದರಲ್ಲಿವೆ. ಇದನ್ನು ಗರ್ಭಕೊರಳನ್ನು ಮುಚ್ಚುತ್ತಿದೆಯೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೇ, ಡಯಾಫ್ರಂ ನಂತೆಯೇ ಯೋನಿಯಲ್ಲಿ ಸೇರಿಸಬೇಕು. ಪುರುಷರ ಕಾಂಡೋಂ ನಂತೆಯೇ ಸ್ತ್ರೀಯರ ಕಾಂಡೋಂ ಅನ್ನೂ ಕೂಡಾ ಒಂದು ಬಾರಿಯೇ ಬಳಸಬೇಕು. ಸ್ತ್ರೀಯರ ಕಾಂಡೋಂ ಗರ್ಭಗೋಡೆಯನ್ನಲ್ಲದೆ ಗರ್ಭಾಶಯದ ಕೊರಳನ್ನೂ ಮುಚ್ಚುತ್ತದೆ. ಇದು ಗರ್ಭನಿರೋಧಕ ಮಾತ್ರವಲ್ಲದೆ ಇದು ಎಚ್‌ಐವಿ ಮತ್ತು ಇತರೆ ಲೈಂಗಿಕ ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರ ಮತ್ತೊಂದು ಅನುಕೂಲವೆಂದರೆ ಇದನ್ನು ಲೈಂಗಿಕ ಕ್ರಿಯೆಗೆ ಮೊದಲೇ ಅಳವಡಿಸಿಕೊಳ್ಳಬಹುದು, ಹಾಗಾಗಿ ಲೈಂಗಿಕ ಕ್ರಿಯೆಯಲ್ಲಿ ತಡೆಯೊಡ್ಡುವುದು ಅಗತ್ಯವಿಲ್ಲ. ಇದು ಒಂದೇ ಅಳತೆಯಲ್ಲಿ ಬರುವುದರಿಂದ ವೈದ್ಯರು ಅಳವಡಿಸುವ ಅಗತ್ಯವಿಲ್ಲ. ಆದರೆ ಇದು ದುಬಾರಿಯಾಗಿರುವುದು ಇದರ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಸಂಭೋಗದ ಸಮಯದಲ್ಲಿ ಅದು ಉಂಟುಮಾಡುವ ಸದ್ದು ಅತ್ಯಂತ ಮುಜುಗರ ಉಂಟು ಮಾಡುತ್ತದೆ ಅಲ್ಲದೆ ಇದರಿಂದ ಮೌಖಿಕ ಸಂಭೋಗ ಅಹಿತಕರವಾಗುತ್ತದೆ. ಅಲ್ಲದೆ. ಇದು ಕ್ಲಿಟೊರಿಸ್‌ ಅನ್ನು ಮುಚ್ಚುವುದರಿಂದ ಲೈಂಗಿಕ ಸುಖವನ್ನು ಕಡಿಮೆ ಮಾಡುತ್ತದೆ ಮತ್ತು ಅಸೌಕರ್ಯವನ್ನು ಉಂಟುಮಾಡುತ್ತದೆ ಎಂದು ಅನೇಕ ಸ್ತ್ರೀಯರು ದೂರತ್ತಾರೆ. ಈ ಕಾಂಡೋ ಸುಲಭವಾಗಿ ಲಭ್ಯವಾಗುತ್ತಿಲ್ಲ. ಇದು ಸ್ವಯಂಸೇವಾ ಸಂಸ್ಥೆಗಳಲ್ಲಿ ಲಭ್ಯವಿದೆ.ವೀರ್ಯನಾಶಕಗಳು ಸ್ಪರ್ಮಿಸೈಡ್‌ಗಳನ್ನು ಯೋನಿಯೊಳಗೆ ಹಚ್ಚುವ ರಸಾಯನಿಕ. ಇದು ವೀರ್ಯಾಣುಗಳನ್ನು ನಿಷ್ಕ್ರಿಯಗೊಳಿಸುತ್ತದೆ ಇಲ್ಲವೇ ನಾಶಮಾಡುತ್ತವೆ. ಇವು ಫೋಂ ರೂಪದಲ್ಲಿ ಇಲ್ಲವೇ ಮಾತ್ರೆಗಳ ರೂಪದಲ್ಲಿ (ಉದಾ: ಟುಡೇ) ಜೆಲ್ಲಿ ಇಲ್ಲವೇ ಕ್ರೀಂ (ಡೆಲ್ಫಿನ್‌) ರೂಪದಲ್ಲಿ ಲಭ್ಯವಿವೆ. ಲೈಂಗಿಕ ಕ್ರಿಯೆಗೆ ಕೆಲ ಕ್ಷಣಗಳ ಮುನ್ನ ಇದನ್ನು ಯೋನಿಯೊಳಕ್ಕೆ ಹಚ್ಚಬೇಕಾಗುತ್ತದೆ. ಇದೊಂದನ್ನೇ ಬಳಸಲು ಸಾಧ್ಯವಿಲ್ಲ. ಆದರೆ ಡಯಾಫ್ರಂ ಇಲ್ಲವೇ ಕಾಂಡೋಮ್‌ ಸಾಧನಗಳ ಜತೆ ಉಪಯುಕ್ತ. ಇದೊಂದನ್ನೇ ಬಳಸಿದಾಗ ಇದರ ವೈಫಲ್ಯದ ದರ ಶೇ. ೬, ಆದರೆ ನಿಜವಾದ ವೈಫಲ್ಯದ ದರ ಶೇ. ೨೬. ಈ ರಸಾಯನಿಕಗಳಿಂದ ಗಂಭೀರಸ್ವರೂಪದ ಅಡ್ಡಪರಿಣಾಮಗಳಿಲ್ಲ. ಆದರೆ ಕೆಲವರಲ್ಲಿ ಜನನಾಂಗದಲ್ಲಿ ತುರಿಕೆ ಮತ್ತು ಅಲರ್ಜಿ ಉಂಟಾಗಬಹುದು.

ಸಾಂಪ್ರದಾಯಿಕವಾಗಿ ಬಳಸುವ ವಿಧಾನಗಳು:

ಎದೆಹಾಲೂಡಿಸುವಿಕೆ ಮಗು ಜನಿಸಿದ ನಂತರ ಪುನಃ ಋತುಚಕ್ರ ಆರಂಭವಾಗಲು ಮತ್ತು ಅಂಡಾಣುಗಳು ಬಿಡುಗಡೆಯಾಗಲು ಕೆಲ ತಿಂಗಳುಗಳೇ ಬೇಕು. ಎದೆ ಹಾಲೂಡಿಸುವಾಗಿನ ಋತು ಚಕ್ರವಿರದ ಅವಧಿಯನ್ನು ಲ್ಯಾಕ್ಟೇಶನಲ್‌ ಅಮೆನೊರಿಯಾ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಮಗುವಿಗೆ ಪೂರ್ಣಾವಧಿ ಬರಿ ಎದೆಹಾಲನ್ನು ಮಾತ್ರ ನೀಡಲಾಗುತ್ತದೆ. ಈ ಅವಧಿಯಲ್ಲಿ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಿರುತ್ತದೆ. ಆದರೆ ಮೊದಲ ಋತುಚಕ್ರ ಆರಂಭವಾಗುವುದಕ್ಕೆ ಮೊದಲೇ ಅಂಡಾಣುವಿನ ಬಿಡುಗಡೆಯಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಋತುಚಕ್ರ ಬರುವ ಮೊದಲೇ ಗರ್ಭಧರಿಸುವ ಸಾಧ್ಯತೆಗಳೂ ಕೂಡ ಇಲ್ಲದಿಲ್ಲ. ಸಂಭೋಗದ ತಡೆ ಹಿಂತೆಗೆತ ಈ ವಿಧಾನದಲ್ಲಿ ಸ್ಖಲನಕ್ಕೆ ಮುನ್ನವೇ ಶಿಶ್ನವನ್ನು ಯೋನಿಯಿಂದ ಹೊರತೆಗೆಯಲಾಗುತ್ತದೆ. ಇದು ಅಂತಹ ಪರಿಣಾಮಕಾರಿ ವಿಧಾನವಲ್ಲ ಏಕೆಂದರೆ, ಹಿಂತೆಗೆಯುವ ವೇಳೆಯನ್ನು ನಿರ್ಧರಿಸುವಲ್ಲಿ ತಪ್ಪಾಗಬಹುದು ಅಲ್ಲದೇ ಯೋನಿ ಮತ್ತು ಯೋನಿ ತುಟಿಗಳಿಗೆ ತಗುಲದಂತೆ ಹಿಂತೆಗೆಯುವುದು ಕಷ್ಟಸಾಧ್ಯ. ಶಿಶ್ನ ನಿಮಿರಿದಾಗಲೇ ಸ್ವಲ್ಪ ಪ್ರಮಾಣದ ವೀರ್ಯಾಣುಗಳು ಬಿಡುಗಡೆಯಾಗುವುದರಿಂದ ಗರ್ಭಧಾರಣೆಗೆ ಅದು ಸಾಕಾಗಬಹುದು.ಗರ್ಭ ಫಲಿತಗೊಳ್ಳುವುದನ್ನು ತಡೆಗಟ್ಟುವ ವಿಧಾನಗಳುಗರ್ಭಕೋಶದೊಳಗಿನ ಸಾಧನ ಗರ್ಭಾಶಯದೊಳಗಿನ ಸಾಧನ (ಐಯುಡಿ)ಯು ಒಂದು ಚಿಕ್ಕ ಸ್ಥಿತಿ ಸ್ಥಾಪಕ ಗುಣವುಳ್ಳ ಪ್ಲಾಸ್ಟಿಕ್‌ ಸಾಧನ. ಸಿಂಥೆಟಿಕ್‌ ಇಲ್ಲವೆ ಹಿತ್ತಾಳೆಯ ಪ್ರೊಜೆಸ್ಟಿರೋನ್‌ ಅನ್ನು ಹೊಂದಿರುತ್ತದೆ. ಐಯುಡಿಯನ್ನು ಗರ್ಭಕೊರಳಿನ ಮೂಲಕ ಗಭಾಶಯದೊಳಕ್ಕೆ ಸ್ಥಾಪಿಸಲಾಗುತ್ತದೆ. ಅದನ್ನು ಸೇರಿಸಿಯಾದ ಮೇಲೆ ಅದರ ಎರಡು ತಂತಿಗಳು ಯೋನಿಯ ಮೇಲ್ಭಾಗಕ್ಕೆ ಹರಡಿಕೊಳ್ಳುತ್ತವೆ. ಸ್ತ್ರೀಯು ಯೋನಿದ್ವಾರದೊಳಕ್ಕೆ ಕೈತೂರಿಸಿ ಅದು ಸ್ಥಳದಲ್ಲಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು. ಐಯುಡಿಯು ಹೇಗೆ ಕೆಲಸ ಮಾಡುತ್ತದೆ ಎಂಬುದು ಈಗಲೂ ಸ್ಪಷ್ಟವಾಗಿಲ್ಲ. ಐಯುಡಿಗಳು (ವಿಶೇಷವಾಗಿ ತಾಮ್ರವನ್ನು ಹೊಂದಿರುವವು) ದೀರ್ಘಕಾಲೀನವಾಗಿ ತೊಟ್ಟಾಗ ಉರಿಯೂತಕ್ಕೆ ಕಾರಣವಾಗುತ್ತವೆ ಅಥವಾ ಗರ್ಭಾಶಯದಲ್ಲಿ ಅಲ್ಪ ಪ್ರಮಾಣದ ಸೋಂಕಿಗೆ ಕಾರಣವಾಗುತ್ತವೆ. ಈ ಬದಲಾವಣೆಯು ವೀರ್ಯಾಣುಗಳನ್ನು ನಾಶಪಡಿಸುವುದು ಅಥವಾ ಅವುಗಳಿಗೆ ಧಕ್ಕೆ ತರುವುದು ಅಥವಾ ಮಹಿಳೆಯ ಜನನಾಂಗದಲ್ಲಿ ಅವುಗಳ ಚಲನೆಯನ್ನು ದುಸ್ತರಗೊಳಿಸಿ ಅವುಗಳು ಫಲಿತಗೊಳ್ಳುವುದನ್ನು ದುಸ್ಸಾಧ್ಯಗೊಳಿಸುತ್ತದೆ. ಒಂದುವೇಳೆ ಫಲಿತಗೊಂಡರೂ ಕೂಡ ಗರ್ಭಾಶಯದಲ್ಲಿನ ಪರಕೀಯ ವಸ್ತುವಿನಿಂದಾಗಿ ಅದು ಗರ್ಭಗೋಡೆಗೆ ಅಂಟಿಕೊಂಡು ಸ್ಥಾಪಿತಗೊಳ್ಳುವುದನ್ನು ತಡೆಯುತ್ತದೆ. ಕಾಪರ್‌-ಟಿಯು ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಐಯುಡಿ. ಈ ಐಯುಡಿಗಳನ್ನು ೩-೪ ವರ್ಷಗಳವರೆಗೆ ಬಳಸಲಾಗುತ್ತದೆ, ಆನಂತರ ವುಗಳನ್ನು ಬದಲಿಸಬೇಕಾಗುತ್ತದೆ. ಐಯುಡಿಯನ್ನು ವೈದ್ಯರ ಸಹಾಯದಿಂದ ಗರ್ಭಾಶಯದಲ್ಲಿ ಸೇರಿಸಬೇಕಾಗುತ್ತದೆ. ಒಂದೋ ಋತುಚಕ್ರದ ಸಮಯದಲ್ಲಿ ಅಥವಾ ಋತುಚಕ್ರ ಮುಗಿದ ತಕ್ಷಣ ಗರ್ಭಧಾರಣೆಯ ಸಾಧ್ಯತೆ ಇಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆ ಐಯುಡಿಯನ್ನು ಹಾಕಬೇಕು. ಗರ್ಭನಿರೋಧಕವಾಗಿ ಐಯುಡಿಯು ಅತ್ಯಂತ ಪರಿಣಾಮಕಾರಿ ಸಾಧನ. ಆದರೆ ಇದರಿಂದಾಗಿ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು. ಕೆಲ ಗಂಭೀರ ಸ್ವರೂಪದ ದುಷ್ಪರಿಣಾಮಗಳೂ ಇವೆ.

  • ಐಯುಡಿಯನ್ನು ಹಾಕಿದ ಮೊದಲ ಐದು ದಿನಗಳ ನಂತರವೂ ತೀವ್ರ ಸ್ವರೂಪದ ಸ್ನಾಯು ಸೆಳೆತ ಮತ್ತು ನೋವು
  • ತೀವ್ರ ಋತುಸ್ರಾವ ಅಥವಾ ಋತುಚಕ್ರದ ನಡುವೆ ಋತುಸ್ರಾವ, ರಕ್ತಹೀನತೆಗೆ ತುತ್ತಾಗುವ ಸಾಧ್ಯತೆ
  • ಅತಿ ವಿರಳ ಪ್ರಕರಣಗಳಲ್ಲಿ ಗರ್ಭಗೋಡೆಯಲ್ಲಿ ರಂಧ್ರಗಳುಂಟಾಗಬಹುದು. ಐಯುಡಿಯ ಸುತ್ತ ಪದರವು ಬೆಳೆದಾಗ ಐಯುಡಿಯು ಅದರಲ್ಲಿ ಹೂತುಹೋಗುತ್ತದೆ. ಐಯುಡಿಯನ್ನು ಹೊರತೆಗೆಯುವಾಗ ತುಂಬ ನೋವಿಗೆ ಕಾರಣವಾಗುತ್ತವೆ. ಕೆಲಬಾರಿ ಡಿ&ಸಿಗೂ ಕಾರಣವಾಗಬಹುದು. (ಡಿಲೇಶನ್‌ ಅಂಡ್‌ ಕ್ಯುರಟೇಜ್‌)
  • ಪೆಲ್ವಿಸ್‌ ಇನ್ಫ್ಲೇಮೇಟರಿ ಡಿಸೀಸ್‌, ಇದು ಗರ್ಭಕೋಶದ ಒಳಪದರದ ಸೋಂಕು. ಇದು ಗರ್ಭಕೋಶದ ಗೋಡೆ, ಫೆಲೋಪಿಯನ್‌ ನಾಳ, ಓವರಿ, ಗರ್ಭಕೋಶದ ಪದರ, ಪೆಲ್ವಿಕ್‌ ಗೋಡೆಯ ತೆಳು ಪದರಗಳಲ್ಲಿ ಸೋಂಕು ಉಂಟುಮಾಡುತ್ತದೆ. ಗೊನೊರಿಯಾ ಮತ್ತು ಚ್ಲಾಮಿಡಿಯಾ ಸೇರಿದಂತೆ ಅನೇಕ ಸೋಂಕುಕಾರಕ ವೈರಾಣುಗಳು ಇದಕ್ಕೆ ಕಾರಣವಾಗುತ್ತವೆ. ಬೇರೆ ಬಗೆಯ ಗರ್ಭನಿರೋಧಕಗಳನ್ನು ಬಳಸುವವರಿಗಿಂತ ಐಯುಡಿ ಬಳಸುವವರಲ್ಲಿ ಈ ಬಗೆಯ ಸೋಂಕಿನ ಸಾಧ್ಯತೆ ದುಪ್ಪಟ್ಟಿರುತ್ತದೆ.
  • ಐಯುಡಿ ಬಳಸುವ ಮಹಿಳೆಯರಲ್ಲಿ ಎಕ್ಟೊಪಿಕ್‌ ಗರ್ಭಧಾರಣೆಯ (ಗರ್ಭಾಶಯದ ಹೊರಗಿನ ಗರ್ಭಧಾರಣೆಯಾಗುವುದು) ಸಾಧ್ಯತೆ ಹೆಚ್ಚು (ಕಾಪರ್‌ ಐಯುಡಿ ಬಳಸುವ ಮಹಿಳೆಯರಲ್ಲಿ ಈ ಸಾಧ್ಯತೆ ಶೇ. ೩) ಈ ಬಗೆಯ ಗರ್ಭಧಾರಣೆಯ ಸಾಮಾನ್ಯವಾಗಿ ಫೆಲೋಪಿಯನ್‌ ನಾಳದಲ್ಲಿ ಸಂಭವಿಸುತ್ತದೆ. ಇದು ಅತ್ಯಂತ ಗಂಭೀರ ಸ್ವರೂಪದ ತೊಂದರೆ. ಇದು ರಕ್ತಸ್ರಾವ, ಸೋಂಕು ಬಂಜೆತನ ಮತ್ತು ಕೆಲವು ಬಾರಿ ಸಾವಿಗೂ (ತುರ್ತು ಚಿಕಿತ್ಸೆ ದೊರೆಯದೇ ಇದ್ದಾಗ) ಕಾರಣವಾಗಬಹುದು.
  • ಐಯುಡಿಯನ್ನು ಹಾಕಿಕೊಳ್ಳುವಾಗ ಎಲ್ಲ ಪೂರ್ವಪರಗಳನ್ನು ತಿಳಿದುಕೊಂಡು ತುಂಬ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು. ಮಗುವಾಗದೇ ಇದ್ದಾಗ ಐಯುಡಿಯನ್ನು ಹಾಕಿಸಿಕೊಳ್ಳದಿರುವುದು ಒಳಿತು. ಜನನಾಂಗದ ಸೋಂಕುಗಳನ್ನು ಹೊಂದಿರುವವರಿಗೆ, ಗರ್ಭಾಶಯದ ಹೊರಗೆ ಗರ್ಭಧಾರಣೆಯ ಇತಿಹಾಸ ಹೊಂದಿರುವವರಿಗೆ, ತುಂಬ ನೋವಿನ ಋತುಸ್ರಾವವನ್ನು ಹೊಂದಿರುವವರು ಅಥವಾ ರಕ್ತಹೀನತೆಯಿಂದ ಬಳಲುತ್ತಿರುವ ಸ್ತ್ರೀಯರು ಐಯುಡಿಯನ್ನು ಹಾಕಿಕೊಳ್ಳಬಾರದು.

ಬಹುತೇಕ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ  ಹೆರಿಗೆ ಅಥವಾ ಗರ್ಭಪಾವಾದ ತಕ್ಷಣ ಐಯುಡಿ ಹಾಕಿಕೊಳ್ಳಲು ಒತ್ತಾಯಿಸುತ್ತಾರೆ. ಇದು ತುಂಬ ಅಪಾಯಕಾರಿ. ನಾನ್‌ಸ್ಟಿರಾಯ್ಡಲ್‌ ಪಿಲ್‌ ಸೆಂಟೆಕ್ರೋಮನ್‌ಈ ಬಗೆಯ ಗುಳಿಗೆಗಳನ್ನು ಸಹೇಲಿ ಅಥವಾ ಚಾಯ್ಸ್‌೭ ಎಂಬ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾತ್ರೆಗಳು ಅಂಡಾಣುಗಳ ಬಿಡುಗಡೆಯಲ್ಲಿನ ಕಾಲವನ್ನು ಹೆಚ್ಚು ಮಾಡುತ್ತದೆ. ಅಂಡಾಣುವು ಫಲಿತವಾದ ನಂತರವೂ ಕೂಡ ಇವು ಕೆಲಸ ಮಾಡುತ್ತವೆ. ಸರ್ಕಾರ  ನಾನ್‌ ಸ್ಟಿರಾಯ್ಡಲ್‌ ಮಾತ್ರೆಗಳನ್ನು ಅತ್ಯಂತ ಸೂಕ್ತ ಗರ್ಭನಿರೋಧಕವೆಂದೇ ಹೇಳುತ್ತದೆ. ಆದರೆ ಇದು ಹಾರ್ಮೋನ್‌ ಆಧಾರಿತ ಮಾತ್ರೆಗಳಲ್ಲದಿದ್ದರೂ ಇದು ಮಹಿಳೆಯರ ದೇಹದಲ್ಲಿನ ಈಸ್ಟ್ರೋಜನ್‌ ಮತ್ತು ಪ್ರೊಜೆಸ್ಟಿರೋನ್‌ ಹಾರ್ಮೋನ್‌ಗಳ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಇದು ಅಂಡಾಶಯದಲ್ಲಿ ಸಿಸ್ಟ್ ಗಳಿಗೆ ಕಾರಣವಾಗಿವೆ.ಗರ್ಭಪಾತ ಗರ್ಭಪಾತ ಎಂದರೆ ಗರ್ಭವನ್ನು ಅವಧಿಯ ಮೊದಲೇ  ಗರ್ಭಾಶಯದಿಂದ ಹೊರದೂಡಿ ಕೊನೆಗೊಳಿಸುವುದು. ತನ್ನಿಂದ ತಾನೆ ಆಗುವ ಗರ್ಭಸ್ರಾವವು ನೈಸರ್ಗಿಕವಾಗಿ ಗರ್ಭ ಕೊನೆಗೊಳ್ಳುವುದೆ ಆಗಿದೆ. ಉತ್ತೇಜಿತ ಗರ್ಭಪಾತವನ್ನು ಮೆಡಿಕಲ್ ಟರ್ಮಿನೆಷನ್ ಅಫ್ ಪ್ರಗ್ನೆನಸಿ ಎನ್ನುವರು (MTP).  ನಿಯಂತ್ರಣ ಸಾಧನ ಉಪಯೋಗಿಸಿದರೂ, ಗರ್ಭವಾಗಬಹುದು, ಅತ್ಯಾಚಾರ, ಇನಸೆಸ್ಟ, ಬಲತ್ಕಾರದ ಫಲವಾಗಿರಬಹುದು. ಈ ಸಂದರ್ಭಗಳಲ್ಲಿ ಮಹಿಳೆಯು ಗರ್ಭಪಾತ ಬಯಸಬಹುದು. ಅನಾದಿ ಕಾಲದಿಂದಲೂ ಗರ್ಭಪಾತವು ಫಲವತ್ತತೆಯ ನಿಯಂತ್ರಣ ಸಾಧನವಾಗಿದೆ. ಹೊರಗಿನಿಂದ ಹೊಟ್ಟೆ ತಿಕ್ಕುವುದು, ಕಡು ಕಷ್ಟದ ಕೆಲಸ ಮಾಡುವುದು, ಗರ್ಭಾಶಯವನ್ನು ಚೂಪಾದ ವಸ್ತುವಿನಿಂದ ಹೆರೆಯುವುದು, ಗರ್ಭ ವಿರೋಧಿ ಗಿಡಮೂಲಿಕೆ ಸೇವಿಸುವುದು, ಅನಪೇಕ್ಷಿತ ಗರ್ಭವನ್ನು ನಿವಾರಿಸುವ ವಿಧಾನಗಳಾಗಿದ್ದವು.  ಅನೇಕ ಸಮಾಜಗಳಲ್ಲಿ ಕಠಿಣವಾದ ಧಾರ್ಮಿಕ ನಿಷೇಧ ವಿಧಿಸಲಾಗಿದೆ. ಏಕೆಂದರೆ ಇದು ಜೀವಾಪಹಾರಿ ಎನಿಸಿದೆ. ಈಗಲೂ ಅನೇಕ ದೇಶಗಳಲ್ಲಿ ಗರ್ಭಪಾತವು ಕಾನೂನು ಬಾಹಿರವಾದರೂ, ಮಹಿಳಾ ಸಂಘಟನೆಗಳು ಜಗತ್ತಿನಾದ್ಯಂತ ಸುರಕ್ಷಿತ, ಸುಲಭ ಸರಳ ಗರ್ಭಪಾತವು, ಕಾನೂನು ಪ್ರಕಾರ ತಮ್ಮ ಹಕ್ಕು ಎಂದು ಚಳುವಳಿ ಮಾಡುತ್ತಿವೆ. ಭಾರತದಲ್ಲಿ ಉತ್ತೇಜಿತ ಗರ್ಭಪಾತವನ್ನು   MTP  act 1972  ಪ್ರಕಾರ ಕಾನೂನು ಬದ್ದ ವಾಗಿದೆ. ಗರ್ಭಪಾತದ ಸಮಯದಲ್ಲಿ ಭ್ರೂಣ ಮತ್ತು ಮಾಸ ವನ್ನು ಸರವಿಕ್ಸ ಮೂಲಕ ಹೊರ ತೆಗೆಯುತ್ತಾರೆ. ಗರ್ಭದ ಅವಧಿಯನ್ನು ಆಧರಿಸಿ ವಿವಿಧ ಗರ್ಭಪಾತದ ವಿಧಾನಗಳನ್ನು ಬಳಸುತ್ತಾರೆ.

  • ಹೀರುವಿಕೆ: ೬-೮ ವಾರಗಳ ಬಸಿರಿದ್ದಾಗ ಈ ವಿಧಾನ ಸೂಕ್ತ,  ಸಾಮಾನ್ಯ ಅಥವಾ ಸ್ಥಳೀಯ ಅನೆಸ್ತಿಯಾ ನೀಡಿ ಗರ್ಭಕೊರಳಿನ ಮೂಲಕ ಹೀರುವಿಕೆಯ ಪಂಪ್‌ಗೆ ಸಂಪರ್ಕಿಸಲಾದ ಪೈಪ್‌ ಒಂದನ್ನು ಗರ್ಭಾಶಯದೊಳಕ್ಕೆ ತೂರಿಸಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಭ್ರೂಣದ ಅಂಗಾಂಶವು ಹೀರಲ್ಪಡುತ್ತದೆ. ಈ ವಿಧಾನದಲ್ಲಿ ಮಹಿಳೆಯು ಆಸ್ಪತ್ರೆಯಲ್ಲಿ ಉಳಿಯಬೇಕಾದ ಅಗತ್ಯವಿಲ್ಲ.
  • ಡಿ&ಸಿ (ಡಿಲೇಶನ್‌ ಮತ್ತು ಕ್ಯುರೆಟೇಜ್‌): ಈ ವಿಧಾನದಲ್ಲಿ ಸಾಮಾನ್ಯ ಅನೆಸ್ತೇಶಿಯಾವನ್ನು ನೀಡಿ ಸರ್ವೆಕ್ಸ್‌ (ಗರ್ಭಕೊರಳನ್ನು ತೆರೆದು) ಸಾಧನವೊಂದರಿಂದ ಗರ್ಭಾಶಯವನ್ನು ಹೆರೆದು ಶುಚಿ ಮಾಡಲಾಗುವುದು.
  1. ಬಲವಂತದ ಪ್ರಸವ:  ೧೬ ರಿಂದ ೨೦ ವಾರಗಳ ಬಸಿರಿನಲ್ಲಿ ಯುರಿಯ ಅಥವಾ ಪ್ರೊಸ್ಟಗ್ಲಾಡಿನ್‌ ದ್ರವವನ್ನು ಅಮ್ನಿಯೋಟಿಕ್‌ ಚೀಲದೊಳಕ್ಕೆ ಚುಚ್ಚುಮದ್ದಿನ ಮೂಲಕ ನೀಡಲಾಗುವುದು . ಇದರಿಂದ ಅವಧಿ ಪೂರ್ವ ಪ್ರಸವ ಉಂಟಾಗಿ ಭ್ರೂಣವು ಹೊರಬೀಳುತ್ತದೆ.  ಈ ವಿಧಾನವನ್ನು ಮಾಡುವಾಗ ಸ್ಥಳೀಯ ಅನೆಸ್ತೀಶಿಯಾ ನೀಡಲಾಗುತ್ತದೆ. ಮತ್ತು ಒಂದು ಅಥವಾ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಿ ಬರಬಹುದು.
  2. ಗರ್ಭಪಾತದ ಗುಳಿಗೆ : ವೈದ್ಯಕೀಯ ಗರ್ಭಪಾತವು ಮೆಫೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟಲ್‌ಗಳ ಸಮ್ಮಿಳತ ಬಳಕೆಯಿಂದ ವೈದ್ಯಕೀಯ ಗರ್ಭಪಾತ ಸಾಧ್ಯ. ಇತ್ತೀಚೆಗೆ ಭಾರತದಲ್ಲಿ ಇವುಗಳ ಬಳಕೆಯನ್ನು ಕಾನೂನು ಬದ್ಧಗೊಳಿಸಲಾಗಿದೆ. ಮೆಫೆಪ್ರಿಸ್ಟೋನ್ (RU 486 ಎಂದು ಕರೆಯಲಾಗುತ್ತದೆ) ಗರ್ಭಪಾತವನ್ನು ತಡೆಯುವ ಔಷಧ ಆದರೆ ಇದು ನಂಬಲರ್ಹವಲ್ಲ. ಹಾಗಾಗಿ ೨ ರಿಂದ ೩ ದಿನಗಳ ನಂತರ ಪ್ರೊಸ್ಟಗ್ಲಾಡಿನ (ಮಿಸೊಪ್ರೊಸ್ಟೊಲ್‌) ಅನ್ನು ನೀಡಲಾಗುತ್ತದೆ. ಈ ಮಾತ್ರೆಯು ಅನಿಯಂತ್ರಿತ ರಕ್ತಸ್ರಾವಕ್ಕೆ ಕಾರಣವಾಗುವ ಸಾಧ್ಯತೆಯಿರುವುದರಿಂದ, ಈ ಮಾತ್ರೆಗಳನ್ನು ವೈದ್ಯರ ನಿಗಾದಲ್ಲಿ ಮಾತ್ರ ಸೇವಿಸಬೇಕು. ಗರ್ಭಧಾರಣೆಯ ೬-೮ ವಾರಗಳಲ್ಲಿ ಮಾತ್ರ ಮೆಫೆಪ್ರಿಸ್ಟೋನ್ (RU 486 ಎಂದು ಕರೆಯಲಾಗುತ್ತದೆ) ಕೆಲಸ ಮಾಡುತ್ತದೆ. ಇದರಿಂದ ಅನಿಯಂತ್ರಿತ ವಾಂತಿ ಮತ್ತು ನಾಸಿಯ, ತೀವ್ರ ರಕ್ತ ಸ್ರಾವದಂತಹ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಪೂರ್ಣ ಗರ್ಭಸ್ರಾವವಾಗಲು ೧೨ ದಿನಗಳು ಬೇಕಾಗಬಹುದು. ಮಹಿಳೆಗೆ ಅಲ್ಲಿಯವರೆಗೆ ರಕ್ತ ಸ್ರಾವವಾಗುತ್ತಲೇ ಇರುತ್ತದೆ. ಮೆಫೆಪ್ರಿಸ್ಟೋನ್ (RU 486 ಎಂದು ಕರೆಯಲಾಗುತ್ತದೆ) ತೀರಾ ಎಳೆಯ ಬಸಿರಿದ್ದಾಗ ಮಾತ್ರ ಬಳಸುವುದರಿಂದ, ಒಂದುವೇಳೆ ಗರ್ಭಪಾತವಾಗದೇ ಇದ್ದರೆ ಅದರ ಭ್ರೂಣದ ಪರಿಣಾಮಗಳೇನು ಎಂಬ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ.

ಹಾರ್ಮೊನಲ್ ವಿಧಾನ :

ಹಾರ್ಮೊನಲ್ ವಿಧಾನವು ದೇಹದಲ್ಲಿನ ಹಾರ್ಮೊನುಗಳಾದ ಎಸ್ಟ್ರೋಜೆನ್ ಮತ್ತು ಪ್ರೊಜಸ್ಟರೋನ್ಗಳ ಮೇಲೆ ಪ್ರಭಾವ ಬೀರಿ ಅಂಡಾನಣು ಮತ್ತು ವೀಯಾಣುಗಳ ಉತ್ಪಾದನೆ ನಿಲ್ಲಿಸುತ್ತದೆ.ಅವು ಸರ್ವಿಕಲ್ ಲೋಳೆಯನ್ನು ಸಾಂದ್ರಗೊಳಿಸುವುದು. (ಅದು ವಿರ್ಯಾಣುವು ಗರ್ಭಾಶಯವನ್ನು ಪ್ರವೇಶಿಸದಂತೆ ಮಾಡುವುದು) ಕೆಲವುಸಲ ಗರ್ಭಾಶಯ ಮತ್ತು ಫೆಲೋಪಿಯನ್ ನಾಳಗಳಲ್ಲಿ ಅವು ಫಲಿತವಾಗದಂತೆ ಮಡುವುದು. ಹಾರ್ಮೊನಲ್ ವಿಧಾನವು ದೇಹದ ಹಾರ್ಮೊನಲ್ ಸೂಕ್ಷ್ಮ ಸಮತೋಲನವನ್ನು ಏರು ಪೇರು ಮಾಡುವುದು. ಇದರಿಂದ ಗಂಭೀರ ಪಾರ್ಶ್ವ ಪರಿಣಾಮ ಗಳಾಗಬಹುದು. ಸಂತಾನೋತ್ಪತ್ತಿ ಅಂಗಗಳು ಮಾತ್ರವಲ್ಲದೆ ದೇಹದ ಇತರ ಅಂಗಗಳ ಮೇಲೂ ಪರಿಣಾಮವಾಗಬಹುದು. ಅವು ಕ್ರಮಬದ್ದ ಬದಲಾವಣೆ ತರುತ್ತವೆ. ಹಾಗಿದ್ದರೂ ಸರಕಾರಿ ಸಂತಾನ ನಿಯಂತ್ರಣ ಸಾಧನಗಳ ಪೂರೈಕೆದಾರರು ಇವುಗಳನ್ನೆ ಆದರ್ಶ ವಿಧಾನಗಳೆಂದು ಪ್ರಚಾರ ಮಾಡುತ್ತಾರೆ. ಕಾರಣ ಅವು ಬಹು ಪರಿಣಾಮಕಾರಿ ಮತ್ತು ಸುಲಭವಾಗಿ ನೀಡಬಹುದು.

ಬಾಯಿಯ ಮೂಲಕ ತೆಗೆದುಕೊಳ್ಳುವ ಗರ್ಭನಿರೋಧಕಗಳು/:ಬಾಯಿಯ ಮೂಲಕ ಸೇವಿಸುವ ವಿವಿಧ ಗರ್ಭನಿರೋಧಕಗಳೆಂದರೆ

ಬಾಯಿಯ ಮೂಲಕ ತೆಗೆದುಕೊಳ್ಳುವ ಸಂಯುಕ್ತ ಗರ್ಭನಿರೋಧಕ ಗುಳಿಗೆಗಳು:ಸಂಯುಕ್ತ ಗರ್ಭನಿರೋಧಕ ಗುಳಿಗೆಗಳಲ್ಲಿ ವಿಭಿನ್ನ ಪ್ರಮಾಣದಲ್ಲಿ ಈಸ್ಟ್ರೋಜನ್‌ ಮತ್ತು ಪ್ರೊಜೆಸ್ಟಿರೋನ್‌ ಎಂಬ ಎರಡು ಹಾರ್ಮೋನುಗಳಿವೆ. ಈ ಗುಳಿಗೆಗಳು ಋತುಚಕ್ರದ ಮೊದಲ ಹಂತದಲ್ಲಿಯೇ ಈಸ್ಟ್ರೊಜನ್‌ನ ಪ್ರಮಾಣವನ್ನು ಹೆಚ್ಚಿಸಿ ಅಂಡಾಣುವಿನ ಅಭಿವೃದ್ಧಿಗೆ ತಡೆಯನ್ನೊಡ್ಡುವ ಮೂಲಕ ಗರ್ಭಧಾರಣೆಯನ್ನು ತಡೆಯುತ್ತವೆ. ಹೆಚ್ಚು ಡೋಸಿನ (Ovral) ಮಾತ್ರೆ ಗಳಿಗಿಂತ ಕಡಿಮೆ ಡೋಸಿನ ಗುಳಿಗೆಗಳಾದ (Mala-D) ಹೆಚ್ಚು ಸುರಕ್ಷಿತ. ಆದರೆ ಇದು ಎಲ್ಲ ಮಹಿಳೆಯರಿಗೂ ಸುರಕ್ಷಿತವಲ್ಲ. ಪ್ರೊಜೆಸ್ಟಿರೊನ್‌ ಓನ್ಲಿ ಮಾತ್ರೆಗಳು: : ಸಂಯುಕ್ತ ಹಾರ್ಮೋನ್‌ ಗುಳಿಗೆಗಳು ಅಂಡಾಣು ಉತ್ಪತ್ತಿಯನ್ನು ತಡೆದರೆ, ಈ ಗುಳಿಗೆಗಳು ಗರ್ಭಕೊರಳಿನ ಲೋಳೆಯನ್ನು ಹೆಚ್ಚಿಸಿ ಗರ್ಭಧಾರಣೆಯನ್ನು ತಡೆಯುತ್ತವೆ. ವೀರ್ಯಾಣು ಮತ್ತು ಅಂಡಾಣುವಿನ ಚಲನೆಯನ್ನು ಕಡಿಮೆ ಮಾಡುವದಲ್ಲದೆ ಗರ್ಭಪೊರೆಯ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಇದು ಅತ್ಯಂತ ಸಮರ್ಥವಾಗಿ ಕೆಲಸ ಮಾಡುತ್ತದೆ, ಸುಲಭವಾಗಿ ಬಳಸಬಹುದಾಗಿದೆ, ಲೈಂಗಿಕ ಕ್ರಿಯೆಗೆ ತಡೆಯನ್ನುಂಟು ಮಾಡುವುದಿಲ್ಲ, ಗರ್ಭಧರಿಸಬೇಕೆಂದಾಗ ಬಳಕೆಯನ್ನು ಬಿಟ್ಟರೆ ಆಯಿತು. ಆದರೆ ಇದರ ಬಳಕೆಯಿಂದ ಅನೇಕ ಬಗೆಯ ಅಡ್ಡ ಪರಿಣಾಮಗಳಿವೆ ಆ ಬಗ್ಗೆ ಮಾಹಿತಿ ಪಡೆಯಬೇಕಾದದ್ದು ಅಗತ್ಯ.

ಚುಚ್ಚುಮದ್ದಿನ ಮೂಲಕ ನೀಡುವ ಗರ್ಭನಿರೋಧಕಗಳು:ಡಿಪೊ ಪ್ರೊವೊರಾ (Depot Medroxyprogesterone Acetate) ಮತ್ತು ನೆಟ್‌ ಎನ್‌ ( Norethisterone Enanthate) ಪ್ರೊಜೆಸ್ಟಿರೋನ್ ಮಾತ್ರವಿರುವ ಗರ್ಭನಿರೋಧಕ ಚುಚ್ಚುಮದ್ದುಗಳು. ಡಿಪೊ ಪ್ರೊವೊರಾ ಚುಚ್ಚುಮದ್ದಿನ ಪರಿಣಾಮ ಮೂರು ತಿಂಗಳ ಕಾಲ ಇದ್ದರೆ, ನೆಟ್‌ ಎನ್‌ ಎರಡು ತಿಂಗಳ ಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಚುಚ್ಚುಮದ್ದಿನ ಮೂಲಕ ನೀಡುವ ಗರ್ಭನಿರೋಧಕಗಳು ಅತ್ಯಂತ ಅನುಕೂಲಕರವಾದರೂ, ಅದರ ಬಳಕೆಯಿಂದ ಕಡಿಮೆ ಕಾಲದ ಅಡ್ಡಪರಿಣಾಮಗಳು ಮತ್ತು ದೀರ್ಘಕಾಲೀನ ಆರೋಗ್ಯ ತೊಂದರೆಗಳು ಉಂಟಾಗುತ್ತವೆ. ಇವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀಡಲ್ಪಡುವುದರಿಂದ, ಅವುಗಳ ಅಡ್ಡಪರಿಣಾಮಗಳು ಸ್ವರೂಪವೂ ಕೂಡ ತುಂಬ ಗಂಭೀರವಾಗಿವೆ. ಹಾಗೆಯೇ ತಕ್ಷಣಕ್ಕೆ ಇದರ ಪರಿಣಾಮವನ್ನೂ ಹಿಂಪಡೆಯಲಾಗುವುದಿಲ್ಲ. ಎರಡು ಮೂರು ತಿಂಗಳಲ್ಲಿ ಅದರ ಪರಿಣಾಮವು ತನ್ನಷ್ಟಕ್ಕೆ ತಾನೇ ಕಡಿಮೆಯಾಗುವವರೆಗೆ ಮಹಿಳೆಯು ಕಾಯಬೇಕಷ್ಟೆ. ಸದ್ಯಕ್ಕೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿ ಈ ಚುಚ್ಚುಮದ್ದಿನ ಗರ್ಭನಿರೋಧಕಗಳನ್ನು ಬಳಸಲು ಪರವಾನಗಿ ನೀಡಿಲ್ಲ. ೧೯೯೪ರಲ್ಲಿ ಖಾಸಗಿ ವೈದ್ಯರ ಬಳಕೆಗಾಗಿ ಮತ್ತು ಎನ್‌ಜಿಒಗಳ ‘ಸಾಮಾಜಿಕ ಮಾರಾಟ’ಕ್ಕಾಗಿ ಮಾತ್ರ ನೊಂದಾಯಿಸಲಾಗಿತ್ತು.

ಪ್ರೊಜೊಸ್ಟೆರೋನ್‌ ಮಾತ್ರವಿರುವ ಚುಚ್ಚುಮದ್ದಿನ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಅಡ್ಡಪರಿಣಾಮಗಳು: :

  • ದೀರ್ಘಕಾಲೀನ ರಕ್ತಸ್ರಾವದ ಹನಿಯುವಿಕೆ ಇಲ್ಲವೇ ಅತಿಯಾದ ರಕ್ತಸ್ರಾವದಂತಹ ಋತುಚಕ್ರದ ತೊಂದರೆಗಳು
  • ರಕ್ತನಾಳಗಳು ದಪ್ಪವಾಗುವ ಅದಿರೊಕ್ಲೆರೊಸಿಸ್‌ ಕಾಯಿಲೆ ಮತ್ತು ಹೃದಯ ರೋಗಗಳು
  • . ತ್ರೊಂಬಿಯಾಂಬಾಲಿಸಂ-ಅನಿರೀಕ್ಷಿತ ಸ್ಥಳಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ, ಇದರಿಂದ ಹೃದಯ, ಶ್ವಾಸಕೋಶ ಮತ್ತು ಮೆದುಳುಗಳಿಗೆ ತೊಂದರೆಯುಂಟಾಗುತ್ತದೆ.
  • ಅಸ್ಥಿ ಬಿಧುರತೆ/ ಮೂಳೆ ಸವೆತ, ಫಲಿತವಾಗಿ ಮೂಳೆ ಮುರಿತದ ಸಾಧ್ಯತೆ
  • ತೂಕದ ಬದಲಾವಣೆ
  • ಇತರೆ ಮೆಟಬಾಲಿಕ್‌ ತೊಂದರೆಗಳು, ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿನ ಬದಲಾವಣೆಗಳು, ಖಿನ್ನತೆ, ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಮತ್ತು ಇತರೆ ಅಡ್ಡಪರಿಣಾಮಗಳು
  • ಗರ್ಭ ಫಲಿತಗೊಳ್ಳುವ ಕಾಲವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ (ಮಕ್ಕಳ ನಡುವಿನ ಅಂತರವನ್ನು ಕಾಪಾಡುವಲ್ಲಿರವ ಗಂಭೀರ ಲೋಪ)
  • ಕ್ಯಾನ್ಸರ್‌ ಅಪಾಯವಿದೆ
  • ಭ್ರೂಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ (ಅನಿರೀಕ್ಷಿತ ಗರ್ಭಧಾರಣೆಯ ಸಮಯದಲ್ಲಿ)

ತುರ್ತು ಸಂತಾನ ನಿಯಂತ್ರಣ ಮಾತ್ರೆಗಳು ಅಥವಾ ನಂತರದ ಬೆಳಗಿನ ಮಾತ್ರೆಗಳು: ಅಸುರಕ್ಷಿತ ಲೈಂಗಿಕ ಕ್ರಿಯೆಯ ತರುವಾಯ ನುಂಗುವ ತುರ್ತು ಮಾತ್ರೆಗಳು ಗರ್ಭವನ್ನು ತಡೆಗಟ್ಟುತ್ತವೆ. ಇವನ್ನು ನಂತರದ ಬೆಳಗಿನ-ಸಂಭೋಗದ ತರುವಾಯದ ಸಂತಾನ ನಿಯಂತ್ರಣ ಸಾಧನ ಎನ್ನುವರು. ಇದು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ , ಬಲತ್ಕಾರದಿಂದ ಸಂಭೋಗವಾದ ಸಮಯದಲ್ಲಿ ಉಪಯುಕ್ತ. ಕಾಂಡೋಮ ಹರಿದಾಗ, ಅಯೋಜಿತ ಲೈಂಗಿಕ ಕ್ರಿಯೆ ಅದಾಗ ಉಪಯೋಗ. ಇವನ್ನು ಘಟನೆಯಾದ ಮೂರು ದಿನ ಗಳ ಒಳಗೆ , ೭೨ ತಾಸಿನೊಳಗೆ ಸೇವಿಸಬೇಕು. ನಾಲಕ್ಕು ನಿಯಮಿತ ಡೋಜುಗಳು ಅಗತ್ಯ. ಮಾಲಾ-ಡಿ ಅಥವಾ ಮಾಲಾ-ಎನ್ ಗಳನ್ನು ತುರ್ತು ಸಾಧನಗಳಾಗಿ ತೆಗೆದುಕೊಳ್ಳ ಬಹುದು. ಲೆವನೊರ್ಗೆಸ್ಟ್ರಲ್ ಒಳಗೊಂಡ ಮುಂಜಾನೆಯ ಮಾತ್ರೆಯನ್ನು ಕುಟುಂಬ ನಿಯಂತ್ರಣ ಕಾರ್ಯಕ್ರಮದಲ್ಲಿ ಸೇರಿಸಿದ್ದಾರೆ. ಅಸುರಕ್ಷಿತ ಸೆಕ್ಸ ಆದ ನಾಲ್ಕು ದಿನದೊಳಗ ಎರಡು ಮಾತ್ರೆ ತೆಗೆದು ಕೊಂಡರೆ ಸಾಕು. ಇದಕ್ಕೆ ಪಾರ್ಶ್ವ ಪರಿಣಾಮಗಳಿವೆ. ವಾಂತಿ, ತಲೆ ಸುತ್ತುವುದು, ಮುಂದಿನ ಮಾಸಿಕಋತು ಚಕ್ರದ ಅಡಚಣೆ ಆಗಬಹುದು. ಇದು ಹೇಗೆ ಕೆಲಸ ಮಾಡುವುದು ಎಂಬುದರ ಪೂರ್ಣ ಮಾಹಿತಿ ಇಲ್ಲ. ಇದು ಅಂಡಾಣುವಿನ ಉತ್ಪಾದನೆ ತಡೆಗಟ್ಟುವುದು. ಆಗಿದ್ದರೆ ಫಲಿತವಾಗದಂತೆ ಮಾಡುವುದು ಎಂದು ಭಾವಿಸಲಾಗಿದೆ. ಆದರೆ ಇದು ೧೦೦% ಪರಿಣಾಮಕಾರಿ ಅಲ್ಲ. ಅಸುರಕ್ಷಿತ ಸಂಭೋಗವು ತಿಂಗಳ ಋತು ಚಕ್ರದ ೨ ಮತ್ತು ೩ನೇ ವಾರದಲ್ಲಿ ಆಗಿದ್ದರೆ ಗರ್ಭದ ಸಂಭವ ೮% ಇರುತ್ತದೆ. ತುರ್ತುಸಾಧನ ಉಪಯೋಗಿಸಿದರೆ ಅದು ೨% ಆಗುವುದು. ಅಲ್ಲದೆ ಇನ್ನೊಂದು ಎಚ್ಚರಿಕೆ ಅರಿತಿರಬೇಕು. ಈ ಸಾಧನವು ನಿರರ್ಥಕವಾದರೆ ಭ್ರೂಣಕ್ಕೆ ಹುಟ್ಟಿನಿಂದಲೇ ದೋಷವಿರುವ ಸಂಭವ ಇರಲಾರದು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದುದರಿಂದ ತುರ್ತು ಸಂತಾನ ನಿಯಂತ್ರಣ ಉಪಯೋಗಿಸಿದಾಗ ಸಾಕಷ್ಟು ಕಾನೂನಿನ ಮತ್ತು ಸುರಕ್ಷಿತ ಗರ್ಭಪಾತ ಸೇವೆಯ ಒತ್ತಾಸೆ ಇರಬೇಕು.

ಶಾಶ್ವತ ವಿಧಾನಗಳು :

  • ಗಂಡಸರ ಮತ್ತು ಹೆಂಗಸರ ಶಾಶ್ವತ ಸಂತಾನ ನಿಯಂತ್ರಣ ವಿಧಾನವು ವೀರ್ಯಾಣು/ ಅಂಡಾಣುಗಳನ್ನು ಸಾಗಿಸುವ ಕೊಳವೆಗಳನ್ನು ಶಾಶ್ವತವಾಗಿ ತಡೆಯುವುದಾಗಿದೆ. ಹೊಸ ವೈದ್ಯಕೀಯ ತಂತ್ರಗಳಿಂದ ಅವುಗಳನ್ನು ಪುನಃ ಸೇರಿಸಬಹುದಾಗಿದೆ. ಆದರೆ ಅದು ಯಾವಾಗಲೂ ಸಾಧ್ಯವಿಲ್ಲ ಮತ್ತು ಯಶಸ್ವಿಯೂ ಆಗುವುದಿಲ್ಲ. ಈ ವಿಧಾನವು ಪರಿಣಾಮಕಾರಿಯಾಗಿದೆ. ಯಾರು ತಮ್ಮ ಆಶೆಗೆ ತಕ್ಕ ಗಾತ್ರದ ಕುಟುಂಬ ಹೊಂದಿರುವರೋ ಮತ್ತು ಮುಂದೆ ಮಕ್ಕಳು ಬೇಕಿಲ್ಲ ಎನ್ನುವರೋ, ಅವರಿಗೆ ಇದು ಅತ್ಯುತ್ತಮ ವಿಧಾನ.
  • ವೆಸಕ್ಟಮಿ/ ಪುರುಷರ ಸ್ಟರಲೈಜೇಷನ್:
  • ವೆಸಕ್ಟಮಿಯು    ಶಸ್ತ್ರ ಕ್ರಿಯೆಯ ಮೂಲಕ  ಗಂಡಸರಿಗೆ ಸ್ಟರಲೈಜೇಷನ್ ಮಾಡುವ ವಿಧಾನ.  ಇದು ಗಂಡಸಿನ ವಾಸ ಡಿಫರೆನಸ ಅನ್ನು ತಡೆದು ವಿರ್ಯಾಣಗಳು ಶಿಶ್ನಕ್ಕೆ  ವೀರ್ಯ ದಲ್ಲಿ    ಹೋಗುವುದನ್ನು ತಡೆಯುತ್ತವೆ. ಗಂಡಸು ಸ್ಖಲನ ಹೊಂದುತ್ತಾನೆ. ಆತನ ಲೈಂಗಿಕ ಕ್ರಿಯೆ ಅಭಾದಿತ ವಾಗಿರುವುದು. ಸೂಕ್ತ ಮತ್ತು ಸೂಕ್ಷ್ಮ ಅಪ್ತ ಸಲಹೆಯಿಂದ ಅವನ ಗಂಡಸುತನ ಮತ್ತು ಲೈಂಗಿಕ ಕ್ರಿಯೆಯಲ್ಲಿನ ಕ್ಷಮತೆಯ ಬಗೆಗಿನ ಆತಂಕಗಳನ್ನು ನಿವಾರಿಸಬೇಕು. ಚಾಕುವಿಲ್ಲದೆ ವೆಸಕ್ಟಮಿಯಲ್ಲಿ ಚಿಕ್ಕ ರಂದ್ರ ಮಾಡಿ ವಾಸ ಡಿಫರೆನ್ಸನ್ನು ಗಂಟು ಹಾಕಿ, ಕತ್ತರಿಸಿ ಇಲ್ಲವೆ ಕ್ಲಿಪ್ ಹಾಕುವರು. ಬರಿ ಸ್ಥಳೀಯ ಅರವಳಿಕೆ ನೀಡುವರು.ವೆಸಕ್ಟಮಿಯು ಬಹು ಸರಳ ಮತ್ತು ಲಘುವಾದ ಶಸ್ತ್ರಕ್ರಿಯೆ. ಅವನು  ಈ ಕ್ರಿಯೆಯ ನಂತರ ೪೮ ಗಂಟೆ ವಿಶ್ರಾಂತಿ ಪಡೆಯಬೇಕು. ಒಂದು ವಾರ ಯಾವುದೇ ಭಾರವಾದ ವಸ್ತುವನ್ನು ಎತ್ತಬಾರದು. ಲೈಂಗಿಕ ಕ್ರಿಯೆಯನ್ನು ಅಸೌಕರ್ಯ ಇಲ್ಲದಿದ್ದರೆ ಮೊದಲು ಮಾಡಬಹುದು. ಆ ಸಮಯದಲ್ಲಿ ೨-೩ ತಿಂಗಳ ತನಕ ಬೇರೆ ಸಂತಾನ ನಿಯಂತ್ರಣ ಸಾಧನಗಳನ್ನು ಬಳಸಬೇಕು. ವೀರ್ಯಾಣುವು ೩ ತಿಂಗಳ ತನಕ ವೀರ್ಯ ಕೋಶದಲ್ಲಿ ಇರುವುದು. ಶಸ್ತ್ರಕ್ರಿಯೆಯ ನಂತರ ಹೆಚ್ಚು ರಕ್ತ ಸ್ರಾವ, ನೋವು, ಜ್ವರ, ಬಾವು ಕಂಡುಬಂದರೆ ವೈದ್ಯರನ್ನು  ತಕ್ಷಣ ಕಾಣಬೇಕು. ಗಂಡಸರ ಶಸ್ತ್ರ ಕ್ರಿಯೆ  ಸುಲಭ ಮತ್ತು ಸರಳ. ಅವರಿಗೆ ಅಂಗವು ಹೊರಗೆ  ಇದೆ. ಬೇರೆ ಅಂಗಗಳ ತೊಡಕು ಇಲ್ಲ. ಸಮಸ್ಯೆಯೇ  ಬರುವುದಿಲ್ಲ. ಇತ್ತೀಚಿನ ಅಧ್ಯಯನಗಳ ಪ್ರಕಾರ ವೆಸಕ್ಟಮಿಗೆ ಒಳಗಾದವರಿಗೆ ಪ್ರೋ ಸ್ಟ್ರೇಟ ಗ್ರಂಥಿಯ ಕ್ಯಾನ್ಸರ್ ಬರುವ ಸಂಭವ ತುಸು ಹೆಚ್ಚು ಎನ್ನುವರು. ಇನ್ನು ಯಾವುದೇ ದೂರಗಾಮಿ ಅಪಾಯಗಳು ಇಲ್ಲ.

    1. ಟುಬೆಕ್ಟಮಿ , ಮಹಿಳೆಯರ ಸ್ಟರ್ಲೈಜೇಷನ್.

    ಈ ವಿಧಾನದಲ್ಲಿ ಹೊಟ್ಟೆಯಲ್ಲಿ ಚಿಕ್ಕ ರಂದ್ರ ಮಾಡಿ ಅದರ ಮುಲಕ ಮಹಿಳೆಯ ಫೆಲೋಪಿಯನ್ ನಾಳ ಸೇರಿ ಅವನ್ನು ಅಲ್ಲಿಯೇ ಗಂಟು ಹಾಕುವರು ಇಲ್ಲವೆ ಕತ್ತರಿಸುವರು. ಇದನ್ನು ಸ್ಥಳಿಯ ಅರಿವಳಿಕೆ ನೀಡಿ ಮಾಡಲಾಗುವುದು.  ಇದು ಗರ್ಭಾಶಯದಲ್ಲಿ ಉತ್ಪತ್ತಿಯಾದ ಅಂಡಾಣುಗಳು ವಿರ್ಯಾಣುಗಳ ಜತೆ ಸೇರದಂತೆ ತಡೆಯುತ್ತವೆ. ಇದನ್ನು ಸರಿಯಾಗಿ ಮಾಡಿದರೆ ಈ ಕ್ರಿಯೆಯು ತುಂಬ ಪರಿಣಾಮಕಾರಿ.ಆದರೂ ಸಮಸ್ಯೆಗಳು ಬರುವ ಸಾಧ್ಯತೆ ಇದೆ  ಅಂತರ್ ರಕ್ತ ಸ್ರಾವ, ಸೋಂಕು, ಕರಳು ಮತ್ತು ಗರ್ಭಾಶಯದಲ್ಲಿ ರಂದ್ರ ಆಗಬಹುದು.ಇದರಿಂದ ಹೃದಯ ಸಮಸ್ಯೆ,  ನೋವಿನಿಂದಕೂಡಿದ ಅನಿಯಮಿತ ರಕ್ತಸ್ರಾವ,  ಋತುಸ್ರಾವ, ಪದೇ ಪದೇ ಡಿ $ ಸಿ ಮಾಡಿಸಿಕೊಳ್ಳಬೇಕಾದ ಅಗತ್ಯತೆ ಮತ್ತು ಹಿಸ್ಟರಿಕ್ಟೊಮಿಯ ಅಗತ್ಯ ಬೀಳಬಹುದು. ಇಂಥಹ ಸಮಯದಲ್ಲಿ ತಕ್ಷಣ ವೈದ್ಯರನ್ನು ಕಾಣ ಬೇಕು. ಸ್ಟರಲೈಜೇಷನ್ ಪೂರ್ವದಲ್ಲಿ ಮತ್ತು ಆಸಮಯದಲ್ಲಿ ಸೂಕ್ತ ಎಚ್ಚರಿಕೆ ವಹಿಸಬೇಕು. ಶಸ್ತ್ರ ಕ್ರಿಯೆಯನಂತರ ೪೮ ಗಂಟೆ ವಿಶ್ರಾಂತಿ ಪಡೆಯಬೇಕು. ದೈನಂದಿನ ಕೆಲಸಗಳನ್ನು ೨-೩ ದಿನಗಳ ನಂತರ ಮಾಡಬಹುದು. ಆದರೆ ಒಂದು ವಾರದ ತನಕ ಭಾರವಾರವಾದ ವಸ್ತುಗಳನ್ನು ಎತ್ತಬಾರದು. ಒಂದು ವಾರದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಟುಬೆಕ್ಟಮಿಯ ಆತಂಕಗಳು ಯಾವುದೆ ಜಠರದ ದೊಡ್ಡ ಶಸ್ತ್ರ ಚಿಕಿತ್ಸೆ, ಹೃದಯದ ಸಮಸ್ಯೆ, ಹೃದಯ ಸ್ಥಂಭನ, ಸೋಂಕು, ಅಂತರ್ ರಕ್ತ ಸ್ರಾವ ಮತ್ತು ಪ್ರಧಾನ ರಕ್ತ ನಾಳಗಳಲ್ಲಿನ ರಂದ್ರಗಳ ಚಿಕಿತ್ಸೆಯಂತೆಯೇ ಇರುತ್ತವೆ. ಸೂಕ್ತ ಎಚ್ಚರಿಕೆ ವಹಿಸದೆ ಟುಬೆಕ್ಟಮಿ ಮಾಡಿದರೆ ಈ ಆತಂಕಗಳು ಬಹುಪಾಲು ಹೆಚ್ಚಾಗಿರುವುದು. ಕುಟುಂಬ ನಿಯಂತ್ರಣ ಶಿಬಿರಗಳಲ್ಲಿ ಹೆಚ್ಚು ಸಂಖ್ಯೆಯ ಮಹಿಳೆಯರಿಗೆ ಮಾಡುವಾಗಲಂತು ಇದು ಬಹಳ ಇರುವುದು. ಸಂಚಾರಿ ಶಿಬಿರಗಳು ಇನ್ನೂ ಹೆಚ್ಚು ಸಮಸ್ಯಾತ್ಮಕ. ಏಕೆಂದರೆ ಅಲ್ಲಿ ಅನುಪಾಲನೆ ಮತ್ತು ಮೇಲುಸ್ತುವಾರಿ ಇರುವುದಿಲ್ಲ. ಲೆಪ್ರೋಸ್ಕೋಪಿಕ್ ತಂತ್ರಗಳಿಗೆ ಸಹ ನಿರ್ಧಿಷ್ಟ ಸಮಸ್ಯೆಗಳು ಎದುರಾಗುತ್ತವೆ. ಒಳಗಿನ ಅಂಗಾಂಗಳಿಗೆ ಸುಟ್ಟ ಗಾಯ, ಇತರ ಅಂಗಾಂಶಗಳಿಗೆ ತೂತಾಗುವುದು, ಚರ್ಮ ಸುಡುವುದು, ಕರುಳಿಗೆ ತೂತು, ಗರ್ಭಾಶಯದಲ್ಲಿ ರಂದ್ರ, ಕಾರ್ಬನ್ ಡೈ ಆಕ್ಸೈಡ್ ಎಂಬಾಲಿಸಮ್ (ಅದು ತಕ್ಷಣ ಮರಣಕ್ಕೆ ಕಾರಣವಾಗಬಹುದು).

    ಮೂಲ: ಪೋರ್ಟಲ್ ತಂಡ

    ಕೊನೆಯ ಮಾರ್ಪಾಟು : 4/4/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate