ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಪರಿಣಾಮಕಾರಿ ಯಶೋಗಾಥೆಗಳು / ಗೋಪಿನಾಥನೆಂಬ ಹಳ್ಳಿ ರೈತ ಏರ್ಲೈನ್ಸ್ ಕಟ್ಟಿದ ಅಂದ್ರೆ!
ಹಂಚಿಕೊಳ್ಳಿ

ಗೋಪಿನಾಥನೆಂಬ ಹಳ್ಳಿ ರೈತ ಏರ್ಲೈನ್ಸ್ ಕಟ್ಟಿದ ಅಂದ್ರೆ!

ಹಳ್ಳಿ ರೈತನಾಗಿ ವಿಮಾನಯಾನ ಕಂಪನಿ ಕಟ್ಟಿ ಜನಸಾಮಾನ್ಯರ ಕನಸು ಸಾಕಾರಗೊಳಿಸಿದ ಅಪ್ಪಟ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಚರಿತ್ರೆ 'ಬಾನಯಾನ' ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಅವರ ಆತ್ಮಚರಿತ್ರೆ Simply Flyಯನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ.

ಸುಮಾರು ಮೂರು ವರ್ಷಗಳ ಹಿಂದೆ ಏರ್ ಡೆಕ್ಕನ್ ಮುಖ್ಯಸ್ಥ ಕ್ಯಾಪ್ಟನ್ ಗೋಪಿನಾಥ್ ತಮ್ಮ ಆತ್ಮಕತೆ ಬರೆಯುತ್ತಿರುವ ಸಂಗತಿ ಗೊತ್ತಾದಾಗ ಕೆಲವು ಅಧ್ಯಾಯಗಳನ್ನು ಓದಲು ಕೊಟ್ಟಿದ್ದರು. ಅವರ ಹೆಲಿಕಾಪ್ಟರ್ ಹಾಗೂ ವಿಮಾನಗಳಲ್ಲಿ ಪಯಣಿಸಿದ್ದ ನನಗೆ ಅವರ ಬಗ್ಗೆ ತೀವ್ರ ಕುತೂಹಲವಿತ್ತು. ಒಬ್ಬ ಅಪ್ಪಟ ಕನ್ನಡಿಗ, ಹಳ್ಳಿಹೈದನೊಬ್ಬ ಆಕಾಶಕ್ಕೆ ನೆಗೆದ ಸಾಹಸ ಬೆರಗುಗೊಳಿಸಿತ್ತು. ಅವರ ಕುರಿತು ಆಗಲೇ ಕೆಲವು ಕತೆಗಳು, ದಂತಕತೆಗಳು, ಅಡಾಪಡಾ ಸುದ್ದಿ ಹಬ್ಬಿತ್ತು. ಕ್ಯಾಪ್ಟನ್ ಗೋಪಿನಾಥ್ ಆಗಲೇ ಸಿಲಬ್ರಿಟಿ' ಆಗಿದ್ದರು. ಅವರ ಅಗ್ಗದ ದರದ ವಿಮಾನಯಾನ ದೇಶಾದ್ಯಂತ ಜನಸಾಮಾನ್ಯನಲ್ಲೂ ರೋಮಾಂಚನ ಹುಟ್ಟಿಸಿತ್ತು. ನಮ್ಮ ಮನೆಯ ಕೆಲಸದ ಹೆಂಗಸು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ ಐನೂರು ರೂ. ತೆತ್ತು ಡೆಕ್ಕನ್ ವಿಮಾನದಲ್ಲಿ ಬಂದ ಕತೆಯನ್ನು ರಸವತ್ತಾಗಿ ನಾಲ್ಕೈದು ತಿಂಗಳವರೆಗೆ ಮನೆಗೆ ಬಂದವರ ಮುಂದೆಲ್ಲ ಹೇಳುತ್ತಿದ್ದಳು. ಅವಳ ಪಾಲಿಗೆ ಈ ಜನ್ಮದಲ್ಲಿ ಅಸಾಧ್ಯವೆನಿಸುವ ಕನಸೊಂದು ನನಸಾಗಿತ್ತು. ಇಂಥ ಸಹಸ್ರಾರು ಜನರ ಮನೋರಥ'ವನ್ನು ಕ್ಯಾಪ್ಟನ್ ಗೋಪಿನಾಥ್ ಆಕಾಶಕ್ಕೆ ಚಿಮ್ಮಿಸಿದ್ದರು. ಈ ದೇಶದ ಕಟ್ಟಕಡೆಯ ವ್ಯಕ್ತಿ ಕೂಡ ವಿಮಾನದಲ್ಲಿ ಪ್ರಯಾಣಿಸಬಹುದೆಂಬುದನ್ನು ಗೋಪಿನಾಥ್ ಸಾಧಿಸಿ ತೋರಿಸಿದ್ದರು. ವಿಮಾನ ಪ್ರಯಾಣವೆಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೆಂಬುದನ್ನು ಅವರು ಧಿಕ್ಕರಿಸಿ ಅದನ್ನು ಎಲ್ಲರಿಗೂ ಮುಕ್ತಗೊಳಿಸಿದ್ದರು. ಆ ಮೂಲಕ ಭಾರತದ ಆಕಾಶವನ್ನು ಸಮಸ್ತರಿಗೂ ತೆರೆದಿಟ್ಟಿದ್ದರು. ಕ್ಯಾಪ್ಟನ್ ಗೋಪಿನಾಥ್ ಹೀಗೆ ದೇಶದೆಲ್ಲೆಡೆ ಒಬ್ಬ ಅಸಾಮಾನ್ಯ ಸಾಧಕನಾಗಿ, ಹಲವಾರು ಸಾಧ್ಯತೆಗಳನ್ನು ಸಾಕಾರಗೊಳಿಸಿದ್ದರು. ಸಹಜವಾಗಿ ಅವರು ಸುದ್ದಿಯಲ್ಲಿದ್ದರು. ಅವರ ಏರ್‌ಲೈನ್ ಸಂಸ್ಥೆಗೆ ಡಾ. ವಿಜಯ ಮಲ್ಯ ಅವರ ಬಂಡವಾಳವನ್ನೂ ಆಹ್ವಾನಿಸಿದ್ದರಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಗೋಪಿನಾಥ್ ಸಂಚಲನವನ್ನುಂಟು ಮಾಡಿದ್ದರು. ಆ ಸಂದರ್ಭದಲ್ಲಿ ಗೋಪಿನಾಥ್ ಆತ್ಮಕಥನ SIMPLY FLY ಇನ್ನೂ ಪುಸ್ತಕವಾಗಿ ಹೊರಬಂದಿರಲಿಲ್ಲ. ಅವರು ಕೊಟ್ಟ ಹಸ್ತಪ್ರತಿಗಳನ್ನೆಲ್ಲ ಓದಲಾರಂಭಿಸಿದೆ. ಕ್ಯಾಪ್ಟನ್ ಹೆಲಿಕಾಪ್ಟರ್ ಹಾಗೂ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ ನಂತರದ ವಿದ್ಯಮಾನಗಳು ಚೂರುಪಾರು ಗೊತ್ತಿದ್ದರೂ, ಅದಕ್ಕಾಗಿ ಅವರು ಪಟ್ಟ ಪರಿಶ್ರಮ, ಅನುಭವಿಸಿದ ಕಷ್ಟ, ಹೋರಾಟ, ಕಾಲುಜಗ್ಗಾಟ, ಕಲಿತ ಪಾಠ, ಅಂದುಕೊಂಡಿದ್ದನ್ನು ಈಡೇರಿಸುವ ಹಠ, ಸಾಧಿಸುವ ಛಲ... ಗೊತ್ತಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಹೆಲಿಕಾಪ್ಟರ್, ಏರ್‌ಲೈನ್ಸ್ ಶುರುಮಾಡುವುದಕ್ಕಿಂತ ಮೊದಲಿನ ಅವರ ಬದುಕಿನ ಹೆಜ್ಜೆಗಳ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಸಾಮಾನ್ಯವಾಗಿ ನಮ್ಮವರೊಬ್ಬರು ಅಸಾಧ್ಯವೆನಿಸಿದ್ದನ್ನು ಸಾಧಿಸಿದಾಗ ಅವರ ಬಗ್ಗೆ ನಾವು ಇರುವುದಕ್ಕಿಂತ ತುಸು ಹೆಚ್ಚಿನದನ್ನೇ ಯೋಚಿಸುತ್ತೇವೆ ಹಾಗೂ ಹಾಗೇ ನಾಲ್ಕು ಜನರ ಮುಂದೆ ಹೇಳುತ್ತೇವೆ. ಅವರು ಹಾಗಿದ್ದರು, ಹೀಗಿದ್ದರು, ಇಪ್ಪತ್ತು ವರ್ಷಗಳ ಹಿಂದೆ ನೋಡಬೇಕಿತ್ತು ತೋಪ್ಡಾ ಆಗಿದ್ದರು, ಆಗ ನೋಡಿದ್ದರೆ ಏನು ಹೇಳುತ್ತಿದ್ದೆಯೋ... ಎಂದೆಲ್ಲ ನಮ್ಮ ಪರಿಚಯದವರ ಮುಂದೆ, ಸ್ವಲ್ಪ ಅತಿಯಾಗಿಯೇ ಬಣ್ಣಿಸುತ್ತೇವೆ. ಕ್ಯಾಪ್ಟನ್ ಗೋಪಿನಾಥ್ ಬಗ್ಗೆ ಸಹ ಇಂಥ ಕತೆಗಳು ಚಾಲ್ತಿಯಲ್ಲಿದ್ದವು. ಇವೆಲ್ಲ ವಾಸ್ತವಕ್ಕಿಂತ ಹೆಚ್ಚು ರಂಜಿತವಾಗಿರಬಹುದು, ಅತಿಶಯೋಕ್ತಿಯಿರಬಹುದು ಎಂದು ಒಳಮನಸ್ಸು ಹೇಳುತ್ತಿತ್ತು. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ಒಳ ಹಾಗೂ ಹೊರ ವ್ಯಕ್ತಿತ್ವದ ಹಾಗೆ ಕಲ್ಪಿತ ವ್ಯಕ್ತಿತ್ವವೂ ಇರುತ್ತದೆ. ಇದು ಸುಖಾಸುಮ್ಮನೆ ಅನಗತ್ಯ ಪ್ರಭಾವಳಿಯನ್ನು ನಿರ್ಮಿಸಿರುತ್ತದೆ. ಆದರೆ ಕ್ಯಾಪ್ಟನ್ ಗೋಪಿನಾಥ್ ಪುಸ್ತಕವನ್ನು ಓದಿದ ಬಳಿಕ ಅನಿಸಿದ್ದೇ ಬೇರೆ. ನಮಗೆ ಗೊತ್ತಿರುವುದಕ್ಕಿಂತ, ನಾವು ಭಾವಿಸಿರುವುದಕ್ಕಿಂತ ಅಥವಾ ತಿಳಿದುಕೊಂಡಿರುವುದಕ್ಕಿಂತ ಒಂದು ಕೈ ಜಾಸ್ತಿಯೇ ಇವರಿದ್ದಾರೆ ಎಂಬುದು. ಅಷ್ಟೇ ಅಲ್ಲ, ನಾವು ಇವರ ಬಗ್ಗೆ ತಿಳಿದುಕೊಂಡಿರುವುದು ಅತಿ ಕಡಿಮೆ. ಈ ಕೃತಿಯನ್ನು ಓದಿದ ಬಳಿಕ ಅದನ್ನು ಕನ್ನಡಕ್ಕೆ ಅನುವಾದಿಸಲೇಬೇಕೆಂದು ಅನಿಸಿತು. ಗೋಪಿನಾಥ್ ಕೂಡ ಸಮ್ಮತಿಸಿದರು. ಇಂಥದೊಂದು ಪುಸ್ತಕ ಕನ್ನಡದ ಹುಡುಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಯುವಕರಿಗೆ ತೀರಾ ಅಗತ್ಯವಿತ್ತು. ಹಳ್ಳಿಗಳಲ್ಲಿ ಹುಟ್ಟಿ, ಬೆಳೆದು, ಕನ್ನಡದಲ್ಲಿಯೇ ಓದಿದವರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದೆಂಬುದಕ್ಕೆ ಗೋಪಿನಾಥ್ ನಿದರ್ಶನ. ಈ ಪುಸ್ತಕ ಇನ್ನೊಂದು ದೃಷ್ಟಿಯಿಂದಲೂ ಬಹಳ ಮುಖ್ಯ ಎನಿಸಲು ಕಾರಣ, ಇದರ ಹೀರೊ ಕನ್ನಡಿಗ, ಅವರ ಭಾಷೆ ಕನ್ನಡ, ಅವರ ಸಾಧನೆಯ ಪರ್ವ ಶುರುವಾಗುವುದು ಕನ್ನಡದ ಮಣ್ಣಿನಲ್ಲಿ, ನಮ್ಮ ಮಧ್ಯದಲ್ಲಿಯೇ. ಆದರೆ ಅದರ ಫಲ ಸಿಗುವುದು ಇಡೀ ಮನುಕುಲಕ್ಕೆ. ಹೀಗಾಗಿ ಗೋಪಿನಾಥ್ ಆತ್ಮಕತೆಯೆಂದರೆ, ಕೇವಲ ಅವರದ್ದೊಂದೇ ಕತೆ ಅಲ್ಲ. ಅವರು ನಿಮಿತ್ತ ಮಾತ್ರ. ಹೀಗಾಗಿ ಇದು ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ. ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಅವರ ತಂದೆ ಕನ್ನಡ ಶಾಲೆಯ ಮೇಷ್ಟ್ರು. ಗೋಪಿನಾಥ್ ಕೂಡ ಅದೇ ಹಳ್ಳಿಯಲ್ಲಿ ಓದಿದರು. ಅಪ್ಪಟ ಗ್ರಾಮೀಣ ಪರಿಸರದಲ್ಲಿ ವಿದ್ಯಾರ್ಜನೆ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ. ಹೈಸ್ಕೂಲು ಶಿಕ್ಷಣ ವಿಜಾಪುರದ ಸೈನಿಕ ಶಾಲೆಯಲ್ಲಿ. ಆನಂತರ ಪುಣೆಯ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆದು ಭಾರತೀಯ ಸೇನೆಯನ್ನು ಸೇರಿದರು. ಅಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಮರಾಂಗಣದಲ್ಲಿ ನಿಂತು ಹೋರಾಡಿದರು. ಸೇನೆಯಲ್ಲಿನ ಇತಿ-ಮಿತಿಗಳನ್ನು ಅರಿತು, ತಮಗೆ ಅನಿಸಿದ್ದನ್ನು ಮಾಡುವ ವಿಶಾಲ ಅವಕಾಶ ಹೊರಜಗತ್ತಿನಲ್ಲಿ ತೆರೆದಿರುವುದನ್ನು ಗಮನಿಸಿ ಅದನ್ನು ಸಾಧಿಸಲು ಸೇನೆಗೆ ರಾಜೀನಾಮೆ ನೀಡಿ ಮನೆಗೆ ಬಂದುಬಿಟ್ಟರು.

ಆಗ ಕ್ಯಾಪ್ಟನ್ ಗೋಪಿನಾಥ್ ರಿಗೆ ಕೇವಲ 27 ವರ್ಷ. ಮುಂದೇನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಪಿತ್ರಾರ್ಜಿತ ಆಸ್ತಿಯೆಲ್ಲ ಗೊರೂರಿಗೆ ಸನಿಹದ ಹೇಮಾವತಿ ಅಣೆಕಟ್ಟೆ ನಿರ್ಮಾಣದ ಬಳಿಕ ಮುಳುಗಡೆಯಾಗಿತ್ತು. ಜಮೀನು ಕಳೆದುಕೊಂಡವರಿಗೆ ಸರಕಾರ ಪರಿಹಾರ ರೂಪದಲ್ಲಿ ಊರಿನಿಂದ ಬಹಳ ದೂರದಲ್ಲಿ ಭೂಮಿ ನೀಡಿತ್ತು. ಆದರೆ ಆ ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೆತ್ತಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಆಗ ತಾನೆ ಸೇನೆಯಿಂದ ಹಿಂದಿರುಗಿ ಬಂದ ಯೋಧನಿಗೆ ಊರ ಜನರೆಲ್ಲ ಸೇರಿ ಬುದ್ಧಿ ಹೇಳಿದರು. ಆದರೆ ಗೋಪಿನಾಥ್ ಕೇಳಲಿಲ್ಲ. ಅದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಸಹಾಯಕನೊಬ್ಬನನ್ನು ಜತೆಗೆ ಕರೆದುಕೊಂಡು ಅಲ್ಲಿಯೇ ಗುಡಿಸಲು ಕಟ್ಟಿಕೊಂಡು ವಾಸಿಸಲಾರಂಭಿಸಿದರು. ಮನುಷ್ಯ ಮಾತ್ರದವರು ಅಲ್ಲಿ ವಾಸಿಸಲು ಹೆದರುತ್ತಿದ್ದರೆ, ಅಲ್ಲಿ ತೋಟ ಮಾಡಲು ಗೋಪಿನಾಥ್ ನಿರ್ಧರಿಸಿದ್ದರು. ಗುಡಾರದ ಪುಟ್ಟ ಡೇರೆ ನಿರ್ಮಿಸಿ ಅದರೊಳಗೆ ವಾಸಿಸುತ್ತಾ, ಭೂಮಿಯಲ್ಲಿ ತೆಂಗಿನ ಸಸಿಗಳನ್ನು ನೆಡಲು ಶುರುಮಾಡಿದರು. ಸುತ್ತಮುತ್ತ ಕರೆಂಟು ಕೂಡ ಇರಲಿಲ್ಲ. ಸ್ವತಃ ಅವರೇ ಕೊಡದಲ್ಲಿ ನೀರು ಹೊತ್ತು ತೆಂಗಿನ ಸಸಿಗಳಿಗೆ ಸುರಿಯುತ್ತಿದ್ದರು. ಹೀಗೆ ನೆಟ್ಟಿದ್ದು ಒಂದೆರಡಲ್ಲ, ಸುಮಾರು ಸಾವಿರಕ್ಕೂ ಹೆಚ್ಚು ಸಸಿಗಳು. ತಾವೇ ಅಡುಗೆ ಮಾಡಿಕೊಂಡು, ದನ ಸಾಕಿಕೊಂಡು ಅಲ್ಲಿಯೇ ಕಠೋರ ತಪಸ್ವಿಯಂತೆ ಕೃಷಿ ಕಾರ್ಯದಲ್ಲಿ ತೊಡಗಿಬಿಟ್ಟರು. ಅವರಿಗೆ ಬಾಹ್ಯ ಪ್ರಪಂಚದ ಸಂಪರ್ಕವೇ ಕಡಿದುಹೋಗಿತ್ತು. ಅಷ್ಟೊಂದು ಗಾಢವಾಗಿ ಕೃಷಿಯಲ್ಲಿ ತನ್ಮಯರಾಗಿದ್ದರು. ಇದೇ ತೋಟದಲ್ಲಿ ರೇಷ್ಮೆ ಕೃಷಿಯನ್ನೂ ಆರಂಭಿಸಿದರು. ಈ ಮಧ್ಯೆ ಹಲವಾರು ಬೆಳೆಗಳನ್ನು ಹಾಕಿ ವಿಫಲರಾದರು. ಆದರೂ ಅವರು ಧೃತಿಗೆಡಲಿಲ್ಲ. ರೇಷ್ಮೆ ಸಾಕಾಣಿಕೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದರು. ರೇಷ್ಮೆ ಕೃಷಿ ಮಾಡುವಾಗ ಸಾಮಾನ್ಯವಾಗಿ ರೇಷ್ಮೆ ಹುಳುಗಳ ಆಹಾರಕ್ಕೆಂದು ಹಿಪ್ಪುನೇರಳೆ ಗಿಡಗಳನ್ನು ಬೆಳೆಯುತ್ತಾರೆ. ಇದಕ್ಕಾಗಿ ಎಲ್ಲರೂ ನೆಲವನ್ನು ಉಳುಮೆ ಮಾಡುತ್ತಾರೆ. ಆದರೆ ಗೋಪಿನಾಥ್ ಹಾಗೆ ಮಾಡಲಿಲ್ಲ. ಬದಲಿಗೆ ತಮ್ಮ ಜಮೀನನ್ನೆಲ್ಲ ಸೊಪ್ಪು ಸದೆಗಳಿಂದ ಮುಚ್ಚಿದರು. ರೇಷ್ಮೆಹುಳುಗಳನ್ನು ಕಾಪಾಡಲು ಸೋಂಕುನಾಶಕ ಔಷಧವನ್ನು ಬಳಸಲಿಲ್ಲ. ರೇಷ್ಮೆ ಹುಳುಗಳನ್ನು ಸಂರಕ್ಷಿಸಲು ಅವರೇ ಅನೇಕ ಗಾಂವಟಿ ವಿಧಾನಗಳನ್ನು ಶೋಧಿಸಿದರು. ಇವು ಕ್ರಾಂತಿಕಾರಕ ಕ್ರಮಗಳೇ ಆಗಿದ್ದವು. ಕೃಷಿಯಲ್ಲಿ ಅವರ ಆಸಕ್ತಿ, ತಾದಾತ್ಮ್ಯತನ ಹಾಗೂ ಹೊಸ ಪ್ರಯೋಗಗಳನ್ನು ಕಂಡು ರೊಲ್ಯಾಕ್ಸ್ ವಾಚ್ ಕಂಪನಿ ಅವರಿಗೆ ರೊಲ್ಯಾಕ್ಸ್ ಪ್ರಶಸ್ತಿ ನೀಡಿತು. ಅಷ್ಟೊತ್ತಿಗೆ ಅವರು ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲಿಯೇ ಅತ್ಯಂತ ಪ್ರಗತಿಪರ ಕೃಷಿಕ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದರು. ಕೇವಲ ಹತ್ತು ವರ್ಷಗಳಲ್ಲಿ ಅವರ ತೋಟ ಹಾಗೂ ಆಸುಪಾಸಿನ ದೃಶ್ಯಗಳೆಲ್ಲ ಪವಾಡಸದೃಶವಾಗಿ ಬದಲಾಗಿದ್ದವು. ರಾಜ್ಯದ ಬೇರೆ ಬೇರೆ ಊರುಗಳಿಂದ ಗೋಪಿನಾಥ್ ತೋಟ ನೋಡಲು, ಅವರ ಸಲಹೆ ಪಡೆಯಲು ಜನ ಆಗಮಿಸುತ್ತಿದ್ದರು. ಅವರು ಸಾಧಿಸಿದ ಪರಿಣತಿ ಅಂಥದ್ದು. ಒಮ್ಮೆ ತಮ್ಮ ಬೈಕು ಕೈಕೊಟ್ಟಾಗ ಅದನ್ನು ರಿಪೇರಿ ಮಾಡಿಸಲು ಹಾಸನಕ್ಕೆ ತೆಗೆದುಕೊಂಡು ಹೋದರು. ಆದರೆ ಮೆಕ್ಯಾನಿಕ್ ಆಟ ಆಡಿಸಿದ್ದರಿಂದ ಗೋಪಿನಾಥ್ ತೊಂದರೆ ಅನುಭವಿಸುವಂತಾಯಿತು. ಹಾಸನದಲ್ಲಿ ವಿಚಾರಿಸಿದಾಗ ಅಲ್ಲಿ ಯಾವುದೇ ಬೈಕ್ ಡೀಲರ್‌ಶಿಪ್ ಇಲ್ಲದಿರುವುದು ಗೊತ್ತಾಯಿತು. ತಾನೇಕೆ ಈ ಡೀಲರ್‌ಶಿಪ್ ತೆಗೆದುಕೊಳ್ಳಬಾರದೆಂದು ಅವರಿಗೆ ಅನಿಸಿತು. ಅಷ್ಟೊತ್ತಿಗೆ ತೋಟ ಒಂದು ಹಂತಕ್ಕೆ ಬಂದಿತ್ತು. ಅವರಿಗೆ ಇನ್ನಿತರ ಚಟುವಟಿಕೆ ಮಾಡಲು ತುಸು ಸಮಯ ಸಿಗುತ್ತಿತ್ತು. ಬೈಕ್ ಡೀಲರ್‌ಶಿಪ್ ತೆಗೆದುಕೊಂಡರೆ ಅದರಿಂದ ಲಾಭ ಮಾಡಬಹುದೆಂದು ಅನಿಸಿದ್ದರಿಂದ ಮದರಾಸಿಗೆ ಹೋಗಿ ಎನ್‌ಫೀಲ್ಡ್ ಬುಲೆಟ್ ಬೈಕ್ ಕಂಪನಿಯ ಡೀಲರ್‌ಶಿಪ್ ತೆಗೆದುಕೊಂಡರು. ಕೈಯಲ್ಲಿ ಹಣವಿರಲಿಲ್ಲ. ಹಾಗೂಹೀಗೂ ಹಣ ಹೊಂದಿಸಿಕೊಂಡು ಈ ದಂಧೆ ಆರಂಭಿಸಿದರು. ತೋಟ ಮಾಡಲು ಏಕಾಂಗಿಯಾಗಿ ಹೊರಟಾಗಲೂ ಕೈಯಲ್ಲಿ ಹಣವಿರಲಿಲ್ಲ. ಬ್ಯಾಂಕಿನವರು ಸಾಲ ಕೇಳಿದರೆ ದಮಡಿ ಬಿಚ್ಚಲಿಲ್ಲ. ಪಂಪ್‌ಸೆಟ್ ಖರೀದಿಗೆ ಕೆಲವೇ ಕೆಲವು ಸಾವಿರ ಕೊಡಿ ದಮ್ಮಯ್ಯ ಎಂದರೂ ಅವರ ಮನಸ್ಸು ಕರಗಲಿಲ್ಲ. ಆದರೆ ಗೋಪಿನಾಥ್ ಉತ್ಸಾಹವೂ ಕರಗಲಿಲ್ಲ. ತೆಂಗಿನ ಸಸಿಗಳಿಗೆ ನೀರು ಹಾಕಲು ಪಂಪ್ ಸೆಟ್ ಖರೀದಿಗೆ ಸಾಲ ಸಿಗದಿದ್ದಾಗ ನೀರನ್ನು ಎತ್ತಿಕೊಂಡು ಹೋಗುವುದಕ್ಕಾಗಿ ಗೋಪಿನಾಥ್ ಕತ್ತೆಗಳನ್ನು ಸಾಕಿದರು! ಬೈಕ್ ಡೀಲರ್‌ಶಿಪ್ ತೆಗೆದುಕೊಂಡ ಸಂದರ್ಭದಲ್ಲಿ ಪಕ್ಕದ ಕಟ್ಟಡ ಖಾಲಿ ಇತ್ತು. ಅಲ್ಲೊಂದು ಹೋಟೆಲನ್ನು ಏಕೆ ಆರಂಭಿಸಬಾರದೆಂದು ಸ್ವತಃ ಹೋಟೆಲಿಗರೂ ಆಗಿದ್ದ ಕಟ್ಟಡದ ಮಾಲೀಕರು ಹೇಳಿದರು. ಗೋಪಿನಾಥ್ ತಡಮಾಡಲಿಲ್ಲ. ಯಗಚಿ ಟಿಫಿನ್ಸ್' ಹೆಸರಿನಲ್ಲಿ ಹೋಟೆಲನ್ನು ಸ್ಥಾಪಿಸಿದರು. ಯಾವುದನ್ನೇ ಮಾಡಲಿ, ಅದರಲ್ಲಿ ಪಾಂಗಿತರಾಗಿ ಯಶಸ್ಸು ಗಳಿಸುವ ತನಕ ಅವರು ಸುಮ್ಮನಾಗುವವರಲ್ಲ. ಹೋದ ಪುಟ್ಟ ಬಂದ ಪುಟ್ಟ' ಎಂಬ ಮನೋಭಾವವಂತೂ ಇಲ್ಲವೇ ಇಲ್ಲ. ಕೈಗೆತ್ತಿಕೊಂಡ ಕೆಲಸ ಯಶಸ್ಸಾಗುತ್ತಿದ್ದಂತೆ, ಅದನ್ನು ಮುನ್ನಡೆಸಲು ಬಿಟ್ಟು ಹೊಸ ಸಾಹಸಕ್ಕೆ ಅಣಿಯಾಗುವುದು ಅವರ ಜಾಯಮಾನ. ಈ ಗುಣವೇ ಅವರಿಂದ ಹತ್ತಾರು ಸಾಹಸಗಳಿಗೆ ಅಣಿಯಾಗುವಂತೆ ಪ್ರೇರೇಪಿಸಿದೆ. ತೋಟ ಮಾಡಲು ಕೃಷಿಕರಾದ ಗೋಪಿನಾಥ್, ದನ ಕಟ್ಟಿದರು, ಡೇರಿ ಮಾಡಿದರು. ಕೋಳಿ ಫಾರ್ಮ್ ಶುರುಮಾಡಿದರು. ರೇಷ್ಮೆ ಸಾಕಿದರು. ತೆಂಗಿನ ಮಂಡಿ ಇಟ್ಟರು. ಬೈಕ್ ಡೀಲರ್ ಆದರು. ಸ್ಟಾಕ್ ಬ್ರೋಕರ್ ಆದರು, ನೀರಾವರಿ ಪಂಪ್‌ಸೆಟ್‌ಗಳ ಡೀಲರ್ ಆದರು. ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಿದರು. ಕೈತೋಟ ವಿನ್ಯಾಸಕಾರರಾದರು. ಕೃಷಿ ಸಲಹಾ ಕೇಂದ್ರ ತೆರೆದರು. ರೈತರಿಗೆ ಮಾರ್ಗದರ್ಶನ ನೀಡುವ ಸಂಸ್ಥೆ ತೆರೆದರು. ಹಾಸನದಲ್ಲಿ ಈ ಎಲ್ಲ ಕಾರ್ಯಗಳಿಂದ ಹೆಸರುವಾಸಿಯಾದಾಗ ಬಿಜೆಪಿ ಮುಖಂಡರು ರಾಜಕೀಯ ಸೇರುವಂತೆ ಒತ್ತಾಯಿಸಿದಾಗ ಆ ಪಕ್ಷದ ಹಾಸನ ಜಿಲ್ಲಾ ಅಧ್ಯಕ್ಷರಾದರು. ಗಂಡಸಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. (ಪ್ರಾಯಶಃ ಅವರು ಸೋಲು ಅಂತ ಕಂಡಿದ್ದೇನಾದರೂ ಇದ್ದರೆ ಅದು ರಾಜಕೀಯದಲ್ಲಿ ಮಾತ್ರ.) ಆನಂತರ ಬೆಂಗಳೂರಿಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿದ ಗೋಪಿನಾಥ್, ಡೆಕ್ಕನ್ ಹೆಲಿಕಾಪ್ಟರ್ ಸಂಸ್ಥೆಯನ್ನು ಸ್ಥಾಪಿಸಿದರು! ಇಲ್ಲಿ ಯಶಸ್ವಿಯಾದ ಬಳಿಕ ಏರ್ ಡೆಕ್ಕನ್' ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ ಅಲ್ಲಿಯೂ ಯಶಸ್ವಿಯಾದರು. ಪ್ರಗತಿಪರ ರೈತನೊಬ್ಬ ಹೆಲಿಕಾಪ್ಟರ್ ಸಂಸ್ಥೆ ಆರಂಭಿಸಿದ್ದೇ ಒಂದು ಅದ್ಭುತ ಸಾಹಸಗಾಥೆ. ಅದರಲ್ಲೂ ವಿಮಾನಯಾನ ಸಂಸ್ಥೆ ಸ್ಥಾಪಿಸಿದ್ದು ಭಾರತದ ವೈಮಾನಿಕ ಇತಿಹಾಸದಲ್ಲಿ ಒಂದು ಅಪೂರ್ವ ಮೈಲಿಗಲ್ಲು. ಹೆಲಿಕಾಪ್ಟರ್ ಹಾಗೂ ವಿಮಾನಯಾನ ಸಂಸ್ಥೆ ಆರಂಭಿಸುವಾಗ ನೂರಾರು, ಸಾವಿರಾರು ಕೋಟಿ ರೂ. ಬಂಡವಾಳ ಬೇಕು. ಆದರೆ ಸ್ವಂತ ವ್ಯಕ್ತಿತ್ವ ಹಾಗೂ ಛಲವನ್ನೇ ಬಂಡವಾಳವಾಗಿಸಿಕೊಂಡು ಅವರು ಬೆಳೆದ ಪರಿ ಎಂಥವರಿಗೂ ಮಾದರಿ. ಒಂದು ಕಾಲಕ್ಕೆ ಸರಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್‌ನ್ನೂ ಹಿಂದಕ್ಕೆ ಹಾಕಿ ಆಗಸದಲ್ಲಿ ಪ್ರಭುತ್ವ ಸಾಧಿಸುವಂಥ ಎತ್ತರಕ್ಕೆ ಬೆಳೆದಿದ್ದನ್ನು ಗಮನಿಸಿದರೆ ರೋಮಾಂಚನವಾಗುತ್ತದೆ. ಹೆಲಿಕಾಪ್ಟರ್ ಹಾಗೂ ಏರ್‌ಲೈನ್ಸ್ ವ್ಯವಹಾರದಲ್ಲಿ ಸ್ವಲ್ಪವೂ ಅನುಭವ ಹಾಗೂ ಜ್ಞಾನ ಇಲ್ಲದಿದ್ದರೂ ಕೇವಲ ಸಾಮಾನ್ಯಜ್ಞಾನ ಹಾಗೂ ಹಠ, ಜೀವನಪ್ರೀತಿಯಿಂದಲೇ ಅಸಾಧ್ಯವಾದುದನ್ನೂ ಸಾಧ್ಯವಾಗಿ ತೋರಿಸಿದ ಗೋಪಿನಾಥ್ ನಿಜಕ್ಕೂ ಕ್ಯಾಪ್ಟನ್! ಏರ್ ಡೆಕ್ಕನ್ ವಿಮಾನದಲ್ಲಿ ಒಂದು ರೂ.ಗೆ ಪ್ರಯಾಣಿಸಬಹುದೆಂಬುದನ್ನು ತೋರಿಸಿದಾಗ ಇಡೀ ವಿಶ್ವವೇ ಬೆರಗಾಗಿತ್ತು. ಇದಕ್ಕಿಂತ ಕಡಿಮೆ ಬೆಲೆಯ ಟಿಕೆಟ್ ವಿಶ್ವದಲ್ಲೇ ಇರಲಿಲ್ಲ. ಕೊನೆಗೆ ಏರ್‌ಡೆಕ್ಕನ್ ಅನ್ನು ಮಲ್ಯ ಅವರಿಗೆ ಒಪ್ಪಿಸಿದ ನಂತರ ಸಿಕ್ಕ ದೊಡ್ಡ ಮೊತ್ತವನ್ನು ಇಟ್ಟು ಕೊಂಡು ಗೋಪಿನಾಥ್ ಹಾಯಾಗಿರಬಹುದೆಂದು ಅಂದುಕೊಂಡರೆ ಆಗಲೇ ಮತ್ತೊಂದು ಸವಾಲನ್ನು ಮೈಮೇಲೆ ಎಳೆದುಕೊಂಡಿದ್ದರು. ಅದು ಡೆಕ್ಕನ್ 360! ವಿಮಾನದ ಮೂಲಕ ಪಾರ್ಸಲ್ ಸೇವೆ! ಒಬ್ಬನ ಜೀವನದಲ್ಲಿ ಎಷ್ಟೆಲ್ಲ ಘಟನೆಗಳು ನಡೆಯಬಹುದು ಹಾಗೂ ಅವನ್ನೆಲ್ಲ ಹೇಗೆ ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದೆಂಬುದಕ್ಕೆ ಕ್ಯಾಪ್ಟನ್ ಗೋಪಿನಾಥ್ ಕಣ್ಮುಂದಿನ ನಿದರ್ಶನ. ಅವರ ಬೃಹತ್ ಆತ್ಮಕತೆಯನ್ನು ಅನುವಾದಿಸಿ, ಕರಡು ತಿದ್ದಿ ಮುದ್ರಣಕ್ಕೆ ಕಳಿಸುವ ಹೊತ್ತಿಗೆ ನಾನು ಹೊಸ ವ್ಯಕ್ತಿಯಾಗಿದ್ದೆ. ನನ್ನ ಮೇಲೆ ನನಗೇ ಹೆಚ್ಚು ವಿಶ್ವಾಸ, ನಂಬಿಕೆ ಮೂಡಿತ್ತು. ಜೀವನಪ್ರೀತಿ ಹರಡಿಕೊಂಡಿತ್ತು. ಒಂದು ಪುಸ್ತಕದಿಂದ ಇನ್ನೇನನ್ನು ನಿರೀಕ್ಷಿಸಬಹುದು? ಅಂಥ ಅನುಭವ ನಿಮ್ಮದೂ ಆಗಲಿ.

-ವಿಶ್ವೇಶ್ವರ ಭಟ್

ಮೂಲ: ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಕಾಮ್

Back to top