অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗ್ಯಾಸೆಟಿಯರ್ ಇಲಾಖೆ

ಗ್ಯಾಸೆಟಿಯರ್ ಇಲಾಖೆ

ಗ್ಯಾಸೆಟಿಯರ್ ಎಂದರೆ ಸಾಮಾನ್ಯವಾಗಿ 'ರಾಜ್ಯಪತ್ರ' ಅಥವಾ 'ಗೆಸೆಟ್' ಎಂದು ತಪ್ಪಾಗಿ ಅಥವಾ ಅಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಪದಗಳು ಉತ್ತರ ಮತ್ತು ದಕ್ಷಿಣ ದೃವಗಳಿದ್ದಂತೆ. ಆಂಗ್ಲ ಭಾಷೆಯಲ್ಲಿ ಗೆಜೆಟ್ ಮತ್ತು ಗ್ಯಾಸೆಟಿಯರ್ ಪದಗಳು ಒಂದೇ ರೀತಿಯಲ್ಲಿ ಕಂಡುಬರುವಂತೆ ಪದಯೋಗವನ್ನು ಮಾಡಲಾಗುತ್ತದೆ. ಗ್ರೀಕ್ ಭಾಷೆಯಲ್ಲಿ 'ಗ್ಯಾಜ' ಎಂದರೆ 'ವಾರ್ತಗಳ ಖಜಾನೆ' ಎಂದರ್ಥದಲ್ಲಿ ಪ್ರಯೋಗವಾಗಿರುತ್ತದೆ. ಬೆಲೆ ಕಟ್ಟಲಾಗದ ಮಾಹಿತಿ ಸಂಪುಟಗಳೇ 'ಗ್ಯಾಸೆಟಿಯರ್' ಹಾಗೂ ಆಡಳಿತ ಪ್ರಭುತ್ವವನ್ನು ನಿರ್ವಹಿಸುವವರ ಆದೇಶಗಳು, ಆಜ್ಞೆಗಳು, ಸರಕಾರದ ನಡಾವಳಿಗಳು, ನಿರ್ಣಯಗಳು, ಪ್ರಕಟಗೊಳ್ಳುವ ಮಾಧ್ಯಮವಾಗಿರುವುದೇ 'ಗೆಜೆಟ್'. ಪೂರ್ವದಲ್ಲಿ ಪ್ರಮುಖವಾದ ಪ್ರದೇಶಗಳ ಮತ್ತು ವ್ಯಕ್ತಿಗಳ ಕುರಿತಂತೆ ಮಾರ್ಗದರ್ಶನ ಮಾಡುವ 'ಮಾರ್ಗದರ್ಶಿ' ರೂಪದಲ್ಲಿ ಅಥವಾ ಭೌಗೋಳಿಕ ನಿಘಂಟು ಅಥವಾ ಭೌಗೋಳಿಕ ಪರಿವಿಡಿಯ ಪ್ರಾಮುಖ್ಯತೆಯನ್ನು ಗ್ಯಾಸೆಟಿಯರ್ ಬಿಂಬಿಸುತ್ತಿತ್ತು. ಆದರೆ ಕಾಲ ಕಳೆದಂತೆ ಇದರ ವ್ಯಾಪ್ತಿಯು ಹಿಗ್ಗುತ್ತಾ ಹೋಗಿದೆ. ಒಂದು ಪ್ರಾಂತ್ಯದಲ್ಲಿನ ಜನಜೀವನದ ಅಥವಾ ದೇಶದ ಹಲವಾರು ಆಯಾಮಗಳ ವಾಸ್ತವವಾದ ಜ್ಞಾನದ ಸಮೃದ್ಧ ಭಂಡಾರವಾಗಿ ರೂಪುಗೊಂಡಿದೆ.

ಗ್ಯಾಸೆಟಿಯರ್ ಪುಸ್ತಕದ ಮೂಲಾಂಶಗಳ ಹೋಲಿಕೆಯನ್ನು ಪ್ರಾಚೀನ ಕಾಲದ ಕೆಲವು ಪುಸ್ತಕಗಳಲ್ಲಿ ಒಂದಾದ ಕ್ರಿ.ಶ 6ನೇ ಶತಮಾನದ "The work of stephen of Byzantium", "ವಿಲಿಯಮ್ ಎಂಬ ಜಯಶಾಲಿ" ಪುಸ್ತಕಕ್ಕೋಸ್ಕರ ವಿಷಯಗಳನ್ನು ಸಂಕಲನ ಮಾಡಿದ Doomsday ಪುಸ್ತಕ, ವರಾಹ ಮಿಹಿರನ ಬೃಹತ್ ಸಂಹಿತ, ವಾಯು ಪುರಾಣ, "ಅಬ್ದುಲ್ ಫಜಲ್ ಐನ್-ಇ-ಅಕ್ಬರೀ" ಎಂಬ ಪುಸ್ತಕಗಳಲ್ಲಿ ಕಾಣಬಹುದು. ಆದರೆ, ಕೈಗಾರಿಕಾ ಕ್ರಾಂತಿ ಹಾಗೂ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನದಿಂದಾಗಿ ಉಂಟಾದ ಹೊಸ ಪ್ರಜ್ಞಾಶಾಲಿಗಳಿಂದಾಗಿ ಯೂರೋಪಿನಲ್ಲಿ ಹೊಸ ಆಧುನಿಕ ಗ್ಯಾಸೆಟಿಯರ್ ವ್ಯವಸ್ಥೆಯು ಪ್ರಾರಂಭವಾಯಿತು. ಈ ನಿಟ್ಟಿನಲ್ಲಿ ಜರ್ಮನ್ ಮತ್ತು ಪ್ರಾನ್ಸ್ ದೇಶಗಳು ದಾರಿದೀಪಗಳಾದವು. ಭಾರತ ದೇಶದಲ್ಲಿ ತನ್ನ ಪ್ರಭುತ್ವವನ್ನು ಗಟ್ಟಿಗೊಳಿಸುವ ಸಲುವಾಗಿ ಮಿಲಿಟರಿ, ಕಂದಾಯ ಮತ್ತು ಅಂಕಿ-ಅಂಶಗಳ ಸರ್ವೆ ಕಾರ್ಯವನ್ನು ಭಾರತದಲ್ಲಿನ ನೆಲಸುನಾಡಿನ ಬ್ರಿಟೀಷ್ ಆಡಳಿತವು (Colonial British Administration) ಕೈಗೊಂಡಿತು. Edward Thornton ಮತ್ತು Walter Hamilton ಎಂಬ ಇಬ್ಬರು ಖಾಸಗಿ ಲೇಖಕರು 1815ರಲ್ಲಿ ಈಸ್ಟ್ ಇಂಡಿಯ ಗ್ಯಾಸೆಟಿಯರ್ ಮತ್ತು 1854ರಲ್ಲಿನ ಈಸ್ಟ್ ಇಂಡಿಯ ಕಂಪನಿ ಸರ್ಕಾರದ ಅಡಿಯಲ್ಲಿನ ಪ್ರಾದೇಶಿಕ ಗ್ಯಾಸೆಟಿಯರ್ ಎಂಬ ಎರಡು ಗ್ಯಾಸೆಟಿಯರ್ ಗಳನ್ನು ತಯಾರಿಸಿದರು. ಈ ಎರಡು ಗ್ಯಾಸೆಟಿಯರ್ ಗಳು ಭಾರತದಲ್ಲಿ ದೊರೆಯುವ ಅತಿ ಪುರಾತನ ಗ್ಯಾಸೆಟಿಯರ್ ಗಳಾಗಿವೆ. ಕೆಲವು ವರ್ಷಗಳ ನಂತರ ಅಂದರೆ 1866ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಮದ್ಯ ಪ್ರಾಂತ್ಯದ ಭಂಡಾರ (Bhandra) ಜಿಲ್ಲೆಯ ಗ್ಯಾಸೆಟಿಯರನ್ನು ರಿಚರ್ಡ್ ಟಿಂಪಲ್ ರವರು ಪ್ರಕಟಿಸಿದರು. ಇದು, ದೇಶದ ಹಲವಾರು ಭಾಗಗಳ ಗ್ಯಾಸೆಟಿಯರ್ ಸಂಪುಟಗಳನ್ನು ಹೊರತರಲು ಕಾರಣವಾಯಿತು.

ವೈಭವದಿಂದ ಕೂಡಿದ ಮೈಸೂರು ಮತ್ತು ಕೂರ್ಗ್ ರಾಜ್ಯಗಳಿಗೆ ಸಂಬಂಧಿಸಿದಂತೆ ಮೂರು ಸಂಪುಟಗಳ ಗ್ಯಾಸೆಟಿಯರ್ ಗಳನ್ನು 1877-78ರಲ್ಲಿ ಬಿ.ಎಲ್.ರೈಸ್ ಎಂಬುವರು ಪ್ರಕಟಿಸಿದರು. ಈ ಸಂಪುಟಗಳು ಗಮನಾರ್ಹವಾದ ಮಾಹಿತಿಯನ್ನು ಪ್ರಕಟಿಸಿದ್ದವು ಮತ್ತು ಮಾದರಿ ಸಂಪುಟಗಳಾಗಿವೆ. ಇಪ್ಪತ್ತು ವರ್ಷಗಳ ನಂತರ ಇವರು ಈ ಸಂಪುಟಗಳನ್ನು ಪರಿಷ್ಕರಿಸಿದರು. ಪ್ರಮುಖ ಸ್ಥಳಗಳು, ಜಿಲ್ಲೆಗಳ ಕುರಿತಂತೆ ವಿವರಗಳು, ಆಡಳಿತ, ಕಲೆ ಮತ್ತು ಕೈಗಾರಿಕೆ, ಭಾಷೆ, ಧರ್ಮ, ಚರಿತ್ರೆ, ಮಾನವ ಕುಲಗಳ ಶಾಸ್ತ್ರೀಯ ವಿವರಣೆ, ಸಸ್ಯವರ್ಗ ಮತ್ತು ಪ್ರಾಣಿವರ್ಗ, ಭೂ ವಿವರಣೆಯನ್ನೊಳಗೊಂಡ ಭೂಗೋಳ ಶಾಸ್ತ್ರ ಮುಂತಾದ ವಿಷಯಗಳನ್ನು ಭೂಪಟ ಮತ್ತು ಚಿತ್ರಗಳ ಮೂಲಕ ವಿವರಣೆಗಳನ್ನು ನೀಡಲಾಗಿತ್ತು. ಹತ್ತೊಂಬತ್ತನೇ ಶತಮಾನದ ಕೊನೆಯ ತ್ರೈಮಾಸಿಕದಲ್ಲಿ ಮತ್ತು ಇಪ್ಪತ್ತನೇ ಶತಮಾನದ ಮೊದಲ ದಶಕದ ಅವಧಿಯಲ್ಲಿ ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿನ ಜಿಲ್ಲೆಗಳ ಗ್ಯಾಸೆಟಿಯರ್ ಗಳನ್ನು ಹೊರತರಲಾಯಿತು. 1867ರಲ್ಲಿ ಆರ್ತರ್ ವೆಲ್ಲೆಸ್ಲಿರವರ ಮೈಸೂರು ಮತ್ತು ಕೂರ್ಗ್ ಗ್ಯಾಸೆಟಿಯರ್ ಗಳ ಸಂಪುಟ ಒಂದರಲ್ಲಿನ ಮುನ್ನುಡಿಯಲ್ಲಿ ಮೈಸೂರಿನ ಮೊದಲ ಗ್ಯಾಸೆಟಿಯರನ್ನು ಆರ್ತರ್ ವೆಲ್ಲೆಸ್ಲಿರವರು 1867ರಲ್ಲಿ ಸಂಕಲನ ಮಾಡಿದರೆಂದು ಮತ್ತು ನಂತರ ಕೆ.ಕೃಷ್ಣ ಅಯ್ಯಂಗಾರ್ ರವರು 1869ರಲ್ಲಿ ಕೋಲಾರ ಜಿಲ್ಲೆಯ ಗ್ಯಾಸೆಟಿಯರ್ ಕುರಿತಂತೆ ಸಂಕಲನ ಹಾಗೂ ಪರಿಷ್ಕರಣೆ ಮಾಡಿದರೆಂದು ಸ್ವತ: ಬಿ.ಎಲ್.ರೈಸ್ ರವರೇ ದಾಖಲಿಸಿದ್ದಾರೆ. ಈ ಕಾರ್ಯವು ಮುಂದಿನ ಸರಣಿಯ ಪ್ರಕಟಣೆಗಳಿಗೆ ಮಾರ್ಗದರ್ಶಕವಾಗಿದೆಯೆಂದು ಸಹ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಕುರಿತಂತೆ ಮೇಜರ್ ಸಿ.ಪಿಯರ್ಸ್, ಚಿತ್ರದುರ್ಗ ಜಿಲ್ಲೆಯ ಕುರಿತಂತೆ ಎಂ.ಕೃಷ್ಣರಾವ್, ಹಾಸನ ಜಿಲ್ಲೆಯ ಕುರಿತಂತೆ ಮೇಜರ್ ಡಬ್ಲ್ಯೂ.ಹಿಲ್ ಮತ್ತು ಶಿವಮೊಗ್ಗ ಜಿಲ್ಲೆಯ ಕುರಿತಂತೆ ಕ್ಯಾಪ್ಟನ್ ಗಾರ್ಡನ್ ಕುಮಿಂಗ್ ರವರುಗಳು ಸಂಕಲಿಸಿ ಸಂಪಾದಿಸಿದ್ದ ಗ್ಯಾಸೆಟಿಯರ್ ಗಳ ಹಸ್ತಪ್ರತಿಗಳು ಲಭ್ಯವಿದ್ದುದಾಗಿ ಹಾಗೂ ಹಸ್ತಪ್ರತಿಗಳನ್ನು ಮುದ್ರಿಸಿರುವುದಿಲ್ಲವೆಂದೂ ಸಹಾ ಮುನ್ನುಡಿಯಲ್ಲಿ ಆರ್ತರ್ ವೆಲ್ಲೆಸ್ಲಿರವರು ದಾಖಲಿಸಿದ್ದಾರೆ.

ಈ ಮಧ್ಯೆ, ಭಾರತ ಸಾಮ್ರಾಜ್ಯದ ಗ್ಯಾಸೆಟಿಯರ್ ನ ಮೊದಲ ಪ್ರಕಟಣೆಯಾಗಿ ಒಂಬತ್ತು ಸಂಪುಟಗಳನ್ನು 1881ರಲ್ಲಿ ಸರ್ ವಿಲಿಯಂ ಹಂಟರ್ ರವರ ನೇತೃತ್ವದಲ್ಲಿ ಪ್ರಕಟಿಸಲಾಯಿತು. 1885-87ರಲ್ಲಿ 14 ಸಂಪುಟಗಳನ್ನು, 1907-1909ರಲ್ಲಿ 26 ಸಂಪುಟಗಳನ್ನು (ಪ್ರಾಂತ್ಯವಾರು ಸರಣಿಗಳನ್ನು ಒಳಗೊಂಡ) ಸಹಾ ಹೊರತರಲಾಯಿತು. ಇದೇ ಮಾದರಿಯಲ್ಲಿ ಬಿ.ಎಲ್.ರೈಸ್ ರವರು ಮೈಸೂರಿಗೆ ಸಂಬಂಧಿಸಿದಂತೆ ಅತ್ಯುತ್ಕೃಷ್ಟವಾದ ಕಾರ್ಯವನ್ನು ಮಾಡಿದರು ಮತ್ತು ಈ ಕಾರ್ಯವನ್ನು ಬಂಗಾಲದಲ್ಲಿ ಎಸ್.ವಿಲಿಯಂ ಹಂಟರ್ ಅವರೇ ಈ ರೀತಿಯಾಗಿ ಕೆಲಸ ಮಾಡಿಲ್ಲವೆಂದು ಬಹಳವಾಗಿ ಶ್ಲಾಘಿಸಿರುತ್ತಾರೆ. ಶ್ರೀ ಹಯವದನ ರಾವ್ ರವರ-ಸಂಪಾದಕತ್ವದಡಿಯಲ್ಲಿ ಮೈಸೂರು ಗ್ಯಾಸೆಟಿಯರ್ ನ ಎಂಟು ಪುಸ್ತಕಗಳನ್ನು ಇಪ್ಪತ್ತನೇ ಶತಮಾನದ ಮೂರನೇ ದಶಕದ ಅವಧಿಯಲ್ಲಿ ಪ್ರಕಟಿಸಲಾಯಿತು. ಈ ಪ್ರಕಟಣೆಗಳು ಸಹ ಉತ್ಕೃಷ್ಟ ಮಟ್ಟದಲ್ಲಿದ್ದವು. ಆಮೇಲೆ, ದಕ್ಷಿಣ ಕೆನರ ಮತ್ತು ಬಳ್ಳಾರಿಗೆ ಸಂಬಂಧಿಸಿದಂತೆ ಪುರವಣೆಗಳನ್ನು ಹೊರತರಲಾಯಿತು.

ಬದಲಾದ ರಾಷ್ಟ್ರೀಯ ಅವಶ್ಯಕತೆಗಳನ್ನು ಒಂದುಗೂಡಿಸುವ ಸಲುವಾಗಿ "ಹೊಸ ಭಾರತ ಗ್ಯಾಸೆಟಿಯರ್" ಮಾಲಿಕೆಯಲ್ಲಿ ಜಿಲ್ಲಾ ಗ್ಯಾಸೆಟಿಯರ್ ಗಳನ್ನು ತಯಾರಿಸುವುದು ಮತ್ತು ಪ್ರಕಟಿಸುವುದು ಮಹತ್ತಾದ ಅವಶ್ಯಕತೆಯಾಗಿತ್ತು. ಈ ಕಾರ್ಯವನ್ನು 1949 ಮತ್ತು 1957ರ ಮಧ್ಯದಲ್ಲಿ ರಾಜಸ್ಥಾನ, ಬಿಹಾರ್, ಅಂದಿನ ಬಾಂಬೆ ಮತ್ತು ಮದ್ರಾಸ್ ರಾಜ್ಯಗಳು ಕೈಗೊಂಡಿರುತ್ತವೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ನಂತರ ಈ ಕಾರ್ಯವನ್ನು ವಿಶೇಷ ಹಾಗೂ ಸ್ಥಳೀಯ ಅವಶ್ಯಕತೆಗಳನ್ನು ಹೊಂದಿಸಲು ಅವಕಾಶ ನೀಡುತ್ತಾ ಕೇಂದ್ರ ಸರ್ಕಾ‍ರದ ಮಾರ್ಗದರ್ಶನದಲ್ಲಿ ಒಂದೇ ತರಹದ ರೂಪ ಮತ್ತು ಅಂಶಗಳನ್ನೊಳಗೊಂಡಂತೆ ಹೊಸ ಜ್ಞಾನದ ಆಧಾರದ ಮೇಲೆ ಪುನರ್ ರೂಪಿಸಿದ ಜಿಲ್ಲಾ ಗ್ಯಾಸೆಟಿಯರ್ ಪ್ರಕಟಣೆ ಯೋಜನೆಯನ್ನು ಕೈಗೊಂಡಿರುತ್ತವೆ.

ಈ ಕಾರ್ಯವು ವಿಸ್ತಾರವಾದ ಅಪರಿಮಿತ ಕ್ಲಿಷ್ಟತೆಯನ್ನು ಹೊಂದಿರುವ ಲಿಖಿತ ದಾಖಲೆಯಾಗಿದೆ ಮತ್ತು ಕೂಲಂಕುಷವಾಗಿ ಎಚ್ಚರಿಕೆಯಿಂದ, ತಾಳ್ಮೆಯಿಂದ ಕಷ್ಟಪಟ್ಟು ಕಾರ್ಯ ನಿರ್ವಹಿಸಬೇಕಾಗಿತ್ತು. ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸುಮಾರು 125 ಪುರ್ನವಿಂಗಡಿಸಿದ ಜಿಲ್ಲೆಗಳ ಗ್ಯಾಸೆಟಿಯರ್ ಗಳನ್ನು ಪ್ರಕಟಿಸಿದವು. ಈ ಪೈಕಿ 1973-74ರ ಅಂತ್ಯಕ್ಕೆ 12 ಗ್ಯಾಸೆಟಿಯರ್ ಗಳು ಕರ್ನಾಟಕಕ್ಕೆ ಸೇರಿದವುಗಳಾಗಿರುತ್ತವೆ. ಜಿಲ್ಲಾ ಸಂಚಿಕೆಗಳ ಜೊತೆಗೆ ಪ್ರತಿ ರಾಜ್ಯಕ್ಕೆ ಒಂದರಂತೆ ಪ್ರತಿ ರಾಜ್ಯದ ಗ್ಯಾಸೆಟಿಯರ್ ಸಹಾ ಇದೆ. ಆರ್ಥಿಕ ನೆರವಿನೊಂದಿಗೆ ಕೇಂದ್ರ ಸರ್ಕಾರವು ಈ ಕಾರ್ಯವನ್ನು ಸಮನ್ವಯಗೊಳಿಸಿರುತ್ತದೆ. ಅಧಿಕಾರೇತರ ಸದಸ್ಯರು ಮತ್ತು ಅಧಿಕಾರಿಗಳನ್ನೊಳಗೊಂಡಂತೆ ರಚಿಸಲಾಗಿರುವ ರಾಜ್ಯ ಹಾಗೂ ಕೇಂದ್ರ ಗ್ಯಾಸೆಟಿಯರ್ ಸಲಹಾ ಸಮಿತಿಗಳಿವೆ. ಪ್ರತಿ ಜಿಲ್ಲಾ ಗ್ಯಾಸೆಟಿಯರ್ ನಲ್ಲಿ ಒಟ್ಟು 17 ಅಧ್ಯಾಯಗಳಿದ್ದು ಇದರ ಜೊತೆಯಲ್ಲಿ ಸಾಮಾನ್ಯ ಅನುಬಂಧಗಳು, ರೇಖಾ ಚಿತ್ರಗಳಿಂದ ಕೂಡಿದ ವರ್ಣನೆ, ಆಯ್ದ ಗ್ರಂಥ ವಿವರಣಾ ಪಟ್ಟಿ, ಸಮಗ್ರ ವರ್ಣಮಾಲೆ ಅನುಸಾರ ವಿಷಯಸೂಚಿ, ಜೊತೆಗೆ ಸೇರಿಸಬೇಕಾದ ಪಟ್ಟಿ, ತಿದ್ದೋಲೆಗಳು ಮತ್ತು ನಕಾಶೆಗಳನ್ನು ಸಹಾ ಒದಗಿಸಲಾಗಿರುತ್ತದೆ.

ಜಿಲ್ಲಾ ಗ್ಯಾಸೆಟಿಯರ್ ಸರಣಿಗಳಲ್ಲಿ ಪ್ರಮುಖವಾಗಿ ನಿರೂಪಿಸಿರುವ ವಿಷಯಗಳು ಯಾವುವೆಂದರೆ ಭೌಗೋಳಿಕ ಲಕ್ಷಣಗಳು, ಪ್ರಾಣಿ ಮತ್ತು ಸಸ್ಯವರ್ಗ, ನೈಸರ್ಗಿಕ ಸಂಪನ್ಮೂಲಗಳು, ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ, ಜನರು, ವಂಶಪಾರಂಪರ್ಯ ಜನಾಂಗ ಸ್ಥಿತಿ ವಿವರಣೆ, ಭಾಷೆಗಳು, ಕುಟುಂಬ-ಜೀವನ, ಸಾಮಾಜಿಕ ಜೀವನ, ಸಾಮಾಜಿಕ ರಚನೆ, ಆಚಾರ-ವಿಚಾರಗಳು, ಧಾರ್ಮಿಕ ನಂಬಿಕೆಗಳು, ಕೃಷಿ, ತೋಟಗಾರಿಕೆ, ಅರಣ್ಯ, ನೀರಾವರಿ, ಪಶುಸಂಗೋಪನೆ, ಮೀನುಗಾರಿಕೆ, ಹಿಂದಿನ ಮತ್ತು ಪ್ರಸ್ತುತ ಕೈಗಾರಿಕೆಗಳು, ಕಾರ್ಮಿಕ ಕಲ್ಯಾಣ ಅಭಿವೃದ್ಧಿಯ ಸಾಮರ್ಥ್ಯಗಳು, ಬ್ಯಾಂಕ್ ಮತ್ತು ಹಣಕಾಸು, ಸಹಕಾರ ಚಳುವಳಿ, ವ್ಯಾಪಾರ ಮತ್ತು ವಾಣಿಜ್ಯ, ಸಾರಿಗೆ ಮತ್ತು ಸಂವಹನ, ನಾನಾ ಪ್ರಕಾರದ ಉದ್ಯೋಗಗಳು, ಆರ್ಥಿ‍ಕ ಪ್ರವೃತ್ತಿ, ಸಾಮಾನ್ಯ ಆಡಳಿತ , ಕಂದಾಯ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ನ್ಯಾಯ, ಸರ್ಕಾರಿ ಕಛೇರಿಗಳು, ಸ್ಥಳೀಯ ಸ್ವಯಂ ಸರ್ಕಾರ, ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ಇತರೆ ಸಾಮಾಜಿಕ ಸೇವೆಗಳು, ಸಾರ್ವಜನಿಕ ಜೀವನ ಮತ್ತು ಸ್ವಯಂ-ಸಾಮಾಜಿಕ ಸೇವೆಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು. ಜಿಲ್ಲೆಯ ಪ್ರತಿಯೊಂದು ಆಗು-ಹೋಗುಗಳನ್ನು ಬಿಡದೆ ಸಂಕ್ಷಿಪ್ತವಾಗಿ ದಾಖಲಿಸಲಾಗುವುದು.

ಉದಾಹರಣೆಗೆ "ಟೋಪೋನಮಿ" (ಸ್ಥಳನಾಮ ಅಧ್ಯಯನ), Aigur ಮುಖ್ಯಸ್ಥರು ಅಥವಾ ಬಾಲಂ, ಚೌತಾಸ್, ಕಂಪ್ಲಿ ರಾಯಣ್ಣಂದಿರು ಮುಂತಾದ ಬೆಳಕಿಗೆ ಬರದಿರುವ ವಂಶಸ್ಥರ ಆಳ್ವಿಕೆ, ಅಗ್ರೇರಿಯನ್ ಚಳುವಳಿ (ಭೂಸ್ವತ್ತಿಗೆ ಸಂಬಂಧಪಟ್ಟ), ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಅಳಿಯ ಸಂತಾನ ವ್ಯವಸ್ಥೆ ಮತ್ತು ಈ ವ್ಯವಸ್ಥೆಯು ಕೇರಳದಲ್ಲಿರುವ 'ಮರುಮಕ್ಕಾಟ್ಟಾಯಂ" ವ್ಯವಸ್ಥೆಯಿಂದ ಯಾವ ರೀತಿ ಬಿನ್ನವಾಗಿದೆ?, ದೊಡ್ಡಗಡ್ಡವಳ್ಳಿಯಲ್ಲಿನ ಲಕ್ಷ್ಮೀದೇವಿ ದೇವಸ್ಥಾನದ ವೈಭವ, ಅರುಗುಪ್ಪೆಯ ಕಲ್ಲೇಶ್ವರ ದೇವಸ್ಥಾನ, ಕುರುವಟ್ಟಿಯಲ್ಲಿನ ಮದನಿಕೆಯ ಚಿತ್ರ, ಬಿಜಾಪುರದಲ್ಲಿರುವ ಇಬ್ರಾಹಿಂ-ರೋಜ, ಮಂಗಳೂರಿನ ಬಿಷಪ್ಪರ ಆಧಿಕಾರ ಪ್ರಾಂತದಲ್ಲಿನ ಪುರಾತನ ಪೀಠವಿರುವ ಮುಖ್ಯ ಆರಾಧನಾ ಮಂದಿರ, ಈಶಾನ್ಯ ಜಿಲ್ಲೆಗಳಲ್ಲಿ ಪದೇ ಪದೇ ಕಾಣಿಸುವ ಬರಗಾಲದ ತೊಂದರೆಗಳು, ಬೃಹದಾಕಾರದ ತುಂಗಭದ್ರ ಯೋಜನೆಯ ಪ್ರಯೋಜನಗಳ ಪರಿಣಾಮ, ವಿಜಯನಗರ ಉಕ್ಕಿನ ಕಾರ್ಖಾನೆಯ ಮತ್ತು ಕಾಳಿನದಿ ಜಲವಿದ್ಯುತಾಗಾರ ಯೋಜನೆಗಳ ಪ್ರತೀಕ್ಷೆ, ಆಹಾರ ಪದ್ಧತಿ, ವಿವಿಧ ವಾಸಸ್ಥಾನಗಳು, ಒಡವೆ, ಸ್ಥಳೀಯ ಹಬ್ಬಗಳು, ಒಂದು ಗುಂಪಿನ ಮದುವೆ ಆಚಾರ ಹಾಗೂ ಸಮಾರಂಭಗಳು, "ಮಂತ್ರ-ಮಾಂಗಲ್ಯ" ವೆಂಬ ಮದುವೆ ಪದ್ಧತಿ, ಹುತ್ತರಿ ನೃತ್ಯ, ಕಾವೇರಿಯ ಕೊಡವ ಸಮುದಾಯದ ವಿಶಿಷ್ಟ ಸಾಮಾಜಿಕ ಆಚರಣೆಗಳು, ಆಗುಂಬೆಯ ರಮಣೀಯ ಸೂರ್ಯಾಸ್ತ, ಮಂಡಗದ್ದೆಯ ಸ್ವಾಭಾವಿಕ ಪಕ್ಷಿಧಾಮ, ಶ್ರೀಗಂಧದ ಕೆತ್ತನೆಗಳು, ಆಕರ್ಷಕ ಸ್ಥಳಗಳು, ಮಲೆನಾಡಿನ ಮಾವಿನ ಉಪ್ಪಿನಕಾಯಿ ಮತ್ತು ಪೈನಾಪಲ್ ಬೇಸಾಯ, 'ಮುಷಿ' ಎಂದು ಸ್ಥಳೀಯವಾಗಿ ಕರೆಯುವ ಸಾಗರ ತಾಲೂಕಿನ ಕಾಡುಗಳಲ್ಲಿರುವ ದೊಡ್ಡಗಾತ್ರದ ಕಪ್ಪು ಕೋತಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಎಮ್ಮೆಗಳ ಓಟದ ಸ್ಪರ್ಧೆ ಹಾಗೂ ಭೂತ ಕುಣಿತ, ಇತ್ಯಾದಿ ವೈವಿಧ್ಯತೆಗಳುಳ್ಳ ವಿಷಯಗಳನ್ನು ಒಂದು ಪ್ರಾಂತದ ಜನಜೀವನದ ಸಂಪೂರ್ಣ ಚಿತ್ರಣವನ್ನು ಪಡೆಯಲು ಸೇರಿಸಲೇಬೇಕು. ಕಾರಣ ಸರಿಯಾದ ಪರಸ್ಪರ ಸಂಬಂಧದಿಂದ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹಿಂದಿನ ಕರಾರುವಕ್ಕಾದ ಜ್ಞಾನದ ಅವಶ್ಯಕತೆ ಇರುವುದರಿಂದ, ನೈಸರ್ಗಿ‍ಕ ಸಂಪನ್ಮೂಲ ಹಾಗೂ ಇತರೆ ಸಂಪನ್ಮೂಲಗಳೊಂದಿಗೆ ಜೀವಿಸಿದ ಮತ್ತು ಜೀವಿಸುತ್ತಿರುವ ಜನರ ಜೀವನ ಚಿತ್ರವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ ಮತ್ತು ಅನಿವಾರ್ಯ.

ಭಾರತದ ಸ್ವಾತಂತ್ರ್ಯದ ನಂತರ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖವಾದ ಮತ್ತು ಅಗಾಧವಾದ ಸರ್ವತೋಮುಖ ಬದಲಾವಣೆಯಾಗುತ್ತಿರುವುದರಿಂದ ರಾಷ್ಟ್ರದ ಹೊಸ ಅವಶ್ಯಕತೆಗಳನ್ನು ಸರಿದೂಗಿಸಲು ಪುನರ್ ರೂಪಿಸಿ ಅಭಿವೃದ್ಧಿಪಡಿಸಿದ ವೈಶಿಷ್ಟವಾದ ಗ್ಯಾಸೆಟಿಯರ್ ನ ಅವಶ್ಯಕತೆ ಕಂಡುಬಂದಿತ್ತು. ಹೊಸ ಮಾಹಿತಿಯ ಬೆಳಕಿನಲ್ಲಿ ಹಲವಾರು ಪ್ರಧಾನ ಲಕ್ಷಣಗಳ ಗುಣ ವಿಮರ್ಶೆ ಮಾಡುವುದು ಅತ್ಯಗತ್ಯವಾಯಿತು. ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲೆಗಳು ಒಂದು ಕೇಂದ್ರದಂತೆ ವಿಶೇಷವಾದ ಸ್ಥಾನ ಪಡೆದಿರುವುದರಿಂದ ಮತ್ತು ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ವಿಸ್ತಾರ ವ್ಯಾಪ್ತಿಯುಳ್ಳ ಜಿಲ್ಲಾ ಸಂಪುಟವು ಅಪೇಕ್ಷಣೀಯವಾಯಿತು. ಸ್ವಾತಂತ್ರ್ಯ ದೊರೆತ ನಂತರ 1975ರಲ್ಲಿ ಮೊದಲ ಮಾದರಿ ಸರಣಿಗಳು ಹೊರಬಂದವು.

ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾ‍ರವು ಆರ್ಥಿಕ ನೆರವನ್ನು ಒದಗಿಸಿದ್ದ ಕಾರಣ ರಾಷ್ಟ್ರವ್ಯಾಪ್ತಿ ಯೋಜನೆಗೆ ಅನುಸಾರ ಈ ಹೊಸ ಜಿಲ್ಲಾ ಗ್ಯಾಸೆಟಿಯರ್ ಗಳು ರಾಜ್ಯ ಸರ್ಕಾರದಿಂದ ಪ್ರಕಟಿಸಲ್ಪಟ್ಟವು. ಈ ಜಿಲ್ಲಾ ಗ್ಯಾಸೆಟಿಯರ್ ಗಳು "ಇಂಡಿಯ ಗ್ಯಾಸೆಟಿಯರ್" ನ ಭಾಗವಾಗಿದ್ದವು ಮತ್ತು ಈ ಕಾರಣದಿಂದ "ಇಂಡಿಯ ಗ್ಯಾಸೆಟಿಯರ್" ಎಂದು ಮುಖಪುಟದ ಮೇಲೆ ಮುದ್ರಿಸಲಾಯಿತು. ಹೊಸ ಗ್ಯಾಸೆಟಿಯರ್ ನ ವಿನ್ಯಾಸದಲ್ಲಿ ವಿಸ್ತಾರವಾದ ಮತ್ತು ಒಂದೇ ತರಹದ ತಳಹದಿಯನ್ನು ಪಡೆಯಲು ಕೇಂದ್ರ ಗ್ಯಾಸೆಟಿಯರ್ ಘಟಕವು ರಾಜ್ಯ ಗ್ಯಾಸೆಟಿಯರ್ ಘಟಕದೊಡನೆ ಸಮಾಲೋಚಿಸಿ ಒಂದೇ ಮಾದರಿಯ ಅಂಶಗಳನ್ನುಳ್ಳ ಪರಿವಿಡಿಯನ್ನು ಅಭಿವೃದ್ಧಿಗೊಳಿಸಿತು. ಈ ಕಾರ್ಯವು ರಾಜ್ಯ ಮತ್ತು ದೇಶದ ಗ್ಯಾಸೆಟಿಯರ್ ಸಂಪುಟಗಳಲ್ಲಿ ಹಲವಾರು ವಿಷಯಗಳನ್ನು ವ್ಯಾಪಕವಾಗಿ ತರಲು ಸಹಕಾರಿಯಾಯಿತು. "ಕಾರ್ಯ ಸಾಧನೆಯ ರಚನೆ ಮತ್ತು ಆದರ್ಶ ಧ್ಯೇಯ", "ನೋಟ ಮತ್ತು ದೃಷ್ಟಿಕೋನ" ಹಾಗೂ "ಮೌಲ್ಯ ಮತ್ತು ಹೆಗ್ಗುರಿಗಳು" ದೊಡ್ಡದಾಗಿ ಮಾರ್ಪಾಟಾಗಿವೆ.

ಗ್ಯಾಸೆಟಿಯರ್ ಗಳು ಭೌಗೋಳಕ ಲಕ್ಷಣಗಳ ಪರಿವಿಡಿ ಎಂಬ ಹಿಂದಿನ ತಿಳುವಳಿಕೆಯ ಪರಿಕಲ್ಪನೆಯಿಂದ ಪ್ರಸ್ತುತ ಗ್ಯಾಸೆಟಿಯರ್ ಗಳು ಹೊರಬಂದು ಹೊಸ ಯುಗ ಮತ್ತು ಹೊಸ ಜೀವಮಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ದೊಡ್ಡವಾಗಿ ಬದಲಾವಣೆಯಾಗಿರುವ ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳದೆ ಸಮಗ್ರ ಮತ್ತು ವಸ್ತು ಚಿತ್ರಣವನ್ನು ವ್ಯಾಪಕವಾಗಿ ಹೊಸ ನೋಟದಲ್ಲಿ ವಿಷಯಗಳನ್ನು ಪ್ರಸ್ತುತಪಡಿಸಬೇಕಾಗಿವೆ. ಈ ಕಾರ್ಯ ಅತಿ ಹೆಚ್ಚಿನ ಎಚ್ಚರಿಕೆ ಮತ್ತು ಜಾಗರೂಕತೆಯನ್ನು ಅಪೇಕ್ಷಿಸುತ್ತದೆ. ಈ ತರಹದ ಗ್ಯಾಸೆಟಿಯರ್ ಸಂಪುಟಗಳ ತಯಾರಿಕೆಯು "ತುಂಬುಶ್ರಮ" ಮತ್ತು "ಧೀರ್ಘಾವಧಿ ಕಾರ್ಯವಿಧಾನ" ಗಳನ್ನು ಒಳಗೊಂಡಿರುತ್ತದೆ. ಹಾಗೂ ಪರವಶಗೊಳಿಸುವ ಕಾರ್ಯವಾಗಿರುತ್ತದೆ. ಜಿಲ್ಲೆಗಳ ಕುರಿತಂತೆ ಇಂದಿನ ಗ್ಯಾಸೆಟಿಯರ್ ಗಳು, ಜ್ಞಾನದ ಏಕಮೂಲವಾಗಿರುತ್ತದೆ. ಅಭಿವೃದ್ಧಿ ಮತ್ತು ಮುನ್ನಡೆಯುತ್ತಿರುವ ಭಾರತದ ಜಿಲ್ಲೆಗಳ ಸಮಗ್ರ ಮಾದರಿ ಸಮೀಕ್ಷೆಯಾಗಿ ಗ್ಯಾಸೆಟಿಯರ್ ಗಳು ಉಪಯುಕ್ತವಾಗುತ್ತವೆ.

ಸಾಮಾನ್ಯ ಮತ್ತು ತಜ್ಞ ಓದುಗರಿಬ್ಬರಿಗೂ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧಿಸಿದ ಪ್ರಗತಿ ಕಾರ್ಯದ ಮಾಹಿತಿ ಲಭ್ಯವಿರುತ್ತದೆ. ಆದರೆ ಪ್ರತ್ಯೇಕವಾಗಿ ಪ್ರತಿಯೊಂದು ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಮಾನದಂಡ ರೂಪದಲ್ಲಿ ಉಲ್ಲೇಖಿಸಿರುವ ಕಾರ್ಯಗಳ ಆಕರ ಗ್ರಂಥಗಳ ಲಭ್ಯತೆ ಬಹಳ ವಿರಳ. "ಗ್ಯಾಸೆಟಿಯರ್" ಈ ಕಾರ್ಯವನ್ನು ಬಹಳ ಸಮರ್ಥವಾಗಿ ನೆರವೇರಿಸುತ್ತದೆ. (ಒಂದು ಪ್ರದೇಶದ ಆಗು-ಹೋಗುಗಳನ್ನು ಉಲ್ಲೇಖಿಸುತ್ತಾ ಸ್ಥಳೀಯ ಚರಿತ್ರೆಯನ್ನು ಗ್ಯಾಸೆಟಿಯರ್ ನಲ್ಲಿ ವೈವಿಧ್ಯಮಯವಾಗಿ ತರಲಾಗಿರುತ್ತದೆ) ಬೃಹತ್ ಸಂಪುಟವನ್ನು ತರುವಾಗ ರಾಷ್ಟ್ರೀಯ ಜೀವನದ ಚಿತ್ರಣದಲ್ಲಿ ಹಲವಾರು ಸ್ಥಳೀಯ ಪ್ರಾಮುಖ್ಯತೆಗಳು ಕೈಬಿಟ್ಟು ಹೋಗುವ ಸಂಭವವಿರುತ್ತದೆ.

ಆದರೆ ಒಂದು ಪ್ರದೇಶದ ವಿವಿಧ ಭಾಗಗಳ ಕ್ಷಮತೆ ಮತ್ತು ಧೋರಣೆಗಳನ್ನು ತಿಳಿಸುತ್ತಾ ಭವಿಷ್ಯದ ನಿಟ್ಟಿನಲ್ಲಿ ಸಾಧನೆ ಮತ್ತು ಅಡಚಣೆ ಹಾಗೂ ಹಿಂದಿನ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಒಟ್ಟುಗೂಡಿಸುತ್ತಾ ಅಭಿವೃದ್ಧಿ ಅಥವಾ ವಿಕಾಸತೆಯನ್ನು ಸಂಪುಟಗಳು ಚಿತ್ರಿಸುತ್ತವೆ. ಈ ಕಾರ್ಯವು ಪುನರುತ್ಥಾನವಾಗುತ್ತಿರುವ ಭಾರತದ ಹೆಗ್ಗುರಿ, ಆದರ್ಶ ಮತ್ತು ಚಿಂತನೆಗಳನ್ನು ಪ್ರತಿಫಲಿಸುವುದರ ಜೊತೆಗೆ ಅಸಂಖ್ಯಾತ ಮೂಲದಿಂದ ಮತ್ತು ಕ್ಷೇತ್ರ ಪ್ರವಾಸದಿಂದ ಸಂಗ್ರಹಿಸಿದ ಮಾಹಿತಿಯನ್ನು ಕ್ರಮಬದ್ಧವಾಗಿ ವಿಶ್ಲೇಷಿಸುತ್ತದೆ. ವ್ಯಾಪಕತೆ, ಪ್ರಾಯೋಗಿಕವಾಗಿ ಕಾಲೋಚಿತಗೊಳಿಸುವುದು, ವಿಶ್ವಸನೀಯತೆ, ನಿಖರತೆ, ಉದ್ದೇಶತೆ ದೃಷ್ಟಿಯಿಂದ ಉನ್ನತ ದರ್ಜೆಯನ್ನು ಕಾಯ್ದುಕೊಂಡು ಬರಬೇಕಾದ್ದರಿಂದ ಸಂಪುಟಗಳ ತಯಾರಿಕೆ ಮತ್ತು ಪ್ರಕಟಣೆಯ ಬೃಹದಾಕಾರ ಕಾರ್ಯದಲ್ಲಿ ತುಂಬು ಶ್ರಮದ ಪ್ರಯತ್ನ ಸೇರಿರುತ್ತದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯವು, ಮೊದಲಬಾರಿಗೆ ಇಮ್ಮಡಿ ಪುಲಿಕೇಶಿ ಮತ್ತು ಬಾದಾಮಿ ಚಾಲುಕ್ಯರ ಆಡಳಿತದಲ್ಲಿ ಒಂದುಗೂಡಿರುತ್ತದೆ. ಇಮ್ಮಡಿ ಪುಲಿಕೇಶಿ ಸ್ಥಾಪಿಸಿದ್ದ ಸಾಮ್ರಾಜ್ಯವು ಕಾವೇರಿಯಿಂದ ನರ್ಮದಾ ನದಿಯವರೆಗೆ ಹರಡಿದ್ದು ರಾಜಮನೆತನಗಳು ಬದಲಾವಣೆಯಾದರೂ ಐದು ಶತಮಾನದವರೆಗೆ ಸಾಮ್ರಾಜ್ಯವು ಮುಂದುವರೆದಿತ್ತು.

ಭಾರತದ ಉಪಖಂಡದ ಮದ್ಯದಲ್ಲಿ ಈ ಸಾಮ್ರಾಜ್ಯವು ಇದ್ದುದರಿಂದ ಒಂದಕ್ಕಿಂತ ಹೆಚ್ಚಿನ ರೀತಿಯಲ್ಲಿ ಭಾರತದ ಚರಿತ್ರೆ ಮತ್ತು ಸಂಸ್ಕೃತಿಯ ಮೇಲೆ ಕರ್ನಾಟಕದ ಸಾಮ್ರಾಜ್ಯವು ಪ್ರಭಾವ ಬೀರುತ್ತದೆ. 'ಕನೌಜು' ಸಾಮ್ರಾಜ್ಯದ ಅವಧಿಯಲ್ಲಿ ಸತತವಾಗಿ ಆಳಿದ ಕನೌಜು ಆಡಳಿತಗಾರರನ್ನು ಬಾದಾಮಿಯ ಚಾಲುಕ್ಯರ ನಂತರ ಬಂದ ರಾಷ್ಟ್ರಕೂಟರು ಗೌರವದೊಂದಿಗೆ ಪ್ರಶಂಸಿದರು. ಭಾರತ ಚರಿತ್ರೆಯಲ್ಲಿನ ಹರ್ಷನ ಆಳ್ವಿಕೆಯ ಪೂರ್ವ ಭಾಗವನ್ನು ವಿವರಿಸಲು ಈ ಪದವನ್ನು (ಕನೌಜ್ ಸಾಮ್ರಾಜ್ಯ) ತಪ್ಪುಪದವನ್ನಾಗಿ ಬಳಸಲಾಯಿತು. ಆದರೆ ಸದರಿ ಅವಧಿಯನ್ನು "ಕರ್ನಾಟಕದ ಸಾಮ್ರಾಜ್ಯ"ವೆಂದು ಕರೆಯಬೇಕಿತ್ತು. ಈ ಅವಧಿಯಲ್ಲಿ 'ಕರ್ನಾಟ'ವೆಂದು ಸಂಬೋದಿಸಿಕೊಳ್ಳುವುದು ಬಹಳ ಹೆಮ್ಮೆಯ ವಿಷಯವಾಗಿತ್ತು. ಮತ್ತು ಬೆಂಗಾಲ ಸೈನ್ಯದವರು ಅವರನ್ನು "ಕರ್ನಾಟ ಕ್ಷತ್ರಿಯರು" ಎಂದು ಸಂಬೋದಿಸಿಕೊಳ್ಳುತ್ತಿದ್ದರು. "ಕರ್ನಾ‍ಟ ಕುಟುಂಬ"ವೆಂದು ಬಿಹಾರಿನ ಮಿಥಿಲ ರಾಜವಂಶದವರು ಕರೆದುಕೊಳ್ಳುತ್ತಿದ್ದರು. ಅರ್ಹ ಆಶ್ರಯದಾತರನ್ನು ಅರಸಿಕೊಂಡು ಕಾಶ್ಮೀರದ ಕವಿಯಾದ ಬಿಲ್ಹಣರವರು ಕರ್ನಾಟಕದ ರಾಜಧಾನಿಯಾದ ಕಲ್ಯಾಣಕ್ಕೆ ಬಂದರು. ವಿಕ್ರಮಾಧಿತ್ಯನ VI (1076-1127) ಆಸ್ಥಾನದಲ್ಲಿದ್ದ ವಿಜ್ಞಾನೇಶ್ವರನು ಮಿತಾಕ್ಷರ ಎಂಬ ಹಿಂದೂ ಕಾನೂನಿನ ಕುರಿತಂತೆ ಮಾಡಿದ ಕೆಲಸಕ್ಕೆ ತ್ವರಿತವಾಗಿ ಮನ್ನಣೆ ದೊರೆಯಿತು. ವಿಕ್ರಮಾಧಿತ್ಯನು ಬಿಲ್ಹಣ ಮತ್ತು ನ್ಯಾಯಶಾಸ್ತ್ರಜ್ಞನಾಗಿದ್ದ ವಿಜ್ಞಾನೇಶ್ವರ ಇಬ್ಬರಿಗೂ ಆಶ್ರಯದಾತನಾಗಿದ್ದನು. ಭೌದ್ಧರ ಮಾದರಿಯಲ್ಲಿ ಹಿಂದೂ ದೇವರುಗಳಿಗೆ ಶಿಲಾ ದೇವಸ್ಥಾನಗಳನ್ನು ಕರ್ನಾಟಕ ನಿರ್ಮಿಸಿತು ನಂತರ ಜೈನರು ಅನುಸರಿಸಿದರು. ಈ ಪ್ರಯತ್ನವು ಈಗ ಮಹಾರಾಷ್ಟ್ರದಲ್ಲಿರುವ ಎಲ್ಲೋರದಲ್ಲಿನ ಕೈಲಾಸ ದೇವಸ್ಥಾನವನ್ನು ಅತ್ಯುನ್ನತ ಸ್ಥಿತಿಗೇರುವಂತೆ ಮಾಡಿತು. ಐಹೊಳೆಯಲ್ಲಿ ಬಾದಾಮಿ ಚಾಲುಕ್ಯರು ದೇವಸ್ಥಾನಗಳ ವಾಸ್ತು ಶಿಲ್ಪದ ಕುರಿತಂತೆ ಮಾಡಿರುವ ಪ್ರಯೋಗವನ್ನು ಪರಸಿ ಬ್ರೌನ್ ಎಂಬಾತನು ಭಾರತ ದೇವಸ್ಥಾನಗಳ ಅತ್ಯುನ್ನತ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆಯೆಂದು ವಿವರಿಸಿದ್ದಾನೆ. ಮಧ್ಯ ಭಾರತ, ಒಡಿಸ್ಸಾ, ಗುಜರಾತ್, ಮಹಾರಾಷ್ಟ್ರ, ಆಂಧ್ರಗಳಲ್ಲಿರುವ ದೇವಸ್ಥಾನಗಳು ಈ ಶಿಲ್ಪಶಾಸ್ತ್ರದ ಪ್ರಭಾವಕ್ಕೆ ಒಳಗಾಗಿರುತ್ತವೆ.

ಕರ್ನಾಟಕವು ಮಿಶ್ರ ಸಂಸ್ಕೃತಿಯ ಅರಳುವಿಕೆಯನ್ನು ನೋಡಿದೆ. ಕಲೆಯಲ್ಲಿ, ಬಿಜಾಪುರ, ಬೀದರ್ ಮತ್ತು ಗುಲ್ಬರ್ಗಾಗಳಲ್ಲಿ ಹಿಂದು-ಮುಸಲ್ಮಾನ ವಾಸ್ತುಶಿಲ್ಪ ಪದ್ದತಿ ಕುರಿತಂತೆ ವಿಶೇಷ ಶಾಲೆಗಳು ಬೆಳಕಿಗೆ ಬಂದವು. ಕರ್ನಾಟಕ ಸಂಗೀತದಲ್ಲಿ ಪರ್ಸಿಯನ್ ಪದ್ಧತಿ ಕಸಿಯಾದ್ದರಿಂದ ಪುರಂದರ ಸಂತರಿಂದ ಕಲ್ಯಾಣ ಮತ್ತು ದರ್ಬಾರ್ ಎಂಬ ಹೊಸ ರಾಗಗಳು ಸೃಷ್ಟಿಯಾದವು. ಬಿಜಾಪುರ ಆಡಳಿತಗಾರನಾದ ಇಬ್ರಾಹಿಂ II ಎಂಬಾತನು ಮುಸಲ್ಮಾನರಿಗೆ ಹಿಂದೂ ಸಂಗೀತವನ್ನು ಪರಿಚಯಿಸಲು 'ಕಿತಾಬ್ ನವರಸ್' ಎಂಬುದನ್ನು ಸಂಯೋಜಿಸಿದನು. ಸರಸ್ವತಿ ಮತ್ತು ಗಣಪತಿಯ ಪ್ರಾರ್ಥನೆಯೊಂದಿಗೆ ಈ ಪುಸ್ತಕವು ಪ್ರಾರಂಭವಾಗುತ್ತದೆ. ಬಂದೆ ನವಾಜ್ ಮತ್ತು ಬಾಬಾ ಬುಡನ್ ಎಂಬ ಸೂಫಿ ಸಂತರು ಅವರ ಕಾಲದಲ್ಲಿ ಜನರ ಪ್ರೀತಿ ಪಾತ್ರಕ್ಕೆ ಒಳಗಾಗುವುದರೊಂದಿಗೆ ಇಂದಿಗೂ ಸಹ ಜನರು ಪೂಜ್ಯತೆಯಿಂದ ಕಾಣುತ್ತಾರೆ. ಕರ್ನಾಟಕದಲ್ಲಿ ಎಲ್ಲಾ ಧರ್ಮಗಳು ಪ್ರವರ್ಧಮಾನಕ್ಕೆ ಬಂದವು ಮತ್ತು ಪ್ರತಿ ಧರ್ಮವು ಪ್ರಸಿದ್ಧ ವ್ಯಕ್ತಿಗಳನ್ನು ನೀಡಿದವು. ಜೈನ ಧರ್ಮವು ಗುಣಭದ್ರ, ವೀರಸೇನ, ಜಿನಸೇನ, ಕುಂದಕುಂಡ ಎಂಬ ವ್ಯಕ್ತಿಗಳನ್ನು ನೀಡಿತು. ಧವಳ ಮತ್ತು ಜಯಧವಳ ಎಂಬ "ಜ್ಞಾನ ವ್ಯಾಖ್ಯಾನ"ವನ್ನು ಗುಣಭದ್ರ ಮತ್ತು ವೀರಸೇನರು ಸಂಯೋಜಿಸಿದರು. ಶೃಂಗೇರಿಯಲ್ಲಿ ಆದಿಶಂಕರಾಚಾರ್ಯರು ಶಾರದಾ ಪೀಠ ಮತ್ತು ಹೆಸರುವಾಸಿಯಾದ ಸಂಸ್ಕೃತ ವಿದ್ಯಾಪೀಠವನ್ನು ಸ್ಥಾಪಿಸಿದರು. ಈ ಪೀಠಗಳ ಸ್ಥಾಪನೆಯು ವಾರ್ತಾವಾಹಿನಿಯಲ್ಲಿ ಮೊದಲ ಪ್ರಯತ್ನವಾಯಿತು.

ಶಂಕರ ಮತ್ತು ರಾಮಾನುಜರು ಕರ್ನಾ‍ಟಕದಲ್ಲಿ ನೆಲೆಸಿದ್ದರು. ಶೃಂಗೇರಿಯು ಶಂಕರಾಚಾರ್ಯರ ಚಟುವಟಿಕೆಗಳ ಪ್ರಧಾನ ಕೇಂದ್ರಗಳಲ್ಲಿ ಒಂದಾಗಿತ್ತು ಮತ್ತು ಮೇಲುಕೋಟೆಯು ರಾಮಾನುಜರ ಕೇಂದ್ರವಾಗಿತ್ತು. ಪಂಥ ಮತ್ತು ಭಕ್ತಿ ಆರಾಧನೆಗಳಲ್ಲಿ ರಾಮಾನುಜರು ಶಕ್ತಿ ವಿಶಿಷ್ಟಾದ್ವೈತ ಮತ್ತು ಕ್ರಾಂತಿಕಾರಿ ಸಾಮಾಜಿಕ ವೇದಾಂತವನ್ನು ಸೂಚಿಸಿದರು. ಹರಿ-ಹರ , ಬಾದಾಮಿಯಲ್ಲಿನ ಅರ್ಧನಾರೀಶ್ವರ, ಶ್ರೀಮೂರ್ತಿ, ದತ್ತಾತ್ರೇಯ ಮುಂತಾದ ದೇವರುಗಳನ್ನು ಪೂಜಿಸಲು ದೇವಸ್ಥಾನಗಳಿದ್ದವು. ಕರ್ನಾಟಕ ಸಾಮಾಜಿಕ ಜೀವನವು ಎಲ್ಲಾ ಧರ್ಮಗಳಿಂದ ಸಂಪತ್ಭರಿತವಾಗಿತ್ತು. ಕ್ರಿಶ್ಚಿಯನ್ನರಿಂದಾಗಿ ಪಾಶ್ಚಾತ್ಯ ಶಿಕ್ಷಣ, ಮುದ್ರಣ ಇತ್ಯಾದಿ ಪರಿಚಯದಿಂದ ಕರ್ನಾಟಕ ಜನಜೀವನದ ಮೇಲೆ ಅಪಾರ ಪರಿಣಾಮವಾಯಿತು. ಈ ನೆಲದಲ್ಲಿ ಸಂಸ್ಕೃತ ವ್ಯಾಕರಣ ಪಂಡಿತರಾದ ಪೂಜ್ಯಪಾದ ಮತ್ತು ಶಕತ್ಯಾನ, ಕನ್ನಡದಲ್ಲಿ ವ್ಯಾಸ ಮತ್ತು ಪಂಪ, ಸಂಸ್ಕೃತದಲ್ಲಿ ಸೋಮದೇವ, ತ್ರಿವಿಕ್ರಮ ಮತ್ತು ಬಿಲ್ಹಣ, ಮುಂತಾದವರು ಸಾಹಿತ್ಯದಲ್ಲಿ ಪ್ರವರ್ಧಮಾನಕ್ಕೆ ಬಂದರು. ಕರ್ನಾಟಕವು ಗತಕಾಲದ ವೈಭವದ ಜೊತೆಗೆ ಹಲವಾರು ಸಾಧನೆಗಳು ಅದರ ಮಡಿಲಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಕನಿಷ್ಟ ಮಳೆಯಾದರೂ, ನೀರಾವರಿ ಸೌಲಭ್ಯಗಳು ಶೇ 30ಕ್ಕಿಂತ ಹೆಚ್ಚಿಲ್ಲದಿದ್ದರೂ ಆಹಾರ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯನ್ನು ಸಾಧಿಸಿದೆ.ಭಾರತದ ರೇಷ್ಮೆ, ಅಡಿಕೆ ಮತ್ತು ಖಾದಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಎಲೆಕ್ಟ್ರಾನಿಕ್ಸ್, ವಿದ್ಯುನ್ಮಾನ ಉಪಕರಣಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಉತ್ತಮ ಸಾಧನೆಯನ್ನು ಮಾಡಿದೆ. ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳು, ಕರ್ನಾಟಕದ ಮೂಲದಿಂದ ಬಂದಿರುತ್ತದೆ.

ಇಲ್ಲಿಯ ಉತ್ತಮ ಮೂಲಸೌಕರ್ಯಗಳು ಕೇಂದ್ರದ ಕೈಗಾರಿಕೆಗಳನ್ನು ಆಕರ್ಷಿಸಿದವು. ವಿಮಾನ, ಟ್ರಾಕ್ಟರ್, ರೈಲ್ವೆ ಕೋಚ್, ವಿದ್ಯುತ್ ಉಪಕರಣಗಳು, ದೂರವಾಣಿ, ದೂರದರ್ಶನ, ಗಡಿಯಾರಗಳು, ಕೈಗಡಿಯಾರಗಳು, ವಿವಿಧ ದ್ವಿಚಕ್ರ ವಾಹನಗಳು, ಶ್ರೀಗಂಧ, ದಂತ, ಮತ್ತು ಬಿದರಿನ ಅಲಂಕಾರದ ಹಾಗೂ ಲೋಹದ ವಸ್ತುಗಳು, ಗುಡಿಕೈಗಾರಿಕೆ ವಸ್ತುಗಳು ಇತ್ಯಾದಿಗಳನ್ನು ರಾಜ್ಯವು ಉತ್ಪಾದಿಸುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಜನಜೀವನದ ಮಟ್ಟ ಉತ್ತಮವಾಗಿದೆ. ಸಾಹಿತ್ಯದಲ್ಲಿ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದೆ. ಕರ್ನಾಟಕ ರಾಜ್ಯವು ಭಾರತದ ಜನಜೀವನ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ಪರಿಗಣಿಸಬಹುದಾದ ಕೊಡುಗೆಗಳನ್ನು ಹಿಂದೆ ಮತ್ತು ಇಂದಿನವರೆಗೂ ನೀಡಿದೆ. ಕರ್ನಾಟಕ ರಾಜ್ಯವು ಕ್ರಮವಾದ ಬದಲಾವಣೆಗಳಲ್ಲಿ ಸಾಗಿದೆ.

ರಾಜ್ಯದ ಬಹುತೇಕ ಭಾಗವು ಬಾಂಬೆ ಮತ್ತು ಮದ್ರಾಸ್ ಪ್ರಾಂತಗಳು ಹಾಗೂ ಹೈದರಾಬಾದ್ ರಾಜ್ಯದ, ಜೋಡಿಕೆಯಿಂದಾಗಿ ತೊಂದರೆಗೊಳಗಾಯಿತು. ಜೋಡಿಕೆಯಾದ ಪ್ರಾಂತಗಳಲ್ಲಿನ ಆಡಳಿತ ಘಟಕಗಳಲ್ಲಿ ಕನ್ನಡ ಮಾತನಾಡುವ ಜನರು ಅಲ್ಪಸಂಖ್ಯಾತ ಸ್ಥಿತಿಯಲ್ಲಿದ್ದು, ಆ ಭಾಗಗಳು ಹಿಂದುಳಿದ ಮತ್ತು ಉಪೇಕ್ಷೆಗೆ ಒಳಗಾಗಿದ್ದ ಪ್ರದೇಶಗಳಾಗಿದ್ದವು. ಎಲ್ಲಾ ಕನ್ನಡಿಗರ ಏಕೀಕರಣ ಪ್ರಯತ್ನದ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ಮೈಸೂರು ಪ್ರಾಂತದಿಂದ ವಿರೋಧ ವ್ಯಕ್ತವಾಗಿತ್ತು. ವೈಭವದಿಂದ ಕೂಡಿದ ಮೈಸೂರು ಧರ್ಮಬುದ್ಧಿಯಿಂದ ಕೂಡಿದ ಆಡಳಿತಗಾರರ ಅಡಿಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾದಿಸಿತ್ತು. ಇದರಿಂದಾಗಿ ಮೈಸೂರಿನಲ್ಲಿನ ಕೆಲವರಿಗೆ ಹಿಂದುಳಿದ ಪ್ರದೇಶದಿಂದ ಬಂದ ಸೋದರರು ಹೊರೆಯಾಗುತ್ತಾರೆಂದು ಯೋಚಿಸಿದ್ದರು.

ಆದರೆ ಕರ್ನಾಟಕವು ಈ ಯೋಚನೆಯಿಂದ ಹೊರಬಂದಿದ್ದು,ಹಿಂದುಳಿದ ಪ್ರದೇಶದಲ್ಲಿನ ಸಂಪನ್ಮೂಲಗಳನ್ನು ಸೂಕ್ತರೀತಿಯಲ್ಲಿ ಬಳಸಿಕೊಳ್ಳಲಾಯಿತು. ಅರಣ್ಯ, ನೀರು, ಖನಿಜ ಸಂಪತ್ತು, ಜನಶಕ್ತಿ ಮುಂತಾದ ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳಲಾಯಿತು. ನಿಧಾನವಾಗಿ ತಾರತಮ್ಯಗಳು ಇಲ್ಲದಂತಾಯಿತು. ದಿನಪತ್ರಿಕೆ, ರೇಡಿಯೋ, ರಸ್ತೆ ಮತ್ತು ರೈಲು, ಚಲನಚಿತ್ರ-ಸಾಹಿತ್ಯ, ಸರಕು ಮತ್ತು ಅಭಿಪ್ರಾಯಗಳ ವಿನಿಮಯದಿಂದಾಗಿ ಸೋದರತ್ವ ವೃದ್ಧಿಸಿತು. ಕೃಷ್ಣಾ, ಕಾವೇರಿ ಮತ್ತು ಕಾಳಿ ನದಿಗಳು ಹತ್ತಿರ ಬಂದಂತಾಯಿತು. ಆಡಳಿತ ಮತ್ತು ಅರ್ಥವ್ಯವಸ್ಥೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವೇಗವಾಗಿ ಆದ ಬದಲಾವಣೆಗಳ ಚಿತ್ರಣವನ್ನು ಒಂದು ಚೌಕಟ್ಟಿನಲ್ಲಿ ತರಲು ಗ್ಯಾಸೆಟಿಯರ್ ಪ್ರಯತ್ನಿಸುತ್ತದೆ. ಭಾರತ ಕುರಿತಂತೆ ಅಧ್ಯಯನ ಮಾಡಲು ನಂಬಿಕೆಗೆ ಅರ್ಹವಾದ ಮಾಹಿತಿ ಮೂಲವೆಂದು ಮತ್ತು ಸಾಹಿತ್ಯ ಹಾಗೂ ಮೂಲ ಸಂಶೋಧನೆಯಲ್ಲಿ ಅನುಪಮ ಸಂಯೋಜನೆಯಾಗಿರುವುದರಿಂದ ಭಾರತ ಗ್ಯಾಸೆಟಿಯರ್ ಗಳನ್ನು "ಮೈಕ್ರೋ ಫಿಲಂ" ರೂಪದಲ್ಲಿ ಅಂತರಾಷ್ಟ್ರೀಯ ದಾಖಲೀಕರಣ ಕೇಂದ್ರವು ಹೊರದೇಶಗಳಲ್ಲಿ ಒದಗಿಸುತ್ತದೆ.

ಈ ಉಲ್ಲೇಖಗಳು ಪೂರ್ವ ಕಲ್ಪನೆ ಮತ್ತು ಸಂಕುಚಿತ ಪ್ರವೃತ್ತಿಯನ್ನು ಸಹಾ ದೂರಮಾಡಲು ಸಹಕಾರಿಯಾಯಿತು. ಆಡಳಿತಗಾರರು, ಸಂಶೋಧಕರು, ಪತ್ರಿಕೋದ್ಯಮಿಗಳು, ಬರಹಗಾರರು, ಉಪನ್ಯಾಸಕರು, ಕೈಗಾರಿಕೋದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾನ್ಯ ಓದುಗರು ಗ್ಯಾಸೆಟಿಯರ್ ಸಂಪುಟಗಳಲ್ಲಿ ಅತ್ಯಂತ ಆಸಕ್ತಿಯುಳ್ಳ ವಿಷಯಗಳನ್ನು ಕಾಣಬಹುದಾಗಿದೆ. ಸಾಮರಸ್ಯ ಮತ್ತು ಪ್ರಗತಿಗೆ "ಸಮಗ್ರ ಮನೋಭಾವನೆ"ಯು ಬಹಳ ಮುಖ್ಯ. ಇದನ್ನು ಪರಿಣಾಮಕಾರಿಯಾಗಿ ಸಾಧಿಸಬೇಕಾದಲ್ಲಿ ತೇಜಸ್ವಿಗಳ ಪುಂಜದಂತಿರುವ ಗ್ಯಾಸೆಟಿಯರ್ ಗಳ ನಿಕಟ ಅಭ್ಯಾಸವು ಸಹಾಯ ಮಾಡುತ್ತದೆ.

ಮೂಲ : ಗ್ಯಾಸೆಟಿಯರ್ ಇಲಾಖೆ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate