ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ಸಮಾಜಿಕ ಅರಿವು / ಸರ್ವರಿಗೂ ಸಮಪಾಲು-ಸಮಬಾಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸರ್ವರಿಗೂ ಸಮಪಾಲು-ಸಮಬಾಳು

ಸರ್ವರಿಗೂ ಸಮಪಾಲು-ಸಮಬಾಳು ಎಂಬ ತತ್ವಾಧಾರಿತ ಸಮಾಜ ನಿರ್ಮಾಣ ಒಂದು ಕನಸು ಮಾತ್ರವೇ?

“ಸರ್ವೇಜನಃ ಸುಖಿನೋಭವಂತು” ಎಂಬ ಕಲ್ಪನೆಯಂತು ಕಣ್ಣಿಗೆ ಕಾಣದಂತೆ, ಕಿವಿಗಳಿಗೆ ಕೇಳದಂತೆ ಮಾಯವಾಗಿಬಿಟ್ಟಿದೆ ಎಂದೆನಿಸುತ್ತದೆ!. ಹೀಗೆನ್ನಲು ಸೂಕ್ತ ಕಾರಣವಿದೆ. ಇತ್ತೀಚೆಗಿನ ವಿದ್ಯಾಮಾನಗಳನ್ನು ಗಮನಿಸಿದರೆ ಸಮಾಜದಲ್ಲಿ ಸ್ವಾರ್ಥಿಗಳು, ಕಾಮಿಗಳು, ಕೊಲೆಗಡುಕರು, ಅಧರ್ಮಿಗಳು, ಪಾತಕಿಗಳು, ಪೊಳ್ಳುವಾದಿಗಳು, ವ್ಯಭಿಚಾರಿಗಳು, ದೇಶದ್ರೋಹಿಗಳು, ಸಮಾಜಘಾತುಕರು, ದರೋಡೆಕೋರರು, ಮೋಸಗಾರರು ಹೂಗೊಂಚಲನ್ನು ಕೆಡಿಸುವ ಹುಳುಹುಪ್ಪಟೆಗಳಂತೆ ಹೆಚ್ಚಾಗುತ್ತಿರುವುದಂತು ಅಕ್ಷರಶಃ ಸತ್ಯ. ಹೀಗೆ ಒಂದು ಸಮಾಜವನ್ನು ಅಶಾಂತಿಯೆಡೆಗೆ ಹಾದಿತಪ್ಪಿಸುವ ಭಂಡುಕೋರರ ಗುಂಪು ವೃದ್ಧಿಸುತ್ತಿದ್ದರೆ ಸರ್ವಜನತೆಯ ಸುಖದ ಕಲ್ಪನೆಯನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಎಂಬ ಪ್ರಶ್ನೆ ಚಿಂತನಶೀಲರಲ್ಲಿ ಮೂಡುವುದು ಸಹಜ. ಇಂತಹ ಸನ್ನಿವೇಶದಲ್ಲಿ ಸರ್ವರಿಗೂ ಸಮಪಾಲು-ಸಮಬಾಳು ಎಂಬ ತತ್ವವಂತೂ ಉಸಿರಿಲ್ಲದೆ ಅಡಗಿಕೊಳ್ಳುತ್ತದೆ.

ದೇಶವನ್ನು, ನಾಡನ್ನು ಪ್ರಗತಿಪಥದೆಡೆಗೆ ಸಾಗಿಸಬೇಕೆಂದು ಮಹಾನ್ ಚೇತನ ಮಹಾತ್ಮ ಗಾಂಧೀ ಕಂಡಿದ್ದ ಕನಸಿನ ಸಸಿ ಚಿಗುರೊಡೆಯುವ ಮೊದಲೇ ಮುದುಡಿಹೋಗುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಭೂತಾಯಿಯ ಒಡಲಿನಲ್ಲಿರುವ ಸಕಲ ಜೀವಿಗಳೂ ಸಮಬಾಳ್ವೆಗೆ ಅರ್ಹರೆಂಬ ಧ್ಯೇಯವಾಕ್ಯಗಳು ಪುರಾಣಗ್ರಂಥಗಳಲ್ಲಿ ಉಲ್ಲೇಖಿತಗೊಂಡಿವೆ. ಆದರೆ ಈ ಧ್ಯೇಯ ಸಾಧನೆಗೆಂದು ಮುನ್ನುಗ್ಗುವ ಚೇತನಗಳು ಮರೆಯಾಗಿವೆ. ಅವರ ಬದಲಾಗಿ ’ತಾನೊಬ್ಬನೆ, ತನಗೊಬ್ಬನಿಗೇ’ ಎಂಬ ದುಸ್ವಾರ್ಥಿಗಳು ಸಮಾಜದಲ್ಲಿ ತಲೆ ಎತ್ತುತ್ತಿದ್ದಾರೆ!. ಬೇರೊಬ್ಬರ ಜೀವಕ್ಕೆ ಬೆಲೆಗೊಡದ ಕೊಲೆಪಾತಕಿಗಳು ರಾರಾಜಿಸುತ್ತಿದ್ದಾರೆ!. ಪರರ ಭಾವನೆಗಳನ್ನು ಗೌರವಿಸದ ಮೋಸಗಾರರು ವಿಜೃಂಭಿಸುತ್ತಿದ್ದಾರೆ. ಸರ್ಕಾರವನ್ನು ಲೆಕ್ಕಿಸದ, ಸರ್ಕಾರಕ್ಕೆ ದ್ರೋಹಬಗೆಯುವ, ಬಡವ ಬಾಳಿನೊಂದಿಗೆ ಚೆಲ್ಲಾಟವಾಡುವ ಭ್ರಷ್ಟಾಚಾರಿಗಳು ಉದ್ಭವಿಸುತ್ತಿದ್ದಾರೆ.

ಸ್ತ್ರೀಕುಲಕೆ ಹಾನಿಯನ್ನುಂಟು ಮಾಡುತ್ತಿರುವ ಕಾಮಿಗಳು ವೃದ್ದಿಸುತ್ತಿದ್ದಾರೆ. ಈ ಎಲ್ಲಾ ದುಷ್ಕರ್ಮಿಗಳ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉತ್ತಮ ಸಮಾಜ ನಿರ್ಮಾಣದ ತಳಹದಿಯ ತತ್ವವಾದ ಸರ್ವರಿಗೂ ಸಮಬಾಳು ಎಂಬುದೊಂದು ಕನಸಾಗುತ್ತಿರುವುದಂತೂ ನಿಜ. ಹೀಗಿರುವಾಗ ಸರ್ವರಿಗೂ ಸಮಪಾಲಿನ ಬಗ್ಗೆ ಚಿಂತಿಸುವುದಾದರೆ, ಸಮಪಾಲು ಸಿಗುವುದು ಸಂಪತ್ತಿನ ಸುಖ-ಶಾಂತಿಗಳ, ಸೌಹಾರ್ದತೆಯ, ದುಃಖ ದುಮ್ಮಾನಗಳ, ಗೌರವ-ಸನ್ಮಾನಗಳ, ನಿಂದನೆ-ಅವಮಾನಗಳ, ಸ್ಥರ-ಅಂತರಗಳ, ಸ್ಥಾನ-ಮಾನಗಳ, ಅಧಿಕಾರ-ಅರ್ಹತೆಗಳ, ಹಕ್ಕು-ಕರ್ತವ್ಯಗಳ, ಸಿಹಿ-ಕಹಿಗಳ ಏಕರೂಪದ ಹಂಚಿಕೆಯಿಂದ ಮಾತ್ರ ಸಾಧ್ಯ.

ಸಮಪಾಲು ಎಂದಾಗ ನಮ್ಮ ಚಿಂತನೆಯು ಕೇವಲ ಸಂಪತ್ತಿಗಷ್ಟೇ ಸೀಮಿತವಾಗಿರಬಾರದು. “ಕಲ್ಯಾಣ ರಾಜ್ಯ”ದ ಕಲ್ಪನೆ ಇರುವ ನಿಷ್ಟಾವಂತನೊಬ್ಬ ನಾಯಕತ್ವ ವಹಿಸಿ ’ಸಮಪಾಲಿನ’ ತತ್ವವನ್ನು ಸಮಾಜದಲ್ಲಿ ಅಳವಡಿಸಲು ಯತ್ನಿಸುತ್ತಾನೆ ಎಂದಾದರೆ, ಶ್ರೀಮಂತನು ಅನುಭವಿಸುವ ಸುಖ-ಶಾಂತಿಗಳು ಬಡವರಲ್ಲಿ ಹಂಚಿಕೆಯಾಗಬೇಕು. ಅಧಿಕಾರಿಯೊಬ್ಬನಿಗೆ ನೀಡಲಾಗುವ ಗೌರವ-ಸನ್ಮಾನಗಳು ಆಳಾಗಿ ದುಡಿಯುವ ಕಾರ್ಮಿಕನಿಗೂ ನೀಡಬೇಕು, ಪ್ರಬಲನೊಬ್ಬನು ಅನುಭವಿಸುವ ಹಕ್ಕು-ಅರ್ಹತೆಗಳು ದುರ್ಬಲನಿಗೂ ಸಿಗಬೇಕು. ಹೀಗಾದಲ್ಲಿ ’ಸಮಪಾಲಿನ’ ತತ್ವ ಸ್ವಲ್ಪ ಮಟ್ಟಿಗೆ ಅರ್ಥ ಪಡೆಯುತ್ತದೆ. ಆದರೆ ಹೀಗೆ ಇಂತಹ ಸನ್ನಿವೇಶಗಳನ್ನು ಸಾಕಾರಗೊಳಿಸುವುದು ಎಷ್ಟರ ಮಟ್ಟಿಗೆ ಸಾಧ್ಯ? ಇಂತಹ ಪ್ರಶ್ನೆಗಳು ವಿಚಾರವಂತರಲ್ಲಿ ಖಂಡಿತವಾಗಿಯೂ ಚರ್ಚೆಗೆ ದಾರಿಮಾಡಿಕೊಡುತ್ತದೆ. ಆ ಚರ್ಚೆಯಿಂದ ಸಮಸ್ಯೆಗೆ ಸಮಾಧಾನ ಸಿಗಬೇಕಾದುದರ ಅಗತ್ಯವಿದೆ. ಒಂದು ಸಾಮಾನ್ಯ ವಾಕ್ಯವಾದ ‘we expect everything permanent for this impermanent world!’ ಅಂದರೆ ’ಅಶಾಶ್ವತವಾದ ಈ ಜೀವನದಲ್ಲಿ ನಾವು ನಿರೀಕ್ಷಿಸುವುದೆಲ್ಲ ಶಾಶ್ವತವಾದದ್ದು’ ಎಂದರ್ಥ.

ಸಮಬಾಳು-ಸಮಪಾಲು ತತ್ವದ ಆಚರಣೆ ಕೊಂಚ ಕಷ್ಟ ಸಾಧ್ಯ. ಆದರೆ ಅಸಾಧ್ಯವೇನಂತು ಅಲ್ಲ. ಸಮಪಾಲು-ಸಮಬಾಳು ಎಂಬ ಧ್ಯೇಯದ ಕಾರ್ಯಾಚರಣೆಗೆ ವಿದ್ಯಾವಂತರ, ವಿಚಾರವಂತರ, ವಿವೇಕಯುತ ಜನರ, ಚಿಂತನಶೀಲರ, ಗಾಂಧೀವಾದಿಗಳ, ಉತ್ತಮ ಸಮಾಜನಾಯಕರ ಶ್ರಮ ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗಿದೆ. ಬುದ್ದಿಜೀವಿಗಳನ್ನು ಬಳಸಿಕೊಂಡು ಬುದ್ದಿಹೀನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಶ್ರಮದಾಯಕ ನಿಜ. ಆದರೆ ಖಂಡಿತ ಸಾಧ್ಯವೆಂಬುದಂತು ಅಕ್ಷರಶಃ ಸತ್ಯ!. ಈ ನಿಟ್ಟಿನಲ್ಲಿ ಹೇಳುವುದಾದರೆ “ಯಾದುದೂ ಅಸಾಧ್ಯವಲ್ಲ. ಅಸಾಧ್ಯ ಎಂಬ ಪದದಲ್ಲೇ ಅದು ಸಾಧ್ಯ ಎಂಬುದು ಸೇರಿಕೊಂಡಿರುವು”.

3.03225806452
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top