ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಮೆರಿಕದ ಹಲಸಿನ ಹಬ್ಬ

ಅಮೆರಿಕದಲ್ಲಿ ವೆಜಿಟೇರಿಯನಿಸಂ, ವೆಗಾನಿಸಂ ಮತ್ತು ಫ್ರುಟೇರಿಯನಿಸಂನಂಥ ಆಂದೋಲನಗಳಲ್ಲಿ ಹಲಸು ಹೆಚ್ಚುಹೆಚ್ಚು ದೃಷ್ಟಿಗೆ ಬೀಳುತ್ತಿದೆ.

 

ಮೆರಿಕದ ಫ್ಲೋರಿಡಾದಲ್ಲಿ ಮಾತ್ರ ಒಂದಷ್ಟು ಹಲಸಿನ ಬೆಳೆ ಇದೆ. ಫ್ಲೋರಿಡಾದ ಫೇರ್ ಚೈಲ್ಡ್ ಟ್ರಾಪಿಕಲ್ ಬೊಟಾನಿಕಲ್ ಗಾರ್ಡನ್ ಈ ಸೆಪ್ಟೆಂಬರಿನಲ್ಲಿ ಹಲಸಿನ ಹಬ್ಬ ಆಚರಿಸಿತು.
ಫೇರ್ ಚೈಲ್ಡ್  .. ಗಾರ್ಡನ್ ಹಹ ನಡೆಯುವುದು ಮೊದಲ ಬಾರಿ ಅಲ್ಲ. ಈ ವರೆಗೆ ನಾಲ್ಕು ಜ್ಯಾಕ್ ಫ್ರುಟ್ ಫೆಸ್ಟಿವಲ್ ನಡೆದಿದೆ. ಕೊನೆಯದು 2005ರಲ್ಲಿ ನಡೆದಿತ್ತು.
ಮಿಯಾಮಿಯಲ್ಲಿರುವ ಫೇರ್ ಚೈಲ್ಡ್  ಗಾರ್ಡನ್ ಮತ್ತು ಫ್ಲೋರಿಡಾದ ಹೋಮ್ ಸ್ಟೆಡ್ ನ   ಫೇರ್ ಚೈಲ್ಡ್  ಫಾರ್ಮ್ ನಲ್ಲಿ 8 ಹೆಕ್ಟಾರ್ ಜಾಗದಲ್ಲಿ ಉಷ್ಣಪ್ರದೇಶದ ಹಣ್ಣಿನ ಮರಗಳಿವೆ. ಇಲ್ಲಿನ ಕ್ಯುರೇಟರ್ ನೋರಿಸ್ ಲೆಡೆಸ್ಮಾ ಮತ್ತು ಡಾ. ರಿಚಾರ್ಡ್ ಕ್ಯಾಂಪ್ ಬೆಲ್ ಭಾರತ, ಥಾಯ್ ಲ್ಯಾಂಡ್, ಫಿಲಿಪ್ಪೈನ್ಸ್, ಇಂಡೋನೇಶ್ಯಾ ಮತ್ತು ಆಸ್ಟ್ರೇಲಿಯಾಗಳಿಂದ ಸಂಗ್ರಹಿಸಿದ 32 ಹಲಸಿನ ತಳಿಗಳನ್ನು ಬೆಳೆಸುತ್ತಿದ್ದಾರೆ. ಇವರಿಬ್ಬರೂ ಸೇರಿ The Exotic Jackfruit: Growing the World’s Largest Fruit ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಫ್ಲೋರಿಡಾದ ಅಂಗಡಿಗಳಲ್ಲೂ ಹಲಸಿನಹಣ್ಣು ಲಭ್ಯ.
ನೋರಿಸ್ ತಿಳಿಸುತ್ತಾರೆ, “ದಕ್ಷಿಣ ಫ್ಲೋರಿಡಾಕ್ಕೆ ಹಲಸು ಬಂದು ಒಂದು ಶತಮಾನ ಆಗಿರಬಹುದು. ನಾವು 1987ರಿಂದ ಸಾಕುತ್ತಿದ್ದೇವೆ. ನಮ್ಮ ಮಣ್ಣಿನಲ್ಲಿ ಹಲಸು ಚೆನ್ನಾಗಿ ಬೆಳೆಯುತ್ತದೆ. ಕೆಲವು ತಳಿಗಳು ಚಳಿಯನ್ನು ತಡೆಯುವುದರಲ್ಲಿ ಮುಂದೆ ಇವೆ. ಆದರೆ ನಮ್ಮಲ್ಲಿ ಕೆಲವೊಮ್ಮೆ ಚಳಿಗಾಲದಲ್ಲಿ ಉಷ್ಣತೆ 32 ಡಿಗ್ರಿ ಫೆರನ್ ಹೀಟಿಗಿಂತಲೂ ಕೆಳಗೆ ಹೋಗುವುದಿದೆ. ಇದು ಹಲಸಿನ ಚಿಕ್ಕ ಗಿಡಗಳನ್ನು ಕೊಲ್ಲಬಲ್ಲುದು.”
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಿಂದ ಅಮೆರಿಕಕ್ಕೆ ಬಂದವರು ಹೊಸ ದೇಶದಲ್ಲಿ ಹಳೆ ನೆನಪನ್ನು ನವೀಕರಿಸಲು ಹಲಸಿನ ಗಿಡ ನೆಡುತ್ತಾರೆ. ಹೆತ್ತವರು ಮಕ್ಕಳಿಗೆ ಹಲಸಿನ ಬಗ್ಗೆ ತಿಳಿಸಲು, ಬಳಸಲು ಉತ್ಸುಕರಾಗಿರುತ್ತಾರೆ.  ಉಳಿದವರಿಗೆ ಹಲಸು ಭವ್ಯ ಅಲಂಕಾರಿಕ ಮರ. ಅಲ್ಲಿನ ಸುಡುಬಿಸಿಲಿಗೆ ನೆರಳಿನ ಮರ.
ಸೆಪ್ಟೆಂಬರ್ 13 ರಂದು ನಡೆದ ಹಲಸಿನ ಹಬ್ಬದಲ್ಲಿ ತಾಜಾ ಹಣ್ಣಿನ ಸೊಳೆ ಮಾರಾಟ, ಅಡುಗೆ ವಿವರ, ಕಸಿ ಗಿಡ ಮಾರಾಟ ಅಲ್ಲದೆ ವಿಚಾರ ಸಂಕಿರಣವೂ ಇತ್ತು. ಅಂದಾಜು ಎರಡು ಪೌಂಡ್ ತೂಕದ, ಮೇಣ ಇಲ್ಲದ, ತಾಜಾ ಆಗಿ ತಿನ್ನಲೂ ಅಡುಗೆ ಮಾಡಲೂ ಸೂಕ್ತವಾದ ಎರಡು ಹಲಸಿನ ತಳಿಗಳನ್ನು ಫೇರ್ ಚೈಲ್ಡ್  ಗಾರ್ಡನ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿತು.
ಅಮೆರಿಕದಲ್ಲಿ ವೆಜಿಟೇರಿಯನಿಸಂ, ವೆಗಾನಿಸಂ ಮತ್ತು ಫ್ರುಟೇರಿಯನಿಸಂನಂಥ ಆಂದೋಲನಗಳಲ್ಲಿ ಹಲಸು ಹೆಚ್ಚುಹೆಚ್ಚು ದೃಷ್ಟಿಗೆ ಬೀಳುತ್ತಿದೆ. ಇದು ಮಾಂಸಕ್ಕೆ ಒಂದು ಒಳ್ಳೆಯ ಪರ್ಯಾಯವಾಗಿದ್ದು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು ಎಂದು ಅಲ್ಲಿನವರು ಅರ್ಥಮಾಡಿಕೊಳ್ಳುತ್ತಿದ್ದಾರೆ.
ಆದರೆ ಇಲ್ಲಿರುವ ಒಂದು ಸಮಸ್ಯೆ ಎಂದರೆ ಅಮೆರಿಕನ್ ಸಂಸ್ಕೃತಿಯಲ್ಲಿ  ತುಂಡು  ಹಣ್ಣನ್ನು ಕೊಳ್ಳುವ ರೂಢಿ ಇಲ್ಲ. ಎಪ್ಪತ್ತು ಪೌಂಡಿನ ಹಣ್ಣನ್ನು ಮಾರಲು ಕಷ್ಟವಾಗುತ್ತಿರುವುದು ಈ ಕಾರಣದಿಂದಲೇ. ಈ ಸಮಸ್ಯೆಗೆ ಫ್ರೆಶ್-ಕಟ್ ತಾಜಾ ಹಲಸಿನಹಣ್ಣು ಒಂದು ಪರಿಹಾರ. ಫೇರ್ ಚೈಲ್ಡ್  ಗಾರ್ಡನ್ ಅಭಿವೃದ್ಧಿಪಡಿಸಿದ ಕೆಲವು ಹಲಸಿನ ತಳಿಗಳು ಅಮೆರಿಕನ್ನರ ಒಲವು ಗಳಿಸಲೆಂದೇ ಚಿಕ್ಕದಾಗಿವೆ. ಸುಮಾರು ಮೂರು ಪೌಂಡ್ ತೂಕ, ಮೇಣರಹಿತ, ಕತ್ತರಿಸಲು - ಸೊಳೆ ಕೀಳಲು ಸುಲಭ.
“ಫೇರ್ ಚೈಲ್ಡ್ .. ಗಾರ್ಡನ್ ಗೆ ಒಟ್ಟು ಸದಸ್ಯತ್ವ 45,000 ಇದೆ. ಇವರ ಮೂಲಕ ಹಲಸಿನಹಣ್ಣಿನ ಮಾಹಿತಿ ದೇಶದಲ್ಲಿ ಹಬ್ಬುತ್ತದೆ.  ಮೊದಲ ಬಾರಿಗೆ ಹಲಸಿನಹಣ್ಣಿನ ರುಚಿ ಸವಿಯುವವರು ಅದನ್ನು ಇಷ್ಟಪಡುತ್ತಾರೆ. ಹೆಚ್ಚಿನವರೂ ಗಟ್ಟಿ ಸೊಳೆಯ ಹಣ್ಣನ್ನೇ ಬಯಸುತ್ತಾರೆ. ಮೆತ್ತಗಿನ ಸೊಳೆಯದ್ದು ಅಷ್ಟು ಖಾಯಸ್ ಇಲ್ಲ. ಮೇಣ ಅವರಿಗೆ ತೀರಾ ಇಷ್ಟವಿಲ್ಲ” ಫೇರ್ ಚೈಲ್ಡ್  ಗಾರ್ಡನ್ ನ ಮಾರ್ಕೆಟಿಂಗ್ ಅಸೋಸಿಯೇಟ್ ಬ್ರೂಕ್ ಲೆ ಮೇರಿ ಬೊಟ್ಟು ಮಾಡುತ್ತಾರೆ.
ಹಲಸಿನ ಹಬ್ಬಕ್ಕೆ ಈ ಹಣ್ಣಿನ ಪರಿಚಯ ಇರುವವರೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಕೆಲವರು ನಾಲ್ಕು ಗಂಟೆ ದೂರದಿಂದ ಕಾರು ಚಲಾಯಿಸುತ್ತಾ ಬಂದವರಿದ್ದರು. ಹೊಸ ತಳಿ ಹಣ್ಣು ತಿನ್ನುವುದು, ಗಿಡ ಒಯ್ಯುವುದು, ಮನೆಗೆ ಹಣ್ಣು ಒಯ್ಯುವುದು, ಲೆಕ್ಚರ್ ಕೇಳುವುದು - ಹೀಗೆ ಇವರಿಗೆ ಬೇರೆಬೇರೆ ಉದ್ದೇಶಗಳಿದ್ದುವು.
ಮುಂದೆ ಹಲಸಿನ ಹಬ್ಬವನ್ನು ಎರಡು ದಿನಕ್ಕೆ ವಿಸ್ತರಿಸಬೇಕು ಎನ್ನುವುದು ಹಲವು ಸಂದರ್ಶಕರ ಆಶಯ. ಸ್ಥಳಿಯ ಬೆಳೆಗಾರರು ಹಣ್ಣು ತಂದು ಮಾರುತ್ತಿದ್ದುದನ್ನು ತುಂಬ ಮಂದಿ ಮೆಚ್ಚಿಕೊಂಡರು.
“ಅಮೆರಿಕದಲ್ಲಿ  ಹಲಸು ಜನಪ್ರಿಯವಾಗುತ್ತಿದೆ. ಆದರೆ ಈ ಪ್ರಕ್ರಿಯೆ ತುಂಬಾ ನಿಧಾನ” ಬ್ರೂಕ್ ಅಭಿಪ್ರಾಯಪಡುತ್ತಾರೆ, “ಈಚೆಗೆ ಮಾಧ್ಯಮಗಳು ಈ ಬಗ್ಗೆ ತುಂಬ ಸ್ಪಂದಿಸಿವೆ. ಅವರು ಪಾಕಶಾಸ್ತ್ರ ಕಾಲೇಜು ಮತ್ತು ಚೆಫ್ ಗಳನ್ನು ಆಹ್ವಾನಿಸಿ ಕುಕರಿ ಶೋ ನಡೆಸಲು ಉತ್ಸುಕರಾಗಿದ್ದಾರೆ. ಇದು ಬಹಳ ಮುಖ್ಯವಾದ ಬೆಳವಣಿಗೆ.”
ಮುಂದುವರಿಸುತ್ತಾರೆ ಬ್ರೂಕ್, “ಹಬ್ಬದಲ್ಲಿ ಒಂದು ಲೆಕ್ಚರ್ ಕೊಟ್ಟ ಭಾರತೀಯ ಕುಟುಂಬ ವಿವರಿಸಿದ ಹಲಸಿನ ಬಗೆಗಿನ ಕತೆಗಳು ನನಗೆ ತುಂಬ ಮುದ ಕೊಟ್ಟವು. ಒಬ್ಬಾಕೆ ತಾಯಿ ತನ್ನ ಮಗಳಿಗೆ ಎಳೆ ಹಲಸಿನಿಂದ ಅಡುಗೆ ಮಾಡುವುದು ಹೇಗೆ ಎಂದು ತಿಳಿಸಿಕೊಟ್ಟರು. ವಲಸಿಗರಿಗೆ ತಂತಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದು ಬಲು ಮಹತ್ವದ ಸಂಗತಿ. ಇದು ಹುಟ್ಟೂರಿನಿಂದ ಬಹುದೂರದಲ್ಲಿದ್ದರೂ ಅವರವರ ಅಸ್ತಿತ್ವವನ್ನು ಉಳಿಸುತ್ತದೆ. ಅಮೆರಿಕದಲ್ಲಿ ವಲಸೆಗಾರರು ತುಂಬಾ ಇದ್ದಾರೆ. ಅವರು ತಮ್ಮ ಮೂಲವನ್ನು ಸಂರಕ್ಷಿಸಲು ಬಳಸುವ ಒಂದು ಮುಖ್ಯ ಮಾರ್ಗ  ಆಹಾರ.”

ಮೂಲ : ಶ್ರಮಜೀವಿ

3.02
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top