ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ದ್ರಾವಣ

ಕೇರಳದ ಹಲವೆಡೆಯ ಕೃಷಿಕರು ಈ ಉತ್ಪನ್ನವನ್ನು ಸ್ವೀಕರಿಸಿದ್ದಾರೆ. ಎಲ್ಲೆಡೆ ಒಳ್ಳೆ ಅಭಿಪ್ರಾಯ ಕೇಳಿಬಂದಿದೆ.

ಕಾಡುಹಂದಿಗೆ ತಡೆಯಾಜ್ಞೆ ಕೊಡುವ ದ್ರಾವಣ

ಹೈದರಾಬಾದಿನ ಖಾಸಗಿ ಕಂಪನಿ ದಶಕದ ಹಿಂದೆ ಮಾರುಕಟ್ಟೆಗೆ ತಂದ ಕಾಡುಹಂದಿ ಮತ್ತು ದಂಶಕ ಪ್ರಾಣಿಗಳನ್ನು ದೂರವಿಡುವ ದ್ರಾವಣ ಕೇರಳದಲ್ಲಿ ಜನಪ್ರಿಯವಾಗುತ್ತಿದೆ. ಇಕೋಡಾನ್ ಎಂಬ ಹೆಸರಿನ ಈ ಉತ್ಪನ್ನವನ್ನು ಹೈಗ್ರೋ ಫ್ಲೋರಿಸ್ ಕೆಮಿಕಲ್ ಪ್ರೈ. ಲಿ. ತಯಾರಿಸುತ್ತಿದೆ.ಹರಳು (ಕ್ಯಾಸ್ಟರ್) ಮುಖ್ಯ ಘಟಕವಾಗಿರುವ ಈ ತಯಾರಿ ಈಚೆಗೆ ಗ್ರಾನ್ಯೂಲ್ ರೂಪದಲ್ಲೂ ಸಿಗುತ್ತಿದೆ. ಒಮ್ಮೆ ಪ್ರಯೋಗಿಸಿದರೆ ಒಂದು ತಿಂಗಳ ಕಾಲ ಇದು ರಕ್ಷಣೆ ಕೊಡುತ್ತದೆ ಎನ್ನುತ್ತದೆ ಕಂಪನಿ. ವಾಸನೆಯ ಬಲದಿಂದ ಪ್ರಾಣಿಗಳನ್ನು ದೂರೀಕರಿಸುವ ಒಳಸುರಿಯಾದ ಕಾರಣ ಮಳೆ ಬಂದರೆ ಪರಿಣಾಮ ಕಮ್ಮಿ. ಇದರಲ್ಲಿ ವಿಷಕಾರಿ ಘಟಕಗಳಿಲ್ಲ - ಹಾಗಾಗಿ ಹ್ಯಾಂಡಲ್ ಮಾಡುವವರಿಗೂ ಹಾನಿಯಿಲ್ಲ ಎನ್ನುವುದು ಕಂಪನಿಯ ಮಾಹಿತಿ.ದ್ರಾವಣಕ್ಕೆ ಎರಡು ಪಟ್ಟು ನೀರು ಸೇರಿಸಿ ಸೆಣಬಿನ ಹಗ್ಗವನ್ನು ಅದರಲ್ಲಿ ನೆನೆಹಾಕಬೇಕು.

ರಾತ್ರಿಯಿಡೀ ನೆನೆಸಬೇಕು. ಮರುದಿನ ತೋಟ/ ಹೊಲದ ಸುತ್ತಲೂ ಗೂಟ ಹೊಡೆದು ಈ ಹಗ್ಗದ ಎರಡು ಸಾಲನ್ನು ಅದಕ್ಕೆ ಕಟ್ಟಬೇಕು. ಮೊದಲನೆ ಸಾಲು ನೆಲದಿಂದ ಸುಮಾರು ಒಂದಡಿ ಎತ್ತರವಿರಲಿ. ಎರಡನೆಯದಕ್ಕೆ ಒಂದಡಿ ಅಂತರ ಕೊಡಿ.ಬೇಸಿಗೆಯಲ್ಲಾದರೆ ಮಳೆ ಸುರಿದರೆ ಮರುದಿನವೇ ಈ ಹಗ್ಗಕ್ಕೆ ಅದೇ ದ್ರಾವಣದ ಸಿಂಪಡಣೆ ಮಾಡಿ ರಕ್ಷಣೆ ಪಡೆದುಕೊಳ್ಳಬಹುದು. ಮಳೆಗಾಲವಾದರೆ ಕಷ್ಟ.’ ಅಂಥ ಕಾಲದಲ್ಲಿ ಇಕೋಡಾನ್ ಹರಳನ್ನು ಹಾಕಿದರೆ ಪ್ರಯೋಜನ ಆಗುತ್ತದೆ’ ಎನ್ನುತ್ತಾರೆ ಕಂಪೆನಿ ಮಾಲಿಕ  ಆರ್. ರಾಮಮೋಹನ್.  ಆದರೂ  ಮಲೆನಾಡುಗಳಲ್ಲಿ ಮಳೆಗಾಲದಲ್ಲಿ ಕಷ್ಟವೇನೋ.ಕೇರಳದ ಮಲಪ್ಪುರಮ್ ಜಿಲ್ಲೆಯ ತವನೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಇಕೋಡಾನನ್ನು ದೊಡ್ಡ ರೀತಿಯಲ್ಲಿ ಪ್ರಯೋಗಿಸಿ ನೋಡಿದೆ. ಅಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ. ಬೆರಿನ್ ಪತ್ರೋಸ್ ಇದರ ಯಶಸ್ಸಿನ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾರೆ. ಇವರು ಈ ದ್ರಾವಣ ಉಪಯೋಗಿಸತೊಡಗಿದ್ದು ಮೂರು ವರ್ಷ ಹಿಂದೆ. 1 : 3 ಅನುಪಾತದಲ್ಲಿ ದ್ರಾವಣವನ್ನು ತೆಳ್ಳಗಾಗಿಸಿದ್ದಾರೆ.“ಕಳೆದ ಸಾಲಿನಲ್ಲಿ ನಮ್ಮ ಮೂರು ಪಂಚಾಯತುಗಳ - ಚುಂಗತ್ತರ, ಮೂತೇಡಮ್ ಮತ್ತು ತ್ರಿಕ್ಕಡವ್ - ಸುಮಾರು ಅರುವತ್ತು ರೈತರಲ್ಲಿ ಇದನ್ನು ಪ್ರಯೋಗಿಸಿದ್ದೇವೆ. ಎಲ್ಲೆಡೆ ಅದು ಕೆಲಸ ಮಾಡಿದೆ.

ಹಗ್ಗ ಕಟ್ಟಿ ಹದಿನೈದು ದಿನಕ್ಕೊಮ್ಮೆ ಅದಕ್ಕೆ ಸ್ಪ್ರೇ ಕೊಡಬೇಕು ಎನ್ನುತ್ತಾರೆ. ಇದನ್ನು ಪಾಲಿಸದ, ಹಗ್ಗ ಕಡಿದುಹೋದ   ಮತ್ತು   ಮಳೆ  ಬಂದ  ಕಾರಣಗಳಿಂದಾಗಿ ಕೆಲವೆಡೆ ಫಲಕಾರಿ ಆಗಿಲ್ಲ” ಎನ್ನುತ್ತಾರೆ ಇವರು.“ಒಂದು ಲೀಟರ್ ಇಕೋಡಾನ್ ಕ್ಯಾನಿಗೆ 400 ರೂ ಬೆಲೆಯಿದೆ. ಎಕ್ರೆಗೆ ಸುಮಾರು 1500 ರೂ ವೆಚ್ಚವಾಗುತ್ತದೆ. ಕೇರಳದ ಹಲವೆಡೆಯ ಕೃಷಿಕರು ಈ ಉತ್ಪನ್ನವನ್ನು ಸ್ವೀಕರಿಸಿದ್ದಾರೆ. ಇಡುಕ್ಕಿ ಜಿಲ್ಲೆಯಲ್ಲಂತೂ ಇದು ಹಲವು ಅಂಗಡಿಗಳಲ್ಲಿ ಸಿಗುತ್ತಿದೆ,” ವಿವರಿಸುತ್ತಾರೆ ಡಾ. ಬೆರಿನ್.ಕೊಲ್ಲಮ್ ಜಿಲ್ಲೆಯ ಪುನಲೂರಿನ ಬ್ಲಾಕ್ ಟೆಕ್ನಾಲಜಿ ಮ್ಯಾನೇಜರ್ ಆರ್.ಎಸ್.ಸೂರ್ಯ ಇದನ್ನು ಬಳಸತೊಡಗಿ ಮೂರ್ನಾಲ್ಕು ತಿಂಗಳು ಆಗತೊಡಗಿದೆಯಷ್ಟೇ. ಇಷ್ಟರಲ್ಲಿ ಇವರು ಸುಮಾರು ಇಪ್ಪತ್ತು ರೈತರಿಗೆ ಕೊಟ್ಟಿದ್ದಾರೆ. ರಾಜಕೀಯ ಪಕ್ಷಗಳು ತಂತಮ್ಮ ಪತಾಕೆ ಏರಿಸಲು ಬಳಸುವ ಹತ್ತಿಯ ದಪ್ಪನೆಯ ಹಗ್ಗವನ್ನು ಇವರು ಬಳಸುತ್ತಾರೆ.ಕಾಡುಹಂದಿಯಲ್ಲದೆ ಇಲಿ, ಹೆಗ್ಗಣಗಳೂ ಇಕೋಡಾನ್ ವಾಸನೆಗೆ ಹತ್ತಿರ ಬರುವುದಿಲ್ಲ. ಪ್ರಕೃತಿಸ್ನೇಹಿ ದ್ರಾವಣ ಆಗಿರುವುದು ಇನ್ನೊಂದು ಅನುಕೂಲ.

ಈ ಪ್ರದೇಶದ  ಕೆಲವರು  ರೈತರು ಹಗ್ಗ ಕಟ್ಟಿ ಹದಿನೈದು ದಿನದಲ್ಲಿ ಪುನಃ ಸ್ಪ್ರೇ ಕೊಟ್ಟಿದ್ದಾರಂತೆ. ಕೆಲವರು ಕೊಟ್ಟಿಲ್ಲ. ಕೊಡದಿದ್ದಲ್ಲೂ ರಕ್ಷಣೆ ಸಿಕ್ಕಿದೆ ಎನ್ನುತ್ತಾರೆ ಸೂರ್ಯ.ಅವರು ಮುಂದುವರಿದು “ನಮ್ಮಲ್ಲಿನ ರೈತರಿಗೆ ಈ ಔಷಧದ ಬಗ್ಗೆ ವಿಶ್ವಾಸ ಬಂದಿದೆ. ಇದೀಗ  ವಿಎಫ್ ಪೀಸೀಕೆಯ ಶಾಖೆಗಳಲ್ಲೂ ಸಿಗುತ್ತಿದೆ. ಹಲವು ರೈತರು ಖರೀದಿಸಿ ಒಯ್ದು ಬಳಸುತ್ತಿದ್ದಾರೆ. ವಿಫಲ ಅಂತ ಯಾರೂ ಹೇಳಿಲ್ಲ” ಎನ್ನುತ್ತಾರೆ. ಒಂದು ಹೊಲದಲ್ಲಿ ಈ ಒಳಸುರಿ ಬಳಸಿದಾಗ ಅಲ್ಲಿಗೆ ನುಗ್ಗದ ಕಾಡುಹಂದಿಗಳು ನೆರೆಯ ತೋಟಕ್ಕೆ ಧಾಳಿ ಇಡುವ ವಿದ್ಯಮಾನ ನಡೆಯುತ್ತಿದೆ ಎನ್ನುತ್ತಾರೆ ಕೆಲವರು.ರಾಮಮೋಹನ್ ಅವರ ಪ್ರಕಾರ ಇಕೋಡಾನ್ ಗ್ರಾನ್ಯೂಲನ್ನು 1:5 ರ ಅನುಪಾತದಲ್ಲಿ ಮರಳಿನೊಂದಿಗೆ ಮಿಶ್ರಮಾಡಿ ಗದ್ದೆಯ ಸುತ್ತಲಿನ ಬದುಗಳಲ್ಲಿ ಚೆಲ್ಲಿಬಿಡಬೇಕು.

ಇದೂ ಒಂದು ತಿಂಗಳಿಂದ 45 ದಿನಗಳ ವರೆಗೆ ರಕ್ಷಣೆ ಕೊಡುತ್ತದೆ.ಈ ಉತ್ಪನ್ನವನ್ನು ಕೇರಳ ಕೃಷಿ ವಿಶ್ವವಿದ್ಯಾಲಯ, ಆಂಧ್ರಪ್ರದೇಶದ  ಭತ್ತ  ಸಂಶೋಧನಾ   ಕೇಂದ್ರ, ತಮಿಳ್ನಾಡು ಕೃಷಿ ವಿವಿ ಸೇರಿದಂತೆ ಆರೇಳು ಸರಕಾರಿ ಸಂಶೋಧನಾ ಕೇಂದ್ರಗಳು, ಕೇರಳದ ಕೃಷಿ ಇಲಾಖೆ ಮತ್ತು ಸರಕಾರಿ ಫಾರ್ಮ್ ಗಳು ಬಳಸಿ ನೋಡಿ ಮೆಚ್ಚಿಕೊಂಡಿವೆಯಂತೆ. ಕಂಪೆನಿ ಮೂಲಗಳ ಪ್ರಕಾರ ಈ ಕಾಡುಹಂದಿ ರಿಪೆಲ್ಲೆಂಟ್ ಗರಿಷ್ಠ ಮಾರಾಟವಾಗುವುದು ತೆಲಂಗಾಣದಲ್ಲಿ. ನಾಗಾಲ್ಯಾಂಡ್, ಸಿಕ್ಕಿಮ್ ಮತ್ತು ಅಸ್ಸಾಮುಗಳಲ್ಲೂ ಜನಪ್ರಿಯ. ಕರ್ನಾಟಕದಲ್ಲಿ ಇನ್ನಷ್ಟೇ ಪರಿಚಯವಾಗಬೇಕು. ಇಲ್ಲಿ ಇದರ ಡೀಲರುಗಳೂ ಇಲ್ಲ.

ಹೆಚ್ಚಿನ  ಮಾಹಿತಿಗಾಗಿ :

ಹೈಗ್ರೋ ಫ್ಲೋರಿಸ್ ಕೆಮಿಕಲ್ ಪ್ರೈ. ಲಿ. - 098480 36740, 040 6557 4114

rao@florischemicals.com

ಕೇರಳದ ಡೀಲರು : ಗ್ರೀನ್ ಲ್ಯಾಂಡ್, ತ್ರಿಶೂರು - 0487-239 5744, 95443 00925

greenlandagrocares@rediffmail.com

ಮೂಲ : ಶ್ರಮಜೀವಿ

3.13461538462
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top