ಈ ಪದ್ಧತಿಯ ಪ್ರತ್ಯಕ್ಷ, ಪರೋಕ್ಷ ಅನುಕೂಲಗಳು ಹೀಗಿವೆ.
1. ಪ್ರತ್ಯೇಕ ನೀರು, ನೆರಳು ಅಗತ್ಯವಿಲ್ಲ. ವರ್ಷಕ್ಕೊಮ್ಮೆ ಹಟ್ಟಿಗೊಬ್ಬರ, ಹೆಚ್ಚುವರಿ ಕೊಂಬೆಗಳ ಕಟಿಂಗ್ ಸಾಕು, ಇದಕ್ಕೂ ಹೆಚ್ಚಿನ ನಿರ್ವಹಣೆ ಅನಗತ್ಯ.
2. ತೋಟದಲ್ಲಿಗಿಂತ ರೋಗಗಳು ಕಡಿಮೆ.
3. ಬೆಟ್ಟಗಳ ಕೃತಕ ಸೃಷ್ಟಿಯಿಂದ ಮಳೆಯಿಂದುಂಟಾಗುವ ಭೂ ಕೊರೆತ ತಪ್ಪುತ್ತದೆ.
4. ‘ಇಂದು ಹಳ್ಳಿಗರು ಮನೆ ಸುತ್ತ ಏನೂ ಬೆಳೆಯುವುದಿಲ್ಲ. ಮಂಗ ವಂಶಸ್ಥರ ಕಾಟ. ಆದರೆ ಗುಡ್ಡಗಳಲ್ಲಿ ಕೋಕೋ ಬೆಳೆಯುವುದರಿಂದ ಮಂಗಗಳು ಅಲ್ಲೇ ತಮ್ಮ ಆಹಾರ ಮೂಲ ಕಂಡುಕೊಳ್ಳುತ್ತದೆ. ಇದರಿಂದ ಮನೆ ಸುತ್ತ ಮಂಗಗಳ ಕಾಟ ತಪ್ಪುತ್ತೋ ಇಲ್ಲವೋ ಆದರೆ ಖಂಡಿತಾ ಕಡಿಮೆಯಾಗುತ್ತದೆ. ಇದು ಬಹುದೊಡ್ಡ ಪರೋಕ್ಷ ಅನುಕೂಲ.
5. ಪ್ರತ್ಯೇಕವಾಗಿ ಬೆಳೆಯುವುದರಿಂದ ತೋಟದ ಅಥವಾ ವ್ಯಾವಹಾರಿಕ ನಷ್ಟ ಅನುಭವಿಸುವ ಸಮಸ್ಯೆಗಳಿಲ್ಲ.
ಈ ಎಲ್ಲ ವಿವರಗಳು ಅನೇಕ ಕೃಷಿಕರ ಅನುಭವ ಆಧಾರಿತವಾದದ್ದು. ಕೊನೆ ಪಕ್ಷ ಗುಡ್ಡ, ಖುಷ್ಕಿಯಲ್ಲಿ ಬೆಳೆಯಲು ಯಾರ ತಕರಾರೂ ಇಲ್ಲ. ಹಾಗಿದ್ದರೆ ಕೋಕೋ ಬೆಳೆಯುವ ವಿಧಾನ ಹೇಗೆ? ಅದನ್ನು ವಿವರಿಸುವುದಾದರೆ, ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣಿನಲ್ಲೂ ಕೋಕೋ ಬೆಳೆಯುತ್ತದಾದರೂ ಮರಳು ಮಿಶ್ರಿತ ಗೋಡು, ಕೆಂಪು ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗಟ್ಟಿ ನೆಲ ಮತ್ತು ಜೌಗು ಭೂಮಿ ಯೋಗ್ಯವಲ್ಲ. ಗಿಡಗಳು ಸುಲಭ ಲಭ್ಯ. ಕಸಿ ಗಿಡಗಳ ಅಗತ್ಯವೇ ಇಲ್ಲ. ಮಳೆಗಾಲದಲ್ಲಿ ಈ ಗಿಡದ ಬುಡದಲ್ಲಿ ಎದ್ದ ಸಸಿಗಳನ್ನೇ ನೇರವಾಗಿ ತಂದು ನಾಟಿ ಮಾಡಬಹುದು. ನೆಟ್ಟ 2 ವರ್ಷಕ್ಕೆ ಹೂ ಬಿಡುವ ಕೋಕೋ ಮೂರನೇ ವರ್ಷದಿಂದಲೇ ಪೂರ್ಣ ಪ್ರಮಾಣದ ಫಸಲು ಕೊಡುತ್ತವೆ. ಸ್ವಾರಸ್ಯವೆಂದರೆ ಕಸಿ ಗಿಡಗಳಲ್ಲೂ ಇದೇ ಕತೆ! ಹೈಬ್ರಿಡ್ ತಳಿಗಳನ್ನು ಹಲವರು ಬೆಳೆಸುತ್ತಿದ್ದು, ಇದರಲ್ಲಿ ಕಾಯಿ ದೊಡ್ಡದಾಗಿರುವುದಲ್ಲದೆ 250 ರಿಂದ 400 ಗ್ರಾಂವರೆಗೂ ಬೀಜ ತೂಗುತ್ತದೆ. ಸಾಮಾನ್ಯ ತಳಿಗಳಲ್ಲಿ ಬೀಜ 200 ಗ್ರಾಂಗಳ ಆಜುಬಾಜು ತೂಗುತ್ತದೆ. ಪ್ರಸ್ತುತ ತೋಟಗಾರಿಕೆ ಇಲಾಖೆಯಲ್ಲೂ ಪ್ರತಿ ಗಿಡಕ್ಕೆ 2 ರೂ.ನಂತೆ ಸಿಗುತ್ತಿದೆ. ಒಂದು ಎಕರೆಗೆ 436 ಗಿಡಗಳನ್ನು ನೆಡಬಹುದು. 3ಮೀ. ಅಂತರದಲ್ಲಿ 90 ಸೆಂ.ಮಿ. ಘನಾಕೃತಿಯ ಗುಣಿಗಳನ್ನು ತೋಡಬೇಕು. 4ರಿಂದ 6 ತಿಂಗಳ ಸಸಿ ನಾಟಿ ಮಾಡಲು ಸೂಕ್ತ. ನಂತರದ ದಿನಗಳಲ್ಲಿ ಗಿಡ ಚೆನ್ನಾಗಿ ಬೆಳೆಯಲು ಕೆಲವು ಹೊರಚಾಚಿದ ಕೊಂಬೆಗಳನ್ನು ಕತ್ತರಿಸುತ್ತಿರಬೇಕು. ಬಹುಪಾಲು ಗಿಡಗಳು 2 ವರ್ಷಗಳ ನಂತರ ಹೂ ಬಿಡುತ್ತದೆ. 8 ವರ್ಷಗಳ ನಂತರ ಪೂರ್ಣಪ್ರಮಾಣದ ಇಳುವರಿ ನೀಡುತ್ತದೆ. ಕಾಯಿ ಹಣ್ಣಾಗುವಾಗ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ಬೀಜಗಳನ್ನು ಮಾತ್ರ ಖರೀದಿಸಲಾಗುವುದರಿಂದ ಉಳಿದ ಸಿಪ್ಪೆಯನ್ನು ಸ್ವಲ್ಪ ಪ್ರಮಾಣ ಜಾನುವಾರುಗಳಿಗೆ ಮತ್ತು ಹೆಚ್ಚಾದುದನ್ನು ಗೊಬ್ಬರ, ಗೋ ಗ್ಯಾಸ್ ಸ್ಥಾವರಕ್ಕೆ ಉಣಿಸಬಹುದು.
ಯಾವುದೋ ಹೊಸ ಬೆಳೆಯ ಗಿಡವೊಂದಕ್ಕೆ 15-20 ರೂ. ಕೊಟ್ಟು ತ್ರಿಶಂಕು ಸ್ವರ್ಗ ಅನುಭವಿಸುವುದಕ್ಕಿಂತ ಕೃಷಿಕನಿಗೆ ‘ಕೈ ತುತ್ತು’ ಕೊಡುವ ಕೋಕೋ ಆತ್ಮೀಯವಾಗಬೇಕು.
ಮೂಲ : ಕರುನಾಡು.
ಕೊನೆಯ ಮಾರ್ಪಾಟು : 2/17/2020