ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ಸಮಾಜಿಕ ಅರಿವು / ಸಮಾಜದಲ್ಲಿ ಮರೆಯಾದ ಸಹಜ ನಗು ಆರೋಗ್ಯಪೂರಕ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಮಾಜದಲ್ಲಿ ಮರೆಯಾದ ಸಹಜ ನಗು ಆರೋಗ್ಯಪೂರಕ

‘ನಗು’ ಹೇಳುವುದಕ್ಕೆ ಎಷ್ಟೊಂದು ಚೈತನ್ಯಯುಕ್ತ ಪದ. ಪ್ರಕೃತಿದತ್ತವಾಗಿ ದೊರೆತಿರುವ ಒಂದು ಸಹಜ ಕ್ರಿಯೆ. ಒಂದು ಸವಿಯಾದ-ಹಿತವಾದ ಅನುಭವವೇ ನಗು. ಮಾನವನ ಅಕರ್ಷಣೀಯ ಹಾಗೂ ಉತ್ತಮ ಮುಖ ಲಕ್ಷಣ ಹೊರ ಹೊಮ್ಮುವುದು ನಗುವಿನಿಂದಾಗಿ.

ಸಮಾಜದಲ್ಲಿ ಮರೆಯಾದ ಸಹಜ ನಗು ಆರೋಗ್ಯಪೂರಕ

ನಗುವು ಸಹಜ ಧರ್ಮ. ನಗಿಸುವುದು ಪರಧರ್ಮ

ನಗುವ ಕೇಳುತ ನ್ಗುವುದತಿಶಯದ ಧರ್ಮ.

ನಗುವ ನಗಿಸುವ ನಗಿಸಿ ಬಾಳುವ ವರವ

ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ.

 

ಅಂದರೆ ಡಿ.ವಿ.ಜಿ ಯವರ ಅಭಿಪ್ರಾಯದಂತೆ “ ಮಾನವನಿ ನಗುವೊಂದು ಸಹಜ ಧರ್ಮ. ಅನ್ಯರನ್ನು ನಗಿಸುವುದು ಪರಧರ್ಮ. ನಗುವನ್ನು ಕೇಳಿ ನಗುವುದು ಅತಿಶಯ ಧರ್ಮ. ಆದುದರಿಂದ ದೇವರಲ್ಲಿ ನಗುವ, ನಗಿಸುವ, ನಗಿಸಿ, ನಗುತ ಬಾಳುವವರನ್ನು ನೀನು ಬೇಡಿಕೊ”.

ನಗು ಹೇಳುವುದಕ್ಕೆ ಎಷ್ಟೊಂದು ಚೈತನ್ಯಯುಕ್ತ ಪದ. ಪ್ರಕೃತಿದತ್ತವಾಗಿ ದೊರೆತಿರುವ ಒಂದು ಸಹಜ ಕ್ರಿಯೆ. ಒಂದು ಸವಿಯಾದ-ಹಿತವಾದ ಅನುಭವವೇ ನಗು. ಮಾನವನ ಅಕರ್ಷಣೀಯ ಹಾಗೂ ಉತ್ತಮ ಮುಖ ಲಕ್ಷಣ ಹೊರ ಹೊಮ್ಮುವುದು ನಗುವಿನಿಂದಾಗಿ. ಬದುಕಿನ “ಜೀವಸೆಲೆ” ನಗುವಿನಲ್ಲಿದೆ. ನಗುವಿನ ಹೊನಲಿಲ್ಲದ ಬದುಕು ಬೆಂಗಾಡಿನಂತೆ. ಸಾಮಾನ್ಯವಾಗಿ ಹೆಣ್ಣು ಧರಿಸುವ ಅಭರಣಗಳಲ್ಲಿ ಪ್ರಕಾಶಮಾನವಾಗಿ ಕಾಣದನ್ನು ಅವಳ ಮುಖದಲ್ಲಿ ಮೂಡುವ ಮುಗುಳ್ನಗೆಯಲ್ಲಿ ಕಾಣಬಹುದು. ಇದು ಅವಳ ಸೌಂದರ್ಯವನ್ನು ದುಪ್ಪಟ್ಟು ವೃದ್ದಿಸುತ್ತದೆ. ಸುಖ-ದುಃಖ, ನೋವು-ನಲಿವು ಜೀವನದ ಸಹಜ ಕ್ರಿಯೆಗಳನ್ನು ನಿಭಾಯಿಸಿಕೊಂಡು ನಗಬಲ್ಲವರು ಭೂಮಿಯಲ್ಲಿಯೇ ಸ್ವರ್ಗವನ್ನು ನಿರ್ಮಿಸಬಲ್ಲ ಶಕ್ತಿಯನ್ನು ಹೊಂದಿದವರಾಗಿರುತ್ತಾರೆ.

ನಗುವು ಸಂಜೀವಿನಿ ಹಾಗೆ ಸದಾ ಜೀವಂತವಾಗಿರುವ ಕ್ರಿಯೆ. ವೈದ್ಯಕೀಯವಾಗಿ ಅದಕ್ಕೆ ಅದರದ್ದೇ ಪ್ರಾಮುಖ್ಯತೆಯಿದ್ದು, ಎಂತಹ ಪರಿಸ್ಥಿತಿಯಲ್ಲೂ ಮನತುಂಬಿ ನಕ್ಕಾಗ ಎಲ್ಲ ನೋವುಗಳು ಮರೆಯಾಗುವುದು ಸಾಧ್ಯವಾದುದನ್ನು ಗುರ್ತಿಸಬಹುದು. ನಗು ಅಳು ಒಂದೇ ನಾಣ್ಯದ ಎರಡು ಮುಖ. ಒಂದರ ಹಿಂದೆ ಒಂದು ಇದ್ದೇ ಇರುತ್ತದೆ. ಅತಿಯಾದ ಸಂತೋಷವಾದಾಗ ನಗುವಿನ ಜೊತೆಯಲ್ಲಿಯೇ ಅಳು ಸಹ ಬರುತ್ತದೆ. ಅದನ್ನು ಸಂತೋಷದ ಅಳು ಎಂದು ಕರೆಯುವಷ್ಟರಮಟ್ಟಿಗೆ ನಗು ಪ್ರಭಾವಿತವಾದುದು. ತಮಾಷೆ ಮಾಡುವಾಗ, ಚರ್ಚೆ ಮಾಡುವಾಗ, ಏನನ್ನೋ ನೆನೆಸಿಕೊಂಡಾಗ, ವಿಚಿತ್ರವಾದ ಮುಖಚರ್ಯೆಯನ್ನು ನೋಡಿದಾಗ ನಗುವು ತನಗೆ ತಾನೇ ಹೊರ ಹೊಮ್ಮುತ್ತದೆ. ಅಲ್ಲದೆ ವ್ಯಕ್ತಿಯಿಂದಿ ವ್ಯಕ್ತಿಗೆ ನಗುವ ವಿಚಾರ ಹಾಗೂ ನಗುವಿನ ಸ್ವರೂಪಗಳು ವಿಭಿನ್ನವಾಗಿರಬಹುದು.

ಪ್ರತಿಯೊಬ್ಬರಿಗೂ ಸಂತೋಷವಾದಾಗ ಅವರ ಮುಖದ ಮೇಲೆ ಸಹಜವಾಗಿಯೇ ನಗು ಪ್ರಕಟಗೊಳ್ಳುತ್ತದೆ. ವೈಜ್ಞಾನಿಕವಾಗಿ ನಗುವಿನಿಂದಲೇ ಆರೋಗ್ಯ ಉತ್ತಮಗೊಳ್ಳುತ್ತದೆ ಎಂಬುದು ಅಕ್ಷರಶಃ ಸತ್ಯವಾದುದು. ಮಹಾನ್ ಚೇತನಗಳು, ಜ್ಞಾನಿಗಳಂತೂ ಸಾವನ್ನು ಕೂಡ ನಗುನಗುತ ಬರಮಾಡಿಕೊಳ್ಳುತ್ತಾ ಆದರ್ಶಪ್ರಾಯರಾದರು ಎಂಬುದು ಅವರ ಜೀವನ ಚರಿತ್ರೆಯಿಂದ ತಿಳಿದು ಬಂದಿದೆ. ಅಲ್ಲದೆ ಹಿರಿಯರು ಹೇಳುತ್ತಿದ್ದರು “ನಗು ನಗುತಾ ಮಾಡುವ ಕೆಲಸ ಯಶಸ್ಸು ಸಾಧಿಸುವುದು” ಎಂದು. ಅಂದರೆ ನಗುವಿನ ಹಿರಿಮೆ-ಮಹಿಮೆ ಅಂತಹದ್ದಿದೆ. ಎಷ್ಟೆ ಕಷ್ಟಕರವಾದ  ಅಸಾಧ್ಯವಾದ ಕಾರ್ಯಗಳು ನಗುವಿನ ಮೂಲಕ ಸಾಧಿತಗೊಂಡಿವೆ. ಇಂತಹ ನಗು ಇಂದು ಮರೆಯಾಗಿ, ಹಾಸ್ಯಕೂಟಗಳಲ್ಲಿ, ಉಧ್ಯಾನವನಗಳಲ್ಲಿ ಮಾತ್ರ ಕಾಣುವಂತಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಕೆಲಸದ ಒತ್ತಡ, ಸಮಯದ ಅಭಾವ, ಕುಟುಂಬ ವ್ಯವಸ್ಥೆಯ ಬದಲಾವಣೆ, ವೃತ್ತಿ ಜೀವನ ಮೊದಲಾದವುಗಳಿಂದಾಗಿ ಜನರು ಒಂದು ಕಡೆ ಸೇರಲು ಮಾತನಾಡಲು ನಗಲು ಪರಿತಪಿಸುವಂತಾಗಿದೆ.

ಇದಕ್ಕೆ ಕಾರಣವೇನು? ಕಾರಣರಾರು? ಸ್ವತಃ ನಾವೇ? ನಮ್ಮ ಜೀವನ ಶೈಲಿಯೇ? ಅಥವಾ ನಮ್ಮ ಸುತ್ತ ಮುತ್ತಲಿನ ಪರಿಸರವೇ? ಎಂಬುದು ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸಿದೆ. ಮನುಷ್ಯನಿಂದ ಅವನ ಪ್ರಯತ್ನದಿಂದ ಮಾತ್ರ ಸಹಜಕ್ರಿಯೆಯಾದ ನಗುವು ನಮ್ಮ ಜೀವನದಲ್ಲಿ ತನ್ನ ಸಹಜ ಪ್ರವೃತ್ತಿಯನ್ನು, ಸ್ಥಾನವನ್ನು ಪಡೆಯಬಹುದು. ಹಾಗಂತ ತಮ್ಮನ್ನೇ ಬದಲಾಯಿಸಿಕೊಳ್ಳಿ ಎಂದಲ್ಲ!. ತಮ್ಮ ದಿನಚರಿಯನ್ನು ಕಾರ್ಯ ವೈಖರಿಯನ್ನು, ಇಷ್ಟೊಂದು ಒತ್ತಡಯುಕ್ತವಾಗಿ ಜಟಿಲಗೊಳಿಸಿಕೊಳ್ಳದೆ, ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಸಹಜೀಕರಿಸಿಕೊಂಡಾಗ ಮಾತ್ರ ನಮ್ಮಿಂದ ನಗುವಿನ ಸಹಜ ಪ್ರವೃತ್ತಿಯನ್ನು ತರಬಹುದು. ಈ ರೀತಿಯಾದಾಗ ನಗೆ ಕೂಟ, ಉಧ್ಯಾನವನಗಳಲ್ಲಿ ಕಾಣುವ ಕೃತಕ ನಗುವನ್ನು ಸಹಜ ನಗುವಾಗಿ ನಮ್ಮ ಸುತ್ತ ಮುತ್ತ ಕಾಣಲು ಸಾಧ್ಯ ಎಂಬುದೇ ನನ್ನ ಅಭಿಮತ.

ಕೊನೆಯಲ್ಲಿ ಈ ಚಿಕ್ಕ ನಗೆ ಹನಿಯಿಂದ ಸಹಜ ನಗುವನ್ನು ತಮ್ಮಲ್ಲಿ ತರುವ ಮೂಲಕ ನನ್ನ ವಿಚಾರ ವಿನಿಮಯಿಕೆಯನ್ನು ಪೂರ್ಣಗೊಳಿಸುತ್ತೇನೆ.

೧.ಟೀಚರ್ : ಕೋಲಾರದಲ್ಲಿ ಚಿನ್ನದ ಗಣಿ ಇದೆ. ಕುದುರೆ ಮುಖದಲ್ಲಿ ಏನಿದೆ ಹೇಳು?

ಗುಂಡ : ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಇದೆ. ನೀವು ಕುದುರೆಮುಖ ನೋಡಿಲ್ವಾ ಮಿಸ್

೨. ಸರ್ದಾಜಿ ಮನೆಯ ಪ್ಲಗ್ ನಲ್ಲಿ ಹೊಗೆ ಬರ್ತಾ ಇತ್ತು. ಸರ್ದಾಜಿ ಸಿಟ್ಟಿನಿಂದ ಕೆಇಬಿಗೆ ಫೋನ್ ಮಾಡಿ

ದಬಾಯಿಸಿದ…. “ಯಾರ್ರಿ ಅದು ಆಫೀಸಿನಲ್ಲಿ, ಸಿಗರೇಟ್ ಸೇದಿ ನಮ್ಮ ಮನೆ ಪ್ಲಗ್ ನಲ್ಲಿ ಹೊಗೆ ಬಿಡ್ತಿರೋದು?

2.96875
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top