ಕೇರಳದ ತ್ರಿಶೂರಿನ ಯಂತ್ರೋಪಕರಣ ತಯಾರಿಕಾ ಕಂಪನಿ ರೆಡ್ ಲ್ಯಾಂಡ್ಸ್ ಕಳೆದೆರಡು ವರ್ಷಗಳಿಂದ ಆಟೋರಿಕ್ಷಾದ ಥರದ ಮುಗ್ಗಾಲಿ ‘ಫಾರ್ಮ್ ಕಾರ್ಟ್’ ರಸ್ತೆಗಿಳಿಸಿದೆ. ‘ಪವರ್ ಬ್ಯಾರೋ’ ಹೆಸರಿನಲ್ಲಿ ಇದು ಹಿಂದಿನ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿಮೇಳದಲ್ಲಿ ಪ್ರದರ್ಶನಕ್ಕಿತ್ತು. ಕಾರ್ಟ್ ನ ಒಟ್ಟು ಭಾರ 170 ಕಿಲೋ ಇದ್ದು ಗಂಟೆಗೆ ಅರ್ಧ ಲೀಟರ್ ಡೀಸಿಲ್ ಸಾಕೆನ್ನುತ್ತದೆ ಕಂಪನಿ. ಸಾಮಾನು ಸಾಗಿಸಲು 350 ಲೀಟರಿನ ಬಕೆಟ್ ಕೊಟ್ಟಿದ್ದು ಇದನ್ನು ಹೈಡ್ರಾಲಿಕ್ ತತ್ವದ ಮೇಲೆ ಏರಿಸಿ ಇಳಿಸಲು ಬರುತ್ತದೆ.
“ಮಾರುಕಟ್ಟೆಗಿಳಿಸಿದ ನಂತರ ನಾವಿದರ ಬಗ್ಗೆ ಆರ್ ಆಂಡ್ ಡಿ ಮಾಡುತ್ತಲೇ ಬಂದಿದ್ದು - ಹಲವು ಗ್ರಾಹಕರು ರಿವರ್ಸ್ ಗೇರ್ ಅಳವಡಿಕೆಗಾಗಿ ಕಾದಿದ್ದಾರೆ. ರಿವರ್ಸ್ ಗೇರ್ ಅಳವಡಿಸಿದ ಮಾದರಿ ಸಿದ್ಧವಾಗಿದ್ದು ಜನವರಿಯಲ್ಲಿ ಹೊರಬರಲಿದೆ. ಹಾಗೆಯೇ ಕಾಫಿ ತೋಟ ಮತ್ತು ಇತರೆಡೆ ಔಷಧ ಸಿಂಪಡಿಸುವ ವ್ಯವಸ್ಥೆಯನ್ನು ಇಟ್ಟುಕೊಂಡು ಒಯ್ಯುವ 4.7 ಅಶ್ವಶಕ್ತಿಯ ಮಾದರಿಯೂ ಅದೇ ಕಾಲಕ್ಕೆ ಹೊರಬರಲಿದೆ” ಎನ್ನುತ್ತಾರೆ ಕಂಪೆನಿಯ ನ್ಯಾಶನಲ್ ಸೇಲ್ಸ್ ಕೋಆರ್ಡಿನೇಟರ್ ಕಿಶೋರ್ ಕುಮಾರ್. ಮಾಮೂಲು ಮಾದರಿ 3.3 ಅಶ್ವಶಕ್ತಿಯದು. ಕಾರ್ಟ್ ಕಂಪೆನಿಯ ಕೊಯಂಬತ್ತೂರು ಫ್ಯಾಕ್ಟರಿಯಲ್ಲಿ ತಯಾರಾಗುತ್ತದೆ. ಬೆಲೆ 75,000 ರೂ.
“ಕರ್ನಾಟಕದಲ್ಲಿ ರೆಡ್ ಲ್ಯಾಂಡ್ಸ್ ಫಾರ್ಮ್ ಕಾರ್ಟ್ ಮಾರಾಟಕ್ಕೆ ಸರಿಯಾಗಿ ಸುರು ಮಾಡಿ ಆರು ತಿಂಗಳು ಆಗಿದೆಯಷ್ಟೇ. ಈ ವರೆಗೆ ಕೊಡಗು, ಉಡುಪಿ, ಶೃಂಗೇರಿ ಮತ್ತು ಬೆಂಗಳೂರು ಸೇರಿದಂತೆ ನಾಲ್ಕು ಕಾರ್ಟ್ ಮಾರಿದ್ದೇವೆ ಎನ್ನುತ್ತಾರೆ” ಕರ್ನಾಟಕದ ರೆಡ್ ಲ್ಯಾಂಡ್ಸ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪುಟ್ಟಮಲ್ಲೇಶ್.
ಬೆನ್ನಿ ಜಾರ್ಜ್, ವಡಕ್ಕಂಚೇರಿ, ಪಾಲಕ್ಕಾಡ್ : “ಖರೀದಿಸಿ ಇಂದು ವರ್ಷ ಆಯಿತು. ಗುಡ್ಡದಲ್ಲಿ ರಬ್ಬರ್ ಹಾಲು ಹೇರಿಕೊಂಡು ಓಡಾಡಲು ಬೇಕಾಗಿತ್ತು. ನಮ್ಮದು ಕಲ್ಲುಮಣ್ಣಿನ ರಸ್ತೆ. ನಮ್ಮ ಗುಡ್ಡದಲ್ಲಿ ಚೆನ್ನಾಗಿ ಏರಿಳಿಯುತ್ತದೆ. ತೃಪ್ತಿಕರ.”
ಸಿ.ಡಿ. ಕರುಂಬಯ್ಯ (ಸುಬು) , ಪೊನ್ನಂಪೇಟೆ, ಜಿಲ್ಲಾ ಪ್ರಗತಿಪರ ಕೃಷಿಕ ಪ್ರಶಸ್ತಿ ಪಡೆದವರು (2008): “ಕಳೆದ ವರ್ಷ ಡೆಮೋ ಮಾಡಿಸಿ ಕೊಂಡುಕೊಂಡೆ. ಮಳೆಗಾಲದಲ್ಲಿ ನಮ್ಮ ಏರುತಗ್ಗಿನ ಕೆಸರು ರಸ್ತೆಯಲ್ಲಿ ಗೊಬ್ಬರ ಒಯ್ಯಲು ಗಾಡಿ ಬೇಕಿತ್ತು. ಈ ಕೆಲಸ ಚೆನ್ನಾಗಿ ಮಾಡುತ್ತಿದೆ. ಗುಡ್ಡಗಾಡುಗಳಿಗೆ ಹೇಳಿ ಮಾಡಿಸಿದ ಕಾರ್ಟ್. ನಮ್ಮ ಬೆಳೆಯ ಸಾಲುಗಳ ನಡುವಿನ ಅಗಲ ಕಿರಿದಾದ ಜಾಗದಲ್ಲಿಯೂ ಓಡುತ್ತದೆ. ಜಮೀನಿನಲ್ಲೂ ಕಿರಿದಾದ ದಾರಿ ಮಾಡ್ಕೊಂಡಿದ್ದೇವೆ.” ಸಂಪರ್ಕ - 94492 76472 (8.30 - 9.30 PM)
ಭಾಸ್ಕರ ಶೆಟ್ಟಿ, ಉಡುಪಿ : “ಡೀಸೆಲ್ ಎಂಜಿನ್ ಆಗಿರುವುದು ಮೊದಲನೆ ಪ್ಲಸ್ ಪಾಯಿಂಟು. ಎಂಥಾ ಜಾಗದಲ್ಲೂ ಒಯ್ಯಲು ಅನುಕೂಲವಾದ ಟಯರು. ಹೈಡ್ರಾಲಿಕ್ ಡಂಪಿಂಗ್ ಇರುವುದರಿಂದ ಕೆಲಸ ಸುಲಭ. ನಲುವತ್ತು ಡಿಗ್ರಿ ವರೆಗಿನ ಏರು ಏರಬಹುದು. ಎರಡೂವರೆ ಕ್ವಿಂಟಾಲ್ ಸಾಗಿಸಿದ್ದೇವೆ. ರಿವರ್ಸ್ ಗೇರ್ ಇಲ್ಲದಿರುವುದು ಒಂದು ಕೊರತೆ. ಬಕೆಟ್ ನಮ್ಮ ಕೃಷಿಕೆಲಸದ ಮಟ್ಟಿಗೆ ಇನ್ನೂ ದೊಡ್ಡದಿರಬೇಕಿತ್ತು.” ಸಂಪರ್ಕ : 91416 97877
ಗಣೇಶ್ ಹೆಚ್.ಎಸ್, ಶೃಂಗೇರಿ : “ಒಂದು ತಿಂಗಳ ಹಿಂದೆ ಕೊಂಡುಕೊಂಡೆ. ತುಂಬಾನೇ ಚೆನ್ನಾಗಿದೆ. ಎರಡೂವರೆ ಕ್ವಿಂಟಾಲ್ ವರೆಗೆ ಅಡಿಕೆ ಗೊನೆ ಹಾಕಿ ಸಾಗಿಸಿದ್ದೇವೆ. ಡೀಸಿಲ್ ಖರ್ಚೂ ತುಂಬ ಕಮ್ಮಿ. ಲೀಟರಿಗೆ 40 ಕಿ.ಮೀ ಓಡಬಹುದು. ಮಾರುತಿ ಒಮ್ನಿ ಹೇಗೆ ಬಹೂದ್ದೇಶ ವಾಹನ ಆಗಿದೆಯೋ, ಹಾಗೆಯೇ ಸ್ವಲ್ಪ ಕನ್ವರ್ಶನ್ ಮಾಡಿಕೊಂಡು ತೋಟಕ್ಕೆ ಸುತ್ತು ಹಾಕಲು ಬಳಸಬಹುದು ಅನಿಸುತ್ತದೆ.”
ಸಂಪರ್ಕ : 94481 65939
(10 AM - 1 PM)
ಕಂಪನಿ ಸಂಪರ್ಕ : (0487) 242 7392;3207252
sales@redlandsmotors.com
www.redlandsmotors.com
ಪುಟ್ಟಮಲ್ಲೇಶ್, ಕರ್ನಾಟಕ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ : 95900 30010
puttamallesh@rediffmail.com
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 1/28/2020