অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಲಾನಯನ ಅಭಿವೃದ್ಧಿ

ಪರಿಕಲ್ಪನೆ

ರಾಜ್ಯದಲ್ಲಿ ಒಟ್ಟು 300 ಲಕ್ಷ ಎಕರೆ ಸಾಗುವಳಿ ಪ್ರದೇಶದ ಶೇಕಡಾ 20 ರಷ್ಟು ಮಾತ್ರ ನೀರಾವರಿ ಸೌಲಭ್ಯ ಹೊಂದಿದ್ದು, ಉಳಿದ ಪ್ರದೇಶ ಮಳೆಯನ್ನೇ ಅವಲಂಬಿಸಿರುತ್ತದೆ. ಈ ಪೈಕಿ ಸುಮಾರು 150 ಲಕ್ಷ ಎಕರೆ ಪ್ರದೇಶವು ವಾರ್ಷಿಕ 450 ರಿಂದ 750 ಮಿ.ಮೀ. ಮಳೆ ಪಡೆಯುತ್ತಿದ್ದು, ಖುಷ್ಕಿ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಈ ಪ್ರದೇಶಗಳ ಸಮಸ್ಯೆಯು ಬರೀ ಕಡಿಮೆ ಪ್ರಮಾಣದ ಮಳೆಯಲ್ಲದೆ ಅದರ ಹಂಚುವಿಕೆಯು ಸಮನಾಗಿರದೆ ಕೆಲವೇ ದಿನಗಳಲ್ಲಿ ಬೀಳುವ ಅತೀ ಹೆಚ್ಚು ಮಳೆಯ ನೀರು ಭೂಮಿಯಲ್ಲಿ ಇಂಗದೆ ಹರಿದು ಪೋಲಾಗುತ್ತದೆ. ಇದರಿಂದ ಉದ್ಧವಿಸುವ ಶುಷ್ಕ ಪರಿಸ್ಥಿತಿಯಿಂದ ಬೆಳೆ ಇಳುವರಿ ಕಡಿಮೆಯಾಗುವುದಲ್ಲದೆ ಅನೇಕ ಸಂದರ್ಭಗಳಲ್ಲಿ ಸುಮಾರು 170 ಲಕ್ಷ ಎಕರೆಗೂ ಹೆಚ್ಚು ಭೂಮಿ ಅನಿರ್ಬಂಧಿತವಾಗಿ ಹರಿಯುವ ಹೆಚ್ಚುವರಿ ನೀರಿನಿಂದ ಮಣ್ಣಿನ ಕೊಚ್ಚಣೆಗೆ ಒಳಗಾಗಿದ್ದು ಇಲ್ಲಿ ಭೂ ಸಂರಕ್ಷಣಾ ಕ್ರಮಗಳ ಅವಶ್ಯಕತೆಯಿದೆ.

ತತ್ವಗಳು

ಒಂದು ನಿರ್ದಿಷ್ಟ ಬಿಂದುವಿಗೆ ನೀರುಣಿಸುವ ಭೂ ಪ್ರದೇಶ, ಜಲಾನಯನ ಪ್ರದೇಶವೆಂದು ಗುರುತಿಸಲ್ಪಡುತ್ತದೆ. ಈ ರೀತಿಯ ಜಲಾನಯನವು ಸಾಗುವಳಿ ಮತ್ತು ಸಾಗುವಳಿಯೇತರ ಭೂ ಪ್ರದೇಶಗಳಲ್ಲದೆ, ನೀರಾವರಿ ಪ್ರದೇಶ, ಮನೆ, ನೀವೇಶನ, ರಸ್ತೆ ಇತ್ಯಾದಿ ವಿವಿಧ ರೀತಿಯ ಭೂ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಸಾಗುವಳಿಯೇತರ ಭೂ ಪ್ರದೇಶವನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡದಿದ್ದಲ್ಲಿ ಅಲ್ಲಿಂದ ಹರಿದು ಬರುವ ಹೆಚ್ಚುವರಿ ನೀರು ಸಾಗುವಳಿ ಪ್ರದೇಶದಲ್ಲೂ ಹಾನಿಯುಂಟು ಮಾಡುವ ಸಂಭವವಿರುತ್ತದೆ. ಈ ಎರಡೂ ಪ್ರದೇಶಗಳನ್ನು ಅವುಗಳ ಸಾಮಥ್ರ್ಯಕ್ಕನುಗುಣವಾಗಿ ಅಭಿವೃದ್ಧಿಗೊಳಿಸಿ ಉಪಯೋಗ ಮಾಡಿಕೊಂಡಾಗ ಎಲ್ಲಾ ಭೂ ಸಂಪನ್ಮೂಲಗಳ ಸದುಪಯೋಗದೊಂದಿಗೆ ಅಭಿವೃದ್ಧಿಯ ಪ್ರಯೋಜನಗಳು ದೀರ್ಘಕಾಲ ಉಳಿಯುವಂತೆ ನೋಡಿಕೊಳ್ಳಲು ಅನುಕೂಲವಾಗುತ್ತದೆ. ಇದೇ ಜಲಾನಯನ ಪ್ರದೇಶದ ಅಭಿವೃದ್ಧಿಯ ಮೂಲತತ್ವ.

ಮೂಲ ಉದ್ದೇಶಗಳು

 • ಜಲಾನಯನ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಹಾಗೂ ಜೀವವೈವಿಧ್ಯತೆಯ ಸಂರಕ್ಷಣೆ.
 • ಭೂಮಿಯ ಸಾಮಥ್ರ್ಯ ಮತ್ತು ಸಮಸ್ಯೆಯ ಆಧಾರದ ಮೇಲೆ ಅಭಿವೃದ್ಧಿ ಮತ್ತು ಬಳಕೆಯ ಯೋಜನೆಯನ್ನು ರೂಪಿಸುವುದು.
 • ಕೃಷಿ ಭೂಮಿಯಲ್ಲಿ ಮಣ್ಣು ಮತ್ತು ತೇವಾಂಶ ಸಂರಕ್ಷಣೆ ಹಾಗೂ ಸುಧಾರಿತ ಬೆಳೆ ಮತ್ತು ಬೆಳೆ ಪದ್ಧತಿಗಳ ಅಳವಡಿಕೆಯಿಂದ ಉತ್ಪಾದನೆಯಲ್ಲಿ ದೃಢತೆ ಮತ್ತು ಸುಸ್ಥಿರತೆಯ ಸಾಧನೆ.
 • ಕೃಷಿಯೇತರ ಭೂಮಿಯ ಸಂರಕ್ಷಣೆ ಮತ್ತು ದಕ್ಷ ಬಳಕೆಯ ತತ್ವಗಳನ್ನ ಅನುಸರಿಸಿ ಪರ್ಯಾಯ ಭೂ ಬಳಕೆ ಪದ್ಧತಿಗಳ ಅಳವಡಿಕೆ.
 • ಗ್ರಾಮೀಣ ಉದ್ಯೋಗ ಮತ್ತು ಉಪಕಸುಬುಗಳಿಗೆ ಅನುವಾಗುವಂತೆ ಭೂ ಅಭಿವೃದ್ಧಿಯ ಯೋಜನೆ.
 • ಜಲಾನಯನದ ಪ್ರಾಕೃತಿಕ ಮತ್ತು ಪರಿಸರ ಸಮತೋಲನವನ್ನು ಕಾಪಾಡುವುದು.

ಈ ಉದ್ದೇಶ ಸಾಧನೆಯಲ್ಲಿ ಬಿದ್ದ ಮಳೆ ನೀರಿನ ಹೆಚ್ಚಿನಂಶ ಸ್ಥಳದಲ್ಲೇ ಇಂಗುವಂತೆ ಮಾಡುವುದು ಮತ್ತು ಅನಿವಾರ್ಯವಾಗಿ ಹರಿದು ಹೋಗುವ ಹೆಚ್ಚುವರಿ ನೀರು ಮಣ್ಣು ಕೊಚ್ಚಣೆಯಿಂದ ದುಷ್ಪರಿಣಾಮಗಳು ಆಗದಂತೆ ನೋಡಿಕೊಳ್ಳುವುದು. ಜಲಾನಯನ ಅಭಿವೃದ್ಧಿಯ ಎರಡು ಮುಖ್ಯ ಅಂಶಗಳು ಅದಲ್ಲದೆ ಹೆಚ್ಚುವರಿ ನೀರನ್ನು ಸಾಧ್ಯತೆಯಿರುವೆಡೆಯಲ್ಲಿ ಅಂದರೆ ಕೃಷಿ ಹೊಂಡ, ನಾಲಾ ಬದು, ತಡೆ ಒಡ್ಡು ಇತ್ಯಾದಿ ನೀರು ಸಂಗ್ರಹಣಾ ರಚನೆಯಲ್ಲಿ ಶೇಖರಿಸಿ ಬೆಳೆಗಳಿಗೆ ರಕ್ಷಣಾ ನೀರಾವರಿ ಒದಗಿಸಿ ಬೆಳೆಗಳ ಇಳುವರಿಯನ್ನು ಹೆಚ್ಚಿಸುವುದು ಇನ್ನೊಂದು ಮಹತ್ವದ ಅಂಶ. ಇಂತಹ ನೀರು ಸಂಗ್ರಹಣಾ ರಚನೆಗಳು ಅಂತರ್ಜಲ ಸುಧಾರಣೆಯಲ್ಲೂ ಮಹತ್ವದ ಪಾತ್ರ ವಹಿಸಬಲ್ಲವು.

ಪರಿಚಯ ಮತ್ತು ಉದ್ದೇಶಗಳು

ಯೋಜನಾ ಆಯೋಗದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠನದ ಎಲ್ಲಾ ಮಂತ್ರಾಲಯಗಳು ಏಕ ರೂಪ ಗ್ರಹಿಕೆಯನ್ನು ಹೊಂದುವ ಸಲುವಾಗಿ ಸಾಮಾನ್ಯ ಮಾರ್ಗ ಸೂಚಿ ಹೊರತಂದಿದೆ. ಈ ಹೊಸ ಚೌಕಟ್ಟಿನಲ್ಲಿ ಯೋಜನೆ ಅನುಷ್ಠಾನವನ್ನು ಮಾಡಲಾಗುವುದು.

ಜಲಾನಯನ ಪ್ರದೇಶ ಎಂದರೆ ಏನು?

ಜಲಾನಯನ ಪ್ರದೇಶ ಎಂದರೆ ಒಂದು ನಿರ್ದಿಷ್ಟ ಭೂಜಲ ಘಟಕವಾಗಿದ್ದು, ಈ ಪ್ರದೇಶದಲ್ಲಿ ಬಿದ್ದಂತಹ ಮಳೆ ನೀರು ಹಳ್ಳ-ಕೊಳ್ಳಗಳ ಮುಖಾಂತರ ಹರಿದು ಒಂದು ಸಾಮಾನ್ಯ ಬಿಂದುವಿನ ಮೂಲಕ ಹೊರ ಹೋಗುವ ಮೇಲಿನ ಪ್ರದೇಶವನ್ನು ಜಲಾನಯನ ಪ್ರದೇಶವೆನ್ನುತ್ತಾರೆ.

ವಿಸ್ತಾರವಾದ ಪ್ರದೇಶದಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ತಯಾರಿಸಬೇಕಾದರೆ ಸಣ್ಣ ಹಂತದ ಯೋಜನೆ ಉತ್ತಮವಾಗಿರುತ್ತದೆ. ಆದ್ದರಿಂದ, ಯೋಜನೆಯನ್ನು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯಗತ ಮಾಡಲು ಜಲಾನಯನ ಪ್ರದೇಶವನ್ನು 100 ರಿಂದ 200 ಹೆಕ್ಟೇರ್ ಒಳಗೊಂಡಂತೆ ಅತಿ ಕಿರು ಜಲಾನಯನಗಳನ್ನಾಗಿ ವಿಂಗಡಿಸಿ ಬಳಕೆದಾರರ ಗುಂಪುಗಳ ಭಾಗವಹಿಸುವಿಕೆಯೊಂದಿಗೆ ಯೋಜನೆಯನ್ನು ತಯಾರಿಸಿ ಅದನ್ನು ಉಪ ಜಲಾನಯನ ಮಟ್ಟದಲ್ಲಿ ಕ್ರೋಢಿಕರಿಸಲಾಗುವುದು.

ಯೋಜನೆಯ ಉದ್ದೇಶಗಳು

 • ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಿ ಕೃಷಿ ಭೂಮಿಯ ಫಲವತ್ತತೆ ಹಾಗೂ ಅದರ ಉತ್ಪನ್ನ ಶಕ್ತಿಯನ್ನು ಹೆಚ್ಚಿಸುವುದು.
 • ವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವುದು.
 • ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಸ್ಥಳೀಯ ಸಮುದಾಯ ಸಂಘಟನೆಗಳ ಸಾಮಥ್ರ್ಯವನ್ನು ಹೆಚ್ಚಿಸುವುದು.
 • ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ ಸುಧಾರಣೆಗೊಳಿಸುವುದು.
 • ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದ ಜನರ ಕೌಶಲ್ಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ಉದ್ಯೋಗವಕಾಶವನ್ನು ಒದಗಿಸುವುದು.
 • ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಬಡತನ ಕಡಿಮೆಗೊಳಿಸಿ ಜನರ ಜೀವನ ಮಟ್ಟ ಸುಧಾರಣೆಗೊಳಿಸುವುದು.
 • ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸುವುದು
 • ಉತ್ಪಾದನೆ ಹೆಚ್ಚಿಸುವುದು
 • ನೈಸರ್ಗಿಕ ಸಂಪನ್ಮೂಲಗಳ ಸುಧಾರಣೆ

ಉದ್ದೇಶ ಸಾಧನೆಗೆ ಅಳವಡಿಸಿಕೊಂಡಿರುವ ಮಾರ್ಗಗಳು

 • ಸೂಕ್ತ ತಂತ್ರಜ್ಞಾನ ಬಳಕೆ ಹಾಗೂ ಸಮಗ್ರ ಮಾರ್ಗದಿಂದ ಜಲಾನಯನ ಪ್ರದೇಶದ ಅಭಿವೃದ್ಧಿ.
 • ಸ್ಥಳೀಯ ಜಮೀನುರಹಿತರು ಅದರಲ್ಲೂ ಮುಖ್ಯವಾಗಿ ಮಹಿಳೆ ಹಾಗೂ ದುರ್ಬಲ ವರ್ಗದವರು ಸಮಾನವಾಗಿ ಜಲಾನಯನ ಪ್ರದೇಶದ ಅಭಿವೃದ್ಧಿ ಮತ್ತು ಅದರ ನಿರ್ವಹಣೆಯಲ್ಲಿ ಭಾಗವಹಿಸಿ, ಅವರ ಜೀವನೋಪಾಯಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಸೂಕ್ತ ಜನ ಸಂಘಟನೆಗಳನ್ನು ರಚಿಸಿ, ಅವುಗಳ ಸಾಮಥ್ರ್ಯ ಬಲವರ್ಧನೆಗೊಳಿಸುವುದು

ಮಾರ್ಗಗಳು ಮತ್ತು ಚಟುವಟಿಕೆಗಳು

 • ಸೂಕ್ತ ತಂತ್ರಜ್ಞಾನ ಬಳಕೆ ಹಾಗೂ ಸಮಗ್ರ ಮಾರ್ಗದಿಂದ ಜಲಾನಯನ ಪ್ರದೇಶದ ಅಭಿವೃದ್ಧಿ.
 • ಸ್ಥಳೀಯ ಜಮೀನುರಹಿತರು ಅದರಲ್ಲೂ ಮುಖ್ಯವಾಗಿ ಮಹಿಳೆ ಹಾಗೂ ದುರ್ಬಲ ವರ್ಗದವರು ಸಮಾನವಾಗಿ ಜಲಾನಯನ ಪ್ರದೇಶದ ಅಭಿವೃದ್ಧಿ ಮತ್ತು ಅದರ ನಿರ್ವಹಣೆಯಲ್ಲಿ ಭಾಗವಹಿಸಿ, ಅವರ ಜೀವನೋಪಾಯಗಳನ್ನು ಅಭಿವೃದ್ಧಿ ಮಾಡಿಕೊಳ್ಳಲು ಸೂಕ್ತ ಜನ ಸಂಘಟನೆಗಳನ್ನು ರಚಿಸಿ, ಅವುಗಳ ಸಾಮಥ್ರ್ಯ ಬಲವರ್ಧನೆಗೊಳಿಸುವುದು.

ಯೋಜನಾ ಚಟುವಟಿಕೆಗಳು

 • ಜಲಾನಯನ ವ್ಯಾಪ್ತಿಯಲ್ಲಿ ಬರುವ ಸಂಘ ಸಂಸ್ಥೆಗಳನ್ನು ರಚಿಸಿ ಬಲಪಡಿಸಿ ಸಾಮಥ್ರ್ಯ ವೃದ್ಧಿಸುವುದು.
 • ಸಹಭಾಗಿತ್ವದ ಜಲಾನಯನ ಅಭಿವೃದ್ದಿ ಮತ್ತು ನಿರ್ವಹಣೆ.
 • ತೋಟಗಾರಿಕೆ, ಅರಣ್ಯ, ಜಾನುವಾರು ಅಭಿವೃದ್ಧಿ, ಮೀನುಗಾರಿಕೆ ಹಾಗೂ ಕೃಷಿ ಚಟುವಟಿಕೆಗಳ ಸಂಭಂದಿಸಿದಂತೆ ಸಮಸ್ಯೆಗಳ ಪರಿಹರಿಸಲು ಕ್ಷೇತ್ರ ಮಟ್ಟದಲ್ಲಿ ಸಂಶೋಧನೆಯನ್ನು ಪ್ರಾತ್ಯಕ್ಷಿಕೆ, ವಿಸ್ತರಣೆ, ಕ್ಷೇತ್ರೋತ್ಸವ ಇತ್ಯಾದಿಗಳ ಮೂಲಕ ಪರಿಚಯಿಸುವುದು.
 • ಭೂರಹಿತ / ದುರ್ಬಲ ವರ್ಗದವರಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೂಳ್ಳಲು ಸಶಕ್ತಗೂಳಿಸುವುದು.

ಯೋಜನಾ ವಿಶಿಷ್ಟ ಗುಣಗಳು

 • ಜನರ ಸಹಭಾಗಿತ್ವ ಯೋಜನೆಯ ಒಟ್ಟಾರೆ ಕೇಂದ್ರ ಬಿಂದುವಾಗಿದೆ.
 • ಯೋಜನೆಯನ್ನು ರಚನಾತ್ಮಕ ಹಂತದಿಂದ ಅನುಷ್ಠಾನದವರೆಗೆ ಎಲ್ಲಾ ಹಂತಗಳಲ್ಲಿ ಇಲಾಖೆಯ ಜಲಾನಯನ ಅಭಿವೃದ್ಧಿ ತಂಡ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಸಹಭಾಗಿತ್ವದ ಆಧಾರದ ಮೇಲೆ ಸರ್ಕಾರೇತರ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು.
 • ಜಲಾನಯನ ಕಾರ್ಯಕ್ರಮದ ಸಮರ್ಪಕ ನಿರ್ವಹಣೆಗೆ ಕ್ಷೇತ್ರ ಮಟ್ಟದ ಬಳಕೆದಾರರ ಗುಂಪುಗಳ ರಚನೆ.
 • ಮಾಲಿಕತ್ವದ ಭಾವನೆಯನ್ನು ವೃದ್ಧಿಸಲು ಮತ್ತು ಜನರ ಆಯ್ಕೆಗಳಿಗೆ ಹೆಚ್ಚಿನ ಮನ್ನಣೆ ಹಾಗೂ ಗೌರವ ದೊರಕಿಸಿಕೊಡಲು ಸಮುದಾಯವು ವಂತಿಗೆ ರೂಪದಲ್ಲಿ ವೆಚ್ಚವನ್ನು ಹಂಚಿಕೊಳ್ಳುವುದು.
 • ದೂರ ಸಂವೇದಿ ತಂತ್ರಜ್ಞಾನದ ಮೂಲಕ, ಯೋಜನೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಬಹುದಾದ ಕೃಷಿ ಮತ್ತು ಜಲ ಸಂಪನ್ಮೂಲ ಕಾರ್ಯಗಳ ನಕ್ಷೆಗಳನ್ನು ತಯಾರಿಸಿ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಬಳಸುವುದು.
 • ಕಾರ್ಯಕ್ರಮಗಳ ಅನುಷ್ಠಾನದ ವೇಳೆ ವಿಷಯಾನುಸಾರ ತಜ್ಞರ ಸೇವೆಯನ್ನು ಪಡೆಯಲು ವಿವಿಧ ಸಂಪನ್ಮೂಲ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳುವುದು.
 • ಉಸ್ತುವಾರಿ, ಕಲಿಕೆ ಮತ್ತು ಮೌಲ್ಯಮಾಪನವನ್ನು ಯೋಜನಾ ಅನುಷ್ಠಾನ ಪ್ರಕ್ರಿಯೆ ಅಂಗವಾಗಿ ಅಳವಡಿಸುವುದು.
 • ಎಲ್ಲಾ ಹಂತಗಳಲ್ಲಿ ಸೂಕ್ತ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪರಿಣಾಮಕಾರಿ ಹೊಣೆಗಾರಿಕೆ ಹಾಗೂ ಪಾರದರ್ಶಕತೆ ಹೊಂದಿರುವುದು.
 • ಯೋಜನೆಯ ಅನುಷ್ಠಾನದಿಂದ ಯಾವುದೇ ದುಷ್ಪರಿಣಾಮಗಳು ಆಗದಂತೆ ತಡೆಯಲು “ಪರಿಸರ ಹಾಗೂ ಸಮಾಜಿಕ ಮಾಪನ” ಮಾದರಿಯ ಬಳಕೆಯನ್ನು ಕ್ರಿಯಾ ಯೋಜನೆಯ ಹಂತದಲ್ಲೇ ಅಳವಡಿಸುವುದು.

ಯೋಜನಾ ಅವಧಿ

ಸಾಮಾನ್ಯ ಮಾರ್ಗಸೂಚಿಯಡಿಯಲ್ಲಿ ಯೋಜನಾ ಅವಧಿ 4 ರಿಂದ 7 ವರ್ಷಗಳಿದ್ದು, ರಾಜ್ಯದಲ್ಲಿ ಈ ಯೋಜನೆಯ ಅವಧಿಯನ್ನು 5 ವರ್ಷಗಳಿಗೆ ಯೋಜಿಸಿದೆ. ಮೊದಲನೇ ಹಂತದ ಯೋಜನೆಯು 2009-10 ರಿಂದ 2013-14ರ ಅವಧಿಯವರೆಗೆ ಅನುಷ್ಠಾನಗೊಳಿಸಲಾಗುತ್ತದೆ.

ಪ್ರತಿ ವರ್ಷ ಹೊಸ ಯೋಜನೆಗಳು ಸೇರ್ಪಡೆಯಾಗುತ್ತಿದ್ದು, ರಾಜ್ಯದಲ್ಲಿ ಇವುಗಳ ಅವಧಿ ಸಾಮಾನ್ಯವಾಗಿ 5 ವರ್ಷಕ್ಕೆ ಯೋಜಿಸಿದೆ.

ಅಭಿವೃದ್ಧಿಯ ಅಗತ್ಯತೆ

 • ನೈಸರ್ಗಿಕ ಸಂಪನ್ಮೂಲಗಳು ನಾಶಹೊಂದುತ್ತಿವೆ.
 • ರಭಸವಾಗಿ ಹರಿಯುವ ನೀರಿನಿಂದ ಮಣ್ಣು ಸವಕಳಿ ದಿನೇ ದಿನೇ ಹೆಚ್ಚುತ್ತಿದೆ. ಭಾರತದಲ್ಲಿ ಪ್ರತಿ ವರ್ಷ 16.3 ಟನ್, ಹೆಕ್ಟೇರ್ ನಷ್ಟು ಮೇಲ್ಮಣ್ಣು ಕೊಚ್ಚಿಹೋಗುತ್ತಿದೆ.
 • ಫಲವತಗ್ತಾದ ಮೇಲ್ಮಣ್ಣು ಕೊಚ್ಚಿ ಹೋಗುವುದರಿಂದ ಬೆಳೆ ಬೆಳೆಯಲು ತೊಂದರೆಯಾಗುತ್ತಿದೆ.
 • ತಗ್ಗಿನಲ್ಲಿ ನೀರು ನಿಂತು ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಜವುಗುಂಟಾಗುತ್ತಿದೆ.
 • ರಸಾಯನಿಕ ಗೊಬ್ಬರದ ಉಪಯೋಗದಿಂದ ಮಣ್ಣಿನಲ್ಲಿ ವಿಷಕಾರಿ ಅಂಶಗಳು ಸೇರುತ್ತಿವೆ.
 • ಮಣ್ಣು ಕೊಚ್ಚಿ ಹೋಗಿ ಕೆರೆ, ಹಳ್ಳ, ಕೊಳ್ಳಗಳಲ್ಲಿ ನೀರು ತಡೆಹಿಡಿಯುವ ಸ್ಥಳ ಕಡಿಮೆಯಾಗುತ್ತಿದೆ.
 • ಅರಣ್ಯ ನಾಶವಾಗುತ್ತಿದೆ.
 • ಈ ಕಾರಣಗಳಿಂದಾಗಿ ಹಾಗೂ ಅವೈಜ್ಞಾನಿಕವಾದ ನೀರಾವರಿ ಪದ್ಧತಿಗಳಿಂದ ಅಂತರ್ಜಲ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದೆ.
 • ಉಪಕಾರಿ ಕೀಟ, ಪಕ್ಷಿ ಹಾಗೂ ಪ್ರಾಣಿಗಳು ನಾಶವಾಗುತ್ತಿದೆ.
 • ವಿಷಕಾರಿ ಹಾಗೂ ಅನುಪಯೋಗಿ ವಸ್ತುಗಳಿಂದ ನೀರಿನ ಮಾಲಿನ್ಯ ಹೆಚ್ಚಾಗುತ್ತಿದೆ.
 • ಸಸ್ಯಗಳ ನಾಶದಿಂದ ಮಣ್ಣಿನ ಸವಕಳಿ ಅಷ್ಟೇ ಅಲ್ಲ ನೀರಿನ ಇಂಗುವಿಕೆ ತೊಂದರೆಯಾಗಿದೆ.
 • ಅರಣ್ಯ ನಾಶದಿಂದ ಮಳೆ ಕಡಿಮೆಯಾಗುತ್ತಿದೆ. ವಿಷ ಅನಿಲಗಳಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ.
 • ಅಷ್ಟೆಲ್ಲ ಪರಿಸರ ನಾಶವಾಗುತ್ತಿದ್ದರೂ ಸಹ ನಮ್ಮ ಜೀವನಾಧಾರಕ್ಕೆ ಪರಿಸರವನ್ನೇ ಅವಲಂಬಿಸಬೇಕಾಗಿದೆ. ಪರಿಸರ ದಿನೇ ದಿನೇ ನಾಶವಾಗುತ್ತಿರುವುದರಿಂದ ಹಾಗೂ ಹೆಚ್ಚುತ್ತಿರುವ ಜನ ಸಂಖ್ಯೆಯಿಂದಾಗಿ ಊಟ ವಸತಿಗೆ ಕಷ್ಟಪಡಬೇಕಾಗಿದೆ.

ಜಲಾನಯನ ಅಭಿವೃದ್ಧಿ ಯಾಕೆ?

ಈ ಮೇಲಿನ ಕಾರಣಗಳಿಂದಾಗಿ ನಶಿಸುತ್ತಿರುವ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಉಳಿಸಿ ಬೆಳೆಸುವಂತಹ ವ್ಯವಸ್ಥೆಯನ್ನು ತರಬೇಕಾಗಿದೆ. ಪರಿಸರ ಉಳಿಸುವುದರೊಂದಿಗೆ ಜನರ ಜೀವನಾಧಾರವನ್ನು ಸಹ ಅಭಿವೃದ್ಧಿ ಮಾಡಬೇಕಾಗಿದೆ. ಈ ಉದ್ದೇಶಗಳಿಂದ ಜಲಾನಯನ ಯೋಜನೆಯ ಅವಶ್ಯಕತೆ ಇದೆ.

ಚಟುವಟಿಕೆಯ ಮುಖ್ಯ ಭಾಗಗಳು

ಭೂಮಿ, ಗಿಡ, ನೀರು ಪಶು ಹಾಗೂ ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅವಶ್ಯವಿರುವ ಸೂಕ್ತ ತಂತ್ರಜ್ಞಾನ ಹಾಗೂ ಸಾಮಾಜಿಕ ಪರಿಹಾರೋಪಾಯಗಳನ್ನು ಒಟ್ಟಿಗೆ ತರುವ ಸಮಗ್ರ ಮಾರ್ಗವೇ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವಾಗಿದೆ.

ನಿಸರ್ಗದ ಎಲ್ಲಾ ಸಂಪನ್ಮೂಲಗಳನ್ನು ಜಲಾನಯನ ಅಭಿವೃದ್ಧಿಯು ಒಳಗೊಂಡಿದೆ. ಈ ಎಲ್ಲ ಸಂಪನ್ಮೂಲಗಳು ಒಂದಕ್ಕೊಂದು ಅವಲಂಬನೆ ಹೊಂದಿದೆ. ಆದ್ದರಿಂದ ಜಲಾನಯನ ಅಭಿವೃದ್ಧಿಯಲ್ಲಿ ನಿಸರ್ಗದ ಎಲ್ಲಾ ಸಂಪನ್ಮೂಲಗಳ ಮಧ್ಯದಲ್ಲಿರುವ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಚಟುವಟಿಕೆಗಳೂ ಸಹ ಒಂದಕ್ಕೊಂದು ಪೂರಕವಾಗಿರುವಂತೆ ಯೋಜಿಸಬೇಕು. ಈ ಚಟುವಟಿಕೆಗಳನ್ನು ಮುಖ್ಯವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.

 • ಮಾನವ ಸಂಪನ್ಮೂಲ ಅಭಿವೃದ್ಧಿ
 • ಮಣ್ಣು ಮತ್ತು ನೀರು ಸಂರಕ್ಷಣಾ ಚಟುವಟಿಕೆ
 • ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ
 • ಜೀವನಾಧಾರ ಮೂಲಗಳನ್ನು ಹೆಚ್ಚಿಸಲು ಹಿಂದುಳಿದ ಜನರಿಗಾಗಿ ಆದಾಯ ಉತ್ಪನ್ನ ಚಟುವಟಿಕೆಗಳು.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು ಮತ್ತು ಸಮಗ್ರ ಜಲಾನಯನ ನಿರ್ವಹಣೆ ಯೋಜನೆ

ಕೊನೆಯ ಮಾರ್ಪಾಟು : 2/15/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate