ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಕೃಷಿ / ಕೃಷಿ ಒಪ್ಪಂದ / ಉಪಬೆಳೆಯಾಗಿ ಕೋಕೋ -ಪುಟ ೧
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಉಪಬೆಳೆಯಾಗಿ ಕೋಕೋ -ಪುಟ ೧

ಉಪಬೆಳೆಯಾಗಿ ಕೋಕೋ ಎಷ್ಟು ಸೂಕ್ತ?

ಕೋಕೋ ಬೆಳೆ ವಾಣಿಜ್ಯ ಬೆಳೆಯಾಗಿ ಕಾಲಿರಿಸಿ ವಿಪರೀತ ವರ್ಷಗಳಾಗಿಲ್ಲ. ಆದರೆ ಈ ಅಲ್ಪಾವಧಿಯಲ್ಲಿ ಅದಕ್ಕೆ ಸಿಕ್ಕ ಪ್ರಚಾರ ನಿರೀಕ್ಷೆಗಿಂತ ಹೆಚ್ಚು. ಉಳಿದ ಕೃಷಿಕರಂತೆ ಬಹುವಾರ್ಷಿಕ ಬೆಳೆಗಳ ಮಧ್ಯೆ ಮಲೆನಾಡು, ಕರಾವಳಿಯ ಕೃಷಿಕರು ಅಡಿಕೆ, ತೆಂಗು ತೋಟದಲ್ಲಿ ಕೋಕೋವನ್ನು ಉಪಬೆಳೆಯಾಗಿ ಬೆಳೆಯುವ ಪ್ರಾಯೋಗಿಕ ಯತ್ನ ನಡೆಸಿದರು. ಯಶಸ್ವಿಯೂ ಆದರು. ಆದರೆ ಅದೇ ಅಂತಿಮ ಎನ್ನಿಸಲಿಲ್ಲ. ಸಮಸ್ಯೆಗಳು ಕಾಣಿಸಿಕೊಂಡವು. ಈ ಹಂತದಲ್ಲೇ ಉಪಬೆಳೆಯಾಗಿ ಕೋಕೋ ಸೂಕ್ತವೇ ಎಂಬ ಪ್ರಶ್ನೆ ಮೂಡಿದ್ದು.

ಉಪಬೆಳೆಯಾಗಿ ಕೋಕೋ ಸೂಕ್ತವಲ್ಲ ಎನ್ನುವಷ್ಟೇ ಮಂದಿ ಸೂಕ್ತ ಎನ್ನುವವರೂ ಇದ್ದಾರೆ. ಅವರದೇ ಆದ ವಾದವನ್ನೂ ಹೊಂದಿದ್ದಾರೆ. ಅದು ಹೀಗಿದೆ.

1. ಕೋಕೋ ವಿಶೇಷ ನಿರ್ವಹಣೆಯಿಲ್ಲದೆ ಬದುಕುವ, ಬೆಳೆ ಕೊಡುವ ಬೆಳೆ. ಅದಕ್ಕೆ ಪ್ರತ್ಯೇಕ ನೀರು, ಗೊಬ್ಬರಗಳ ಅಗತ್ಯ ಇಲ್ಲವೇ ಇಲ್ಲ.
2. ಗಿಡದ ತುಂಬಾ ಎಲೆಗಳನ್ನು ಹೊಂದಿ ಸೊಂಪಾಗಿ ಬೆಳೆಯುವುದರಿಂದ ತೋಟದಲ್ಲಿ ಕಳೆ ಕಡಿಮೆಯಾಗುತ್ತದೆ. ಹೆಚ್ಚುವರಿ ಕೊಂಬೆಗಳನ್ನು ಸವರುವುದರಿಂದ ತೋಟಕ್ಕೆ ಸೊಪ್ಪೂ ದೊರಕುತ್ತದೆ. ಉದುರಿದ ಎಲೆಗಳು ಕೂಡ ಇದೇ ರೀತಿಯ ಅನುಕೂಲವೊದಗಿಸುತ್ತವೆ.
3. ಯಾವುದೇ ರೀತಿಯ ರೋಗ, ಕಾಟಗಳಿಲ್ಲ. ಕೆಲವು ಕಡೆ ಕಾಟಗಳು ಇವೆಯಾದರೂ ನಗಣ್ಯ.
4. ತೋಟಕ್ಕೆ ನೆರಳು ಒದಗಿಸುತ್ತವೆ. ನೆರಳಿನಿಂದಾಗಿ ಎಲೆ ಅಡಿಕೆ ಸಸಿಗಳು ಬೆಳೆಯಲು ಸುಲಭವಾಗುತ್ತದೆ. ಅಡಿಕೆ ಸಸಿಗಳಿಗೆ ಪಶ್ಚಿಮ ದಿಕ್ಕಿನಿಂದ ಸೂರ್ಯನ ಬಿಸಿಲು ಬೀಳಬಾರದು. ಆ ರಕ್ಷಣೆ ಇದರಿಂದ ಸಿಗುತ್ತದೆ.

ಗಮನಿಸಬೇಕಾದುದೆಂದರೆ, ರಾಸಾಯನಿಕ ಆಧಾರಿತ ಮತ್ತು ಸಾವಯವ ಅನುಸರಿಸುವ ಕೃಷಿಕರಿಬ್ಬರೂ ಅಡಿಕೆ ತೋಟದಲ್ಲಿ ಕೋಕೋ ಬೆಳೆಯುವುದು ಮುಖ್ಯ ಬೆಳೆಗೆ ಮಾರಕವೆಂತಲೇ ವಾದಿಸುತ್ತಾರೆ. ಕೋಕೋ ಬೇಕೆನ್ನುವವರು ನೀಡಿದ ಪಟ್ಟಿಯನ್ನು ಈ ಮಂದಿ ಅಲ್ಲಗಳೆಯುತ್ತಾರೆ. ಅವರ ಸಮರ್ಥನೆ, ಸಂಶೋಧನೆಗಳ ಪ್ರವರ ಇಲ್ಲಿದೆ.

1. ಕೋಕೋ ಪ್ರತ್ಯೇಕ ನಿರ್ವಹಣೆ ಇಲ್ಲದೆ ಬೆಳೆಯಬಲ್ಲದು ನಿಜ. ಆದರೆ ಶೀಘ್ರ ಬೆಳವಣಿಗೆ ಲಕ್ಷಣಗಳನ್ನು ಹೊಂದಿರುವ ಗಿಡಗಳು ಹೆಚ್ಚು ಭೂಸಾರ ತಿನ್ನುವುದು ಖಚಿತ. ಈಗ ಹೇಳಿ ಇದೇ ಜೀವಲಕ್ಷಣದ ಕೋಕೋ ಮುಖ್ಯ ಬೆಳೆಗೆ ತೊಂದರೆ ನೀಡದೆ?
2. ಕೋಕೋ ಅತಿ ಹೆಚ್ಚು ಸೊಪ್ಪು, ನೆರಳು ನೀಡುತ್ತದೆ. ಆದರೆ ಈ ಅತಿ ಕೂಡ ತೋಟಕ್ಕೆ ಹಾನಿಕರ. ಇವು ವಿಶಾಲವಾಗಿ ವಿಸ್ತರಿಸುವುದರರಿಂದ ತೋಟಕ್ಕೆ ಗೊಳಲಾಗುತ್ತದೆ. (ಗೊಳಲು-ಗ್ರಾಮ್ಯಪದ-ಅಗತ್ಯಕ್ಕಿಂತ ಹೆಚ್ಚು ನೆರಳು ಉಂಟಾದಾಗಿನ ಪ್ರದೇಶ, ವಾತಾವರಣ) ಅಡಿಕೆ ಸಸಿಗಳು ಏಳಲಾರವು. ಇತರೆ ಉಪಬೆಳೆಗಳು (ಏಲಕ್ಕಿ, ಕಾಫಿ) ನಾಶವಾಗುತ್ತವೆ. ಅಲ್ಲದೆ ದರಲೆ ಕಾದಿಗೆ (ತೋಟದಲ್ಲಿ ನೀರು ಹರಿಯಲು ಮಾಡಿದ ಸಣ್ಣ ಕಾಲುವೆ)ಯಲ್ಲಿ ಸೇರಿ ನೀರಿನ ಹರಿವಿಗೆ ಅಡಚಣೆ ಮಾಡುತ್ತದೆ. ತೋಟದಲ್ಲಿ ನೀರು ನಿಲ್ಲುವುದರಿಂದ ಮಹಾಳಿ(ಕೊಳೆ)ಯಂಥ ರೋಗಗಳ ಸಾಧ್ಯತೆ ಹೆಚ್ಚು.
3. ಇತ್ತೀಚೆಗೆ ಇದಕ್ಕೆ ಕೊಳೆ ರೋಗದ ಬಾಧೆ ಕಾಣಿಸಿದೆ. ಕಾಯಿ ಬೆಳೆಯುವ ಮುನ್ನವೇ ರೋಗಾಣುಗಳಿಗೆ ತುತ್ತಾಗಿ ಕಪ್ಪಾಗಿ ಕೊಳೆಯುತ್ತದೆ, ಈ ಬಾರಿ ಅನೇಕರು ಈ ಸಮಸ್ಯೆಗೆ ಸಿಲುಕಿದ್ದಾರೆ.
4. ಮಂಗ, ಕಾಡುಬೆಕ್ಕು (ಕಬ್ಬೆಕ್ಕು)ಗಳು ಇದರ ರುಚಿ ಕಂಡಿವೆ. ಈ ಪ್ರಾಣಿಗಳ ಹಾವಳಿಯ ಅಂದಾಜು ಕಷ್ಟ. ಈ ಲೇಖಕರಂಥವರ ಅನುಭವವೇ ಸಾಕು.
5. ಇಂದು ಕೋಕೋ ಕೊಳ್ಳುತ್ತಿರುವವರು ಕ್ಯಾಂಪ್ಕೋದವರೊಂದೇ. ಒಂದು ವೇಳೆ ನಷ್ಟವಾಗಿಯೇ, ಇನ್ನಾವುದೋ ಬಹಿರಂಗಪಡಿಸಿದ ಕಾರಣಗಳಿಗಾಗಿ ಕೊಳ್ಳುವಿಕೆಯನ್ನು ನಿಲ್ಲಿಸಿದರೆ ಸಮಸ್ಯೆ ಗಗನ ಸದೃಶವಾಗುವುದು.

ಈ ಎರಡು ಮಾರ್ಗಗಳಲ್ಲಿ ಕೃಷಿಕನಿಗೆ ಯಾವುದು ಉತ್ತಮವೆಂದು ಆಲೋಚಿಸಿ. ಇವೆರಡೂ ಸ್ವೀಕಾರಾರ್ಹವೆನಿಸದಿದ್ದಲ್ಲಿ ಇನ್ನೊಂದು ಕೊನೆ ಮಾರ್ಗವಿದೆ. ಇದು ಅನಿವಾರ್ಯ ಅಲ್ಲ. ಆದರೆ ಎರಡನೇ ಮಾರ್ಗವನ್ನು ಒಪ್ಪಿಯೇ ಮುಂದಿಡಬೇಕಾದ ಹೆಜ್ಜೆ. ಕೃಷಿಕರು ಮನೆಯ ಹಿಂದಿನ ಗುಡ್ಡಗಳಲ್ಲಿ ಕೋಕೋವನ್ನು ಬೆಳೆಸಬಹುದು. ಅದು ಮುಖ್ಯ ಬೆಳೆಯೂ ಆದೀತು. ಇದೇನು ಹೊಸ ಯೋಚನೆಯಲ್ಲ. ಈ ಲೇಖಕ ಸಾಗರದಲ್ಲಿ ಹಿಂದೊಮ್ಮೆ ಕೋಕೋ ಬೀಜ ಮಾರಲು ಹೋದಾಗ ರೈತರೋರ್ವರು ಒಮ್ಮೆಗೆ 92 ಕೆ.ಜಿ. ಬೀಜವನ್ನು ಮಾರಲು ತಂದ ಉದಾಹರಣೆ ಇದೆ. ಇವರು ಕೋಕೋ ಬೆಳೆದದ್ದು ಬೋಳು ಗುಡ್ಡದಲ್ಲಿ.

ಮೂಲ : ಕರುನಾಡು.

2.84693877551
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top