অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸುವರ್ಣ ಕರ್ನಾಟಕ

ಸುವರ್ಣ ಕರ್ನಾಟಕ

ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ೧೯೫೬ ರಲ್ಲಿ ಇದೇ ದಿನ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಇದರ ಸಂಕ್ಷಿಪ್ತ ಇತಿಹಾಸವನ್ನು ತಿಳಿದಿರುವುದು ಅವಶ್ಯಕ.

ಚಾರಿತ್ರಿಕವಾಗಿ ಕನ್ನಡ ಮಾತನಾಡುವ ಪ್ರದೇಶ ದಕ್ಷಿಣದ ಕಾವೇರಿಯಿಂದ ಗೋದಾವರಿಯವರೆಗೆ ಹರಡಿತ್ತೆಂದು ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕವಿರಾಜ ಮಾರ್ಗ ಎಂಬ ಗ್ರಂಥದಿಂದ ತಿಳಿದು ಬರುತ್ತದೆ. ಅನಂತರ ವಿವಿಧ ರಾಜವಂಶಸ್ಥರು ಈ ಪ್ರದೇಶವನ್ನು ಆಳಿದರು. ಅವರಲ್ಲಿ ಯದುವಂಶದ ಮೈಸೂರಿನ ಒಡೆಯರ್ ವಂಶಸ್ಥರೂ ಸೇರಿದ್ದಾರೆ. ೧೭೬೬ ರಲ್ಲಿ ಟಿಪ್ಪುವಿನ ಮರಣಾನಂತರ ಹಿಂದಿನ ಮೈಸೂರು ರಾಜ್ಯವನ್ನು ವಿಭಜಿಸಿ ಹೈದರಾಬಾದಿನ ನಿಜಾಮರೂ ಮಹಾರಾಷ್ಟ್ರದ ಪೇಶ್ವೆಗಳೂ, ಬ್ರಿಟಿಷರೂ ಹಂಚಿಕೊಂಡು ಉಳಿದ ಭಾಗವನ್ನು ಮೈಸೂರು ಒಡೆಯರ ವಂಶದವರಿಗೆ ಬಿಟ್ಟುಕೊಡಲಾಯಿತು. ಅವರು ೧೯೪೭ ರ ವರೆಗೆ ಈ ಪ್ರದೇಶವನ್ನು ಆಳಿದರು.ಈಗಲೂ ಹೈದರಾಬಾದ್ ಕರ್ನಾಟಕ,ಮುಂಬೈ ಕರ್ನಾಟಕ ಎಂದು ಕರೆಯುತ್ತಿರುವುದಕ್ಕೆ ಅಂದು ನಡೆದ ಚಾರಿತ್ರಿಕ  ವಿಭಜನೆಯೇ ಕಾರಣವೆಂದು ಹೇಳಬಹುದು.

ರಾಜಕೀಯವಾಗಿ ಕರ್ನಾಟಕ ರಾಜ್ಯ ವಿಂಗಡನೆಯಾಗಿದ್ದರೂ ಒಂದು ಭಾಷೆ ಒಂದು ರಾಜ್ಯವೆಂಬ ಭಾವನೆ ಅಳಿಯಲಿಲ್ಲ. ಅದು ಉಳಿದುಕೊಂಡೆ ಇತ್ತು. ಅದೇ ಭಾವನೆಯನ್ನು ಪ್ರೋತ್ಸಾಹಿಸಲು ಅನೇಕ ಚಳುವಳಿಗಳು ನಡೆದವು. ಆಲೂರು ವೆಂಕಟರಾಯರು ಹರಿದು ಹಂಚಿಹೋಗಿರುವ ಕನ್ನಡ ನಾಡಿನ ಏಕೀಕರಣಕ್ಕಾಗಿ ಅನೇಕ ಸಮ್ಮೇಳನಗಳನ್ನು ನಡೆಸಿ ಹೋರಾಟ ಪ್ರಾರಂಬಿಸಿದರು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣ ರಾಯರು 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂಬ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದರು. ಆದರೆ ಅನೇಕ ಬಗೆಯ ರಾಜಕೀಯ ಭಿನ್ನಮತದ ಕಾರಣಕ್ಕಾಗಿ ಕರ್ನಾಟಕದ ಏಕೀಕರಣ ಕಾರ್ಯ ತಡವಾಯಿತು.

ಭಾರತ ಸರ್ಕಾರ ಕನ್ನಡ ರಾಜ್ಯ ರಚನೆಗಾಗಿ ಅವಶ್ಯಕ ಆಯೋಗಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾಗಿ ಧರ್ ಆಯೋಗ, ವಾಂಛೂ ಸಮಿತಿ, ಫಜಲ್ ಅಲಿ ಸಮಿತಿಗಳನ್ನು ನೇಮಿಸಿ ಈ ವಿಷಯವಾಗಿ ವರದಿಯನ್ನು ತರಿಸಿಕೊಂಡಿತು. ಕೊನೆಗೆ ೧೯೫೬ ನವೆಂಬರ್ ಒಂದರಂದು ಹಳೆಯ ಮೈಸೂರಿನ ಭಾಗದೊಂದಿಗೆ ಕನ್ನಡ ಮಾತನಾಡುವ ಮುಂಬೈ ಪ್ರದೇಶ, ಹೈದರಾಬಾದ್, ಮದ್ರಾಸ್ ಮತ್ತು ಕೇರಳ ರಾಜ್ಯಗಳ ಕನ್ನಡ ಮಾತನಾಡುವ ಜನರಿರುವ ಭೂ ಪ್ರದೇಶವನ್ನು ಒಟ್ಟುಗೂಡಿಸಿ ರಾಜ್ಯವನ್ನು ರಚಿಸಿತು. ಇದಕ್ಕೆ ಮೈಸೂರು ರಾಜ್ಯವೆಂಬ ಹೆಸರೇ ಮುಂದುವರೆಯಿತು. ಆದರೆ ಹೊಸದಾಗಿ ಸೇರಿದ ಪ್ರದೇಶದವರು ಮೈಸೂರು ಹೆಸರನ್ನು ಇಷ್ಟಪಡಲಿಲ್ಲ. ಪರಿಣಾಮವಾಗಿ ೧೯೭೩ರ ನವೆಂಬರ್ ೧ ರಂದು 'ಕರ್ನಾಟಕ' ಎಂದು ಹೆಸರಿಡಲಾಯಿತು.

೨೦೦೬ರಲ್ಲಿ ಕರ್ನಾಟಕ ರಾಜ್ಯ ರಚನೆಯಾಗಿ ಐವತ್ತು ವರ್ಷಗಳು ತುಂಬಿದ್ದರಿಂದ ಸರ್ಕಾರವು ೨೦೦೬ರ ನವೆಂಬರ್ ಒಂದರಿಂದ ೨೦೦೭ರ ನವೆಂಬರ್ ಒಂದರವರೆಗೆ 'ಸುವರ್ಣ ಕರ್ನಾಟಕ' ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಬೌಗೋಳಿಕವಾಗಿ ಕನ್ನಡ ಭಾಷೆಯ ಜನರೆಲ್ಲಾ ಒಂದುಗೂಡಿದರೂ ಭಾಷೆ ಮಾತ್ರ ಸಾಕಷ್ಟು ಅಭಿವೃದ್ದಿಯಾಗುತ್ತಿಲ್ಲ. ಆರ್ಥಿಕವಾಗಿಯೂ ಸಮಾನತೆ ಕಂಡಿಲ್ಲ. ಇವೆರಡರ ಅಭಿವೃದ್ದಿಯಾಗಿ ಜನರು ನೆಮ್ಮದಿಯಿಂದ, ಪರಸ್ಪರ ಸ್ನೇಹದಿಂದ ಬದುಕಬೇಕಾಗಿದೆ. ಇದರ ಜವಾಬ್ದಾರಿ ಇಂದಿನ ಯುವ ಜನರಿಗೆ ಸೇರಿದೆ.

ಸುವರ್ಣ ಕರ್ನಾಟಕದ ಈ ಶುಭ ಸಮಯದಲ್ಲಿ ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಅವುಗಳಲ್ಲಿ ಮುಖ್ಯವಾಗಿ ನೆಲ, ಜಲ, ಭಾಷೆ, ಸಂಸ್ಕೃತಿಗೆ ಸಂಭಂದಿಸಿದ ಸಮಸ್ಯೆಗಳು ಬಗೆಹರಿಯದೆ ಉಳಿದುಕೊಂಡಿವೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಬಗೆ ಹರಿದಿಲ್ಲ. ತಮಿಳುನಾಡಿನೊಂದಿಗೆ ಕಾವೇರಿ ಜಲ ವಿವಾದ ಇನ್ನು ಬಗೆಹರಿದಿಲ್ಲ. ಕೃಷ್ಣಾ ನದಿಯ ನೀರಿನ ವಿಷಯದಲ್ಲಿ ಸಮಸ್ಯೆ ಹಾಗೆಯೇ ಮುಂದುವರೆಯುತ್ತಿದೆ. ಕನ್ನಡ ಭಾಷೆಯನ್ನು ಉಳಿಸಿಕೊಂಡು ಹೋಗಲು ಹೆಣಗಾದಬೇಕಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಪಯೋಗಿಸಿ ಎಂದು ಬೇಡಿಕೊಳ್ಳುವ ಸ್ಥಿತಿ ಬಂದಿದೆ. ಇಂಗ್ಲಿಷ್ ಭಾಷೆಯ ಪ್ರಭಾವವೂ ಸೇರಿ ಕನ್ನಡ ಭಾಷೆಗೆ ಆಪತ್ತು ಬರುವಂತಿದೆ. ಇವೆಲ್ಲಾ ಸಮಸ್ಯೆಗಳನ್ನು ಇಂದಿನ ಯುವಕರು ಎದುರಿಸಬೇಕಾಗಿದೆ.

ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ ಎನ್ನುತ್ತಾರೆ. ಆದರೆ ಮೇಲೆ ತಿಳಿಸಿರುವ ಸಮಸ್ಯೆಗಳಿಗೆ ಪರಿಹಾರ ಕಾಣುವುದು ಅತ್ಯಂತ ಕಠಿಣವೆನಿಸುತ್ತಿದೆ. ಸುವರ್ಣ ಕರ್ನಾಟಕ ದಿನಾಚರಣೆ ಮುಗಿದುಹೋಗುತ್ತದೆ.ವಜ್ರ ಮಹೋತ್ಸವದ ವೇಳೆಗಾದರೂ ಈ ಸಮಸ್ಯೆಗಳಲ್ಲಿ ಕೆಲವಾದರೂ ಬಗೆಹರಿದು, ಪರಿಹಾರ ಸಿಕ್ಕಿದರೆ, ನಮ್ಮ ಯುವಜನತೆಗೆ ಅದರ ಯಶಸ್ಸು ಸಿಕ್ಕಿದಂತೆ ಎಂದು ಭಾವಿಸೋಣ. ಈ ದಿಸೆಯಲ್ಲಿ ನಮ್ಮ ಯುವಪೀಳಿಗೆ ಶ್ರಮಿಸುವ ಮನಸ್ಸು ಮಾಡಲಿ.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate