অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತು

ನಾಲ್ವಡಿಕೃಷ್ಣರಾಜ ಒಡೆಯರ್ ಅವರು ೧೮೮೪ ಜೂನ್ ೪ ರಂದು ಜನಿಸಿದರು. ಶ್ರೀಯುತರು ಜಾರಿ ಮಾಡಿದ ಸಾಮಾಜಿಕ ಕಾನೂನುಗಳು: ೧೯೦೯ ರಲ್ಲಿ ದೇವದಾಸಿ ಪದ್ಧತಿ ನಿಷೇಧ, ೧೯೧೦ ರಲ್ಲಿ ಬಸವಿ ಪದ್ಧತಿ ರದ್ಧತಿ, ೧೯೧೦ ರಲ್ಲಿ ’ಗೆಜ್ಜೆಪೂಜೆ’ ಸಂಪೂರ್ಣ ನಿರ್ಮೂಲನೆ, ೧೯೩೬ ಜುಲೈ ೧೪ ರಂದು ವೇಶ್ಯಾವೃತ್ತಿ ತಡೆಗತ್ತುವ ಕಾಯ್ದೆಯ ಜಾರಿ, ೧೯೩೬ ಜುಲೈ ೭ ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ೧೯೧೪ ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಮತ್ತು ೧೯೧೯ ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, ೧೯೨೭ ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟವರು ನಾಲ್ವಡಿಯವರು. ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ೧೯೦೫ ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು. ೧೯೧೩ ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು. ೧೯೧೮ ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ೧೯೦೫ ಆಗಸ್ಟ್ ೩ ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದು ಸೂಕ್ತವಾಗಿಯೇ ಇದೆ. ನಾಲ್ವಡಿಯವರನ್ನು ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು ೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.

ಇತಿಹಾಸ

ಕನ್ನಡದಲ್ಲಿ ಉಪಲಬ್ಧವಿರುವ ಕವಿರಾಜಮಾರ್ಗ ಅತ್ಯಂತ ಪ್ರಾಚೀನವಾದುದು. ಇದರ ಕರ್ತೃ ಶ್ರೀವಿಜಯ. ಕಾಲ ಕ್ರಿ.ಶ. ಸುಮಾರು ೮೫೦. ಲಕ್ಷಣ ಗ್ರಂಥವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದಮಾ ಗೋದಾವರಿವರೆಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾಲಯ ವಿಶದ ವಿಷಯ ವಿಶೇಷಂ ಎಂಬ ಸಾಲುಗಳಿವೆ. ಕನ್ನಡ ನಾಡು ಒಂಬತ್ತನೆಯ ಶತಮಾನದಲ್ಲಿ ಕಾವೇರಿಯ ಪರಿಸರದಿಂದ ಗೋದಾವರಿ ನದಿಯ ಪರಿಸರದವರೆಗೆ ಚಾಚಿಕೊಂಡು ಬೃಹತ್ತಾಗಿತ್ತು ಎಂಬುದು ಇದರಿಂದ ವೇದ್ಯವಾಗುತ್ತದೆ. ಕನ್ನಡಿಗರ ಗುಣವಿಶೇಷಗಳ ಮೇಲೆ ಬೆಳಕು ಚೆಲ್ಲುವ ಕವಿರಾಜ ಮಾರ್ಗವನ್ನು ಜಗತ್ತಿನ ಆದಿ ಮೀಮಾಂಸಗ್ರಂಥಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಒಂಬತ್ತನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗಿನ ಒಂದು ಸಾವಿರ ವರ್ಷಗಳ ಚರಿತ್ರೆಯನ್ನು ಅವಲೋಕಿಸಿದರೆ ಶ್ರೀವಿಜಯನ ಮಾತು ಉತ್ಪ್ರೇಕ್ಷೆಯಲ್ಲ ಎಂಬುದು ತಿಳಿಯುತ್ತದೆ. ಆಂಗ್ಲರ ಆಳ್ವಿಕೆಯಲ್ಲಿ ಕನ್ನಡಿಗರು ಮೈಸೂರು ಸಂಸ್ಥಾನದಲ್ಲಲ್ಲದೆ ಹೈದರಾಬಾದು, ಮದರಾಸು, ಬೊಂಬಾಯಿ ಪ್ರಾಂತ್ಯಗಳಲ್ಲೂ ಅವರ ನೇರ ಆಳ್ವಿಕೆಗೆ ಒಳಪಟ್ಟಿದ್ದ ಕೊಡಗು ಹಾಗೂ ಸವಣೂರು, ಸೊಂಡೂರು, ರಾಮದುರ್ಗದಂಥ ಪುಟ್ಟ ಪುಟ್ಟ ಸಂಸ್ಥಾನಗಳಲ್ಲೂ ಚದುರಿಹೋಗಿದ್ದರು. ಇಂಥ ಪರಿಸ್ಥಿತಿಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು (ಮೊದಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ತು) ಅಸ್ತಿತ್ವಕ್ಕೆ ಬಂದವು. ಬೆಂಗಲೂರಿನ ಈಗಿನ ಕೋಟೆ ಪ್ರೌಢಶಾಲೆಯಲ್ಲಿ ೧೯೧೫ ಮೇ ಮೂರರಿಂದ ಐದರವರೆಗೆ ನಾಲ್ಕು ದಿನಗಳು ವಿದ್ಯಾ ವಿಷಯಕ ಮಂಡಳಿಯ ಸಮ್ಮೇಳನವು ಸಂಘಟಿಸಲ್ಪಟ್ಟಿತ್ತು. ಆ ಸಮ್ಮೇಳನಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದು, ಮದರಾಸು, ಬೊಂಬಾಯಿ, ಕೊಡಗು, ಬೆಳಗಾವಿ, ಕಾರವಾರ, ದಕ್ಷಿಣ ಕನ್ನಡ ಮೊದಲಾದ ಪ್ರದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು. ಮೂರು ದಿನಗಳ ಸುದೀರ್ಘ ಚರ್ಚೆಯ ನಂತರ ೫-೫-೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತು ಜನ್ಮ ತಾಳಿತು. ಆರಂಭದ ದಿನ ೪ ಮಂದಿ ಆಜೀವ ಸದಸ್ಯರಾಗಿ ೪೨ ಮಂದಿ ದ್ವೀತೀಯ ವರ್ಗದ ಸದಸ್ಯರಾಗಿ ಹೆಸರು ನೊಂದಾಯಿಸಿಕೊಂಡರು. ಎಚ್.ವಿ. ನಂಜುಂಡಯ್ಯ ಅವರು ಇದರ ಪ್ರಥಮ ಅಧ್ಯಕ್ಷರಾದರು. ಎಂ. ಶಾಮರಾವ್ ಉಪಾಧ್ಯಕ್ಷ, ಡಾ. ಪಿ.ಎಸ್. ಅಚ್ಯುತರಾವ್ ಕೋಶಾಧ್ಯಕ್ಷ, ಬಿ. ಕೃಷ್ಣಪ್ಪ ಕಾರ್ಯದರ್ಶಿಯಾಗಿ ನಿಯುಕ್ತರಾದರು. ಪ್ರಥಮ ಕಾರ್ಯನಿರ್ವಾಹಕ ಮಂಡಳಿಗೆ ಮೈಸೂರು ಸಂಸ್ಥಾನದಿಂದ ೧೨ ಮಂದಿ, ಬೊಂಬಾಯಿ ಪ್ರಾಂತ್ಯದಿಂದ ೮, ಮದರಾಸು ಪ್ರಾಂತ್ಯದಿಂದ ೫, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳ ಇಬ್ಬರು, ಹೈದರಾಬಾದು ಪ್ರಾಂತ್ಯದ ಇಬ್ಬರು ಮತ್ತು ಕೊಡಗು ಪ್ರಾಂತ್ಯದ ಒಬ್ಬರು ಒಟ್ಟು ಮೂವತ್ತು ಮಂದಿ ಸದಸ್ಯರು ಇರುವುದೆಂದು ತೀರ್ಮಾನಿಸಲಾಯಿತು. ಕೆಪಿ. ಪುಟ್ಟಣ್ಣಶೆಟ್ಟಿ, ಕರ್ಪೂರ ಶ್ರೀನಿವಾಸರಾವ್, ಎಂ. ಕಾಂತರಾಜೇ ಅರಸು, ಆರ್. ನರಸಿಂಹಾಚಾರ್, ಮುದವೀಡು ಕೃಷ್ಣರಾವ್, ಆಲೂರು ವೆಮಕಟರಾವ್, ಬಿ.ರಾಮರಾವ್, ಟಿ.ಎಸ್. ಚಿಕ್ಕೋಡಿ, ಎಂ. ಮುತ್ತಣ್ಣ ಕಾರ್ಯಕಾರಿ ಮಂಡಳಿಯಲ್ಲಿದ್ದ ಪ್ರಮುಖರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಹಿತವನ್ನು ಕಾಯುವ ಘನ ಉದ್ದೇಶದಿಂದ ಸ್ಥಾಪನೆಯಾದ ಪರಿಷತ್ತಿಗೆ ಅಂಗರಚನೆಯನ್ನು ಸಿದ್ಧಗೊಳಿಸಿ, ಅದರಲ್ಲಿ ಕನ್ನಡ ಕೃತಿಗಳ ಪ್ರಕಟಣೆ, ಕನ್ನಡ ಪತ್ರಿಕೆಗಳ ಪ್ರಕಟಣೆ, ವಾಚನಾಲಯಗಳ ಸ್ಥಾಪನೆ, ಉಪನ್ಯಾಸಗಳ ಆಯೋಜನೆ ಮೊದಲಾದ ಅಂಶಗಳಿಗೆ ಹೆಚ್ಚು ಒತ್ತನ್ನು ನೀಡಲಾಯಿತು. ಕನ್ನಡದ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಬಲ್ಲ ಅಂಗರಚನೆ ಅರಂಭದಲ್ಲೇ ದೊರೆತ ಕಾರಣದಿಂದಾಗಿ ತೊಂಬತ್ತೇಳು ವಸಂತಗಳನ್ನು ಕಂಡಿರುವ ಪರಿಷತ್ತು ಇಂದು ಸದೃಢವಾಗಿ, ಬೃಹದಾಕಾರವಾಗಿ ಬೆಳೆದು ಸಮಸ್ತ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪುಗೊಂಡಿದೆ. ಆರಂಭದಲ್ಲಿ ಐದು ವರ್ಷಗಳ ಕಾಲ ಎಚ್.ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿ ಪರಿಷತ್ತಿಗೆ ಭದ್ರ ಬುನಾದಿ ಹಾಕಿಕೊಟ್ಟರು. ೧೯೨೦ರಿಂದ ೧೯೪೬ರವರೆಗೆ ಅಧ್ಯಕ್ಷ ಗಾದಿಯನ್ನು ರಾಜಮನೆತನದವರಾದ ಎಂ. ಕಾಂತರಾಜೇ ಅರಸ್ ಅವರು ಅಲಂಕರಿಸಿದ್ದರು. ಈ ಅವಧಿಯಲ್ಲಿ ಚುನಾಯಿತ ಉಪಾಧ್ಯಕ್ಷರು ಪರಿಷತ್ತಿನ ಕಾರ್ಯಗಳನ್ನು ನಿರ್ವಹಿಸಬೇಕಾಯಿತು. ಆನಂತರ ಯುವರಾಜ ಕಂಠೀರವ ನರಸರಾಜ ಒಡೆಯರು, ಜಯಚಾಮರಾಜ ಒಡೆಯರು, ಒಂಟಿ ಮುರಿಯ ಬಸವಪ್ರಭು ರಾಜಾ ಲಖಮನಗೌಡರು ಅಧ್ಯಕ್ಷ ಪದವಿಯಲ್ಲಿದ್ದರು.

೧೯೨೦ರಲ್ಲಿ ಉಪಾಧ್ಯಕ್ಷರಾಗಿ ಚುನಾಯಿತರಾದ ಕರ್ಪೂರ ಶ್ರೀನಿವಾಸಾರವ್ ೧೯೩೩ರವರೆಗೆ ಮುಂದುವರೆದರು. ಪರಿಷತ್ತಿನ ಕಾರ್ಯಚಟುವಟಿಕೆಗಳು ವಿಸ್ತಾರಗೊಳ್ಳುತ್ತಿದ್ದಂತೆ ಅದಕ್ಕೊಂದು ಕಚೇರಿಯ ಅಗತ್ಯವಿರುವುದು ಮನವರಿಕಾಯಾಗಿ ೧೯೨೩ರಲ್ಲಿ ಶಂಕರಪುರದ ಮನೆಯೊಂದನ್ನು ಮೂವತ್ತು ರೂಪಾಯಿ ತಿಂಗಳ ಬಾಡಿಗೆಗೆ ಪಡೆಯಲಾಯಿತು. ಆಗ ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಆಸಕ್ತಿಯ ಫಲವಾಗಿ ಪ್ರಸ್ತುತ ಪ್ರಧಾನ ಕಚೇರಿ ಇರುವ ಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಉಚಿತವಾಗಿ ನಿವೇಶನ ಮಂಜೂರಾಯಿತು. ಈ ನಿವೇಶನದಲ್ಲಿ ಶ್ರೀಕೃಷ್ಣರಾಜ ಪರಿಷನ್ಮಂದಿರ ಕಟ್ಟಡ ನಿರ್ಮಿಸಲು ೧೯೩೧ರಲ್ಲಿ ಶಂಕುಸ್ಥಾಪನೆ ಮಾಡಿ, ಸಿದ್ಧಗೊಂಡ ಕಟ್ಟಡವನ್ನು ೧೯೩೩ರ ಮೇ ೨೯ರಂದು ಉದ್ಘಾಟಿಸಲಾಯಿತು. ಈ ಅವಧಿಯಲ್ಲಿ ಪರಿಷತ್ತಿನಿಂದ ಪಂಪ ಭಾರತ, ಪಂಪ ರಾಮಾಯಣ, ನಿಘಂಟುಗಳು, ಚಾವುಂಡರಾಯ ಪುರಾಣ, ಸೋಮೇಶ್ವರ ಶತಕ, ಶಬ್ದಮಣಿ ದರ್ಪಣ ಮೊದಲಾದ ಪ್ರಾಚೀನ ಕೃತಿಗಳನ್ನು ಪ್ರಕಟಿಸಲಾಯಿತು. ಪರಿಷತ್ತು ಕನ್ನಡ ಸಾಹಿತ್ಯದ ದಾಖಲೀಕರಣ ಹಾಗೂ ಪ್ರಸರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿ ಅದನ್ನು ಸಮರ್ಥವಾಗಿ ನಿರ್ವಹಿಸಿತು. ಈ ಕಾರ್ಯಗಳಿಗೆ ಹಣದ ಕೊರತೆ ಎದುರಾದಾಗ ಆಗಿನ ಮೈಸೂರು ಸರ್ಕಾರ ೧೯೨೮ನೇ ಸಾಲಿನಿಂದ ಪರಿಷತ್ತಿಗೆ ವಾರ್ಷಿಕ ೧೮೦೦ ರೂಪಾಯಿಗಳ ಅನುದಾನವನ್ನು ನೀಡಲು ಮುಂದಾಯಿತು.

ಡಿ.ವಿ. ಗುಂಡಪ್ಪನವರು ೧೯೩೩ರಲ್ಲಿ ಪರಿಷತ್ತಿನ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಅವಧಿಯಲ್ಲಿ ಪರಿಷತ್ತಿನ ವತಿಯಿಂದ ಪ್ರತಿವಾರ ಭಾಷಣ, ಕಾವ್ಯ ವಾಚನ ಕಾರ್ಯಕ್ರಮಗಳು ಆಯೋಜನೆಗೊಂಡವು. ಗಮಕ ತರಗತಿ, ವಸಂತ ಸಾಹಿತ್ಯೋತ್ಸವ, ಗ್ರಂಥ ಪ್ರದರ್ಶನ ಮೊದಲಾದವು ವಿಶಿಷ್ಟವಾಗಿ ರೂಪಿತವಾದವು. ಬಿ.ಎಂ. ಶ್ರೀಕಂಠಯ್ಯ ಅವರು ಪರಿಷತ್ತಿನ ಏಳಿಗೆಗೆ ಅಪಾರವಾಗಿ ದುಡಿದರು. ಇವರು ಉಪಾಧ್ಯಕ್ಷರಾದ ನಂತರ ಮಹಿಳಾ ಶಾಖೆ ಆರಂಭವಾಯಿತು. ಪರಿಷತ್ತಿನ ಲಾಂಛನ ಸಿದ್ಧಗೊಂಡಿತು. ಪುಸ್ತಕ ಪ್ರಕಟಣೆಗೆ ಸಹಕಾರಿಯಾಗಬೇಕೆಂದು ಮುದ್ರಣಾಲಯ ಸ್ಥಾಪಿಸಲಾಯಿತು. ಪರಿಷತ್ಪತ್ರಿಕೆಯ ಜೊತೆಗೆ ಕನ್ನಡ ನುಡಿ ವಾರಪತ್ರಿಕೆ ಆರಂಭವಾಯಿತು. ಅದರ ಪ್ರಥಮ ಸಂಪಾದಕರಾಗಿ ಅ.ನ. ಕೃಷ್ಣರಾಯರು ನಿಯುಕ್ತರಾದರು. ೧೯೩೮ ಅಕ್ಟೋಬರ್ ೪ರಂದು ಪ್ರಾರಂಭವಾದ ಕನ್ನಡ ನುಡಿ ವಾರಪತ್ರಿಕೆ ಹಣದ ಕೊರತೆ ಎದುರಾದಾಗ ಪಾಕ್ಷಿಕ ಪತ್ರಿಕೆಯಾಗಿ ಮಾರ್ಪಟ್ಟಿತು. ೧೯೯೧ರಲ್ಲಿ ಇದುವೇ ಮಾಸಪತ್ರಿಕೆಯಾಯಿತು. ಆರಂಭದಿಂದ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿಟ್ಟುಕೊಂಡಿದ್ದ ಪರಿಷತ್ತಿಗೆ ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರು ನಾಮಕರಣ ಮಾಡಲಾಯಿತು. ಕನ್ನಡ ಬಾವುಟ ಪುಸ್ತಕ ಪ್ರಕಟಣೆ, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳನ್ನು ಇವರ ಅವಧಿಯಲ್ಲಿ ಪ್ರಾರಂಭಿಸಲಾಯಿತು. ಈ ಪರೀಕ್ಷೆಗಳು ಕೆಲವು ಮಾರ್ಪಾಟುಗಳೊಡನೆ ಈಗಲೂ ಮುಂದುವರಿಯುತ್ತಿರುವುದು ಬಿ.ಎಂ.ಶ್ರೀ. ಅವರ ದೂರದೃಷ್ಟಿಯನ್ನು ತೋರಿಸುತ್ತವೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೪೩ರಲ್ಲಿ ಪರಿಷತ್ತಿನ ಉಪಾಧ್ಯಕ್ಷರಾದರು. ಪರಿಷತ್ತಿನ ಕಾರ್ಯಗಳು ವಿಕೇಂದ್ರೀಕರಣಗೊಳ್ಳಬೇಕೆಂದು ಮಾಸ್ತಿಯವರು ಮೈಸೂರು, ಉತ್ತರ ಕರ್ನಾಟಕ, ಹೈದರಾಬಾದು ಮತ್ತು ಮದರಾಸು ಪ್ರಾಂತ್ಯ ಸಮಿತಿಗಳನ್ನು ರಚಿಸಿದರು. ಅದರ ಪರಿಣಾಮವಾಗಿ ಪರಿಷತ್ತಿನ ಸದಸ್ಯ ಸಂಖ್ಯೆ ೧೫೦೦ಕ್ಕೆ ಏರಿತು. ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಶುಭಾಷಣ, ದೇವರನಾಮ, ಅಭಿನಯ, ಕಂಠಪಾಠ ಸ್ಪರ್ಧೆಗಳು ಏರ್ಪಾಟಾದವು. ಕರ್ನಾಟಕ ಏಕೀಕರಣ ಚಳವಳಿಗೆ ಈ ಅವಧಿಯಲ್ಲಿ ಒತ್ತು ನೀಡಲಾಯಿತು. ಕಚೇರಿಯ ಕಾರ್ಯ ನಿರ್ವಹಣೆಗಾಗಿ ದೂರವಾಣಿ ಸೌಲಭ್ಯ ಮಾಸ್ತಿಯವರ ಕಾಲದಲ್ಲಿ ಬಂತು. ೧೯೪೭ ಸೆಪ್ಟೆಂಬರ್ ೨೯ರಂದು ಕಾಸರಗೋಡಿನಲ್ಲಿ ನಡೆದ ಪರಿಷತ್ತಿನ ಸರ್ವ ಸದಸ್ಯರ ಸಭೆಯು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿದ ಪರಿಣಾಮವಾಗಿ ಉಪಾಧ್ಯಕ್ಷ ಸ್ಥಾನ ರದ್ದಾಯಿತು. ತಿ.ತಾ. ಶರ್ಮ ಪರಿಷತ್ತಿನ ಅಧ್ಯಕ್ಷರಾದರು. ೧೯೫೦ರಲ್ಲಿ ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಎಂ.ಆರ್. ಶ್ರೀ. ಪರಿಷತ್ತಿನ ಅಧ್ಯಕ್ಷರಾದಾಗ, ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷ ಎಂಬ ನಿಯಮ ಜಾರಿಗೆ ತರಲಾಯಿತು. ಈ ಅವಧಿಯಲ್ಲಿ ಪರಿಷತ್ತಿನ ಅಧ್ಯಕ್ಷರೇ ಕನ್ನಡ ನುಡಿ ಮತ್ತು ಪರಿಷತ್ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು.

ಎ.ಎನ್. ಮೂರ್ತಿರಾವ್ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಕೆಂಗಲ್ ಹನುಮಂತಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಅವರು ಸಾಹಿತ್ಯ, ಸಂಸ್ಕೃತಿ ಅಭಿವೃದ್ಧಿಗಾಗಿ ಒಂದು ಇಲಾಖೆಯನ್ನು ಸ್ಥಾಪಿಸಿದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣೆಗೆ ಉದಾರವಾಗಿ ಧನ ಸಹಾಯ ಮಾಡಿದರು. ೧೯೫೬ರಲ್ಲಿ ಬಿ. ಶಿವಮೂರ್ತಿ ಶಾಸ್ತ್ರೀ ಪರಿಷತ್ತಿನ ಅಧ್ಯಕ್ಷರಾದರು. ಕನ್ನಡ ರಾಜ್ಯೋದಯವಾದ ಹುರುಪಿನಲ್ಲಿ ರಾಜ್ಯಾದ್ಯಂತ ಓಡಾಡಿ ಗಡಿ ಭಾಗದ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇವರು ಪರಿಷತ್ತಿನ ನಿಬಂಧನೆಗಳನ್ನು ಕಿರುಹೊತ್ತಿಗೆಯ ರೂಪದಲ್ಲಿ ಪ್ರಕಟಿಸಿದರು. ಸಮಸ್ತ ಕನ್ನಡಿಗರು ಪರಿಷತ್ತಿನೊಡನೆ ನಿಕಟತೆಯನ್ನು ಪಡೆಯಬೇಕೆಂದು ಶಿವಮೂರ್ತಿ ಶಾಸ್ತ್ರಿ ಅವರು ಪ್ರಯತ್ನಶೀಲರಾದರು. ಪ್ರೊ. ಜಿ.ವೆಂಕಟಸುಬ್ಬಯ್ಯ ಅವರು ೧೯೬೪ರಲ್ಲಿ ಪರಿಷತ್ತಿನ ಅಧ್ಯಕ್ಷರಾದರು. ಸರ್ಕಾರದಿಂದ ಮೊದಲ ಬಾರಿಗೆ ೨೫ ಸಾವಿರ ರೂಪಾಯಿಗಳ ಅನುದಾನ ಪಡೆಯಲು ಸಫಲರಾದ ಜಿ.ವಿ. ಕಾರ್ಯಕಾರಿ ಸಮಿತಿಗೆ ಜಿಲ್ಲಾವಾರು ಪ್ರಾತಿನಿಧ್ಯವನ್ನು ತಂದರು. ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ, ಪತ್ರಕರ್ತರು, ಮಹಿಳೆಯರು ಕಾರ್ಯಕಾರಿ ಸಮಿತಿಗೆ ಸೇರುವಂತಾಯಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿ. ನಾರಾಯಣ ಅವರು ಅಧ್ಯಕ್ಷರಾದ ಮೇಲೆ ಹೊಸ ಆಯಾಮ ಬಂದಿತು. ಯೋಜನಾ ಬದ್ಧ ಕಾರ್ಯಗಳನ್ನು ಮಾಡುವಲ್ಲಿ ಅವರು ಆಸಕ್ತಿ ತೋರಿದರು. ಜೊತೆಗೆ ಕಾರ್ಯಪಡೆಗಳನ್ನು ಕಟ್ಟಿಕೊಂಡು ಅವುಗಳ ಅನುಷ್ಠಾನಕ್ಕೆ ಅವಿಶ್ರಾಂತವಾಗಿ ದುಡಿದರು. ಇವರ ಕಾಲಾವಧಿಯಲ್ಲಿ ಜಿಲ್ಲಾ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಆ ಮೂಲಕ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಿಜವಾದ ಅರ್ಥದಲ್ಲಿ ವ್ಯಾಪಕವಾಗಿ ಜನರೆಡೆಗೆ ಪರಿಷತ್ತು ಸಾಗುವಂತಾಯಿತು. ಪುಸ್ತಕಗಳ ಪ್ರಕಟಣೆ, ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣ, ಕನ್ನಡೇತರರಿಗೆ ಕನ್ನಡ ಕಲಿಯುವ ಸೌಲಭ್ಯ, ಹೊರನಾಡ ಕನ್ನಡ ಸಂಘಗಳಿಗೆ ಧನ ಸಹಾಯ, ಸಂಶೋಧನೆ ಹಾಗೂ ಸಾಹಿತ್ಯ ಕಮ್ಮಟಗಳು, ಸಾಕ್ಷರತಾ ಪ್ರಸಾರ ಮೊದಲಾದ ಹೊಸ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದರು. ಕನ್ನಡ ನಿಘಂಟಿನ ಬೃಹತ್ ಸಂಪುಟಗಳ ಎರಡು ಹಾಗೂ ಮೂರನೇ ಸಂಪುಟಗಳು, ಒಂದು ಲಕ್ಷ ಪದಗಳ ಸಂಕ್ಷಿಪ್ತ ನಿಘಂಟು ಕನ್ನಡ ರತ್ನಕೋಶಗಳು ಹೊರಬರಲು ಜಿ. ನಾರಾಯಣ ಅವರು ಕಾರಣಕರ್ತರಾದರು. ಸರ್ವಜ್ಞ ಕವಿಸ್ಮರಣೆ, ಮಹಿಳಾ ವರ್ಷಾಚರಣೆ, ಜನಪದ ಕಲೆಗಳ ಸಂರಕ್ಷಣೆಗೆ ವಿವಿಧ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರ ಮತ್ತು ಧ್ವನಿಸುರುಳಿಗಳ ಭಂಡಾರ ಸ್ಥಾಪನೆ ಹಸ್ತಪ್ರತಿಗಳು ಮತ್ತು ಸಾಂಸ್ಕೃತಿಕ ವಸ್ತು ಸಂಗ್ರಹಾಲಯ, ಶಾಸನ ಶಾಸ್ತ್ರ ತರಗತಿಗಳ ಆರಂಭ, ದತ್ತಿನಿಧಿಗಳ ಸ್ಥಾಪನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದು ಕರೆದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸಮ್ಮೇಳನವನ್ನು ಸಂಘಟಿಸಿದ್ದು ಇತಿಹಾಸ.

ಜಿ. ನಾರಾಯಣ ಅವರ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಹಂ.ಪ.ನಾಗರಾಜಯ್ಯ ಅವರು ೧೯೭೮ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕಗೊಂಡರು. ಇವರ ಅವಧಿಯಲ್ಲೂ ಪರಿಷತ್ತು ಅತ್ಯಂತ ಕ್ರಿಯಾಶ್ರೀಲವಾಗಿತ್ತು. ಪುಸ್ತಕ ಪ್ರಕಟಣೆಗೆ ಹೆಚ್ಚು ಒತ್ತು ನೀಡಿದ ಹಂಪನಾ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿ ದಾಖಲೆ ನಿರ್ಮಿಸಿದರು. ಹೊಸ ತಲೆಮಾರಿನ ಲೇಖಕರನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಂಪನಿಂದ ಮೊದಲುಗೊಂಡು ಆಧುನಿಕ ಕವಿಗಳವರೆಗೆ ಮೂವತ್ತು ಮಹನೀಯರ ವಿಚಾರ ಸಂಕಿರಣಗಳನ್ನು ಕವಿಗಳ ಹುಟ್ಟೂರಿನಲ್ಲೇ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಏಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾಲ್ಕು ಮಹಿಳಾ ಸಾಹಿತ್ಯ ಸಮ್ಮೇಳನ, ವ್ಯಂಗ್ಯ ಚಿತ್ರಕಾರರ ಸಮ್ಮೇಳನ, ಗಮಕ ಸಮ್ಮೇಳನ, ಶೀಘ್ರಲಿಪಿ ಮತ್ತು ಬೆರಳಚ್ಚುಗಾರರ ಸಮ್ಮೇಳನ, ಜಾನಪದ ಮೇಳಗಳ ಆಯೋಜನೆ ಹಾಗೂ ಹತ್ತು ದಿನಗಳ ಗೀತ ಸಂಧ್ಯಾ ಎಂಬ ವಿನೂತನ ಕಾರ್ಯಕ್ರಮ ಸರಣಿಯನ್ನು ನಡೆಸಿದವರು ಹಂಪನಾ. ಕನ್ನಡ ಜಾನಪದ ವಿಶ್ವಕೋಶವನ್ನು ಪ್ರಕಟಿಸಿದ್ದಲ್ಲದೆ ಅಲಕ್ಷ್ಯಕ್ಕೆ ಒಳಗಾಗಿದ್ದ ಸಂಶೋಧನಾ ಕ್ಷೇತ್ರಕ್ಕೆ ಉತ್ತೇಜನ ತುಂಬುವ ಉದ್ದೇಶದಿಂದ ಮೊದಲ ಬಾರಿಗೆ ಪಿಎಚ್ ಡಿ ಮಹಾ ಪ್ರಬಂಧಗಳನ್ನು ಮುದ್ರಿಸಿ ಪ್ರಕಟಿಸಿದರು. ಕನ್ನಡೇತರರಿಗೆ ಕನ್ನಡ ತರಗತಿಗಳು ಆರಂಭವಾದವು. ಪರಿಷತ್ತಿನ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಅಮೃತನಿಧಿ ಹಾಗೂ ದತ್ತಿ ನಿಧಿ ಸಂಗ್ರಹದ ಕಡೆಗೆ ಹೆಚ್ಚಿನ ಗಮನ ಹರಿಸಲಾಯಿತು. ಸದಾ ಪಾದರಸದಂತೆ ಓಡಾಡಿಕೊಂಡು ಹಿರಿಯರ - ಕಿರಿಯರನ್ನು ಒಂದು ಗೂಡಿಸುವ ಮೂಲಕ ಪರಿಷತ್ತಿನ ಏಳಿಗೆಗೆ ದುಡಿದ ಹಂಪನಾ ಸೌಜನ್ಯಕ್ಕೆ ಹಸರಾಗಿದ್ದರು.

೧೯೮೬ರಲ್ಲಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಎಚ್.ಬಿ. ಜ್ವಾಲನಯ್ಯ ಅವರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಡೆಗೆ ಗಮನ ಹರಿಸಿದರು. ಕನ್ನಡ ಕಾವಾ ಪರೀಕ್ಷೆಯ ಜೊತೆಗೆ ಕನ್ನಡ ಪ್ರವೇಶ ಪರೀಕ್ಷೆಯನ್ನು ಇವರು ಹೊಸದಾಗಿ ಜಾರಿಗೊಳಿಸಿದರು. ಗಮಕ ಚಕ್ರ ಎಂಬ ವಿಶಿಷ್ಟವಾದ ಕಾರ್ಯಕ್ರವನ್ನು ಅನುಷ್ಠಾನಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಅ.ರಾ. ಚಂದ್ರಹಾಸಗುಪ್ತ ಅವರು ೧೯೮೭ರಲ್ಲಿ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. ಇವರು ಪರಿಷತ್ತಿನ ಆಡಳಿತದಲ್ಲಿ ಕಡತಗಳನ್ನು ಸುವ್ಯವಸ್ಥಿತವಾಗಿ ಇಡುವಂತೆ ನೋಡಿಕೊಂಡಿದ್ದಲ್ಲದೆ ಕಚೇರಿಯ ವಾತಾವರಣ ನಿರ್ಮಾಣ ಮಾಡಿದರು. ಐ.ಎಂ. ವಿಠ್ಠಲ ಮೂರ್ತಿ ಅವರು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದಾಗ ೧೯೮೮ ಮಾರ್ಚ್ ೩೦ರಂದು ಪರಿಷತ್ತಿನ ಆಡಳಿತಾಧಿಕಾರಿಯಾದರು. ಇವರು ಪರಿಷತ್ತಿನ ನಿಬಂಧನೆಗಳಿಗೆ ತಿದ್ದುಪಡಿ ತಂದರು. ನಂತರ ನಡೆದ ಚುನಾವಣೆಯಲ್ಲಿ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಅವರು ೧೯೮೯ ಫೆಬ್ರವರಿ ೨ರಂದು ಅಧ್ಯಕ್ಷರಾಗಿ ನಿಯುಕ್ತರಾದರು. ಸ್ವತಃ ಕವಿಗಳೂ ಆದ ಇವರು ರಾಜ್ಯೋತ್ಸವ ಕವಿಗೋಷ್ಠಿ ಹಾಗೂ ಯುಗಾದಿ ಕವಿಗೋಷ್ಠಿಗಳನ್ನು ವ್ಯವಸ್ಥೆಗೊಳಿಸಿದರು. ಇವರ ಅವಧಿಯಲ್ಲಿ ಪರಿಷತ್ತಿಗೆ ಪ್ರತ್ಯೇಕ ಧ್ವಜ ರಚನೆಯಾಯಿತು. ಕಾವ್ಯ ಕಮ್ಮಟಗಳ ಆಯೋಜನೆ, ಬಂಡಾಯ ಸಾಹಿತ್ಯ ಸಮಾವೇಶ, ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಶೋಧನಾ ಗೋಷ್ಠಿಗಳು, ಸಾಹಿತ್ಯ ಸಂವಾದ ಕಾರ್ಯಕ್ರಮಗಳು, ಕಾವ್ಯ ಕಾವೇರಿ ಕಾರ್ಯಕ್ರಮಗಳು ಅಮತ ಮಹೋತ್ಸವ ಸಮಾರಂಭ, ರಾಷ್ಟ್ರೀಯ ಕವಿಗೋಷ್ಠಿಯ ಸಂಘಟನೆ ಮೊದಲಾದವುಗಳನ್ನು ವ್ಯವಸ್ಥಿತವಾಗಿ ನಡೆಸಿದ್ದು ಇವರ ಸಾಧನೆಯಾಯಿತು.

ಸಿದ್ದಲಿಂಗಯ್ಯ ಅವರ ಅವಧಿಯಲ್ಲಿ ಗೌರವ ಕಾರ್ಯದರ್ಶಿಗಳಾಗಿದ್ದ ಗೊ.ರು. ಚನ್ನಬಸಪ್ಪ ಅವರು ೧೯೯೨ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಚುನಾಯಿತರಾದರು. ಪರಿಷತ್ತಿಗೆ ತಮ್ಮಿಂದ ಕೈಲಾದಷ್ಟು ಸೇವೆ ಮಾಡಬೇಕೆಂಬ ಹಂಬಲದಿಂದ ಸದಾ ಕ್ರಿಯಾಶೀಲತೆಯಿಂದ ದುಡಿಯುತ್ತಿದ್ದ ಅವರು ಆರ್ಥಿಕವಾಗಿ ಪರಿಷತ್ತಿಗೆ ಶಕ್ತಿ ತುಂಬಲು ಪ್ರಯತ್ನಿಸಿದರು. ಒಬ್ಬ ಕನ್ನಡಿಗ ಒಂದು ರೂಪಾಯಿ ಘೋಷಣೆಯೊಡನೆ ಅಮೃತನಿಧಿಗೆ ಹಣ ಸಂಗ್ರಹಿಸಲು ಮುಂದಡಿಯಿಟ್ಟರು. ಇಪ್ಪತ್ತೈದು ಲಕ್ಷ ರೂಪಾಯಿ ಸಂಗ್ರಹಿಸುವಲ್ಲಿ ಸಫಲರಾದರು. ಇದಲ್ಲದೆ ದತ್ತಿ ನಿಧಿಗೆ ಇಪ್ಪತ್ತನಾಲ್ಕು ಲಕ್ಷ ರೂಪಾಯಿಗಳನ್ನು ತಮ್ಮ ಅವಧಿಯಲ್ಲಿ ಕ್ರೋಡೀಕರಿಸಿದರು. ಆಡಳಿತದಲ್ಲಿ ಆಧುನಿಕ ಯಂತ್ರಗಳ ಬಳಕೆ ಪ್ರಯತ್ನ, ಸಮ್ಮೇಳನಗಳಲ್ಲಿ ಗೀತ ಸಂಗೀತ ಮೊದಲಾದ ವೈವಿಧ್ಯಮಯ ಗೋಷ್ಠಿಗಳ ಆಯೋಜನೆ, ಹಚ್ಚೇವು ಕನ್ನಡದ ದೀಪ, ಹಾರಿಸಿ ಏರಿಸಿ ಕನ್ನಡದ ಬಾವುಟ ಧ್ವನಿಸುರುಳಿಗಳ ನಿರ್ಮಾಣ, ಸಂಶೋಧನಾ ಕೇಂದ್ರ ಸ್ಥಾಪನೆ, ಸಾಹಿತ್ಯ ಕಮ್ಮಟಗಳು ಹಾಗೂ ಕಾವ್ಯ ಕಾವೇರಿ ಮೊದಲಾದ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂಬ ಹಂಬಲ ಇಟ್ಟುಕೊಂಡಿದ್ದ ಗೊ.ರು.ಚ. ಜಿಲ್ಲಾ ಕ.ಸಾ.ಪ.ಗಳಿಗೆ ಆರ್ಥಿಕ ನೆರವು ನೀಡುವ ಆಲೋಚನೆಯನ್ನು ಸಾಕಾರಗೊಳಿಸಿದರು. ತಾಲೂಕು ಘಟಕಗಳ ಅಧ್ಯಕ್ಷರನ್ನು ಸರ್ವ ಸದಸ್ಯರ ಸಭೆಯಲ್ಲಿ ಒಂದೆಡೆ ಸೇರಿಸಿ, ಅವರ ತೊಂದರೆಗಳನ್ನು ಆಲಿಸುವ ಕಡೆಗೂ ಗಮನ ನೀಡುತ್ತಿದ್ದರು.

ಹಿರಿಯ ಕವಿ ಸಾ.ಶಿ. ಮರುಳಯ್ಯ ಅವರು ೧೯೯೫ ಜೂನ್ ೧೮ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಆದಾಯದ ಪ್ರಧಾನ ಭಾಗ ಸಿಬ್ಬಂದಿ ಸಂಬಳಕ್ಕೆ ಹೋಗುತ್ತಿದ್ದು, ಇದರ ಹೊಣೆಯನ್ನು ಕಡಿಮೆ ಮಾಡಲು ಸರ್ಕಾರ ಸಿಬ್ಬಂದಿಯನ್ನು ಅನುದಾನಕ್ಕೆ ಒಳಪಡಿಸಬೇಕೆಂದು ಆಗಾಗ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದರು. ಅದು ಸಾಕಾರಗೊಂಡಿದ್ದು ಎಚ್.ಡಿ.ದೇವೇಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ. ಅವರು ರಾಷ್ಟ್ರದ ಪ್ರಧಾನಿಯಾಗಿ ದೆಹಲಿಗೆ ಹೋಗುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಯನ್ನು ಅನುದಾನಕ್ಕೆ ಒಳಪಡಿಸುವ ಕಡತಕ್ಕೆ ಸಹಿಹಾಕುವ ಐತಿಹಾಸಿಕ ತೀರ್ಮಾನ ಕೈಗೊಂಡರು. ಸಾ.ಶಿ.ಮರುಳಯ್ಯ ಅವರ ಅವಧಿಯಲ್ಲಿ ಈ ಕಾರ್ಯ ನೆರವೇರಿದ್ದು ವಿಶೇಷ. ಕನ್ನಡ ಸಾಹಿತ್ಯ ಪರಿಷತ್ತಿಗೆ ಕಂಪ್ಯೂಟರ್ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ೧೯೪೪ರಲ್ಲಿ ಆರಂಭವಾಗಿದ್ದ ಕನ್ನಡ - ಕನ್ನಡ ನಿಘಂಟು ಯೋಜನೆ ಪೂರ್ಣಗೊಂಡು ೮ನೆಯ ಸಂಪುಟ ಬಿಡುಗಡೆಯಾದದ್ದು ಇವರ ಕಾಲದಲ್ಲೇ. ಇದರ ಜೊತೆಗೆ ಅವಳಿ ಪಡೆನುಡಿ ಕೋಶಗಳೂ ಹೊರಬಂದವು. ಕನ್ನಡಾಂಬೆಯ ತೈಲವರ್ಣಚಿತ್ರ ರಚನೆಯಾಗಿ ಪ್ರಚಾರಗೊಂಡಿದ್ದು, ವರನಟ ಡಾ.ರಾಜ್ ಕುಮಾರ್ ಅವರು ಪರಿಷತ್ತಿನಲ್ಲಿ ಒಂದು ಲಕ್ಷ ರೂಪಾಯಿ ದತ್ತಿ ಇಟ್ಟಿದ್ದು ಇವರ ಅವಧಿಯಲ್ಲಿ ಎಂಬುದು ಗಮನಾರ್ಹ ಸಂಗತಿ.

ಎನ್. ಬಸವಾರಾಧ್ಯ ಅವರು ೧೯೯೮ರಲ್ಲಿ ಪರಿಷತ್ತಿನ ಅಧ್ಯಕ್ಷರಾದರು. ಇವರ ಕಾಲದಲ್ಲಿ ಬಿ.ಎಂ.ಶ್ರೀ ಅಚ್ಚುಕೂಟವು ಹೊಸ ಜಾಗಕ್ಕೆ ಸ್ಥಳಾಂತರವಾದುದಲ್ಲದೆ ಆಧುನಿಕ ಯಂತ್ರಗಳು ಬಂದವು. ಬಾಡಿಗೆಯ ಮೂಲಕ ಪರಿಷತ್ತಿನ ಆದಾಯವನ್ನು ಹೆಚ್ಚು ಮಾಡಲು ಪ್ರಯತ್ನ ನಡೆಸಿದ ಬಸವಾರಾಧ್ಯ ಅವರು ಆಗ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಸಂಪರ್ಕಿಸಿ ನಿಘಂಟು ಯೋಜನೆಗೆ ಒಂದು ಕೋಟಿ ರೂಪಾಯಿ ಅನುದಾನ ಪಡೆದರು. ಅದನ್ನು ಬಳಸಲು ಅವರಿಗೆ ಸಾಧ್ಯವಾಗಲಿಲ್ಲ. ಕಾರಣ ಆ ವೇಳೆಗೆ ಚುನಾವಣೆ ಬಂದು ಬಸವಾರಾಧ್ಯರ ಅಧಿಕಾರಾವಧಿ ಮುಕ್ತಾಯಗೊಂಡಿತು.

ಹರಿಕೃಷ್ಣ ಪುನರೂರು ಅವರು ಜುಲೈ ೧೧, ೨೦೦೧ರಂದು ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಾರ್ಯಕರ್ತರಂತೆ ಸದಾ ಬಿರುನಡಿಗೆಯಲ್ಲಿ ಓಡಾಡಿಕೊಂಡು ಪರಿಷತ್ತಿನ ಸಿಬ್ಬಂದಿಯಲ್ಲಿ ಹುರುಪು ಮೂಡಿಸುತ್ತಿದ್ದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಉಚಿತವಾಗಿ ಸಂಚರಿಸುವಂತೆ ಬಸ್ ಪಾಸ್ ದೊರಕಿಸಿಕೊಟ್ಟರು. ಇವರ ಅವಧಿಯಲ್ಲಿ ನಿಘಂಟು ಮತ್ತಿತರ ೩೩೦ ಕೃತಿಗಳು ಮುದ್ರಣವಾದವು. ಪಂಪ ಸಭಾಂಗಣವನ್ನು ರೂಪಿಸಿ ಅದರಿಂದ ಪರಿಷತ್ತಿಗೆ ಆದಾಯ ಬರುವಂತೆ ನೋಡಿಕೊಂಡರು. ಕನ್ನಡದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರು ಹಾಗೂ ಕನ್ನಡದಲ್ಲಿ ಪಿಎಚ್ ಡಿ ಪದವಿ ಪಡೆದವರಿಗೆ ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸುವುದನ್ನು ರೂಢಿಗೆ ತಂದರು. ಪರಿಷತ್ತಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇವರೂ ಪ್ರಯತ್ನಶೀಲರಾದರು. ಪ್ರೊ. ಚಂದ್ರಶೇಖರ ಪಾಟೀಲ ಅವರು ೨೦೦೪ ನವೆಂಬರ್ ೨ರಂದು ಪರಿಷತ್ತಿಗೆ ಅಧ್ಯಕ್ಷರಾದರು. ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ, ನೆಲ - ಜಲ, ಗಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕೆಂದು ಪ್ರತಿಪಾದಿಸಿದ ಚಂಪಾ ಅವರು ಎಲ್ಲಾ ಪ್ರಮುಖ ಹೋರಾಟಕ್ಕೂ ಪರಿಷತ್ತು ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದರು. ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧದ ಹೋರಾಟವನ್ನು ಅವರೇ ರೂಪಿಸಿದರು. ಪುಸ್ತಕ ಪ್ರಕಾಶಕರು, ಲೇಖಕರು, ಮಾರಾಟಗಾರರ ನಡುವೆ ಸಮನ್ವಯವನ್ನು ತರುವ ಸಲುವಾಗಿ ಪುಸ್ತಕ ಸಂತೆ ಜಾರಿಗೊಳಿಸಿದರು. ಪುಸ್ತಕ ನಿಧಿಯನ್ನು ಆರಂಭಿಸಿ ಸಾವಿರಾರು ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ, ಗಡಿ ಭಾಗದ ಶಾಲೆಗಳಿಗೆ ಅವನ್ನು ವಿತರಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವನ್ನು ನೀಡಬೇಕೆಂಬ ಹೋರಾಟ, ಪರಿಷತ್ತಿಗೆ ಪ್ರತ್ಯೇಕ ಅಂತರ್ಜಾಲ ತಾಣ ರೂಪುಗೊಂಡಿದ್ದು ಮತ್ತು ವಿದ್ಯುನ್ಮಾನ ಅಂಚೆಯ ಸೌಲಭ್ಯ ದೊರೆತಿದ್ದು ಇವರ ಅವಧಿಯಲ್ಲೇ. ಇವರು ಅಧ್ಯಕ್ಷರಾಗಿದ್ದಾಗ ಶ್ರೀಕೃಷ್ಣರಾಜ ಪರಿಷನ್ಮಂದಿರದ ನವೀಕರಣಕ್ಕೆ ಒಂದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತು.

ಪರಿಷತ್ತಿನ ಇಪ್ಪತ್ತ ಮೂರನೇ ಅಧ್ಯಕ್ಷರಾಗಿ ೨೦೦೮ರ ಆಗಸ್ಟ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಡಾ. ನಲ್ಲೂರು ಪ್ರಸಾದ್ ಅವರು, ತಮ್ಮ ಅವಿರತ ಶ್ರಮದಿಂದಾಗಿ ಕೇವಲ ಒಂದು ವರ್ಷದಲ್ಲೇ ಅಸಾಧಾರಣ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಹಿಂದಿನ ಅಧ್ಯಕ್ಷರು ಪರಿಷತ್ತಿನ ಆರ್ಥಿಕ ಸ್ಥಿತಿಯ ಸುಧಾರಣೆಗೆ ಮಾಡಿದ ಪ್ರಯತ್ನಗಳು ಬಿಡಿಬಿಡಿಯಾಗಿದ್ದವು. ನಲ್ಲೂರು ಪ್ರಸಾದ್ ಅವರು ಮಾಡಿದ ಪ್ರಯತ್ನ ಇಡಿಯಾದದ್ದು. ಪರಿಷತ್ತಿನ ಆದಾಯ ಮೂಲ ವಿಸ್ತರಿಸುವ ಉದ್ದೇಶದಿಂದ ಕುವೆಂಪು ಸಭಾಂಗಣ ರೂಪಾಸಿದ ಅವರು, ಕರ್ನಾಟಕ ಸರ್ಕಾರದೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ಅಧಿಕ ಅನುದಾನ, ಆರ್ಥಿಕ ನೆರವು ತರುವಲ್ಲಿ ಯಶಸ್ವಿಯಾದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆಗೆ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಗೆ ತಲಾ ಒಂದು ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿದರು. ಹಣ ಬಿಡುಗಡೆಯನ್ನೂ ಮಾಡಿಸಿದರು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ತಲಾ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಿಸುವಲ್ಲಿ ನಲ್ಲೂರು ಪ್ರಸಾದ್ ಅವರ ಶ್ರಮ ಹಿರಿದಾದದ್ದು. ಈಗ ತಾಲೂಕು ಸಾಹಿತ್ಯ ಸಮ್ಮೇಳನಗಳಿಗೂ ತಲಾ ಒಂದು ಲಕ್ಷ ರೂಪಾಯಿ ನೀಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಪರಿಷತ್ತಿನ ಸಿಬ್ಬಂದಿಯ ಸಂಬಳಕ್ಕಾಗಿ ಹೆಚ್ಚುವರಿಯಾಗಿ ೨೬ಲಕ್ಷ ರೂಪಾಯಿಗಳು, ನಾಲ್ಕು ವಲಯ ಸಮ್ಮೇಳನಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹೀಗೆ ೪ ಕೋಟಿಗೂ ಅಧಿಕ ಹಣ ಒಂದು ವರ್ಷದ ಅವಧಿಯಲ್ಲಿ ಪರಿಷತ್ತಿಗೆ ಬರುವಂತೆ ಮಾಡಿ ದಾಖಲೆಯ ಸಾಧನೆಗೈದರು. ಕನ್ನಡ ಸಾಹಿತ್ಯ ಮುಖವಾಣಿ ಕನ್ನಡ ನುಡಿ ಪತ್ರಿಕೆಗೆ ಕೋ.ವೆಂ.ರಾಮಕೃಷ್ಣೇಗೌಡ ಅವರನ್ನು ಸಂಪಾದಕರನ್ನಾಗಿ ಮಾಡಿ, ಅದು ಸುಂದರವಾಗಿ ಮೂಡಿ ಬರುವಂತೆ ಮಾಡಿದರು. ಕನ್ನಡ ನಿಧಿಗೆ ಆರು ತಿಂಗಳಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದು, ೬೫ ಸಾವಿರವಿದ್ದ ಸದಸ್ಯತ್ವದ ಸಂಖ್ಯಯನ್ನು ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೆ ಏರಿಸಿದ್ದು ಹಳ್ಳಿಗಳೆಡೆಗೆ ಪರಿಷತ್ತಿನ ನಡಿಗೆ ಎಂಬ ಘೋಷಣೆಯೊಂದಿಗೆ ಗ್ರಾಮಸಿರಿ ಕಾರ್ಯಕ್ರಮ ರೂಪಿಸಿದ್ದು, ರಾಜ್ಯದ ೪ ಕಂದಾಯ ವಿಭಾಗಳಲ್ಲಿ ಅಂದರೆ ಧಾರವಾಡದಲ್ಲಿ ಯುವ ಸಾಹಿತ್ಯ ಸಮಾವೇಶ, ಗುಲ್ಬರ್ಗಾದಲ್ಲಿ ಜಾನಪದ ಸಾಹಿತ್ಯ ಸಮಾವೇಶ, ಹಾಸನದಲ್ಲಿ ಮಕ್ಕಳ ಸಾಹಿತ್ಯ ಸಮಾವೇಶ ಹಾಗೂ ರಾಮನಗರದಲ್ಲಿ ಮಹಿಳಾ ಸಾಹಿತ್ಯ ಸಮಾವೇಶ ಹೀಗೆ ೪ ವಲಯ ಸಾಹಿತ್ಯ ಸಮಾವೇಶ ಏರ್ಪಡಿಸಿದ್ದು ನಲ್ಲೂರು ಪ್ರಸಾದ್ ಅವರ ಹೆಗ್ಗಳಿಕೆ. ಪುಸ್ತಕಗಳ ಗುಣಮಟ್ಟವನ್ನು ಉತ್ತಮ ಪಡಿಸಿದ್ದು ನಲ್ಲೂರು ಪ್ರಸಾದ್ ಅವರ ಸಾಧನೆಯಾಗಿದೆ. ಈಗ ಶತಮಾನದ ಹೊಸ್ತಿಲಲ್ಲಿರುವ ಕನ್ನಡಿಗರ ಬಹುದೊಡ್ಡ ಸಂಸ್ಥೆಯಾದ ಕನ್ನಡ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಅವರು ಚುನಾಯಿತರಾಗಿದ್ದಾರೆ. ಇವರು ಪರಿಷತ್ತಿನ 24ನೆಯ ಅಧ್ಯಕ್ಷರು. ಇವೆಲ್ಲವೂ ಕನ್ನಡ ಸಾಹಿತ್ಯ ಪರಿಷತ್ತಿನ ಹೆಜ್ಜೆ ಗುರುತುಗಳಾಗಿವೆ .

ಮೂಲ : ಕನ್ನಡ ಸಾಹಿತ್ಯ ಪರಿಷತ್ತು

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate